ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 August, 2013

ನನ್ನ ನಲಿವಿನ ನೆಲೆ!


ಒಲವೇ,

ನಿನ್ನದೊಂದು ಮನಃಪೂರ್ವಕ ಮೆಚ್ಚುಗೆಯಲಿ

ನಿನ್ನದೊಂದು ಮೇಲುದನಿಯ ಕರೆಯಲಿ

ನಿನ್ನದೊಂದು ಕುಡಿ ನೋಟದಲಿ

ನಿನ್ನದೊಂದು ಮಧುರ ಸ್ಪರ್ಶದಲಿ

ನಿನ್ನದೊಂದು ಸಿಹಿ ನುಡಿಯಲಿ

ನನ್ನೆಲ್ಲಾ ನಲಿವು ನೆಲೆಸಿವೆ!

ಸ್ವತಂತ್ರ ದಿನದ ಮುಂಜಾವು!

-
ಸುಖ ದುಃಖೆ ಸಮೇ ಕೃತ್ವಾ ಲಾಭಾ ಲಾಭೌ ಜಯಾ ಜಯೌ|

ತಥೋ ಯುದ್ಧಯಾ ಯುಜ್ಯಸ್ವ ನೈವಮ್ ಪಾಪಮ್ ಅವಪ್ಸ್ಯಸಿ||


ಕರ್ಮಣ್ಯೆವಾಧಿಕಾರಸ್ತೆ ಮಾ ಫಲೇಷು ಕದಾಚನ|

ಮಾ ಕರ್ಮಫಲಹೇತುರ್ಭೂರ್ಮಾ  ತೆ ಸಂಗೋಸ್ತ್ವಕರ್ಮಣಿ||

ಸ್ವಂತ್ರದ ದಿನದ ಮುಂಜಾವು ಇಂದು!

ವಿಶೇಷವಾಗಿರಬಹುದು.. ಏನನ್ತಾಳಪ್ಪಾ ಮುಂಜಾವು ಇಂದು?

ಜ್ಯೋತಿ ಬೆಳಗಿದ ದೀಪವನು ಮುಂಜಾವಿನೆದುರಿತ್ತು.. ಕಾದೆ!

ಗಂಭೀರಳಾದಳು.. ಕಣ್ಣಲ್ಲಿ ಹೆಪ್ಪುಗಟ್ಟಿತ್ತು.. ನೋವು!

’ನೋವು ನಲಿವು ಹಗಲು ರಾತ್ರಿಗಳಂತೆ; ಕೆಲವರ ಪಾಲಿಗೆ

ನಲಿವೆನ್ನುವುದು ತದಿಗೆ ಚಂದಿರನಂತೆ, ಕೆಲವರ ಪಾಲಿಗೆ ಪೂರ್ಣ ಚಂದಿರನೇ ಇಲ್ಲ..

ಈ ವೈರಾಗ್ಯದ ಮಾತು ಹೇಳಲಷ್ಟೇ, ಕೇಳಲಷ್ಟೇ ಚಂದ!

ಸುಖ ದುಃಖಗಳನ್ನು ಸಮನಾಗಿ ನೋಡಿ ತಾವರೆಯ ಪತ್ರದ ಮೇಲಿರುವ ಹನಿಯ ಹಾಗೆ ಬದುಕಿನ ಎಲ್ಲಾ ಮಜಲುಗಳನ್ನು ಸಮನಾಗಿ ನೋಡಲು ಅಸಾಧ್ಯ!

ಮತ್ಯಾಕೆ ಆಗಾಗ ನಿನ್ನೀ ಕಪ್ಪು ಕಂಗಳಲ್ಲಿ ಜಲಪಾತ..

ಉಕ್ಕಿ ಹರಿದರೆ ತಾನೇ ನಮ್ಮೊಳಗಿನ ಆರ್ದ್ರ ಭಾವ ಒಣಗುವುದು..

ನೋವು-ನಲಿವು ಭಾವಗಳು ಇಲ್ಲದಿದ್ದಿದ್ದರೆ ನೀನೆಲ್ಲಿ ಸ್ಪಂದಿಸುವೆಯಾ..

ಮಿತ್ರ-ಬಾಂಧವರ ನೋವು ನಲಿವುಗಳು ನಿನ್ನದೇವೆಂಬಂತೆ ಅಪ್ಪಿ ಸ್ಪಂದಿಸುವಿ..

ನಿರ್ಲಿಪ್ತಳಾದರೆ.. ನೀ ಬರೀ ಶಿಲೆ!

ನೋವು-ನಲಿವುಗಳೇ ಮಹಾಕಾವ್ಯಗಳ ಉಗಮ ಸ್ಥಾನ!

ಗರ್ಭದಲಿ ಕಟ್ಟಿಕೊಂಡು ನೀನುಳಿಯಲಾರೆ..

ಅಕ್ಷರ ರೂಪದಿ ಹೆರುವೆ ನಿನ್ನಾ ಭಾವಗಳ..

