ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 October, 2012

ಅಮೃತಬಳ್ಳಿ!





ಅಮೃತಬಳ್ಳಿ
-ಖಾಲಿಹೊಟ್ಟೆಯಲ್ಲಿ ಒಂದೆರಡು ಎಲೆಗಳ ಸೇವನೆ ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ದೇಹದ ಸಕ್ಕರೆ ಅಂಶವನ್ನು ಅಂಕುಶದಲ್ಲಿರಿಸಲು ಹಾಗೂ ನಮಗೆ ತಿಳಿದೋ ತಿಳಿಯದೇ ನಾವು ತಿನ್ನುವ ಆಹಾರದಲ್ಲಿ ಸೇರಿರುವ ವಿಷಕಾರಿ ಅಂಶವನ್ನು ಕಿತ್ತೊಗೆಯಲು ಬಲು ಸಹಕಾರಿ. ಅಲ್ಲದೆ ದೇಹದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದಕ್ಕೆ ಹೆಚ್ಚಿನ ಉಪಚಾರ ಬೇಕಾಗಿಲ್ಲ. ಒಂದಿಷ್ಟು ನೀರು, ಮಣ್ಣು, ಬಿಸಿಲು ಸಾಕು...

ಮಲ್ಲಿಗೆಯ ಕಂಪು!

 



ಮುಂಜಾನೆಯ ಹೊತ್ತು,
ಗಿಡದ ತುಂಬಾ ಅರಳಿದ
ಮಲ್ಲಿಗೆಯ ಕಂಪು,
ಅದ ಹೊತ್ತು ನನ್ನತ್ತ 
ಬೀಸಿದ ಸಣ್ಣನೆಯ ಗಾಳಿ
ನಾಸಿಕದೊಳು ನುಸುಳಿ,
ಕಣ್ಮನಕೆ ನೀಡಿತು ತಂಪು!

29 October, 2012

ಸಂಯಮ

ನಮ್ಮ ಶರೀರ ಮನಸ್ಸುಗಳ ಮೇಲೆ ಹತೋಟಿಯನ್ನು ಸಾಧಿಸುವುದನ್ನೇ ನಮ್ಮ ಹಿರಿಯರು ’ಸಂಯಮ’ ಎಂದು ಕರೆದರು. ಸಂಯಮವೆಂದರೆ ಇಂದ್ರಿಯ ಮನಸ್ಸುಗಳನ್ನು ನಿಷ್ಕ್ರಿಯಗೊಳಿಸುವುದು ಎಂದರ್ಥವಲ್ಲ.  ಅವಕ್ಕೆ ನಿರ್ವಹಿಸಲೇಬೇಕಾದ ಕರ್ತವ್ಯಗಳಿರುತ್ತವೆ. ಮನುಷ್ಯನ ಬದುಕು ಅರ್ಥಪೂರ್ಣವಾಗಿ, ಆಸ್ವಾದನೀಯವಾಗಿರಬೇಕಾದರೆ ಇಂದ್ರಿಯ ಮನಸ್ಸುಗಳ ತುಡಿತ, ಬಯಕೆಗಳಿಗೆ ಮಿತಿ ಔಚಿತ್ಯಗಳ ಗಡಿ ಹಾಕಿ, ಅವು ಅದನ್ನು ಮೀರದಂತೆ ನೋಡಿಕೊಳ್ಳುವುದೇ ಸಂಯಮ ಅಥವಾ ಸ್ವ-ನಿಯಂತ್ರಣ. ನೋಡಬಾರದ್ದನ್ನು  ನೋಡಬೇಕೆನ್ನುವ, ಕೇಳಬಾರದ್ದನ್ನು ಕೇಳಬೇಕೆನ್ನುವ, ಅಭಕ್ಷವಾದುದನ್ನು ಭಕ್ಷಿಸಬೇಕೆನ್ನುವ-ಇಂಥ ಎಲ್ಲ ಚಾಪಲ್ಯಗಳೂ ಮಿತಿ, ಔಚಿತ್ಯಗಳ ಎಲ್ಲೆಯನ್ನು ಅತಿಕ್ರಮಿಸದಂತೆ, ಅಗತ್ಯಕ್ಕಿಂತಲೂ ಹೆಚ್ಚು ಬೇಕೆನ್ನುವ ’ತೃಷ್ಣೆ’ಯೂ ಇದೇ ಗುಂಪಿಗೆ ಸೇರಿದುದು. ದೇಹ ಮನಸ್ಸುಗಳನ್ನು ಅಂಥ ಅತಿರೇಕಗಳಿಂದ ತಡೆಹಿಡಿಯುವುದು ಸ್ವ-ನಿಯಂತ್ರಣದ ಉದ್ದೇಶ.
ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲೂ ಬೆಳಕೊಂದನ್ನು ಭಗವಂತ ಇರಿಸಿದ್ದಾನೆ. ಅದು ಮಂಕಾಗದಂತೆ, ಆರಿಹೋಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಶುಚಿಯಾದ ಚಿಂತನೆಯ ತೈಲ ಹಾಕುತ್ತಾ, ಬತ್ತಿ ಕರಿಗಟ್ಟದಂತೆ ಸಂಯಮದ ಕಡ್ಡಿಯಿಂದ ಸ್ವಚ್ಛಗೊಳಿಸುತ್ತಿದ್ದರೆ, ಒಳಗೆ ಬೆಳಗುವ ದೀಪ ನಿರಂತರ ಬೆಳಕು ಬೀರುತ್ತದೆ.
-ವೈನತೇಯ

26 October, 2012

ಈ ಪ್ರಕಾಶವು ನಾಂದಿ ಹಾಡಲಿ!










ಈ ಪುಟ್ಟ ಹಣತೆಯ ಬೆಳಕು 
ಬಾಳಿಗೆ ಹೊಸ ಕಾಂತಿಯ ತುಂಬಲಿ!
ನಮ್ಮೊಳಗೆ ಬೇರೂರಿರುವ
ನರಕಾಸುರನ ಕಿತ್ತೆಸೆಯಲಿ!
ಬೆಚ್ಚನೆ ಹೊದ್ದು ಮಲಗಿರುವ
ನೈತಿಕತೆಯ ಬಡಿದೆಬ್ಬಿಸಲಿ!
ಮರೆತ ಮಾನವತೆಯ 
ಗುಣಗಳನ್ನು ಮತ್ತೆ ನೆನಪಿಸಲಿ!
ನಮ್ಮ ಮಣ್ಣಿನ ಸಂಸ್ಕೃತಿಯ
ಬೇರುಗಳನ್ನು ಮತ್ತಿಷ್ಟು ಗಟ್ಟಿಗೊಳಿಸಲಿ!
ಪಾಶ್ಚಿಮಾತ್ಯರ ಷೋಕಿಗೆ ಮರುಳಾದ
ಯುವಜನಾಂಗವ ತಿದ್ದಿ ಹಾದಿಗೆ ತರಲಿ!
ನಾಡಿನ ಉಜ್ವಲ ಭವಿಷ್ಯಕ್ಕೆ
ಈ ಪ್ರಕಾಶವು ನಾಂದಿ ಹಾಡಲಿ!

ಮನದ ಮೊರೆಯ ಕೇಳುವೆಯಾ, ನನ್ನೊಡೆಯ!


ಎಂದಿನಂತಿತ್ತಲ್ಲವೇ ಆ ಬೆಳಗು 
ಇತ್ತೇ ಬಿರುಗಾಳಿ ಬರುವರಿವು
ದಟ್ಟನೆಯ ಕಾರ್ಮೋಡ ಕವಿದು
ಇದ್ದಕ್ಕಿದ್ದಂತೆ ಸುರಿಯಿತು ಮುಗಿಲು
ಬಿರುಗಾಳಿಗಂಜಿದವು ಮನದ ಪುಟಗಳು
ಗಾಢಾ೦ಧಕಾರವು ಕವಿಯಿತು ಸುತ್ತಲೂ
ಮೂಕರಾಗವು ಹೊಮ್ಮಿತು ಮನದೊಳು
ಭಾರವ ಹೊರಲಾರದಿರಲು ಮನವು 
ಧಾವಿಸಿ ನೀ ಬಂದೆ ಅರಿತು
ತಂಪನೀವ ನುಡಿಯ ಉಸುರಲು
ಮನವಿಂದು ತುಂಬಿ ಬಂದು
ಒಡೆಯನನು ಬೇಡಿತು;
ಹರಸೆನ್ನ ತಮ್ಮನನು, ಸದಾ 
ಈ ಅಕ್ಕನ ಜೊತೆಯಿರಲೆಂದು!"

?????.......


ಗೊಂದಲವೆ...ಪ್ರಶ್ನೆಗಳು ಹುಟ್ಟುತ್ತವೆಯೇ.....
ಮನಸ್ಸನ್ನು ಮೌನವಾಗಿಸು ಮತ್ತು ಹೃದಯವನ್ನು ಭೇಟಿಯಾಗು.
ಅದುವೇ ನಿನ್ನೊಳಗಿನ ಪರಮಾತ್ಮನ ಭೇಟಿಗಿರುವ ನೇರ ದಾರಿ!

