ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 May, 2013

ರೂಮಿ ಪಿಸುಗುಟ್ಟಿದ್ದು


ಒಲವೇ,
ಮರುಳಾದೆ ನಿನ್ನ ಮುದ್ದುಮಾತಿನ ಸೆಳೆತಕೆ
ಒಲಿದೆ ನಿನ್ನ ಜೇನಿನಂತ ಸವಿನುಡಿಗೆ
ಉರಿಯುತಿರುವೆ ನೀನೀಯುವ ನೋವಿಗೆ
ಸೋತೆ ಒಲವಿನ ಆಟದಲಿ
ಸೋತು ಗೆಲುವ ತವಕವೆನಗೆ
-ನನ್ನೊಳಗಿನ ರೂಮಿ

13 May, 2013

ಕೇವಲ ನಿನಗಾಗಿ ಹಾಡುವೆ ನಲ್ಲ!


ನನ್ನೊಲವೇ,

ನನ್ನೀ ಹಾಡುಗಳು ಕೇವಲ ನಿನಗಾಗಿ ನಲ್ಲ

ನೀ ಕೇಳದ ಮೆಚ್ಚದ ಹಾಡುಗಳ ಲೆಕ್ಕ ವ್ಯರ್ಥವಲ್ಲ

ಶಬ್ದಗಳ ಮೋಡಿ ಮಾಡಿ ನಿನ್ನ ಸೆಳೆಯುವ ತಂತ್ರ ತಿಳಿಯದಲ್ಲ

ಆದರೂ ನಿನ್ನ ಸೆಳೆಯಬಲ್ಲೆ ಕೇವಲ ನನ್ನೊಲವಿನ ಬಲದಿ ನಲ್ಲ!

ಭ್ರಮೆಯಲ್ಲವಲ್ಲ ನಮ್ಮೀ ಅನುರಾಗ!


ನನ್ನೊಲವೇ,

ನನ್ನೊಳಗಿನ ಬೇಗುದಿಯ ನೀನೇನು ಬಲ್ಲೆ

ನಿನ್ನ ಹಾಡು ಕೇಳದ ದಿನಗಳ ಲೆಕ್ಕ ಕೊಡಲೇ ನಿನಗೆ

ಮತ್ತಾ ದಿನಗಳ ಕಳೆದ ಪರಿಯ ಅರಿವೂ ನಿನಗಿಲ್ಲ ತಾನೆ

ಸಮಾನಾಂತರ ರೇಖೆಗಳು ನಾವೆಂಬ

ಈ ವಾಸ್ತವದ ಅರಿವಿದೆ ಎನಗೆ

ನನಗೆ ನಿನ್ನಲ್ಲಿ ನಿನಗೆ ನನ್ನಲ್ಲಿ ಹುಟ್ಟಿರುವ

ಈ ಅನುರಾಗವೂ ಭ್ರಮೆಯೆ ಹೇಳೆನಗೆ!

10 May, 2013

ನಮ್ಮಿಬ್ಬರ ಹಂಬಲ!


ಮುಗಿಲೇ,
ನಮ್ಮೂರಲ್ಲಿ ಜಲ ಬತ್ತಿ
ನೆಲ ಬಿರಿದು
ಇಳೆ ನಿನ್ನೊಲವಿಗಾಗಿ
ಪರಿತಪಿಸುತಿಹಳು
ನನ್ನೊಲವೇ,
ನನ್ನ ಬರಡಾದ ಹೃದಯವೂ
ರಸ ಸಮಯಕಾಗಿ
ಪರಿತಪಿಸುವುದು
ನಮ್ಮಿಬ್ಬರ ಹಂಬಲ
ಎಂದು ಫಲ
ನೀಡುವುದೋ?

ಬದಲಾಗದ ಅಲೌಕಿಕ ಒಲವೆಮ್ಮದು!


