ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 January, 2013

ಒಲವಿಗೊಂದು ಓಲೆ!


ಒಲವೇ,
ಅರಿವಿದೆಯೆನಗೆ 
ಇಹರು ನಿನಗೆ 
ಸಾವಿರಾರು 
ಅಭಿಮಾನಿಗಳೆಂದು!
ಆದರೂ, ಒಮ್ಮೆ 
ವಿಚಾರಿಸಿ ನೋಡಂತೆ
ಇಟ್ಟಿರುವರೇನೋ 
ನಿನ್ನನ್ನು ನನ್ನಂತೆ
ತಮ್ಮೊಳಗೆಂದು!

*****************

ಒಲವೇ, ಇಲ್ಲ
ಕಾಯುವಿಕೆಗಿಂತ
ಅನ್ಯ ತಪ
ಅನ್ನುವರಲ್ಲ!
ಕಾಯುತ್ತಲೇ ಇದ್ದೇನೆ
ಹೆಚ್ಚಾಗುತಲಿದೆಯಲ್ಲ
ನನ್ನ ಪರಿತಾಪ!
*****************



ಒಲವೇ,


ನೀನು ಕೇಳಲೆಂದೇ ಸ್ವರವೆತ್ತಿ ಹಾಡುತಿಹೆನು

ಕಳೆದು ಹೋಗುವುದೇನೋ ಹಲವು 

ಸುಸ್ವರಗಳೆಡೆಯಲ್ಲಿ ನನ್ನ ಸ್ವರವೂ

ಬೇಡುವೆ  ಕಾಡುವೆ  ಪ್ರಾರ್ಥಿಸುವೆ 

ನಿನ್ನಲ್ಲಿ ಒಂದಿಷ್ಟು ಕಿವಿ ನಿಮಿರಿಸಿ 

ಆಲಿಸುವೆಯಾ ನನ್ನ ಸ್ವರವನೂ!

10 January, 2013

ಮತ್ತಷ್ಟು ಒಲುಮೆಯ ಕಾವ್ಯಗಳು!


ಒಲವೇ,
   
ನಿನ್ನನ್ನರಸಿ ಹೊರಟೆನಗೆ ನನ್ನನ್ನೇ ತೋರಿಸಿದೆಯಲ್ಲ;
ಅಲ್ಲಿಯ ತನಕ ಕಂಡಿರಲಿಲ್ಲ ನಾನೇ ನನ್ನನಲ್ಲ..
**********

ಒಲವೇ, 

ಅಂಬೆಗಾಲಿಕ್ಕುತ್ತ ನಿನ್ನತ್ತಲೇ
ಹೊರಟಿರುವೆ.. ಒಮ್ಮೆ
ಎತ್ತಿ ಬಿಗಿದಪ್ಪಿ ಮುದ್ದಾಡೆನ್ನ!
************

ಒಲವೇ,

ನಿನ್ನೀ 
ಮೋಹಕ, 
ಪಾರದರ್ಶಕ
ತಿಳಿಗೊಳದಂತಿರುವ
ನೋಟದಲ್ಲೇ
ನನ್ನ ಈಜಾಟ
ನಿತ್ಯವೂ!
*************

ಕೆಲವನ್ನು ಕಳೆದಿರುವೆನಾದರೂ,

ಪಡೆದಿರುವುದು ಹಲವಾರು
ಒಲವೇ,
ಎಲ್ಲವೂ ನಿನ್ನಾಸರೆಯ
ವೈಶಿಷ್ಟ್ಯವಲ್ಲದೆ ಮತ್ತೇನು!

09 January, 2013

ಅಬ್ಬ! ಬಡ ಜೀವವೇ ಬದುಕಿದೆ!


  

        ಮದುವೆಯಾಗಿ ಗಂಡನ ಜತೆ ಹನಿಮೂನಿಗೆ ಹೊರಟಿದ್ದಳು ಹೃದಯದಲ್ಲಿ ಕನಸುಗಳ ಗಂಟನ್ನು ಹೊತ್ತುಕೊಂಡು. ಗಂಡ ಹೆಂಡತಿ ಸರವಾಡುತ್ತ ಕೇರಳದ ನೆಂಟರ ಮನೆಗೆ ತಲುಪಿದರು. 
"ನಮಗೋಸ್ಕರ ಚಿಕ್ಕಪ್ಪ ಕಾಟೇಜ್ ಬುಕ್ ಮಾಡಿದ್ದಾನೆ..ಆರಾಮವಾಗಿ ಅಲ್ಲಿ ಟಿವಿ ನೋಡುತ್ತಾ ನಾಲ್ಕು ದಿನ ಇಲ್ಲಿಯೇ ಇರೋಣ." ಪತಿಯು ಅವಳ ಕಿವಿಯಲ್ಲಿ ಪಿಸುಗುಟ್ಟುತ್ತಾ ಹೇಳಿದನು.. 
ಸ್ವರ್ಗ ಸುಖದ ಕಲ್ಪನೆಯಲ್ಲಿ ಅವಳ ಮುಖ ರಂಗೇರಿತು. ಇನ್ನೂ ರಂಗಿಯಿಳಿಯದ ಮದರಂಗಿ ಮೆತ್ತಿದ ಆ ಕೈಯನ್ನು ಮೆತ್ತಗೆ ಅದುಮಿದನವನು. ಮತ್ತಿಷ್ಟು ನಾಚಿ ಅವನಿಗಂಟಿ ಕುಳಿತವಳು! 

