ಇದ್ದಕ್ಕಿದ್ದಂತೆಯೇ ಹೀಗೊಂದು ಬೆಂಗಳೂರಿಗೊಂದು ಭೇಟಿ ನೀಡುವ ಯೋಗವು ಕೂಡಿ
ಬರುವುದೆಂದು ನಾನು ಅಂದುಕೊಂಡಿರಲಿಲ್ಲ. ತಿಂಗಳ ಹಿಂದೆಯೇ ಮಗಳು ತನ್ನ ವರಾತವನ್ನು ಶುರು
ಮಾಡಿದ್ದಳು. ತನ್ನ ಕನಸಿನ ನಗರಿಯಾದ ಮುಂಬೈ ಭೇಟಿಯನ್ನು ಕಳೆದ ಜೂನ್ ತಿಂಗಳಲ್ಲಿ ಮುಗಿಸಿದ್ದ
ಅವಳಿಗೆ ಅದು ಒಂದು ರೀತಿಯ ಆತ್ಮ ವಿಶ್ವಾಸವನ್ನು ಕೊಟ್ಟಿತ್ತು. ಹಾಗೆಯೇ ತನ್ನ ಗೆಳೆಯರಿಂದ,
ಛಾಯಾಚಿತ್ರಗಳ ಮೂಲಕ ಬೆಂಗಳೂರಿನ ಬಣ್ಣನೆ ಕೇಳಿದ್ದ ಅವಳಿಗೆ ಅಲ್ಲಿ ಹೋಗದೇ ತನ್ನ ಜೀವನ
ನಿರರ್ಥಕವೆಂದನಿಸಿದ್ದು ನನಗೆ ವಿಚಿತ್ರವಾಗಿ ಕಂಡಿರಲಿಲ್ಲ. ಅವಳು ಅಷ್ಟು ಪರಿ ಪರಿಯಾಗಿ
ಬೇಡಿಕೊಂಡಿದ್ದರೂ ನಾನದಕ್ಕೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ನನಗೆ ನನ್ನದೇ ಆದ
ಜವಾಬ್ದಾರಿಗಳಿದ್ದವು. ಅಲ್ಲದೇ ಆ ಸಮಯದಲ್ಲಿ ನನ್ನ ಪರೀಕ್ಷೆ, ಮಕ್ಕಳ ಪರೀಕ್ಷೆ, ಅದಾಗಲೇ ಮಾತು
ಕೊಟ್ಟ ಶಿಬಿರದ ಕೆಲಸ... ಹೀಗೆ ಅನೇಕ ಮುಖ್ಯ ಕೆಲಸಗಳು ನನ್ನ ಮುಂದಿದ್ದವು. ಆದರೆ ಎಪ್ರಿಲ್ ೬,೭
ತಾರೀಕು ಕಳೆದ ಹಾಗೆ ಅವಳ ಗೋಗರಿಕೆ ಹೆಚ್ಚಾಯಿತು. ಈ ಪ್ರಾಯವೇ ಹಾಗಲ್ಲವೆ! ಅಲ್ಲದೆ. ನಾವೆಲ್ಲ
ಸಣ್ಣವರಿರುವಾಗ ರಜೆ ಕಳೆಯಲು ಹಳ್ಳಿಯಲ್ಲಿರುವ ಅಜ್ಜಿ ಮನೆಗೆ ಹೋಗುತ್ತಿದ್ದೆವು. ಮನ್ನುವಿನ
ಅಜ್ಜಿ ಮನೆ ನಮ್ಮ ಮನೆಯ ಹತ್ತಿರದಲ್ಲೇ ಇರುವ ಕಾರಣ ಅವಳಿಗೆ ಎಲ್ಲೂ ಹೋಗುವ ಹಾಗೆ ಇರಲಿಲ್ಲ.