ನೋಡು, ನೀ ಬರೆದುದೆಲ್ಲವೂ ನಿನ್ನ ಕಂದಮ್ಮಗಳೇ..

ಎಂದಿಗೂ ನಿನ್ನ ಬಿಟ್ಟು ಹೋಗಲಾರವು.. ಕೊನೆಯ ತನಕ ನಿನ್ನ ಜತೆಗೂಡುವವು!

ಪಾಲಿಗೆ ಬಂದದೆಲ್ಲವನ್ನು ಉತ್ಕಂಠವಾಗಿ ಅನುಭವಿಸು.. ನಾಳೆಯೇ ಇಲ್ಲವೆಂಬಂತೆ

ನೋವೂ ನಲಿವೂ ಬರುತ್ತವೆ, ಹೋಗುತ್ತವೆ..
ನಿನ್ನ ಬಿಡಲಾರವು... ಬೆಂಬೆತ್ತುವವು!

ಮತ್ತೆ ಹೊಸ ನಾಳೆಗಾಗಿ ಕಾಯು..

ಬೆಳಕು ಬರುವುದು, ಬಾಳು ಬೆಳಗಿಸುವುದು


ಆಶಾವಾದಿಯಾಗು!

************************************************

ಈ ಜೀವನ ಒಂದು ಸಾಗರದಂತೆ...
ನಾವೆಲ್ಲಾ ಅದರ ಪಯಣಿಗರಂತೆ..
ಬಾಳ ನೌಕೆ ನಡೆಸುವವನು ದೇವರೆಂಬುದು ನಾಮ ಮಾತ್ರ....
ದಡ ಸೇರಬೇಕಾದರೆ ಹುಟ್ಟನ್ನು ನಾವೇ ಹಾಕಬೇಕು.
ಪ್ರಯತ್ನ ನಮ್ಮದು ಫಲಾ ಫಲ ಅವನಿಗೆ ಸೇರಿದ್ದು. .

ಸುಖ ದುಃಖಗಳು ಸಮುದ್ರದಲ್ಲಿ ಏಳುವ ಅಲೆಗಳಂತೆ
ಒಮ್ಮೆ ಸುಖ ಬಂದರೆ, ಮತ್ತೊಮ್ಮೆ ದುಃಖ
ಸಮುದ್ರದ ಅಲೆಗಳಂತೆ ಜೀವನದಲ್ಲಿ ಏರಿಳಿತಗಳು ಸಹಜ.
ಜೀವನದಲ್ಲಿ ಏಕಾತಾನತೆ ಇರಬಾರದು..
ಈ ಬದುಕು ಕಷ್ಟ ಸುಖಗಳ ಸಮ್ಮಿಶ್ರಣ
ನಿಜವಾದ ಅರ್ಥದಲ್ಲಿ ಬದುಕು ಅಂದ್ರೆ ಇದೇನೆ.
ದಾಸರು 'ಸಾಗರದಷ್ಟು ಸುಖಕ್ಕೆ ಸಾಸಿವೆಯಷ್ಟು ಸುಖ ನೋಡಾ' ಎಂದಿದಿದ್ದಾರೆ.
ಈ ಸುಖಕ್ಕಾಗಿ ಮನುಷ್ಯನ ಪರದಾಟವನ್ನು ನೋಡಿಯೇ ದಾಸರು ಹೀಗೆ ನುಡಿದಿರಬೇಕು.

ಬೇವು ಬೆಲ್ಲದಂತಿರುವ ಈ ಜೀವನ ಪ್ರವಾಹ ನಿರಂತರ
ಪ್ರತಿ ದಿನ ಹೊಸ ಮುಂಜಾವು ಬರುವಂತೆ
ಜೀವನದ ಪ್ರತಿಯೊಂದು ಕ್ಷಣವೂ ಹೊಸತೇ...
ಪರಿವರ್ತನೆ ಜಗದ ನಿಯಮ ತಾನೇ,
ಪ್ರತಿಕ್ಷಣವೂ ಹೊಸ ಅನುಭವವನ್ನು ಪಡೆಯುತ್ತೇವೆ..
ಮುಂಜಾವಿನಲ್ಲಿ ಎಲ್ಲವೂ ಸ್ವಚ್ಚ ಶುಭ್ರ..

ಈ ದಿನ ಭಾರತ ದೇಶ ಬ್ರಿಟಿಷರ ಕಪಿಮುಷ್ಟಿಯಿಂದ
ಬಿಡುಗಡೆಯಾದ ದಿನ...
ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತ..
ಮುಂದೆ ಯಾರ ಕಪಿಮುಷ್ಟಿಗೆ ಸಿಗದೇ ದೇಶ ಸುಭದ್ರವಾಗಲಿ
ಎಂದು ಹಾರೈಸುತ್ತ.....
ಏಕತೆಯೊಂದಿಗೆ ಲೀನವಾಗುವ ಮುಂಜಾವು...

