ಫೋವ ಚಟ್ನಿ ಅನಿ ಬಟಾಣಿ (ಅವಲಕ್ಕಿ ಮತ್ತು ಬಟಾಣಿ)
ವಾರದಲ್ಲಿ ಹೆಚ್ಚು ಕಡಿಮೆ ಪ್ರತಿ ಮಂಗಳವಾರ ಬಟಾಣಿ ಮತ್ತು ಶುಕ್ರವಾರ ಕಡಲೆ..ಇದು ನಮ್ಮ ಕಾಲದ ಕೊಂಕಣಿಯ ಮನೆಯವರ ಮೆನುವಾಗಿರುತ್ತಿತ್ತು. ಈ ರೀತಿಯ ಅವಲಕ್ಕಿ ತಯಾರಿಸುವುದು ನಾಲಗೆಯ ರುಚಿಗೂ, ಆರೋಗ್ಯಕ್ಕೂ ಸರಿಹೋಗುತ್ತೆ. ಬಹುಶಃ ಸಂಪ್ರದಾಯಸ್ತರ ಮನೆಯಲ್ಲಿ ಬೆಳೆದ ಕಾರಣವೇನೋ ಈಗಲೂ ನನಗೆ ಅದೇ ರೂಢಿಯಾಗಿಬಿಟ್ಟಿದೆ. ನನ್ನ ಮನೆಯಲ್ಲೂ ಅಂತಹ ತಿಂಡಿಗಳಿಗೆ ಹೆಚ್ಚಿನ ಅಭ್ಯಂತರವಿರುವುದಿಲ್ಲ. ಅದರಲ್ಲೂ ಅವಲಕ್ಕಿಯ ಜೊತೆಗೆ ಹಸಿರು ಬಟಾಣಿಯ ಉಪ್ಕರಿ ಮಾಡಿದರೆ ಆ ದಿನ ನನ್ನ ಮಗ ಒಂಚೂರು ಹೆಚ್ಚೇ ತಿನ್ತಾನೆ. ನನಗಂತೂ ಆ ಒದ್ದೆ ಮಾಡಿ ತಯಾರಿಸುವ ಅವಲಕ್ಕಿ ಅಷ್ಟು ಹಿಡಿಸುವುದಿಲ್ಲ. ಅಲ್ಲದೆ ಇದು ಖಾರ ಸಿಹಿ ಎರಡು ಸಮಮಿಶ್ರಿತವಾಗಿದ್ದು ಆರೋಗ್ಯಕ್ಕೋ ಒಳ್ಳೆಯದೇ ಆದುದರಿಂದ ಸಾಧಾರಣವಾಗಿ ೧೫ ದಿನಕ್ಕೊಮ್ಮೆ ನನ್ನ ಮೆನುವಿನಲ್ಲಿ ತನ್ನ ಸರದಿಯಲ್ಲಿ ಬರುತ್ತಿರುತ್ತದೆ.