       ಬಂದ ನವ ವಧುವರರನ್ನು ಮನೆಯವರು ಹಾರ್ಧಿಕವಾಗಿ ಸ್ವಾಗತಿಸಿದರು. ಅವರಿಗೋಸ್ಕರ  ಮಹಡಿಯಲ್ಲಿ ಕಾದಿರಿಸಲಾದ ಕೋಣೆಗೆ ಕರೆದೊಯ್ಯಲಾಯಿತು. ಅವಳು ಪತಿಯತ್ತ ಹುಬ್ಬೇರಿಸಿದಳು! ಮತ್ತೆ ತಿಳಿಯಿತು...ಕಾಟೆಜ್ ಗೀಟೇಜು ಏನೂ  ಇಲ್ಲ..ಜತೆಗೆ ಮತ್ತೇನೋ ನೆವನಗಳು. ಮುದುಡಿದಳು..ತಾವಿಬ್ಬರು ಇನ್ನೂ ಪರಸ್ಪರ ಅರಿಯಬೇಕಾದರೆ ಏಕಾಂತದ ಅಗತ್ಯವಿತ್ತು..ಆದರೆ ಅವಳೇನೂ ಮಾಡಲು ಸಾಧ್ಯವಿರಲಿಲ್ಲ. ಊಟ ಗೀಟ ಮುಗಿಯಿತು...ಮತ್ತೆ ಸತಿ ಪತಿ ಈಗ ಏಕಾಂತದಲ್ಲಿ...ಆದರೆ ಇದೇನು ಪತಿ ಯಾವುದೋ ಹೊಲಸು ಚಿತ್ರವನ್ನು ನೋಡುತ್ತಿದ್ದಾನೆ...ಉತ್ಸಾಹವೆಲ್ಲ ಇಳಿಯಿತು. ಸುಮ್ಮನೆ ಹೊದ್ದು ಮಲಗಿದಳು. 

    ಮರುದಿನ ತಿಂಡಿ ಕಾಫಿ ಉಪಚಾರವೆಲ್ಲ ನಡೆಯಿತು. ಪತಿ ಮತ್ತವನ ಚಿಕ್ಕಪ್ಪ ಇನ್ನು ಕೆಲವು ಗೆಳೆಯರೆಲ್ಲ ಸೇರಿದರು...ನೋಡ ನೋಡುವಷ್ಟರಲ್ಲಿ ಇಸ್ಪೀಟು ಎಲೆಗಳು ಹಂಚಿಕೊಳ್ಳಲು ಪ್ರಾರಂಭವಾಯಿತು.. ಜತೆಗೆ ಪಾನ್ ಬೀಡಾ..ಬಿಯರ್...ಕುರುಕುರು ತಿಂಡಿ..ಇವಳೇನು ಮಾಡುವುದು? ಕೋಣೆಗೆ ನಡೆದಳು..ಕನಸನ್ನೆಲ್ಲಾ ಕಟ್ಟಿ ಗಂಟು ಹಾಕಿದಳು...ಕಿಟಿಕಿ ತೆಗೆದು ಮೊದಲು ಬಲಹಾಕಿ ಎತ್ತಿ ಬೀಸಾಕಿಬಿಟ್ಟಳು. ಮುಗಿಯಿತು ನನ್ನ ಜೀವನ! 

    ೩ ದಿನ ಹೀಗೆ ಕಳೆಯಿತು..ಅಲ್ಲಿಂದ ಮತ್ತೊಂದು ನೆಂಟರ ಮನೆಗೆ ಪಯಣ! ಅಲ್ಲಿ ಮತ್ತೆ ಅದೇ ಆಟ! 
  ಮತ್ತಿಷ್ಟು ನೆಂಟರು ಸೇರಿದರಲ್ಲಿ. ಅವಳಿಗೋ ಆಶ್ಚರ್ಯ...ಇವರ ಪತ್ನಿಯರಿಗೆ ಇದರ ಬಗ್ಗೆ ಆಕ್ಷೇಪಣೆ ಇಲ್ಲವೇ? ಯಾಕೆ? ಅಥವಾ ನಾನೇ ಸರಿ ಇಲ್ಲವೆ? 
   

      ಇವಳ ಮುದುಡುವಿಕೆ ಆ ಹೆಂಗಸರಿಗೆ ತಮಾಷೆ! ಎಲ್ಲರೂ ಕೂಡಿದರು ಇವಳ ಸುತ್ತ...ಇವರ್ಯಾಕೆ ಇಲ್ಲಿ ಬಂದಿದ್ದಾರೆ? ಅವಳಿಗೆ ಆಶ್ಚರ್ಯ!
 "ಹೇ ಇವಳ ರೇಪ್ ಮಾಡುವನಾ?" 
"ಅಯ್ಯೊ...ಎಲ್ಲಿ ಸಿಕ್ಕಿಸಿದೆಯಪ್ಪ ಭಗವಂತ" ಗಟ್ಟಿಯಾಗಿ ತನ್ನ ಬಟ್ಟೆಯನ್ನು ಹಿಡಿದಳು...ರಕ್ಷಣೆಗೆ ಏನಾದರೂ ಇದೆಯೇ ಎಂದು ಸುತ್ತಲೂ ನೋಡಿದಳು...
ಎಲ್ಲರಿಗೂ ಇವಳ ಕಣ್ಣಾಲಿಗಳು ತುಂಬಿದ್ದು ನೋಡಿ ಇನ್ನೂ ತಮಾಷೆ ಎಂದೆನಿಸಿತು. ಗಟ್ಟಿಯಾಗಿ ನಕ್ಕರು....
ನಗುತ್ತ ನಗುತ್ತ ಕೋಣೆಯಿಂದ ಹೊರಹೋದರು. ಅಬ್ಬ! ಬಡ ಜೀವವೇ ಬದುಕಿದೆ!
                               
