ನೆರೆಮನೆ ಅಂಗಳದಲ್ಲಿ ಕೇಳಿಬಂದ ಕಿಲಿಕಿಲಿ ನಗುವಿನ ಸೆಳೆತಕೆ
ಮನೆಯ (ಮನದ) ಕಿಟಿಕಿ ಅಗಲವಾಗಿ ತೆರೆಯಿತು..
ಆ ಪುಟ್ಟ ಪುಟ್ಟ ಬೆರಳುಗಳು ಕರೆದವು..
ತೊದಲು ನುಡಿ... ಏನೋ ಹೇಳುತಿದೆ...
ಒಲವ ಸೂಸುವ ಕಡುಕಪ್ಪು ಬಟ್ಟಲು ಕಣ್ಗಳು..
ನವಿಲುಗರಿಯ ತಲೆಯ ಮೇಲೆ ಪೊತ್ತರಂತೂ
ತೇಟ ಬಾಲ ಗೋಪಾಲನೇ..
ಮುರಳಿಯನಿತ್ತು ನಾದ ಕೇಳಿ
ಗೆಜ್ಜೆ ಕಟ್ಟಿ ಮುಕ್ತವಾಗಿ ಕುಣಿಯಬೇಕೆಂಬಾಸೆ...
ಮೂಡಿತೇಕೆ?
ಯಾವ ಮೋಹಕೂ ಬಗ್ಗದ ಮನದಲ್ಲೂ ಅದೇಕೀ ನವಿರು ಕಂಪನ..
ಮತ್ತೆ ಮತ್ತೆ ಅಲ್ಲೇ ನೆಡುವ ಮನ..
ಕಿಟಿಕಿ ಮುಚ್ಚಲೇ ಮನಸಿಲ್ಲ..
ಮರಳಿ ಮರಳಿ ಅಲ್ಲೇ ನೋಟವಲ್ಲೇ..
ಕಿವಿಯಲಿ ಅದೇ ನಗುವಿನ ಗುಂಗು..
ಒಲವಿಗೆ ಶರಣು ಶರಣು...
ನಿತ್ಯ ಉತ್ಸವ.. ಕಿಲಿ ಕಿಲಿ ನಗೆಗೆ
ಘಲ್ ಘಲ್ ಗೆಜ್ಜೆಯ ನಾದ ಎದೆಯೊಳಗೆ..
ಈ ಮನ ಕಿಟಿಕಿಯ ಒಳಗೆ...
ನಾದ ಆ ಮನೆಯಂಗಳದಲ್ಲಿ..
ನಾದ ಆ ಮನೆಯಂಗಳದಲ್ಲಿ..
ಅದರ ಪ್ರತಿದ್ವನಿ ಮಾತ್ರ ಈ ಮನದಲಿ..
ಬತ್ತಿದ ಎದೆಯಲ್ಲಿ ಮತ್ತೆ ಚಿಮ್ಮಿದ ನೊರೆ ನೊರೆ ಹಾಲು..
ಅಮೃತವನಿತ್ತು ಪುಟ್ಟ ಬಾಯಿಗೆ ಧನ್ಯಳಾಗಬೇಕೆಂಬ ತವಕ..
ಎದೆಗವುಚಿ, ಮೈಕಂಪ ಆಘ್ರಾಣಿಸಿ ಕರಡಿಗೆಯಲಿ ತುಂಬಿಡಲೇ..
ಎದೆಗವುಚಿ, ಮೈಕಂಪ ಆಘ್ರಾಣಿಸಿ ಕರಡಿಗೆಯಲಿ ತುಂಬಿಡಲೇ..
ಇಲ್ಲ ಇಲ್ಲ... ದೂರದಲೇ ನೋಡಿ ನಲಿವೆ..
ಲಕ್ಷಣ ರೇಖೆಯ ದಾಟಲಾರದೆ ಸೋಲು..
ದಿನಗಳುರಿದವು.. ಹಕ್ಕಿಯಂತೆ ಹಗುರ ಮನ..
ಚುಚ್ಚುವ ಬಾಣಗಳು ಗುರಿ ತಲುಪಲೇ ಇಲ್ಲ..
ಮತ್ತೆ ಹೊಸ ಋತು.. ಅದೇನಾಯಿತು?
ಚುಚ್ಚುವ ಬಾಣಗಳು ಗುರಿ ತಲುಪಲೇ ಇಲ್ಲ..
ಮತ್ತೆ ಹೊಸ ಋತು.. ಅದೇನಾಯಿತು?
ಹೊಸ ದಿನಗಳು ಹಳೆಯ ಭಾವದ ಕುರುಹು ತರಲೊಪ್ಪಲಿಲ್ಲವೇ?
ಎಲ್ಲಿ ಏನು ಬದಲಾಯಿತು?
ಅರೇ ಆ ನಗುವೇಕೆ ಕೃತಕ?
ತೊದಲು ಮಾತೇ ಇಲ್ಲ... ಬೇಡವಾದೆನೆ..
ಅಲ್ಲಿ ಗಂಭೀರ ಮೌನ!
ಈ ಮನದ
ಕನ್ನಡಿಯಲ್ಲಿ ಗೀರುಗಳು..
ಒಸರಿದವು ಹನಿಗಳು..
ಅಮೂರ್ತ ಭಾವದ ಮೂರ್ತ ರೂಪವೇ ಆ ಹನಿಗಳು..
ಕೆಂಪಲ್ಲ.. ಬಿಳಿಯೂ ಅಲ್ಲ..
ತೊದಲು ನುಡಿಗಳು ಮೂಡಿಸಿದ ಮಳೆಬಿಲ್ಲು ಮುರಿದು
ಬಣ್ಣಗಳು ದಿಕ್ಕು ದಿಕ್ಕಿಗೂ ಚದುರಿ..
ಈ ಹನಿಗಳಿಗೆ ಮತ್ತಾವ ಬಣ್ಣವಿರಬಹುದು?