ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 January, 2014

ಗುಟ್ಟು ರಟ್ಟು..

ಒಲವೇ,
ಅಂಗಣದಲಿ ಅದೆಷ್ಟು ಹೆಜ್ಜೆ ಗುರುತು
ತುಲಸಿ ಕಟ್ಟೆಯಲಿ ಬಿದಿರು ಕೊಳಲು
ಮುಂಜಾವು ಕೈಯಲಿ ನನ್ನ ಗೆಜ್ಜೆ
ಎಲ್ಲಾ ಹೆಜ್ಜೆಗಳ ಗುಟ್ಟು ರಟ್ಟು!

ದಾಸರೆಂದರೆ ಪುರಂದರದಾಸರು..

 ಜಿಪುಣಾಗ್ರೇಸರ ಶ್ರೀನಿವಾಸ ನಾಯಕನಿಗೆ ಬದಲಾಗಲು  ಸತಿಶಿರೋಮಣಿ ಸರಸ್ವತಿಯ ಮೂಗುತಿಯ ನೆವನ ಸಾಕಾಯ್ತು..
“ನವಕೋಟಿನಾರಾಯಣ”  ಬಿರುದನ್ನು ತ್ಯಾಗ ಮಾಡಿ ಪುರಂದರದಾಸರಾಗಿ ಬದಲಾದರು. ಅವರು  ಕೇವಲ ಭಕ್ತಿ ಸಾಹಿತ್ಯ ಮಾತ್ರವಲ್ಲದೆ ಕನಾರ್ಟಕ ಸಂಗೀತದ ಪಿತಾಮಹರಾಗಿಯೂ ಮರೆಯಲಾರದ ಕೊಡುಗೆ ಇತ್ತು ನಮ್ಮೆಲ್ಲರ ಮನೆ ಮನದಲ್ಲಿ ಅಜರಾಮರಾಗಿ ಉಳಿದಿದ್ದಾರೆ!
   ಅಂತಹ ಸಂಗೀತ ಜ್ಞಾನವಿಲ್ಲದ ನನ್ನಂತಹ ಪಾಮರರಿಗೂ ಸುಲಭದಲಿ ಹರಿಕೀರ್ತನೆಯ ಲಾಭ ದೊರಕಿಸಿಕೊಟ್ಟ ಪುರಂದರದಾಸರ ಆರಾಧನೆಯ ಸುಸಂದರ್ಭದಲ್ಲಿ..
ತಾಳನು ಹರಿ ಕೇಳನೂ |
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ |
ತಾಳನು ಹರಿ ಕೇಳನೂ ||

ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು |
ಕೊಂಬು ಕೊಳಲು ಶಂಖ ವಾದ್ಯವಿದ್ದು |
ತುಂಬೂರ  ನಾರದರ ಗಾನ ಕೇಳುವ ಹರಿ |
ನಂಬಲಾರ ಈ ಡಂಭನ ಕೂಗಾಟ ||

ನಾನಾ ವಿಧದ ರಾಗ ಭಾವ ತಿಳಿದ ಸ್ವರ |
ಜ್ಞಾನ ಮನೋಧರ್ಮ ಜಾತಿಯಿದ್ದು |
ದಾನವಾರಿಯ ದಿವ್ಯ ನಾಮರಹಿತವಾದ |
ಹೀನನಾ ಸಂಗೀತ ಸಾಹಿತ್ಯಕೆ ಮನವಿತ್ತು ||

ಅಡಿಗಡಿಗಾನಂದ ಭಾಷ್ಪ ಪುಳಕವಾಗಿ |
ನುಡಿ ನುಡಿಗೆ ಶ್ರೀಹರಿ ಎನುತ |
ಧೃಡ ಭಕುತರನು ಕೂಡಿ ಹರಿ ಕೀರ್ತನೆ ಪಾಡಿ |
ಕಡೆಗೆ ಶ್ರೀಪುರಂದರ ವಿಠಲನೆಂದರೆ ಕೇಳ್ವ ||


29 January, 2014

ಒಲವೇ..

ಒಲವೇ,

ಒಲುಮೆ ತೋರಲು ನಾ ಕಲಿತೆ

ಕಲಿಸಿದ್ದು ನೀನೇ ಹಚ್ಚಿದ ಹಣತೆ

ಒಲವೇ..

ಒಲವೇ,

ನಾ ಒಲವಿನ ಕಾವ್ಯ ಬರೆದದ್ದು


ನಿನ್ನ ಕಣ್ಣಲಿದ್ದ ಭಾವವನು ಕದ್ದು

27 January, 2014

ನಲ್ಲಿರುಳಿನ ಮೌನ ಗಾನ..

ನಲ್ಲಿರುಳಿನ ಮೌನ ಗಾನ..
--------------------------

ದೂರದಲ್ಲಿ ಒಂಟಿ ಶ್ವಾನದ ಗೋಳು..
ಸಂಗಾತಿಯ ಅಗಲಿಕೆಯ ನೋವು

ನಭದಲಿ ಚುಕ್ಕಿಗಳೂ ಮಂಕು..
ಶಶಿಯನಾವರಿಸಿದೆ ಪರದೆ ಕರಿಕಪ್ಪು

ಅಂಗಣದಲಿನ್ನೂ ಉರಿಯುತಿದೆ  ದೀಪ..
ಮನೆಯೊಡೆಯನಿನ್ನೂ ಮರಳಿಲ್ಲದ ಸಂಕೇತ

ಕಿಟಿಕಿಗೊರಗಿದ  ಹಸಿರು ಕಂಕಣಗಳಿಗಿಲ್ಲ
ಮೆಚ್ಚಿಸುವ ಕಿಂಕಿಣಿ  ಭಾಗ್ಯವಿಲ್ಲ

ನಿಟ್ಟುಸಿರಿಗೆ ಕರಗುತಿದೆ ಮಂಜು..
ಅಳಲು ಹರಿದು ಒದ್ದೆಗಣ್ಣು

ನಲ್ಲಿರುಳಿಗೂ ಅವನದೇ ಧ್ಯಾನ
ಹಾಡುತಿದೆ ಮೌನ ಗಾನ!

ಭಾಸ್ಕರನ ವಿನ್ಯಾಸ!
----------------

ನೀಲರಂಗಿನ ಸೀರೆ
ಕೇಸರಿ, ಕೆಂಪು
ಚಿತ್ತಾರದ ಹೊನ್ನಂಚು
ಭಾಸ್ಕರನ ವಿನ್ಯಾಸ
ಮತ್ತೆ ಕೇಳಬೇಕೆ
ಮುಂಜಾವಿನ ಲಾಸ್ಯ!

26 January, 2014

ಹೆಣ್ಣು ಜನುಮ ಬಯಸಿದ ಮುಂಜಾವು!


