ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
18 October, 2010
ಬದುಕಿನ ತಿರುವು
ಜೀವನದಲ್ಲಿ ಅವಕಾಶಗಳು ಯಾವಾಗ ಬರುತ್ತದೆಯೋ ಎಂದು ನಮಗೆ ತಿಳಿರುವುದಿಲ್ಲ. ಅಪ್ಪಿ ತಪ್ಪಿ ನಮ್ಮಲ್ಲಿ ನುಸುಳಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದೇ ಜಾಣತನ. ಈ ನನ್ನ ನಲ್ವತ್ತು ವಸಂತಗಳ ಕಾಲ ನಾನು ನನ್ನ ಅದೃಷ್ಟವು ನನ್ನ ಬಾಗಿಲನು ತಟ್ಟುವುದೇ ಎಂದು ಕಾದಿದ್ದೆ. ಕೊನೆಗೂ ಈ ಎರಡು ವರುಷಗಳ ಕಾಲ ಅಂತಹ ಅವಕಾಶವು ನನ್ನನ್ನು ಹುಡುಕಿಕೊಂಡು ಬಂದಿದೆ. ಬಹುಶಃ ನಿಮಗೆಲ್ಲರಿಗೂ ಅದರ ಬಗ್ಗೆ ತಿಳಿದರೆ ನಗೆಯು ಬರುವುದೇನೋ! ಆದರೆ ನನಗಾದರೋ ಅದು ಬಹಳ ಮುಖ್ಯ. ಪ್ರತಿಭೆಯಿದ್ದರೂ( ಹಾಗಂತ ನಾನು ತಿಳಿದಿದ್ದೇನೆ) ಬಳಸಲಾಗದ ದುರಾದೃಷ್ಟ ನನ್ನದು. ಮಕ್ಕಳ ವಿದ್ಯೆಗಾಗಿ ಎಂದು ಪ್ರಾರಂಭಿಸಿದ ಮನೆಪಾಠವು ನನ್ನ ಬುದ್ಧಿ ಮಟ್ಟವನ್ನು ಹೆಚ್ಚಿಸಿತು. ಹಾಗೆಯೇ ಇನ್ನೂ ಹೆಚ್ಚಿನ ಹಣವನ್ನು ಗಳಿಸುವ ಯೋಜನೆ ಯಿಂದ ಮಾಡಿದ ಚಿತ್ರ ಕಲಿಸುವ ತರಗತಿಯಿಂದಲೂ ಹಣಕ್ಕಿಂತ ನನ್ನ ಚಿತ್ರದ ಗುಣಮಟ್ಟವು ಉತ್ತಮವಾಯಿತು.
ಆದರೆ ನನಗೆ ನನ್ನ ಇತರ ಚಟುವಟಿಕೆಗಳಿಗೆ ಸಮಯವಿಲ್ಲವಾಯಿತು. ಹಾಗಾಗಿ ನಾನು ಬ್ಲಾಗು ಗಳಿಂದ ದೂರವುಳಿದೆ. ಇಂತಹ ದಿನಗಳಲ್ಲಿ ಒಂದು ಜಿಮ್ನವರು ಮಕ್ಕಳಿಗಾಗಿ ನಡೆಸುವ ಕ್ಯಾಂಪ್ ನಿಂದ ನನಗೆ ಎರಡು ವಿಶೇಷ ತರಗತಿಗಳನ್ನು ನಡೆಸುವ ಅವಕಾಶ ಬಂತು. ( ತರಗತಿ ನಡೆಸಿ ಬಂದ ನಂತರವೂ ನನಗೆ ಈ ಅವಕಾಶ ಸಿಕ್ಕ ಬಗ್ಗೆ ಆಶ್ಚರ್ಯವಾಗುತ್ತದೆ) ಅದೂ ಕೂಡ ಒಂದಕ್ಕೊಂದು ಸಂಬಂಧಪಡದ ವಿಷಯದಲ್ಲಿ!!! ಮೊದಲನೆ ದಿನ ಒಂದಿಷ್ಟು ವಿಜ್ಞಾನ ಪ್ರಯೋಗ(ಅಡುಗೆ ಮನೆಯ ಸಾಮಾನು ಉಪಯೋಗಿಸಿ), ಎರಡನೆ ದಿನ ನಮ್ಮ ಪುರಾಣದ ಕಥೆಗಳನ್ನು ಹೇಳುವುದು. ತಯಾರಿಮಾಡಲು ಒಂದಿಷ್ಟೂ ಪುರುಸೊತ್ತು ಇರಲಿಲ್ಲ... ಇನ್ನೂ ಸಹ ನನ್ನ ಮನೆಪಾಠದ ಮಕ್ಕಳ ಪರೀಕ್ಷೆ ಮುಗಿದಿರಲಿಲ್ಲ. ದಿನ ಹತ್ತು ಗಂಟೆಗೆ ಮಲಗುವವಳು ೧೧ದರ ತನಕ ತಯಾರಿ ನಡೆಸಿದೆ.