ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

08 March, 2014

ಹಾಯ್ಕ



ಶರಧಿಯಾಣ
ಅಲೆಗಳ ಮುತ್ತಾಟ
ಗುಲಾಲಿ ದೋಣಿ

06 March, 2014

ಹಾಯ್ಕ



ಹಿತಬಿಸಿಲು  
ಹೊನ್ನಛಾಯೆ ಹೊನಲು
ಸೂರ್ಯ ಹೊರಟ!

ಹಾಯ್ಕ



ಕಪ್ಪು ಆಗಸ
ಚುಕ್ಕಿಗಳ ವಿರಹ
ದೀರ್ಘ ಇರುಳು!

ಹಾಯ್ಕ



ಪರ್ಣ ಚಿತ್ತಾರ
ರಂಗು ರಂಗಿನ ಹೂಗಳು
ಮನ್ಮಥ ರತಿ

ಹಾಯ್ಕ



ಶರದೃತು
ಹೂಗಳು ಅರಳಿವೆ
ಚಿಟ್ಟೆ ಎಚ್ಚೆತ್ತಿಲ್ಲ!

05 March, 2014

ಮುಂಜಾವು


ಮನ ಹಂಬಲಿಸುತಿದೆ ಮುಂಗಾರು ಮುಂಜಾವು..
--------------------------------------

|| ಶರಧಿಯ ಶಂಖ ನಾದದ ಮೊರೆತ ||
|| ’ತಟಪಟ’ ’ತಟಪಟ’ ಹನಿಗಳ ನರ್ತನ ||
|| ಆಗೀಗ ಸುಯ್ಯೆಂದು ಬೀಸಿ ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಸಂದೇಶ ವಿನಿಮಯ ಮಾಡುವ ಮರುತ ||
|| ಕಪ್ಪೆ ಜೀರುಂಡೆಗಳ ಸಂಗೀತ ಕಛೇರಿ ||
|| ಕ್ಷೀಣವಾಗಿ ಕೇಳುವ ಹಕ್ಕಿಗಳ ಚಿಲಿಪಿಲಿ ಸುಪ್ರಭಾತ ||
|| ಮುಗಿಲು ಬುವಿಗಳ ಮಿಲಕ್ಕಡ್ಡಿಯಾಗದಂತೆ ಮರೆಯಲೇ ನಿಂತು ಮಂದ ಬೆಳಕು ಚೆಲ್ಲುವ ದಿನಕರ ||

-ತನ್ನೂರಿನ ಮುಂಗಾರಿನ ಮುಂಜಾನೆಗೆ ಸಾಕ್ಷಿ ಈ ಭಾವುಕ ಮನ.

 

ಸುಭಾಷಿತ

ನಿತ್ಯವೂ ಓದಿ ಬೆನ್ನು ತಟ್ಟಿ, ಹುರಿದುಂಬಿಸಿ ಮತ್ತಿಷ್ಟು ಬರೆಸುವ ಸಹ ಓದುಗರಿಗಾಗಿ..

ತಮ್ಮದೇ ಪದಗುಚ್ಛದ ಹೆಮ್ಮೆ
ಭಾವಕೆ ಮಾತಾದ ಅನುಭೂತಿ
ಶಬ್ದ ಬಳಕೆಯಲಿ ತೋರುವ ಜಾಣ್ಮೆ
ವೀಣಪಾಣಿಯ ಅನುಗ್ರಹಕೆ ಕೃತಜ್ಞತೆ

ಪರರ ಭಾವಕೂ ತಲೆದೂಗಿ
ಎಲ್ಲವನೂ ಆಸ್ವಾದಿಸುವ ಹುಮ್ಮಸು
ಸಾಹಿತ್ಯ ಸಿರಿಯಲಿ ಮುಳುಗೇಳುವ ಮನಸು
ಬೆನ್ನು ತಟ್ಟಿ ಹುರಿದುಂಬಿಸುವ ಸೊಗಸು

ರಸಭರಿತ ಗಂಧದ ಹೂತೇರು
ಮೈತುಂಬ ಪೊತ್ತ ಮಾವಿನ ತರು
ಆಶಿಸುವುದಿಲ್ಲವೇ ಹುಲು ಮನುಜನರು
ಉಣಿಸಲೆನಗೆ ಮಡಕೆ ತುಂಬಾ ನೀರು!

ಅಪಿ ಮುದಮುಪಯಾಂತೋ ವಾಗ್ವಿಲಾಸೈಃ  ಸ್ವಕೀಯೈಃ |
ಪರಭಣಿತಿಷು ತೋಷಂ ಯಾಂತಿ ಸಂತಃ ಕಿಯಂತಃ |
ನಿಜಘನಮಕರಂದಸ್ಯಂದಪೂರ್ಣಾಲವಾಲಃ |
ಕಲಶಸಲಿಲಸೇಕಂ ನೇಹತೇ ಕಿಂ ರಸಾಲಃ ||

04 March, 2014

ಒಲವಿನ ಹಾಡು

ಒಲವೇ,

ಹೀಗೇ ಹಾಡುತ್ತಿರು
ಕೊಂಚವೂ ವಿರಮಿಸದೇ
ಸಗ್ಗದ ಗಂಧ
ಮತ್ತೆ ನಶೆಯೇರದೇ!