              ******************************************************     

  {ಎರಡು ವರ್ಷದ ಹಿಂದೆ ರೈಲಿನಲ್ಲಿ ಅಕಸ್ಮಾತ್ತಾಗಿ ಭೇಟಿಯಾದ ಸರಿ ಸುಮಾರು ೩೫ರ ಪ್ರಾಯದ ಹೆಣ್ಣು ಮಗಳ ನಿಜ ಕಥೆಯಿದು, ಈ ಕತೆ ಹೇಳಿದ ಮೇಲೆ ಆಕೆ ಹಗುರವಾದ ಅನುಭವವನ್ನು ನಾನೂ ಕಂಡುಕೊಂಡೆ. ಒಬ್ಬಬ್ಬರದು ಒಂದೊಂದು ಕತೆ. ಏನು ಲೀಲೆ ನಿನ್ನದು ಭಗವಂತ}
  

ಸೀತೆ ಮತ್ತು ಕಾಡಿಗೆ!


               ಅವಳ ನಿಜ ಹೆಸರು ಸವಿತಳಾದರೂ ಸೀತೆಯಾಗಿ ಬದಲಾಗಿದ್ದಳು. ನಮ್ಮ ಮನೆಗೆ ಬರುವಾಗ ಅವಳಿಗೆ ೧೧,೧೨ ವರ್ಷವಾಗಿರಬಹುದು. ಚಿಕ್ಕಮ್ಮ ಮದುವೆಯಾಗಿ ನಮ್ಮ ಮನೆ ಪ್ರವೇಶಿಸಿದಾಗ ತಮ್ಮ ಸಹಾಯಕ್ಕಂತ ಅವಳನ್ನು ಕರೆತಂದಿದ್ದರು. ಅವರ ಎಲ್ಲಾ ಕೆಲಸದಲ್ಲಿ ಸೀತಾ ಬಲಗೈಯಂತಾಗಿದ್ದಳು. ಕೆಲಸ ಮುಗಿಸಿ ಟಿವಿ ನೋಡುವುದು ಬಿಟ್ಟು ಬೇರೆ ಗೊತ್ತಿಲ್ಲದ ಅವಳು ನಿಧಾನವಾಗಿ ತನ್ನ ಸೌಂದರ್ಯದ ಕಡೆಗೆ ಗಮನ ಹರಿಸುವುದನ್ನು ಮೊದಲು ಕಂಡದ್ದೇ ನಾನು. ಈಗೀಗ ಅವಳಿಗೆ ಹೊರಗೆ ಹೋಗಿ ಸಾಮಾನು ತರುವ ಕೆಲಸವನ್ನೂ ಚಿಕ್ಕಮ್ಮ ಅಂಟಿಸಿದ್ದರು. ಮತ್ತವಳು ಬಹಳ ಖುಷಿಯಲ್ಲಿ ಹೋಗುತ್ತಿದ್ದಳು.  ನೋಡಲು ಕಪ್ಪಾಗಿದ್ದರೂ ಬಹಳ ಲಕ್ಷಣವಾಗಿದ್ದ ಅವಳ ಕಣ್ಣು ನನ್ನನ್ನು ಯಾವಾಗಲೂ ಸೆಳೆಯುತ್ತಿತ್ತು. ಒಮ್ಮೆ ಅವಳ ಕಣ್ಣು ನಿತ್ಯಕ್ಕಿಂತಲೂ ಸುಂದರವಾಗಿ ಕಾಣಿಸಿತು. ಅರೇ, ಹೌದು ಕಣ್ಣಿಗೆ ಕಾಡಿಗೆ ಹಾಕಿದರೆ ಇನ್ನೂ ಚಂದ ಕಾಣುತ್ತಾಳೆಯಲ್ಲ ಈ ಹುಡುಗಿ. ನಾನಾವಾಗ ೧೯ವಷದವಳು. ನನ್ನ ಬಳಿ ಕಾಡಿಗೆ ಇದ್ದರೂ ಹೀಗೆ ನಿತ್ಯವೂ ಹಚ್ಚಿಕೊಳ್ಳುವ ಅಭ್ಯಾಸವೂ ಇರಲಿಲ್ಲ. ಇವಳ ಕಣ್ಣು ನೋಡಿ ಇನ್ನು ನಾನೂ ನಿತ್ಯವೂ ಕಾಡಿಗೆ ಹಚ್ಚಿಕೊಳ್ಳಬೇಕೆಂಬ ನಿರ್ಧಾರನೂ ಮಾಡಿಬಿಟ್ಟೆ ಆಗಲೇ. ಆದರೆ ಇವಳ ಬಳಿ ಕಾಡಿಗೆ ಎಲ್ಲಿಂದ ಬಂದಪ್ಪಾ..ನನಗಾಶ್ಚರ್ಯ. ಅವಳ ಬಳಿ ಪೌಡರ್ ಮತ್ತು ಲಾಲ್‍ಗಂಧ  (ಆವಾಗಿನ್ನು ಈ ಟಿಕ್ಲಿಯ ಹಾವಳಿ ಇಷ್ಟಿರಲಿಲ್ಲ. ಬಾಟ್ಲಿಯಲ್ಲಿ ಸಿಗುವ ದಪ್ಪ ಕೆಂಪು ಬಣ್ಣ ಹಾಕಿಕೊಳ್ಳುತ್ತಿದ್ದೆವು ನಾವು ಹುಡುಗಿಯರು) ಮಾತ್ರವಿತ್ತು. 
     