( ಬೆಳಿಗ್ಗೆ ೪ಕ್ಕೆ ಏಳಬೇಕಲ್ಲವಾ ಅದಕ್ಕೆ) ಹಾ!!! ನನ್ನ ತಯಾರಿಗೆ ಮತ್ತೆ ಇಂಟರ್ನೆಟ್ನ ಪ್ರಾಯೋಜನೆ ಎಂದು ಹೇಳಬೇಕಾಗಿಲ್ಲ ತಾನೆ!!!ಅಂತೂ ಇಂತೂ ನನ್ನ ತಯಾರಿ ಜೋರಾಗಿ ನಡೆಯಿತು. ನನ್ನ ಮಗನೂ ಸಹಾಯ ಮಾಡಿದ. ಆ ದಿನವೂ ಬಂತು. ಮುಂಚಿನ ದಿನದಿಂದಲೇ ನನ್ನ ಮೈಯೊಳು ಸಣ್ಣನೆ ನಡುಕ!! ಒಂದು ವೇಳೆ ನನ್ನ ನೆನಪು ಕೈಕೊಟ್ಟ್ರೆ... ಪ್ರಯೋಗ ಸರಿಯಾಗಿ ನಡೆಯದಿದ್ರೆ... ಎಲ್ಲವನ್ನೂ ಅವಕಾಶ ಕೊಟ್ಟ ಆ ಶ್ರೀರಾಮನ ಮೇಲೆ ಹಾಕಿ ಹೋದೆ. ನಾನು ನೆನೆಸಿದಕ್ಕಿಂತ ಚೆನ್ನಾಗಿ ನಡೆಯಿತು..(ಎರಡು ಪ್ರಯೋಗ ಕೈಕೊಟ್ಟವು) ಮರುದಿನ ಕಥೆಯೂ ಸಾಧಾರಣ ಚೆನ್ನಾಗಿಯೇ ನೆರವೇರಿತು. ಇಂತಹ ಒಂದು ಅಪೂರ್ವ ಅವಕಾಶಕ್ಕಾಗಿ ನನ್ನ ರಾಮನಿಗೆ ಅನೇಕಾನೇಕ ಧನ್ಯವಾದಗಳು!!!
06 January, 2010
ನೆನಸದೇ ಬಂದ ಬಾಳಿನ ತಿರುವುಗಳು!
ಮಗನ ಭವಿಷ್ಯಕ್ಕಾಗಿ ಗಣಕ ಸಂಬಂಧೀ ಚಟುವಟಿಕೆಗಳಿಗೆ ತಿಲಾಂಜಲಿಯಿತ್ತು, ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಹಣದ ತಯಾರಿಮಾಡಲು ತೊಡಗಿದೆ. ಸಾಲಸೋಲ ಮಾಡದೇ, ಕೋಚಿಂಗ್ ತರಗತಿಗೂ ಕಳಿಸದೇ ಅವನಿಗೆ ಬೇಕಾದ ಇಂಜಿನಿಯರ್ ತರಗತಿ ಸೇರಲು, ಮಗಳ ಕಾಲೇಜ್ ಮೊತ್ತದ ತಯಾರಿ... ಹುಂ... ದುಡಿದೆ. ಇದರಲ್ಲೂ ರಾಮನ ದಯೆ ಬಹಳ! ನನಗೆ ಪ್ರಿಯವಾದ ಪಾಠ(ಮನೆಪಾಠ) ಕಲಿಸುವುದು, ಚಿತ್ರ ಕಲಿಸುವುದು... ಇದರಿಂದ ನನಗೆ ಬೇಕಾದ ವಿತ್ತವು ಸಿಕ್ಕಿತು. ಆದರೆ ನನಗೆ ಗಣಕ ಮಾತ್ರವಲ್ಲ, ತೋಟದ ಕೆಲಸದಿಂದಲೂ ದೂರವುಳಿಯಬೇಕಾಯಿತು. ಇಷ್ಟರ ಮಧ್ಯೆ ನನಗೆ ಚಿತ್ರ ಮಾಡಿಕೊಡುವಂತೆ ಸಂಬಂಧಿಕರೊಬ್ಬರಿಂದ ಕೇಳಿಕೆ ಬಂತು. ಅವರ ಹೂಗಳ ಚಿತ್ರ ಮಾರಾಟದಿಂದ ನಾನು ನೆನೆಸಿದಕ್ಕಿಂತಲೂ ಹೆಚ್ಚಿನ ಮೊತ್ತ ಪಡೆದೆ. ಇದರ ಪ್ರೇರಣೆಯಿಂದ ನಾನು ವನ್ಯಮೃಗಗಳ ಚಿತ್ರ ಮಾಡಿಟ್ಟಿದ್ದೇನೆ, ಮಾರಾಟ ಮಾಡುವ ಉದ್ದೇಶದಿಂದ. ಮುಂದೆ ಅವನಿಚ್ಛೆ!