ವ್ಯಾಪಾರಿಗಳಾದ ನಮ್ಮ ಮನೆಯವರಿಗೆ ವರ್ಷ ಪೂರ್ತಿ ಕೆಲಸ. ಹಾಗಾಗಿ ನಾವು ಎಲ್ಲೂ ಹೋಗಿರಲಿಲ್ಲ.
ಸುಮಾರು 15 ವರ್ಷಗಳ ಹಿಂದೆ ಬೆಂಗಳೂರಿಗೆ ಎರಡು ದಿನಗಳ ಭೇಟಿಯೇ ನಮ್ಮ ಕೊನೆಯ ದೂರದ
ಪಯಣವಾಗಿತ್ತು. ಹೀಗಾಗಿ ಕೊನೆಗೂ ಮನಸ್ಸು ಬದಲಾಯಿಸಿದ ನಾನು ಅವಳೊಟ್ಟಿಗೆ ಬೆಂಗಳೂರಿಗೆ ಹೋಗಲು
ಒಪ್ಪಿದೆ. ಇಲ್ಲಿಂದ ಉಡುಪಿಗೆ ಪಯಾಣಿಸಿದಾಗಲೆಲ್ಲ ವಾಂತಿ ಮಾಡುವ ಅವಳು ಮತ್ತೆ ಇಷ್ಟು ದೂರದ
ಪಯಣದಲ್ಲಿ ಹಾಗೆ ಮಾಡದಿರುತ್ತಾಳೆಯೆ! ಹಾಗಾಗಿ ರೈಲಿನಲ್ಲಿ
ತತ್ಕಾಲ್ ಟಿಕೇಟಿನ ಮೂಲಕ ಹೋಗುವುದೆಂದು ನಾವು ನಿರ್ಧರಿಸಿದರೇನು ಪ್ರಯೋಜನ! ಆನ್ ಲೈನ್ ಮೂಲಕ
ಮಾಡಿದ ಪ್ರಯತ್ನವೆಲ್ಲ ಗಾಳಿಯಲ್ಲಿ ಹೋಮದಂತಾಯಿತು. ಕೊನೆಗೂ ಶನಿವಾರ ರಾತ್ರಿ 9.30ರ
ರಾಜಹಂಸದಲ್ಲಿ ಅವಳ ನನ್ನ ಮೊದಲ ದೂರದ ಬಸ್ಸು ಪಯಣ ಆರಂಭವಾಯಿತು.















ನಿಲ್ದಾಣದಲ್ಲಿ ಇರುವ ಎಲ್ಲಾ
ಬಸ್ಸುಗಳನ್ನು ತಡಕಾಡಿ, ಯಾರ್ಯಾನ್ನೋ ಬೇಡಿ ಕೊನೆಗೂ ನಮ್ಮ ಬಸ್ಸನ್ನು ಹತ್ತಿ ಕುಳಿತಾದ ಇದೆಲ್ಲಾ
ಯಾಕೆ ಬೇಕಿತ್ತು ನನಗೆ ಅಂತ ಅನಿಸಿದ್ದು ಸುಳ್ಳಲ್ಲ. ಬಸ್ಸು ಹತ್ತಿ ಬಂದ ಎಲ್ಲರನ್ನೂ
ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ನನಗೆ ನಮ್ಮ ಸೀಟಿನ ಆಚೆ ಬದಿ ಕುಳಿತ್ತಿದ್ದ ಆ ಅಸಾಮಿ ಸರಿಯಿಲ್ಲ
ಅಂತ ಅನಿಸಿತ್ತು. ನಮ್ಮದು ಕಂಡ್ಕಟರ್ ಹಿಂದಿನ ಸೀಟು 3,4. 1,2 ರಲ್ಲಿ ಎರಡು
ಪುಟ್ಟ ಮಕ್ಕಳು ಮತ್ತವರ ತಾಯಿ ಕುಳಿತಿದ್ದರು. ಅವರ ಹಿಂದಿನ ಸೀಟು 5ರಲ್ಲಿ ಈ