25 October, 2012

ಮನದೊಳಗಿನ ಕಿಚ್ಚು....ತನ್ನನ್ನೇ ಸುಡುವುದಲ್ಲವೆ!

    ಕಿಚ್ಚು- ಹೊರಗೇ ಇರಲಿ, ಒಳಗೇ ಇರಲಿ....ಮಾಡುವ  ಕೆಲಸ  ಒಂದೇ ಸುಡುವುದು. ಹೊರಗಿನ ಕಿಚ್ಚು ಕಣ್ಣಿಗೆ ಕಾಣಬಲ್ಲದು, ಅದನ್ನು ಆರಿಸಲು ಸಾಧ್ಯವಿದೆ. ಆದರೆ ಒಳಗಿನ ಕಿಚ್ಚು ಪರರನ್ನು ಮಾತ್ರವಲ್ಲದೆ ತನ್ನನ್ನೂ ಸುಡುವುದು. ಈ ಸತ್ಯವನ್ನು ಅರಿತಿದ್ದರೂ ನಾವದನ್ನು ಆರಿಸಲು ಪ್ರಯತ್ನಿಸುವುದಿಲ್ಲವೆ! ಏಕೆ ಹೀಗೆ? ಹಳೆ ಸುಧಾ ಪತ್ರಿಕೆಯ  "ವಿಚಾರ ಲಹರಿಯ" ಅಂಕಣದಲ್ಲಿ  ಒಂದು ಹೃದಯ ವಿದ್ರಾವಕ ಘಟನೆಯನ್ನು ನಿರೂಪಿಸಿದ್ದಾರೆ ವೈನತೇಯರು.

    ತಾಂಜಾವೂರು ರಾಜರ ಆಸ್ಥಾನದಲ್ಲಿ ವೀಣಾವಾದನದಲ್ಲಿ ಅದ್ವಿತೀಯ ಪಾಂಡಿತ್ಯವುಳ್ಳ ಕಾಳಹಸ್ತಿಯೆಂಬ ವೀಣಾವಾದಕರಿದ್ದರು. ತಮ್ಮಂತಹ ಮತ್ತೊಬ್ಬ ವಿದ್ವಾಂಸರು ಇರಬಾರದೆಂದು  ತಮ್ಮ ಪಾಂಡಿತ್ಯವನ್ನು ಯಾರೊಂದಿಗೂ ಹಂಚದೇ ಕಾಪಾಡಿಕೊಂಡಿದ್ದರು. ಮೈಸೂರಿನ ಅರಸರ ಆಮಂತ್ರಣದ ಕಾರಣ ಅವರಿಗೆ ಕೆಲವು ದಿನದ ಮಟ್ಟಿಗೆ ತಮ್ಮೂರಿನಿಂದ ದೂರವುಳಿಯಬೇಕಾಯಿತು. ಅರಸರ ಪೂಜೆಯ ಹೊತ್ತಿಗೆ ಹೊಸ ವೈಣಿಕನ ವಾದನ ಆಲಿಸಿದ ಅರಸರಿಗೆ ಬಹಳ ಮೆಚ್ಚಿಗೆಯಾಯಿತು. ಆ ಹೊಸ ವೈಣಿಕ ಬೇರ್ಯಾರಾಗಿರದೇ ಕಾಳಹಸ್ತಿಯವರ ಮಗನೇ ಆಗಿದ್ದನು. ಮೈಸೂರಿನಿಂದ ಹಿಂದಿರುಗಿ ಬಂದ ಕಾಳಹಸ್ತಿಯವರಿಗೆ ಮಗ ತಮಗಿಂತ ಚೆನ್ನಾಗಿ ನುಡಿಸುವನೆಂಬ ವಿಷಯ ಹಿಡಿಸಲಿಲ್ಲ. ತಡೆಯಲಾಗದಷ್ಟು ಈರ್ಷೆ ಸ್ವಂತ ಮಗನ ಮೇಲೆ ಉಂಟಾಯಿತು. ತಾವೇನೂ ಮಾಡುತ್ತಿದ್ದೇನೆಂಬ ಪರಿವೆಯಿಲ್ಲದೆ ಮಗನನ್ನು ಅಭಿನಂದಿಸುವ ನೆವನದಲ್ಲಿ ಅವನ ನಡುಬೆರಳನ್ನೇ ಕಚ್ಚಿತುಂಡು ಮಾಡಿಬಿಟ್ಟರು! ಅಕಟಕಟಾ!

    ಏಕಲವ್ಯನು ದ್ರೋಣರ ಮಾತ್ಸರ್ಯದಿಂದ ಹೆಬ್ಬೆರಳನ್ನೇ ಕಳಕೊಂಡನು. ದುರ್ಯೋಧನನು ತನ್ನ ಮಾತ್ಸರ್ಯದಿಂದ ತನ್ನ ವಂಶವನ್ನೆ ನಾಶಮಾಡಿದನು.    ಅಯ್ಯೋ ಮಾತ್ಸರ್ಯವು ಏನೇನು ಮಾಡಬಲ್ಲದು. ಅರಿಷಡ್ವರ್ಗಗಳ ವಾಸವು ಈ ನರ ದೇಹದೊಳು...ದೇವನು ಇತ್ತ ಸಹಜ ಸ್ವಭಾವವದು. ಅದು ಬೇರೊಬ್ಬರಿಗೆ ಹಾನಿ ಮಾಡುವ ಮಟ್ಟಕ್ಕೆ ಎಂದೂ ಏರಲು ಬಿಡಕೂಡದು. ಈರ್ಷೆಯು ನಮ್ಮ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಬೇಕೇ ಹೊರತು  ಮತ್ತೊಬ್ಬರನ್ನು ಮಟ್ಟ ಹಾಕುವಂತೆ ಮಾಡಿಸಕೂಡದು.

   ಉಪಸಂಹಾರದಲ್ಲಿ ಚಿಕ್ಕ ಕತೆ:
        ಮಗ ಗಣಕಯಂತ್ರದಲ್ಲಿ ಏನೋ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಟ ಆಡುತ್ತಿದ್ದಾನೆ.....ಗೆಲುವಿನ ಮೇಲೆ ಗೆಲುವು ಸಾಧಿಸುತ್ತಿದ್ದಾನೆ...ಮಧ್ಯಮಧ್ಯದಲ್ಲಿ ತನ್ನ ಗೆಲುವನ್ನು ಮನೆಯಲ್ಲಿ ಎಲ್ಲರಿಗೂ ಕೇಳುವ ಹಾಗೆ ಹೂ ಹಾ..ಶಬ್ದಗಳು! ಕೊನೆಗೂ ಆಟ ಮುಗಿದು ಅಗಲ ಮುಖಮಾಡಿಕೊಂಡು ಹೊರ ಬಂದವನನ್ನು ನೋಡಿ " ಇದೇನು ಮಹಾ...ನಾನು ಒಂದಷ್ಟು ಆ ಗೇಮ್ ಕಲಿತರೆ ನಿನ್ನನ್ನು ಸೋಲಿಸುತ್ತಿದ್ದೆ." ಮಗನ ಮುಖ ಚಿಕ್ಕದಾಯಿತು. .....ಮಾತೇ ಇಲ್ಲ. ಮರುದಿನ ತನ್ನ ತಾಯಿಯ ಹತ್ತಿರ ತನ್ನನ್ನು ಚುಚ್ಚುತ್ತಿದ್ದ ಆ ಮಾತನ್ನು ಹೇಳಿಕೊಂಡ ಮಗ ಅಂದ, " ಅಮ್ಮ, ಅಪ್ಪನಿಗೆ ನನ್ನ ಮೇಲೆ ಹೊಟ್ಟೆಕಿಚ್ಚು." ಕೇಳಿದ ಅಮ್ಮನಿಗೆ ಹುಚ್ಚುಹಿಡಿಯುವುದು ಮಾತ್ರ ಬಾಕಿ!