ಇಲ್ಲಿ ನನ್ನ ಕೆಲಸದ ಹಿಂದೆ ಅಗೋಚರ ಶಕ್ತಿ ಕೆಲಸ ಮಾಡಿತ್ತು. ಬೆಳಗೆ ನಾಲ್ಕಕ್ಕೆ ಸುರುವಾದ ನನ್ನ ದಿನಚರಿ ರಾತ್ರಿ ಹತ್ತರವರೆಗೂ ನಡೆದದ್ದು ಕೇವಲ ಹನುಮನು ನನ್ನಲ್ಲಿ ಶಕ್ತಿಯನ್ನು ತುಂಬಿದ ಕಾರಣ! ಪ್ರತಿ ದಿನ "ಹರಿವ ಲಹರಿ"ಯ ಜ್ಯೋತಿಯ ನೆನಪಾಗುತ್ತಿತ್ತು. ಕನ್ನಡ ಬ್ಲಾಗಿಗರಲ್ಲಿ ನಡೆಯುತ್ತಿದ್ದ ವಿಚಾರ ವಿನಿಮಯ, ಎಲ್ಲಕ್ಕೂ ತಡೆ ಬಿದ್ದರೂ, ಮುಂದೊಂದು ದಿನ ಮತ್ತೆ ಬ್ಲಾಗಿನಲ್ಲಿ ಮನವನ್ನು ತೆರೆಯಲು ಬರುವೆ ಎಂಬ ಆಶಾ ಭಾವನೆಯಿಂದ ಜೀವನದಲ್ಲಿ ಆಸಕ್ತಿಯನ್ನು ಕಳೆಯಲಿಲ್ಲ. ಹಣಮಾಡುವ ಯಂತ್ರವಾಗಿ ಉಳಿದೆನೋ ಎಂಬ ಭಾವನೆಯೂ ಆಗಾಗ ಕಾಡುತ್ತಿತ್ತು.

01 January, 2010
06 June, 2008
ಮತ್ತೆ ಪ್ರತ್ಯಕ್ಷಳಾದೆ!
ಮೊದಲು ಕ್ಷಮೆ ಬೇಡುತ್ತೇನೆ! ಮತ್ತೆ ಮುಂದುವರಿಸುತ್ತೇನೆ.
ಸಾಧಾರಣ ಮೂರು, ನಾಲ್ಕು ತಿಂಗಳು ಗಣಕ ಯಂತ್ರದ ಪ್ರಪಂಚದಿಂದ ದೂರವಾಗಿ ನನ್ನ ಸಂಸಾರದಲ್ಲಿ ಮುಳುಗಿದ್ದೆ. ಮಕ್ಕಳ ಹಿತಕ್ಕೋಸ್ಕರ ಹೀಗೆ ಮಾಡಬೇಕಾಯಿತು. ಆದರೂ ಈ ಎರಡು ತಿಂಗಳು ಬೇಸಿಗೆಯ ರಜೆಯನ್ನು ವ್ಯರ್ಥಮಾಡದೇ ಕಲಾ ಶಿಬಿರವನ್ನೂ ಮತ್ತು ೧೦ನೇ ತರಗತಿಯ ಮಕ್ಕಳಿಗೆ ಸಂಸ್ಕೃತ ತರಗತಿಯನ್ನೂ ನಡೆಸಿ ಆರ್ಥಿಕ ಸಂಪಾದನೆಯ ಜೊತೆ ಕಲಾಸೇವೆಯನ್ನು ಮಾಡಿದ ತೃಪ್ತಿ ನನ್ನಲ್ಲಿ ಉಳಿದಿದೆಯಾದರೂ ನನ್ನ ಮತ್ತು ಪ್ರಪಂಚದ ಕೊಂಡಿಯಾದ ಅಂತರ್ಜಾಲದಿಂದ ದೂರ ಉಳಿದ ನೋವು ಇನ್ನೂ ದೂರವಾಗಲಿಲ್ಲ. ಪ್ರಾರಂಭದಲ್ಲಿ ಶೂರಳಂತೆ ಬ್ಲಾಗ್ ನಲ್ಲಿ ಮೊದಲ್ಮೊದಲು ನನ್ನ ಮನ ಬಿಚ್ಚಿ, ಒಂದು ದಿನ ಮಾಯವಾಗಿ ಹೋಗಬೇಕಾದ ಅಪಕೀರ್ತಿ ಹೊರಬೇಕಾಯಿತು. ಪರವಾಗಿಲ್ಲ.... ಮಕ್ಕಳಿಗೋಸ್ಕರ ಅಷ್ಟೆಲ್ಲ ಮಾಡಬೇಕಾದುದು ತಾಯಂದಿರ ಹೊಣೆಯಾಗಿದೆ. ಮೊದಲು ಗೃಹಿಣಿಯ ಧರ್ಮ ಮತ್ತೆ ಉಳಿದುದು ಅಲ್ಲವೇ?
ಕಲಾ ಶಿಬಿರದ ಕೆಲವೊಂದು ಚಿತ್ರ ಹಾಕಿ ನನ್ನ ಬರಹಕ್ಕೆ ಸಾಕ್ಷಿ ಕೊಡುತ್ತೇನೆ!

