ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

13 December, 2013

ಉತ್ತರ ಸರಿಯೋ ತಪ್ಪೋ.. ಹೇಳು ನೀ ಮುಸ್ಸಂಜೆ!


ಕೂಡಿಸಿ, ಗುಣಿಸಿ, ಭಾಗಸಿ, ಕಳೆದು.. ಕೊನೆಗೂ ಈ ಪುಸ್ತಕದ ಲೆಕ್ಕಕ್ಕೇನೋ ಉತ್ತರ ಸಿಕ್ಕಿತು
ಮನದ ಮೂಲೆ ಮೂಲೆಯಲ್ಲೂ ಹೀಗೇ ಕೂಡಿಸಿ, ಕಳೆದು, ಭಾಗಿಸಿ, ಗುಣಿಸಿದ ಲೆಕ್ಕಗಳು ಚೆಲ್ಲಾಪಿಲ್ಲಿ..
ಎಲ್ಲವನ್ನೂ ಪೇರಿಸಿ ಹೆಣಗಾಡಿ..
ಉತ್ತರವೇನೋ ಸಿಕ್ಕಿತು
ಸರಿ ತಪ್ಪು ಹೇಳಬೇಕಾದವಳು ನೀ ಮಾತ್ರ ಮೌನಿ
ನಾಳೆ ಮತ್ತೆ ಬರುವಿಯಲ್ಲ..

ಉತ್ತರ ಹೇಳದೇ ಮರಳಲು ಬಿಡುವುದಿಲ್ಲ ಮುಸ್ಸಂಜೆ ನಿನ್ನ!

ಮುತ್ತಿಗೆ ಸಾಕ್ಷಿ- ಮುಸ್ಸಂಜೆ!

ಬಾನಲಿ ಹರಡಿತ್ತು
ಬಣ್ಣ

ಬಾಗಿಲು ತಟ್ಟಿದನು
ಮೆಲ್ಲ

ಯಾಕೆ ಕೆಂಪಾಯಿತು
ಗಲ್ಲ

ಹೇಳು ಯಾರದು
ಕಳ್ಳ

ಅವನ ಹೆಸರು
ಮಳ್ಳ

ಕೊಟ್ಟನೆ ಅವನು
ಮುತ್ತ

ಅದ್ಯಾಕೆ ಅಷ್ಟು
ಲಜ್ಜೆ!



11 December, 2013

ಅಪರಾಹ್ನದ ಕನಸು..