ವಿಚಿತ್ರ ಆಸಾಮಿ ಕುಳಿತಿದ್ದ. ಹತ್ತಿದವನೇ ಸೀಟನ್ನು ಅಡ್ಡ ಹಾಕಿ ಮಲಗೇಬಿಟ್ಟ. ಅವನನ್ನು ಬಿಟ್ಟು
ಉಳಿದವರೆಲ್ಲ ಸ್ನೇಹಮಯಿಯಾಗಿದ್ದರು. ಕೆಲವರೊಂದಿಗೆ ಮುಗುಳ್ನಗೆ ವಿನಿಮಯವೂ ಆಯಿತು. ಸಮಯಕ್ಕೆ
ಸರಿಯಾಗಿ ಬಸ್ಸು ಮಂಗಳೂರನ್ನು ಬಿಟ್ಟು ಬೆಂಗಳೂರಿನ ಕಡೆ ತನ್ನ ಪಯಣವನ್ನು ಆರಂಭಿಸಿತು. ಅಲ್ಲಲ್ಲಿ
ಜನರು ಹತ್ತುತಲೇ ಇದ್ದರು, ಅವರೆಲ್ಲ ಬಿಸಿರೋಡ್ ನಲ್ಲಿ ಇಳಿಯುವರೆಂದು ಅವರ ಮಾತುಕತೆಯಲ್ಲಿ
ತಿಳಿಯಿತು. ಲೈಟೆಲ್ಲ ಆಫ್ ಆಯಿತು. ನಿಶ್ಚಿಂತಳಾಗಿ ನಾನೂ ಕಣ್ಣು ಮುಚ್ಚಿ ನಿದ್ರಿಸಲು ಯತ್ನಿಸಿದೆ.
ಎಲ್ಲೋ ಸ್ವಲ್ಪ ಜೊಂಪು ಹತ್ತಿದ್ದಂತಾಗಿತ್ತಷ್ಟೇ, ಏನೋ ತಣ್ಣಗೆ ಕೈಗೆ ತಾಗಿತು. ಹೆದರಿ ಕಣ್ಣನ್ನು
ದೊಡ್ಡದಾಗಿ ಬಿಟ್ಟು ಆ ಕತ್ತಲಲ್ಲೇ ನೋಡಲು ಯತ್ನಿಸಿದೆ. ಹೊರಗಿನ ದಾರಿದೀಪದಲ್ಲಿ ಏನೋ ಬಿಳಿ
ವಸ್ತು ಕಾಣಿಸಿತು, ಅದು ಪಾದಗಳೆಂದು ತಿಳಿಯಲು ಕೆಲವು ಕ್ಷಣಗಳು ಬೇಕಾಯಿತು. ಎದುರಿನ
ಸೀಟಿನಲ್ಲಿದ್ದ ಕಂಡ್ಕಟರ್ ಅವರನ್ನು ಕರೆದೆ. ಅವರೂ ನಿದ್ದೆಯಲ್ಲಿದ್ದರೆಂದು ತೋರುತ್ತದೆ. ನನ್ನ
ಮಾತು ಅವರಿಗೆ ಅರ್ಥವಾಗಲೇ ಇಲ್ಲ. ಹೀಗೆ ಹಾಗೆ ಮಿಸುಕಾಡಿ ಪುನಃ ನಿದ್ರೆಗೆ ಜಾರಲು ಹೋಗುವವರನ್ನು
ಬಡಿದೇ ಎಬ್ಬಿಸಬೇಕಾಯಿತು. ಆ ಮನುಷ್ಯ ಲೈಟ್ ಹಾಕಲು ಹೋಗದೇ, ನನ್ನ ಸೀಟಿನ ಹ್ಯಾಂಡಲ್ ಮೇಲೆ ಕಾಲು
ಇಟ್ಟು ಮಲಗಿದ 5ನೇ ಸೀಟಿನಲ್ಲಿದ್ದ ಪ್ರಯಾಣಿಕನನ್ನು ಮೇಲ್ದನಿಯಿಂದ ಎಬ್ಬಿಸಿ, ಸರಿಯಾಗಿ ಮಲಗಲು ಹೇಳಿದ. ಆಗಲೇ ಮೊದಲಯ
ಸೀಟಿನಲ್ಲಿದ ಹೆಂಗಸೂ ಆ ಆಸಾಮಿ ಅವಳ 10 ವರ್ಷದ ಮಗಳಿಗೂ ಸವರಿ ತೊಂದರೆ ಕೊಡುತ್ತಿತ್ತು ಅಂತ ಹೇಳಿದರೂ ಕಂಡ್ಕಟರ್ ಅತ್ತ
