ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
16 October, 2014
ಜನಾರ್ದನಿಗೊಂದು ಪತ್ರ!
ಕೇಶವ,
ನಿಂಗೊತ್ತಾ,
ಇವತ್ತು ಬೆಳ್‌ಬೆಳಿಗ್ಗೆ ಒಂದು ಚಂದದ ಪಕ್ಷಿ ನನ್ನೊಡನೆ ಮಾತಾಡಲು ಬಂದಿತ್ತು. ಆಂಟಿಯ ಬಿಂಬುಲ ಗಿಡದಲ್ಲಿ ಒಂದು ಅರ್ಧ ಕ್ಷಣ ಸುಮ್ಮನೆ
ಕೂತು ನನ್ನನ್ನೇ ನೋಡ್ತಿತ್ತು..ನಮ್ಮಿಬ್ಬರ ಕಣ್ಣು ಕಣ್ಣು ಒಂದಾಗಿತ್ತು.. ಅದ್ಯಾವ ಒಲವಿನ
ಸಂದೇಶವೋ, ನೀನು ಕಳಿಸಿದ್ದು. ನಾನಂತೂ ಬೆಪ್ಪುತಕ್ಕಡಿಯಂತೆ ಅಲ್ಲೇ ಸ್ತಬ್ಧಳಾಗಿದ್ದೆ. ಮತ್ತೆ
ತಟ್ಟನೆ ಎಚ್ಚರವಾಯಿತು. ಅರೇ, ಅಷ್ಟು ನಿಖರವಾಗಿ ಪಕ್ಷಿಗಳನ್ನು ಗುರುತಿಸಲಾರೆನಾದರೂ ಇಲ್ಲಿಯ ತನಕ
ನಾನು ನೋಡಿದ್ದ ಯಾವ ಪಕ್ಷಿಗೂ ಇದರ ಹೋಲಿಕೆಯಿರಲಿಲ್ಲ.
ಮತ್ತೆ ನಿಂಗೆ
ಗೊತ್ತಲ್ಲ.. ಕೆಮರಾ ಕ್ಲಿಕ್ಕಿಂಗ್!
ಓಡಿದೆ.. ಮೊದಲು
ಕನ್ನಡಕ, ಮತ್ತೆ ಕೆಮರಾ.. ನೋಡು, ಅದರ ಸೆಟ್ಟಿಂಗ್ ಮಾಡುವಷ್ಟರಲ್ಲಿ ಅದು ಹಾರಿಹೋಗಿದ್ದರೆ,
ಇಲ್ಲ, ಅದರ
ವಿಚಿತ್ರ ಕೂಗು ನನಗೆ ಕೇಳಿಸ್ತಿತ್ತು. ಈ ಆಂಟಿಯ ಹಿತ್ತಲಿನಿಂದ ಆ ಆಂಟಿಯ ತೆಂಗಿನ ಮರಕ್ಕೆ
ಶಿಫ್ಟ್! ನಾನು ಸೆಟ್ಟಿಂಗ್ ಮಾಡಿ, ಫೋಕಸ್ ರಿಂಗ್ ತಿರುಗಿಸಿದ್ರೆ ಅಲ್ಲಿ ಯಾರಿಲ್ಲ. ಕರ್ಮ!
ಮತ್ತೆ ಈ ಹಿತ್ತಲಿಗೆ ಶಿಫ್ಟ್! ಮತ್ತೆ ಫೋಕಸ್.. ಬೇಗ ಬೇಗ ಕ್ಲಿಕ್ಕಿಸುತ್ತಾ ಹೋದೆ... “ರಾಮ
ರಾಮ!!! ಒಂದು ಫೋಕಸ್ ಆದ್ರೂ ಸರಿಯಾಗಿರ್ಲಿಯಪ್ಪಾ... ಇವತ್ತು ಒಂದಿಷ್ಟು ಹೆಚ್ಚು ರಾಮನಾಮ
ಬರಿತೇನೆ ನನ್ನಪ್ಪಾ!”
ನಂಗೆ ಇನ್ನೂ ಇದರ
ಫೋಕಸ್ ಮಾಡ್ಲಿಕ್ಕೆ ಬರ್ತಿರಲಿಲ್ಲ.. ಆದ್ರೂ ನನ್ನ ರೆಕಾರ್ಡಿಗೆ ಇರ್ಲಿ ಅಂತ ಕ್ಲಿಕ್ಕಿಸುತ್ತಾ
ಇದ್ದ ಹಾಗೆ ಅದು ಅಲ್ಲೇ ಕೆಳಗೆ ಬಾಳೆಗಿಡದ
ಬುಡದಲ್ಲಿ ಹುಳಹುಪ್ಪಟೆ ಹುಡುಕ್ಲಿಕ್ಕೆ ಹೋಯಿತು.. ನಂಗೂ ಸಂಸ್ಕೃತ ಕ್ಲಾಸಿಗೆ ಮಕ್ಕಳು ಬರುವ
ಹೊತ್ತೂ ಆಯ್ತು. ಬೆಳಗ್ಗಿನ ಬ್ರೇಕ್‌ಫಾಸ್ಟ್ ಮಾಡ್ಬೇಕು.. ಹಕ್ಕಿಗೊಂದು ಫ್ಲ್ಯಾಯಿಂಗ್ ಕಿಸ್
ಕೊಟ್ಟು ನಾನು ಒಳಗೆ ಜಾರಿದೆ. ಒಂದೈದು ನಿಮಿಷ ತನಕ ಕೂಗು ಕೇಳ್ತಿತ್ತು.
ವಿಠ್ಠಲ, ನಾನು
ತುಂಬಾ ಎಕ್ಸೈಟ್ ಆಗಿದ್ದೇನೋ. ಅದು ಏನೋ ನಿನ್ನ ಸಂದೇಶವನ್ನೇ ಹೊತ್ತು ತಂದಿರ್ಬೇಕು, ಅಲ್ವಾ!
