ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 July, 2013

ಮಾರ್ನಿಂಗ್ ರಾಗ!

 

ಮುಂಜಾವು: “ಏನೇ, ಇನ್ನೂ ಎದ್ದಿಲ್ಲ, ಅಲರಾಮ್ ಕೂಗಿ ಕೂಗಿ ಸೋತು ತೆಪ್ಪಗಾಗಿದೆ, ಅತ್ತ ಭಾನು ರಥವೇರಿ ಬಂದು ಅಡ್ಡವಿಕ್ಕಿದ ಮುಗಿಲ ಮರೆಯಲೇ ನಿಂತು ಬೆಳಕ ಚೆಲ್ಲಿದ್ದಾನೆ.. ಪಕ್ಷಿಗಳು ತಮ್ಮ ಮೋರ್ನಿಂಗ್ ರಾಗದ ಕಛೇರಿಗೆ ಶ್ರೋತೃರನ್ನು ಆಹ್ವಾನಿಸುತ್ತಿದ್ದಾರೆ... ಇವೆಲ್ಲವೂ ನಿನಗೂ ಪ್ರಿಯವಲ್ಲವೆ! ಆದರೂ ಈ ಆಲಸ್ಯವೇಕೆ ಮಗು?”

ನಲ್ವತ್ತಾರರ ಹೊಸ್ತಿಲಲ್ಲಿರುವ ನಾನು ’ಮಗು” ಶಬ್ದ ಕೇಳಿ ಆರ್ದ್ರಳಾದೆನಾದರೂ ಏಳಲಿಲ್ಲ.  ಮುಸುಕು ಸರಿಸಿ ಒಮ್ಮೆ ಮುಂಜಾನೆಯತ್ತ ಸೋತ ದೃಷ್ಟಿ ಹರಿಸಿ ಮತ್ತೆ ಮುಸುಕೆಳೆದೆ.

ಮುಂಜಾವು: “ನೆನಪಿಸಿಕೋ ನಿನ್ನ ಕರ್ತವ್ಯಗಳ.. ಮನೆಪಾಠಕೆ ಮಕ್ಕಳು ಇನ್ನೇನು ಸ್ವಲ್ಪ ಹೊತ್ತಲ್ಲೇ ಬರುವವರಿದ್ದಾರೆ, ಬೆಳಗ್ಗಿನ ಉಪಹಾರದ ತಯಾರಿ ಇನ್ನೂ ಆಗಿಲ್ಲ... ನಿನ್ನ ಕಾಲೇಜಿನ ಅಸೈನ್ ಮೆಂಟ್ ನಿನ್ನೆ ಅರ್ಧವಾಗಿದೆ.. ಅಡುಗೆ ಮಾಡಿ ಕಾಲೇಜಿಗೆ ಹೋಗಲು ಹೊತ್ತಾಗುತ್ತದೆ,,, ಏಳಮ್ಮಾ ಏಳು!”

ಮುಸುಕನ್ನು ಸರಿಸದೇ ನಾನು: “ ನನಗೆಲ್ಲ ನೆನಪಿದೆ.. ಹುಂ, ಕರ್ತವ್ಯಗಳ ಪಟ್ಟಿ ತೋರಬೇಡ.. ಅದೇ ಕೆಲಸಗಳು, ಬಿಡು, ದಮ್ಮಯ್ಯ ಹಾಕಿದರೂ ನಿಶೆ ನನ್ನ ಮೇಲೆ ದಯತೋರುವುದಿಲ್ಲ! ಅವಳು ಕಲ್ಲು ಹೃದಯದವಳು.. ರೆಪ್ಪೆಗಳು ಒಂದನ್ನೊಂದು ಅಪ್ಪಿದಾಗಲೇ ಬಂದು ನೀನು ಕಾಡ್ತಿಯಾ!”

ಹೀಗೆ ಇವಳನ್ನು ಎಬ್ಬಿಸಲಾಗದು ಎಂದರಿತ ಮುಂಜಾವು ತನ್ನ ಬಗಲಿನಲ್ಲಿ ನೇತಾಡುತ್ತಿದ್ದ ಜೋಳಿಗೆಗೆ ಕೈ ಹಾಕಿ, ನನ್ನ ಮುಸುಕೆಳೆದು,
ಮುಂಜಾವು: “ನೋಡಿಲ್ಲಿ!”

ಒಮ್ಮೆಲೇ ಕೋಣೆಯಲ್ಲಿ ಮಳೆಬಿಲ್ಲು ಮೂಡಿತು, ಸಣ್ಣದಾಗಿ ಹರಿಯುತ್ತಿದ್ದ ಜಲಪಾತ... ನೀರಿನಲ್ಲಿ ಕಾಲುಬಿಟ್ಟು ಅವನ ಕೈಯಲ್ಲಿ ಕೈ ಹೊಸೆದು ಮೀನುಗಳ ಜತೆ ಸರಸವಾಡುತ್ತಿದ್ದ ನನ್ನನ್ನೇ ಕಂಡೆ.

ನೋಡುತ್ತಿದ್ದಂತೆಯೇ ಆ ದೃಶ್ಯ ಕರಗಿ ಮತ್ತೊಂದು ನೋಟ ಅಲ್ಲಿ ಮೂಡಿತು... ಕುಂಚಗಳು, ಬಣ್ಣಗಳು, ಕ್ಯಾನ್ವಾಸುಗಳು ಕೋಣೆಯಲೆಲ್ಲಾ ಹರಡಿವೆ... ಅವುಗಳ ಮಧ್ಯೆ ನಾನು ತನ್ಮಯಳಾಗಿ ರಂಗು ತುಂಬಿಸುತ್ತಿದ್ದೇನೆ!

ಅರೇ, ಇದೂ ಕರಗಿ ಹೋಯ್ತು.. ಮತ್ತೊಂದು ದೃಶ್ಯ, ಕೆಮರಾ ಹಿಡಿದು ಕಾಡು ಮೇಡು ಅಲೆಯುತ್ತಿದ್ದೇನೆ..

ಕರಗಿ  ಮೂಡಿದೆ ಹೊಸ ನೋಟ.. ಬರೆಯುತ್ತಿದ್ದೇನೆ.. ಚಿತ್ರ ಬಿಡಿಸುತ್ತಿದ್ದೇನೆ... ಮಕ್ಕಳು ಸುತ್ತಲೂ ಕುಳಿತ್ತಿದ್ದಾರೆ... ನನ್ನ ಮಡಿಲಲ್ಲಿ ಒಂದು, ಬೆನ್ನ ಹಿಂದೆ ನಿಂತು ನನ್ನ ಕೊರಳನ್ನು ಬಿಗಿದಪ್ಪಿ ತೊದಲು ಮಾತಾಡುತ್ತ ಮತ್ತೊಂದು..

ಸೋತೆ ಮುಂಜಾವೇ ನಾನು ಸೋತೆ. ಇಗೋ, ಎದ್ದು ವಿಧಿಗೆ ಸವಾಲೊಡ್ಡಿ ನಾ ನಡೆವೆ, ನನ್ನ ಕನಸುಗಳ ನನಸಾಗಿಸುವೆ.. ಇರಲಿ ನಿನ್ನ ಒಲುಮೆ ಸದಾ ಎನಗೆ!



No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...