ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 June, 2013

 ನೂರಾಗಿ ಒಡೆದ ಮನದ ಕನ್ನಡಿಯಲ್ಲೀಗ  ನಿನ್ನದೇ ಭಿನ್ನ ಭಿನ್ನ  ರೂಪ!

ನೆನಪಿನಲೆಗಳ ಕಾಟ!

ಅಟ್ಟಿದಷ್ಟೂ ಅತ್ತ ಮರಳುವುವು ನೆನಪಿನಲೆಗಳು ದಡದತ್ತ
ಸೋಲದೇ ಮತ್ತಿಷ್ಟು ಎತ್ತರದ ತೆರೆಗಳಾಗಿ ಅಪ್ಪಳಿಸಿದರೂ
ಕೊರೆದ ಹೆಸರ ಅಳಿಸಲಾಗದೇ ಸೋತು ಸಣ್ಣಗಾಗುವವು!

ಮೆಚ್ಚುಗೆ!!!

ಬರಹವೆರಡಕೂ ಸಾಮ್ಯತೆ ಒಂದೇ..
ಅದೇ ಅನುಭಾವ!
ಹೃದಯಾಳಾಂತರದಿ ಮೂಡಿದರಿಲ್ಲಿ
ಅಲ್ಲದು ಬಾಹ್ಯ ಮೆಚ್ಚುಗೆಗಾಗಿ
ಮೆಚ್ಚುಗೆಯ ವರ್ಷವನೇ ಹರಿಸುವೆಯಲ್ಲ
ಬರಿದೇ ನೋಡಿ ಮಾತ್ರ ಇರಬೇಕೇನು!

ನಿಟ್ಟುಸಿರು!

ನೋವು ತುಂಬಿದ ಒಂದು ನಿಟ್ಟುಸಿರೇ ಸಾಕು

ಘಳಿಗೆಯೊಳಗೆ ನೀ ಗಳಿಸಿದೆಲ್ಲವೂ ಮಣ್ಣು ಪಾಲು!

ಕಿವಿಯಾಗು ಗೆಳತಿ!

ಗೆಳತಿ, ಕಿತ್ತಿಡಲಾರೆ ಇದ ಹೊತ್ತು ಅತ್ತಿತ್ತ ಸಾಗಲಾರೆ
ಛಾಯೆಯನೂ ನೋಡಲಾರೆ ಎಲ್ಲೆಲ್ಲೂ ಅದೇ ಬಿಂಬ!

_____________________________________________________

ಗೆಳತಿ, ಕಳಕೊಂಡಿರುವೆನೆ ನಾ ನನ್ನನ್ನೇ ಕಳಕೊಂಡಿರುವೆನೇ

ಕಸದ ಬುಟ್ಟಿಯಲ್ಲೆಲ್ಲೋ ಬಿಸುಟವಳ ಮತ್ತೆ ಹುಡುಕಿಕೊಡುವೆಯಾ!

04 June, 2013

ಅಧಿಕಪ್ರಸಂಗಿ ಮನಸು!

ಬಲು ಅಧಿಕಪ್ರಸಂಗಿ ಮನವಿದು ನನ್ನದು
ಅವರಿವರ ಮನದ ಏರುಪೇರಿನ ಪ್ರವರಗಳನ್ನೆಲ್ಲಾ
ಬಿಚ್ಚಿ ಬೆಚ್ಚು ಬೀಳಿಸಿ ಪೆಚ್ಚು ಮಾಡುತದೆನ್ನನು!

02 June, 2013

ಸಂಬಂಧ!




ಮನುಷ್ಯ ಮೂಲತಃ ಒಂಟಿಯೇ. ಅವನ ಬದುಕು ವಿಷಾದದಿಂದ ಕೂಡಿರುತ್ತದೆ. ಅವನ ಸ್ನೇಹಿತರು, ಬಂಧುಗಳು, ಪ್ರೀತಿಪಾತ್ರರು ಅದನ್ನು ಸಹನೀಯವಾಗುವಂತೆ ಮಾಡುತ್ತಾರೆ. ಆದರೆ ಅಂತವರ್ಯಾರೂ ಅವನ ಬದುಕಿನಲ್ಲಿ ಇಲ್ಲದೇ ಹೋದರೆ, ಇದ್ದವರು ಅರ್ಧದಲ್ಲಿ ಎದ್ದು ಹೋದರೆ? ಬದುಕಿಗೆ ವಿದಾಯ ಹೇಳಬೇಕೆಂದು ಅನಿಸುವುದು ಸಹಜ.
-ಉಷಾ ಕಟ್ಟೆ ಮನೆ ಅವರ ಬ್ಲಾಗ್ ನಿಂದ ಎತ್ತಿದ ಕೆಲವು ಸಾಲುಗಳು.