1.       ಹೆಣ್ಣು ಜನುಮ ಬಯಸಿದ ಮುಂಜಾವು!
----------------------------------

ತಲೆಗೆ ಕಟ್ಟಿದ ಅರಿವೆಯೆಡೆಯಿಂದ ಹೊರಗಿಣುಕುತ ಕಣ್ಣ ಕೆಣಕುವ ಮುಂಗುರುಳು..
ಕಣ್ಣ ಜತೆ ಸರಸವಾಡುವ ಮುಂಗುರುಳ ಅತ್ತ ಅಟ್ಟುವ ಮುಂಗೈಯ ಘಲ್ ಘಲ್ ನಾದದ ಮಾರ್ದನಿ..
ಕಣ್ಣು ಕತ್ತಿನ ಯುಗಳ ನಾಟ್ಯಕೆ ಮುತ್ತಿನ ಝುಮುಕಿಯ, ಕಪ್ಪು ಮಣಿಯ ಹಾರದ ತಾಳ..
ಮಿಡಿಮಾವಿನ ಕಾಯಿಯೆಡೆಯಿಂದ ಹೊರಡುವ ಪಂಚಮ ರಾಗದ ಕೋಗಿಲೆಯ ಕುಹೂ ಕುಹೂ..
ಬಿಸಿ ನೀರಿನ ಜಳಕಕೆ  ಬೆವರ ಮುತ್ತುಗಳು ಬೆನ್ನ ಮೇಲೆ ಕಚಕುಳಿಯಿಡುತ   ಎಳೆಕಿರಣಗಳೊಡನೆ ಆಡುತಿವೆ ಕಣ್ಮುಚ್ಚಾಲೆ..
ಸೊಂಟಕೆ ಬಿಗಿದ ಸೆರಗು ಜಾರಿ ನೆಲ ಮುತ್ತಿಕ್ಕಲು ಇಂಚಿಚಾಗಿ ಜಾರುತಿದೆ, ಮರುತನ ಸಂಚೇನೋ..
“ಕೌಸಲ್ಯಾ ಸುಪ್ರಜಾ ರಾಮಾ.. “ ಇದ್ಯಾವುದರ ಪರಿವಿಯಿಲ್ಲದ  ಮಗ್ನಳಾಗಿ  ಚುಕ್ಕಿ ಇಡುವ ನೀರೆ

ಈ ಪರಿಗೆ ಸೋತ ಮುಂಜಾವು ಹೆಣ್ಣು ಜನುಮ ಬಯಸಿದುದರಲಿ ತಪ್ಪೇನೂ ಇಲ್ಲವೆನುವೆ!

25 January, 2014

8. ಯಾರ ಕಣ್ಣಲಿ ಯಾರ ಬಿಂಬ..



ಬಲವಾಗಿ ಅಪ್ಪಿ ಹಿಡಿದ ನೈದಿಲೆಯ ರೆಪ್ಪೆಗಳ ಪುಸಲಾಯಿಸಿ ಮೆಲ್ಲನೆ ತೆರೆದು
ಅಲ್ಲಿ ಮಿಂಚುವ ತನ್ನ ಬಿಂಬ ಕಂಡು ಮೆರೆವ ಆಸೆ ಪೂರ್ಣ ಚಂದಿರನಿಗೆ;

ಕಡುನೀಲಿ ಸೀರೆಗೆ ಅಲ್ಲಲ್ಲಿ ಹೊಳೆವ ಬೆಳ್ಳಿ ಟಿಕಲಿಗಳನಂಟಿಸಿ
’ಘಲ್ ಘಲ್’ ನಾದದೊಂದಿಗೆ ವಯ್ಯಾರದಿ ಬರುವ ನಲ್ಲಿರುಳಿಗೆ
ಪೂರ್ಣ ಚಂದಿರನ ಕಣ್ಣಲ್ಲಿ ತನ್ನ ಕಪ್ಪುಬಿಂಬ ಕಾಣುವಾಸೆ;

ಕಣ್ಮುಚ್ಚಿ ಕಲ್‍ಬೆಂಚಮೇಲೆ ಕಲ್ಪನೆಯ ಲೋಕದಲಿ ಕಳೆದುಹೋದವಳು
ನಲ್ಲಿರುಳು-ಚಂದಿರನ ಒಲವಿನ ಕಣ್ಣಾಟವನು ಕಂಡು ಮುಗುಳುನಗುತ್ತಾ
ಕಣ್ದೆರೆದಾಗ ಲೋಕ ಕಂಡಿತು ಅವಳೊಲವಿನ ಬಿಂಬ ಅವಳ ಕಣ್ಣಲಿ!

ಕಡು ಕಪ್ಪು ಜಲಪಾತದ ಹನಿಗಳು..

“ನಮೋ ತುಲಸೀ ಕಲ್ಯಾಣಿ.. “ ಗುನುಗುನುತ್ತಾ
ತುಲಸಿ ಕಟ್ಟೆಗೆ ಸುತ್ತು ಹಾಕಿ ನೀರೆರೆಯುತ್ತಾ
ಮನೆ ಮನ ಕುಲ ಬೆಳಗಲಿ ಎಂದು ಬೇಡುತ್ತಾ
ಕಣ್ಮುಚ್ಚಿ ಕಣ್ಧಾರೆ ಸುರಿಸುತಿಹಳು ನೀರೆ!

ಅಂಗೈ ತೆರೆದಿಟ್ಟು ಆಗಸದತ್ತ ಚಾಚಿದವಳ ಬೊಗಸೆಯಲಿ
ತಲೆಗೆ ನೀರೆದು ಬೆನ್ನತುಂಬಾ ಹರವಿಕೊಂಡು
ಮೆದು ಮುಗಿಲ ದಿಂಬಿಗೊರಗಿ ಕುಳಿತಿರುವ ಮುಂಜಾವಿನ
ಕಡುಕಪ್ಪು ಜಲಪಾತದಿಂ ಬಿದ್ದವು ಕೆಲವು ಹನಿಗಳು!

ನೀಲಗಣ್ಣ ಚೆಲುವೆ ಮುಂಜಾವು!

ಇರುಳಿನ ಆಲಸ್ಯವನು ಒದ್ದೋಡಿಸಿ
ಇಬ್ಬನಿ ಹನಿಗಳನು ಚಿಮುಕಿಸಿ
ಮನೆ ಮನದ ಕಲ್ಮಶನವನು ಗುಡಿಸಿ
ಅಂಗಣದಲಿ ಮಂಜಿನ ರಂಗೋಲಿಯನು ಬಿಡಿಸಿ

ಹೊನ್ನಝರಿಯಂಚಿನ ಪೀತಾಂಬರ ಧರಿಸಿ
ಮುಗಿಲ ತೇರನೇರಿ ಬರಲಣಿಯಾಗುವ
ತೇಜ ವದನ ದಿನಕರನ  ಪಥದ ಹಾದಿಯ ಶೃಂಗರಿಸಿ
ಕಾದಿಹಳು ಕಪ್ಪು ಕಜ್ಜಳ ಲೇಪಿಸಿದ ನೀಲಗಣ್ಣ ಚೆಲುವೆ

ನಮ್ಮ ಮುಂಜಾವು!

24 January, 2014

ನಲ್ಲಿರುಳಿನಲೊಂದು ಕತೆ..