ತನ್ನ ಗಮನ ಕೊಡದೇ ಮಲಗಿದ. ನಾನು ಸೀಟಿನ
ಇನ್ನೊಂದು ಬದಿಯತ್ತಲೇ ಸರಿದೆ. ಕಣ್ಮುಚ್ಚಲೇ ಹೆದರಿಕೆ! ಒಂದಹತ್ತು ನಿಮಿಷ ಕಳೇಯಿತೋ ಇಲ್ಲವೋ
ಇದ್ದಕ್ಕಿದ್ದಂತೆಯೇ ಆ ಹೆಂಗಸು, “ ರೀ, ಕಂಡ್ಕಟರ್, ನಿಮಗೆ ಭಾಷೆ ಇದೆಯಾ ಇಲ್ಲವಾ! ಆಗಿನಿಂದ
ಒಂದು ಲೈಟ್ ಹಾಕಿ ಅಂತ ಹೇಳ್ತಾ ಇದ್ದೇನೆ, ಈ ಪ್ರಾಣಿ ನನ್ನ ಮಗಳ ಮೈ ಸವರಿ ತನ್ನ ತೀಟೆ ತೀರಿಸಲು
ಯತ್ನಿಸುತ್ತಿದೆ. ದೇವಾ, ಒಂಟಿ ಹೆಂಗಸರು ಪ್ರಯಾಣ ಮಾಡಲಿಕ್ಕೇ ಇಲ್ಲವಾ!” ಎಲ್ಲರೂ ಬೆಚ್ಚಿ ಬಿದ್ದರು. ಇಷ್ಟೆಲ್ಲ ಆದರೂ, ನಿದ್ರೆಯ
ಅಮಲಿನ ಲ್ಲಿದ್ದ ಯಾವ ಪಯಣಿಗನೂ ಎದ್ದು ಬರಲಿಲ್ಲ. ವಿಚಿತ್ರವೆನಿಸಿತು. ಹೆಣ್ಣು ಮಕ್ಕಳು ಒಂಟಿಯಾಗಿ
ಪ್ರಯಾಣಿಸುವುದು ಎಷ್ಟು ಕಷ್ಟ, ಕಣ್ಣಾರೆ ಕಂಡೆ!
ಲೈಟ್ ಹಾಕಿದ ಕಂಡ್ಕಟರ್, ಆ
ಲೋಫರನಿಗೆ, “ ಅಪ್ಪಾ, ಏಳಿ ಸರಿಯಾಗಿ ಮಲಗಿ. ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ.” ಅಂತ
ಸಮಾಧಾನದಿಂದ ಹೇಳುವುದು ನೋಡಿ ನನ್ನ ರಕ್ತ ಕುದಿದರೂ ಏನೂ ಪ್ರಯೋಜನವಿಲ್ಲವಾಗಿತ್ತು. “ ನಿಮಗೆ
ಅಷ್ಟು ಕಾಲು ಬಿಡಿಸಿ ಆರಾಮವಾಗಿ ಮಲಗಬೇಕಾದರೆ ಹಿಂದಿನ ಸೀಟಿಗೆ ಹೋಗಿಯಪ್ಪಾ.” ಹೀಗೆ ಬಹುವಚನ
ಕೊಟ್ಟು ಮಾತನಾಡುವುದನ್ನು ನೋಡಿ ನನಗೂ ಆ ಹೆಂಗಸಿಗೂ ಕೋಪ ಬರದಿರುತ್ತಾ! ಅವಳೂ ನಾನೂ ನಮ್ಮ
ಕೊಂಕಣಿ ಭಾಷೆಯಲ್ಲಿ ಆದಷ್ಟು ಬೈದು ಸಮಾಧಾನ ಮಾಡಿಕೊಳ್ಳಲು ಯತ್ನಿಸಿದೆವು. ಅಲ್ಲಾ, ಆ ಮಗು ಬರೇ 10
ವರ್ಷದು. ಬಹಳ ಹೊತ್ತಿನ ತನಕ ಸಹಿಸಿಕೊಂಡಿತ್ತು. ಇತ್ತ ವಾಂತಿ ಅತ್ತ ಆ ಪ್ರಾಣಿ!
