ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

07 January, 2008

ಬೈಲಕೂರಿನ ಪೊರಕೆ ಏಟಿನ ಜಾತ್ರೆ!

ಈ ಬೈಲಕೂರನ್ನು ಆಧುನಿಕತೆ ಆವರಿಸಿದ್ದರೂ ವರ್ಷ ಪ್ರತಿ ಚಂದ್ರಮಾನ ಯುಗಾದಿಯ ನಂತರ ಬರುವ ತದಿಗೆಯಂದು ಪೊರಕೆಯಿಂದ 'ಬಡಿ- ಹೊಡಿ’ ಎಂಬ ಜಾತ್ರೆ ತನ್ನ ಎಲ್ಲಾ ಹಳೆ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಈ ಜಾತ್ರೆಯಲ್ಲಿ ಬಾಜಾಭಂತ್ರಿ ಬದಲು ಟಣ್..ಟಣಾ...ಟಣ್ ಎಂಬ ನಾದ ಹೊಮ್ಮಿಸುವ ವಾದ್ಯ ಕನ್ನಾಲಿಗೆ ಮತ್ತು ನಾಡು- ಕಾಡಿನ ತುಂಬ ಮಾರ್ದನಿಗೊಳ್ಳುವ ಮರ್ದನ ವಾದ್ಯವನ್ನು ಉಪಯೋಗಿಸುತ್ತಾರೆ. ಸಿಡಿಮದ್ದುಗಳ ಆರ್ಭಟವಿಲ್ಲ. ರಥೋತ್ಸವದ ಬದಲಾಗಿ ಮನುಷ್ಯ ಮನುಷ್ಯರನ್ನೇ ಹೆಗಲ ಮೇಲೆ ತಲೆ ಕೆಳಗೆ ಮಾಡಿ ಹೊತ್ತು ತರುವ ಸಂಪ್ರದಾಯವಿದೆ. ಮೆರವಣಿಗೆಯ ಮುಂದೆ ಕುಸ್ತಿ, ಒಬ್ಬರಿಗೊಬ್ಬರು ಮುಂಗೈ ಹಿಡಿದು ಶಕ್ತಿ ಪಣಕ್ಕಿಡುವ ಸ್ಪರ್ಧೆಗಳಿವೆ. ಸಮಾರಾಧನೆಯ ಬದಲು ಮನೆ ಮನೆಯಿಂದ ತಂದ ಬುಟ್ಟಿ ಅಡುಗೆಯೇ ಭೋಜನ. ಜಾತ್ರೆಯ ಕೊನೆಯಲ್ಲಿ ’ಬರಲಿನ’(ಪೊರಕೆಯ) ಹೊಡೆದಾಟವಿದೆ.

ಅಂದು ಬೆಳಿಗ್ಗೆ ದೇವಸ್ಥಾನ ಹಾಗೂ ಓಕುಳಿ ತುಂಬಿದ ಹೊಂಡದ ಸುತ್ತಲು ಹಸುರು ಹಂದರ ಹಾಕಲು ಆರಂಭವಾಗುತ್ತದೆ. ತೋರಣ ಕಟ್ಟಲು ಬೇಕಾದ ಬಾಳೆ ಕಂಬಗಳನ್ನು ತರಲು ಪರಂಪರೆಯಂತೆ ಊರಗೌಡರ ಮನೆಗೆ ಹೋಗುತ್ತಾರೆ ಅದೂ ಆರತಿ ವಾದ್ಯಗಳ ಸಮೇತ! ಮೇಳದೊಂದಿಗೆ ಗೌಡರು ಮಾರುತಿಯ ಗುಡಿಗೆ ತಲುಪಿ ಶಂಖನಾದದೊಂದಿಗೆ ಚಪ್ಪರ ಹಾಕಿ ಬಾಳೇ ಕಂಬಗಳನ್ನು ಕಟ್ಟುತ್ತಿದ್ದಂತೆ ಜಾತ್ರೆಗೆ ಚಾಲನೆ ದೊರೆತಂತಾಗುತ್ತದೆ.

