ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 February, 2013

ಕೊಡಿಯಾಲ್ ತೇರು!











    

            "ಕೊಡಿಯಾಲ್ ತೇರು"- ಬಹುಶಃ ಎಲ್ಲಾ ಕೊಂಕಣಿಗರು ಒಕ್ಕೊರಳಿನಲ್ಲಿ... ವಯೋಬೇಧವಿಲ್ಲದೆ ಒಪ್ಪುವ ಮೆಚ್ಚುವ ಉತ್ಸವ! ಪ್ರತೀವರ್ಷವೂ ಮತ್ತೆ ಹೊಸ ರೂಪದಲ್ಲಿ ಬಂದು ೬ ದಿನ ಎಲ್ಲಾ ಕೊಂಕಣಿಗರನ್ನು ಒಂದೇ ಛತ್ರದಡಿಯಲ್ಲಿ ತಂದು ನಿಲ್ಲಿಸುವ ಅಭೂತಪೂರ್ವ ಅತ್ಯಂತ ಸಂಭ್ರಮದ ಹಬ್ಬ! 
     ಬಂದರು ಪ್ರದೇಶವಾದ ಮಂಗಳೂರಿನ ಹಿಂದೆ ಅನೇಕ ಐತಿಹಾಸಿಕ ಕತೆಗಳಿವೆ. ಮೂಲತಃ ತುಳುನಾಡಾದ ಇದು ಕಾಶ್ಮೀರಿ ಮೂಲವಾದ ಸಾರಸ್ವತ ಬ್ರಾಹ್ಮಣರಿಗೆ ಆಶ್ರಯನಿತ್ತು ಸಲಹಿದೆ. ಬಂಗಾಲದ ಗೌಡದಿಂದ ಗೋವಕ್ಕೆ ಬಂದಿಳಿದ ಈ ಬ್ರಾಹ್ಮಣರನ್ನು ಗೌಡ ಸಾರಸ್ವತರೆಂದು ಕರೆಯುತ್ತಾರೆ. ಕರಾವಳಿಯ ರಾಜರುಗಳಲ್ಲಿ ಅಶ್ರಯ ಪಡೆದು ಅವರ ಪ್ರೀತಿ ವಿಶ್ವಾಸ ಗೆದ್ದು ಇಲ್ಲೇ ತಮ್ಮ ನೆಲೆಯನ್ನು ಕಂಡು ಕೊಂಡರು ಈ  ಸರಸ್ವತಿಯ ಮೂಲ ನಿವಾಸಿಗಳು. ಮಾತಿನಲ್ಲಿ, ವ್ಯಾಪಾರದಲ್ಲಿ ಚಾಣಕ್ಯನನ್ನೇ ಮೀರಿಸುವ ನಿಪುಣರು ಈ ಕೊಂಕಣಿಗರು. ಹೋದ ಕಡೆಯಲ್ಲೆಲ್ಲಾ ಬೆರೆತು ಹೋಗುವ ಗುಣವುಳ್ಳವರು. ಇವರು ತುಳುವರ ಜತೆ ತುಳು, ಬ್ಯಾರಿಗಳ ಜತೆ ಬ್ಯಾರಿ, ಮಲೆಯಾಳಿಗಳ ಜತೆ ಮಲೆಯಾಳಿ, ಕ್ರಿಶ್ಚಿಯನರ ಜತೆ ಕ್ರಿಶ್ಚಿಯನ್ ಕೊಂಕಣಿ..ಹೀಗೆ ಎಲ್ಲಾ ಭಾಷೆ ಬಲ್ಲ ಜಾಣರು. ಜನರ ನಾಡಿ ಮಿಡಿತವನ್ನು ಬಲು ಬೇಗ ಕಂಡು ಹಿಡಿಯಬಲ್ಲರು. ಮಂಜುರಾನ್ ಎಂಬುದು ಬಹುಶಃ ಮಂಗಳೂರಿನ ಮೂಲ ಹೆಸರು. ತುಳುವರಿಂದ ಕುಡ್ಲ ಎಂದು ಇಂದಿಗೂ ಕರೆಯಲ್ಪಡುವ ಮಂಗಳೂರು ಕೊಂಕಣಿಗರಿಂದ ಕೊಡಿಯಾಲ್ ಎಂದು ಗುರುತಿಸಲ್ಪಟ್ಟಿದೆ. 