     ಮಗ ತನ್ನ ದೊಡ್ಡ್ಪಪ್ಪನ ಊರಿಗೆ ಹೋದವನು ಮರಳಿ ಬಂದಿದ್ದಾನೆ. ಮೊದಲಬಾರಿಗೆ ತನ್ನ ದೊಡ್ಡಪ್ಪ, ದೊಡ್ಡಮ್ಮ, ತನ್ನ ಅಣ್ಣ, ಅಕ್ಕಂದಿರನ್ನು ಭೇಟಿಯಾಗಿದ್ದಾನೆ. ( ಬುದ್ಧಿಬಂದ ನಂತರ) ಸಮಯವಲ್ಲಿ ಆನಂದದಿಂದ ಕಳೆಯಿತು ಎಂಬುದನ್ನು ಆತನ ಮುಖವು ಸಾರಿ ಸಾರಿ ಹೇಳುತಿತ್ತು. ಅಷ್ಟರಲ್ಲೇ ಅವನ ದೊಡ್ಡಮ್ಮನ ಫೋನು. ಅವನ ಅಮ್ಮನಿಗೆ ಅಭಿನಂದನೆಗಳ ಸುರಿಮಳೆ..... ಎಂತಹ ಸುಪುತ್ರನೇ ನಿನ್ನ  ಮಗ...... ಅಪ್ಪಟ ಚಿನ್ನ...... ನಡತೆಯಲ್ಲಿ ಮಾತ್ರವಲ್ಲ ಜ್ಞಾನದಲ್ಲೂ ಅವನಿಗೆ ಅವನೇ ಸರಿಸಾಟಿ.....      ಇದನ್ನು ಕೇಳಿದ ಪೋಷಕರಿಗೆ ಮಹಾನಂದವಾಗದಿರಲು ಸಾಧ್ಯವೇ. ಆದರೆ ಅವನ ತಂದೆ ಮಾತ್ರ ಕೊಕ್ಕೆ ಹಾಕಿಯೇ ಬಿಟ್ಟರು. ಅವರೆಲ್ಲ ಒಂದಿಷ್ಟು ಕೂಡಿಸಿ(ಉತ್ಪ್ರೇಕ್ಷಿಸಿ)  ಮಾತನಾಡುವವರು........ ಇವನದೇನು ಮಹಾ......!  ಕೋಚಿಂಗ್ ಕ್ಲಾಸ್ ಹೋಗದೇ, ತರಗತಿಯಲ್ಲೂ ಚೆನ್ನಾಗಿ ಕಲಿಸದೇ ಇದ್ದರೂ ತನ್ನದೇ ಬಲದಲ್ಲಿ ಸರಕಾರಿ ಸೀಟ್ ಪಡೆದು, ಇದೀಗ ತರಗತಿಯಲ್ಲಿ  ಗುರುಗಳಿಗೆ ಮಾತ್ರವಲ್ಲದೆ ತನ್ನ ಗೆಳೆಯ ಗೆಳತಿಯರಿಗೂ ನೆಚ್ಚಿನವನಾದ ಈ ಹುಡುಗ ತನ್ನ ಪೋಷಕರಿಂದ ಇಂತಹ ಮಾತನ್ನು ಕೇಳಿಸಿಕೊಂಡರೆ ಅವನ ಮನಸ್ಥಿತಿ ಏನಾಗಬಹದು!

ನನ್ನ ಗೆಳತಿಯ ಕತೆ ಕೇಳಿದ ದಿನವೇ ಕಾಕತಾಳಿಯವಾಗಿ ಈ ಲೇಖನವನ್ನು ಓದಿದೆ. ಮನಸ್ಸಿನ ಸಂಕಟ ತಡೆಯಲಾರದೆ ಹೀಗೆ ಹಂಚಿ  ಭಾರ ಇಳಿಸಿಕೊಂಡೆ!

ಸಾವು ತಂದ ಭಾವ!



ಫೇಸ್‍ಬುಕ್ ಗೆಳತಿಯೊಬ್ಬಳ ಪತಿ ಅಕಸ್ಮಾತ್ತಾಗಿ ಅಘಾತಕ್ಕೀಡಾಗಿ ಇಹ ಲೋಕವನ್ನು ತ್ಯಜಿಸಿದರು ಎಂಬ ಸುದ್ದಿ ಕೇಳಿ ಬೇಸರ ಮಾಡಿಕೊಂಡ ಸುನಿತಾ ಮಂಜುನಾಥ್ ಅವರ ಬರಹ ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವ ಈ ರೀತಿಯಾಗಿ ಹೊಮ್ಮಿತು.

ನಮ್ಮೊಳಗೇ ಇರುವ 
ಅವನಿರುವಿಕೆಯನ್ನು 
ನಾವಾಗಿ ಅರಿತರೇ ಚೆನ್ನ.
ಚದುರಂಗದ 
ಪಡೆಗಳು ನಾವು.
ಅವ ನಡೆಸಿದ 
ನಡೆಯನ್ನು ಒಪ್ಪಲೇಬೇಕು.
ಅವನ ಕರೆ ಬಂದಾಗ 
ಹೊರಡಲೇಬೇಕು.
ಕಷ್ಟವಾದರೂ ಹೊರಟವರ
ಒಮ್ಮನಸಿನಿಂದಲೇ 
ಬೀಳ್ಕೊಡಬೇಕು ಆ 
ಆತ್ಮ ಪರಮಾತ್ಮನಲಿ
ಲೀನವಾಗಲಿ 
ಎಂಬ ಹಾರೈಕೆಯಲಿ.
**************
ಸುನಿತಾ ಮಂಜುನಾಥ್ ಅವರ ಬರಹ
_________________________


ಹುಟ್ಟು ನೀಡಿ ಬಂಧಗಳಿಂದ ಬಂಧಿಸುಯಾದರೆ 
ಸಾವ ಕಳುಹಿ ಎಲ್ಲ ತೊರೆಸುವೆಯೇಕೆ ...
ಆ ಮನೆಗೆ ಹೊಸ ಬೆಳಕ ನೀಡುವಾಗ...
ಈ ಮನೆಯ ಬೆಳಕ ನಂದಿಸುವ ಆಟವೇಕೆ...
ಹುಟ್ಟಿನ ಸಿರಿಯೇಕೆ....
ಮರಣ ಮೃದಂಗವೇಕೇ....
ನಿನ್ನ ಲೀಲೆಯ ನಾ ಅರಿಯಲು 
ನೀನೀ ಆಟ ಕಟ್ಟುವೆಯಾದರೆ...
ನಾ ನಿನ್ನ ಪ್ರೀತಿಸಬೇಕೆ..
ನಿನಗೆ ಹೆದರಬೇಕೇ..
ನಿನ್ನ ದ್ವೇಷಿಸಬೇಕೇ..
ನಿನ್ನಿರುವಿಕೆಯ ಪ್ರಶ್ನಿಸಬೇಕೆ...!!!??!!!?????
______________________________

ಅನುರಾಧ ಸಾಮಗ ಅವರ ಭಾವ!
________________________________


ಸಾವಲ್ಲೇ ಗೆಲುವೆ?!
--------------
ವಾತ್ಸಲ್ಯದಡಿಯಲ್ಲಿ ಮಗುವಾಗಿ ಬೆಳೆಯುತಿದ್ದವಳಲಿ
ಪ್ರೇಮ ಮೂಡಿಸಿ ಮಗುವಾಗುಳಿದಿಲ್ಲ ಎನಿಸಿದವ
ಎಲ್ಲಿಂದಲೋ ಬಂದು ಅವನಿಲ್ಲದೇನಿಲ್ಲ ಅನಿಸಿದವ
ಹೆಸರಿಗೆ ಅಪ್ಪನದರ ಜೊತೆ ತೆಗೆದು ತನ್ನದನ್ನಿತ್ತವ
ಅಸ್ತಿತ್ವವೊಂದಾಗಿದ್ದುದು ಅಚ್ಚರಿಯೆಂಬಂತೆ 
ಜೊತೆ ಪಡೆದೂ ಒಂದಾಗುಳಿವುದ ತೋರಿಸಿದವ
ಮಡಿಲಲ್ಲಿ ತಾಯ್ತನದ ಸೊಬಗ ಅರಳಿಸಿ
ಉಡಿ ತುಂಬಿ ತವರಿಗೆ ಕಣ್ತುಂಬಿ ಕಳಿಸಿದವ 
ಕೂಸ ಕಣ್ಣಲಿ ತಮ್ಮ ಪ್ರೇಮ ಬಿಂಬಿಸಿದಾಗ
ಹೊಸತು ಕಂಡವನಂತೆ ಸಂಭ್ರಮಿಸಿ ನಕ್ಕವ
ಬೇರೇನಿಲ್ಲವೆಂಬಂತೆ ಇಬ್ಬರ ಸುತ್ತಲೇ ಗಿರಕಿಯಾಡಿ
ಪ್ರಪಂಚ ಕೈಯ್ಯೊಳಗಿದ್ದಂತೆ ಮೆರೆಯುತ್ತಿದ್ದವ..