ನಲ್ಲಿರುಳಿನಲೊಂದು ಕತೆ..
-----------------------

“ಒಂದೂರಿನಲ್ಲಿ.. “
ಪಾರಿಜಾತದ ಬುಡದಲಿ ತುತ್ತುಣಿಸುತ್ತಾ
ಬಿಚ್ಚಿಕೊಳ್ಳುವ ಚುಕ್ಕಿಯ ಕತೆ..
ನಡುನಡುವಿನಲಿ ತಲೆದೂಗುವ
ಮರುತನ ಪುಷ್ಪವೃಷ್ಟಿ..

ಘಮಘಮಿಸುವ ಪಾರಿಜಾತಗಳ
ಚುಕ್ಕಿ ಅಮ್ಮನ ಮಡಿಲಲಿ,
ಪುಟ್ಟನ ಗುಂಗುರು
ಮುಂಗುರುಳ ಎಡೆಯಲಿ...
ಜೀರುಂಡೆಗಳ ತಂಬೂರಿ ಝೀಂಕಾರ


“ಓಂ ನಮೋ ವಾಸುದೇವಾಯ.. “
ಮುದ್ದುಗೆ ಬಾಲ ದ್ರುವನ
ತುತ್ತಿನ ಚಿಂತೆ..
ಉಣಿಸುವರ್ಯಾರು, ಹಾಲು ಕೊಡುವವರ್ಯಾರು..
ಕೆಂಪು ಕೊಕ್ಕಿನ
ಹಕ್ಕಿಗಳು ಉಣಿಸಿದವೆಂದರೆ

ಹವಳದ ತುಟಿಯೆಡೆಯಿಂದ
ಇಣುಕುವ ದಾಳಿಂಬೆಬೀಜಗಳ ನಗು..
“ಅಮ್ಮ, ಚಂದಮಾಮಂಗೂ.. “
ಅಡ್ಡದಿಡ್ಡಿಯಾಗಿ ಸಾಗುವ ಕತೆಯೊಂದಿಗೆ
ತುತ್ತುಂಡ ನಲ್ಲಿರುಳಿಗೂ
ಚುಕ್ಕಿಯಾದ ಕನಸಿನ ಸುಖ ನಿದ್ದೆ!


(ಇಪ್ಪತ್ತು ವರ್ಷಗಳ ಹಿಂದಿನ ನೆನಪಿನಲಿ.. ನನ್ನ ಪಿಕಾಸುವಿನ ಬಾಲ್ಯ)

ಮಂಜಿನ ನೀರಿಗಂಜಿ..

1.       ಮಂಜಿನ ನೀರಿಗಂಜಿ!
      ---------------

ನಿಶೆಯ ಬಾಹುವಿನೆಡೆ ಅಡಗಿದ
ನಿದಿರೆಯ ಮತ್ತಿನಲಿ ತೇಲುವ
ಹಕ್ಕಿಗಳ ಇಂಚರಕೂ  ಜಗ್ಗದೆ
ಮಾಗಿಯ ಚಳಿಗೆ ಹಿತವಾಗಿ
ಮುಗಿಲೊಳಗೆ ತಲೆ ಮರೆಸಿದ
ದಿನಕರ ಎದ್ದು ಬಿದ್ದು ಹೊರಬಂದ
ಮುಂಜಾವು ಕೊಡ ತುಂಬಾ
ಸುರಿದ ಮಂಜಿನ ನೀರಿಗಂಜಿ!


23 January, 2014

ಪುಟ್ಟಿ ಮತ್ತು ಚಂದಮಾಮನ ಹಲ್ಲು!

ಪುಟ್ಟಿ ಮತ್ತು ಚಂದಮಾಮನ ಹಲ್ಲು!
--------------------------------

ಚುಕ್ಕಿಗಳ ಜತೆ ಗೆರೆಗಳನೆಳೆದು
ಕುಂಟೆ ಬಿಲ್ಲೆಯನಾಡುತಿದ್ದ  ಚಂದಮಾಮ
ನುಣುಪಾದ ಚಿಕ್ಕ ಚುಕ್ಕಿಯೊಂದನೆಡವಿದನು
ಬಿದ್ದು ಹಲ್ಲು ಮುರಿದುಕೊಂಡನು;

ಚುಕ್ಕಿ ಚಂದಮಾಮಂದಿರ ದೊಂಡೆಗೆ
ನಿದ್ದೆಯಿಂದದೆಚ್ಚರವಾದ ಪಕ್ಕಿಗಳೆಲ್ಲ ನಕ್ಕ
ಕಿಲ ಕಿಲ ಸದ್ದು ಮುಗಿಲ ತುಂಬಾ
ಮಾರ್ದನಿಸಿ ನನ್ನ ಪುಟ್ಟಿಯನೆಬ್ಬಿಸಿತು;

ಅಂಗಣಕೆ ಬಂದು ಮುಗಿಲತ್ತ
ಚಾಚಿದ ಪುಟ್ಟಿಯ ಪುಟ್ಟ ಗುಲಾಬಿ ಕೈ
ಮುಷ್ಟಿಯಲಿ ಚಂದಮಾಮನ ಹಲ್ಲಿನ
ತುಂಡು ಭದ್ರವಾಗಿ ಅಡಗಿತು;

ನಾಳೆ ಪುಟ್ಟಿ ತನ್ನ ಪುಟ್ಟ
ಗೆಳೆಯ ಗೆಳತಿಯರಿಗೆ ಹೇಳುವ
ನಲ್ಲಿರುಳಿನ ಕತೆಗೆ ಸಾಕ್ಷಿಯಾಯಿತು!


(ಹದಿನೆಂಟು ವರ್ಷಗಳ ಹಿಂದಿನ ದಿನದ ನಲ್ಲಿರುಳ ನೆನಪಿನಲಿ ಮೂಡಿದ ಬರಹ.. )
ಇರುಳಿನ ಭದ್ರ ಬಾಹುವಿನೆಡೆ ಸಿಲುಕಿದ ಸೆರಗನು
ನೀಳ ನಾಜೂಕು ಹಸ್ತದಿ ಸೆಳೆಯುತಿರುವ ಮುಂಜಾವು
ಮುಸುಮುಸು ನಗುತಿರುವ ಪಕ್ಕಿಗಳಿಂದ ಗಲ್ಲ ಕೆಂಪೇರಿ
ಬೆಳ್ಳಿ ಮೋಡಗಳ ಮರೆಯಲಿ ಅಡಗಲೂ ವಿಫಲವಾಯಿತು! 

22 January, 2014

ಸುಭಾಷಿತ!

ರೋಹತೆ ಸಾಯಕೈರ್ವಿದ್ಧಂ ವನಂ ಪರಶುನಾ ಹತಮ್|
ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್||

ಬಾಣಗಳಿಂದ ಗಾಯಗೊಂಡ ಶರೀರ ಗುಣವಾಗುತ್ತದೆ, ಕೊಡಲಿಯಿಂದ ಗಾಯಗೊಂಡ ಮರ ಮತ್ತೆ ಚಿಗುರುತ್ತದೆ |
ಮಾತು ಒರಟು ಮತ್ತು ಕಠೋರವಾದರೆ ಮಾತಿನಿಂದಾದ ಗಾಯವು ಗುಣವಾಗುವುದಿಲ್ಲ || 

21 January, 2014

ವಸಂತನ ಹಿಂದೆ ಸುಡುವ ವೈಶಾಖ.. !