ನೀ ಎಲ್ಲೊಯ್ಯುತ್ತಿರುವಿ ಹೀಗೆ ಕಣ್ಕಟ್ಟಿ ಒಲವೇ.. ಉತ್ತರವಿಲ್ಲ
ಸ್ಪರ್ಶದ ಅರಿವಾಗುತಿದೆ.. ಬರೇ ಗಾಳಿ ಸೋಂಕಿದಂತೆ
ಬೆರಳುಗಳಿಗೆ ಬೆರಳುಗಳು ಬೆಸೆದಿವೆ.. ಆದರೂ ಸ್ವತಂತ್ರವಾಗಿವೆ
ತಣ್ಣನೆಯ ಹುಲ್ಲು ಸ್ಪರ್ಶ ನಗ್ನ ಪಾದಗಳಿಗೆ.. ಹಿತವಾಗಿದೆ
ನೀರು ಧೋ ಧುಮುಕುವ ಶಬ್ದ ಕಿವಿಗಳಿಗೆ ಸಂಗೀತ.. ಸುಖವಾಗಿದೆ
ಜುಳು ಜುಳು ನಾದ ಲಹರಿ.. ಇಂಪಾಗಿದೆ
ಕೈ ಚಾಚಿ ಸ್ಪರ್ಶ ಸುಖಕಾಗಿ ಒದ್ದಾಟ.. ಕಷ್ಟವಾಗಿದೆ..
ಮರಳುತಿರುವ ದಿನಕರ ಹದವಾದ ಬೆಳಕು ಮೈಗೆ.. ಹಿತಾನುಭವವಾಗಿದೆ
ಮರಿಗಳಿಗೆ ಉಣಿಸುತಿರುವ ಟುವ್ವಿ ಟುವ್ವಿ ರಾಗ ಭಾವ.. ವಾತ್ಸಲ್ಯ ಉಕ್ಕುತಿದೆ
ಕಟ್ಟಿದ ಗಂಟು ಕಳಚಿತು.. ಮುಟ್ಟದೇ
ಚುಚ್ಚಿತು ಕೆಂಬಣ್ಣದ ಕಿರಣ.. ನೋಯಿಸದೇ
ಕಲ್ಲು ಬಂಡೆಗಳ ಪಾಚಿ ಕರೆಯಿತು.. ಕೈಚಾಚದೇ
ಜಾರಿ ಬಿಡುವ ತವಕ.. ಕಾಲಿಡದೇ
ಸ್ಪಟಿಕದಂತಿರುವ ನೀರಿನಲಿ ಆಡಲು.. ಮೀನಾಗದೇ
ಅರೇ, ಎಲ್ಲಿ ಒಲವು!
ಯಾರೂ ಇಲ್ಲ.. ಒಂಟಿ ನಾನೀಗ ಅಲ್ಲಿ!
ಕತ್ತಲಾಗುವುದು ಕ್ಷಣಗಳಲಿ..
ಕ್ರೂರಪ್ರಾಣಿಗಳು ಇರುವವಲ್ಲಿ..
ಇದ್ದಬದ್ದ ಬೆಳಕನು ಮುಚ್ಚುವಂತೆ ಹಬ್ಬಿತು ಧೂಳಿ
ಸಲಗ ಪರಿವಾರ ಧಾವಿಸುತಿದೆ ನನ್ನತ್ತಲೇ
ಓಹೋ, ಕೊನೆಯೀಗ..
ಕಣ್ಣವೆಗಳು ಮುಚ್ಚಿದವು.. ಕೈಗಳು ಜೋಡಿಸಿದವು
ಬಾಯಿ ಏನೋ ಗುಣುಗುಣಿಸಿತೋ..
ಎಲ್ಲವೂ ಶಾಂತ ಮರುಕ್ಷಣದಲಿ
ಇದು ನಾಕವಿರಬೇಕು ಎಂದರೆ
ಮರಿ ಕರಿ.. ಸೊಂಡಿಲ ಮುಖ ಸವರುವ ಪರಿ..
ನಕ್ಕು ಮುದ್ದುಗೈದೆ..
ಸುಖದ ಅನುಭೂತಿ ಉಣಲೆಂದು ಕಣ್ಮುಚ್ಚಿದರೆ
“ಚಾ ಮಾಡಿಕೊಡು”
ಮಗಳ ನುಡಿ ಕಣ್ದೆರೆಸಬೇಕೆ!!!
(ಅಪರಾಹ್ನದ ಸುಖ ನಿದ್ದೆಯಲಿ ಕಂಡ ಸ್ವಪ್ನ)


ಒಲವು- ಓಶೋ ಹೇಳಿದರು, ನಾ ಬರೆದೆ ನನಗರ್ಥವಾದಂತೆ!

ಕಲ್ಲುಗಳಲ್ಲ ಭಾವಗಳು..  ಗುಲಾಬಿಯ ಪಕಳೆಗಳಂತೆ!
-------------------------------------------

ಒಲವು ಮೂರು ಪದರಗಳಲ್ಲೂ ಹರಡಬಹುದು- ಬಾಹ್ಯದೇಹ, ಅಂತರಂಗ ಅಥವಾ ಮನಸ್ಸು, ಒಳಾತ್ಮ(ತನ್ನಿರುವಿಕೆ)!

ಬಾಹ್ಯ ದೇಹಕ್ಕೆ ಒಲವು ಬರೇ ಕಾಮ.. ಇದನ್ನೇ ಒಲವೆಂದು  99% ಲೌಕಿಕವಾಗಿ ತಿಳಿಯಲಾಗಿದೆ!