ಜಾಲಗಾರ ಮನೆತನದವರು ಹೊಡೆಯಲು ಬೇಕಾದ ಪೊರಕೆಗಳನ್ನು ಜಾತ್ರೆಯ ಹಿಂದಿನ ದಿನವೇ ಸಂಗ್ರಹಿಸುತ್ತಾರೆ. ಲಿಪ್ಪಿ ಹಾಗೂ ಲಕ್ಕೆಯ ಬರಲುಗಳನ್ನು ಪೆಂಡಿ ಕಟ್ಟುತ್ತಾರೆ. ಅವರಲ್ಲಿಗೆ ಹೋಗಿ ಈ ಪೊರಕೆಯ ಗಂಟುಗಳನ್ನು ಮೇಳದೊಂದಿಗೆ ಊರ ತುಂಬೆಲ್ಲ ಮೆರವಣಿಗೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಗಟ್ಟಿ ಮುಟ್ಟಾಗಿರುವ ಪೊರಕೆಗಳನ್ನು ನೋಡಿದ ಜನರು" ಹೌದು ನೋಡಪಾ... ಬರ್ಲ ಅಂದ್ರ ಹೀಂಗಾ ಇರಬೇಕು, ಒಂದು ಹೊಡ್ತ ಬಿತ್ತಂದ್ರ ಮ್ಯಾಕೆ ಏಳಕ ಬಂದಿರಬಾರದು ಹಾಂಗ ಆದಾವು ನೋಡು" ಎಂದು ಜಾಲಗಾರ ಹುಡುಗರಿಗೆ ಶಹಬ್ಬಾಷಗಿರಿ ಕೊಡುತ್ತಾರೆ. ಊರ ಕುಂಬಾರರು ಓಕುಳಿಯಾಡಲು ಬೇಕಾದ ಮಡಕೆಗಳನ್ನು ಹೊತು ತರುತ್ತಾರೆ. ಹೀಗೆ ಜಾತ್ರೆಯಲ್ಲಿ ಸಹಕರಿಸಿದವರೆಲ್ಲರನ್ನೂ ಜಾತ್ರೆಯ ನಂತರ ಉಡುಗೊರೆ ಕೊಟ್ಟು ಗೌರವಿಸುತ್ತಾರೆ.
ಈ ಜಾತ್ರೆಗೆ ಬೈಲಕೂರಿನ ಸುತ್ತಮುತ್ತಲ ಹಳ್ಳಿಗಳಾದ ಅಮರಗೊಳ, ಹಡಗಲಿ, ಗರಸಂಗಿ, ಮದರಿ, ತಂಗಡಿಗೆಯಂಥ ಹಳ್ಳಿಯವರಿಗೂ ಆಮಂತ್ರಣವಿದ್ದೂ ಅವರೂ ಇದರಲ್ಲಿ ಭಾಗವಹಿಸಲು ಬರುತ್ತಾರೆ. ಹೀಗೆ ಬರುವವರನ್ನು ಮೆರವಣಿಗೆಯ ಮೂಲಕ ಓಕುಳಿ ಜಾತ್ರೆಗೆ ಕರೆತರುವಾಗ ದಾರಿಯುದ್ದಕ್ಕೂ ಮುಂಗೈ ಹಿಡಿದು ಆಡುವುದು, ಕುಸ್ತಿ ಮಾಡುವುದು, ಗಜ ನಿಲ್ಲುವುದು( ಹೆಗಲಮೇಲೆ ಮತ್ತೊಬ್ಬನನ್ನು ತಲೆಕೆಳಗೆ ಕಾಲು ಮೇಲೆ ಮಾಡಿ ಹೊತ್ತು ತರುವುದು) ..... ತಮ್ಮ ತಮ್ಮ ಶಕ್ತಿ ಹಾಗೂ ಸಾಮರ್ಥ್ಯ ತೋರುತ್ತಾ ಬರುವವರನ್ನು ಜನರು ಅವರ ತಲೆಯ ಮೇಲೆ ಮಂಡಕ್ಕಿ ಚೆಲ್ಲಿ ಪ್ರೋತ್ಸಾಹ ತುಂಬುತ್ತಾರೆ.