ನಿನ್ನ ಒಲವಿನ ಭಾವ ತಲುಪಿತು ಕಣೋ. ತುಂಬಾ ಥಾಂಕ್ಸ್ ಕಣೋ ನನ್ನ ಗೆಳೆಯನೇ! ಹೀಗೆ ನಿತ್ಯವೂ
ಬದುಕನ್ನು ಹೊಸ ಹೊಸದಾಗಿ ಮಾಡ್ತಿಯಲ್ವಾ!
ಇತ್ತೀಚೆಗೆ ಅಜ್ಜನ
ಹತ್ತಿರ ಇದ್ದ “ಭಕ್ತ ವಿಜಯ” ಪುಸ್ತಕದ ನೆನಪು ತುಂಬಾ ಆಗ್ತಿದೆ. ಮಹಾರಾಷ್ಟ್ರದ ಅಭಂಗ ಕರ್ತರ
ಪರಿಚಯ ಮೊತ್ತ ಮೊದಲು ಪರಿಚಯಿಸಿದ್ದೇ ಆ ಪುಸ್ತಕ. ಸಖೂ ಬಾಯಿಗೆ ಅವಳ ಅತ್ತೆ, ಮಾವ ಗಂಡ ಕೊಡುವ
ಯಾತನೆಗಳು, ಅವಳು ತಮ್ಮೂರಿಗೆ ಬಂದ ವಾರಿಯ ಜತೆ ಸೀದ ಪಂಡರಾಪುರದ ಹಾದಿಹಿಡಿದದ್ದು, ಅವಳ
ಜಾಗವನ್ನು ಸ್ವತಃ ವಿಠ್ಠಲನೇ ಬಂದು ತುಂಬಿದ್ದು... ಆಹಾ! ಭಕುತರಿಗಾಗಿ ಏನು ಬೇಕಾದರೂ ಮಾಡುವೆ
ನೀ.. ಮಹಾಮಹಿಮ, ಕಂಸಾದಿ ದೈತ್ಯರನ್ನು ಸಂಹರಿಸಿದವನು ಏನೂ ತಿಳಿಯದ ಕಂದನಾಗಿ ಯಶೋಧೆಯ ಕೈಯಲ್ಲಿ
ಹಗ್ಗದಿಂದ ಬಿಗಿಸಿಕೊಂಡು ದಾಮೋದರನಾಗಲಿಲ್ಲವೇ, ಧರ್ಮರಾಯನ ರಾಜಸೂಯ ಯಾಗದ ಸಮಯದಲ್ಲಿ ಬ್ರಾಹ್ಮಣರ
ಉಚ್ಛಿಷ್ಟವನ್ನು ಬಳಿಯಲಿಲ್ಲವೇ!!! ಇರಲಿ, ಬಿಡು ನಿನ್ನನ್ನು ಪೊಗಳಲು, ನಿನ್ನ ರೂಪ ವರ್ಣಿಸಲು
ಶಬ್ದಗಳೇ ಕಮ್ಮಿಯಾಗುತ್ತವೆ, ಬಾಯಿ ಕಟ್ಟಿದಂತಾಗುತ್ತೆ.
ತುಕಾರಾಮನ ಅಭಂಗ
ಕೇಳು, ಜತೆಗೆ ಇವತ್ತು ನಮ್ಮ ಕನ್ನಡದಲ್ಲಿ ತಯಾರಾದ ಭಕ್ತ ಕುಂಬಾರದ ಇಂಪಾದ ಹಾಡನ್ನು ಕೇಳಿಸಿಕೋ!
ಯಾರೋ
ಕೇಳ್ತಿದ್ರು.. ನೀ ಅದೇನೋ ಆರ್ ಜೆ, ಡಿ ಜೆ ನಾ ಅಂತ. ಏನೋ ಒಂದು! ಒಟ್ಟಾರೆ ನನ್ನೊಡೆಯ
ಪ್ರೀತ್ಯರ್ಥವಾಗಿ ಮಾಡ್ತೇನೆ!
ttps://www.youtube.com/watch?v=xEeqxdmIbg0
15 October, 2014
ಅವಳ ಡೈರಿಯ ಪುಟಗಳಿಂದ..
ಮನು ಅದೇನೋ ಹೇಳಿದನು,
ಇವನು ಅದೇನೋ ಅರ್ಥಮಾಡಿಕೊಂಡನು.
ಚಿತ್ರಗುಪ್ತನ ಲೆಡ್ಜರಿನಲ್ಲಿ ಗಂಡಿಗೂ ಹೆಣ್ಣಿನ ಕರ್ಮಗಳಿಗೆಲ್ಲಾ ಸಮಾನ ಎಂಟ್ರಿ ಮತ್ತು
ಜವರಾಯ ಸಮಾನ ನ್ಯಾಯ ವಿಚಾರಣೆ ಮಾಡ್ತಾನೆ ಅಂತ ಗೊತ್ತಾದ್ಮೇಲಾದ್ರೂ ತಾನು ಏನು ಮಾಡಿದ್ರೂ ನಡೆಯುತ್ತೆ ಎನ್ನುವ ಹಮ್ಮು ಇಳಿಯುತ್ತೇನೋ!!!
-ಅವಳ ಡೈರಿಯ ಪುಟಗಳಿಂದ
ಇವನು ಅದೇನೋ ಅರ್ಥಮಾಡಿಕೊಂಡನು.
ಚಿತ್ರಗುಪ್ತನ ಲೆಡ್ಜರಿನಲ್ಲಿ ಗಂಡಿಗೂ ಹೆಣ್ಣಿನ ಕರ್ಮಗಳಿಗೆಲ್ಲಾ ಸಮಾನ ಎಂಟ್ರಿ ಮತ್ತು
ಜವರಾಯ ಸಮಾನ ನ್ಯಾಯ ವಿಚಾರಣೆ ಮಾಡ್ತಾನೆ ಅಂತ ಗೊತ್ತಾದ್ಮೇಲಾದ್ರೂ ತಾನು ಏನು ಮಾಡಿದ್ರೂ ನಡೆಯುತ್ತೆ ಎನ್ನುವ ಹಮ್ಮು ಇಳಿಯುತ್ತೇನೋ!!!