ಬರೇ 1% ಇನ್ನೂ ಒಳಗೆ ತೆವಳಿ ನಡೆಯುತ್ತಾರೆ.  ಕಲಾವಿದರು, ಕವಿಗಳು, ಗಾಯಕರು, ನೃತ್ಯ ಪರಾಂಗತರು.. ಬಾಹ್ಯ ಇಂದ್ರಿಯಗಳನ್ನು ಮೀರಿ ಒಳ ಅಂತರಂಗದ ಮೂಲಕ ಒಲವಿನ ಇರುವಿಕೆಯ ಅನುಭೂತಿಯನ್ನು ಭೋಗಿಸುವರು. ಇವರೆಲ್ಲ ಚಿಂತಕರಲ್ಲ.. ಅನುಭಾವಿಗಳು. ಇವರ ಚಿಂತನೆಯ ಸ್ತರ ಮೇಲ್ಮಟ್ಟದ್ದು.. ಮಿದುಳಿಗಿಂತ ಹೃದಯ, ಮನಸು ಸ್ಪಂದಿಸುತ್ತದೆ.. ಅಲ್ಲದೆ ಒಲವಿನ ತರಂಗಗಳನ್ನು ಸ್ವೀಕರಿಸಲೂ ಕಳುಹಿಸಲೂ ಶಕ್ತ! ಬಹಳ ಗಹನವಾಗಿ ಒಳಗಿಳಿದವರಿಗೆ ಮಾತ್ರ ಶಕ್ಯವದು!

ಇಂತಹ ಪದರದೊಳಗೆ ಇಳಿಯುವಿಕೆ ಅನೇಕರಿಗ್ಯಾಕೆ ಸಾಧ್ಯವಿಲ್ಲ?

 ಒಲವು ಅತ್ಯಂತ ಚೆಲುವ/ಚೆಲುವೆ! ಹ್ಮೂಂ, ಸೌಂದರ್ಯವಿದ್ದಲ್ಲಿ ನಾಜೂಕುತನವಿದ್ದೇ ಇರುತ್ತದೆ.  ಅದು ಲೋಹವಲ್ಲವಲ್ಲ.. ನಾಜೂಕು ಗಾಜು. ಒಡೆದರೆ ಚೂರು ಚೂರು, ಮತ್ತೆ ಜೋಡಿಸಿದರೂ ಗಾಯಗಳು ಹಾಗೇ ಕಾಣುತ್ತವೆ.. 

ಒಲವು ದಾಸ್ಯತನವನ್ನು ಬೇಡುತ್ತದೆ, ಪೂರ್ಣ ಅರ್ಪಣೆ ಅಗತ್ಯ, ಅಹಂಮಿಕೆಯ ಲವಲೇಶವೂ ಇರಬಾರದು, ಐಕ್ಯವಾಗಬೇಕು!

ಈ ಹೆದರಿಕೆಯೇ ನಮ್ಮನ್ನೆಲ್ಲಾ ಕಾಡುತ್ತದೆ.. ಅಂತರಂಗದಲಿ ಒಲವಿನ ಹರಿವು ಹರಿಯದಂತೆ ಇಂದ್ರಿಯಗಳು ಅಣೆಕಟ್ಟು ಕಟ್ಟಿಬಿಡುತ್ತೇವೆ!  ಎಲ್ಲಿ ತನ್ನತನ ಕಳೆದುಕೊಳ್ಳುವೆವೆಯೋ ಎಂಬ ಭಯ ಕಾಡುತ್ತದೆ.. ಅಹಂಮಿಕೆಯು ಅಡ್ಡಬರುತ್ತದೆ!

ಒಳಪದರವನ್ನು ಒಲವು ಆವರಿಸಿದಂತೆಲ್ಲಾ ನವಿರುಗಂಪನ.. ಅಲೌಕಿಕ ಸೌಂದರ್ಯದ ಜತೆ ಬದಲಾವಣೆಗಳ ಭಯ.. ಅದು ಲೋಹವಲ್ಲವಲ್ಲ.. ಗುಲಾಬಿಯ ನಾಜೂಕು ಪಕಳೆ! ಒಂದಿಷ್ಟು ಜೋರಾಗಿ ಒತ್ತಿದರೂ ಛಿದ್ರ!