ಹಠಾತ್ತಾಗಿ ಹೀಗೆ ಬಿಟ್ಟು ನಡೆದರೆ.....?! 
ಕಣ್ಣೀರು ಹಸುಗಂದಗೆ, ತಾಯ್ತಂದೆಗೆ ಅರಗದು
ಮುಚ್ಚಿಟ್ಟ ಒಣದುಃಖ ಹಸಿಒಡಲು ಭರಿಸದು
ತಿಂಗಳಕಾಲ ಅಗಲದೆ ಬಂದುಬಂದು ಕಾಡಿದವನ
ಹಿಂಬಾಲಿಸಿ ಹೋಗುವ ದಾರಿಯೂ ಕಾಣದು
ಕಂಗಾಲಾಗಿ ಕೂತವಳ ಕಂಡನಿಸಿತು-
"ಸಾವಿಗಂಜಲೇಬೇಕೆ........?
ಸಾವಪ್ಪಿದಲ್ಲೇ ಗೆಲುವೇ..? ಅದು ಬಳಿಸಾರಿಯೂ
ಬಿಟ್ಟುಳಿಸಿದವರ ಪಾಲಿಗೆ ಬರೀ ಸೋಲೇ ಇರುವುದೇ?!"
( ಗೆಳತಿಯ ದುಃಖದ ಗುಂಗಲ್ಲಿ ಕಣ್ಣೀರಿನ ಮೌನಸಾಂತ್ವನದ ಜೊತೆ)














21 October, 2012

ಬರೆದದ್ದು ಮಗಳು, ಕೋಡು ಮೂಡಿದ್ದು ಅಮ್ಮನಿಗೆ




ಇವತ್ತು ಪವಾಡ ನಡೆಯಿತು ಅಂತಲೇ ಹೇಳಬಹುದು....ನನ್ನ ಮಗಳು ಕವಿತೆ ಬರೆದಳು...ಅಂದರೆ ಹಿಂದೆ ಬರೆದಿಲ್ಲವೆಂದಲ್ಲ...ಎರಡು, ಮೂರು ಸಾಲಿನ ಚುಟುಕುಗಳನ್ನು ಬರೆದಿದ್ದಳಾದರೂ ಅದನ್ನು ರೂಢಿಸಿಕೊಂಡು ಹೋಗುವ ಮನಸಿರಲಿಲ್ಲ...ನಾನಂತು ಹೇಳಿ ಹೇಳಿ ಸೋತಿದ್ದೆ. ಪ್ರತಿಭಾವಂತೆಯಾದರೂ ಮನೆತನದ ಬಳುವಳಿಯಾದ ಆಲಸ್ಯ ಅವಳಿಗೆ ಸ್ವಲ್ಪ ಹೆಚ್ಚೇ ಇತ್ತು...ನೃತ್ಯ(ಚಲನ ಚಿತ್ರ) ಮತ್ತು ಸಂಗೀತ( ಆಂಗ್ಲ, ಹಿಂದಿ ಚಲನಚಿತ್ರ) ಇವೆರಡು ಬಿಟ್ಟು ಮತ್ಯಾವುದರಲ್ಲಿ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ...ಅಂತವಳು ಇಂದು ತಾನಾಗಿಯೇ ಕವನ ಬರೆದು ನನಗೆ ತೋರಿಸಿದಾಗ ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. 
ಇಲ್ಲಿದೆ ನೋಡಿ ಅವಳ ಕವನ!

Unaware of who I was,

Spending time doing things of loss.

You made the real 'me' come alive,

Bringing within me the motive, the drive.

Now I realise how stupid I was,

Giving opportunities for people to boss.

And now that you've done so much for me,

Its time for me to pay back the same to you.

Do not know the 3W's-where, when and what,

But I assure you I'll make you Proud!

20 October, 2012

ಹೇಗೆ ಸಮಾಧಾನ ಪಡಿಸಲಿ ಎಂದಷ್ಟೇ ಹೇಳು ನಿನ್ನ ದಮ್ಮಯ್ಯ!

ಇನ್ನೆಷ್ಟು ಕಾಲ  ಈ ಮೌನ ಒಲವೇ
ಹುಂ, ನಿನ್ನನೇನು ಕೇಳುವುದು...
ನಿನಗೂ ಉತ್ತರ ತಿಳಿದಿರಲಿಕ್ಕಿಲ್ಲ!
ಆದರೆ, ನಾನಿವರನ್ನು ಹೇಗೆ ಸಮಾಧಾನ ಪಡಿಸಲಿ
ಎಂದಷ್ಟೇ ಹೇಳು ನಿನ್ನ ದಮ್ಮಯ್ಯ!

ಆ ಉದಯರಾಗದ ಸ್ವರವ ಕೇಳದ ಹೊರತು
ತಮ್ಮ ನಿತ್ಯಕಾಯಕ ಮಾಡಲಾರೆವು ಅನ್ನುವ
ನನ್ನ ಕಿವಿಗಳನ್ನು ಹೇಗೆ ಸಂತೈಸಲಿ!

ನಿನ್ನ ಸ್ವರಲಯಕ್ಕೆ ತನ್ನ ತಾಳ
ಕೂಡಿಸುತ್ತಿದ್ದ ನನ್ನ ಹೃದಯದ
ಗತಿ ಮರಳಿ ಹೇಗೆ  ಪಡೆಯಲಿ!

ನಿನ್ನೊಡನೆ ಸಂಭಾಷಿಸದ ಹೊರತು
ರುಚಿಯನ್ನು ಮರಳಿಸಲಾರೆ ಅನ್ನುವ 
ಈ ನಾಲಿಗೆಗೆ ಹೇಗೆ ತಿಳಿ ಹೇಳಲಿ!

ಸ್ವರ ಮಾಧುರ್ಯವ ಭುಂಜಿಸದ ಹೊರತು
ಜೀರ್ಣಶಕ್ತಿಯ ಮರಳಿಸಲಾರೆನೆಂದು ಪಣತೊಟ್ಟಿರುವ
ಜಠರಾಗ್ನಿಗೆ ಏನೆಂದು ಜವಾಬು ಕೊಡಲಿ!

ತಮ್ಮ ನಿತ್ಯ ಕಾಯಕವ ಮರೆತು,
ಸತ್ಯಾಗ್ರಹ ಮಾಡುತ್ತಿರುವ ಅಂಗಗಳಿಗೆ
ಉತ್ತರವನ್ನಿತ್ತು ಬಿಕ್ಕಟ್ಟಿನಿಂದ ಪಾರುಗಾಣಿಸು 
ದಯವಿಟ್ಟು ನಿನ್ನ ದಮ್ಮಯ್ಯ!


17 October, 2012

ಅವಳು, ಅವನು ಮತ್ತು ಇವಳು!


ನಾಲ್ಕು ದಿನದ 
ಸವಾರಿಯೆಂದೆಣಿಸಿ,
ಕನಿಕರ ತೋರಿ 
ಅವಳನು ತೆರೆದ 
ಬಾಹುಗಳಿಂದಲೇ 
ಸ್ವಾಗತಿಸಿದನವನು.

ಮಾಯಾಂಗನೆಯ 
ದೂರವಟ್ಟಲು
ಹೇಳಿದೋಪಾಯವನ್ನೆಲ್ಲಾ
ಗಾಳಿಗೆ ತೂರಿದನವನು.

ಇದೀಗ ಉಸಿರುಗಟ್ಟುವಂತಿರುವ 
ಆ ಪ್ರೀತಿಯ
ಬಲೆಯಿಂದ ಹೊರಬರಲು
ಚಡಪಡಿಸುತ್ತಿರುವನವನು.

ನೋಡಿ, ಪರಿತಪಿಸುವುದ
ಹೊರತು ಮತ್ತೇನು
ಮಾಡಬಲ್ಲಳು ಇವಳು!

___________________________

ಅವನು ಇವಳಿಗೆ ಹೀಗೆ ಉತ್ತರ ನೀಡಿರಬಹುದು....


ಕಾಡುತ್ತಿದ್ದಳು ನನ್ನನ್ನು  ನಿನ್ನಕ್ಕ
ಮಾಡಿಬಿಟ್ಟು ನನ್ನ ನಾಲಾಯಕ್ಕ

ಓಡಿಸಿದ್ದೇನೆ ನೋಡು ನಾ ಒದ್ದು
ಒಮ್ಮೆಗೇ ಓಡಿದ್ದಾಳೆ ಬಿದ್ದು ಎದ್ದು

12 October, 2012

ಜೀವದ್ರವ್ಯ ಬತ್ತಿಹೋದ ಮರವೊಂದು ಬಳ್ಳಿಗಾಸರೆಯಾದ ಭಾವಚಿತ್ರಕ್ಕೆ ಆಸುಮನದ ಕಾವ್ಯಸ್ಪಂದನ!





ಅಂದು ಹಸಿರು, ಎಂಥ ವೈಭವ 
ದೃಷ್ಟಿ ಬೀಳುವ ತೆರದಲಿ 
ಸುಮಂಗಲಿಯಾ ಸಿರಿಯ ವೈಖರಿ 
ಮಾಸಿ ವಿಧವೆಯು ಆಗಿದೆ 

ಸುತ್ತ ಮುತ್ತಲು ಹತ್ತು ಮರಗಳು 
ಹಸಿರನುಟ್ಟು ಕುಣಿಯಲು 
ಇದ್ದ ಊರಿನ ಪರಿವೆಯಿಲ್ಲದೆ 
ಸ್ಥಬ್ಧಳಾಗಿ ನಿಂತಿದೆ 

ಅಂದು ಹಕ್ಕಿಯ ಬಳಗಕೆಲ್ಲ 
ಆಯಿತದುವು ಆಲಯ 
ಇಂದು ಎಲ್ಲವ ಕಳೆದುಕೊಂಡರೂ 
ಮನದಿ ಇಹುದು ಆಶಯ 

ಏನೇ ಆದರೂ, ಎಷ್ಟು ಸೋತರೂ 
ಧೈರ್ಯಗೆಡದೇ ನಿಂತಿದೆ 
ಅಂತ್ಯ ಕಾಲದಲ್ಲಿ ಕೂಡ 
ಬಳ್ಳಿಗಾಸರೆ ನೀಡಿದೆ

- ಮತ್ತೊಂದು ಸೂಪರ್ ಕವನ ಪರೇಶ್ ಸರಾಫ್‍ನವರಿಂದ!