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ಕೋರುತ್ತ
ವಿರಮಿಸುವ,

ಇತಿ ನಿಮ್ಮ ಮುಂಜಾವು...

ಅವನ ಮತ್ತು ಅವನವಳ ಸ್ವಾತಂತ್ರ್ಯ ದಿನಾಚರಣೆ!


ಹೀಗೊಂದು ಅವನ, ಅವಳ ಸ್ವಾತಂತ್ರ್ಯ ದಿನಾಚರಣೆ!
-----------------------------------------------


ತನ್ನನ್ನು ಬಳಸಿ ಹಿಡಿದಿದ್ದ ಅವಳ ಕೈಗಳನ್ನು ಮೆಲ್ಲನೆ ಆಚೆ ಎತ್ತಿಟ್ಟ.

Happy  freedom day!”

ಮೆಲ್ಲನೆ ಅವಳ ಕಿವಿಯಲ್ಲುಸುರಿದ!

ಒಮ್ಮೆಲೆ ಕಣ್ತೆರೆದು.. ಅಗಲವಾಗಿದ್ದ ಕಣ್ಣನ್ನು ಮತ್ತಿಷ್ಟು ಅಗಲಮಾಡಿ,

“ಏನೂ!”

ಉತ್ತರಕ್ಕೂ ಕಾಯದೇ ಆಗಲೇ ಕಣ್ತುಂಬಿ ಬರುತ್ತಿರುವುದನ್ನು ನೋಡಿದ ಅವನು ಪರಿಸ್ಥಿತಿ ಅರ್ಥಮಾಡಿಕೊಂಡ!

“ಇವತ್ತು ಸ್ವಾತಂತ್ರ್ಯ ದಿನಾಚರಣೆ ಕಣೆ!”

ವರ್ಷ, ತಿಂಗಳು, ವಾರ, ದಿನ, ತಾರೀಕು.. ಕಾಲಗಳ ಪರಿವೆಯಿಲ್ಲದೆ ಅವನ ಒಲವಿನ ಬಲದಲ್ಲಿ ಉಸಿರಾಡುತ್ತಿದ್ದ ಅವಳಿಗೆ ಇಂದು ಆಗಸ್ಟ್15 ಎಂದೂ ಮರೆತೇ ಹೋಗಿತ್ತು!

ಇದೀಗ ಕಣ್ಣಲ್ಲಿ ಮೂಡಿತು ಮಳೆಬಿಲ್ಲು.. ತುಟಿಯಲ್ಲಿ ಹೂನಗೆ! ಸಪ್ತ ಬಣ್ಣಗಳೆಲ್ಲ ಅವನ ಕಣ್ಣಲ್ಲಿ ಪ್ರತಿಫಲಿಸಿದವು!

ಅವಳ ಹೂನಗೆಯ ಪರಿಮಳ ಕೋಣೆಯಲ್ಲೆಲ್ಲಾ ಹರಡಿತು!

“ಅಲ್ವೇ, ನಾವಿಬ್ಬರು ಈ ಅನುರಾಗದ ಬಂಧನದಲ್ಲಿ ಬಂಧಿಗಳಲ್ವೆ! ನಿನಗೆ ನಾ ಸೆರೆ, ನನಗೆ ನೀ! ಉಸಿರಿರುವ ತನಕ ನನಗಂತೂ ಈ ಸೆರೆಯಿಂದ ಬಿಡುಗಡೆ ಬೇಡ.. ನಿನಗೂ ಬೇಕಿಲ್ಲ.. ಅಲ್ಲವಾ!”

ಆಫೀಸಿನ ಸ್ವಾತಂತ್ರ್ಯ ದಿನಾಚರಣೆಗೆ ತಡವಾಗಿ ಬಂದವನು ಅವನೊಬ್ಬನೇ!




ಆ ಪೀಳಿಗೆ- ಈ ಪೀಳಿಗೆಯ ಸ್ವಾತಂತ್ರ್ಯ ದಿನಾಚರಣೆ!

ಇಂದಿನ ಪೀಳಿಗೆಯಂತೆ ನಮ್ಮ ಪೀಳಿಗೆಯವರೂ ಹುಟ್ಟುವ ಮೊದಲೇ ನಮಗೆ ಸ್ವಾತಂತ್ರ್ಯ ದೊರಕಿತ್ತು.. ಆದರೂ ನಮಗೆ ಸ್ವಾತಂತ್ರ್ಯದ ಮಹತ್ವ, ಅದರ ಹಿಂದಿನ ಶ್ರಮದ ಕತೆ ತಿಳಿದಿತ್ತು!
ದೇಶ ಭಕ್ತಿ ಗೀತೆಗಳನ್ನು ಕೇಳಿದಾಗಲೆಲ್ಲ ರೋಮಗಳು ಎದ್ದು ನಿಲ್ಲುತ್ತಿದ್ದವು.. ಬ್ರಿಟಿಷರು ನಮ್ಮವರಿಗೆ ಹಿಂಸೆ, ತಿರಸ್ಕಾರ.. ನೋವು ಕೇಳಿದಾಗಲೆಲ್ಲಾ ರಕ್ತ ಕುದಿಯುತಿತ್ತು..