ಆಕೆಯ ಕೋಪ ಇತರ ಪಯಣಿಗರ ಮೇಲೂ
ತಿರುಗಿತು. ಯಾರೊಬ್ಬರೂ ತುಟಿ ಪಿಟಿಕ್ಕೆನ್ನಲಿಲ್ಲ. ಆಕೆ ಅಂದಳು, ನಮ್ಮ ಬೆಂಗಳೂರಿನಲ್ಲಾದರೆ
ಹತ್ತಾರು ಜನ ಸೇರಿ ಅವನಿಗೆ ಪೂಜೆ ಮಾಡುತ್ತಿದ್ದರು. ಈ ಮಂಗಳೂರಿನ ಜನ ಏನೂ ಪ್ರಯೋಜನವಿಲ್ಲದ್ದು!
ಹೌದು, ಇದು ನನ್ನ ಅಭಿಪ್ರಾಯವೂ ಆಗಿತ್ತು.
ಅಂತೂ ಒಂದಿಷ್ಟು ಬೆಳಕು
ಕಾಣುತ್ತಿದ್ದಂತೆ ಆರಾಮವಾಯಿತು. ಇಡೀ ರಾತ್ರಿ ಕಣ್ಮುಚ್ಚದೇ ಕಣ್ಣು ಉರಿಯುತ್ತಿತ್ತು. ಆಕೆಯ
ಸಹಾಯದಿಂದಲೇ ಮೆಜೆಸ್ಟಿಕ್ ಬಳಿ ಇಳಿದು ನಮ್ಮ ಅತಿಥೇಯರು ಬರುವ ತನಕ ಮಾರ್ಗದ ಬದಿಯಲ್ಲಿ ನಮ್ಮ
ಸಾಮಾನುಗಳೊಂದಿಗೆ ಕುಳಿತೆವು. ತಣ್ಣನೆಯ ಗಾಳಿ ಹಿತವಾಗಿತ್ತು. ಮಗಳು ವಾಂತಿ ಆದ ಪ್ರಭಾವದಿಂದಲೋ
ಏನೋ ಸಣ್ಣನೆ ನಡುಗುತ್ತಿದ್ದಳು. ಅಷ್ಟರಲ್ಲಿ ನಮ್ಮೆದುರಿಗೆ ಕಾರೊಂದು ಬಂದು ನಿಂತಿತು,
ಎದುರಿನಿಂದ ಸ್ಕೂಟರ್ ನಿಂದ ಇಳಿದ ಹೆಂಗಸೊಂದು ಆ ಕಾರಿನಲ್ಲಿದ್ದ ಹೆಂಗಸನ್ನು ಅಪ್ಪಿ ಹಿಡಿಯಿತು.