ಕವಿಗಳು, ಕಲಾವಿದರು ಒಲವಿಗೆ ಸೋಲುತ್ತಾರೆ.. ಹೆಚ್ಚು ಕಡಿಮೆ ಪ್ರತೀದಿನ ಪ್ರೀತಿಸುತ್ತಾರೆ. ಅವರ ಒಲವು ಅವತ್ತಿಗೆ ಅರಳಿದ ಗುಲಾಬಿಯಂತೆ.. ಭಾನುವಿನ ಕಿರಣ ಪ್ರಕರವಾದಂತೆ ಮೆಲ್ಲಮೆಲ್ಲನೆ ಇಬ್ಬನಿಯ ಹನಿಯನ್ನತ್ತ ಒಗೆದು, ಒಂದೊಂದೆ ಪಕಳೆಯನ್ನು ಅರಳಿಸಿ, ತನ್ನ ಮಕರಂದದ ಹೊದಿಕೆಯನ್ನು ಎಳೆವ ದುಂಬಿಗಳತ್ತ ಸ್ವಾಗತದ ಮುಗುಳ್ನಗೆ ಚೆಲ್ಲಿ, ತನ್ನ ಸೊಗಸಿನಿಂದ ವೀಕ್ಷಕರ ತನು ಮನಗಳಿಗೆ ಧನ್ಯತೆ ಉಣಿಸಿ, ಭಾನುವಿನ ನಿಷ್ಕ್ರಮಣವಾದಂತೆ ಕೊನೆಯುಸಿರು ಎಳೆವ ಹೂವಿನಂತೆ ಇವರ ಒಲವು. 

ಒಲವು ಕ್ಷಣಿಕವಾಗಿ ಅನುಭೂತಿ ಉಣಿಸಿ ಮಾಯವಾಗುತ್ತದೆ, ಮತ್ತೆ ಮತ್ತೊಂದು ರೂಪದಲಿ ಸೆಳೆಯುತ್ತದೆ.. 

 ರೋಮಗಳನು ಎಬ್ಬಿಸಿ ನವಿರೇಳಿಸುವ, ಕಂಪಿನ ತಂಗಾಳಿ ಇದ್ದಕ್ಕಿದ್ದಂತೆ ನಾವಿದ್ದಲ್ಲಿಗೆ ಬಂದು ಮೈಮನದೊಳಗೆಲ್ಲ ಪಸರಿಸಿ.. ತಟ್ಟನೆ ಮಾಯವಾದರೆ ಹೇಗೆ! ಆ ಕ್ಷಣದ ಅನುಭವ ಮಾತ್ರ ನಮ್ಮೊಳಗೆ ಬುತ್ತಿಯಂತೆ ಉಳಿಯುತ್ತದೆ..

ಪ್ರತೀ ಬದಲಾಗುವ ಘಳಿಗೆ, ಬದಲಾಗುವ ಬದುಕು.. ಸ್ವೀಕರಿಸಲು ಸಾಧ್ಯವಾಗುವುದೇ.. ಒಲವು ಕ್ಷಣಿಕ.. ಹಾಗೆಯೇ ಶಾಶ್ವತವೂ, ಅದರ ಅನುಭೂತಿ.. ಒಲವಿನ ಜತೆ ಬರುವ ಏರುಪೇರುಗಳನು ಸ್ವೀಕರಿಸುವ ಸಾಮರ್ಥ್ಯ ಯಾರಿಗಿದೆ!

ಹೀಗೆ ಬಂದು ಹಾಗೆ ಹೋಗುವ ಒಲವು.. ಹ್ಮೂಂ, ಮತ್ತೆ ಬರುವುದು ಹೊಸ ರೂಪದಿ..


 ಮೂರನೆಯ ಅನುಭೂತಿ.. 

ಒಳಾತ್ಮದಲಿ ಒಲವಿನ ಬೇರು ಎಲ್ಲೆಡೆ ಹಬ್ಬುತ್ತದೆ, ಹಗಲು ರಾತ್ರಿ, ಮಳೆಗಾಲ, ಚಳಿಗಾಲ, ಬೇಸಗೆ.. ಹ್ಮೂಂ, ಕಾಲಗಳ ಮಿತಿಯನ್ನು ಮೀರಿ ಆತ್ಮವನ್ನು ಆವರಿಸುತ್ತದೆ. ಅಲ್ಲಿ ಪೂರ್ಣ ಸಂಗಮ. ನಂತರವೇ ಆ ಜೀವ ಒಲವನ್ನು ಬಾಹ್ಯ ಒಳ ಎರಡೂ ಇಂದ್ರಿಯಗಳ ಮೂಲಕ ಅನುಭವಿಸುತ್ತದೆ! 

ನೋವಿನಲ್ಲೂ ನಲಿವು, ಆರೋಗ್ಯ ಭಾಗ್ಯ, ಹೊಸ ಚೈತನ್ಯ, ಮನವೆಲ್ಲ ಹತ್ತಿಯಷ್ಟು ಹಗುರ, ಹೊರಜಗತ್ತಿನ ಅಪವಾದ, ನೋವಿಗಳಿಗೆಲ್ಲ ಬರೇ ಮುಗುಳ್ನಗೆಯ ಪ್ರತಿಕ್ರಿಯೆ! ನಿಧಾನವಾಗಿ ಈ ಬದಲಾವಣೆಗಳು ಕಾಣಿಸುತ್ತವೆ!