      ಮರುದಿನ ಕಾಕತಾಳಿಯವಾಗಿ ಅವಳು ಹೊರಗೆ ಹೊರಟಾಗ ನಾನು ಮನೆಯಲ್ಲೇ ಇದ್ದೆ. ನನಗೋ ಕುತೂಹಲ ..ಇವಳು ಎಲ್ಲಿಂದ ಕಾಡಿಗೆಯನ್ನು ಸಂಪಾದಿಸಿಕೊಂಡಿದ್ದಾಳೆ ಅಂತ. ಅವಳು ಅತ್ತ ಇತ್ತ ನೋಡಿದಳು..ನಿಧಾನವಾಗಿ ಬಚ್ಚಲು ಕೋಣೆಯ ಹಿಂದೆ ಬೆಂಕಿ ಮಾಡುವಲ್ಲಿ ನಿಂತಳು. ಅಲ್ಲಿ ಗೋಡೆಗೆ ದಪ್ಪ ಕರಿ ಮೆತ್ತಿಕೊಂಡಿತ್ತು. ಜಾಗರೂಕತೆಯಿಂದ ತೆಗೆದು ತನ್ನ ಕಣ್ಣಿಗೆ ಹಚ್ಚಿಕೊಂಡದನ್ನು ನೋಡಿದಾಗ ನಾನು ಮೂರ್ಛೆಹೋಗದೇ ಇದ್ದುದು ನನ್ನ ಪುಣ್ಯ. ಅವಳು ಸೀದ ಹೋಗದೆ ಮತ್ತೊಮ್ಮೆ ಮನೆಯೊಳಗೆ ಬಂದಳು. ತನ್ನ ಕನ್ನಡಿಯೆದುರು ನಿಂತಳು...ನಾಲಗೆ ಸವರಿ ತುಟಿ ಒದ್ದೆಮಾಡಿಕೊಂಡಳು...ಅತ್ತಿತ್ತ ನೋಡದೇ ಸೀದಾ ಹೊರಗೆ ಹೊರಟಳು!

   ಇನ್ನೇನೂ ಹೇಳಬೇಕಂತಿಲ್ಲವಲ್ಲ...ಮತ್ತೆ ಈ ಸುದ್ದಿ ಎಲ್ಲರಿಗೂ ಗೊತ್ತಾಗಿ ವಿಚಾರಿಸಲು ಈ ೧೨ ವರ್ಷದ ಹುಡುಗಿಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾನೆಂದು ಗೊತ್ತಾಗಿ..ಬಹಳ ಗದ್ದಲವಾಯಿತು. ಮತ್ತೆ ಹೇಗೂ ಇದೆಯಲ್ಲವ, ಗೃಹ ಬಂಧನ!!!

{ ಈ ಚಿಕ್ಕ ಹುಡುಗಿಯ ಬಗ್ಗೆ ನನಗೆ ನನ್ನ ಅಮ್ಮನಿಗೆ ಬಹಳ ಅನುಕಂಪವಿತ್ತು. ಅವಳಿಗಿಂತ ದೊಡ್ಡವಳಾದ ನಾನೂ ಆರಾಮವಾಗಿ ಶಾಲೆ ಕಾಲೇಜು ಅಂತ ತಿಂದು ತಿರುಗಿಕೊಂಡಿದ್ದರೆ ಈ ಹುಡುಗಿ ತನ್ನ ಕಲಿಯುವ ವಯಸ್ಸಿನಲ್ಲಿ ಹೀಗೆ ಪರರ ಸೇವೆ ಮಾಡುವುದರಲ್ಲಿ ತನ್ನ ಅಮೂಲ್ಯವಾದ ಕಾಲವನ್ನು ವೇಸ್ಟ್ ಮಾಡುತ್ತಾಳಂತ ಅನಿಸುತ್ತಿತ್ತು.  ನಾನು ತಪ್ಪಿಯೂ ಅವಳ ಕೈಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ. ತುಂಬಾ ಹಿಂಸೆಯಾಗುತ್ತಿತ್ತು. ಅದೇ ಅವಳು ಹೊರಗೆ ಯಾವನೋ ಲೋಫರ್ ಹುಡುಗನ ಜತೆ ಸ್ನೇಹ ಮಾಡಿಕೊಂಡಾಗ ಅಷ್ಟೇ ಕೋಪ ಬಂದಿತ್ತು.. ಆದರೆ ಈಗ ಅರ್ಥವಾಗುತ್ತಿದೆ. ಆ ಹುಡುಗಿಗೆ ಪ್ರಪಂಚ ಗೊತ್ತಿರಲಿಲ್ಲ..ಆ ಹುಡುಗನೂ ಮೋಸ ಮಾಡಿಯಾನು ಎಂಬ ಕಲ್ಪನೆನೂ ಇರಲಿಕ್ಕಿಲ್ಲ...ಟಿ ವಿ ವೀಕ್ಷಣೆ ಅವಳಿಗೆ ಕನಸನ್ನು ಕೊಟ್ಟಿತ್ತು..ನಿಜ ಲೋಕದ ಪರಿಚಯವಲ್ಲವಲ್ಲ}