ಆತ್ಮೀಯ ಸಂಬಂಧವೆಂದರೆ,
v  ಅಪರೂಪಕ್ಕೆ ತೊಡುವ ಕಪಾಟಿನಲ್ಲಿ ಬೆಚ್ಚಗೆ ಇರಿಸಿದ ಬಟ್ಟೆಗಳ ಹಾಗಲ್ಲ,
ಮನೆಯಲ್ಲಿ ನಿತ್ಯವೂ ಧರಿಸುವ ಮೈಮನ ಬೆಚ್ಚಗಿರಿಸುವ, ಹಿತ ನೀಡುವ ಬಟ್ಟೆಯಂತಿರಬೇಕು.

v  ಮೊದಲ ಮಳೆ ಸುರಿದಾಗ ಕಂಪನೀಯುವ ಮಣ್ಣಿನಂತಿರಬೇಕು.

v  ನಾಲ್ಕು ದಿನ ವಿಹಾರಕ್ಕೆಂದು ಹೊರಹೋದವರು, ಮರಳಿದಾಗ ನಮ್ಮ ಮನೆ ನಮಗೆ ಕೊಡುವ ಹಿತದಂತಿರಬೇಕು.

v  ಪ್ರತೀದಿನ ಬದುಕಿನಲಿ ಹಲವಾರು ಮುಗುಳುನಗೆಗಳು ತೋರಿಕೆಗೆ ವಿನಿಮಯವಾಗುತ್ತದೆ..  ಹಾಗಿರದೆ ಪರಸ್ಪರ ದೂರವಿದ್ದರೂ ಆ ಅನುಬಂಧದ ತಂದ ಸಂಬಂಧದ ನೆನಪೇ ನಮ್ಮ ವದನದಲಿ ನಗೆಯನು ಚಿಮ್ಮಿಸುವಂತಿರಬೇಕು.

v  ನಲಿವನು ಹಂಚಲು ಇರುವರು ನೂರಾರು ಮಂದಿ, ನೋವನು ಹಂಚಲು ಸಾಧ್ಯ ನಮ್ಮೊಳಗಿರಿಸಿದ ಆ ಆತ್ಮೀಯ ಸಂಬಂಧದೊಂದಿಗೆ ಮಾತ್ರ,

ಆತ್ಮೀಯ ಸಂಬಂಧದಲಿ-

v  ಅಲ್ಲಿ ಎರಡು ಬದಿಯಲಿ ಒಂದೇ ಬಗೆಯ ನಂಬಿಕೆ ವಿಶ್ವಾಸವಿರಬೇಕು..
v  ಕರೆಯದೇ ಓಗೊಡಲು ತಿಳಿದಿರಬೇಕು
v  ಆಡದೇ ಮನವ ತಿಳಿಯಬೇಕು..
v  ಮನದ ಮಾತಿಗೆ ಕಿವಿಯಾಗಬೇಕು.
v  ನೋವಿಗೆ ಸ್ಪಂದಿಸಬೇಕು.
v  ಹಂಚಿ ನೋವನಿಂಗಿಸಬೇಕು.
v  ವಿಚಾರಗಳು ಒಂದೇ ಆಗಿರಬೇಕಿಲ್ಲ.. ಆದರೆ ಪರಸ್ಪರ ಅನುಭವಕೆ ಇರಬೇಕು ಗೌರವ..
v  ಇಲ್ಲಿ ನಾನೇ ಸರಿ ನನ್ನದೇ ಸರಿ ಎನ್ನುವ ಹಾಗಿಲ್ಲ..
v  ಅಸೂಯೆ ಸಲ್ಲ.. ನಮ್ಮವರ ಏಳಿಗೆಗಿರಲಿ ನಮ್ಮ ಸಮ್ಮತಿ.
v  ಏಣಿ ಏರುವಾಗ ಜತೆಗೆ ಬರಲಿ ಎಂಬ ಭಾವವಿರಲಿ.
v  ಸಂಪರ್ಕದಲ್ಲಿ ಸದಾ ಇರಬೇಕು, ಸಾಧ್ಯವಾಗದೇ ಹೋದರೆ ಅದು ಬೇರೆ ಮಾತು
.
v  ವೈಮನಸು ಬಂದರೂ ಮಾತುಕತೆಯಿಂದ ದೂರ ಮಾಡುವ ಉದಾತ್ತ ಮನೋಭಾವವಿರಬೇಕು.