ಬದಲಾಗುವವು ಋತುಗಳು

ತಿರುಗುತ್ತಲೇ ಇರುವುದು       

ಕಾಲಚಕ್ರವೂ

ಮುಖ ಭಾವಗಳೂ

ಕಳಕೊಳ್ಳುವವು ಹರೆಯವನು

ಕುಗ್ಗುವುದು ತ್ರಾಣ

ಮಾಗುವುದೇ ಮನಸು

ನವಮಾಸ ಹೊತ್ತು

ಹಡೆದ ಕರುಳಬಳ್ಳಿಗಳು 

ತೆರಳುವವು

ಹೊಸ ಗೂಡಿಗೆ

ಆದರೂ, ಬದಲಾಗದೆಂದೂ 

ಆತ್ಮವೆರಡನು ಬೆಸೆದ

ಆ ಒಲವು

ಮೆಟ್ಟಿ ನಿಲುವುದು

ಕಾಲನ  ಪರೀಕ್ಷೆಯನು

ಬಲವಿದೆ  ಒಲವಿನಲಿ

ಬೇಡಿಕೊಳ್ಳುವೆ ನನ್ನೊಡೆಯನಲಿ

ಉಸಿರಿರುವ ತನಕ

ದೂರವಾಗದಿರಲೆಮ್ಮ ಒಲವು

ಲೌಕಿಕ ಬಂಧವಿಲ್ಲದ

ಅಲೌಕಿಕ ಒಲವೆಮ್ಮದು!

04 May, 2013

ರಾಧಾ ಮಾಧವ!


ರಾಧಾ ಮಾಧವ! (ಸುನಿತಾ ಮಂಜುನಾಥ್ ಅವರ ಸ್ಟೇಟಸ್ ನಿಂದ ಪ್ರೇರಿತ ಬರಹ)


ಮಾಧವ... “

ರಾಧೆಯ ಕರೆ!

ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ.

“ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?”

“ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದೆ!”

’ಆಹಾ! ರತ್ನಳ ನಡಿಗೆಯನ್ನು ನೋಡು! ಏನು ಲಾಸ್ಯ! ಏನು ಲಾವಣ್ಯ!”

“ರಾಧಾ, ಅವಳ ಹೆಸರೇನೆ? ಅದೇ ಆ ನಾಗವೇಣಿಯ ಬಲಬದಿಯಲ್ಲಿ ನೀಲಿ ದಾವಣಿ ಉಟ್ಟವಳು! ನನಗವಳು ನಾಳೆ ಔತಣ ಕೂಟಕ್ಕೆ ಆಹ್ವಾನಿಸಿದ್ದಾಳೆ!”

ಕೈಯಲ್ಲಿದ್ದ ಕೊಳಲನ್ನು ನೆಲಕ್ಕೆ ಬಡಿದು ಅಲ್ಲಿಂದ ಹೊರಡನುವಾದಳು ರಾಧೆ!

“ಅರೇ, ನಿನಗೇಕೆ ಮುನಿಸೇ? ಅವರೆಲ್ಲ ನಿನ್ನ ಸಖಿಯರೇ ಕಣೇ!”

“ಹೌದೋ ಮಾಧವ! ಅವರೆಲ್ಲ ನನ್ನ ಪ್ರೀತಿಯ ಗೆಳತಿಯರು! ನೀನು ನನ್ನ ಜೀವದ ಗೆಳೆಯ! ನನ್ನ ನಲ್ಲ! ನನ್ನ ಸರ್ವಸ್ವ!”

“ಮತ್ತೇಕೆ ಈ ತಾಪ ರಾಧೆ?”