ಒಲವೇ,

ಅರಿವಿರಲಿಲ್ಲವೋ ಅಥವಾ ಅರಿತೂ ಅರಿಯದಂತಿದ್ದೆನೋ
ನಿಯಮಗಳ ಕಠಿಣತೆಯ ಅಳತೆ ನನ್ನರಿವಿಗೆ ನಿಲುಕದಿರಲಿಲ್ಲವೋ
ಒಂದೂ ಅರಿಯೆನಾದರೂ ನೀ ನನ್ನ ತೊರೆಯಲಿಲ್ಲ ನಾ ಸೋತಾಗ
ಅಥವಾ ನನ್ನ ಶರಣಾಗತಿಯ ಭಾವಕೆ ನೀನೊಲಿದೆಯೋ
ಅಂತೂ ಅರಿವಿನ ಹಾದಿಗೆ ಅಡ್ಡಿ ಬರಲಿಲ್ಲ

ಒಮ್ಮೊಮ್ಮೆ ಬರೇ ಕತ್ತಲು..
ಮಗದೊಮ್ಮೆ ಕಣ್ಣು ಬಿಡಿಸಲೂ ಅಡ್ಡಿಯಾಗುವ ಬೆಳಕು
ಕುರುಡಿಯಂತೆ ತಡವಡಿಸಲೇಬೇಕಾಯಿತು ನೋಡು
ಅದೋ ವೀಣೆಯ ಝೇಂಕಾರ..
ಮುದಗೊಳ್ಳುವ ಮುನ್ನವೇ ಅಪ್ಪಳಿಸಿತು
ಗುಡುಗು ಸಿಡಿಲಿನ ಅಹಂಕಾರ..

ಅಯ್ಯೋ ವಿಧಿಯೇ, ಯಾಕೆನ್ನ ಕಿವುಡಿ ಮಾಡಲಿಲ್ಲ
ಕಲ್ಲು ಮುಳ್ಳುಗಳೆಡೆಯಲಿ ಎಡವಿ ಬಿದ್ದಾಗ ಎಬ್ಬಿಸಲಿಲ್ಲ
ಕುಹಕ ನಗೆಯನು ಕಂಡರೂ ನಾ ಬೆದರಲಿಲ್ಲ
ಕಪ್ಪು ನೆತ್ತರು ಹರಿದರೂ ಗಲ್ಲ ಇನ್ನೂ ಗುಲಾಬಿಯೇ
ಮನದಲಿನ್ನೂ ಅದೇ ಮೂರುತಿಯೇ,
ಒಲವಿನ ಭಾವವಿನ್ನೂ ಆವಿಯಾಗಲಿಲ್ಲ..

ನೀ ಕನಸುಗಳ ಬಿತ್ತಿ ಮತ್ತೆ ನೀನೇ ಬೆಂಕಿ ಹಚ್ಚಿದರೂ
ನಾ ನೋಡಿ ಬರೇ ನಸುನಗುವೆ ಕನಸುಗಳಿಗೆ ಬೆಲೆಯಿಲ್ಲವಲ್ಲ
ಹಗಲು-ರಾತ್ರಿಯಂತೆ ನೋವು-ನಲಿವು..
ಮತ್ತೆ ವಸಂತ ಬಂದರೂ ಅವನ್ಹಿಂದೆ ಸುಡುವ ವೈಶಾಖವೂ
ಬಂದು ಕಾಡುವುದು ಅರಿವಿದೆ ಈಗ ನನಗೆ!

19 January, 2014

ಮುಕುಲಗಳ ಸೇವೆ.. ಮುಂಜಾವಿಗೆ!

ಇಬ್ಬನಿಗಳ ಅಭಿಷೇಕದಿ
ಪ್ರಫುಲ್ಲಿತ ಮುಂಜಾವಿಗೆ
ಮಂಜಿನ ಪರದೆಯೊಳಗೆ
ಮಕರಂದ ನೈವೇದ್ಯ..
ಲಜ್ಜೆಯಲಿ ಬಳಕುತಾ
ಅರಳುವ ರಂಗುರಂಗಿನ
ಮುಕುಲಗಳ ಸೇವೆ..

18 January, 2014

ಸುಭಾಷಿತ!

ರೆ ರೆ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾಮ
ಅಂಭೋದಾ ಬಹವೋ ಹಿ ಸಂತಿ ಗಗನೆ ಸರ್ವೆಪಿ ನೈತಾದ್ರಶಾಃ |
ಕೇಚಿತ್ ವೃಷ್ಟಿಭಿರಾರ್ದ್ರಯಂತಿ ಧರಣೀಂ ಗರ್ಜಯಂತಿ ಕೇಚಿತ್ ವೃಥಾ
ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತಃ ಮಾ ಬ್ರೂಹಿ ದೀನಂ ವಾಚಃ ||

ಅರೇ ಮಿತ್ರ ಚಕ್ರವಾಕ ಪಕ್ಷಿಯೇ, ಏಕಮನಸ್ಸಿನಿಂದ ಕ್ಷಣಹೊತ್ತು ಆಲಿಸಂತೆ.
ಆಕಾಶದಲ್ಲಿ ಬಹಳಷ್ಟು ಮೋಡಗಳು ಇವೆ. ಆದರೆ ಎಲ್ಲವೂ ಒಂದೇ ಸಮನಲ್ಲ.
ಕೆಲವು ಭುವಿಯನ್ನು ತಂಪು, ಒದ್ದೆ ಮಾಡುತ್ತವೆ, ಮತ್ತು ಕೆಲವು ಬರೇ ಗರ್ಜಿಸುತ್ತವೆ ಅಷ್ಟೇ.
ಆದುದರಿಂದ ನೋಡಿದ ಮೋಡಗಳೆಲ್ಲದರ ಮುಂದೆ ದೀನನಾಗಿ ಬೇಡಿಕೊಳ್ಳಬೇಡ.

ಕೊಂಚ ಸ್ವಾಭಿಮಾನವನ್ನು ತೋರು!

ಪುಳಕಾಭಿಷೇಕ..

ಪುಳಕಾಭಿಷೇಕ..

ಹಸುರು ಪತ್ರಗಳ ಅಲಗುಗಳಲಿ
ಸಾಲಾಗಿ ನಿಂತಿಹ ಸಿಪಾಯಿಗಳು...

ನಿರ್ಮಲ, ಕೋಮಲ, ಪಾರದರ್ಶಕ
ಇಬ್ಬನಿಗಳ ಪುಳಕಾಭಿಷೇಕ ಮುಂಜಾವಿಗೆ..