       
             ಸುಮಾರು ನಾಲ್ಕು ಶತಮಾನಗಳ ಇತಿಹಾಸವಿರುವ ಈ ವೀರವೆಂಕಟರಮಣನ ದೇವಳವು ಕಾಶೀ ಮಠಾಧೀಶರಿಂದ  ನಗರ ಮಧ್ಯ ಭಾಗದ ರಥ ಬೀದಿಯಲ್ಲಿ ಸ್ಥಾಪಿಸಲ್ಪಟ್ಟಿತು. ಕಳೆದ ವರುಷ ಜೀರ್ಣೋದ್ಧಾರಗೊಂಡು ನವೀಕೃತಗೊಂಡ ದೇವಳವು  ಕಲಾವೈಭದಿಂದ ನಮ್ಮ ಇತಿಹಾಸದ ರಾಜರುಗಳ ಶಿಲ್ಪ ಕಲೆಯ ವೈಭವವನ್ನು ಮರುಕಳಿಸುವಂತೆ ಮಾಡಿದೆ.  ಇಲ್ಲೊಂದು ಮಾತನ್ನು ನಾನು ಹೇಳಲೇ ಬೇಕು... ಹಾಗೆ ನೋಡಿದರೆ ಈ ಜೀರ್ಣೋದ್ಧಾರ, ಬ್ರಹ್ಮಕಲಶ ಮೊದಲಾದವುಗಳ ಕಟ್ಟ ವಿರೋಧಿ ನಾನು. ಬಂಗಾರದ, ವಜ್ರದ ಕೀರೀಟ, ಪಲ್ಲಕ್ಕಿ ಇದೆಲ್ಲಾ ಜಗತ್ತಿನ ಒಡೆಯನಿಗೆ ಅಗತ್ಯವಿದೆಯೇ? ಆ ಹಣವನ್ನು ಅಗತ್ಯವುಳ್ಳವರ ಮೇಲೆ ವಿನಿಯೋಗಿಸಬಹುದಲ್ಲವೇ!  ಹೌದು, ಆದರೆ ಈ ದೇವಳಗಳು ಜನರಿಗೆ ಒಂದು ಪವಿತ್ರ ಸ್ಥಾನ! ಜತೆಗೆ ಅವರ ಕಷ್ಟ ಸುಖವನ್ನು ವಿನಿಮಯಮಾಡಿಕೊಳ್ಳುವ ಜಗವೂ ಹೌದು. ಹಲವು ಜನರು ತಮ್ಮ ಹೃದಯ ಮಂದಿರದಲ್ಲಿ ನೆಲೆಸಿರುವ ಅವನನ್ನು ಕಂಡುಕೊಂಡಿಲ್ಲ. ಅಂತವರಿಗೆ ಇವು ಶಾಂತಿ ಪಡೆಯುವ ಸ್ಥಾನವು. ಜನರ ಈ ಭಾವನೆಗಳನ್ನು ಕಾಯ್ದುಕೊಂಡು ಬರುವಂತಹ ಮಹತ್ತರ ಜವಾಬ್ದಾರಿ ದೇವಳದ ಪೂಜಾರಿಯವರದು. ಎಲ್ಲಿ ಜಾತಿ ಬೇಧವಿಲ್ಲದೆ, ಸಮ ಭಾವದಿಂದ ಪೂಜೆಗೊಳ್ಳುವನೋ ಅದನ್ನು ಖಂಡಿತ ಆ ಜಗದೋದ್ಧಾರನು ತನ್ನ ವೈಕುಂಠವನ್ನಾಗಿ ಪರಿವರ್ತಿಸುತ್ತಾನೆ. ಅಂತೆಯೇ ಈ ವೆಂಕರಮಣ ದೇವಳದ ಕಾರ್ಯಗಳನ್ನೆಲ್ಲಾ ನಾನು ಗಮನಿಸುತ್ತಲೇ ಬಂದಿದ್ದೇನೆ. ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಸ್ಕಾಲರ್ ಶಿಪ್, ವೈದ್ಯಕೀಯ ಸೌಲಭ್ಯ ಮೊದಲಾದವುಗಳನ್ನು ನೀಡುತ್ತಲೇ ಬಂದಿದೆ. ಅಲ್ಲದೆ ದೇವಾಲಯದ ಜೀರ್ಣೋದ್ಧಾರ ಮಾಡುವ ಸಮಯವೂ ಬಂದಿತ್ತು. ಭಕ್ತಗಣವೂ ತಮ್ಮ ತನುಮನಧನಗಳನ್ನು ಯಾವುದೇ ಒತ್ತಾಯವಿಲ್ಲದೆ ಅರ್ಪಿಸಲು ಮುಂದೆ ಬಂದಿತ್ತು. ದೇಶ ವಿದೇಶದಲ್ಲಿ ನೆಲೆಸಿದ್ದ ಕೊಂಕಣಿಗರು ಮುಂದೆ ಬಂದು ಒಂದೇ ವರುಷದಲ್ಲಿ ಈ ಕೈಂಕರ್ಯವನ್ನು ಪೂರ್ತಿಗೊಳಿಸಿದರು. ಕರ ಸೇವೆಯ ಮೂಲಕ ಹೆಂಗಸರು, ಗಂಡರು, ಅಬಾಲವೃದ್ಧಾರಾಗಿ ಎಲ್ಲರೂ ಗೋವಿಂದನ ನಿಲಯವನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಸಮಯ ಅನುಕೂಲಕ್ಕನುಸಾರವಾಗಿ ದುಡಿದರು.. ಸಂಜೆ ಆಫೀಸಿನಿಂದ ಬಂದವರು ನಡೆಯುವುದು ಕಾರ್ ಸ್ಟ್ರೀಟ್ ನತ್ತ.. ಮಣ್ಣು, ಕಲ್ಲು ಹೊರುವುದು, ಮರದ ಹಲಗೆಯನ್ನು ಕೆಳಗಿಳಿಸುವುದು, ಹೀಗೆ ಕಾರ್ಮಿಕರ ಜತೆ ಕೈಗೂಡಿಸಿದರು. ಅಂತೂ ಹೋದ ವರುಷ ತೇರಿನ ಮೊದಲೇ ದೇವಳವು ಭೂವೈಕುಂಠವಾಗಿ ಪರಿವರ್ತಿತಗೊಂಡಿತು.
        
             ಈ ನಲ್ವತ್ತನಾಲ್ಕು ವರುಷವೂ ನಾನು ತಪ್ಪದೆ ಪಾಲ್ಗೊಂಡ ಉತ್ಸವವೆಂದರೆ ಅದು ಕೇವಲ ಬ್ರಹ್ಮರಥೋತ್ಸವ! ವೆಂಕರಮಣನ ಐದು ದಿನದ ವಿವಾಹ ಮಹೋತ್ಸಕ್ಕೆ ಪಾಲ್ಗೊಳ್ಳಲು ದೇವತೆಗಳಿಗೆ ನಿಮಂತ್ರಣ ಕಳುಹಿಸಲು ಧ್ವಜವೇರಿಸುವುದು ಏರಿಸುವುದು.. ಅಂದರೆ ಕೋಡಿ ಏರಿಸುವುದರ ಮೂಲಕ ಮೊದಲನೆಯ ದಿನದ ಉತ್ಸವ ಪ್ರಾರಂಭಗೊಳ್ಳುವುದು. ನಿತ್ಯವೂ ಯಜ್ಞ, ಹೋಮ ಹವನ, ಹಗಲೋತ್ಸವ, ಗೋಪುರೋತ್ಸವ, ಪಲ್ಲಕ್ಕಿ ಉತ್ಸವ..ಹೀಗೆ ಅನೇಕ ಉತ್ಸವಗಳು ಒಂದರ ಹಿಂದೆ ಜರಗುತ್ತಲೇ ಇರುವುವು. ಬೆಳಿಗ್ಗೆ ೯ಗಂಟೆಗೆ ಪೆಜ್ಜೆ ಜವಣ ಅಂದರೆ ಗಂಜಿಯೂಟ ಇರುವುದು. ಬಗೆ ಬಗೆಯ ಪಕ್ವಾನಗಳನ್ನುಂಡ ಜನರು ತೃಪ್ತರಾಗಿ ಆಫೀಸುಗಳಿಗೆ ನಡೆಯುವರು. ಮತ್ತೆ ಸಂಜೆ ೫ಗಂಟೆಯಿಂದ ೯ ಗಂಟೆಯವಗೆ ಭೂರಿ ಭೋಜನ..