16 January, 2008
ಉಡುಪಿ ಪರ್ಯಾಯ : ವಿವಾದ?

ಸಮಾಜಕ್ಕೆ ಮಾದರಿಯಾಗಬೇಕಾಗಿರುವ ಮಠಾಧಿಪತಿಗಳು ಈ ಪರ್ಯಾಯದ ಸುಸಮಯದಲ್ಲಿ ಸಾರ್ವಜನಿಕವಾಗಿ ಕಚ್ಚಾಡುವುದು ಸರಿಯೇ? ಉಡುಪಿಯ ಅಷ್ಟ ಮಠ, ಅದರ ಯತಿಗಳ ಮೇಲೆ ಅಪಾರ ವಿಶ್ವಾಸವಿರುವ ನನ್ನಂತವರಿಗೆ ಇದು ದೊಡ್ಡ ಅಘಾತ. ಕೇವಲ ವಿದೇಶ ಯಾತ್ರೆಯಂತಹ ಕ್ಷುಲ್ಲಕ ವಿಷಯದಲ್ಲಿ ತಲೆಕೆಡಿಸಿ ಮದ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಕೃಷ್ಣನ ಪೂಜೆಯ ವಿಷಯವು ನ್ಯಾಯಾಲಯದ ಮೆಟ್ಟಲೇರಿ ಹೋಗಿ ಹೀಗೆ ಸಾರ್ವಜನಿಕವಾಗಿ ನಗೆಗೀಡಾಗಿದೆ. ಎಂತಹ ವಿಪರ್ಯಾಸ! ಸರಿ ಯಾವುದಾದರು ಮಠಾದೀಶರು ತಮ್ಮ ಹಠ ಬಿಟ್ಟು ಕೊಡಬಹುದಲ್ಲವೇ. ಇಲ್ಲ, ಇಲ್ಲಿ ಎಲ್ಲರೂ ತಮ್ಮ ತಮ್ಮ ಹಕ್ಕನ್ನು ಬಿಟ್ಟು ಕೊಡಲು ಸಿದ್ಧರಿಲ್ಲ. ಕೆಲವೇ ದಿನಗಳ ಹಿಂದೆ ಪೇಜಾವರ ಶ್ರೀಗಳು ಇದು ವಾದವಲ್ಲ ಬದಲಾಗಿ ಬೇರೆ ಬೇರೆ ದೃಷ್ಟಿ ಕೋನ ಅಷ್ಟೇ ಎಂದು ಹೇಳಿಕೆ ಕೊಟ್ಟಿದ್ದರು. ನಾವೆಲ್ಲ ಒಟ್ಟಿಗೆ ಕುಳಿತು ಇದನ್ನು ಬಗೆಹರಿಸುವೆವು ಎಂದಿದ್ದರು. ಆದರೆ ಮಕರ ಸಂಕ್ರಾತಿಯ ಹಿಂದಿನ ದಿನ ಈವಿಷಯ ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯವು ದಾವೆಗಳನ್ನು ವಜಾಮಾಡಿದಾಗ, ಪುತ್ತಿಗೆ ಮಠದ ಕಡೆಯವರು ಪಟಾಕಿ ಸಿಡಿಸಿ ಸಂತೋಷ ಆಚರಿಸಿದರೆಂದು ಪತ್ರಿಕೆಯು ವರದಿ ಮಾಡಿದೆ. ಇದು ಸರಿಯೇ? ಇದನ್ನು ಓದಿದಾಗಲೇ ಇದು ಕೇವಲ ಒಣ ಪ್ರತಿಷ್ಠೆಯಗಾಗಿ ವಿವಾದ ಮಾಡಿರುವುದು ಎಂದು ಸ್ಪಷ್ಟವಾಗುತ್ತದೆ.