ಇಬ್ಬರೂ ಗೋಳೋ ಎಂದು ಅಳುತ್ತಿದ್ದರು, ಮಧ್ಯೆ ಮಧ್ಯೆದಲ್ಲಿ ಜೋರಾಗಿ ತಮಿಳಿನಲ್ಲಿ ಏನೋ
ಹೇಳ್ಕೊಳ್ಳುತ್ತಿದ್ದರು. ಅಷ್ಟರಲ್ಲೇ ಇನ್ನೊಂದು ಹೆಂಗಸು ಅವರನ್ನು ಸೇರಿಕೊಂಡಿತು. ಇನ್ನೂ
ಜೋರಾಗಿ ಅಳು. ಕಾರಿನಲ್ಲಿದ ಯುವಕನೂ ಆ ಅಳುವಿಗೆ ಜತೆಯಾದ. ಬೆಂಗಳೂರಿಗೆ ಇಳಿದ ಕೂಡಲೇ ಈ ಅಳುವಿನ
ದೃಶ್ಯ ನನ್ನ ಕಣ್ಣನ್ನೂ ಹನಿಗೂಡಿಸಿತು. ಮಗಳು, ನೀನೊಬ್ಬಳು ಅಂತ ಗುರ್ ಗುಟ್ಟಿದಳು. ಆ ಅಳುವ ಗುಂಪಿಗೆ
ಇನ್ನಷ್ಟು ಜನ ಸೇರುವ ಲಕ್ಷಣ ಕಾಣಿಸುತ್ತಿತ್ತು, ಪುಣ್ಯಕ್ಕೆ ಅಷ್ಟರಲ್ಲಿ ನಮ್ಮ ಅತಿಥೇಯರ ವಾಹನ
ಬಂದಿತು.
ನಮಗಾಗಿ ಕಾದಿರಿಸಿದೆಯೆಂದುಕೊಂಡ
ರೂಮು ಬೇರೆಯರ ಪಾಲಾಗಿತ್ತು. ಬೇರೆ ದಾರಿಯಿಲ್ಲದೆ ಹತ್ತಿರದಲ್ಲಿದ್ದ ಮತ್ತೊಂದು ಹೊಟೇಲಿನಲ್ಲಿ
ರೂಮು ಹಿಡಿದೆವು. ಚಿಕ್ಕದಾಗಿದ್ದರೂ ಚೊಕ್ಕದಾಗಿತ್ತು. 10.30 ಹೊತ್ತಿಗೆ
ತಾವು ಮತ್ತೆ ಬರುವೆವು, ಬೆಂಗಳೂರಿನ ದರ್ಶನ ಮಾಡಿಸಲು ಎಂದು ನಮ್ಮ ಅತಿಥೇಯರು ತಿಳಿಸಿದಾಗ ನನ್ನ
ಮಗಳ ಮುಖ ಊರಗಲವಾಗಿತ್ತು. ಅವಳ ಸಂತಸದ ಮುಖ ನೋಡಿ ನನಗೂ ಖುಷಿಯಾಯಿತು. ಸ್ವಲ್ಪ ಹೊತ್ತು ಅಡ್ಡ
ಬಿದ್ದು, ಇಡ್ಲಿ ಚಟ್ನಿ ತಿಂದು ಚಾ ಕುಡಿದು ರಾಜಧಾನಿಯ ದರ್ಶನಕ್ಕೆ ಸಿದ್ಧವಾದೆವು. ನನಗೋ ನನ್ನ
ಸ್ನೇಹಿತರನ್ನು ಭೇಟಿಯಾಗುವ ಮನಸಿತ್ತು. ಮಗಳಿಗೆ ನೀನು ಹೋಗು ನಾನು ಸಾಧ್ಯವಾದರೆ ನನ್ನ
ಸ್ನೇಹಿತರನ್ನು ಭೇಟಿಯಾಗುವೆ ಎಂದಾಗ ಮಗಳು ಒಪ್ಪಲೇ ಇಲ್ಲ. ನೀನು ನನ್ನ ಜತೆಯೇ ಬರುವಿ, ಇನ್ನೇನು ಹೇಳಬೇಡವೆಂದಾಗ
ಅವಳೆದುರು ನಾನು ಸೋಲೊಪ್ಪಿಕೊಂಡೆ.