 ಅಲ್ಲದೆ, ಉಷಾಕಟ್ಟೆಮನೆಯವರು, ಶ್ರೀವತ್ಸ ಕಂಚಿಮನೆಯವರು, ನನ್ನ ಭಾವನ ಮಗ ಅನುಜ್ ನಾಯಕ್, ಜಲಚರ ಬ್ಲಾಗಿನ ಆಝಾದ್ ಅಣ್ಣ, ನನ್ನ ತಮ್ಮ ಕಿರಣ್, ಗೋಪಾಲಕೃಷ್ಣ ಪ್ರಭು ಮತ್ತು ನನ್ನ ಮಗಳು ಮನಿಷಾ ಶೀರ್ಷಿಕೆಗಳನ್ನು ನೀಡಿದ್ದಾರೆ....



Azad IS :ತಾತ್ಕಾಲಿಕವಿದು ಒಣಗಿರುವೆನೆಂದು ಕಡಿಯಬೇಡಿ... ಆದರೂ ನಾನಾಗಿಲ್ಲವೇ ಹಸಿರುಲತೆಗೆ ಜೋಡಿ

Anuj Nayak :'THERE WILL ALWAYS BE HOPE EVEN IN THE SMALLEST THINGS IN THE WORLD'


Manisha Nayak K: You are never too weak to support others


Gopalkrishna Prabhu :Akin to moulting !

Usha Kattemane: ನೀನೊಲಿದರೆ ಕೊರಡು ಕೊನರುವುದಯ್ಯಾ..

Shrivatsa Kanchimane :ಜೀವದ್ರವ್ಯ ಬತ್ತಿದ ಮೇಲೂ ಲತೆಗೆ ಆಸರೆಯಾಗುವ ಒಣಮರದ ನಿಸ್ವಾರ್ಥ ಒಲವು ನನ್ನಲ್ಲೂ ಒಂದಿಷ್ಟು ಒಸರಿದ್ದರೆ......



ನಾಲ್ಕು ತಿಂಗಳ ಹಿಂದೆ ಬೇಸಿಗೆ ಶಿಬಿರಕ್ಕೆ ಭಾಗವಹಿಸಲು ಗಾಂಧಿನಗರದ ಕಡೆಗೆ ಹೋಗುತ್ತಿದ್ದಾಗ ಈ ಒಣಮರ ನನ್ನನ್ನು ಸೆಳೆದಿತ್ತು....ಆಗಲೇ ಆ ಹಸಿರು ಬಳ್ಳಿ ಮರದ ಕಡೆ ಪಯಣ ಬೆಳೆಸಿತ್ತು....ಆ ಸಮಯದಲ್ಲಿ ಛಾಯಾಚಿತ್ರ ತೆಗೆಯಲು ಅಷ್ಟೊಂದು ಧೈರ್ಯವಿರಲಿಲ್ಲ...ಆದರೆ ಮೊನ್ನೆ ಅಲ್ಲಿ ಹೋಗುವ ಕೆಲಸವಿದ್ದ ಕಾರಣ ಕ್ಯಾಮರಾ ತೆಗೆದುಕೊಂಡು ಹೋದೆ ಮತ್ತು ನನ್ನ ಗಣಕಯಂತ್ರದಲ್ಲಿ ಬಂಧಿಸಿಬಿಟ್ಟೆ...

    

Dragonfly through my wonder eye!




11 October, 2012

ಸೋತೆನೇ ನಿನ್ನಾಟಕ್ಕೆ ಪಾತರಗಿತ್ತಿ!


Life is not a matter of milestones but of moments! ಬದುಕಿನ ಸುಂದರ ಕ್ಷಣಗಳು!

















             Life is not a matter of milestones but of moments! - ಬದುಕಿನ ಕೆಲವು ಅಮೂಲ್ಯ ಕ್ಷಣಗಳನ್ನು ಸೆರೆ ಹಿಡಿದು ಅದನ್ನು ವರುಷಗಳ ನಂತರವೂ ನೋಡಿ ಮತ್ತೆ ಆ ಕ್ಷಣಗಳಲ್ಲಿ ಜೀವಿಸುವುದು ನನ್ನ ಪ್ರೀತಿಯ ಹವ್ಯಾಸ. ೩ ವರುಷಗಳ ಹಿಂದೆ ಈ ಬುಲ್‍ಬುಲ್ ಹಕ್ಕಿಗಳ ಜೋಡಿ ಸುಮಾರು ದಿನ ನಮ್ಮ ಅಂಗಳದಲ್ಲೇ ಠಿಕಾಣಿ ಹೂಡಿದ್ದವು...ಅವುಗಳ ಸ್ವಲ್ಪ ಸಮಯದ ಒಡನಾಟ ನನ್ನಲ್ಲಿ ಹೊಸ ಚೇತನವನ್ನು ಹುಟ್ಟು ಹಾಕಿತು. ಆವಾಗ ನಮ್ಮ ಕ್ಯಾಮರಾ ಅಷ್ಟೊಂದು ಒಳ್ಳೆಯದಿರಲಿಲ್ಲ..ಹಾಗಾಗಿ  ಚಿತ್ರಗಳ ಗುಣಮಟ್ಟ ಅಷ್ಟು ಚೆನ್ನಾಗಿಲ್ಲ. ಪ್ರಕೃತಿಯನ್ನು ಒಂದಿಷ್ಟೆ ಅರಿಯಲು ನೋಡಿದರೂ ಸಾಕು ಜೀವನ ಪ್ರ‍ಿತಿ ಉಳಿಯುವುದು, ಮತ್ತಿಷ್ಟು ಉಕ್ಕಿ ಹರಿಯುವುದು! ( ಬೇಸರದ ವಿಷಯವೆಂದರೆ ಮತ್ತೆ ಅವುಗಳು ನಮ್ಮಲ್ಲಿ ತಮ್ಮರಮನೆಯನ್ನು ಕಟ್ಟಲೇ ಇಲ್ಲ. ಅಲ್ಲದೇ, ಬಹುಶಃ ಹೆಣ್ಣು ಬುಲ್‍ಬುಲ್‍ಗೆ ಈ ಗೂಡು ಹಿಡಿಸಲಿಲ್ಲ..ಹಾಗಾಗಿ ಇದರಲ್ಲಿ ಮೊಟ್ಟೆ ಇಡಲೇ ಇಲ್ಲ...ನಾನು ಮನದಲ್ಲೇ ಗಂಡು ಬುಲ್‍ಬುಲ್‍ಗೆ  ಅದರ ಆಲಸ್ಯಕ್ಕೆ ಬಹಳಷ್ಟು ಶಾಪ ಹಾಕಿದೆ. ಆ ಗೂಡು ಗಟ್ಟಿಯಿರಲಿಲ್ಲ..ಹಕ್ಕಿಗಳ ದಾಷ್ಟ್ರತನ ನಮ್ಮ ಹೆಣ್ಣು ಮಕ್ಕಳಿಗೂ ಇದ್ದಿದ್ದರೆ ಅಂತ ಅನಿಸಿದ್ದು ಸುಳ್ಳಲ್ಲ!)

10 October, 2012

ಅಮ್ಮ, ಗಾಂಧಿ ಮತ್ತು ನಾನು!



              ಹುಂ, ವಿಚಿತ್ರವಾದರೂ ಇದು ನಿಜ. ನನ್ನ ಬದುಕಿನಲ್ಲಿ ಗಾಂಧಿ ಮತ್ತು ಅಮ್ಮನ ಪ್ರಭಾವ ಹೆಚ್ಚು ಇದೆ. ಬದುಕಿನ ಮಹತ್ವದ ನಿರ್ಣಯಗಳಲ್ಲಿ ಗಣನೀಯ ಪಾತ್ರ ವಹಿಸಿದ್ದಾರೆ ಇಬ್ಬರೂ.