-ಅವಳ ಡೈರಿಯ ಪುಟಗಳಿಂದ
ಪರರೆಲ್ಲರಲ್ಲೂ ಹುಡುಕುವ ಜಾಣಕುರುಡನು!
ಪರರ ಪ್ರತಿಯೊಂದು ಚಲನೆಯಲ್ಲೂ ಹುಡುಕುವೆ ಹುಳುಕು
ಮೈಯಲ್ಲೆಲ್ಲ ಸಾವಿರ ಕಣ್ಣುಗಳು ಉದ್ಭವವಾಗುವವೇನು ನಿನಗೆ!
ಸ್ವಂತ ದೋಷಗಳಿಗೆಲ್ಲ ಜಾಣಕುರುಡಿನ ಮುಖಕವಚ ಧರಿಸುವ ನೀನು
ಬೇಸ್ತುಬೀಳಿಸುವೆ ನಿಜರೂಪ ಮರೆಚಿ ತೋರುತ್ತ ಅಮಾಯಕ ನಟನೆ!
ಮೈಯಲ್ಲೆಲ್ಲ ಸಾವಿರ ಕಣ್ಣುಗಳು ಉದ್ಭವವಾಗುವವೇನು ನಿನಗೆ!
ಸ್ವಂತ ದೋಷಗಳಿಗೆಲ್ಲ ಜಾಣಕುರುಡಿನ ಮುಖಕವಚ ಧರಿಸುವ ನೀನು
ಬೇಸ್ತುಬೀಳಿಸುವೆ ನಿಜರೂಪ ಮರೆಚಿ ತೋರುತ್ತ ಅಮಾಯಕ ನಟನೆ!
ನಾಲ್ಕನೆಯ ದಿನದ ಪತ್ರ ಗಾನಲೋಲ ವಿಠೋಬನಿಗೆ!
ಗಾನಲೋಲ ಮಾಧವ, ಗೋವಿಂದ, ನರಹರಿ,
ಬಹುಶಃ ಈ ಹೊತ್ತಿಗಾಗಲೇ ಆ ಸಂತಿಣಿಯರೆಲ್ಲ ನಿನ್ನ ದರ್ಶನ ಮಾಡಿರಬಹುದು! ವೃಂದಕ್ಕ ಇಲ್ಲಿ ತಲುಪಿದ ನಂತರ ಅವಳನ್ನೊಮ್ಮೆ ಸ್ಪರ್ಶಿಸಿ ನಿನ್ನ ಭೇಟಿಯ ಅವರ ಅನುಭೂತಿಯನ್ನು ನನ್ನದಾಗಿರಿಸಿಕೊಳ್ಳುವೆ!
ಇದು ನಾಲ್ಕನೆಯ ಪತ್ರ! ಇವತ್ತು ಮೊದಲಾಗಿ ನನ್ನ ಹೆತ್ತವರಿಗೆ ನನಗೆ ಈ ಮರಾಠಿ ಅಭಂಗಳನ್ನು ಕೇಳಿಸಿದಕ್ಕೆ ಬಹಳಷ್ಟು ಕೃತಜ್ಞತೆ ಅರ್ಪಿಸಬೇಕೆನಿಸಿತು.. ಆ ಗ್ರಾಮಫೋನಿನ ಸೂಜಿ ಆಗಾಗ ವಕ್ರವಾಗ್ತಿತ್ತು.. ನನ್ನ ಒತ್ತಾಯಕ್ಕೆ ಅಪ್ಪ ಪ್ರತೀಬಾರಿ ಸರಿಮಾಡಿಸಿ ತರ್ತಿದ್ರು! ಅಮ್ಮ ನಿತ್ಯವೂ ಸುಶ್ರಾವ್ಯವಾಗಿ ಹಾಡುವ ಭಜನೆ ಹಾಡುಗಳು ಕಿವಿಗೆ ಬಿದ್ದು ಬಿದ್ದು.. ಎಲ್ಲವೂ ತನ್ತಾನೆ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಒಂದಿಷ್ಟು ವರ್ಷ ಮನೆ ಮಕ್ಕಳು ಅಂತ ನನ್ನ ಧ್ಯಾನ ಸಂಪೂರ್ಣವಾಗಿ ಸಂಸಾರದಲ್ಲಿ ಮುಳುಗಿತ್ತು. ನಿಧಾನವಾಗಿ ಕುಂಚದ ಮೂಲಕ, ಬರವಣಿಗೆಯ ಮೂಲಕ.. ಈಗೀಗ ಕೆಮರಾದ ಮೂಲಕವೂ ನಿನ್ನ ನೆನಪು, ಧ್ಯಾನ ಕ್ಷಣ ಮಾತ್ರವೂ ವ್ಯರ್ಥಮಾಡದೇ ಆಗುತ್ತಿದೆ. ಇಂತಹ ಪುಣ್ಯ ಎಷ್ಟು ಜನರಿಗೆ ದೊರಕುತ್ತೆ ಹೇಳು ನನ್ನೊಡೆಯ!