ಈ ಬಿಸಿಲಿನಲ್ಲಿ ಏನು ನೋಡಲಿದೆ,
ಅಂತಹುದೇನು ಇದೆ ಈ ಊರಿನಲ್ಲಿ... ಹೀಗೆ ಪಿರಿ ಪಿರಿ ಮಾಡುತ್ತಾ ನಾನು ಸಿದ್ಧವಾದೆ. ಬೆಂಗಳೂರು
ಅರಮನೆಯಲ್ಲಿ ವೈಭವದ ಮದುವೆಯೊಂದು ನಡೆಯುತ್ತಿತ್ತು, ಅಲ್ಲಿಂದ ನೆಹರು ಪ್ಲನಟೋರಿಯಂ- ಇದಾದರೆ
ನನಗೆ ಖುಷಿ ಕೊಟ್ಟಿತು, ಅಲ್ಲಿಂದ ವಿಧಾನ ಸೌಧ, ವಿಕಾಸ ಸೌಧ- ಎರಡೂ ಅಂಬೆಡ್ಕರ್ ಜಯಂತಿಯಾದ ಕಾರಣ
ವೀಕ್ಷಣೆ ನಿರಾಕರಿಸಲ್ಪಟ್ಟಿತು, ಸುಮ್ಮನೆ ಹೊರಗಡೆಯಿಂದ ಫೋಟೊ, ಮತ್ತೆ ಹೊರೆಟೆವು ಬನ್ನೇರುಘಟ್ಟ
ನ್ಯಾಷನಲ್ ಪಾರ್ಕ್ ಕಡೆಗೆ. ಅಲ್ಲೊಂದಿಷ್ಟು ಫೊಟೊ... ಬರುವಾಗ ಮೆಟ್ರೊ ರೈಲಿನಲ್ಲಿ ಪಯಣ. ಹೀಗೆ
ರೂಮಿಗೆ ಮರಳಿದಾಗ ಏಳು ಗಂಟೆ. ನಮ್ಮ ಪಯಣದ ಮುಖ್ಯ ಕಾರಣ ಮಗಳ ಸ್ನೇಹಿತೆಯ ಮದುವೆ, ಆರಕ್ಷತೆ
ಸಂಜೆ. ಹೀಗಾಗಿ ಅಲ್ಲಿ ಹೋಗಲೇಬೇಕು. ಮತ್ತೆ ಮರಳಿ ಸುಖ ನಿದ್ದೆ!
ಬೆಳಿಗ್ಗೆ ತಿರುಗುವಾಗ ಗಾಂಧಿ
ನಗರ, ಮೆಜೆಸ್ಟಿಕ್, ಓಲ್ಡ್ ಕೆಂಟ್ ರೋಡ್, ವಿಶ್ವೇಶ್ವರಯ್ಯ ಮ್ಯೂಸಿಯಂ, ಮುಖ್ಯ ಮಂತ್ರಿ ಸಮೇತ
ಉಳಿದ ರಾಜಕಾರಣಿಗಳ ನಿವಾಸದ ರಸ್ತೆ, ಜಯನಗರ
ಮೊದಲಾದ ಸ್ಥಳಗಳ ಮಹಾತ್ಮೆಯನ್ನೂ ಹೊರದರುಶನವನ್ನೂ ಮಾಡಿ ನನ್ನ ಮಗಳು ಆನಂದಿಸಿದಳು. ಮರುದಿನ ಮದುವೆಯ ಸಂಭ್ರಮ, ಹಾಗಾಗಿ ಎಲ್ಲೂ ಹೋಗದೇ
ಮದುವೆಯ ಊಟ ಮುಗಿಸಿ ಮತ್ತೆ ನಮ್ಮೂರಿಗೆ ಹೊರಡುವ ಪ್ಯಾಕಿಂಗ್ ತಯಾರಿ. ಸಂಜೆ ಒಂದಿಷ್ಟು ಬಸ್ಸು