08 January, 2013

ನನ್ನೊಳಗಿನ ರುಮಿ ಹೇಳುತ್ತಾನೆ!


ಒಲವೇ,
ಬಲು ದೊಡ್ಡ 
ಮಾಯಾವಿಯೋ ನೀನು...
ನಿನ್ನನ್ನೇ ಶಬ್ದಗಳಿಂದ  
ಕಟ್ಟಿಹಾಕಲೆತ್ನಿಸಿದೆನಲ್ಲ!
ನೀನಾದರೋ ಯಾವ 
ಯತ್ನವೇ ಇಲ್ಲದೆ
ಮೌನದೇ ಸೆರೆಹಿಡಿದೆಯಲ್ಲೆನ್ನ!

**********************************


ಒಲವೇ,

ಗಂಟು ಮೂಟೆ ಕಟ್ಟಿಕೊಂಡು
ಹೊರಟಿದ್ದೆ ಯಾವುದೋ ನಗರಿಗೆ;

ಅವೆಲ್ಲವನ್ನೂ ಕಳೆದುಕೊಂಡು 
ತಲುಪಿದೆ ನಿನ್ನೂರಿಗೆ...


07 January, 2013

ಒಲವಿನ ರಹಸ್ಯ!


  ಒಲವೇ,

  ನಮ್ಮೀ ಒಲುಮೆ ಉಳಿಯಲಿದೆ 
  ಸದಾ ರಹಸ್ಯವಾಗಿಯೇ!
 ನಿತ್ಯವೂ ನಾವು ಮುಖಾಮುಖಿ 
 ಆದರೂ ಅದರರಿವಿಲ್ಲ ಯಾರಿಗೂ!
 ಹೇಳುವುವು ಕೇಳುವುವು ಕೇವಲ ಚಕ್ಷುಗಳು
 ಸದ್ದು ಗದ್ದಲವೇ ಇರದ ಒಲವೆಮ್ಮದು!  
  

04 January, 2013

ನನ್ನ ಮುಂಜಾವುಗಳು!



ನಲ್ಲನ ತಲೆಗೂದಲಲ್ಲಿ ಮೃದುವಾಗಿ ಕೈಯಾಡಿಸಿ,
ಕಿವಿಯಲ್ಲಿ ಅದೇನೋ ಪಿಸುಗುಟ್ಟಿ, ಕಚಕುಳಿ
ಇಡುತ್ತಾ ಎಬ್ಬಿಸುವ ನಲ್ಲೆಯ ಪರಿಯ ಕಂಡು,
ರಂಗಾದ ಮುಂಜಾವಿಗೆ ಸುಸ್ವಾಗತ ಸುಸ್ವಾಗತ!
-೦೩-೦೧-೨೦೧೩

03 January, 2013

ಕೊರೆತ!


ಹೀಗೆ ಒಂದು ಆಲೋಚನೆ..
______________________

ಸಂಸ್ಕೃತಿ ಎಂದರೇನು! ಮಾನವನು ಭೂಮಿಯಲ್ಲಿ ಕಾಣಿಸಿಕೊಂಡಾಗ ಅವನ್ಯಾವ ಸಂಸ್ಕೃತಿಯನ್ನು ಪಾಲಿಸುತ್ತಿದ್ದನಪ್ಪಾ! ಕ್ರಮೇಣ ಹಿಂದು, ಮುಸ್ಲಿಮಾನ್, ಕ್ರೈಸ್ತ, ಪಾಶ್ಚಿಮಾತ್ಯ, ಪೌರಾತ್ಯ... ಹೀಗೆ ಅನೇಕ ಸಂಸ್ಕೃತಿಗಳು ಹುಟ್ಟಿಕೊಂಡವು. ಎಲ್ಲವೂ ಇಂದಿಗೂ ತಮ್ಮದೇ ಶ್ರೇಷ್ಟ ಸಂಸ್ಕೃತಿ ಎಂದೇ ನಂಬಿಕೊಂಡಿವೆಯಷ್ಟೇ. ಆದರೆ ನಿಧಾನವಾಗಿ ಎಲ್ಲಾ ಸಂಸ್ಕೃತಿಗಳು ಬೆರಕೆಗೊಂಡವು... ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕಾದುದನ್ನು ಅಳವಡಿಸಿಕೊಂಡರು... ಅಲ್ಲಲ್ಲಿ ಕ್ಷೀಣವಾಗಿ ಸಂಸ್ಕೃತಿ ಹಾಳಾಗುತ್ತಿದೆ ಗೊಣಗಾಟ ಕೇಳಿಬರುತ್ತಿದ್ದಂತೆಯೇ ಜಾಗತೀಕರಣದಿಂದಾಗಿ ಇಂದಿನ ಯುವಜನಾಂಗ ತಮ್ಮದೇ ಆದ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿತು.. ಮತ್ತು ಆಚೆಯೂ ಈಚೆಯೂ ಸಲ್ಲದ ನಮ್ಮಂಥವರು ಡೋಲಾಮಾನದ ಮನಸ್ಸಿನಿಂದ ನಮ್ಮ ಮಕ್ಕಳ ಜೊತೆಗೆ ನಿಲ್ಲಬೇಕಾದ ಪರಿಸ್ಥಿಯು ಕಾಣಿಸಿದೆ.