ಹೀಗೆ ಗುಡಿಗೆ ಬರುವಾಗ ಗೋಧೂಳಿಯ ಸಮಯವಾಗುತ್ತದೆ. ದೇವಸ್ಥಾನ ಮುಂದೆ ಸುಮಾರು ಎಂಟು ಅಡಿ ಅಗಲ ಹಾಗೂ ಐದಾರು ಆಳದ ಹೊಂಡದಲ್ಲಿ ಗುಲಾಬಿ ರಂಗನ್ನು ಅದ್ದಿರುತ್ತಾರೆ. ಹನುಮಂತನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಬಣ್ಣದ ಹೊಂಡ ಸುತ್ತ ಐದು ಪ್ರದಕ್ಷಿಣೆ ಹಾಕುತ್ತಿರುವಾಗಲೇ ಜನರು ಓಕುಳಿಯಾಡಲೂ ಪೊರಕೆಯೇಟು ತಿನ್ನಲೂ ಸಿದ್ಧರಾಗುತ್ತಾರೆ. ಪೂಜಾರಿ ಪೊರಕೆ ಪೆಂಡಿಗಳಿಗೂ ಬಣ್ಣದ ಹೊಂಡಕ್ಕೂ ಆರತಿ ಎತ್ತುತ್ತಾನೆ ಮತ್ತು ಸ್ವತಃ ತಾನೇ ಮೊದಲು ಹೊಂಡಕ್ಕೆ ಹಾರುತ್ತಾನೆ. ಜಾತ್ರೆಯ ನಿಜವಾದ ಸ್ವಾರಸ್ಯ ಈಗ ಪ್ರಾರಂಭವಾಯಿತು ನೋಡಿ! ಪುಜಾರಿ ಹೊರಬರಲಿಕ್ಕಿಲ್ಲ ಜನರು ಒಬ್ಬರಮೇಲೊಬ್ಬರು ಎರಗಿ ಪೊರಕೆಗಳನ್ನು ಎಳೆಯುವ ಪೈಪೋಟಿಯಲ್ಲಿ ತೊಡಗುತ್ತಾರೆ. ಹೊಂಡಕ್ಕೆ ಇಳಿದವರು ಮಡಿಕೆಯೋ, ಬಕೆಟೋ, ಕೊಡದಲ್ಲೋ ಓಕುಳಿ ತುಂಬಿಕೊಂಡು ಬಂದು ನಿಂತಿರುವವರ ಮೇಲೆ ಬಣ್ಣದ ನೀರೆರಚುತ್ತಾರೆ. ಬಣ್ಣ ಎರಚಿಸಿಕೊಂಡವರು ಪೊರಕೆಗಳಿಂದ ತಮ್ಮೆಲ್ಲ ಶಕ್ತಿ ಒಟ್ಟು ಮಾಡಿ ಓಕುಳಿ ಹಾಕಿದವರನ್ನು ಹೊಡೆಯುತ್ತಾರೆ. ಏಟು ಬಿದ್ದರೂ ಮತ್ತೆ ಹೊಂಡಕ್ಕೆ ಹಾರಿ ಮತ್ತೆ ಓಕುಳಿ ಎರಚಿ ಮತ್ತೊಮ್ಮೆ ಏಟು ತಿನ್ನುತ್ತಾರೆ. ಏಟು ಕೊಡುತ್ತಿದ್ದವರೂ ತಾವೂ ಹೊಂಡಕ್ಕೆ ಹಾರಿ ಬೇರೆಯರ ಪೊರಕೆಯೇಟು ತಿನ್ನುತ್ತಾರೆ. ವಾತಾವರಣದಲ್ಲೆಲ್ಲ ದೀಪಾವಳಿಯ ಪಟಾಕಿ ಸದ್ದಿನಂತೆ ಪೊರಕೆ ಪೆಟ್ಟಿನಿಂದ ಬರುವ ಸದ್ದು ಹಾಗೂ ಜನರ ಕೇಕೇ ಶಬ್ದಗಳಿಂದ ಅನುಕರಣಿಸುತ್ತದೆ. ಇಲ್ಲಿ ಯಾರೂ ಹೊಡೆತ ತಿನ್ನುವುದನ್ನು ತಪ್ಪಿಸಿಕೊಳ್ಳುವುದಿಲ್ಲ ಬದಲಿಗೆ ಬಾಸುಂಡೆಗಳು ಮೈ ತುಂಬ ಹೆಣೆದಿದ್ದರೂ ಮತ್ತೂ ಹೊಡೆಸಿಕೊಳ್ಳುತ್ತಾರೆ. ಹೊಡೆತ ತಿಂದವರು ಮತ್ತಷ್ಟು ಮಂದಿಗೆ ಹೊಡೆಯಬೇಕೆಂಬ ನಿಯಮವಿರುವುದರಿಂದ ಪೊರಕೆಯ ಪೆಟ್ಟಿನಿಂದ ಯಾರೂ ಮುಕ್ತರಾಗುವುದಿಲ್ಲ. ಬಣ್ಣಹಾಕಿ ಹೊಡೆತ ತಿನ್ನುವುದು ದೇವರ ಸೇವೆಯೆಂದೇ ತಿಳಿಯುತ್ತಾರೆ. ಹೊಂಡದ ನೀರು ಖಾಲಿಯಾಗುವರೆಗೂ ಇದು ನಡೆದು ಬಳಿಕ ಪೊರಕೆ ಸೇವೆಗೆ ತೆರೆ ಬೀಳುತ್ತದೆ. ಹಾ.... ಪೊರಕೆಗಳನ್ನು ಮನೆಗೊಯ್ದು ಮುಂದಿನ ಜಾತ್ರೆಯವರೆಗೂ ಜೋಪಾನವಾಗಿಡುತ್ತಾರೆ. ( ಯಾಕೆಂದು ನನಗೆ ಗೊತ್ತಾಗಿಲ್ಲ. ಹೇಗಿದ್ದರೂ ಮುಂದಿನ ಜಾತ್ರೆಗೆ ಜಾಲಗಾರರು ತಾನೆ ಪೊರಕೆಗಳ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಲೇಖಕರೂ ಏನೂ ತಿಳಿಸಿಲ್ಲ.)
ಇದನ್ನು ಓದಿದಾಗ ವಿದೇಶದಲ್ಲಿ ನಡೆಯುವ ಕಿತ್ತಳೆ , ಟೊಮೇಟೋ ಹಣ್ಣುಗಳನ್ನು ಹೀಗೆ ಮೈಮೇಲೆರಚಿ ನಡೆಯುವ ಜಾತ್ರೆಯ ನೆನಪಾಯಿತು. ಈ ಪೊರಕೆಯೇಟು ತಿನ್ನುವ ಜಾತ್ರೆಯ ಬಗ್ಗೆ ಇಲ್ಲಿರುವ ಆಧುನಿಕ ಯುವಕರೂ ಏನೂ ಪ್ರಶ್ನಿಸದೆ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸುತ್ತಿರುವುದು ಒಂದು ಸೋಜಿಗವೇ ಸರಿ! ನಮ್ಮ ಪೂರ್ವಜರು ಏನೇ ಪದ್ಧತಿ ಮಾಡಿದ್ದರೂ ಅದಕ್ಕೊಂದು ಅರ್ಥವಿರುವುದು ಎಂದು ನಾನು ನಂಬಿದ್ದೆ. ಆದರೆ ಇದು.....!