17 January, 2014

ಕಹ ಸೆ ಆಯೆ ಬದರಾ.. (ಭಾವಾನುವಾದ )

ದೀಪ್ತಿ ನವಾಲ್ ಮತ್ತು ಫಾರುಕ್ ಶೇಖ್ ನನ್ನ ಅಚ್ಚುಮೆಚ್ಚಿನ ಜೋಡಿ!

ಚಶ್ಮೆ ಬದ್ದೂರ್ ಅಚ್ಚುಮೆಚ್ಚಿನ ಚಲನಚಿತ್ರ!

ಈ ಹಿಂದೆ ಇದೇ ಹಾಡನ್ನು ಎಷ್ಟೋ ಸಲ ಕೇಳಿದ್ದೆನಾದರೂ ಇಂದು ಒಳಗಿಳಿದಂತೆ ಅಂದಿಳಿದಿರಲಿಲ್ಲ!. ಬಹುಶಃ ನನ್ನ ಭಾವ ಇನ್ನೂ ಪಕ್ವವಾಗಿರಲಿಲ್ಲ.

ಕೆಲವು ದಿನಗಳ ಹಿಂದೆ ತ್ರಿವೇಣಿ ರಾವ್ ಅವರು ಈ ಹಾಡನ್ನು ಅನುವಾದಿಸಲು ಯತ್ನಿಸಿ ಎಂದು ಹೇಳಿದಾಗ, ಮತ್ತೊಮ್ಮೆ ಮಗದೊಮ್ಮೆ ಕೇಳುತ್ತಿದ್ದಂತೆ ಭಾವಗಳು ಪದಗಳನ್ನೊದಗಿಸಿದವು!  ಇಂದು ಜೈನ್ ಅವರ ಸಾಹಿತ್ಯಕ್ಕೆ ನ್ಯಾಯ ಒದಗಿಸಿದೇನೋ ಗೊತ್ತಿಲ್ಲ.. ನನ್ನ ಮನಸಿಗಂತೂ ತೃಪ್ತಿ ಸಿಕ್ಕಿದೆ!

ಎಲ್ಲಿಂದ ಕವಿಯಿತು ಈ ಕರಿಕಪ್ಪು ಮೋಡ
ಮಿಶ್ರವಾಗುತ ಜತೆಗೆ ಇಳಿಯಿತು ಕಪ್ಪು ಕಜ್ಜಳ ||

ಕಣ್ಣೆವೆಗಳ ರಂಗಿನ ಬೆಳಕು
ಕಣ್ಣೀರಿನ ಜಾಲರಿಯ ಹಾರವು
ಮಿಂಚುತಿಹ ಅನರ್ಘ್ಯ ಮುತ್ತೆಲ್ಲಿ
ಜಾರಿ ಮಿಶ್ರವಾಯಿತು ಮಣ್ಣಲ್ಲಿ ||



ಪಿಯನ ಸಂಗ ಸುಖ ನಿದ್ದೆಯಲಿ ಅವಳು/ಪಿಯನ ಜತೆಗೆ ನಿದ್ದೆಯೂ ಅತ್ತ ತೆರಳಿತು
ಕನಸಿನ ಹೂದೋಟದಲಿ ಮೈಮರೆವು/ಕನಸಿನ ತೋಟದಲೀಗ ಬರೇ ಒಣಹೂಗಳು
ತುಟಿಯ ಒಳಗಿಳಿಯಲು ಕಾತರಿಸಿತು ಅಮೃತ
ಒಳಗಿಳಿಯುತಲೇ ಆಯಿತಲ್ಲ ಅದು ವಿಷ||



ಇಳಿಯಿತು ಮೋಡ ಆವರಿಸಿತು ಕರಿನೆಳಲು
ನಿರ್ದಯಿ ಗಾಳಿ ಉರಿ ಪ್ರಜ್ವಲಿಸಿತು
ಸುರಿಯಿತು ಬಿಡದೇ ಸೋನೆ
ಅಳುತಿದೆ ಹುಚ್ಚು ಮನವೇಕೆ ಕಾಣೆ ||

16 January, 2014

ಮುಂಜಾವು

ಚಳಿಗೆ ನೆಲ ಮೈಮುಚ್ಚಿ ಹೊದ್ದ ಕಡುಗಪ್ಪು
ಇರುಳುಗಂಬಳಿಯನ್ನು ರಭಸದಿಂ ಎಳೆಎಳೆದು
ಮುಗಿಲ ಕವಾಟದೊಳಗೆ ಮಡಚಿಟ್ಟು
ಮಸುಕು ಬಿಳಿ ಪರದೆಯನು ಅಗಲವಾಗಿ ಬಿಡಿಸುತಾ
ತಂಗಾಳಿಗೆ ತೆಳು ಸೊಂಟ ಬಳಕಿಸುತಾ
ಕಂಕಣ-ಗೆಜ್ಜೆಗಳ ಜುಗಲ್^ಬಂದಿಯ ನಿನಾದದೊಂದಿಗೆ
ಹಸುರು ನೆಲದ ಇಬ್ಬನಿ ಮಾಲೆಯಲಿ
ಹೆಜ್ಜೆಯೂರದೇ ಗಾಳಿಯಲಿ ತೇಲುತಾ
ಅಂಗಣಕೊಂದರಂತೆ ಬೆಳ್ಳಿ ಚುಕ್ಕಿಯನಿಕುತಾ
ತೆಳು ಸೆರಗನು ಗಾಳಿಯಲಿ ಹಾರಿಸುತಾ
ಲಾಸ್ಯವಾಡುತ ಬರುತಿಹಳು ಮುಂಜಾವು
ಸೌಂದರ್ಯ ಆಸ್ವಾದಿಸುವುದರಲೇ ಮಗ್ನಳಾದವಳು
ಎಚ್ಚೆತ್ತಿದ್ದು ಒಲವಿನ ಮೆಲು ನುಡಿಗೆ
ಸುಪ್ರಭಾತದ ಹಾರೈಕೆಯ ಸಿಹಿ ಮುತ್ತಿಗೆ!


15 January, 2014

ನಲ್ಲಿರುಳಿಗೂ ಸವಿ ನಿದ್ದೆ..

“ಒಂದೂರಿನಲ್ಲಿ.. “
ಪಾರಿಜಾತದ ಬುಡದಲಿ ತುತ್ತುಣಿಸುತ್ತಾ ಬಿಚ್ಚಿಕೊಳ್ಳುವ ಚುಕ್ಕಿ ಕತೆ..
ನಡುನಡುವಿನಲಿ ತಲೆದೂಗಿದ ಮರುತನ ಪುಷ್ಪವೃಷ್ಟಿ..
ಘಮಘಮಿಸುವ ಪಾರಿಜಾತಗಳ ಚುಕ್ಕಿ ಮಡಿಲಲಿ..
ಜೀರುಂಡೆಗಳು ಕಿವಿನಿಮಿರಿಸಿ ಆಲಿಸುತ್ತಿರುವವೇನೋ..
ಹಿತವಾದ ತಂಬೂರಿ ಝೇಂಕಾರ...
“ಓಂ ನಮೋ ವಾಸುದೇವಾಯ.. “
ಮುದ್ದುಗೆ ಬಾಲ ದ್ರುವನ ತುತ್ತಿನ ಚಿಂತೆ..
ಕೆಂಪು ಕೊಕ್ಕಿನ ಹಕ್ಕಿಗಳು ಉಣಿಸಿದವೆಂದರೇ ತೃಪ್ತಿ..
“ಅಮ್ಮ ಚಂದಮಾಮಂಗೂ.. “
ಅಡ್ಡದಿಡ್ಡಿಯಾಗಿ ಸಾಗುವ ಕತೆಯೊಂದಿಗೆ
ಒಂದು ತುತ್ತು ಉಂಡ
ನಲ್ಲಿರುಳಿಗೂ ಸವಿಗನಸಿನ ನಿದ್ದೆ!