v  ಮನಸು ಮಾತುಕತೆಗೆ ಮುಕ್ತವಾಗಿರಬೇಕು.


ಸಂಬಂಧಗಳು ಬದಲಾವಣೆಗೆ ಹೊರತಾಗಿರುತ್ತದೆ. 

ಋತುಗಳು ಬರುತ್ತವೆ, ಹೋಗುತ್ತವೆ. 

ಆದರೆ ಮನ ಒಪ್ಪಿ ಬೆಸೆದ ಆತ್ಮೀಯ ಸಂಬಂಧಗಳು;

ಶಿಶಿರ ಋತುವಿಗೆ ಒಣಗಿ ನೆಲಗುರುಳಿದ ಎಲೆಗಳಂತಲ್ಲ. 

ವರ್ಷಋತುವಿನ ಬಿರುಗಾಳಿಗೆ ಬೆದರಿ ಬೇರು ಸಮೇತ ಉರುಳು ಮರಗಳಂತಲ್ಲ.

ವೈಶಾಖ ಮಾಸದ ಸುಡು ಬಿಸಿಲಿಗೂ ಬಾಡಿ ಬಸವಳಿಯುವುದಿಲ್ಲ.

ನಿತ್ಯವೂ ವಸಂತ ಋತುವಿನಲ್ಲಿ ಕಂಗೊಳಿಸುವ ಹಸುರು ಎಲೆಗಳ ಮಧ್ಯೆ ಕಂಪ ಹರಡಿ ಸದಾ ನಗೆ ಚೆಲ್ಲುವ ಕುಸುಮಗಳಂತೆ ಉಳಿಯುತ್ತವೆ, ಉಳಿಯಬೇಕು. 

ಅವೇ ನಿಜವಾದ ಬಂಧ. 

ಸಂಬಂಧಗಳು ನಮ್ಮಲ್ಲಿ ಬಲಹೀನತೆ ಹುಟ್ಟಿಸಬಾರದು.

ಮನೋವಿಕಾರಕ್ಕೆ ಕಾರಣವಾಗಬಾರದು.

ಆತ್ಮ ಸ್ಥೈರ್ಯವನ್ನು ನಾಶವಾಗಲು ಕಾರಣವಾಗಬಾರದು.

ಅಪರಾಧ ಮನೋಭಾವವನ್ನು ಬೆಳೆಸಬಾರದು.
  
ಪರಸ್ಪರ ಮಾತುಕತೆಗಳು ನೋವು ಕೊಡಬಾರದು. 

ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ಜಲಪಾತದಂತಿರದೇ ನಿತ್ಯವೂ ಒಂದೇ ಲಹರಿಯಲ್ಲಿರಬೇಕು. 

ಹೊಸ ಆಟಿಗೆ ದೊರೆತಾದ ಮಗು ಅದನ್ನು ತಾನೆಲ್ಲಿ ಹೋಗುತ್ತದೋ ಅಲ್ಲಲ್ಲಿ ಕೊಂಡೊಯ್ಯುತ್ತದೆ.. ಆದರೆ ಹಳತಾದ ಹಾಗೆ ಅದೆಲ್ಲಿ ಇಟ್ಟಿದೆಯೆಂಬುದನ್ನೂ ಮರೆಯುತ್ತದೆ. ಹಾಗಿರಬಾರದು ಆತ್ಮೀಯ ಸಂಬಂಧಗಳು.

ಸಂಬಂಧಗಳು ವೈನಿನಂತಿರಬೇಕು. 

ಹಳತಾದ ಹಾಗೆ ಮತ್ತಷ್ಟು ಬೆಸುಗೆ ಹೆಚ್ಚಬೇಕು. 

ಮನಗಳು ಮತ್ತಿಷ್ಟು ಹತ್ತಿರಬರಬೇಕು.