ಇರುಳಿನಲ್ಲಿ ಕಪ್ಪೆ, ಜೀರುಂಡೆಗಳ ಗಾಯನದಲ್ಲೂ ನಿನ್ನ ಬಿಂಬವೇ ತೋರುತ್ತಿದೆ... ಮುಂಜಾವಿನ ಕೋಗಿಲೆ, ಮಡಿವಾಳ(ಬುಲ್ ಬುಲ್), ಪಿಕಳಾರ(ರಾಬಿನ), ಕರಿ, ಬಿಳಿ ಗಿಡುಗ, ಹದ್ದು, ಬೆಚ್ಚುವಂತಹ ಕೂಗಿನ ರೂಫಸ್ ಟ್ರೀಪೈ.. ಹಾ! ಅಂಗೈಯಲ್ಲಿ ಹಿಡಿಯುವಷ್ಟು ಚಿಕ್ಕದಾದ ದರ್ಜಿಹಕ್ಕಿಯ ಇಂಪು ಗಾನ.. ಎಲ್ಲವೂ ನಿನ್ನಂತಹ ಸುಂದರ ಸೃಷ್ಟಿಕರ್ತನ ನೆನಪನ್ನು ಮರೆಯಲು ಬಿಡುವುದೇ ಇಲ್ಲ ನೋಡು!
ನಾನೇನು ಇವತ್ತು ನಿನ್ನೆಯಿಂದ ಈ ಪ್ರಕೃತಿ ಆರಾಧನೆ ಮಾಡಲು ತೊಡಗಿದ್ದಲ್ಲವೆಂಬುದು ನಿನಗೂ ಗೊತ್ತು. ಆದರೆ, ನಿಜ ಹೇಳಲಾ, ಈ ಎಫ್ ಬಿಯ ನಂಟು ಮತ್ತು ನನಗೆ ಕೆಮರಾ ಕೈಗೆತ್ತಿಕೊಳ್ಳಲು ಪ್ರೇರೇಪಿಸಿದ ವೃಂದಾ ಕಾಮತ್ ಹಾಗೂ ನನ್ನ ತೋಟದ ಹೂಗಿಡಗಳಿಗೆ ಶೋಭೆ ಕೊಡಲೆಂದೇ ಬರುವ ರಂಗುರಂಗಿನ ಪಾತಗಿತ್ತಿಯರನ್ನು ಅವರ ಹೆಸರಿಡಿದು ಕರೆಯಲು ಕಲಿಸಿದ ಸಮ್ಮಿಲ ಶೆಟ್ಟಿಗೆ ಶ್ರೇಯಸ್ಸು ಕೊಡದಿದ್ದರೆ ತಪ್ಪಾಗುತ್ತೆ ಅಲ್ವಾ!
ತನ್ನ ಜೂಮ್ ಲೆನ್ಸ್ ಅಲ್ಲದೆ ಫೋಟೋಗ್ರಾಫಿಗೆ ಸಂಬಂಧಿಸಿದ ಪುಸ್ತಕಗಳನ್ನು ಉದಾರವಾಗಿ ನಂಗೆ ಕೊಡ್ತಿರುವ ಮಿತ್ರನಿಗೂ ದೊಡ್ಡ ಪಾಲಿದೆ. ಜತೆಗೆ ನನ್ನನ್ನು ಆ ಕೃಷ್ಣಮೋಹನರ ಪೇಜಿಗೆ ಪರಿಚಯಿಸಿದ ಗೋಪಾಲಕೃಷ್ಣ ಬಾಳಿಗರಿಗೂ! ನಂಗೆ ಅನಿಸುತ್ತೆ ನನ್ನ ಕೃತಜ್ಞತೆ ಕೊಡುವ ಪಟ್ಟಿ ಮುಗಿಲಿಕ್ಕಿಲ್ಲ. ನಿಂಗೂ ಬೋರ್ ಮಾಡಿಸೊಲ್ಲ, ಬಿಡು!
ಇಲ್ಲಿಗೆ ಇವತ್ತಿನ ಪತ್ರ ಮುಗಿಸಲಾ ಕೇಶವಾ, ಈ ಏಕನಾಥನ ಕನ್ನಡಿಕರಿಸಿದ ಅಭಂಗದ ಜತೆ!
https://www.youtube.com/watch?v=OYPCrkl1lC8
ಪರೋಪಕಾರವು ಪುಣ್ಯ, ಪರಪೀಡನೆಯೇ ಪಾಪ
ಇಲ್ಲ ನೋಡು ಇನ್ಯಾವ ಮಾನದಂಡ||
ಸತ್ಯವೇ ಧರ್ಮ, ಅಸತ್ಯವೇ ಕರ್ಮ(ಸಂಚಿತ)
ಇದಕ್ಕಿಲ್ಲ ನೋಡು ಬೇರ್ಯಾವ ಮರ್ಮ||
ಜಿಹ್ವೆಯಲಿ ನಾಮಸ್ಮರಣೆಯೊಂದೇ ಗತಿ
ವಿಮುಖನಿಗೋ ಉಳಿಯುವುದೊಂದೇ ಅಧೋಗತಿ||
ಸಂತರ ಸಂಗವು ಸ್ವರ್ಗವಾಸ
ಸಂತರತ್ತ ಅಲಕ್ಷವೂ ನರಕವಾಸ||
ಹಿತ ಅಹಿತವೆಲ್ಲವನ್ನೂ ಹೇಳಿದೆ, ತುಕರಾಮನು ನಾನು
ಅಂತರ್ಯಕ್ಕೆ ಉಚಿತವೆನಿಸಿದನು ಮಾಡಪ್ಪಾ ನೀನು||
14 October, 2014
ವಿಠೋಬನಿಗೊಂದು ಪತ್ರ!
ವಿಠೋಬ,
ಮಾತು ಮಾತಿಗೂ ಪ್ರಿಯ ಸಖ ನೀನು ಅಂತ ಹೇಳ್ತೇನೆ ಏನೋ ಹೌದು! ಅದನ್ನೇ ಮುಂದುವರೆಸಿ ಗುರೂವೂ, ಮಾಯಿ ಬಾಪ್.. ಬಂಧು.. ಸರ್ವಸ್ವವೂ ನೀನೇ ಅಂತಲೂ ಹೇಳ್ತೇನಲ್ಲ.