ನಮ್ಮ ಮಕ್ಕಳು ತಪ್ಪು ದಾರಿಯಲ್ಲಿ ನಡೆದರೆ ನಾವು ಖಂಡಿತ ಅವರನ್ನು ತಾಳ್ಮೆಯಿಂದ ತಿದ್ದಿತರಬೇಕು, ಇದು ಪ್ರತಿಯೊಂದು ಹೆತ್ತವರ ಕರ್ತವ್ಯವೂ ಹೌದು.. ಹಾಗಂತ ನಮ್ಮ ಸಂಸ್ಕೃತಿಯಲ್ಲಿ ಹೇಳಿದಂತೆ ನೀನು ಕಾಸಿನಗಲ ಕುಂಕುಮ, ಕೈತುಂಬ ಬಳೆ, ಸದಾ ಮೈಮುಚ್ಚುವಂತೆ ಸೀರೆಯುಡಬೇಕು ಎಂದು ಆಶಿಸುವುದು ಎಷ್ಟು ಸರಿ... ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುವುದೇ ಹಿಂದು ಸಂಸ್ಕೃತಿ... ಮತ್ತೆ ತಮಗೆ... ತಾವೆಲ್ಲ ಜುಬ್ಬ, ದೋತಿ ಹಾಕಿ ಆಫೀಸಿಗೆ ಹೋಗುವಿರಾ! ಪಾಶ್ಚಿಮಾತ್ಯರ ದೇಣಿಗೆ ಈ ಸೆಲ್ ಫೋನು, ವಾಶಿಂಗ್ ಮೆಶಿನ್, ಗಣಕ ಯಂತ್ರ.. ಅವನೆಲ್ಲಾ ತಾವು ಯಾಕೆ ಉಪಯೋಗಿಸುವಿರಾ ನಮ್ಮ ಸಂಸ್ಕೃತಿ ರಕ್ಷಕರೇ?

ಜೀನ್ಸ್ ಪ್ಯಾಂಟಿಗೆ ಕುಂಕುಮ ಹೂವು ಹೊಂದುವುದಿಲ್ಲ... ಇನ್ನು ಜೀನ್ಸ್ ಪ್ಯಾಂಟ್ ಹಾಕಬೇಡಿ ಅನ್ನಬೇಡಿ ಮಾರಾಯರೆ. ಕೈಗೆಟುಕುವ ದರದಲ್ಲಿ ಸಿಗುವಿಕೆ, ಆರಾಮದಾಯಕತನ ಎರಡೂ ಅದನ್ನು ಬರೇ ಯುವ ಜಾನಾಂಗದಲ್ಲಿ ಮಾತ್ರವಲ್ಲ ನನ್ನಂಥಹ ಮಧ್ಯ ವಯಸ್ಕರೂ ಇಷ್ಟಪಡುವಂತಾಗಿದೆ. ಅಸಭ್ಯವಲ್ಲದಾದುದರಿಂದ ಅದ್ಯಾಕಪ್ಪಾ ಅದನ್ನೂ ಹಾಕಲು ಅಡ್ಡಿಮಾಡುವಿರಿ ರಾಯರೆ?

ಕೊನೆಯದಾಗಿ ತಾವು ಬೇರೆಯವರಿಗಿಂತ ಭಿನ್ನರೆಂದು ತೋರುವ ಯತ್ನದಲ್ಲಿ ತಾವು ಪರರ ಖುಷಿಯನ್ನು ಕಿತ್ತುಕೊಳ್ಳಲು ಹೋಗುವಿರಲ್ಲಾ! ಇದಕ್ಕೆ ಹಿಂದು ಸಂಸ್ಕೃತಿಯಲ್ಲಿ ಮನ್ನಣೆ ಕೊಡಲಾಗಿದೆಯೇ? ಒಟ್ಟಾರೆ ಈ ಸಂಸ್ಕೃತಿ ಅನ್ನೋದು "ಮಂಗನ ಕೈಯಲ್ಲಿ ಮಾಣಿಕ್ಯ"ವೆಂಬ ಮಾತನ್ನು ನನಗೆ ನೆನಪಿಸಿದೆ!