ಅವಳ ವ್ಯಥೆ..

ಇನ್ನೂ ಬಿಸಿ ಆರಿಲ್ಲ..
ಅಂದು ಕೈ ಕೈ ಬೆಸೆದು ಹಾಕಿದ
ಏಳು ಹೆಜ್ಜೆಗಳ ನಕ್ಷೆ ಇನ್ನೂ ಹಸಿ..

ತನುಮನಗಳು ಬೆರೆತು ಹಾಲು ಮರೆತು
ಸಜ್ಜೆ ಹೂಗಳು ನಜ್ಜು ನಜ್ಜಾಗಿ
ಲಜ್ಜೆ ಮರೆತ ಇರುಳು ಇನ್ನೆಲ್ಲಿ..

ಉಸಿರಿಗೆ ಉಸಿರು ಬೆರೆತು
ಜೀವ ಜೀವದ ಮಿಲನವೆಲ್ಲ
ಬರೇ ನೆನಪಾಗಿ ಉಳಿಯುವುದಲ್ಲಿ

ಅವಳ ತೆಕ್ಕೆಯಲ್ಲಿದವನ ನೆನಪು
ಮರೆಯಲಾಗದೆ ತಪ್ತಳಾದವಳ
ಕೊಲ್ಲದೆ ಮರಳುವೆಯೇಕೆ ನಲ್ಲಿರುಳೇ!

ನಲ್ಲಿರುಳ ಕವಿತೆ!

ಮುಂಜಾವಿನಲಿ ಸುತ್ತಿಟ್ಟ ಕನಸುಗಳ ಬಿಡಿಸಲು ಕಾದಿದೆ ನಲ್ಲಿರುಳು
ನಭದಲಿದ ಚುಕ್ಕಿಗಳು ಕನಸಿನಂಗಳಕಿಳಿದು ಚಿತ್ತಾರ ಬಿಡಿಸಲು 
ಜತೆಯಾಗಿ ಯುಗಳ ಗೀತೆ ಹಾಡುತ ನಲಿಯುವ ನನ್ನೊಲವು
ಕಣ್ರೆಪ್ಪೆಯೊಳಗಿನ ಆ ಲೋಕಕೆ ಧಾವಿಸಿದೆ ನನ್ನ ಮನವು!

14 January, 2014

ಒಲವೇ.. ನಿನ್ನದೇ ಆಟ!

ಒಲವೇ,

ಹೂ, ಅದು ನೀನೇ..
ಮನದ ಬಾಗಿಲ ಒದ್ದು
ಅಂತರಂಗ ತೆರೆದೆ
ಮಸುಕಿದ ಭಾವಗಳ ಝಾಡಿಸಿ
ಅಕ್ಷರ ಕಾವ್ಯ ರಚಿಸಿದೆ
ಗೆಜ್ಜೆ ಸದ್ದಿಲ್ಲದೆ ಕುಣಿದಾಟವಾಡಿ
ಹಚ್ಚೆಯಿಂದ ಎದೆ ತುಂಬಿಸಿದೆ
ಕುರುಡಿ ಕಿವುಡಿಯ
ಶ್ರವ್ಯಕೂ ದೃಷ್ಟಿಗೂ ಮುಕ್ತಿಯಿತ್ತೆ
ಗೋರಿಯಿಂದೆನ್ನ ಹೊರಗಟ್ಟಿ
ಗುಡಿಯೊಂದು ಸ್ಥಾಪಿಸಿದೆ
ಒಲವಿನ ಮೂರುತಿಗಲ್ಲಿ
ಡಂಬ ಆಡಂಬರವಿಲ್ಲದೆ
ಧೂಪದಾರತಿ ನಾ ಎತ್ತಿದೆ

ಸುಭಾಷಿತ!

ದರ್ಶನೆ ಸ್ಪರ್ಶನೆ ವಾಪಿ ಶ್ರವಣೆ ಭಾಷಣೇಪಿ ವಾ|
ಯತ್ರದ್ರವತ್ಯಂತರಂಗ ಸ ಸ್ನೇಹ ಇತಿ ಕಥ್ಯತೆ||

ಯಾರ ನೋಟ, ಸ್ಪರ್ಶ, ಶ್ರವಣ ಮತ್ತು ಮಾತು
ನಮ್ಮ ಅಂತರಂಗವನ್ನು ಕರಗಿಸುವುದೋ ಅದನ್ನೇ ಸ್ನೇಹ-ಒಲವು-ಪ್ರೀತಿ ಎನ್ನುತ್ತಾರೆ||


ಗೆಳತಿಯರ ಗೆಳೆಯರ ಒಲವಿನಲಿ ಮುಳುಗೇಳುತಿರುವ ಸುಖ ಭಾವದ ತೃಪ್ತಿ!

13 January, 2014

“ಮೈ ಉಸ್ಕಿ ದಿವಾನಿ.. ಪ್ರೇಮ್ ದಿವಾನಿ”- ರಾಧಾ!

“ಮೈ ಉಸ್ಕಿ ದಿವಾನಿ.. ಪ್ರೇಮ್ ದಿವಾನಿ!"
-------------------------------

 ನಡುಹಗಲಿನಂತೆ ಇವತ್ತಿನ ಹುಣ್ಣಿಮೆ ಬೆಳಕು ಚೆಲ್ಲಿದೆ..

ದೂರದಲ್ಲೆಲ್ಲೋ ಕೋಮಲ ಕೂಗು.. ನವಿಲೊಂದು ತನ್ನ ಪ್ರಿಯತಮೆಯನು ಓಲೈಸುತ್ತಿದೆ.

ಯಮುನೆ ಚಂದಮನ ಕರೆಗೋ ಮತ್ತೇತಕೋ ಕೊಂಚ ಬಿರುಸಿನಿಂದ ದಡವನಪ್ಪುವ ತವಕದಲಿದ್ದಾಳೆ..

ಗೆಜ್ಜೆ ಸದ್ದು ಇಲ್ಲೆಲ್ಲೋ... ಸನಿಹದಲ್ಲೇ..

ಘಮ್ಮನೇ ಪರಿಮಳ ಹೊಮ್ಮುವ ಜಾಜಿ ಸುತ್ತಿದ, ನೆಲಕೆ ಮುತ್ತಿಕ್ಕಲು ಯತ್ನಿಸುವ ವೇಣಿಯ ಒಡತಿಯ ನಡೆ ಇತ್ತಲೇ..