ಮುಗುಳ್ನಕ್ಕಳು ರಾಧೆ... “ಹೌದೋ ಮಾಧವ, ನೀನಾಡೋ ಆಟವನೆಲ್ಲ ನಾನಲ್ಲದೆ 
ಮತ್ತಾರು ಬಲ್ಲರೋ! ನಮ್ಮಿಬ್ಬರ ಒಲವಿನ ಕತೆ ಯುಗ ಯುಗದಲ್ಲೂ ಮಾದರಿ ಕಣೋ. ಎಲ್ಲ ಅರಿತರೂ ನಿನ್ನೀ ಒಲವಿಗಾಗಿ ನಾನು ಸಾಮಾನ್ಯ ಹೆಣ್ಣಿನಂತೇ ಪರಿತಪಿಸುವೆನೋ! ಎಲ್ಲಿ ನಿನ್ನನ್ನು ನನ್ನಿಂದ ಯಾರಾದರೂ ದೂರ ಮಾಡುವರೋ ಎಂದು ಒದ್ದಾಡುವೆನೋ! ನನಗೂ ತಿಳಿದಿದೆ, ನಮ್ಮಿಬ್ಬರ ನೆಂಟು ಇಷ್ಟೇ ಎಂದು. ಭವಿಷ್ಯವನು ನೀನು ಬಲ್ಲೆಯಾದರೂ ನನಗದು ಬೇಡ. ನಾನು ವರ್ತಮಾನದಲಿ ಬದುಕಲಿಚ್ಛಿಸುತ್ತೇನೆ. ಈಗ ನೀನು ನನ್ನವನು; ನನಗಷ್ಟೇ ಸಾಕು! ಉಳಿದದು ಗೌಣ್ಯವೆನಗೆ!”

“ನಾ ತಂತಿ, ನೀನು ವೈಣಿಕ! ನಾ ಮುರಳಿ, ನೀ ಮುರಳೀಧರ! ನಾ ರಾಧೆ, ನೀ ರಾಧಾಮಾಧವ! ನಮ್ಮೀ ಒಲವು ಅಮರ, ಅದಕ್ಕಿಲ್ಲ ಯಾವುದೇ ಬಂಧ! ಹೌದೋ, ನಾವು ಸಪ್ತಪದಿಯನ್ನು ತುಳಿದಿಲ್ಲ, ಅಗ್ನಿ ಸಾಕ್ಷಿಯಾಗಿ ಕೈ ಹಿಡಿದಿಲ್ಲ, ನಮ್ಮ ಒಲವಿಗೆ ಯಾವ ಮಂತ್ರಗಳೂ ಸಾಕ್ಷಿಯಾಗಿಲ್ಲ, ಆದರೂ ನಮ್ಮಿಬ್ಬರ ಆತ್ಮ ಒಂದಾಗಿದೆ.  ನಾನು ನೀನೆಂಬ ಭೇದ ದೂರವಾಗಿ ನಾವಾಗಿದ್ದೇವೆ. ನೀನೋ ಅವತಾರ ಪುರುಷ! ನಾನೋ ನಿನ್ನೊಲವನು ಪಡೆದ ಸಾಮಾನ್ಯ ಗೋಪಿಕೆ! ಪತ್ನಿಯಲ್ಲದಿದ್ದರೂ ಪತ್ನಿಯ ಎಲ್ಲಾ ಅಧಿಕಾರವ ನೀಡಿರುವೆ ನೀ ಎನಗೆ! ಹೆಚ್ಚೇನು ಬಯಸೆನು ಬರೇ ಬೇಡುವೆನು ನಿನ್ನೊಲವ ಸಾಕೆನಗೆ!”

ಬಿಗಿದಪ್ಪಿದನು ಮಾಧವ! ಮಾಧವನಲ್ಲಿ ನೆಲೆಯಾದಳು ರಾಧೆ! ಅಜರಾಮರವಾಯಿತು ಅವರ ಒಲವಿನ ಕತೆ!

30 April, 2013

ಹೊ ಹೊ ಭಾವವಿದೆ, ಹೊ ಹೊ ಉತ್ಸಾಹವಿದೆ!!!