ಆಫ್ಟರ್ ಆಲ್, ರಕ್ತ ಮಾಂಸದಿಂದ ಕೂಡಿದ ಕ್ಷುಲ್ಲಕ ಕಾಯವಿದು. ಹಲವಾರು ಬಾರಿ ಧರ್ಮ-ಅಧರ್ಮ, ಸತ್ಯ-ಅಸತ್ಯ, ನ್ಯಾಯ-ಅನ್ಯಾಯಗಳ ಅರಿವಿಲ್ಲದೇ ನಾನು ಮಾಡಿದ್ದೇ ಸರಿ ಎಂಬ ಭ್ರಮೆಯಿಂದ ತಪ್ಪುಗಳನ್ನು ಎಸಗುತ್ತೇನೆ. ಅಮ್ಮ ಯಾವಾಗಲೂ ಹೇಳ್ತಾರೆ, ಮನೆಯವರು ಮಗುವಿಗೆ ಕೊಡುವ ಸಂಸ್ಕಾರ ಬಲು ಮುಖ್ಯ! ಅದಕ್ಕೆ ನನ್ನದು ಯಾವಾಗಲೂ ಸಿದ್ಧ ಉತ್ತರ- ಹಿಂದಿನ ಎಲ್ಲ ಜನ್ಮಗಳ ಸಂಸ್ಕಾರದ ಫಲ ಈ ಜನ್ಮದ ನಮ್ಮ ನಡವಳಿಕೆ! ನಲ್ವತ್ತು ವರ್ಷ ದಾಟಿದ ಮೇಲೆ ಆ ಮನುಷ್ಯನ ಯೋಗ್ಯತೆ ಏನು ಅಂತ ಗೊತ್ತಾಗುತ್ತೆ.. ನಿಧಾನವಾಗಿ ಮುಖವಾಡಗಳ ಹಿಂದಿನ ಮುಖದ ಅನಾವರಣವಾಗುತ್ತದೆ. ಹೋಗ್ಲಿ ಬಿಡು, ಆದರೆ ಯಾವುದನ್ನೂ ಇದಂ ಮಿತ್ತಂ ಅಂತ ಹೇಳಲು ಸಾಧ್ಯವೇ ಇಲ್ಲ.. ಯಾರ ಮೇಲೆ ಯಾವಾಗ ಯಾಕೆ ನೀ ಕರುಣೆ ತೋರಿಸ್ತಿಯೋ ಅಂತ ಹೇಳೋದು ಬಿಲ್ಕುಲ್ ಸಾಧ್ಯವಿಲ್ಲವಲ್ಲ!
||ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ|
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮದೇವ ದೇವಮ್||
ಮೊದ ಮೊದಲು ಅಮ್ಮ ಹೇಳಿಕೊಟ್ರು.. ಸುಮ್ನೆ ಅದನ್ನ ಹೇಳ್ತಿದ್ವಿ. ಆದರೆ ಬಹುಶಃ ರಾಮಕೃಷ್ಣ ಪರಮಹಂಸರ ಗೋಪಾಳನ ಕತೆ ಕೇಳಿದಾಗಿನಿಂದ ನನ್ನ ಭಾವವೂ ಬದಲಾಯ್ತು.. ಅಂದಿನಿಂದ ಒಂಟಿತನ ಕಾಡಿದಾಗಲೆಲ್ಲ ನೀನು ಇಲ್ವೇ, ಹನುಮಂತ ಸದಾ ಜತೆ ಕೊಟ್ರಿ. ನರಹರಿ, ನಿನ್ನಲ್ಲಿಗೆ ಬರುವುದೆಂದರೆ ತವ್ರು ಮನೆಗೆ ಬರುವ ಹಾಗೆ ಅಲ್ವೋ! ಆ ದಿನ ವೃಂದಕ್ಕ ಹೇಳಿದಾಗಿನಿಂದ ಕನಸು ತನ್ತಾನೆ ಮೂಡಿತ್ತು. ಮತ್ತೆ ಇದ್ದಕ್ಕಿದ್ದಂತೆ ಕನಸುಗಳ ರೆಕ್ಕೆ ಕಳಚಿ ಪುಕ್ಕಗಳೆಲ್ಲ ಉದುರಹತ್ತಿದವು. ನಿರಾಸೆ ಸಹಜ ತಾನೆ! ಇದನ್ನೆಲ್ಲ ನಿನ್ನ ಹತ್ರ ತಾನೇ ಹೇಳ್ಕೊಳ್ಳಬಹುದು.. ಮತ್ತೆ ಭಕುತರೆಲ್ಲ ಭಾವಕೆ ಮುಕುತಿ ನೀಡುವವನು ನೀನಲ್ಲದೆ ಬೇರೆ ಯಾರು.
ಬಾಪ್ಪಾ, ಆಯಿ, ನಿಮಗಿಬ್ಬರಿಗೂ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರಗಳು.
ಇಬ್ಬರೂ ಈ ಏಕನಾಥನ ಕನ್ನಡೀಕರಿಸಿದ ಅಭಂಗವನ್ನು ಕೇಳಿರಲ್ಲ!
ಭೀಮಾ ತೀರದಲಿದೆ ಪಂಡರಿ, ಅದೇ ನನ್ನ ತೌರು
ಆಯಿ ಮತ್ತು ಬಾಪ, ನನ್ನ ವಿಠ್ಠಲ ರಕುಮಾಯಿ||
ಪುಂಡಲೀಕನು ನನ್ನ ಬಂಧು
ಜಗದವಿಖ್ಯಾತಿ ಅವನದು||
ನನ್ನ ಸಹೋದರಿ ಚಂದ್ರಭಾಗಳು
ಪಾವನ ಮಾಡುವಳು ಎಮ್ಮನು||
ಜನಾರ್ದನಿಗೆ ಶರಣು ಏಕನಾಥನು
ಮರೆಯಲಾರನು ತನ್ನ ತೌರನೆಂದಿಗೂ||
13 October, 2014
ವಿಠಲನಿಗೊಂದು ಲೆಟರ್!