     ನನ್ನ ಅಮ್ಮ ತಮ್ಮಮ್ಮನ ಹೊಕ್ಕುಳ ಗಂಟನ್ನು ಬಿಡಿಸಿ ಮುಂಡ್ಕೂರಿನ ಮಣ್ಣಲ್ಲಿ ಬಿದ್ದು ಅಳುತ್ತಾ ತಮ್ಮ ಅಸ್ತಿತ್ವವನ್ನು ಪ್ರಕಟ ಪಡಿಸಿದ್ದು ಭಾರತೀಯರಿಗೆ ಕರಾಳ ದಿನವಾದ ಜನವರಿ ೩೦ರಂದೇ.. ಅತ್ತ ಗಾಂಧಿಯವರ ಹತ್ಯೆ, ಇತ್ತ ನಾಲ್ಕು ಅಣ್ಣಂದಿರ  ಹಿಂದೆ ಅವರೆಲ್ಲರ ಹಾಗೆ ಬಿಳಿ  ಬಣ್ಣ ಹೊತ್ತಿರದ ನಸುಕಪ್ಪು ಹೆಣ್ಣು ಮಗುವಿನ ಜನನ.  ಆ ಹೊತ್ತಿನಲ್ಲಿ ಗಾಂಧಿಯ ಪರಮ ಭಕ್ತ ನನ್ನ ಅಜ್ಜನ reaction ಹೇಗಿತ್ತು ಎಂಬ ನನ್ನ ಕುತೂಹಲಕ್ಕೆ ಉತ್ತರ ಇಂದೂ ಸಿಕ್ಕಿಲ್ಲ. ಆದರೆ ಈ ಹೆಣ್ಣು ಮಗು ಮಾತ್ರ ಸ್ವಭಾವದಲ್ಲಿ ಗಾಂಧೀಜಿಯವರನ್ನು ಹೋಲುತ್ತಿತ್ತು ಅಂದರೆ ಉತ್ಪ್ರೇಕ್ಷೆಯಲ್ಲ... ಪ್ರತ್ಯಕದರ್ಶಿಯಾದ ನಾನೇ ಅದಕ್ಕೆ ಸಾಕ್ಷಿ. ಅವರ ಸ್ವಭಾವದ ಅನುಭವಿಗಳು ನಾನು ಮತ್ತು ನನ್ನ ತಮ್ಮಂದಿರು.

      ಗಾಂಧಿಯವರ ಕತೆಗಳನ್ನು ( ಅವರು ಸ್ವಾತಂತ್ರ್ಯಕ್ಕಾಗಿ ದುಡಿದ ಕತೆಗಳನ್ನು) ರೋಚಕವಾಗಿ ನಮಗೆ ಹೇಳುತ್ತಿದ್ದರು... ಹೇಳುತ್ತಿರುವಾಗ ತುಂಬಾ ಭಾವುಕರಾಗುತ್ತಿದ್ದರು... ನಮ್ಮನ್ನೂ ಭಾವುಕರನ್ನಾಗಿ ಮಾಡುತ್ತಿದ್ದರು..
 ಬಹುಶಃ ನಾನು ಆವಾಗ ಎರಡನೆಯ ಅಥವಾ ಮೂರನೆಯ ತರಗತಿ ಇರಬೇಕು... ನನ್ನ ಟೀಚರ್ ಒಪ್ಪಿಗೆ ತೆಗೆದುಕೊಂಡು ನಾನು ಸ್ವಾತಂತ್ರೋತ್ಸವದ ಸಮಯದಲ್ಲಿ ಅಮ್ಮ ಬರೆದುಕೊಟ್ಟ ಭಾಷಣವನ್ನು ಭಾವಾವೇಷ  ವೀರಾವೇಷದಿಂದ ಮಾತನಾಡಿದೆ. ಅದರ ನಂತರ ಪ್ರತಿ ವರ್ಷ ಇಂತಹ ಕಾರ್ಯಕ್ರಮದಲ್ಲಿ ನನ್ನ ಭಾಷಣ ಖಾಯಂ ಆಯಿತು. ಅಲ್ಲದೆ ನನ್ನ ಭಾಷಣ ನಾನೇ ಬರೆಯಲೂ ಪ್ರಾರಂಭಿಸಿದೆ. ಗುರುಗಳ ಪ್ರೋತ್ಸಾಹ ಧಾರಾಳವಾಗಿ ದೊರಕ್ಕಿತ್ತು. ಅಮ್ಮನ ಹಾಗೆ ಗಾಂಧಿಜಿಯ ಪರಮ ಭಕ್ತಳೂ ಆಗಿಬಿಟ್ಟೆ. ನನ್ನ ಓದಿನ ಪರಧಿ ಬೆಳೆದ ಹಾಗೆ ಗಾಂಧಿ, ನೆಹರು ಅಂತೆಯೇ ಉಳಿದ ಮಹನೀಯರ ಬಗ್ಗೆ ನಿಧಾನವಾಗಿ ನನ್ನದೇ ಅಭಿಪ್ರಾಯವೂ ಮೂಡಲು ಪ್ರಾರಂಭವಾಯಿತು.

 ನಮ್ಮ ಮನೆಯಲ್ಲಿ ಸಂಜೆ ಭಜನೆ ನಿತ್ಯವೂ ನಡೆಯುತ್ತಿತ್ತು.. (ಈಗಲೂ)  ಟಿ. ವಿಯ ಕಾಟವಿರದಿದ್ದ ಕಾರಣವೇನೋ ಎಲ್ಲಾ  ಮಕ್ಕಳ ಹಾಜರಿ ಇರುತ್ತಿತ್ತು. ಮಂಗಳಾರತಿ ಆದಮೇಲೂ ಗಾಳಿಂಗ ಲೋಟಾಂಗಣ...ಹೀಗೆ ಸುಮಾರು ಪದ್ಯ ಶ್ಲೋಕಗಳಾದ ಮೇಲೆ ಕೊನೆಯ ಹಂತಕ್ಕೆ ಬರುವಾಗ ಜೈಕಾರಗಳು..ನಮ್ಮೂರಿನ ದೇವರು, ಕುಲದೇವತೆ, ಸ್ವಾಮಿಗಳು, ಭಕ್ತರು.. ( ಈಗಲೂ ನನ್ನ ನಾಲಿಗೆ ತುದಿಯಲ್ಲೇ ಇದೆ... ಎಲ್ಲಾ ಹೆಸರುಗಳು) ಭಾರತ ಮಾತಾ ಕಿ ಜೈ, ಮಹಾತ್ಮಾ ಗಾಂಧಿಕಿ ಜೈ, ಪಂಡಿತ್ ನೆಹರೂ ಕಿ ಜೈ... ಕೊನೆಯ ಜೈಕಾರ...ಮೊದಲೆಲ್ಲಾ ವಿನಯದಿಂದ ಜೈಕಾರ ಹಾಕುತ್ತಿದ್ದ ನಾವುಗಳು ನಮ್ಮ ಓದು ಕೊಟ್ಟ ವಿಚಾರದಿಂದ ನೆಹರೂಗೆ ಜೈಕಾರ  ಹಾಕುವುದಕ್ಕೆ ಪ್ರತಿಭಟಿಸಿದೆವು... ಅಮ್ಮನಿಗೆ ನಮ್ಮ ಕಾರಣಗಳನ್ನೂ ಕೊಟ್ಟೆವು. ಹುಂ, ಅಮ್ಮ ತನ್ನ ನಿಲುವನ್ನು ಈ ವಿಷಯದಲ್ಲಿ ಬದಲಿಸಿಲ್ಲ...( ಇತ್ತೀಚೆಗೆ ಒಂಚೂರು ಬದಲಾವಣೆಯ ಗಾಳಿ ಬೀಸಿದೆ ಅಂತ ನನ್ನ ಅನುಮಾನ).
   


        ಸರಿ, ಈಗ ಪೀಠಿಕೆ ಮುಗಿಯಿತು... ಮೊದಲಾಗಿ ಗಾಂಧಿಯವರ ಪ್ರತಿಬಿಂಬ ನನ್ನ ಅಮ್ಮನಲ್ಲಿ ನಾನು ಕಂಡದ್ದು ಅಮ್ಮ ತನ್ನ ಅಣ್ಣ, ಮತ್ತು ತನ್ನ ನಾದಿನಿಯರ ಮಕ್ಕಳು, ಅತ್ತೆ, ಮಾವ, ಮತ್ತು ಕುಟುಂಬಕ್ಕೆ ತನ್ನ ಸಮಯವನೆಲ್ಲಾ ಮೀಸಲಿಟ್ಟಾಗ. ಬಿಲ್‍ಕುಲ್ ಅಂದುಕೊಳ್ಳಬೇಡಿ.. ನನಗೆ ಹೊಟ್ಟೆಕಿಚ್ಚು ಇತ್ತು ಅಂತ.. ಖಂಡಿತ ಅಮ್ಮನ ಎಲ್ಲಾ ಕೆಲಸಗಳಿಗೆ ನಮ್ಮ ಸಹಕಾರ ಯಾವಾಗಲೂ ಇರುತಿತ್ತು.  ಆದರೆ ಖಂಡಿತ ಹಲವು ಸಾರಿ ಅಮ್ಮನ ಜೊತೆ ಬೇಕೆಂದಾಗ ಅವರಿಗೆ ನಮಗೆ ಸಮಯ ಕೊಡಲಾಗುತ್ತಿರಲಿಲ್ಲ... ಬಹಳ ಬೇಸರವಾಗುತ್ತಿತ್ತು. ಗಾಂಧಿಯವರೂ  ತಮ್ಮ ಮಕ್ಕಳಿಗೆ ಸಮಯ ನೀಡಿರಲಿಲ್ಲ... ಹರಿಲಾಲರ ಬಗ್ಗೆ ಓದಿದಾಗ  ಜೀವ ತುಂಬಾ ಚುರುಗುಟ್ಟಿತ್ತು... ಇದು ನನ್ನ ಜೀವನದ ಮಹತ್ವ ನಿರ್ಧಾರಕ್ಕೆ ಕಾರಣವಾಯಿತು...೧೨ನೇ ವಯಸ್ಸಿಗೆ ನನ್ನ ಭವಿಷ್ಯದ ಪತಿ ಅಥವಾ ಜೀವನದ ಬಗ್ಗೆ ಕನಸಿರಲಿಲ್ಲ.. ಆದರೆ ಮಕ್ಕಳ ಬಗ್ಗೆ ಕನಸು ಕಾಣಲಾರಂಭಿಸಿದೆ.. ನನ್ನ ಮಕ್ಕಳು ತಮ್ಮ ಕಾಲಿನಲ್ಲಿ ನಿಲ್ಲುವ ತನಕ ನನ್ನ ಸಮಯ ಅವರಿಗೇ ಮೀಸಲು ಎಂಬ ನಿರ್ಧಾರವನ್ನು ಆಗಲೇ ತೆಗೆದುಕೊಂಡೆ. ಅಲ್ಲದೆ ಹಾಗೆ ನಡೆದುಕೊಂಡೆ.  ಇಲ್ಲಿ ಒಂದು ಮಾತು - ನನ್ನ ಮಕ್ಕಳು ಅಂದರೆ ಇಲ್ಲಿ ಬರೇ ಸ್ವಾರ್ಥ ಅಥವಾ ಮೋಹದ ನಿರ್ಧಾರವಲ್ಲ.. ಮಕ್ಕಳಲ್ಲಿ ನಮ್ಮ ಮುಂದಿನ ಭವಿಷ್ಯ ಅಡಗಿದೆ.. ಮಕ್ಕಳಿಗೆ ಸರಿಯಾದ ದಾರಿ ತೋರಿದರೆ ಅವರ ಬಾಳು ಉಜ್ವಲವಾಗುವುದು.. ಜೊತೆಗೆ ದೇಶವೂ ಪ್ರಗತಿಯನ್ನು ಹೊಂದುವುದು. ಪ್ರಗತಿಯ ಅರ್ಥ ಶೀಮಂತವಾಗುವುದಲ್ಲ... ಸನ್ನಡತೆ, ಮಾನವೀಯತೆಯ  ತೋರುವುದು.  