ಜಗತ್ತಿನ ಆಗುಹೋಗುಗಳಲಿ ಬರೇ ದೇಹ ತನ್ನ ಪಾತ್ರ ಮಾಡುತ್ತದೆ, ಆತ್ಮ ತನ್ನ ಒಲವಿನ ಸಂಗದಲಿ ತನ್ಮಯವಾಗಿ ಅಲೌಕಿಕ ಆನಂದದಲಿ ತೇಲಾಡುತ್ತದೆ!

ಜಗತ್ತಿನ ಆಗುಹೋಗುಗಳ ನಿರ್ಣಾಯಕನ ಒಲುಮೆಯ ಧನ್ಯತೆ!

 ಎಲ್ಲಾ ದೈಹಿಕ ಭಾವಗಳನು ಮೀರಿ.. ಅಲೌಕಿಕ ಅನುಭೂತಿ, ಇಂತಹ ಭಾವವೇ ನಿಜವಾದ ಒಲುಮೆ!
-      -ಓಶೋ (ನನಗರ್ಥವಾದಂತೆ)



10 December, 2013

ನಲ್ಲಿರುಳಿಗೆ ಮುನ್ನುಡಿ.. ಮುಸ್ಸಂಜೆ ಬರೆವಳು!

ಕೈ ನೀಡು, ಮೇಲೆಳೆದು ಬಿಡು..
ವೇದಿಕೆ ಸಜ್ಜು ಮಾಡು..
ಪರದೆಯನೆತ್ತು.. ಬೆಳಕು ಚೆಲ್ಲು..
ಕುಣಿವಳು ಮಂಕುತನವನೆಲ್ಲ ಮರೆತು..
ಬಿಂಕತನವಿಲ್ಲ ಅವಳಿಗೆ ಒಂಚೂರು
ನಮ್ಮಲ್ಲಿ ತನುಮನವ ಬೆರೆಸಲು
ಮುನ್ನುಡಿ ಬರೆವಳು ಮಧುರ ನಲ್ಲಿರುಳಿಗೆ
ನಮ್ಮವಳವಳಲ್ಲವೇ ಅವಳೇ ಮುಸ್ಸಂಜೆ!!

-

ಮುಸ್ಸಂಜೆ ಗೆಜ್ಜೆ ಹೆಜ್ಜೆ..


ನುರಿತ ಚಿತ್ರಗಾರನಂತೆ ರಂಗುಗಳ ಹದವಾಗಿ ಬೆರೆಸಿ.. ಅಲ್ಲಲ್ಲಿ ಚೆಲ್ಲಿ, ಚೌಕಟ್ಟಿಲ್ಲದ ವಿಸ್ತಾರದ ಕ್ಯಾನ್ವಾಸಿನಲಿ ತನ್ನ ಸಹಿ ಮಾಡಿ ಅತ್ತ ನಡೆವ ಅವಸರ ಅವನಿಗೆ..

ಮಾಗಿಯ ಚಳಿಯಲಿ ತನ್ನ ಪೂರ್ಣ ಮೊಗ ತೋರಿ ನಲ್ಲ ನಲ್ಲೆಯರಿಗೆ ನಶೆಯೇರಿಸುವ ಹಂಬಲದಿ ಉದಯಿಸುವ ಅವಸರ ಇವನಿಗೆ..

ಮನದ ಅಂಗಣಕೆ ಬಡಿದು ನವಿರು ಕಂಪನ ಕೊಡುವ ಭಾವಲೆಗಳ ಹೊಡೆತದ ಕಾಟ ಕಳಚುವ ಅವಸರ ಇವಳಿಗೆ..

ಈ ವೇದಿಕೆಯಲಿ ಅವನಿವನು, ಅವಳಿವಳು ತನ್ನ ಬಣ್ಣಿಸುವ ಕಾವ್ಯವರ್ಷದಲಿ ಮುಳುಗೇಳಿ, ಗೆಜ್ಜೆ ಕಟ್ಟಿ “ತಕಿಟ ತಕಿಟ ಧಿಂ ಧಿಮಿತ ತಕಿಟ ತಾಂ” ಕುಣಿದು ದಣಿಯುವ ತವಕ ಅವಳಿಗೆ,

ಅದೇ ನಮ್ಮ ಮುದ್ದು ಮುಸ್ಸಂಜೆಗೆ!