ವಿಠಲ,
ನಿನ್ನೆ ಬರೆದ ಲೆಟರ್ ಓದಿದ್ದಿಯಾ? ಹಾ! ಏನೆಂದೆ, ಪುರುಸೊತ್ತಿಲ್ಲ!!! ಹೌದಪ್ಪಾ, ಪಂಡರಾಪುರದತ್ತ ವಾರಿರೂಪದಲ್ಲಿ ಜನಸಾಗರ ಬರುತ್ತಿದೆ. ಅವರ ಯೋಗಕ್ಷೇಮದ ಜವಾಬ್ದಾರಿ ಇದೆಯಂದಿಯಾ! ಸರಿ ಬಿಡು. ನನ್ನನಂತು ನೀ ಅಲ್ಲಿಗೆ ಕರೆಸಿಲ್ಲ.. ಹಾಗಾಗಿ ನನ್ನ ಬಾಯಿಬಡುಕತನವನ್ನು ನೀ ಸಹಿಸಲೇಬೇಕು.
ಅಂದ್ಹಾಗೆ ರುಕುಮಿಣಿ ಏನಾದರೂ ಅಂದಳಾ? ಮೊನ್ನೆ ನವರಾತ್ರಿ ಸಮಯದಲ್ಲಿ ಅವಳ ದಶರೂಪ ಗೆರೆಗಳಲ್ಲಿ ಮೂಡಿಸುವ ಪ್ರೇರಣೆ ಕೊಟ್ಟಿದ್ದಳು. ಅವಳಿಗೆ ಮೆಚ್ಚಿಗೆ ಆಯ್ತಾ ಇಲ್ವಾ ಅಂತ ಕೇಳು!
ಬೈದವೇ, ಇವತ್ತೊಂದಿಷ್ಟು ಕಂಪ್ಲೈಂಟ್‌ಗಳಿವೆ.. ಹೌದೋ, ನಿನ್ನೆ ಬರೆಯುವಾಗ ಒಂದಿಷ್ಟು ತಾಳ್ಮೆ ಸಮಾಧಾನ ಇತ್ತು. ಹಾಗಾಗಿ ನಿನ್ನ ನಿರ್ಣಯವನ್ನು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ್ದೆ. ಇವತ್ತು ಬೆಳಿಗ್ಗೆ ಬೆಳಿಗ್ಗೆ ನಾಮದೇವ ವಿರಚಿತ “ಪಂಡರಿ ನಿವಾಸ ಸಖಾ ಪಾಂಡುರಂಗ” ಹಾಡು ತನ್ನಿಂದ ತಾನೇ ತುಟಿಯಿಂದ ಹೊರಬಂತು. ದಾಸವರೇಣ್ಯರಿಗೂ ನಿನ್ನ ಭೇದಭಾವದ ಬುದ್ಧಿಯಿಂದ ಅಸಮಾಧಾನ! ಕೆಲವರಿಗೆ ಮಾತ್ರ ನೀ ಧಾರಾಳಿ, ನಾವೆಲ್ಲ ಯಾರು! ನಿನ್ನ ಸೃಷ್ಟಿಯೇ ಅಲ್ವೇ! ಬಿಡು, ಎಲ್ಲ ಸಜ್ಜನರೇ ಆಗಿದ್ದರೆ ನಿನ್ನ ಸಾಮ್ರಾಜ್ಯದಲ್ಲಿ ಮಸಾಲೆ ಇರ್ತಿರಲಿಲ್ಲ. ನಿಂಗೂ ಫಿಕ್ಷನ್ ಇಷ್ಟ! ಅಂದ ಮೇಲೆ ನನ್ನ ಕಂಪ್ಲೈಂಟ್ ಸುಮ್ನೆ ಕೇಳ್ಬೇಕು, ಗೊತ್ತಾಯ್ತಾ.
ಹ್ಮ್.. ಅಲ್ವೋ ಎಲ್ಲ ಭಕುತರ ಆಪಾದನೆ ಕೇಳಿದ್ಮೇಲೂ ಅದ್ಯಾಕೆ ಇಷ್ಟೊಂದು ಭೇದಭಾವ ತೋರಿಸ್ತಿಯಾ??? ವೃಂದಕ್ಕನನ್ನು ಕರೆಸಿಕೊಂಡಿದ್ದಿಯಾ! ಅವಳೇನು ನಿಂಗೆ ಲಂಚ ಕೊಟ್ಳು! ಹೇಳೋ, ಕೇಶವಾ!
ಹೋಗ್ಲಿ, ನಿಂಗೆ ಕನ್ನಡ ಬರುತ್ತದೆ ತಾನೆ. ಇತಿಹಾಸದ ಪ್ರಕಾರ ನೀ ಒಂದಾನೊಂದು ಕಾಲದಲ್ಲಿ ಕನ್ನಡಿಗನಾಗಿದ್ದಿಯಂತೆ. ಈಗಂತೂ ನೀ ಪೂರ್ತಿ ಮರಾಠಿಗನಾಗಿದ್ದಿಯಾ! ಸಾರಿ, ಆಂಗ್ಲ ಭಾಷೆ ಏನು ಮಾಡಿದರೂ ಲೆಟರ್‌ನೊಳಗೆ ನುಸುಳಿಬಿಡುತ್ತೆ. ಮರಾಠಿಯಲ್ಲಿ ಬರೆಯಲು ಕಷ್ಟ.. ಒಂದಿಷ್ಟು ಅರ್ಥ ಮಾಡಿಕೊಳ್ಳಬಲ್ಲೆ. ಅಡ್ಜಸ್ಟ್ ಮಾಡ್ಕೋಪ್ಪಾ ವೆಂಕಟಪ್ಪ!