      ಎಷ್ಟೊ ಸಲ ಅನಿಸುತ್ತಿತ್ತು.. ಗಾಂಧಿಯವರು ತಮ್ಮ ಮಕ್ಕಳ ಅಭಿವೃದ್ಧಿಗೂ ಗಮನವಿತ್ತಿದ್ದರೆ, ನೆಹರೂರವರ ಎಲ್ಲಾ ಮಾತಿಗೆ ಹೂಂಕಾರ ಹಾಕಿರದಿದ್ದರೆ, ಹಿತ್ತಾಳೆ ಕಿವಿಯವರಾಗಿರುತ್ತಿದ್ದರೆ.. ಒಂದು ಕಾಲದಲ್ಲಿ ಉನ್ನತ ಸಾಂಸ್ಕೃತಿಕ ನೆಲೆಯಾಗಿದ್ದ ಭಾರತ ಮತ್ತೊಮ್ಮೆ ಗತಕಾಲದ ವೈಭವದಲ್ಲಿ ಮೆರೆಯುತ್ತಿತ್ತೇನೋ ಅಂತ... ಹುಂ, ಲೂಟಿಯಾದ ಮೇಲೆ ದ್ವಾರ ಮುಚ್ಚಿ ಏನು ಪ್ರಯೋಜನ!

       ಇಂದು ನನ್ನ ಮಕ್ಕಳು ಬೆಳೆದಿದ್ದಾರೆ... ವಯಸ್ಸಿನಲ್ಲೂ. ಗುಣದಲ್ಲೂ... ನನ್ನ ಕಲೆ, ಓದು, ಹತ್ತು ಹಲವು ಆಸಕ್ತಿ ಎಲ್ಲವನ್ನೂ ಮರೆತು ಮಕ್ಕಳಿಗಾಗಿ ಸಮಯವನ್ನೆಲ್ಲಾ ಮೀಸಲಿಟ್ಟೆ. ಅವರ ಬೌಧಿಕ  ಬೆಳವಣಿಗೆ ನನ್ನ ಮುಖ್ಯ ಗುರಿಯಾಗಿತ್ತು.  ಜೀವನದ ಎಲ್ಲಾ ಮಗ್ಗುಲನ್ನು ನಿಧಾನವಾಗಿ ಅವರ ಎದುರಿಗೆ ಬಿಡಿಸುತ್ತಾ ಬಂದೆ.  ಬದುಕಿನಲ್ಲಿ ಸಮುದ್ರದ ಅಲೆಗಳ ಹಾಗೆ ಚಿಕ್ಕ, ದೊಡ್ಡ ಸಮಸ್ಯೆಗಳು ಬಂದೇ ಬರುತ್ತವೆ.. ನಾವು ಅವುಗಳನ್ನು ಹೇಗೆ ಎದುರಿಸುತ್ತೆವೋ ಅದು ಮುಖ್ಯ....ಮುಖ್ಯವಾಗಿ ನಮ್ಮ ಮನೆತನದ ಕೊಡುಗೆಯಾದ ಕೋಪ, ಅಹಂ...ಇವೆರಡೂ ನಮ್ಮನ್ನು ಕುರುಡ ಹಾಗೂ ಕಿವುಡರನ್ನಾಗಿ ಮಾಡುತ್ತವೆ...ಅಲ್ಲದೆ ನಮ್ಮನ್ನೆಲ್ಲಾ ಸೃಷ್ಟಿಸಿದ ಆ ಪರಮಾತ್ಮನ ಸೂತ್ರದ ಬೊಂಬೆಗಳು ನಾವು..ಅವನ ಇಚ್ಛೆಯಿಲ್ಲದೆ ಏನನ್ನೂ ಮಾಡಲು ಶಕ್ತರಾಗುವುದಿಲ್ಲ..ಅದೇ ಅವನ ಕೃಪೆಯೊಂದಿದ್ದರೆ ಮೂಕನೂ ವಾಚಾಳಿಯಾಗಬಲ್ಲ..ಹೆವಳನೂ ಬೆಟ್ಟವನ್ನೇರಬಲ್ಲ..ನನ್ನ ನಂಬಿಕೆಯನ್ನು ಅವರಲ್ಲಿ ಬಿತ್ತಿದೆನು...ಕ್ಷಣ ಕ್ಶಣದಲ್ಲೂ ರಾಮನನ್ನು ನೆನೆಯಿರಿ..ರಾಮನಾಮವಿರುವ ಕಡೆ ಹನುಮನು ಇರುವನು...ಅವನಿದ್ದ ಮೇಲೆ ಮತ್ತಾವುದರ ಭಯವಿಲ್ಲ....

          ನಿಧಾನವಾಗಿ ನನ್ನ ಭಾರವನ್ನು ಕಳಚುತ್ತಾ ಬರುತ್ತಿದ್ದೇನೆ...ಮತ್ತು ನನ್ನ ಹವ್ಯಾಸಗಳನ್ನು  ಮತ್ತೆ ಕೈಗೆತ್ತಿಕೊಂಡಿದ್ದೇನೆ..ಮಕ್ಕಳ ವಿದ್ಯಾಭ್ಯಾಸ ಮುಗಿಯುವ ತನಕ ನಾನು ದುಡಿಯಬೇಕಾಗುತ್ತದೆ...ಅದರ ಜೊತೆ ಹವ್ಯಾಸಗಳನ್ನು ಮುಂದುವರಿಸುವುದು ಕಷ್ಟ ಸಾಧ್ಯವೇ ಸರಿ..ಆದರೂ ಛಲವಾದಿ ನಾನು..ಜೊತೆಗೆ ಅವನ ಬೆಂಬಲವೂ ಇದೆ..ಮತ್ತೇಕೆ ಭಯ!


    ಮುಗಿಸುವ ಮೊದಲು ಅಮ್ಮನ ಬಗ್ಗೆ ಒಂದಿಷ್ಟು ಮಾತು-  ನನ್ನ ಅಮ್ಮ ನನ್ನ ಮೊದಲ ಆಧ್ಯಾತ್ಮಿಕ ಗುರು.  ಗಾಂಧಿಯವರಷ್ಟು  ಮಕ್ಕಳನ್ನು ಕಡೆಗಣಿಸಿರಲಿಲ್ಲ್ಲ..ತಮ್ಮ ಸುತ್ತಲು ಹಬ್ಬುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸುವಷ್ಟು ತಾಕತ್ತೂ ಇರಲಿಲ್ಲ.. ಗಾಂಧಿಯವರ ಹಾಗೆ ಸರಳ ಜೀವನ ನಡೆಸಿದರು...ಅಂದೂ ಇಂದೂ ತಾವು ನಂಬಿದ ತತ್ವವನ್ನು ಬಿಡಲಿಲ್ಲ...ಮಾನಸಿಕ ಕ್ಷೋಭೆಗೂ ಒಳಗಾದರು..ಅವರನ್ನು ಮತ್ತೆ ಮುಂಚಿನಂತೆ ಮಾಡಲು ನನ್ನದೇ ಆದ ತಂತ್ರಗಳನ್ನು ಪ್ರಯೋಗಿಸಿದ್ದೇನೆ... ಸಫಲಳೂ ಆಗಿದ್ದೇನೆ.
         