ಕೌಮುದಿಯನ್ನೇ ನಾಚಿಸುವ ಬೆಳಕು, ಅಡಗಿಸಲು ಸೋತಿದೆ ವದನವನು ಅರೆ ಮುಚ್ಚಿದ ಸೆರಗು!

ನೀಳ ನಾಸಿಕದ ನತ್ತಿನ ಮಿಂಚನು ಮೀರಿಸುವ ಕಜ್ಜಲ ಹಚ್ಚಿದ ಕಪ್ಪು ಕೊಳ!

ತೆಳುಸೊಂಟದಿ ಈಗಲೋ ಆಗಲೋ ಜಾರಲೆತ್ನಿಸುವ ಮುತ್ತಿನ ಜಾಲರಿ..

ಕುತ್ತಿಗೆಯನಪ್ಪಿದ ನೀಲಕಂಠಿ..

ಘಲಘಲ.. ಪೈಪೋಟಿಯಲಿ ನಾದತರಂಗವನೆಬ್ಬಿಸುವ ಕಂಕಣಗಳು..

ಓಡಿ ಬಂದದುದಕೋ ಉದ್ವೇಗಕೋ.. ಎದೆ ಹಾರುತಿದೆ..

ಉಸಿರ ಲೆಕ್ಕ ತಪ್ಪುತಿದೆ..

ಬಂಡೆಯ ಮೇಲೆ “ಉಸ್” ಅನುತ ಕೈವೂರಿ ಸೋತವಳಂತೆ ಕುಸಿದಳು..

ತನ್ನ ಕೈಯಲ್ಲಿದ್ದ ಕೊಳಲಿಗೂ ಗರಿಗೂ ಮುತ್ತಿಕ್ಕಿ ಎದೆಗವುಚಿದಳು..

ಗುಸು ಗುಸು ಶಬ್ದಕೆ ಬೆಚ್ಚಿದವಳಿಗೆ ಕಂಡದು ಅಪಹಾಸ್ಯ ಮಾಡುತಿರುವ ಗೋಪಿಯರ ಹಿಂಡು!

“ಇವಳು ನಿಜವಾಗಿ ಹುಚ್ಚಿ! ಎಲ್ಲಿ ನಿನ್ನ ಕನಯ್ಯ! ಅವನಲ್ಲಿ ತನ್ನ ಪಟ್ಟಮಹಿಷಿಯರ ಜತೆ ಸರಸದಲ್ಲಿದ್ದಾನೆ! ನಿನಗೆ ಈ ಬಿದಿರು ತುಂಡು ಮತ್ತು ಪುಕ್ಕನೇ ಗತಿ!”

ನಸುನಕ್ಕಳು..

ಹಲ್ಲು ಬಿರಿದಳು..

ತಡೆಯಲಾಗಲಿಲ್ಲ..

ಗಹಗಹಿಸಿ ಬಿದ್ದು ಬಿದ್ದು ನಕ್ಕವಳನು ಕಂಡು ಗುಂಪು ಬೆದರಿತು!

ಸನ್ನೆ ಮಾಡಿ ಕರೆದಳು!

ಯಮುನೆಯತ್ತ  ಬಗ್ಗಿದಳು!

“ನನ್ನ ಪ್ರತಿಬಿಂಬ ನೋಡಿ ಸಖಿಯರೇ!”

ನೋಡಿದವರು ದಂಗಾಗದರು!

ಎಲ್ಲರೂ ಕಂಡದ್ದು ಮುರಳಿಯನು ಊದುತಿರುವ ಮೋಹನನ ರೂಪ!

12 January, 2014

ಏಕೀ ಅವಾಂತರ..



ಕಪ್ಪು ಮುಗಿಲಲಿ ಲಕ್ಷ ತಾರೆಗಳ ನಡುವೆ  ಕಪ್ಪು ಚಂದಿರ..
ಕೌಮುದಿ ಮುನಿದು ತೆರಳಿರುವಳಂತೆ ಬಿಟ್ಟು ಮಂದಿರ
ವಿಶಾಲ ಸುಪ್ಪತ್ತಿಗೆಯಲಿ ಹೊರಳುತ್ತ ನರಳುತ್ತಿರುವ ಕಾಂತ
ತೌರು ಮನೆಗೆ ತೆರಳಿದವಳಿಗೆ ಕಾಡಿಲ್ಲವೇಕೆ ಏಕಾಂತ

ನಲ್ಲಿರುಳಿಗೇಕೆ ಅಚ್ಚರಿ ಏಕೆ, ಯಾಕೆ, ಹೀಗೆ ಈ ಆವಾಂತರ!


10 January, 2014

ಜಬ್ ದೀಪ ಜಲೇ ಆನಾ...

ದೀಪ ಹಚ್ಚುವ ಹೊತ್ತಿಗೆ ಬಾ ನನ್ನವಳೇ..
ಸಂಜೆ ಮುಸುಕುತಿರುವಾಗ ಬಾ..
ಮರೆಯಬೇಡ ಮಿಲನದ ಗುರುತಿದು
ಮರೆಯಬೇಡ ನನ್ನೊಲವನು, ಗೆಳತಿ
ದೀಪ ಹಚ್ಚುವ ಹೊತ್ತಿಗೆ ಬಾ..

ಕಣ್ಣ ನೋಟ ಹಾದಿಯಲಿ  ಹಬ್ಬಿಸಿದ್ದೇನೆ
ನಿನ್ನ ಬರುವಿಕೆಯನು ಕಾಯುತಿದ್ದೇನೆ
ನನ್ನೀ ಕಣ್ಣಂಚಿನ ಕಪ್ಪು, ನಿನ ನಯನಗಳಿಗೆ ತಂಪು
ದೀಪ ಹಚ್ಚುವ ಹೊತ್ತಿಗೆ ಬಾ..

ಮೊದಲ ಬಾರಿಗೆ ಸಂಧಿಸಿದಲಿ
ಜತೆಗೆ ಹೆಜ್ಜೆ ಹಾಕಿದ ಜಾಗದಲಿ
ನದಿಯ ದಡದಲಿ, ಇಂದು ಮತ್ತದೇ
ತೀರದಲಿ ಮೆಲನೆ ಬಳುಕುತ ಬಾ
ದೀಪ ಹಚ್ಚುವ ಹೊತ್ತಿಗೆ,..

ನಿರಿಗ ರಿಗ ಮಗರಿಸಸನಿ
ಪಪಮ ರಿಗ ಸನಿಸಗಪಮಪ
ಆಆಆsss...

ನಿತ್ಯವೂ  ಹಗಲು ಸಂಜೆಗಳ ಮಿಲನ
ಆ ಮುದಕೆ ಅರಳಿ ಮಿನುಗುವವು ಚುಕ್ಕಿಗಳು
ವಿಧಿಯಿಲದೆ ಅಗಲುವವು ಒಂದನೊಂದು
ಮತ್ತೆ ಭೇಟಿಯಾಗುವ ಭರವಸೆಯೊಂದಿಗೆ
ದೀಪ ಹಚ್ಚುವ ಹೊತ್ತಿಗೆ ಬಾ ಗೆಳತೀ,
ಸಂಜೆ ಮುಸುಕುವ ಹೊತ್ತಿಗೆ ಬಾ.