ಇದೇನಿದು ಹೊಸ ವರಸೆ.. ಲೆಟರ್ ಬರೆದು ನಿನ್ನ ಮಾನ ಹರಾಜು ಹಾಕ್ತೇನಂತ ಅನಿಸಿದ್ರೆ ಸಾರಿ. ಮತ್ತೇನು ಮಾಡ್ಲಿ, ನಿನ್ನೆ ಅನುರಾಧ ಅವರ ಬುಕ್ ಬಿಡುಗಡೆಯ ಸಮಾರಂಭದಲ್ಲಿ ಅರ್ಪಿತಾಳ ಹಾಡು ಇತ್ತು ಗೊತ್ತಲ್ವಾ! ಅದನ್ನೂ ತಪ್ಪಿಸಿಬಿಟ್ಟೆ.
ಅಲ್ದೇ, ನನ್ನ ಎಲ್ಲಾ ಫ್ರೆಂಡ್ಸ್‌ಗಳನ್ನು ವ್ಯಸ್ತದಲ್ಲಿರಿಸಿದ್ದಿಯಾ.. ನಾನೇನ್ ಮಾಡ್ಲಿ ಹೇಳು. ನಳಿನಿ ಯಾವುದೇ ಭಜನೆ ಪ್ರೋಗ್ರಾಮ್‍ನಲ್ಲಿ, ಉಪೇಂದ್ರಣ್ಣ ಅವರ ಅಭಿಮಾನಿಗಳ ಜತೆ, ನಮ್ಮ ನಾಯಕ್‌ರಿಗಂತೂ ನನ್ನ ಪೋಸ್ಟ್ ನೋಡೋಕ್ಕೂ ಪುರುಸೊತ್ತು ಇಲ್ಲ. ಈಗ ಹೇಳು, ನಿನ್ಗೆ ಕಾಗದ ಬರೆಯುವುದು ಬಿಟ್ರೆ ಬೇರೆ ಆಪ್‌ಶನ್ ಕೊಟ್ಟಿದ್ದಿಯಾ??
ಹೋಗ್ಲಿ ಬಿಡು, ನಿಂಗಿದರ ಅಭ್ಯಾಸ ಇದೆಯಲ್ವಾ, ನಿನ್ನ ಭಕ್ತವೃಂದದವರು ಏನಾದರೂ ಕೊಂಕು ಹುಡುಕ್ತಾ ಇರ್ತಾರೆ.
ಇವತ್ತಿಗೆ ಇಷ್ಟು ಆಪಾದನೆ ಸಾಕು ಬಿಡು!
ಇವತ್ತೂ ನಾಮದೇವನ ಒಂದು ಅಭಂಗ ಅನುವಾದಿಸಿದ್ದೇನೆ, ಓದು! ಇಷ್ಟ ಆಗದಿದ್ರೆ ಏನೂ ಹೇಳ್ಬೇಡ, ಅರ್ಥ ಆಗ್ತದೆ. (ನಂಗೆ ಮರಾಠಿ ಅರ್ಥವಾಗೋದು ಅಷ್ಟಕ್ಕಷ್ಟೇ! ತಪ್ಪಾದ್ರೆ ಕೋಪ ಮಾಡ್ಕೊಳ್ಬೇಡಿ ಅಂತ ಒಂದ್ ಮಾತು ನಾಮದೇವಂಗೂ ಹೇಳ್ಬಿಡು)
ಅದರ ಜತೆ ಗೆರೆಗಳಲ್ಲಿ ಚಿತ್ರ ಬಿಡಿಸಿ ಸಂತರ ಜತೆಗೆ ನಿನ್ನ ನಾಮಾಮೃತವನ್ನು ಕೇಳುತ್ತಾ ನಲಿಯುತ್ತಾ ಪಂಡರಾಪುರದತ್ತ ಮನಸ್ಸಿನಲ್ಲೇ ಹೆಜ್ಜೆ ಹಾಕುತ್ತಿದ್ದೇನೆ. ಅದನ್ನೂ ನೋಡಲು ಮರೆಯದಿರು.
ಪಂಡರಾಪುರದೊಡೆಯನೇ, ಗೆಳೆಯನೇ
ಭಕುರತರ ಸಹಚರ್ಯೆ ಮಾಡೋ||
ಭಕುತರ ನೀ ಕೈವಶನಂತೆ ನಾರಾಯಣಾ
ಮತ್ಯಾಕೆ ಲಜ್ಜೆ ತೋರಲಿ ಮಾತು ಪೇಳಲು||
ಹಿಂದೆ ಬೇಡಿದವರದೆಲ್ಲ ಸಾಲ ತೀರಿಸಿದೆಯಂತೆ
ಮತ್ತೆ ನಂಗೊಬ್ಬನಿಗ್ಯಾಕೀ ಪರಿಯ ತಾಪ||
ಮತ್ತೂ ಮತ್ತೂ ನಿನಗಾಗುದಿಲ್ಲವೇ ಒಂದಿಷ್ಟೂ ಸಂಕೋಚ
ಹೇಳೋ ಕೇಶವಾ, ನನ್ನೊಡೆಯ, ಕೇಳುವೆ ನಾನು ನಾಮ||
https://www.youtube.com/watch?v=RM8sKmGUtAE
12 October, 2014
ದೇಹ ಜಾವೋ ಅಥವಾ ರಾಹೋ.. (ಅನುವಾದ)
ಆತ್ಮೀಯ ಗೆಳೆಯ ಪಾಂಡುರಂಗ,
ನಿನ್ನದೇನೋ ಬೇರೇಯೇ ಇಚ್ಛೆಯಿರಬಹುದು, ನಿನ್ನ ಭೇಟಿಯಾಗುವೆಂದು ಬಲು ಆಸೆಯಿಂದ ಕಾಯುತ್ತಿದ್ದೆ; ಚಂದ್ರಭಾಗದಲಿ ಮಿಂದು ಸೊಂಟದ ಮೇಲೆ ಕರವಿರಿಸಿ ಇಟ್ಟಿಗೆಯ ತುಂಡಿನ ಮೇಲೆ ನಿಂತು ಪುರಂದರನಿಗಾಗಿ ಕಾದವನ ದರುಶನ ಮಾಡುವೆನೆಂದು! ನಾಮ, ತುಕರಾಮ, ಜ್ಞಾನದೇವ, ಪಂಡರಿಬಾಯಿ.. ಸಂತರ ರಚನೆಗಳನು ಸನ್ಮಿತ್ರರೊಡನೆ ಪಾಡುತ್ತಾ ನಿನ್ನಲ್ಲಿಗೆ ಬರುವಳಿದ್ದೆ! ಇರಲಿ ಬಿಡೋ, ಬೆಳಿಗ್ಗಿನಿಂದ ನಿನ್ನ ಮನೋಹರ ರೂಪ ಕಣ್ಣೆದುರು ಕಾಣುತ್ತಿದೆ. ಮುಂದೆಂದಾರೂ ನನ್ನನ್ನು ಕರೆಸಿಕೊಳ್ಳು, ನನ್ನೊಡೆಯ!
