ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

07 April, 2013

ಅವಳು ಮತ್ತವಳ ಕೋಗಿಲೆ- ಒಂದು ಸ್ನೇಹ, ಅನುರಾಗದ ಬಂಧನ!


ಅವಳು ಮತ್ತವಳ ಕೋಗಿಲೆ- ಒಂದು ಸ್ನೇಹ, ಅನುರಾಗದ ಬಂಧನ!
__________________________________________

ಆ ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು!
ಅಲ್ಲಿಯ ತನಕ  ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ!
ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ ನೆರೆದವು ಸುತ್ತಲೂ!
ಮೂತಿ ಚೂಪು ಮಾಡಿದವವು...
ಬೇಸರವಾಯಿತೇ ಅವಳಿಗೆ.. ಇಲ್ಲವಲ್ಲ!
ಚೊಚ್ಚಲ ಹಾಡವಳದು, ತಪ್ಪು ತೋರಲೇ ಇಲ್ಲವಲ್ಲ;
ಮರುಪ್ರಶ್ನಿಸಿದಳಾಕೆ ಆ  ಪಕ್ಕಿಗಳನ್ನೇ...
ಹೊಳೆಯುವ ಕೆಂಡದ ಕಣ್ಣಿನ ಪಕ್ಕಿಯು ರಾಗವ ತಿದ್ದಿತು... 
ಅವಳಿಗೋ ಭ್ರಮೆ ಅದು ತನ್ನ ಮೆಚ್ಚಿದೆಯೆಂದು!
ಅದೇ ಕಾರಣವೇ... ಆಕೆ ಈ ಪರಿಯಲ್ಲಿ ಆ ಕೋಗಿಲೆಯತ್ತ ಆಕರ್ಷಿತಳಾದದ್ದು... 
ಇರಲಿಕ್ಕಿಲ್ಲ!!!
ಎಷ್ಟೊಂದು ಹಕ್ಕಿಗಳ  ಮಾಧುರ್ಯ ಭರಿತ ಹಾಡು ಕೇಳಿಲ್ಲ... ಆದರೂ ಈ ನಮೂನೆಯ ಸೆಳೆತ! ಏನಿದು?
ಮೌನಿಯಾದಳಾಕೆ! 
ಅರಿವೇ ಇಲ್ಲದೆ ಆ ಚುರುಕು ಕಂಗಳ ಹಕ್ಕಿಯನ್ನು ಹಿಂಬಾಲಿಸುತಲಿದ್ದಳು!
ಅದು ಹೊರಹೋದಾಗಲ್ಲೆಲ್ಲ ಅದರ ಪುಟ್ಟ ಗೂಡೊಳು ಇಣುಕುತ್ತಾ ಗೆಜ್ಜೆ ಕಟ್ಟಿ ಕುಣಿದಾಡುತ್ತಿದ್ದಳು...
ಸುಂದರವಾಗಿ ಪೇರಿಸಿಟ್ಟ ರಾಗಗಳನ್ನು ಕೇಳಿ ಮುದಗೊಳ್ಳುತ್ತಲಿದ್ದಳು, ರೋಮಾಂಚನಗೊಳ್ಳುತ್ತಿದ್ದಳು!
ಹಲವನ್ನು ಕದ್ದು ತಂದು ತನ್ನ ಮನೆಯೊಳಗೆ ಅಡಗಿಸಿಟ್ಟಳು!
ತನಗರಿವೇ ಇಲ್ಲದೆ  ಮನವ ಕೆಂಗಣ್ಣಿನ ಪಕ್ಕಿಗೆ ಅರ್ಪಿಸಿದಳು!