               ********************************

ಹಿಂದು, ಮುಸ್ಲಿಮ್, ಕ್ರೈಸ್ತ- ಇವುಗಳನ್ನು ಧರ್ಮಗಳೆಂದು ಎಂದು ಗುರುತಿಸುತ್ತಾರೆ... ಮತ್ತು ಅವು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿವೆ .( ಇಲ್ಲಿ ಸಂಸ್ಕೃತಿಯನ್ನು ಸಹ ತಿರುಚಲಾಗಿದೆ. ಅದನ್ನು ಆಚರಣೆ ಅಥವಾ ಸಂಪ್ರದಾಯ ಅಂತ ಗುರುತಿಸುವುದು ಒಳ್ಳೆಯದು ಅಂತ ನನ್ನ ಅಭಿಪ್ರಾಯ.) ಅಂದರೆ ನಮ್ಮಲ್ಲಿ ಸಾಮಾನ್ಯವಾಗಿ ಹೇಳುವ ಹಾಗೆ ಹಿಂದೂ ಸಂಸ್ಕೃತಿ... ಅದಕ್ಕಾಗಿ ನಾನು ಅಲ್ಲಿ ಧರ್ಮ ಶಬ್ದವನ್ನು ಉಪಯೋಗಿಸಿರಲಿಲ್ಲ. ಅಲ್ಲದೆ ನನ್ನ ಮಟ್ಟಿಗೆ ಧರ್ಮವೆಂದರೆ ಇರುವುದೊಂದೇ; ಅದುವೇ ಮಾನವ ಧರ್ಮ. ಜಾತಿ- ಮನುಷ್ಯ ಜಾತಿ.. ಅದರಲ್ಲೂ ಎರಡೆ- ಗಂಡು, ಹೆಣ್ಣು. ಮತ್ತು ಪ್ರಾಣಿ ಸಂಕುಲವೊಂದು ಜಾತಿ.  

   ಸಂಸ್ಕೃತಿಯೆಂದರೆ ನಮ್ಮ ನಡತೆ- ನಾವು ಹೇಗೆ ಸಮಾಜದಲ್ಲಿ ಬೆರೆತು, ಎಲ್ಲರನ್ನೂ ಸಮಾನ ಮನಸ್ಸಿನಿಂದ ಗೌರವಿಸಬೇಕಾಗಿರುವುದು. ಹಿರಿಯರ ಮೇಲೆ ಭಕ್ತಿ, ಮಕ್ಕಳ ಮೇಲೆ, ಸಮವಯಸ್ಕರ ಮೇಲೆ ಪ್ರೀತಿ, ಗಂಡು ಹೆಣ್ಣು ಬೇಧ ಭಾವ ತೋರದೆ ಸಮಗೌರವ ಕೊಡುವುದು, ಜಾತಿ, ಅಂತಸ್ತುಗಳನ್ನು ಎಣಿಸದೆ ಬಂದ ಅತಿಥಿಗಳನ್ನು ಒಂದೇ ರೀತಿಯಲ್ಲಿ ಸತ್ಕರಿಸುವುದು, ಅಸಹಾಯಕರಿಗೆ ಸಹಾಯ ಹಸ್ತ ನೀಡುವುದು ಮೊದಲಾವುಗಳು- ಇವುಗಳನ್ನೇ ಉತ್ತಮ ಸಂಸ್ಕೃತಿಯೆಂದು ಗುರುತಿಸಬಹುದೆಂದು ನನ್ನ ಅಭಿಪ್ರಾಯ. 

     ಕೆಲವು ವರ್ಷಗಳ ಹಿಂದೆ ನನಗೂ ನನ್ನ ಮಗಳಿಗೂ ಈ ಹಣೆಗೆ ಬಿಂದಿ ಇಡುವ ವಿಷಯದಲ್ಲಿ ಚರ್ಚೆ ನಡೆದಿತ್ತು. ಆಗ ನಾನು ಸಹ ಇದನ್ನು ನಮ್ಮ ಸಂಸ್ಕೃತಿ ಪಾಲಿಸಬೇಕಾದದ್ದು ನಮ್ಮ ಧರ್ಮವೆಂದು ಅವಳ ಬಳಿ ವಾದ ಮಾಡಿದ್ದೆ. ಆದರೆ... ನಿಧಾನವಾಗಿ ನನಗೆ ಹೊಳೆದಿತ್ತು... ಅವೇ ನಾನು ಈ ಮೇಲೆ ಬರೆದ ಮಾತುಗಳು. ಹಣೆಯಲ್ಲಿರುವ ಚಕ್ರವನ್ನು ಉತ್ತೇಜಿಸಲು ಕುಂಕುಮವಿಡುವ ಅಭ್ಯಾಸವನ್ನು ನಮ್ಮ ಪೂರ್ವಜರು ಮಾಡಿರಬಹುದು. ಬಹುಶಃ ಸ್ತ್ರೀಯರು ಪುರುಷರೂ ನಿಯಮ ಬದ್ಧವಾಗಿ ಮಾಡಲ್ಪಟ್ಟ ಕುಂಕುಮವನ್ನು ಇಡುತ್ತಿದ್ದರು ಎಂದು ಕಾಣುತ್ತದೆ. ಕಾಲ ಕ್ರಮೇಣ ಸ್ತ್ರೀಯರು ಇದನ್ನು ಸೌಂದರ್ಯ ವರ್ಧಕವಾಗಿ ಇಡುತ್ತಿರಬಹುದು.. ಹೀಗೆ ಅದೊಂದು ನಿಯಮವೇ ಆಗಿಬಿಟ್ಟಿದೆ. ಆದರೆ ಇಂದಿನ ಹುಡುಗಿಯರಿಗೆ ಇದರ ಅಗತ್ಯ ಕಾಣುವುದಿಲ್ಲ...