09 January, 2014



Untold stories of life are unfolded in an unusual way! 
ಬದುಕಿನ ಬಚ್ಚಿಟ್ಟ ಕತೆಗಳೆಲ್ಲ ಬಿಚ್ಚಿಕೊಂಡವು ಬೆಚ್ಚುಬೀಳಿಸುವಂತೆ!

ಸುಭಾಷಿತ

ಹರ್ಷಸ್ಥಾನಸಹಸ್ರಾಣಿ ಭಯಸ್ಥಾನ ಶತಾನಿ ಚ|
ದಿವಸೆ ದಿವಸೆ ಮೂಢಮ್  ಆವಿಶಂತಿ ನ ಪಂಡಿತಮ್||


|| ಜೀವನದಲ್ಲಿ ಹರ್ಷಗೊಳ್ಳಲು ಸಾವಿರ ಕಾರಣಗಳಿದ್ದರೆ, ಭಯ ಹುಟ್ಟಿಸಲು ನೂರು ಕಾರಣಗಳಿವೆ.
ಮೂಢನು ದಿನದಿನವೂ ನೂರು ಭಯಗಳ ಕಾರಣಗಳಿಂದ ಅಶಾಂತನಾಗುತ್ತಾನೆ, ಪಂಡಿತನು ಸಾವಿರ ಹರುಷಗಳ ಕಾರಣಗಳಿಗಾಗಿ ಖುಷಿ ಪಡುತ್ತಾನೆ ||

ಬೂದಿಯಾಗಿಯಾದರೂ ಉಳಿಯಲಿ ನನ್ನೊಳಗೆ..

ಬೂದಿಯಾಗಿಯಾದರೂ ಉಳಿಯಲಿ ನನ್ನೊಳಗೆ..
---------------------------
ಒಲವೇ,

ಶಿಶಿರ ಮೈಮುರಿದೆದ್ದು ಕೆಣಕುತ್ತಿದ್ದಾನೆ
ಬಿರು ಬಿಸಿಲು, ಒಣ ಹವೆ

ಬಾಡಿ ಉದುರಿವೆ ಭಾವದೆಲೆಗಳು
ಚೆಲ್ಲಾಪಿಲ್ಲಿಯಾಗಿ ಎದೆಯೊಳಗೆ
ದಿಕ್ಕು ದಿಕ್ಕುಗಳಿಂದಲೂ ಕುಳಿರ್ಗಾಳಿ ಬೀಸಿ
ತಪ್ಪು ಒಪ್ಪುಗಳ ಲೆಕ್ಕ  ಹಾಕುತಿದೆ

ನೀ ತೋರಿದ ದಾರಿಯಲಿ
ಹೆಜ್ಜೆ ಹಾಕಿದಕೆ ಕೊಂಕು
ಮತ್ತೆ ಆಗಲಾರೆ ಮಂಕು

ವಿದಾಯ ಹೇಳುತಿರುವ ಕನಸ
ನಾ ಇನ್ನು ತಡೆಯಲಾರೆ
ಹಾಗಂತ ಮುನಿಯದೇ ಬೀಳ್ಕೊಡಲಾರೆ

ಹರಡಿವೆ ಕಾಯದ ಉದ್ದಗಲಕ್ಕೂ
ಒಮ್ಮೆ ಗುಡಿಸಿ ಬೆಂಕಿ ಹಚ್ಚಿಬಿಡು
ನನಸಾಗದ ಕನಸು ಬೂದಿಯಾಗಲಿ
ನಾನಳಿಯುವ ತನಕ ಉಳಿಯಲಿ ನನ್ನೊಳಗೇ!

05 January, 2014

“ಸಾಹಿತಿ ಶಬ್ದಗಳಿಗೆ ಭಾವ ಕೊಡುವ ಸಾಮರ್ಥ್ಯ ಉಳ್ಳವನು,  ನಿನ್ನಂತಹ ಸಾಮಾನ್ಯರು ಭಾವಕೆ ಶಬ್ದಗಳನು ಕೊಡಬಲ್ಲಿರಿ!”

-ಗೆಳತಿಯ ಮಾತು

04 January, 2014

ಸುಭಾಷಿತ

ಪಿಂಡೆ ಪಿಂಡೆ ಮತಿರ್ಭಿನ್ನಾ ಕುಂಡೆ ಕುಂಡೆ ನವಂ ಪಯಃ|
ಜಾತೌ ಜಾತೌ ನವಾಚಾರಾಃ ನವಾ ವಾಣೀ ಮುಖೆ ಮುಖೆ||

ಬೇರೆ ಬೇರೆ ಪಿಂಡ-ಭಿನ್ನ  ಭಿನ್ನ ಬುದ್ಧಿ
ಬೇರೆ ಬೇರೆ ಗಾತ್ರದ ಪಾತ್ರೆ- ಹೊಸ ಹೊಸ ನೀರು
ಬೇರೆ ಬೇರೆ ಹುಟ್ಟು(ಬೆಳವಣಿಗೆ, ವಾತಾವರಣ)- ಹೊಸ ಹೊಸ ಆಚಾರ, ವಿಚಾರ

ಬೇರೆ ಬೇರೆ ಮುಖ- ಹೊಸ ಹೊಸ ಮಾತು (ಅರ್ಥ)s

ಸುಭಾಷಿತ

ದುರ್ಬಲಸ್ಯ ಬಲಂ ರಾಜಾ ಬಾಲಾನಾಮ್ ರೋಧನಮ್ ಬಲಮ್|
ಬಲಂ ಮೂರ್ಖಸ್ಯ ಮೌನಿತ್ವಂ ಚೌರಾಣಾಂ ಅನೃತಂ ಬಲಮ್||

ಬಲಹೀನನಿಗೆ ರಾಜನೇ ಬಲ, ಶಿಶುಗಳಿಗೆ ಅಳುವೇ ಬಲ|

ಮೂರ್ಖನಿಗೆ ಮೌನದಿಂದಿರುವುದೇ ಬಲ, ಕಳ್ಳಕಾಕರಿಗೆ ಸುಳ್ಳೇ ಬಲ||

03 January, 2014

|| ಮರುಳರ ಬದುಕನ್ನು ಪುನರತ್ಥಾನಗೊಳಿಸಲು ಒಲುಮೆಗೆ, ಬರೇ ಒಲುಮೆಗೆ ಮಾತ್ರ ಸಾಧ್ಯ ||
||“ಒಲುಮೆ” “ಮಮತೆ”ಗಾಗಿ ಹಂಬಲಿಸುವ ಮನವೇ

ಕಲುಷ ಮಾಡದಿರು ಪೆಡಸು ನುಡಿಗೆ ಕಿವಿಯನಿತ್ತು||

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...