ಮುನಿದ ಕನಸನು ಸಾಂತ್ವನಗೊಳಿಸುವೆವು
ತುಂಡರಿಸಿದ ಗಾಳಿಪಟವನು ಜೋಡಿಸುವೆವು
ಹೊ ಹೊ... ಭಾವವಿದೆ
ಹೊ ಹೊ... ಉತ್ಸಾಹವಿದೆ
ನಂಟು-ದಾರಗಳ ಗಂಟು ಬಿಡಿಸುವೆವು
ಹೊ ಹೊ ದಾರಗಳೇ.. 
ಹೊ ಹೊ ದಾರಗಳೇ...||

ನಿದ್ರಿಸುತಿರುವ ಅದೃಷ್ಟವನು ಎಬ್ಬಿಸುವೆವು
ನಾಳೆ ನಭವೂ ತಲೆಬಾಗುವಂತೆ ಮಾಡುವೆವು||
ಹೊ ಹೊ... ಭಾವವಿದೆ 
ಹೊ ಹೊ... ಉತ್ಸಾಹವಿದೆ
ನಂಟು-ದಾರಗಳ ಗಂಟು ಬಿಡಿಸುವೆವು
ಹ್ಮ್ ಹ್ಮ್.. ದಾರವೇ..

ಹೊ.. ಹೊ.. ಹೆಪ್ಪುಗಟ್ಟಿದ ಕಣ್ಣುಗಳಲ್ಲೂ ನೋಡುವೆವು
ಕರಗುತಿರುವ ನಾಳೆಯ ಮೊಗವನು
ಹೊ.. ಹೊ.. ಕಲ್ಲಿನಂತ ಹೃದಯದಲ್ಲೂ ನೋಡುವೆವು
ಕುದಿಯುತಿರುವ ಶಿಲಾರಸ ತಳದಲಿ
ಬೆಳಗುತಿಹ ದೀಪವಿದೆ  
ಒಲವಿನ ರಾಗವೂ ಇದೆ
ಆರದದು ಸಣ್ಣಗಾಗದು
ಈ ಭಾವವೆಂದಿಗೂ ಆಗದು ದೂರ
ಬೆಳಗುತಿಹ ದೀಪವಿದೆ  
ಒಲವಿನ ರಾಗವೂ ಇದೆ
ನಾಳೆ ನಡೆಯುವುದನಾರು ಬಲ್ಲರೋ
ಅದರತ್ತ ಲಕ್ಷ ಯಾರಿಗಿದೆ
ಗಮನ ಯಾರಿಗಿದೆ ಹೇಳು!
ಲಕ್ಷ ಯಾರಿಗಿದೆ..
ಗಮನ ಯಾರಿಗಿದೆ...||



ಮುನಿದ ಕನಸನು ಸಾಂತ್ವನಗೊಳಿಸುವೆವು
ತುಂಡರಿಸಿದ ಗಾಳಿಪಟವನು ಜೋಡಿಸುವೆವು
ಹೊ ಹೊ...  ಭಾವವಿದೆ 
ಹೊ ಹೊ...  ಉತ್ಸಾಹವಿದೆ
ನಂಟು-ದಾರಗಳ ಗಂಟು ಬಿಡಿಸುವೆವು
ದಾರಗಳೇ.. 
ದಾರಗಳೇ...||










ನಿನಗಾಗಿಯೇ, ಕೇವಲ ನಿನಗಾಗಿಯೇ! (ಭಾವಾನುವಾದ)


ಬದುಕಿರುವೆನು ನಿನಗಾಗಿ ನಲ್ಲೆ, ಹೊಲೆದು ತುಟಿಗಳನು
ಬದುಕಿರುವೆನು ನಿನಗಾಗಿ ನಲ್ಲ, ನುಂಗಿ ಕಂಬನಿಗಳನು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ
ನಿನಗಾಗಿಯೇ ನಿನಗಾಗಿಯೇ||