ಈ ಲೇಖನವನ್ನು ತರಂಗ ಪತ್ರಿಕೆಯಲ್ಲಿ ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ ಬರೆದಿರುವ " ಬೈಲಕೂರಿನ ಜಾತ್ರೆಗೆ ಬನ್ನಿ... ಪೊರಕೆ ಏಟು ತಿನ್ನಿ!" ಎಂಬ ಲೇಖನದಿಂದ ಆರಿಸಲಾಗಿದೆ.

2 comments:

suptadeepti said...

ಕುತೂಹಲಕಾರಿ ಆಚರಣೆಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಈ ಬೈಲಕೂರು ಎಲ್ಲಿದೆ? ಜಿಲ್ಲೆ? ತಾಲ್ಲೂಕು?

ಶೀಲಾ said...

ದೀಪ್ತಿಯವರೇ,
ನನ್ನ ಪುಟಗಳಿಗೆ ಸುಸ್ವಾಗತ!
ಇದರ ಲೇಖಕರು ಈ ಹಳ್ಳಿ ಕೃಷ್ಣಾ ಹಿನ್ನೀರಿನ ಅಂಚಿನಲ್ಲಿರುವ ನೀಲ ಜಲಾಗಾರದ ದಂಡೆಯಲ್ಲಿದೆ ಎಂದು ತಿಳಿಸಿದ್ದಾರೆ. ಬಹುಶಃ ರಾಯಚೂರು ಜಿಲ್ಲೆಯಲ್ಲಿರಬಹುದೋ ಏನೋ! ನಾನೂ ಇದೇ ಮಾಹಿತಿಗಾಗಿ ಭೂಪಟವನ್ನು ಹುಡುಕಿದೆ. ಸಿಗಲಿಲ್ಲ.
ಇಂತಹ ಕುತೂಹಲಕರವಾದ ರೋಚಕ ಮಾಹಿತಿಗಳು ನನ್ನ ಗಮನವನ್ನು ಯಾವಾಗಲೂ ಸೆಳೆಯುತ್ತದೆ. ಅಂತೇ ನನ್ನ ಸಹ ಬ್ಲಾಗಿಗರ ಗಮನಕ್ಕೂ ಬರಲಿ ಎಂದು ಬರೆದಿದ್ದೇನೆ.
ಮತ್ತೊಮ್ಮೆ ಧನ್ಯವಾದ.
ಶೀಲಾ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...