ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 August, 2014

ಪ್ರಶ್ನೆಗಳಿಗೆ ಉತ್ತರ!

“ಶೀಲಕ್ಕ, ಪ್ಲೀಸ್ ಹದಿನೈದನೆಯ ಅಧ್ಯಾಯದ ಮೊದಲ ಐದು ಶ್ಲೋಕಗಳನ್ನು  ಹಾಡ್ತಿರಾ? ನಾನು ರೆಕಾರ್ಡ ಮಾಡಿ ದಿನಾ ಮಗಳಿಗೆ ಕೇಳಿಸ್ತೇನೆ. ಶಾಲೆಯಲ್ಲಿ ಅವಳಿಗೆ ಕಾಂಪಿಟಿಷನ್ ಇದೆ.”

ಸುಮಾರು ತಿಂಗಳ ಹಿಂದೆ ಅಕ್ಷತಾ ವಾಟ್ಸ ಆಪ್ ನಲ್ಲಿ  ಕೇಳಿದಾಗ ಅಳ್ಬೇಕೋ ನಗ್ಬೇಕೊ ಅಂತ ಗೊತ್ತಾಗ್ಲಿಲ್ಲ.

“ಅಕ್ಷತಾ, ನಾನು ನಾವೆಲ್ಲ ಹಿಂದೆ ಹಾಡಿದ ಹಾಗೆ ರಾಗ ಬೇಕಾದ್ರೆ ಹೇಳಿಕೊಡ್ತೇನೆ.. ನಿನ್ನ ಕಂಠದಲ್ಲೇ ನನ್ ಎದುರೇ ರೆಕಾರ್ಡ ಮಾಡು. ನನ್ನ ಸ್ವರ ಚೆನ್ನಾಗಿಲ್ಲ.. (ಸ್ವಲ್ಪ ಸಣ್ಣ ಸ್ವರದಲ್ಲಿ ಮಾತಾಡು.. ಕಿವಿಗೆ ನಿನ ಸ್ವರ ಬಡಿಯುತ್ತದೆ ಅನ್ನುತ್ತಿದ್ದವರ ನೆನಪು ಆಯಿತು) ನಂಗೆ ಯಾವ ಗ್ರಾಚಾರ ಹಿಡಿದಿಲ್ಲ.. ಮತ್ತೆ ಮಂಗಳಾರತಿ ಮಾಡಿಸ್ಕೊಳ್ಳಿಕ್ಕೆ!

ಹ್ಮೂಂ.. ಅವಳು ಬಿಡ್ಲೇಯಿಲ್ಲ.

ಬರೆಯುವ ಹುಮ್ಮಸಿನಲ್ಲಿ ಮರೆಗೆ ಸರಿದಿದ್ದ ಭಗವದ್ಗೀತೆ ಮತ್ತೆ ನಿತ್ಯ ಓದುವ ಪಾಠ ಆರಂಭವಾಯಿತು. ಕೆಲ ದಿನಗಳ ಹಿಂದೆ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರವೂ ದೊರೆಯಿತು. ಹ್ಮ.. ಅವನಿಗೆ ಎಲ್ಲವೂ ಗೊತ್ತು. ನಾನು ಇದ್ದಲ್ಲೇ ಅಗತ್ಯವಾದುದೆಲ್ಲವನ್ನೂ ಕಳುಹಿಸಿಕೊಡುತ್ತಾನೆ.

ಗೊಂದಲಗಳಿಗೆ ಸಿಕ್ಕಿದ ಉತ್ತರವು ಇದ್ದದ್ದು ಹನ್ನೆರಡನೆಯ ಅಧ್ಯಾಯದಲ್ಲಿ..

ಅರ್ಜುನ ಕೇಳುತ್ತಾನೆ,
ಕೃಷ್ಣ, ನಿನ್ನನ್ನು ನಿರಂತರ ಸಾಧನೆಯಿಂದ  ಸೇವಿಸುವ ನಿನ್ನ ಭಕ್ತರು ಮತ್ತು ಅಳಿವಿರದ ಅವ್ಯಕ್ತ ತತ್ವದ ಉಪಾಸಕರು.. ಇವರಿಬ್ಬರಲ್ಲಿ ಯಾರು ಹೆಚ್ಚಿನವರು???

ಕೃಷ್ಣನನ್ನುತ್ತಾನೆ,
ಅವ್ಯಕ್ತತತ್ವದ ಉಪಾಸನೆಯನ್ನು ನೆಚ್ಚಿದವರಿಗೆ ದಣಿವು ಹೆಚ್ಚು, ಇದು ಸಾಧಕರಿಗೆ ಕಷ್ಟದ ಬಳಸು ದಾರಿ.

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ|
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ||

ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್
ಭವಾಮಿ ನಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್||

ಕೆಲವರಿರುತ್ತಾರೆ: ಅವರು ಮಾಡಿದನೆಲ್ಲವನ್ನೂ ನನ್ನಲ್ಲಿ ಅರ್ಪಿಸಿಬಿಡುತ್ತಾರೆ. ಅವರು ನನ್ನಲ್ಲೇ ಬಗೆಯಿಟ್ಟವರು. ಅವರ ಸಾಧನೆಯ ಗುರಿ ನಾನಲ್ಲದೆ ಬೇರಿಲ್ಲ. ನನ್ನನ್ನೇ ನೆನೆಯುತ್ತಾ ಸೇವಿಸುತ್ತಾರೆ. ಓ ಪಾರ್ಥಾ, ನನ್ನನ್ನೇ ನೆಚ್ಚಿದ ಅಂತವರನ್ನು ನಾನು ಬಹುಬೇಗ ಸಾವಿನ ಬಾಳಿನ ಕಡಲಿನಿಂದ ಬಿಡುಗಡಗೊಳಿಸುತ್ತೇನೆ.

ಇನ್ನು ಗೊಂದಲವಿಲ್ಲ ಒಡಯನೇ.. ನಿನಗೇ ಶರಣು! ನೀನೇ ನನ್ನ ಗುರಿ ಮತ್ತು ಅದನ್ನು ತಲುಪಿಸುವ ಗುರುವು ಸಹ!

ಹಾ! ಹೇಳಲು ಮರೆತೆ, ಅಕ್ಷತಾ ಮತ್ತು ಅವಳ ಮಗಳು ವೈಶಾಲಿ ಅವರ ಮನೆಯಲ್ಲಿ ನಿತ್ಯವೂ ನನ್ನ ಉಪಸ್ಥಿತಿಯನ್ನು ಖುಷಿಯಿಂದ ಅನುಭವಿಸಿದರಂತೆ.. ಮೆಸೇಜು ಇತ್ತು!


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...