ಆದರೆ, ಇಂದಿನ ಪೀಳಿಗೆಯವರಿಗೆ ಯಾವುದರ ಅರಿವೇ ಇಲ್ಲ.. ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳು ಅಚ್ಚರಿಗೊಳ್ಳುತ್ತಾರೆ.. ಅದರಲ್ಲೂ ಕಾಲಾಪಾನಿ ಜೈಲ್ ನ ಕ್ರೂರ ವ್ಯವಹಾರ, ನಮ್ಮ ನಾಡಿನಲ್ಲೇ ನಮಗೆ ಪರಕೀಯರನ್ನಾಗಿ ಮಾಡಿ, ನಮ್ಮಲೇ ಭೇದ ಹುಟ್ಟಿಸಿ ನಮ್ಮನ್ನು ಲೂಟಿ ಮಾಡಿ ತಮ್ಮ ಸಾಮ್ರಾಜ್ಯವನ್ನು ಬೇರೂರಿಸುವ ಅವರ ಹುನ್ನಾರ.. ತಾವು ಶಾಲೆಯಲ್ಲಿ ಮಾಸ್ ಪಿ ಟಿ ಮಾಡಿ, ಧ್ವಜಾರೋಹಣ ಮಾಡುವ ಸ್ವಾತಂತ್ರ್ಯಾದಿನಾಚರಣೆಗೆ ಇಷ್ಟೆಲ್ಲ ಹಿನ್ನಲೆಯಿದೆಯೇ?

 ಛೇ! ನಮಗಾಗಿ ತಮ್ಮ ತನು ಮನ ಧನಗಳನ್ನೆಲ್ಲವೂ ತ್ಯಾಗ ಮಾಡಿದ ಹುತಾತ್ಮರ ಆತ್ಮ ಇಂದಿನ ಪೀಳಿಗೆಯ ಅಜ್ಞಾನವನ್ನು ನೋಡಿದಾಗ ಎಷ್ಟು ನೊಂದುಕೊಳ್ಳುತ್ತದೆ ಏನೋ!
ಅಂದು ಆಕಾಶವಾಣಿಯಲ್ಲಿ ಹಾಕುವ ದೇಶಭಕ್ತಿಗೀತೆಗಾಗಿ ಕಾದುಕೂತ ದಿನಗಳಿದ್ದವು! ಪ್ರತೀಬಾರಿ ಕೇಳಿದಾಗಲೂ ಅದೇ ಭಾವ.. ಮೈಯೆಲ್ಲಿ ನವಿರು ಕಂಪನ.. ಇಂದೂ ಅದೇ ಭಾವ, ಅದೇ ಕಂಪನ! ಇಂತಹ ಭಾವ ಇರಬೇಕಾದರೂ ಪುಣ್ಯಮಾಡಿರಬೇಕು!

ಆರ್.ಎನ್. ಜಯಗೋಪಾಲರ ಸಾಹಿತ್ಯ; ಎಂ. ಬಿ. ಶ್ರೀನಿವಾಸ್ ಅವರ ಸಂಗೀತದಲ್ಲಿ ಈ ಹಾಡು

ಕಣ ಕಣದಲೂ ಭಾರತೀಯ ರಕ್ತ ನಮ್ಮದು!
-------------------------------------
ಈ ಮಣ್ಣು ನಮ್ಮದು
ಈ ಗಾಳಿ ನಮ್ಮದು
ಕಲ ಕಲನೆ ಹರಿಯುತಿಹ
ನೀರು ನಮ್ಮದು..
ಕಣ ಕಣದಲು ಭಾರತೀಯ
ರಕ್ತ ನಮ್ಮದೂ ನಮ್ಮದು|| ಈ ಮಣ್ಣು ನಮ್ಮದು||

ನಮ್ಮ ಕಾಯ್ವ ಹಿಮಾಲಯವೆ
ತಂದೆ ಸಮಾನ
ಗಂಗೆ ತುಂಗೆ ಕಾವೇರಿಯು
ತಾಯಿ ಸಮಾನ
ಈ ದೇಶದ ಜನರೆಲ್ಲರೂ
ಸೋದರ ಸಮಾನ
ಈ ನಾಡಿನ ಹೃದಯವದು
ದೈವ ಸನ್ನಿಧಾನ|| ಈ ಮಣ್ಣು ನಮ್ಮದು||

ಅಜಂತಾ ಎಲ್ಲೋರ ಹಳೇಬೀಡು ಬೇಲೂರ
ಶಿಲೆಗಳಿವು ಕಲೆಯ ಆಗರ
ಹಿಂದು ಬುದ್ಧ ಜೈನ ಕ್ರಿಸ್ತ
ಮುಸಲ್ಮಾನ ಧರ್ಮಗಳ ಮಹಾಸಾಗರ
ನಡೆದು ಹೋದ ಚರಿತೆಯೊ
ನಾಳೆ ಇರುವ ಕವಿತೆಯೊ
ಈ ನಾಡ ಮಣ್ಣಿನಲ್ಲಿದೆ
ಜೀವ ಸಾರ|| ಈ ಮಣ್ಣು ನಮ್ಮದು||