ಶೀಕೃಷ್ಣನು ಜನಸಾಮಾನ್ಯರ ದೇವನು, ಗೋಪ ಬಾಲಕನು, ಕೇವಲ ಒಂದು ತುಲಸೀದಳದ ಸಮರ್ಪಣೆಯಿಂದಲೇ ತೃಪ್ತನು. ಅಂತವನನ್ನು ಯಾರು ಪೂಜೆ ಮಾಡಿದರೇನು? ಇಡೀ ವಿಶ್ವವನ್ನೇ ವ್ಯಾಪಿಸಿರುವವನನ್ನು ವಿದೇಶಯಾತ್ರೆ ಮಾಡಿದವರು ಪೂಜಿಸಬಾರದೇಕೆ? ಪುತ್ತಿಗೆ ಶೀಗಳು ಪರ್ಯಾಯ ಪೀಠದಲ್ಲಿ ಕುಳಿತುಕೊಳ್ಳಬಹುದು ಆದರೆ ಕಡೆಗೋಲು ಹಿಡಿದ ಬಾಲಗೋಪಾಲನನ್ನು ಪೂಜಿಸಬಾರದು..... ಈ ನಿಯಮವೇಕೆ? ಈ ಯತಿಗಳೆಲ್ಲ ಸಾಮಾನ್ಯರಲ್ಲ. ವೇದಾಭ್ಯಾಸ ಮಾಡಿದ ವಿದ್ವಾಂಸರು. ನಿತ್ಯ ಭಗವದ್ಗೀತೆಯ ಪಾರಾಯಣ ಮಾಡುವವರು, ಅಂತವರಿಗೆ ಹರಿಯ ಅಂತರ್ಯ ತಿಳಿಯದೇನು???? ಶುದ್ಧ ಭಕ್ತಿಯ ಬಯಸುವವನಿಗೆ ಬಂಗಾರ, ವಜ್ರ, ಮಾಣಿಕ್ಯಗಳ ಕವಚವೇನೋ ಮಾಡಿದರು. ಹೋಗಲಿ ಇದು ಭಕ್ತರು ಪ್ರೀತಿಯಿಂದ ಕೊಟ್ಟ ಕಾಣಿಕೆ ಪರವಾಗಿಲ್ಲ. ಆದರೆ ಅವನು ಎಂದಾದರೂ ಕೇವಲ ಭಾರತೀಯರು ಮಾತ್ರ ತನ್ನ ಭಕ್ತರು ಎಂದಿದ್ದಾನೆಯೇ? ಕುರುಬರ ಕನಕನು ಕರೆದನೆಂದು ಕಿಟಿಕಿಯಲ್ಲೇ ಅವನಿಗೆ ದರುಶನ ತೋರಿದವನನ್ನು ಪೂಜಿಸಲು ಯಾವ ನಿಯಮಗಳು ಬೇಕಾಗಿಲ್ಲ. ಅದೂ ಈ ಕಲಿಯುಗದಲ್ಲಿ ಅವನ ಅಸ್ಥಿತ್ವಕ್ಕೇ ಸಂಚಕಾರ ಬಂದಿರುವಾಗ. ಪುರಂದರ ದಾಸ ಮತ್ತೆ ಮತ್ತೆ ತಮ್ಮ ಪದ್ಯದಲ್ಲಿ ಹಾಡಿರುವಂತೆ ಹರಿಗೆ ತಾಳ ತಂಬೂರ ಜಾಗಟೆ ಶಂಖಗಳಿಗಿಂತ ಭಕ್ತಿಯು ಮುಖ್ಯ ಎಂದಿದ್ದಾರೆ. ನನಗೆ ನೆನಪಿದಂತೆ ಸರಸ್ವತಿಯೇ ನಾಲಗೆಯಲಿ ನಲಿದಾಡುತ್ತಿರುವ ಬನ್ನಂಜೆ ಗೋವಿಂದಾಚಾರ್ಯರು ಒಮ್ಮೆ ಹೇಳಿರುವಂತೆ ದೇವನನ್ನು ಪೂಜಿಸಲು ಯಾವ ನಿಯಮಗಳೂ ಬೇಕಾಗಿಲ್ಲ, ಮೆಟ್ಟು ಹಾಕಿ ಸ್ಮರಿಸಿದರೂ ಭಕ್ತವತ್ಸಲನು ಓಗೊಡುತ್ತಾನೆ. ಮುಖ್ಯವಾಗಿ ಬೇಕಾಗಿರುವುದು ಶೃದ್ಧೆ, ವಿಶ್ವಾಸ ಮತ್ತು ಭಕ್ತಿ.
" ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು" ಎಂದು ಪುರಂದರದಾಸರು ಹೇಳಿರುವಂತೆ ಭಕ್ತರ ಭಕ್ತನು ಆದ ಆ ವನಮಾಲಿಯು ಎಲ್ಲರಿಗೂ ಸದ್ಭುದ್ಧಿಯನ್ನು ಕೊಟ್ಟು ಈ ಪರ್ಯಾಯವನ್ನು ಸುಲಲಿತವಾಗಿ ನೆರವೇರಿಸಲಿ ಎಂದು ಆ ಜಗನ್ನಾಥನನ್ನು ಬೇಡಿಕೊಳ್ಳುವೆ.
14 January, 2008
07 January, 2008
ಬೈಲಕೂರಿನ ಪೊರಕೆ ಏಟಿನ ಜಾತ್ರೆ!