ನಾಮದೇವನ ರಚನೆಯೊಂದನ್ನು ಕನ್ನಡದಲ್ಲಿ ಅನುವಾದಿಸಿ ನಿನ್ನ ಚರಣಕರ್ಪಿಸಿದ್ದೇನೆ. ಮೆಚ್ಚಿಕೊಳ್ಲ ಇಲ್ಲಾ ಮೆಚ್ಚಿಕೊಳ್ಳದಿರು, ನಿನ್ನಿಚ್ಛೆ!
ಕಾಯವಿದು ಇರಲಿ ಇಲ್ಲಾ ಬಿದ್ದು ಹೋಗಲಿ
ಪಾಂಡುರಂಗನ ಮೇಲೆನ ದೃಢಭಾವಕೆ ಚ್ಯುತಿ ಬರದಿರಲಿ||
ಈ ಪಾದಕಮಲಗಳನೆಂದಿಗೂ ಬಿಡೆನು
ನಿನ್ನಾಣೆ ಪಂಡರಿನಾಥ||
ಜಿಹ್ವೆಯಲಿ ನಿನ್ನ ಮಂಗಲನಾಮ
ಹೃದಯದಲಿ ಅಖಂಡಿತ ಪ್ರೇಮ||
ನಾಮನು ಪೇಳುವನು ಕೇಶವರಾಜ,
ಶಪಥ ಮಾಡಿಹೆನು ನಡೆಯುವೆನೆಂದು||
ಸುಮನ ಕಲ್ಯಾಣಪುರ ಅವರ ಕಂಠದಲ್ಲಿ,
ನಿನ್ನದೇನೋ ಬೇರೇಯೇ ಇಚ್ಛೆಯಿರಬಹುದು, ನಿನ್ನ ಭೇಟಿಯಾಗುವೆಂದು ಬಲು ಆಸೆಯಿಂದ ಕಾಯುತ್ತಿದ್ದೆ; ಚಂದ್ರಭಾಗದಲಿ ಮಿಂದು ಸೊಂಟದ ಮೇಲೆ ಕರವಿರಿಸಿ ಇಟ್ಟಿಗೆಯ ತುಂಡಿನ ಮೇಲೆ ನಿಂತು ಪುರಂದರನಿಗಾಗಿ ಕಾದವನ ದರುಶನ ಮಾಡುವೆನೆಂದು! ನಾಮ, ತುಕರಾಮ, ಜ್ಞಾನದೇವ, ಪಂಡರಿಬಾಯಿ.. ಸಂತರ ರಚನೆಗಳನು ಸನ್ಮಿತ್ರರೊಡನೆ ಪಾಡುತ್ತಾ ನಿನ್ನಲ್ಲಿಗೆ ಬರುವಳಿದ್ದೆ! ಇರಲಿ ಬಿಡೋ, ಬೆಳಿಗ್ಗಿನಿಂದ ನಿನ್ನ ಮನೋಹರ ರೂಪ ಕಣ್ಣೆದುರು ಕಾಣುತ್ತಿದೆ. ಮುಂದೆಂದಾರೂ ನನ್ನನ್ನು ಕರೆಸಿಕೊಳ್ಳು, ನನ್ನೊಡೆಯ!
ನಾಮದೇವನ ರಚನೆಯೊಂದನ್ನು ಕನ್ನಡದಲ್ಲಿ ಅನುವಾದಿಸಿ ನಿನ್ನ ಚರಣಕರ್ಪಿಸಿದ್ದೇನೆ. ಮೆಚ್ಚಿಕೊಳ್ಲ ಇಲ್ಲಾ ಮೆಚ್ಚಿಕೊಳ್ಳದಿರು, ನಿನ್ನಿಚ್ಛೆ!
ಕಾಯವಿದು ಇರಲಿ ಇಲ್ಲಾ ಬಿದ್ದು ಹೋಗಲಿ
ಪಾಂಡುರಂಗನ ಮೇಲೆನ ದೃಢಭಾವಕೆ ಚ್ಯುತಿ ಬರದಿರಲಿ||
ಈ ಪಾದಕಮಲಗಳನೆಂದಿಗೂ ಬಿಡೆನು
ನಿನ್ನಾಣೆ ಪಂಡರಿನಾಥ||
ಜಿಹ್ವೆಯಲಿ ನಿನ್ನ ಮಂಗಲನಾಮ
ಹೃದಯದಲಿ ಅಖಂಡಿತ ಪ್ರೇಮ||
ನಾಮನು ಪೇಳುವನು ಕೇಶವರಾಜ,
ಶಪಥ ಮಾಡಿಹೆನು ನಡೆಯುವೆನೆಂದು||
ಸುಮನ ಕಲ್ಯಾಣಪುರ ಅವರ ಕಂಠದಲ್ಲಿ,
Subscribe to:
Posts (Atom)