ಪಯಣದಲ್ಲಿ ಬೆಂಗಳೂರಿನ ಮತ್ತೊಂದು ಮುಖದ ದರ್ಶನವೂ ಆಯಿತು. ಎಲ್ಲಿ ನೋಡಿದರೂ ಜನ ಸಂದಣಿ, ಎಲ್ಲರೂ
ಮೊಬೈಲಿನಲ್ಲೇ ಮಗ್ನರು, ಇಲ್ಲಾ ಮೆಸೇಜು ಓದುವುದರಲ್ಲೋ, ಬರೆಯುವುದರಲ್ಲೋ... ಇಲ್ಲಾ ಕಿವಿಗೆ
ಇಯರ್ ಫೋನ್ ಹಾಕಿ ಹಾಡುಗಳನ್ನು ಕೇಳುವುದರಲ್ಲೇ ತನ್ಮಯರು. ಬೆಳಿಗ್ಗೆ 6.30 ಗೆ
ಶುರುವಾದ ಬಿರುಸಿನ ಚಟುವಟಿಕೆಗಳು ರಾತ್ರಿ 11ದಾದರೂ ಕಮ್ಮಿಯಾಗುವುದಿಲ್ಲ. ಮಂಗಳೂರಿನಲ್ಲಿ
ರಾತ್ರಿ 8ಕ್ಕೇ ರಸ್ತೆಗಳು
ನಿರ್ಜನವಾಗಿರುವುದನ್ನು ನೋಡಿ ಅಭ್ಯಾಸವಾದ ನನಗೆ ಇಲ್ಲಿನ ಈ ವಿಪರೀತ ಚಟುವಟಿಕೆಗಳನ್ನು ನೋಡಿ
ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ನನಗೆ ಯಾವ
ಆಕರ್ಷಣೆಯೂ ಇರಲಿಲ್ಲ ನನ್ನ ಸ್ನೇಹಿತರನ್ನು ಭೇಟಿ ಮಾಡುವ ಮನಸ್ಸಿತ್ತು. ಆದರೆ ನಾನಿರುವ ಸ್ಥಳ
ಮತ್ತು ನನ್ನ ಸ್ನೇಹಿತರಿರುವ ಸ್ಥಳದ ದೂರ ಮನಗಂಡು ನಾನು ಯಾರಿಗೂ ನಾನು ಬಂದಿರುವ ವಿಷಯವನ್ನೇ
ತಿಳಿಸಲಿಲ್ಲ. ಯಾರಿಗೂ ನಮ್ಮಿಂದ ತೊಂದರೆಯಾಗುವುದು ನನಗಿಷ್ಟವಿಲ್ಲ. ಸೋಮವಾರ ಎಲ್ಲರಿಗೂ ತಮ್ಮ
ತಮ್ಮ ಕೆಲಸಕ್ಕೆ ಹಗುವ ಧಾವಂತ, ಅಂತಹುದರಲ್ಲಿ ನನ್ನಿಂದ ಕರೆ ಬಂದು ನಿರಾಕರಿಸಲೂ ಕಷ್ಟವಾಗುವ ಸಂದರ್ಭ ಸೃಷ್ಟಿ ಮಾಡುವುದಕ್ಕಿಂತ ಸುಮ್ಮನಿರುವುದೇ ಲೇಸು!
ಆದರೂ ಬೆಂಗಳೂರು ಬಿಡುವಾಗ ಕಣ್ಣಿನಿಂದ ಜಾರಿದ ಹನಿ ಬಾಯಿಯನ್ನು ಉಪ್ಪಾಗಿಸಿದು ಸುಳ್ಳಲ್ಲ. ನಮ್ಮ ಅತಿಥೇಯರ ಆದರಣಿಯ ಆತಿಥ್ಯವನ್ನು ನಾನು ಈ ಜನ್ಮದಲ್ಲಿ ಮರೆಯುವ ಹಾಗಿಲ್ಲ.