ಹೆಚ್ಚು ಕಡಿಮೆ ೨೫,೦೦೦ದಷ್ಟು ಜನರು ಉಣ್ಣುವರು. ಕೇಸರಿ ಬಣ್ಣದ ಧೋತಿಯನ್ನುಟ್ಟ ಸ್ವಯಂಸೇವಕರು ಶಿಸ್ತಿನಿಂದ ಬಡಿಸುವುದರಿಂದ ಹಿಡಿದು ಉಂಡ ಎಲೆಗಳನ್ನು ತೆಗೆದು ಮತ್ತೊಂದು ಪಂಕ್ತಿಗಾಗಿ ಶುದ್ಧ ಪಡಿಸುವ ಕೆಲಸವನ್ನು ನೋಡುವುದೇ ಚಂದ! ಮನೆಯಲ್ಲಿ ಉಂಡ ತಟ್ಟೆಯನ್ನು ಮೋರಿಗೆ ಹಾಕಲೂ ಹಿಂಜರಿಯುವ ಕೊಂಕ್ಣಿ ಗಂಡಸರು ಇಲ್ಲಿ ಮೈಬಗ್ಗಿಸಿ ಕೆಲಸ ಮಾಡುವುದನ್ನು ನೋಡಿ ನಾವೆಲ್ಲಾ ಮೂಗಿನ ಮೇಲೆ ಬೆರಳಿಡುತ್ತೇವೆಯಂದರೆ ಇದು ಉತ್ಪ್ರೇಕ್ಷೆಯಲ್ಲ.
   
            ಸಪ್ತಮಿಯಂದು ಮುಸ್ಸಂಜೆ ಸೂರ್ಯನೂ ಚಂದ್ರನೂ ಬಾನಿನಲ್ಲಿ ನಮ್ಮ ವೀರವೆಂಕಟೇಶನು ತನ್ನ ಸತಿಯರ ಜತೆಗೂಡಿ ತೇರನೇರುವ ದೃಶ್ಯವನ್ನು ನೋಡಿ ಧನ್ಯನಾಗುತ್ತಾರೆ. ಇಡೀ ರಥ ಬೀದಿಯು ಜನರಿಂದ ಆವೃತವಾಗುತ್ತದೆ. ಅಲ್ಲಿ ಕೇವಲ ಗೋವಿಂದ ನಾಮ ಸ್ಮರಣೆ ಮಾತ್ರ ಗಾಳಿಯಲ್ಲಿ ಮಾರ್ದನಿಗೊಳ್ಳುತ್ತದೆ. ಸಾಲಂಕೃತವಾದ ಪಲ್ಲಕ್ಕಿಯಲ್ಲಿ ವೈಕುಂಠದೊಡೆಯನು ತನ್ನ ಪತ್ನಿಯರ ಸಮೇತವಾಗಿ ಭಕ್ತಗಣಗಳಿಂದ ತೂಗಿಸಿಕೊಳ್ಳುತ್ತಾ ರಥಕ್ಕೆ ಐದು ಸುತ್ತನ್ನು ತೆಗೆದು ರಥವನ್ನೇರುತ್ತಾನೆ. ಇಲ್ಲಿ ಮತ್ತೊಂದು ವಿಶೇಷವೇನೆಂದರೆ ಎರಡು ಮೂರ್ತಿಗಳು ಕೇವಲ ಈ ಸಮಯದಲ್ಲಿ ದೇವಳದಿಂದ ಹೊರಬರುತ್ತವೆ. ಮತ್ತೆ ಹಿಂದಿರುಗುವುದು ಮರುದಿನ ಓಕುಳಿಯಾಟದ ನಂತರವೇ! ಹೀಗೆ ಈ ೬ ದಿನಗಳು ಅವರವರ ಮನೋಗುಣಕ್ಕನುಸಾರವಾಗಿ ಆನಂದ ಕೊಡುತ್ತದೆ.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...