ತಂಗಾಳಿಗೆ ತಲೆಯ ತೂಗೊ
ಪೈರಿನ ಹಾಡು
ಆ ಹಾಡಿಗೆ ತಾಳ ಕೊಡುವ
ಯಂತ್ರದ ಜಾಡು
ವಿಜ್ಞಾನವು ಅಜ್ಞಾನವ
ಗೆಲ್ಲುವ ಪಾಡು
ಹೊಸ ಭಾರತ ನಿರ್ಮಾಣವು
ಸಾಗಿದೆ ನೋಡು||ಈ ಮಣ್ಣು ನಮ್ಮದು||





14 August, 2013

ಕೊಂಕಣಿ ಮುಂಜಾವು!!!

-
ತೀನಿ ದಿವಸು..
ಮುಂಜಾವು ತೊಜ್ಜುಕ ನಾ..
ಅಹಲ್ಯಾ, ವೀಣಕ್ಕಾ, ಪ್ರಶಾಂತ್ ಮಾಮು....
ಹಂಗೆಲೆ ಮುಂಜಾವಕ ಮಿಗೆಲೆ ರಾಗು ಘಲೀನಿ.. ಛೇ!
ಜಲೈರಿ ಹ್ಹಾವ್ ಕಸ್ಸಕೊರು? ಮುಂಜಾವನ ಮಹ್ಳೆರಿ ಮಾತ್ರ ಬರೈತಲಿ ಹ್ಹಾವ್!
ಅಮ್ಮ, ದೋಸ್ತಿ, ಕೃಷ್ಣು, ಟೀಚರ್,.. ಪುರಾ ಅವತಾರು ಜಲ್ಲೊ..
ಅತ್ತ ಕಸ್ಸ ಜತ್ತಲಬ್ಬಾ?
ಅಟ್ಟೊನು ನಿದ್ದಲಿಲಿಕ..ಸಮ್ ನೀದ ನಾ..
ಅನಿಕಯಿ ಕಳೊಕು.. ಅಂಗಣಂತು ತುಲಸಿಕಟ್ಟೆ ಎದುರು ರಬ್ಬಿಲಿಕ ವ್ಹಾರೆನ ತಂಡುನು ವೆಲ್ಲೆ.. ಕೈಯಿ ಮಹ್ಣಾತಾವೆ?
 ವೈರಿ.. ಮೋಡ ಘರಕ!
ಕಸ್ಸ ಚಂದ ಶೃಂಗರ್ಲಾ!
ಪೆಪೆ..ಪೇ,, ವಾದನ!
ಎದುರುಕಣ್ಸಾಣಿಕ ಅಮ್ಗೆಲೆ ಮುಂಜಾವ ಬಳಗ ಕನ್ನಡಿ ಕಳಶು ದೋರ್ನು.. ಪ್ರತಿಮಾ, ಗೀತಾ.. ರಬಲೆಂಚಿ
ವಕ್ಕಲ ಮಾಕ್ಶಿ ಫಾಟಿ ಘಾಲ್ನು..
ಫಂತಿಕ ಗುಲಾಬಿ, ಸುಗಂಧ ರಾಜ ಮಾಳ,, ಬಂಗಾರಚೆ ಗೊಂಡೊ..
ಟಿಕ್ಲಿ ಕಸೂತಿ ಕೆಲ್ಲೆಲೆ.. ಧವ ಪಟ್ಟೊ ಚೊಳಿವ್ಹೈರಿ!
ಕಾಸ್ ಮಾರ್ಲೆಲೆ.. ಕಾಂಜಿವರಮ್ ಕಪ್ಪಡ!
ಎದುರು ಫಳೈಲೆರಿ.. ಈ ಅಮ್ಗೆಲೆ ಶೀಲನ್ಹವೇ! (ಹ್ಹಾವ್ ನಯ್ಹಿ!)
ಅರೇ, ರೆಪ್ಪೆ ವ್ಹೈರಿ ರೆಪ್ಪೆ..ಗಲ್ಲಕ ಗುಲಾಬಿ,, ವ್ಹೊಟ್ಟಾಕ ರಕ್ತರಂಗು..
ಥಳ್ ಥಳ್ ಚೆ ನಮೂನವ್ಹಾರೆ ಬಂಗರ..
ಮೋಹನ ಕಂಠಿ, ಮೊಗರೆ ಮಾಳ, ಹವಳ ಕಂಠಿ, ಕೊತ್ತಂಬರಿ ಸೋರು..
ಹತ್ತಕ ಮೊತ್ಯಾ, ಹವಳಾಂಚೆ..ವಜ್ರಾಂಚೆ..ನಮೂನ್ ವ್ಹಾರ ಕಂಕಣ!
ಅಯ್ಲೋ.. ವ್ಹರತ್ ಅಯ್ಲೋ..
ದೃಷ್ಟಿ ವ್ಹೈರಿ ಉಕ್ಕಳೆರೀ..
ಕೋಣ?
ಅರೇ ಮನೋಹರು ಘೋಡೆ ರಥರಿ! ಮತ್ತೆಕ ಪೇಟ..ಗಳೆಕ್ ಚಕ್ರಸೋರು..ಶಿಲ್ಕಚೇ ಧೋತಿ..ಕಸೂತಿಚೆ ಜುಬ್ಬಾ..
ಮಂಟವ ಹಳ್ಳೆ ವ್ಹರತು ವ್ಹಕ್ಲೆಕ!
ಮೋಡ ಘರಂತು ಪೆಪೆ..ಪೇ,,ಉತ್ತುಂಗಕ ಚಳ್ಳೆ..
ಸಾಕ್ಷಾತ್ ವಿಷ್ಣು ಅನಿ ಲಕ್ಷ್ಮಿ ಜೋಡಿ!
ಆಯ್ಚೆ ಮುಂಜಾವು ಮನೋಹರ್ ಅನಿ ತಂಗೆಲೆ ಪತ್ನಿ ಶೀಲಾ ಅರ್ಪಿತು!