09 December, 2013

ಶಾಯರಿ



|| ಹರಿಯಲಿ.. ನೋವು ಕಂಬನಿಯಾಗಿ ಕರಗಲಿ ||

|| ನುಡಿಯಲಿ.. ಮನದ ಮಾತು ಒಳಗೇ ಉಳಿಯದಿರಲಿ ||


Aansu jo beh rahey hein inhein behney do Yeh keh rahey hein dil ki baat, kehney do

ಶಾಯರಿ..

|| ನಗುವುದನು ಕಲಿ, ಉರಿಯುವ ಹಣತೆಯಿಂದ ||

|| ಮೇಲೇರುವುದನು ಕಲಿ, ಮುಳುಗುವ ಭಾಸ್ಕರನಿಂದ ||

|| ಸ್ವತಃ ಹಾದಿಯನು ನಿರ್ಮಿಸುವುದನು ಕಲಿ, ಮಾನವ

ಮತ್ಯಾರದೋ ಹಾದಿಯಲಿ ನಡೆದು ಶೃಂಗವನೇರಬೇಡ ||



Agar Sikhna Hai Diye Se,To Jalna Nahi Muskan Sikho, Agar Sikhna Hai Suraj Se,To Dubna Nahi Uthan Sikho, Agar Pahochna Ho Shikhar Par To Raah Par Chalna Nahi, Raah Ka Nirman karna Sikho

ಒಲವಿನ ಮರುಳೆ.. ಹೀಗನ್ನುವಳು!

-
ಅರಿವನು ಅರಿವ ಭರದಲಿ ಹಾದಿ ತಪ್ಪುವುದಯ್ಯಾ..
ಅಂತರಂಗದಲಿ ಅವನತ್ತ ಒಲವು ಇದ್ದರೆ
ಮತ್ಯಾವ  ಅರಿವಿನ ಅನುಭಾವವೂ ಕಾಡದಿರುವುದು
ಎಂದನ್ನುವಳಯ್ಯಾ ಅವನೊಲವಿನ ಮರುಳೆ!

--------------------------------------

ಅರಿವನು ಅರಿವ ಅವಸರದಲಿ ಅಲ್ಲಿಲ್ಲಿ ಅಲೆಯಬೇಡ
ಅಂತರಂಗದಲಿ ಅವನತ್ತ ಅನುರಾಗದ ಅನುಭಾವ
ಅನನ್ಯತೆಯ ಅನುಬಂಧದ ಅನುಭವ ಅರಿವಾದರೆ
ಅದೇ ಅರಿವು, ಅನ್ನುವಳಯ್ಯ ಅವನ ಅವಳು||


ಮತ್ತೆ ಬಂದಳವಳು.. ನಮ್ಮವಳು ಮುಸ್ಸಂಜೆ!
------------------------------------
ನಸುಗೆಂಪು, ಹಳದಿ, ಕೇಸರಿ, ನೇರಳೆ..
ರಂಗು ರಂಗಿನ ತೆಳ್ಳಗಿನ ಲೆಹಂಗ..
ಹಸುರು ಹೊನ್ನ ಕುಸುರಿ ಕುಪ್ಪಸ..
ತೂಗಾಡುತಿರುವ ಹರಳಿನ ಝುಮುಕಿ..
ತುಂಬಿದೆದೆಯ ಮೇಲೆ ಭಾರದ ಕೆಂಪು ಪದಕ..
ತೆಳು ಸೊಂಟಕೆ ಬಿಗಿದ ಮುತ್ತಿನ ಜಾಲರಿ..
ಘಮ ಘಮ ಮಂಗಳೂರು ಮಲ್ಲಿಗೆ ಸುತ್ತಿದ ನೀಲವೇಣಿ..
ಬೆಳ್ಳಿಗೆಜ್ಜೆಗಳ ಝಲ್ ಝಲ್ ನಾದ,..
ಬಂದಳು ಮತ್ತೆ ನಮ್ಮವಳು.. ಅವಳೇ,

ಮುಸ್ಸಂಜೆ ಮನದಂಗಳದಲಿ ಅರಳಿದಳು!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...