ಇಷ್ಟಾದರೂ ಯಾವ ಭಾವವದೆಂದವಳಿಗೆ ಅರಿವಾಗಲೇ ಇಲ್ಲ...
ಆದರೆ ಹೇಗೋ ಏನೋ ಆ ಕೋಗಿಲೆಗೆ ಅದರರಿವಾಗಿತ್ತೆಂದು ತೋರುತ್ತದೆ!
ಕಂಡರಿಯದ ಅನುರಾಗವು ಅವಳ ಬದುಕಿಗೆ ಹೊಸ ರಂಗು, ಹೊಸ ಬಲ ತಂದಿತು...
ತನ್ನಿರುವಿಕೆಯನ್ನೇ ಮರೆತಳು.. ಅವಳು ಅವಳಾಗಿ ಉಳಿಯಲಿಲ್ಲ..
ಮೊದಲೇ ಪ್ರಕೃತಿ ಪ್ರಿಯಳವಳು... ಇದೀಗ ಸೃಷ್ಟಿಯ ಮತ್ತಷ್ಟು ಆರಾಧನೆ!
ನಿಧಾನವಾಗಿ ಕೋಗಿಲೆ ಅವಳನ್ನು ಪೂರ್ಣವಾಗಿ ಆವರಿಸಿತು.
ಸ್ವತಂತ್ರ ಮನೋಭಾವದವಳವಳು... ಹೇಗೆ ಆ ಹಕ್ಕಿಯನ್ನು ಹೀಗೆ ಆವರಿಸಲು ಬಿಟ್ಟೆಳೋ!
ಯಂತ್ರದಂತೆ ಕಾರ್ಯ ನಿರ್ವಹಿಸುತ್ತಿದ್ದವಳ... ಕಾಲನ ಕರೆಗಾಗಿ ಕಾಯುತ್ತಿದ್ದವಳ ಬಾಳ ಗುರಿ ಬದಲಾಯಿತು.
ಅವಳನ್ನೇ ಅವಳು ಪ್ರೀತಿಸಲಾರಂಭಿಸಿದಳು...
ತನ್ನಾತ್ಮದ ಕರೆಗೆ ಕಿವಿಗೊಟ್ಟಳು!
ನಿತ್ಯವೂ ಮುಂಜಾನೆ ಕೇಳುವ ಕೋಗಿಲೆಯ ಹಾಡು ತನಗಾಗಿಯೇ ಎಂದು ಭ್ರಮಿಸಿದಳು.. 
ತನ್ನ ಎದೆಯ ಸಂದೇಶಗಳನ್ನು ಕೋಗಿಲೆಗೆ ರವಾನಿಸತೊಡಗಿದಳು...
ಕೋಗಿಲೆಯೂ ಸ್ಪಂದಿಸತೊಡಗಿತೋ...
ಅಥವಾ ಅವಳೇ ಹಾಗೆ ಕಲ್ಪಿಸಿಕೊಳ್ಳುತ್ತಿದ್ದೆನೋ... ಏನೋ ಗೊತ್ತಿಲ್ಲ!
ಅವಳಿಗೋ ಆ ಕೋಗಿಲೆ ಜೀವದ ಸಂಗಾತಿ.. ಅವಳಾ ಕೋಗಿಲೆಗೆ?
ಕಾಲ ಚಕ್ರ ಉರುಳುತ್ತಲೇ ಇತ್ತು... ಬಂಧನ ಮತ್ತಷ್ಟು ಬಿಗಿಯಾಯಿತು!
ಮನದೊಳಗೀಗ ಬರೇ ಆ ಹಕ್ಕಿಯದೇ ಚಿಂತನೆ...
ಆ ಕೋಗಿಲೆಗೆಗಾದರೂ ಅಸಂಖ್ಯಾತ ವಿವಿಧ ಜಾತಿಯ ಗೆಳೆಯ ಗೆಳತಿಯರು...
ಅವೆಲ್ಲವೂ ಇವಳಿಗೂ ಮಿತ್ರರು!
ಅವಳ  ಸ್ಥಾನವೇನು!!!
ಹೀಗೊಂದು ಪರಪುಟ್ಟ ಹಕ್ಕಿ ಮತ್ತವಳ ಮಧ್ಯೆ ಕಂಡರಿಯದ ಅನುರಾಗದ ಬಂಧ, ಸಂಬಂಧ!!! 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...