ಬದುಕಿರುವೆನು ನಿನಗಾಗಿ ನಲ್ಲ,  ನುಂಗಿ ಕಂಬನಿಗಳನು
ಬದುಕಿರುವೆನು ನಿನಗಾಗಿ ನಲ್ಲೆ,  ಹೊಲೆದು ತುಟಿಗಳನು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲ
ನಿನಗಾಗಿಯೇ, ನಿನಗಾಗಿಯೇ||


ಮತ್ತೆ ವಿಧಿ ನಿನ್ನೆಯ ದಿನಗಳ ಹೊತ್ತಗೆ ಮರಳಿಸಿವೆ
ಆಳವಾಗಿವೆ ನಮಗೀಗ ನೆನಪುಗಳ ಲೆಕ್ಕಗಳು
ಎಷ್ಟೊಂದು ಉತ್ತರಗಳು ಪ್ರಶ್ನೆಗಳ ಕೇಳದೆ
ಬಯಸಿದೇನು, ದೊರೆತದೇನು ನೋಡಿ ನಮಗೀಗ
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ||
ನಿನಗಾಗಿಯೇ, ನಿನಗಾಗಿಯೇ||

ಏನು ಹೇಳಲಿ ಈ ಲೋಕ ಹೇಗೆ ಮೋಸ ಮಾಡಿತು
ಪಾಲಿಸಿದೆನಾನಾ ಅಪ್ಪಣೆ  ಜೀವಿಸಿದೆ ನೀನಿಲ್ಲದೆ
ಮುಗ್ಧರವರು ಅನ್ನುವರಲ್ಲ ನೀ ನನಗೆ ಅಪರಿಚಿತೆ
ಪ್ರಿಯೆ, ಎಷ್ಟೊಂದು ನೋವುಗಳನಿತ್ತರು ಜನರು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ
ನಿನಗಾಗಿಯೇ ನಿನಗಾಗಿಯೇ||

ಬದುಕಿರುವೆನು ನಿನಗಾಗಿ ನಲ್ಲೆ  ಹೊಲೆದು ತುಟಿಗಳನು
ಬದುಕಿರುವೆನು ನಿನಗಾಗಿ ನಲ್ಲ,  ಇಂಗಿಸಿ ಕಣ್ಣೀರನು
ಆದರೂ ಅನುರಾಗದ  ಹಣತೆಯನು ಬೆಳಗಿ ಮನದೊಳಗೆ
ಬದುಕಿರುವೆನು ಕೇವಲ
ನಿನಗಾಗಿಯೇ, ನಿನಗಾಗಿಯೇ,
ನಿನಗಾಗಿಯೇ, ನಿನಗಾಗಿಯೇ... ||










27 April, 2013

ಬಂದೇ ಬರುವನವನು, ಭಾಮೆಯ ತಣಿಸುವನವನು!


ವಸಂತ ಮಾಸ
ಮಾಮರದಲಿ ಕುಹೂ
ಕೆಂಪನೆಯ ಚಿಗುರು
ಸುಮವರಳಿ ದುಂಬಿಯ
ಝೇಂಕಾರ ನಾದ
ತಂಗಾಳಿಯ ಪಿಸುಮಾತು
ಮನ್ಮಥ-ರತಿಯ ಮಿಲನ
ಸಂಭ್ರಮ ಸಡಗರ
ಅವಳೂ ಹಂಬಲಿಸುವಳು
ಅವನೊಲವಿಗಾಗಿ ಕಾದು
ಬತ್ತಿ ಬೆಂಡಾಗುವಳವಳು
ಚಂಚಲಚಿತ್ತನಲ್ಲ ಅವನು
ಕಾಯುವನು ಸರಿ
ಸಮಯ ಬರಲೆಂದು
ಬಂದೇ ಬರುವನವನು
ಒಲವನ್ನೆಲ್ಲ ಹೊಸೆದು
ಕಡುನೀಲಿ ರಂಗಿನಿನಿಯ
ಭಾಮಿನಿಯ ಮುದ್ದಿಸಲು
ಬಂದನೇ  ನೋಡೇ ನೋಡಲ್ಲಿ
ಝಗಮಗ ಝಗಮಗ ಬೆಳಕು
ಕೇಳಿತೇ ತಾಳಮದ್ದಳೆ
ಸುರಿಸಿದನೋ ತನ್ನೊಲವ
ತಣಿಸಿದನೋ ತನ್ನರಸಿಯ
ತನ್ನಿನಿಯನ ಮೋಹ
ಅಡಗಿಸಲು ಶಕ್ಯಳಲ್ಲ
ಹಸಿರು ಹೆತ್ತು
ಹೆಮ್ಮೆ ತೋರಿ
ಮೆರೆಯುವಳಾ ಅರಸಿ!