ಕಳೆದ ಮೂರು ದಿನಗಳಿಂದಲೂ ಮುಂಜಾವು ಜತೆ ಮಾತೇ ಇಲ್ಲ... ಆಕೆ ಮಾತನಾಡದೇ ನಾನೇನು ಬರೆಯಲಿ!  ಕೆಲವು ದಿನಗಳಿಂದ (ಕಾರಣವೇ ಗೊತ್ತಿಲ್ಲ) ಶೀಲಾ ತಲೆಯಲ್ಲಿ ತಿರಗುತ್ತಿದ್ದರು.. (ಮನೋಹರರ ಧರ್ಮ ಪತ್ನಿ) ಅದರಿಂದಲೋ ಏನೋ ನಿನ್ನೆ ರಾತ್ರಿ ನನ್ನ ಕನಸಲ್ಲೂ ಬಂದಿದ್ದರು.. ಅದೂ ನವವಧುವಿನಂತೆ ಶೃಂಗರಿಸಿಕೊಂಡಿದ್ದರು! ಬಹುಶಃ ಇತ್ತೀಚೆಗೆ ನಾಯಕ್  ದಂಪತಿಗಳ ಫೋಟೊ ನೋಡಿ ಮೆಚ್ಚಿದ್ದೂ ಕಾರಣವಾಗಿರಬಹುದು.. ಇವತ್ತೇನಿದ್ದರೂ ಬರೆಯಲೇಬೇಕು ಅಂತ ಅದ್ಯೇಕಪ್ಪ ಮುಂಜಾವು ಮಾತನಾಡಲು ಬರಲಿಲ್ಲ ಅಂತ ಚಿಂತಿಸಿ ಸರಿಯಾಗಿ ನಿದ್ದೆಯಿಲ್ಲದೆ ಕಳೆದೆ ನಿನ್ನೆಯ ರಾತ್ರಿ!
ಇವತ್ತಿನ ಮುಂಜಾವಿನ ಅನುವಾದ!