03 March, 2014

ಯಾರಿಗೂ ತಿಳಿಯಲಿಲ್ಲವಾ.. ಅಥವಾ?

ಅವಳು ಕಟ್ಟು ಹಾಕಿ ಬಚ್ಚಿಟ್ಟಿದ್ದಳು ಕನಸುಗಳನು
ಅವನ ಬಿದಿರ ಕೋಲಿನೊಳಗೆ ಅವನಿಗೂ ತಿಳಿಯದ ಹಾಗೆ

ಅವನ ತುಟಿ ತಾಗಿದೇ ತಡ ಬಾನಿನತ್ತ ಹಾರಿದವು
ಗೆಜ್ಜೆಸದ್ದು ಮಾಡದೆ ನಲಿಯುತಿವೆ ಅವಳಿಗೂ ತಿಳಿಯದ ಹಾಗೆ!

01 March, 2014

ಮನಕ್ಕೆ ಬೇರೆ ಕೆಲಸವಿಲ್ಲ.. ಇಂತಹುದೇ ತರ್ಕ ನಿತ್ಯ ಮನದೊಳಗೆ
------------------------------------------------


“Aunty,  please tell me,  where is the dustbin?”

ಏಳು ವರ್ಷದ ಆ ಹುಡುಗಿ ಸುಮಾರು ಹತ್ತು ನಿಮಿಷ ಸಿಕ್ಕವರ ಹತ್ತಿರವೆಲ್ಲ ಕೇಳುತ್ತಿದ್ದಳು ಕೈಯಲ್ಲಿ ಚೊಕೊಲೆಟ್ ‍ ರ್ಯಾಪರ್ ಹಿಡಿದುಕೊಂಡು!

ನಾನು ಅವಳನ್ನೇ ಗಮನಿಸುತ್ತಿದ್ದೆ.

ಅವಳಿಗೆ ಯಾರೂ ತೋರ್ಸಿಸಿಲ್ವೋ ಏನೋ..

ನನಗೆ ಕುತೂಹಲ ಏನು ಮಾಡ್ಬಹುದು ಅಂತ..

ಕೊನೆಗೂ ಕಪ್ಪು ಪ್ಲಾಸ್ಟಿಕ್ ತೊಟ್ಟಿಯನ್ನು ಹುಡುಕಿ ಅಲ್ಲಿ ಹಾಕಿದಳು..

ಈ ಹುಡುಗಿ ಭಾರತೀಯಳು..

ಆದರೆ ಹುಟ್ಟಿನಿಂದಲೂ ವಿದೇಶದಲ್ಲಿದ್ದಾಳೆ.

ಹೆಚ್ಚು ಕಮ್ಮಿ ಪ್ರತಿವರ್ಷ ಭಾರತ ಮತ್ತು ಅಜ್ಜಿ ಮನೆಯಲ್ಲಿ ಎರಡೆರಡು ತಿಂಗಳು ವಾಸ.

ಇಲ್ಲಿ ಮಾತೃ ಭಾಷಯಲ್ಲೇ ವ್ಯವಹರಿಸುತ್ತಾಳೆ.

ಅಲ್ಲಿ ಆಂಗ್ಲ ಭಾಷೆ..

ನಾನು ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳಿಗೆ ಎಷ್ಟು ಬಾರಿ ತಿಳುವಳಿಕೆ ಹೇಳಿದರೂ ಹೊರಗೆ ತೊಟ್ಟಿಯಲ್ಲಿ ಬಿಸಾಡದೇ ಅಲ್ಲೇ ಮಾರ್ಗದ ಬದಿಯಲ್ಲೇ ಚೊಕೊಲೆಟ್ ರ್ಯಾಪರ್  ಬಿಸಾಡಿ ಹೋಗುತ್ತಾರೆ..

ಶಾಲೆಯಲ್ಲಿ ಪರಿಸರ ಮಾಲಿನ್ಯ, ಕಾರಣ, ಮತ್ತು ಅದನ್ನು ತಡೆಗಟ್ಟುವಿಕೆಯ ಬಗ್ಗೆ ಪ್ರಶ್ನೋತ್ತರ..

ಬರೀ ಉರು ಹೊಡೆಯಲೇ!!!

ಯಾವಾಗ ಯಾವಾಗ ನಾವು ನಮ್ಮನ್ನು ತಿದ್ದಿಕೊಳ್ಳುವುದು???

ಈ ಮಕ್ಕಳದು ತಪ್ಪಲ್ಲ.. ಅವರಿಗೆ ಮಾದರಿ ಅವರವರ ಮನೆಯವರು ಮತ್ತು ನಿತ್ಯ ಭೇಟಿಯಾಗುವವರು..


ಇಂತಹ ಪ್ರಜೆಗಳ ಆಳುವ ರಾಜಕಾರಣಿ  ಭ್ರಷ್ಟಾಚಾರಿಯಾಗಿರದೆ ಮತ್ತೇನಾಗಬಲ್ಲ!

ನಮ್ಮಲ್ಲೂ ವಿದೇಶಗಳಲ್ಲಿದ್ದ ಹಾಗೆ ಬಿಗಿಯಾದ ಕಾನೂನು ಇದ್ದಿದ್ದರೆ...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...