05 October, 2012

ಪಾತರಗಿತ್ತಿ!

ಕ್ಷಣವೂ ವಿರಮಿಸದೇ 
ಕುಸುಮದಿಂದ ಕುಸುಮಕ್ಕೆ 
ಹಾರಾಡುತ್ತ, ನಲಿದಾಡುತ್ತ
ನನ್ನನಣಕಿಸುತ್ತಾ ಮೆರೆಯುತಿಹೆಯಲ್ಲಾ,
ಓ ಪಾತರಗಿತ್ತಿಯೇ
ಹಿಡಿದೇ ಬಿಟ್ಟೆ ಕಣೇ
ನನ್ನೀಯಂತ್ರದಲಿ ನಿನ್ನ
ಬಂಧಿಸಿದೆ ಕಣೇ!


01 October, 2012

ಫೋವ ಚಟ್ನಿ ಅನಿ ಬಟಾಣಿ (ಅವಲಕ್ಕಿ ಮತ್ತು ಬಟಾಣಿ)


ಫೋವ ಚಟ್ನಿ ಅನಿ ಬಟಾಣಿ (ಅವಲಕ್ಕಿ ಮತ್ತು ಬಟಾಣಿ)
  
     ವಾರದಲ್ಲಿ ಹೆಚ್ಚು ಕಡಿಮೆ ಪ್ರತಿ ಮಂಗಳವಾರ ಬಟಾಣಿ ಮತ್ತು ಶುಕ್ರವಾರ ಕಡಲೆ..ಇದು  ನಮ್ಮ ಕಾಲದ ಕೊಂಕಣಿಯ ಮನೆಯವರ ಮೆನುವಾಗಿರುತ್ತಿತ್ತು. ಈ ರೀತಿಯ ಅವಲಕ್ಕಿ ತಯಾರಿಸುವುದು ನಾಲಗೆಯ ರುಚಿಗೂ, ಆರೋಗ್ಯಕ್ಕೂ ಸರಿಹೋಗುತ್ತೆ. ಬಹುಶಃ ಸಂಪ್ರದಾಯಸ್ತರ ಮನೆಯಲ್ಲಿ ಬೆಳೆದ ಕಾರಣವೇನೋ ಈಗಲೂ ನನಗೆ ಅದೇ ರೂಢಿಯಾಗಿಬಿಟ್ಟಿದೆ. ನನ್ನ ಮನೆಯಲ್ಲೂ ಅಂತಹ ತಿಂಡಿಗಳಿಗೆ ಹೆಚ್ಚಿನ ಅಭ್ಯಂತರವಿರುವುದಿಲ್ಲ. ಅದರಲ್ಲೂ ಅವಲಕ್ಕಿಯ ಜೊತೆಗೆ ಹಸಿರು ಬಟಾಣಿಯ ಉಪ್ಕರಿ ಮಾಡಿದರೆ ಆ ದಿನ ನನ್ನ ಮಗ ಒಂಚೂರು ಹೆಚ್ಚೇ ತಿನ್ತಾನೆ.  ನನಗಂತೂ ಆ ಒದ್ದೆ ಮಾಡಿ ತಯಾರಿಸುವ ಅವಲಕ್ಕಿ ಅಷ್ಟು ಹಿಡಿಸುವುದಿಲ್ಲ. ಅಲ್ಲದೆ ಇದು ಖಾರ ಸಿಹಿ ಎರಡು ಸಮಮಿಶ್ರಿತವಾಗಿದ್ದು ಆರೋಗ್ಯಕ್ಕೋ ಒಳ್ಳೆಯದೇ ಆದುದರಿಂದ ಸಾಧಾರಣವಾಗಿ ೧೫ ದಿನಕ್ಕೊಮ್ಮೆ ನನ್ನ ಮೆನುವಿನಲ್ಲಿ ತನ್ನ ಸರದಿಯಲ್ಲಿ ಬರುತ್ತಿರುತ್ತದೆ.

ಫೋವ ಚಟ್ನಿ:
೧. ಅರ್ಧ ತೆಂಗಿನ ಕಾಯಿ ತುರಿ
೨. ೧ ದೊಡ್ಡ ಚಮಚ ಕೊತ್ತಂಬರಿ
೩.  ದೊಡ್ಡ ಚಮಚ ಜೀರಿಗೆ
೪. ೨ ಕೆಂಪು ಮೆಣಸು( ಹುರಿದದ್ದು)
೫. ೩೦ಗ್ರಾಮಿನಷ್ಟು ಬೆಲ್ಲ
೬. ರುಚಿಗೆ ತಕ್ಕಷ್ಟು ಉಪ್ಪು
೭. ಅವಲಕ್ಕಿ
೮. ಕಾಲು ಚಮಚದಷ್ಟು ಹುಣಸೆಕಾಯಿ

ಮೊದಲಿಗೆ ಜೀರಿಗೆ, ಕೊತ್ತಂಬರಿ, ಮೆಣಸು  ಮತ್ತು ಹುಣಸೆ ಹಾಕಿ ಮಿಕ್ಸಿಯಲ್ಲಿ ತರಾತುರಿಯಾಗಿ ರುಬ್ಬಿ. ೨,೩ ಸುತ್ತು ತುರುಗಿದರೆ ಸಾಕು..ತುಂಬಾ ನಯವಾಗಬಾರದು.  ಬೆಲ್ಲವನ್ನು ಚೆನ್ನಾಗಿ ಗುದ್ದಿ ಈ ಕೊತ್ತಂಬರಿ ಜೀರಿಗೆ ಹುಡಿಯಲ್ಲಿ ಬೆರೆಸಿ. ನಂತರ ತೆಂಗಿನ ತುರಿಯನ್ನು ಚೆನ್ನಾಗಿ ಬೆರಸಿ. ರುಚಿ ನೋಡಿ ಬೇಕಾದರೆ ಉಪ್ಪು ಹಾಗೂ ಬೆಲ್ಲ ಸೇರಿಸಿ. ಕೊನೆಗೆ ಅವಲಕ್ಕಿಯನ್ನು ಸೇರಿಸಿ...ಚೆನ್ನಾಗಿ ಬೆರೆಸದಿದ್ದರೆ ಅಲ್ಲಲ್ಲಿ ಹಸಿ ಅವಲಕ್ಕಿ ಬಾಯಿಗೆ ಸಿಕ್ಕಿ ರುಚಿ ಹಾಳುಮಾಡುತ್ತದೆ. ಕೆಲವರು ಇದಕ್ಕೆ ನೀರುಳ್ಳಿಯನ್ನು ಹಾಕುತ್ತಾರೆ. ಅದು ಸಹ ಬಹಳ ರುಚಿಯಾಗುತ್ತೆ. ಕೊನೆಗೆ ಕರಬೇವು ಮತ್ತು ಸಾಸಿವೆ ಒಗ್ಗರಣೆ ಕೊಟ್ಟರೆ ನಿಮ್ಮ ಫೋವ ಚಟ್ನಿ ರೆಡಿ. 

ಬಟಾಣಿ ಉಪ್ಕರಿ:
೧.ಹಸಿರು ಬಟಾಣಿ
೨.ಕೆಂಪುಮೆಣಸಿನ ಕಾಯಿ ೪.೫
೩. ಹಸಿಮೆಣಸಿನ ಕಾಯಿ ೨,೩
೪. ಗರಮ ಮಸಾಲೆ ಹುಡಿ ೨,೩ ಚಮಚ
೫. ಉಪ್ಪು
 ಮೊದಲು ಬಟಾಣಿಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ ಒಂದು ಕಾವಲಿಯಲ್ಲಿ ಒಗ್ಗರಣೆಗೆ ಇಡಿ. ಸಾಸಿವೆ ಸಿಡಿದ ಮೇಲೆ ಗರಮ ಮಸಾಲೆ ಹುಡಿ ಹಾಕಿ. ನಂತರ ಬೇಯಿಸಿದ ಬಟಾಣಿಯನ್ನು ಸೇರಿಸಿ ಕುದಿಸಿ, ಕಾವಲಿಯಿಂದ ಕೇಳಗಿಳಿಸಿ. ಈಗ ಬಟಾಣಿ ಮತ್ತು ಅವಲಕ್ಕಿಯನ್ನು ತಟ್ಟೆಯಲ್ಲಿ ಹಾಕಿ ಸೇವಿಸಿ. ನೆನಪಿಡಿ, ಕೆಲವರು ಅವಲಕ್ಕಿ ಮತ್ತು ಬಟಾಣಿಯನ್ನು ಬೆರೆಸಿ ತಿನ್ನುತ್ತಾರಾದರೆ  ಮತ್ತೆ ಕೆಲವರು ( ನನ್ನಂತವರು) ಬೇರೆ ಬೇರೆಯಾಗಿ ತಿನ್ನುತ್ತಾರೆ. 

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...