ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

25 October, 2012

ಸಾವು ತಂದ ಭಾವ!



ಫೇಸ್‍ಬುಕ್ ಗೆಳತಿಯೊಬ್ಬಳ ಪತಿ ಅಕಸ್ಮಾತ್ತಾಗಿ ಅಘಾತಕ್ಕೀಡಾಗಿ ಇಹ ಲೋಕವನ್ನು ತ್ಯಜಿಸಿದರು ಎಂಬ ಸುದ್ದಿ ಕೇಳಿ ಬೇಸರ ಮಾಡಿಕೊಂಡ ಸುನಿತಾ ಮಂಜುನಾಥ್ ಅವರ ಬರಹ ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವ ಈ ರೀತಿಯಾಗಿ ಹೊಮ್ಮಿತು.

ನಮ್ಮೊಳಗೇ ಇರುವ 
ಅವನಿರುವಿಕೆಯನ್ನು 
ನಾವಾಗಿ ಅರಿತರೇ ಚೆನ್ನ.
ಚದುರಂಗದ 
ಪಡೆಗಳು ನಾವು.
ಅವ ನಡೆಸಿದ 
ನಡೆಯನ್ನು ಒಪ್ಪಲೇಬೇಕು.
ಅವನ ಕರೆ ಬಂದಾಗ 
ಹೊರಡಲೇಬೇಕು.
ಕಷ್ಟವಾದರೂ ಹೊರಟವರ
ಒಮ್ಮನಸಿನಿಂದಲೇ 
ಬೀಳ್ಕೊಡಬೇಕು ಆ 
ಆತ್ಮ ಪರಮಾತ್ಮನಲಿ
ಲೀನವಾಗಲಿ 
ಎಂಬ ಹಾರೈಕೆಯಲಿ.
**************
ಸುನಿತಾ ಮಂಜುನಾಥ್ ಅವರ ಬರಹ
_________________________


ಹುಟ್ಟು ನೀಡಿ ಬಂಧಗಳಿಂದ ಬಂಧಿಸುಯಾದರೆ 
ಸಾವ ಕಳುಹಿ ಎಲ್ಲ ತೊರೆಸುವೆಯೇಕೆ ...
ಆ ಮನೆಗೆ ಹೊಸ ಬೆಳಕ ನೀಡುವಾಗ...
ಈ ಮನೆಯ ಬೆಳಕ ನಂದಿಸುವ ಆಟವೇಕೆ...
ಹುಟ್ಟಿನ ಸಿರಿಯೇಕೆ....
ಮರಣ ಮೃದಂಗವೇಕೇ....
ನಿನ್ನ ಲೀಲೆಯ ನಾ ಅರಿಯಲು 
ನೀನೀ ಆಟ ಕಟ್ಟುವೆಯಾದರೆ...
ನಾ ನಿನ್ನ ಪ್ರೀತಿಸಬೇಕೆ..
ನಿನಗೆ ಹೆದರಬೇಕೇ..
ನಿನ್ನ ದ್ವೇಷಿಸಬೇಕೇ..
ನಿನ್ನಿರುವಿಕೆಯ ಪ್ರಶ್ನಿಸಬೇಕೆ...!!!??!!!?????
______________________________

ಅನುರಾಧ ಸಾಮಗ ಅವರ ಭಾವ!
________________________________


ಸಾವಲ್ಲೇ ಗೆಲುವೆ?!
--------------
ವಾತ್ಸಲ್ಯದಡಿಯಲ್ಲಿ ಮಗುವಾಗಿ ಬೆಳೆಯುತಿದ್ದವಳಲಿ
ಪ್ರೇಮ ಮೂಡಿಸಿ ಮಗುವಾಗುಳಿದಿಲ್ಲ ಎನಿಸಿದವ
ಎಲ್ಲಿಂದಲೋ ಬಂದು ಅವನಿಲ್ಲದೇನಿಲ್ಲ ಅನಿಸಿದವ
ಹೆಸರಿಗೆ ಅಪ್ಪನದರ ಜೊತೆ ತೆಗೆದು ತನ್ನದನ್ನಿತ್ತವ
ಅಸ್ತಿತ್ವವೊಂದಾಗಿದ್ದುದು ಅಚ್ಚರಿಯೆಂಬಂತೆ 
ಜೊತೆ ಪಡೆದೂ ಒಂದಾಗುಳಿವುದ ತೋರಿಸಿದವ
ಮಡಿಲಲ್ಲಿ ತಾಯ್ತನದ ಸೊಬಗ ಅರಳಿಸಿ
ಉಡಿ ತುಂಬಿ ತವರಿಗೆ ಕಣ್ತುಂಬಿ ಕಳಿಸಿದವ 
ಕೂಸ ಕಣ್ಣಲಿ ತಮ್ಮ ಪ್ರೇಮ ಬಿಂಬಿಸಿದಾಗ
ಹೊಸತು ಕಂಡವನಂತೆ ಸಂಭ್ರಮಿಸಿ ನಕ್ಕವ
ಬೇರೇನಿಲ್ಲವೆಂಬಂತೆ ಇಬ್ಬರ ಸುತ್ತಲೇ ಗಿರಕಿಯಾಡಿ
ಪ್ರಪಂಚ ಕೈಯ್ಯೊಳಗಿದ್ದಂತೆ ಮೆರೆಯುತ್ತಿದ್ದವ..

ಹಠಾತ್ತಾಗಿ ಹೀಗೆ ಬಿಟ್ಟು ನಡೆದರೆ.....?! 
ಕಣ್ಣೀರು ಹಸುಗಂದಗೆ, ತಾಯ್ತಂದೆಗೆ ಅರಗದು
ಮುಚ್ಚಿಟ್ಟ ಒಣದುಃಖ ಹಸಿಒಡಲು ಭರಿಸದು
ತಿಂಗಳಕಾಲ ಅಗಲದೆ ಬಂದುಬಂದು ಕಾಡಿದವನ
ಹಿಂಬಾಲಿಸಿ ಹೋಗುವ ದಾರಿಯೂ ಕಾಣದು
ಕಂಗಾಲಾಗಿ ಕೂತವಳ ಕಂಡನಿಸಿತು-
"ಸಾವಿಗಂಜಲೇಬೇಕೆ........?
ಸಾವಪ್ಪಿದಲ್ಲೇ ಗೆಲುವೇ..? ಅದು ಬಳಿಸಾರಿಯೂ
ಬಿಟ್ಟುಳಿಸಿದವರ ಪಾಲಿಗೆ ಬರೀ ಸೋಲೇ ಇರುವುದೇ?!"
( ಗೆಳತಿಯ ದುಃಖದ ಗುಂಗಲ್ಲಿ ಕಣ್ಣೀರಿನ ಮೌನಸಾಂತ್ವನದ ಜೊತೆ)














No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...