ಈ ಬೈಲಕೂರನ್ನು ಆಧುನಿಕತೆ ಆವರಿಸಿದ್ದರೂ ವರ್ಷ ಪ್ರತಿ ಚಂದ್ರಮಾನ ಯುಗಾದಿಯ ನಂತರ ಬರುವ ತದಿಗೆಯಂದು ಪೊರಕೆಯಿಂದ 'ಬಡಿ- ಹೊಡಿ’ ಎಂಬ ಜಾತ್ರೆ ತನ್ನ ಎಲ್ಲಾ ಹಳೆ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಈ ಜಾತ್ರೆಯಲ್ಲಿ ಬಾಜಾಭಂತ್ರಿ ಬದಲು ಟಣ್..ಟಣಾ...ಟಣ್ ಎಂಬ ನಾದ ಹೊಮ್ಮಿಸುವ ವಾದ್ಯ ಕನ್ನಾಲಿಗೆ ಮತ್ತು ನಾಡು- ಕಾಡಿನ ತುಂಬ ಮಾರ್ದನಿಗೊಳ್ಳುವ ಮರ್ದನ ವಾದ್ಯವನ್ನು ಉಪಯೋಗಿಸುತ್ತಾರೆ. ಸಿಡಿಮದ್ದುಗಳ ಆರ್ಭಟವಿಲ್ಲ. ರಥೋತ್ಸವದ ಬದಲಾಗಿ ಮನುಷ್ಯ ಮನುಷ್ಯರನ್ನೇ ಹೆಗಲ ಮೇಲೆ ತಲೆ ಕೆಳಗೆ ಮಾಡಿ ಹೊತ್ತು ತರುವ ಸಂಪ್ರದಾಯವಿದೆ. ಮೆರವಣಿಗೆಯ ಮುಂದೆ ಕುಸ್ತಿ, ಒಬ್ಬರಿಗೊಬ್ಬರು ಮುಂಗೈ ಹಿಡಿದು ಶಕ್ತಿ ಪಣಕ್ಕಿಡುವ ಸ್ಪರ್ಧೆಗಳಿವೆ. ಸಮಾರಾಧನೆಯ ಬದಲು ಮನೆ ಮನೆಯಿಂದ ತಂದ ಬುಟ್ಟಿ ಅಡುಗೆಯೇ ಭೋಜನ. ಜಾತ್ರೆಯ ಕೊನೆಯಲ್ಲಿ ’ಬರಲಿನ’(ಪೊರಕೆಯ) ಹೊಡೆದಾಟವಿದೆ.

ಅಂದು ಬೆಳಿಗ್ಗೆ ದೇವಸ್ಥಾನ ಹಾಗೂ ಓಕುಳಿ ತುಂಬಿದ ಹೊಂಡದ ಸುತ್ತಲು ಹಸುರು ಹಂದರ ಹಾಕಲು ಆರಂಭವಾಗುತ್ತದೆ. ತೋರಣ ಕಟ್ಟಲು ಬೇಕಾದ ಬಾಳೆ ಕಂಬಗಳನ್ನು ತರಲು ಪರಂಪರೆಯಂತೆ ಊರಗೌಡರ ಮನೆಗೆ ಹೋಗುತ್ತಾರೆ ಅದೂ ಆರತಿ ವಾದ್ಯಗಳ ಸಮೇತ! ಮೇಳದೊಂದಿಗೆ ಗೌಡರು ಮಾರುತಿಯ ಗುಡಿಗೆ ತಲುಪಿ ಶಂಖನಾದದೊಂದಿಗೆ ಚಪ್ಪರ ಹಾಕಿ ಬಾಳೇ ಕಂಬಗಳನ್ನು ಕಟ್ಟುತ್ತಿದ್ದಂತೆ ಜಾತ್ರೆಗೆ ಚಾಲನೆ ದೊರೆತಂತಾಗುತ್ತದೆ.

ಜಾಲಗಾರ ಮನೆತನದವರು ಹೊಡೆಯಲು ಬೇಕಾದ ಪೊರಕೆಗಳನ್ನು ಜಾತ್ರೆಯ ಹಿಂದಿನ ದಿನವೇ ಸಂಗ್ರಹಿಸುತ್ತಾರೆ. ಲಿಪ್ಪಿ ಹಾಗೂ ಲಕ್ಕೆಯ ಬರಲುಗಳನ್ನು ಪೆಂಡಿ ಕಟ್ಟುತ್ತಾರೆ. ಅವರಲ್ಲಿಗೆ ಹೋಗಿ ಈ ಪೊರಕೆಯ ಗಂಟುಗಳನ್ನು ಮೇಳದೊಂದಿಗೆ ಊರ ತುಂಬೆಲ್ಲ ಮೆರವಣಿಗೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಗಟ್ಟಿ ಮುಟ್ಟಾಗಿರುವ ಪೊರಕೆಗಳನ್ನು ನೋಡಿದ ಜನರು" ಹೌದು ನೋಡಪಾ... ಬರ್ಲ ಅಂದ್ರ ಹೀಂಗಾ ಇರಬೇಕು, ಒಂದು ಹೊಡ್ತ ಬಿತ್ತಂದ್ರ ಮ್ಯಾಕೆ ಏಳಕ ಬಂದಿರಬಾರದು ಹಾಂಗ ಆದಾವು ನೋಡು" ಎಂದು ಜಾಲಗಾರ ಹುಡುಗರಿಗೆ ಶಹಬ್ಬಾಷಗಿರಿ ಕೊಡುತ್ತಾರೆ. ಊರ ಕುಂಬಾರರು ಓಕುಳಿಯಾಡಲು ಬೇಕಾದ ಮಡಕೆಗಳನ್ನು ಹೊತು ತರುತ್ತಾರೆ. ಹೀಗೆ ಜಾತ್ರೆಯಲ್ಲಿ ಸಹಕರಿಸಿದವರೆಲ್ಲರನ್ನೂ ಜಾತ್ರೆಯ ನಂತರ ಉಡುಗೊರೆ ಕೊಟ್ಟು ಗೌರವಿಸುತ್ತಾರೆ.