ಫೋವ ಚಟ್ನಿ:
೧. ಅರ್ಧ ತೆಂಗಿನ ಕಾಯಿ ತುರಿ
೨. ೧ ದೊಡ್ಡ ಚಮಚ ಕೊತ್ತಂಬರಿ
೩. ದೊಡ್ಡ ಚಮಚ ಜೀರಿಗೆ
೪. ೨ ಕೆಂಪು ಮೆಣಸು( ಹುರಿದದ್ದು)
೫. ೩೦ಗ್ರಾಮಿನಷ್ಟು ಬೆಲ್ಲ
೬. ರುಚಿಗೆ ತಕ್ಕಷ್ಟು ಉಪ್ಪು
೭. ಅವಲಕ್ಕಿ
೮. ಕಾಲು ಚಮಚದಷ್ಟು ಹುಣಸೆಕಾಯಿ
ಮೊದಲಿಗೆ ಜೀರಿಗೆ, ಕೊತ್ತಂಬರಿ, ಮೆಣಸು ಮತ್ತು ಹುಣಸೆ ಹಾಕಿ ಮಿಕ್ಸಿಯಲ್ಲಿ ತರಾತುರಿಯಾಗಿ ರುಬ್ಬಿ. ೨,೩ ಸುತ್ತು ತುರುಗಿದರೆ ಸಾಕು..ತುಂಬಾ ನಯವಾಗಬಾರದು. ಬೆಲ್ಲವನ್ನು ಚೆನ್ನಾಗಿ ಗುದ್ದಿ ಈ ಕೊತ್ತಂಬರಿ ಜೀರಿಗೆ ಹುಡಿಯಲ್ಲಿ ಬೆರೆಸಿ. ನಂತರ ತೆಂಗಿನ ತುರಿಯನ್ನು ಚೆನ್ನಾಗಿ ಬೆರಸಿ. ರುಚಿ ನೋಡಿ ಬೇಕಾದರೆ ಉಪ್ಪು ಹಾಗೂ ಬೆಲ್ಲ ಸೇರಿಸಿ. ಕೊನೆಗೆ ಅವಲಕ್ಕಿಯನ್ನು ಸೇರಿಸಿ...ಚೆನ್ನಾಗಿ ಬೆರೆಸದಿದ್ದರೆ ಅಲ್ಲಲ್ಲಿ ಹಸಿ ಅವಲಕ್ಕಿ ಬಾಯಿಗೆ ಸಿಕ್ಕಿ ರುಚಿ ಹಾಳುಮಾಡುತ್ತದೆ. ಕೆಲವರು ಇದಕ್ಕೆ ನೀರುಳ್ಳಿಯನ್ನು ಹಾಕುತ್ತಾರೆ. ಅದು ಸಹ ಬಹಳ ರುಚಿಯಾಗುತ್ತೆ. ಕೊನೆಗೆ ಕರಬೇವು ಮತ್ತು ಸಾಸಿವೆ ಒಗ್ಗರಣೆ ಕೊಟ್ಟರೆ ನಿಮ್ಮ ಫೋವ ಚಟ್ನಿ ರೆಡಿ.
ಬಟಾಣಿ ಉಪ್ಕರಿ:
೧.ಹಸಿರು ಬಟಾಣಿ
೨.ಕೆಂಪುಮೆಣಸಿನ ಕಾಯಿ ೪.೫
೩. ಹಸಿಮೆಣಸಿನ ಕಾಯಿ ೨,೩
೪. ಗರಮ ಮಸಾಲೆ ಹುಡಿ ೨,೩ ಚಮಚ
೫. ಉಪ್ಪು
ಮೊದಲು ಬಟಾಣಿಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ ಒಂದು ಕಾವಲಿಯಲ್ಲಿ ಒಗ್ಗರಣೆಗೆ ಇಡಿ. ಸಾಸಿವೆ ಸಿಡಿದ ಮೇಲೆ ಗರಮ ಮಸಾಲೆ ಹುಡಿ ಹಾಕಿ. ನಂತರ ಬೇಯಿಸಿದ ಬಟಾಣಿಯನ್ನು ಸೇರಿಸಿ ಕುದಿಸಿ, ಕಾವಲಿಯಿಂದ ಕೇಳಗಿಳಿಸಿ. ಈಗ ಬಟಾಣಿ ಮತ್ತು ಅವಲಕ್ಕಿಯನ್ನು ತಟ್ಟೆಯಲ್ಲಿ ಹಾಕಿ ಸೇವಿಸಿ. ನೆನಪಿಡಿ, ಕೆಲವರು ಅವಲಕ್ಕಿ ಮತ್ತು ಬಟಾಣಿಯನ್ನು ಬೆರೆಸಿ ತಿನ್ನುತ್ತಾರಾದರೆ ಮತ್ತೆ ಕೆಲವರು ( ನನ್ನಂತವರು) ಬೇರೆ ಬೇರೆಯಾಗಿ ತಿನ್ನುತ್ತಾರೆ.
No comments:
Post a Comment