ಪರಸ್ಪರ ಭಾವಗಳನ್ನು ಗೌರವಿಸಬೇಕು. 

ಪರಸ್ಪರ ಪ್ರತಿಭೆಗಳಿಗೆ ಪ್ರೋತ್ಸಾಹದ ನುಡಿ ಇರಬೇಕು. 

ಆತ್ಮೀಯರ ಮೆಚ್ಚುಗೆಗಿಂತ ಸಿಹಿ ಮತ್ಯಾವುದು ಇಲ್ಲ.

ಅದೇ ಅವರ ಮೌನ, ತಿರಸ್ಕಾರ ಇವುಗಳಿಗಿಂತ ಕಹಿ ಮತ್ಯಾವುದೂ ಇಲ್ಲ.

ಬಿಸಿಲ್ಗುದುರೆ!

ಆ ಬಿಸಿಲ್ಗುದುರೆ ಕಣ್ಣೆದುರು ಸುಳಿದಾಗ
ಮೋಹದ ಸುಳಿಯಲ್ಲಿ ನಾ ಸಿಲುಕಿದೆನೇನೋ..
ವಿವೇಚನೆ ಅತ್ತ ಬದಿಗೆ ಸರಿಯಿತೇನೋ
ಅದನಪ್ಪಿ ಮಾಯಾಲೋಕದಲ್ಲೆ ಸುತ್ತಿದೆನೋ.


ಮತ್ತು ತಲೆಗೇರಿತ್ತೇನೋ..
ತಪ್ಪುಗಳಿಗೆಲ್ಲಾ ತೇಪ ಹಚ್ಚಿತು
ಮೋಹಕೆ ಬಲಿಯಾದ
ಮನಸು ಹಾದಿ ತಪ್ಪಿಸಿತು.

ದೊಪ್ಪನೆ ನೆಲಕೆ ಬಿಸುಟು ಮಾಯವಾಯಿತೇ 
ಒಮ್ಮೆಗೆ ಧೂಳು ಆವರಿಸಿ ಅಮಲೆಲ್ಲಾ ಇಳಿದು
ಭ್ರಮೆಯ ಪರದೆ ಸರಿಯಿತು
ವಾಸ್ತವವ ಒಪ್ಪಲು ಮನ ನಿರಾಕರಿಸಿತು
ವಿಧಿಯ ಅಟ್ಟಹಾಸ ಕಿವಿಗಪ್ಪಳಿಸಿತು.

ಒಲವು ಮತ್ತು ವಿಧಿ!

ಬಿಳಿಯ ಬಟ್ಟೆ ಹೊದಿಸಿದ ಒಲವಿನ
ಉಸಿರು ಮರಳಿ ಬರಲೆಂದು ಅದನಪ್ಪಿ 
ರೋಧಿಸಿ ಅಂಗಲಾಚುವವಳ ಕಂಡು 
ವಿಧಿಯ ಮುಖದಲಿ ನಸುನಗೆ!

ಪತಂಗ ಕಲಿಸಿದ ಪಾಠ!!!

ಹೂ ಬರೆಯಿತು.. ಕವಿತೆ!
--------------------
ತೆರೆದ ಪಕಳೆಯಲಿ ಆ ದಿನ 
ನೀಲ ದುಂಬಿ ಪವಡಿಸಿತ್ತು
ಮುಷ್ಟಿಯಲಿ ಮುಚ್ಚಲೆತ್ನಿಸಲಿಲ್ಲ.. 
ಮೆಚ್ಚಿತೇನೋ..
ಮೈಮೇಲೆಲ್ಲಾ ಮುತ್ತಿಕ್ಕಿತು
ಮನಸೋತು ಮಧುವಿತ್ತೆನೇ

ಇಲ್ಲೇ ಸುಳಿದಾಡುತಿತ್ತಲ್ಲ.. 
ಈಗೆಲ್ಲಿ?
ಹುಡುಕಾಟಬೇಡ.. 
ಅಂಗಲಾಚಬೇಡ..
ಗಾಳಿಯಲಿ ತೇಲಿಬಂದ ಕಂಪು ಸೆಳೆಯಿತೇನೋ!
ದಳಬಿಡಿಸಿ ಕೂರಬಾರದೆಂದು
ಇನ್ನಾದರೂ ಪಾಠ ಕಲಿತುಕೋ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...