ಮೂರು ದಿನಗಳು...
ಮುಂಜಾವು ಕಾಣಲು ಇಲ್ಲ...
ಅಹಲ್ಯಾ, ವೀಣಕ್ಕಾ, ಪ್ರಶಾಂತ ಮಾಮ...
ನನ್ನ ರಾಗವಿಲ್ಲ ಇವರ ಮುಂಜಾವಿಗೆ.. ಛೇ!
ನಾನೇನು ಮಾಡಲಿ? ಮುಂಜಾವು ಹೇಳಿದರೆ ಮಾತ್ರ ಬರೆಯುವವಳು ನಾನಲ್ಲ!
ಅಮ್ಮ, ಸಖಿ, ಕೃಷ್ಣ, ಗುರುಗಳು.. ಎಲ್ಲ ಅವತಾರ ತೊಟ್ಟಳವಳು..
ಇನ್ಯೇನು ಆಗುವಳೋ ಏನೋ?
ನೆನೆದೇ ಮಲಗಿದವಳಿಗೆ ಸರಿ ನಿದ್ದೆಯೆಲ್ಲಿ...
ಇನ್ನೂ ಗವ್ ಅನ್ನುವ ಕತ್ತಲೆ.. ಅಂಗಣದಲ್ಲಿ ತುಳಸೀಕಟ್ಟೆಯ ಎದುರು ನಿಂತವಳನ್ನು ಗಾಳಿ ಒಯ್ಯಿತು..ಎಲ್ಲನ್ನುವಿರಾ!
ಮೇಲೆ.. ಮುಗಿಲ ಮನೆಗೆ!
ಆಹಾ! ಏನು ಶೃಂಗಾರ!
ಪೆಪೆ..ಪೇ... ನಾಗವಾದನ!
ಸ್ವಾಗತಿಸಲು ಕಲಶ ಕನ್ನಡಿ ಹಿಡಿದು ಪ್ರತಿಮಾ, ಗೀತಾ.. ಜತೆಗೆ ಮುಂಜಾವಿಗಲೆಲ್ಲರೂ!
ವಧು ಬೆನ್ನು ಹಾಕಿದ್ದಾಳೆ..
ಉದ್ದನೆಯ ಜಡೆಗೆ ಗುಲಾಬಿ ಸುಗಂಧರಾಜ ಮಾಲೆ.. ಅಲ್ಲಲ್ಲಿ ಬಂಗಾರದ ಗೊಂಡೆ..
ಕೊಂಕಣಿ ಸಂಪ್ರದಾಯದ ಟಿಕ್ಲಿ ಕಸೂತಿಯ ಬಿಳಿಪಟ್ಟೆ ಹೊದ್ದ ವಧು..
ಕಚ್ಚೆಹಾಕಿದ ಕಾಂಜಿವರಂ ಒಂಬತ್ತು ಮೊಳದ ಸೀರೆ..
ನೋಡಿದರೆ.. ಇವಳು ನಮ್ಮ ಶೀಲ ಅಲ್ಲವೇ! (ನಾನಲ್ಲ)
ಅರೇ, ಕಣ್ಣೆವೆಗಳು ಮಲಗಿವೆ ಒಂದರಮೇಲೊಂದು.. ಗಲ್ಲ ರಂಗೇರಿದೆ.. ತುಟಿಗೆ ರಕ್ತವರ್ಣದ ರಂಗು..
ಥಳ್ ಥಳ ಹೊಳೆಯುವ ವಿವಿಧ ಹೊನ್ನು..
ಮೋಹನ ಕಂಠಿ, ಮಲ್ಲಿಗೆಯ ಸರ, ಹವಳದ ಕಂಠಿ, ಕೊತ್ತಂಬರಿ ಸರ..
ಕೈಗೆ ಮುತ್ತು, ಹವಳ, ವಜ್ರದ.. ಬಳೆಗಳು..
ವರ ಬಂದ, ವರ ಬಂದ.. ಗಡಿಬಿಡಿ..
ತಲೆಯೆತ್ತಿ ನೋಡಿದರೆ..
ಅರೇ! ಯಾರಿದು?
ಮನೋಹರ, ಅಶ್ವಗಳು ಎಳೆಯುತ್ತಿರುವ ರಥದಲ್ಲಿ.. ತಲೆಗೆ ಪೇಟ, ಕತ್ತಿಗೆ ಚಕ್ರ ಸರ, ಸಿಲ್ಕಿನ ಧೋತಿ.. ಕಸೂತಿಯ ಜುಬ್ಬಾ..
ಮಂಟಪಕ್ಕೆ ವರ ವಧು..
ಮುಗಿಲ ಮನೆ ತುಂಬಾ ಗಲ ಗಲ.. ಪೆಪೆ.. ಪೇ... ನಾದ ಉತ್ತುಂಗಕ್ಕೆ..
ಸಾಕ್ಷಾತ್ ವಿಷ್ಣು ಮತ್ತು ಲಕ್ಷ್ಮಿ!
ಇವತ್ತಿನ ಮುಂಜಾವು ಮನೋಹರ ಮತ್ತವರ ಪತ್ನಿ ಶೀಲಾ ಅವರಿಗೆ ಅರ್ಪಿತ!


ವಿಷಯ ಸಿದ್ಧವಾಯಿತಾದರೂ ಮನೋಹರ್ ಇವತ್ತು ವಿವಿಧತೆಯಲ್ಲಿ ಐಕ್ಯತೆ ಸಬ್ಜೆಕ್ಟ್ ಕೊಟ್ಟರು.. ಹಾಗಾಗಿ ಆಲೋಚಿಸಿ ಮೊದಲ ಬಾರಿಗೆ ನಮ್ಮ ಮಾತೃ ಭಾಷೆಯಲ್ಲಿ ಬರೆದೆ. ಇನ್ನು ನೀವುಂಟು ನಿಮ್ಮ ಅಭಿಪ್ರಾಯವುಂಟು.. ಏನಂತಿರಾ ಮುಂಜಾವಿಗರೇ?


ಅವತಾರ!

ನಿತ್ಯವೂ ನಾ ತೋರುತಿಹ ಹಲವು ಅವತಾರಗಳಲಿ


ನನ್ನನ್ನು ಹುಡುಕುವಿಯಾದರೆ ನಿನಗೆ ನಿರಾಶೆ ಖಂಡಿತ


ನಾ ಬರೇ ಒಲವಿನ ದಾಸಿ.. ಮತ್ತೇನೂ ಅಲ್ಲ!