ಈ ಜಾತ್ರೆಗೆ ಬೈಲಕೂರಿನ ಸುತ್ತಮುತ್ತಲ ಹಳ್ಳಿಗಳಾದ ಅಮರಗೊಳ, ಹಡಗಲಿ, ಗರಸಂಗಿ, ಮದರಿ, ತಂಗಡಿಗೆಯಂಥ ಹಳ್ಳಿಯವರಿಗೂ ಆಮಂತ್ರಣವಿದ್ದೂ ಅವರೂ ಇದರಲ್ಲಿ ಭಾಗವಹಿಸಲು ಬರುತ್ತಾರೆ. ಹೀಗೆ ಬರುವವರನ್ನು ಮೆರವಣಿಗೆಯ ಮೂಲಕ ಓಕುಳಿ ಜಾತ್ರೆಗೆ ಕರೆತರುವಾಗ ದಾರಿಯುದ್ದಕ್ಕೂ ಮುಂಗೈ ಹಿಡಿದು ಆಡುವುದು, ಕುಸ್ತಿ ಮಾಡುವುದು, ಗಜ ನಿಲ್ಲುವುದು( ಹೆಗಲಮೇಲೆ ಮತ್ತೊಬ್ಬನನ್ನು ತಲೆಕೆಳಗೆ ಕಾಲು ಮೇಲೆ ಮಾಡಿ ಹೊತ್ತು ತರುವುದು) ..... ತಮ್ಮ ತಮ್ಮ ಶಕ್ತಿ ಹಾಗೂ ಸಾಮರ್ಥ್ಯ ತೋರುತ್ತಾ ಬರುವವರನ್ನು ಜನರು ಅವರ ತಲೆಯ ಮೇಲೆ ಮಂಡಕ್ಕಿ ಚೆಲ್ಲಿ ಪ್ರೋತ್ಸಾಹ ತುಂಬುತ್ತಾರೆ.
ಹೀಗೆ ಗುಡಿಗೆ ಬರುವಾಗ ಗೋಧೂಳಿಯ ಸಮಯವಾಗುತ್ತದೆ. ದೇವಸ್ಥಾನ ಮುಂದೆ ಸುಮಾರು ಎಂಟು ಅಡಿ ಅಗಲ ಹಾಗೂ ಐದಾರು ಆಳದ ಹೊಂಡದಲ್ಲಿ ಗುಲಾಬಿ ರಂಗನ್ನು ಅದ್ದಿರುತ್ತಾರೆ. ಹನುಮಂತನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಬಣ್ಣದ ಹೊಂಡ ಸುತ್ತ ಐದು ಪ್ರದಕ್ಷಿಣೆ ಹಾಕುತ್ತಿರುವಾಗಲೇ ಜನರು ಓಕುಳಿಯಾಡಲೂ ಪೊರಕೆಯೇಟು ತಿನ್ನಲೂ ಸಿದ್ಧರಾಗುತ್ತಾರೆ. ಪೂಜಾರಿ ಪೊರಕೆ ಪೆಂಡಿಗಳಿಗೂ ಬಣ್ಣದ ಹೊಂಡಕ್ಕೂ ಆರತಿ ಎತ್ತುತ್ತಾನೆ ಮತ್ತು ಸ್ವತಃ ತಾನೇ ಮೊದಲು ಹೊಂಡಕ್ಕೆ ಹಾರುತ್ತಾನೆ. ಜಾತ್ರೆಯ ನಿಜವಾದ ಸ್ವಾರಸ್ಯ ಈಗ ಪ್ರಾರಂಭವಾಯಿತು ನೋಡಿ! ಪುಜಾರಿ ಹೊರಬರಲಿಕ್ಕಿಲ್ಲ ಜನರು ಒಬ್ಬರಮೇಲೊಬ್ಬರು ಎರಗಿ ಪೊರಕೆಗಳನ್ನು ಎಳೆಯುವ ಪೈಪೋಟಿಯಲ್ಲಿ ತೊಡಗುತ್ತಾರೆ. ಹೊಂಡಕ್ಕೆ ಇಳಿದವರು ಮಡಿಕೆಯೋ, ಬಕೆಟೋ, ಕೊಡದಲ್ಲೋ ಓಕುಳಿ ತುಂಬಿಕೊಂಡು ಬಂದು ನಿಂತಿರುವವರ ಮೇಲೆ ಬಣ್ಣದ ನೀರೆರಚುತ್ತಾರೆ. ಬಣ್ಣ ಎರಚಿಸಿಕೊಂಡವರು ಪೊರಕೆಗಳಿಂದ ತಮ್ಮೆಲ್ಲ ಶಕ್ತಿ ಒಟ್ಟು ಮಾಡಿ ಓಕುಳಿ ಹಾಕಿದವರನ್ನು ಹೊಡೆಯುತ್ತಾರೆ. ಏಟು ಬಿದ್ದರೂ ಮತ್ತೆ ಹೊಂಡಕ್ಕೆ ಹಾರಿ ಮತ್ತೆ ಓಕುಳಿ ಎರಚಿ ಮತ್ತೊಮ್ಮೆ ಏಟು ತಿನ್ನುತ್ತಾರೆ. ಏಟು ಕೊಡುತ್ತಿದ್ದವರೂ ತಾವೂ ಹೊಂಡಕ್ಕೆ ಹಾರಿ ಬೇರೆಯರ ಪೊರಕೆಯೇಟು ತಿನ್ನುತ್ತಾರೆ. ವಾತಾವರಣದಲ್ಲೆಲ್ಲ ದೀಪಾವಳಿಯ ಪಟಾಕಿ ಸದ್ದಿನಂತೆ ಪೊರಕೆ ಪೆಟ್ಟಿನಿಂದ ಬರುವ ಸದ್ದು ಹಾಗೂ ಜನರ ಕೇಕೇ ಶಬ್ದಗಳಿಂದ ಅನುಕರಣಿಸುತ್ತದೆ. ಇಲ್ಲಿ ಯಾರೂ ಹೊಡೆತ ತಿನ್ನುವುದನ್ನು ತಪ್ಪಿಸಿಕೊಳ್ಳುವುದಿಲ್ಲ ಬದಲಿಗೆ ಬಾಸುಂಡೆಗಳು ಮೈ ತುಂಬ ಹೆಣೆದಿದ್ದರೂ ಮತ್ತೂ ಹೊಡೆಸಿಕೊಳ್ಳುತ್ತಾರೆ. ಹೊಡೆತ ತಿಂದವರು ಮತ್ತಷ್ಟು ಮಂದಿಗೆ ಹೊಡೆಯಬೇಕೆಂಬ ನಿಯಮವಿರುವುದರಿಂದ ಪೊರಕೆಯ ಪೆಟ್ಟಿನಿಂದ ಯಾರೂ ಮುಕ್ತರಾಗುವುದಿಲ್ಲ. ಬಣ್ಣಹಾಕಿ ಹೊಡೆತ ತಿನ್ನುವುದು ದೇವರ ಸೇವೆಯೆಂದೇ ತಿಳಿಯುತ್ತಾರೆ. ಹೊಂಡದ ನೀರು ಖಾಲಿಯಾಗುವರೆಗೂ ಇದು ನಡೆದು ಬಳಿಕ ಪೊರಕೆ ಸೇವೆಗೆ ತೆರೆ ಬೀಳುತ್ತದೆ. ಹಾ.... ಪೊರಕೆಗಳನ್ನು ಮನೆಗೊಯ್ದು ಮುಂದಿನ ಜಾತ್ರೆಯವರೆಗೂ ಜೋಪಾನವಾಗಿಡುತ್ತಾರೆ. ( ಯಾಕೆಂದು ನನಗೆ ಗೊತ್ತಾಗಿಲ್ಲ. ಹೇಗಿದ್ದರೂ ಮುಂದಿನ ಜಾತ್ರೆಗೆ ಜಾಲಗಾರರು ತಾನೆ ಪೊರಕೆಗಳ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಲೇಖಕರೂ ಏನೂ ತಿಳಿಸಿಲ್ಲ.)
ಇದನ್ನು ಓದಿದಾಗ ವಿದೇಶದಲ್ಲಿ ನಡೆಯುವ ಕಿತ್ತಳೆ , ಟೊಮೇಟೋ ಹಣ್ಣುಗಳನ್ನು ಹೀಗೆ ಮೈಮೇಲೆರಚಿ ನಡೆಯುವ ಜಾತ್ರೆಯ ನೆನಪಾಯಿತು. ಈ ಪೊರಕೆಯೇಟು ತಿನ್ನುವ ಜಾತ್ರೆಯ ಬಗ್ಗೆ ಇಲ್ಲಿರುವ ಆಧುನಿಕ ಯುವಕರೂ ಏನೂ ಪ್ರಶ್ನಿಸದೆ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸುತ್ತಿರುವುದು ಒಂದು ಸೋಜಿಗವೇ ಸರಿ! ನಮ್ಮ ಪೂರ್ವಜರು ಏನೇ ಪದ್ಧತಿ ಮಾಡಿದ್ದರೂ ಅದಕ್ಕೊಂದು ಅರ್ಥವಿರುವುದು ಎಂದು ನಾನು ನಂಬಿದ್ದೆ. ಆದರೆ ಇದು.....!
ಈ ಲೇಖನವನ್ನು ತರಂಗ ಪತ್ರಿಕೆಯಲ್ಲಿ ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ ಬರೆದಿರುವ " ಬೈಲಕೂರಿನ ಜಾತ್ರೆಗೆ ಬನ್ನಿ... ಪೊರಕೆ ಏಟು ತಿನ್ನಿ!" ಎಂಬ ಲೇಖನದಿಂದ ಆರಿಸಲಾಗಿದೆ.

Subscribe to:
Posts (Atom)