24 April, 2013

ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ- ಭಾವಾನುವಾದ!



ತು ಇಸ್ ತರಹ್ ಸೆ ಮೆರಿ ಜಿಂದಗಿ ಮೇ - ಭಾವಾನುವಾದದ ಯತ್ನ!
ಚಿತ್ರ-ಆಪ್ ತೋ ಐಸೇನ ಥೆ
ಗಾಯಕಿ- ಹೇಮಲತಾ
ನಿರ್ದೇಶಕ- ಉಷಾ ಖನ್ನ
ಸಾಹಿತ್ಯ- ಇಂದೀವರ್

ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ
ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ||

ಈ ಬಾನು, ಈ ಮುಗಿಲು, ಈ ಹಾದಿ, ಈ ಗಾಳಿ
ಎಲ್ಲವೂ ಸ್ತಬ್ಧವಾಗಿವೆ ತಮ್ಮ ತಮ್ಮ ಸ್ಥಾನದಲಿ
ಹಲವು ಕಾಲದಿ ಯಾವುದೂ ಕೋರಿಕೆಯಿಲ್ಲವೀ ಲೋಕದಿ
ನನಗೋ ಬದುಕೊಂದು ಪಯಣ ಮತ್ತಾಪಯಣದ ಗುರಿಯೂ ನೀನೇ||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||

ಪ್ರತಿಯೊಂದು ಹೂ ಯಾವುದೋ ನೆನಪಿನ ಪರಿಮಳ ಬೀರುವುದಲ್ಲ
ನಿನ್ನದೇ ನೆನಪಿನಲಿ ಜಗವೂ ಎಚ್ಚರವಾಗಿಯೇ ಇರುವುದಲ್ಲ
ಇದೆಲ್ಲ ಹಾಗೆ ಇತ್ತೇ  ಇಲ್ಲಾ ಒಲವಿನ ಹಾರೈಕೆಯೇ
ನೀ ಬಳಿ ಇರುವೆಯೋ ಇಲ್ಲವೋ ನನ್ನೆದುರಿಗಂತೂ ಸದಾ ನೀನಿರುವಿ||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||

ಪ್ರತಿಯೊಂದು ಪಯಣವೂ ಒಲವಿನಿಂದಲೇ ಹೊಳೆಯುವುದಲ್ಲ
ಆ ಹೊಳಪಿಲ್ಲದೆ ಬದುಕು ಶೂನ್ಯವಾಗುವುದು ನಲ್ಲ
ಸುಗಮವಾಗುವವು ಹಾದಿಗಳು  ಜತೆಯಿರಲು ಸಹಮನಸ್ಕನು
ಮುಳ್ಳಾಗುವವು ಹಾದಿಗಳು ಒಂಟಿಯಾಗಿ ನಡೆಯಲು||

ನಾ ಕಾಣುವೆ ಎಲ್ಲೆಡೆಯೂ ನಿನ್ನದೇ ಛಾಯೆ ನಲ್ಲ
ನನ್ನೀ ಬದುಕಲ್ಲಿ ನೀನೀ ರೀತಿ ಸೇರಿಹೋಗಿರುವೆಯಲ್ಲ||



ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...