ದೂರಮಾಡುವೆಯೇಕೆ ಒಲವೇ?


ಒಲವೇ,

ನಿನ್ನಿಂದ ದೂರ ನಡೆಯುವುದೆಂದರೆ

ನನ್ನ ನಾ ಕಳಕೊಂಡಂತೆಯೇ...

ಅವಳ ಪರವಾಗಿ..

ಅವಳ ಪರವಾಗಿ!
-----------------

ಅವನು: ಸುಖ ದುಃಖೆ ಸಮೇ ಕೃತ್ವಾ ಲಾಭಾ ಲಾಭೌ ಜಯಾ ಜಯೌ

ತಥೋ ಯುದ್ಧಯಾ ಯುಜ್ಯಸ್ವ ನೈವಮ್ ಪಾಪಮ್ ಅವಪ್ಸ್ಯಸಿ||

ಅವಳು ಪಕಪಕನೆ ನಕ್ಕಳು!

ಅವನು: ಶಾಂತಂ ಪಾಪಂ! (ಕೆನ್ನೆಗೆ ಬಡಕೊಂಡ) ಏನೇ! ಭಗವದ್ಗೀತೆಗೆ ಅಪಮಾನ ಮಾಡುತ್ತಿಯೇ!

ಅವಳು: ಮತ್ತೇನನ್ನಲಿ ನಾನು! ನಿಂಗೆ ಗೊತ್ತಾ..
ಅತೀ ನೋವು ಮತ್ತು ಅತೀ ನಲಿವಿನಲ್ಲೇ ಸುಂದರ ಕಾವ್ಯಗಳು ಸೃಷ್ಟಿಯಾಗೋದು ಬೆಪ್ಪಾ!!!
ನೋವು ಹೆಚ್ಚು ಅನುಭವಿಸಿದಷ್ಟು ಮತ್ತಷ್ಟು ಸುಂದರ ಕಾವ್ಯ!
ಹಾಗೆಯೇ ನಲಿವು!
ಹಾ! ನೋವಾಗಲಿ ನಲಿವಾಗಲಿ ತಡಕೊಳ್ಳುವ ಪರಧಿ ದಾಟಿದರೆ ಮತ್ತೆ ಮೌನ.. ಸಮಾಧಿ ಸ್ಥಿತಿ! ಅಲೌಕಿಕ ಭಾವ!

ಅವನು ಮತ್ತೆ ಮಾತನಾಡಲಿಲ್ಲ.. ಅರ್ಥವಾಗಿರಬಹುದೆಂದು ಕಾಣುತ್ತೆ ಅವಳ ಮನಸ್ಸು!

[Detachment and equanimity are essential for the spiritual seeker.
Work as such does not bind any but it is the attachment to the results of actions that binds the individual. ]
ಸುಖ-ದುಃಖ, ಜಯ-ಅಪಜಯ, ಲಾಭ-ನಷ್ಟ ಎಲ್ಲವನ್ನೂ ಸಮಾನವಾಗಿ ಸೇವಿಸಿ ತಾವರೆಯ ಪತ್ರದಮೇಲಿನ ನೀರಿನ ಹನಿಯಂತೆ ಸಂಸಾರದಲ್ಲಿದ್ದು ಜಯಿಸಬೇಕು ಎಂದು ಅವನು ಅವಳಿಗೆ ಉಪದೇಶ ಕೊಟ್ಟಾಗ ಅವಳು ಅವನಿಗಂದದನ್ನು ನನಗೆ ಹೇಳಿದಳು.. ಮತ್ತದನ್ನು ನಾನು ಅವಳಂದಂತೆ ಇಲ್ಲಿ ಬರೆದಿದ್ದೇನೆ!


-ಇತೀ
 ಅವಳ ಪರವಾಗಿ ನಾನು

13 August, 2013

ಮಾಸ ಭೇದವೇಕೆ ಕೋಗಿಲೆ?


ವಸಂತ ಮಾಸದಲ್ಲಿ ಪಂಚಮರಾಗ, ಕುಹೂ... ಕುಹೂ..

ವರ್ಷಋತುವಿನಲ್ಲಿ, ಕುಹ್ ಕುಹ್, ಕುಹ್ ಕುಹ್

ಮಾಧುರ್ಯವೇ ಮಾಯ!

ಯಾಕೆ ಕೋಗಿಲೆ, ಮಾಸದಲ್ಲೂ ಭೇದ ತೋರುವೆ?

(ಇಂದು ಬೆಳಿಗ್ಗೆ ಹಾಲು ತರಲು ಹೋದಾಗ ಕೇಳಿದ ಕೋಗಿಲೆಯ ಕೂಗು ಮೂಡಿಸಿದ ಪ್ರಶ್ನೆ)

ಪಾಠ!

ನೋವು ಕಲಿಸುವ ಪಾಠ ನಲಿವೆಂದೂ ಕಲಿಸೊಲ್ಲವೇಕೆ?

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...