           ****************************************



ಇದರ ಜತೆ ಈ ಹೊಸ ವರ್ಷಾಚರಣೆ ಬಗ್ಗೆಯೂ ಅಲ್ಲಲ್ಲಿ ಅಪಸ್ವರದ ಹೇಳಿಕೆ ಓದಿ ಬೇಸರವಾಯಿತು.. ತಮಗೆ ಬೇಡವಾದರೆ ಆಚರಿಸಬೇಡಿ.. ಪರರ  ಸಂತೋಷಕ್ಕೆ ಅಡ್ಡಗಾಲು ಹಾಕಬೇಡಿಯಪ್ಪಾ. ನಾನೆಂದೂ ಹೊಸವರ್ಷ ಅಂತ ಯಾವಾಗಲೂ ಸಂಭ್ರಮದಿಂದ ಆಚರಿಸಿದಿಲ್ಲ.. ನನ್ನ ಮಟ್ಟಿಗೆ ಯುಗಾದಿಯೇ ಹೊಸ ವರ್ಷ.. ಆದರೆ ಈ ವರ್ಷ ನನ್ನ ಎಫ್ ಬಿ ಮಿತ್ರರ ಸಂಭ್ರಮದಲ್ಲಿ ನಾನೂ ಸಂತೋಷದಿಂದ ಭಾಗಿಯಾದೆ... ಇಲ್ಲಿ ನನ್ನ ವಿದ್ಯಾರ್ಥಿಗಳ ಜತೆಯಲ್ಲೂ ಸಂಭ್ರಮದಿಂದ ೨೦೧೩ನ್ನು ಬರಮಾಡಿಕೊಂಡೆ!

                               *****************************

ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಪ್ರತಿಭಟಿಸಿ ಎಫ್ ಬಿಯಲ್ಲಿ ಮಾನವೀಯತೆಯ ನೆಲೆಯಲ್ಲಿ ಅನೇಕ ಮಿತ್ರರು ಕಪ್ಪು ಬಿಂದುವನ್ನು ತಮ್ಮ ಚಿತ್ರವನ್ನಾಗಿ ಮಾಡಿಕೊಂಡಿದ್ದರು... ಕ್ರಮೇಣ ಅದನ್ನು ಬದಲಾಯಿಸಿದರು.. ಯಾವುದೇ ವಿಷಯವನ್ನು ನಾವು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡರೆ ಅದು ನಮ್ಮ ಮನಸ್ಸಿಗೆ ವಿಷವಾಗುವುದು ಎಂದೇ ನನ್ನ ನಂಬಿಕೆ. ಹೌದು ಪ್ರತಿಭಟಿಸುತ್ತಲೇ ಇರಬೇಕು. ಹಾಗಂತ ನಮ್ಮ ದೈನಂದಿನ ಜೀವನವನ್ನೂ ನಡೆಸಬೇಕು ತಾನೆ. ಇವತ್ತು ನನ್ನ ಮಿತ್ರರೊಬ್ಬರ ಸ್ಟೇಟಸ್ಸಿಗೆ ಅವರ ಮಿತ್ರರೊಬ್ಬರು ಈ ಬಗ್ಗೆ ವ್ಯಂಗವಾಗಿ ಬರೆದಿದ್ದರು. ಖಂಡಿತವಾಗಿ ಆ ದುರ್ಘಟನೆ ಅಷ್ಟು ಬೇಗ ನಮ್ಮ ಮನಸ್ಸಿನಿಂದ ಅಳಸಿ ಹೋಗುವುದಿಲ್ಲ.. ಹೋಗಲೂಬಾರದು; ಹಾಗಂತ ನಾವು ನಿತ್ಯವೂ ಅಳುತ್ತಲೇ, ಬೊಬ್ಬೆಹಾಕುತ್ತಲೇ ಇರಲಾಗದಷ್ಟೇ.. ನಮ್ಮದೇ ರೀತಿಯಲ್ಲಿ ನಮ್ಮಿಂದಾದಷ್ಟು ಸಹಾಯ ಹಸ್ತವನ್ನು ನೀಡುವೆವು. ಏನನ್ನುವಿರಾ ಸಹಮನಸ್ಕರೆ?

02 January, 2013

ನಾನು ಕಂಡ, ಕಾಣುವ ಮುಸ್ಸಂಜೆಗಳು!



ಬಣ್ಣದ ಓಕುಳಿ ಚೆಲ್ಲಿ 
ಮುಗುಳ್ನಗುತ್ತಲೇ ತೆರೆಮರೆಗೆ 
ಸರಿಯುತ್ತಿರುವ ರವಿಯ 
ಬೀಳ್ಕೊಟ್ಟ 
ಹೊಸ ವರುಷದ 
ಮೊದಲ ಮುಸ್ಸಂಜೆ!
-01-01-2013

  ************

ಶಿರದಿ ನವಿಲ ಗರಿಯ ಧರಿಸಿ
"ಗಿಲ್" "ಗಿಲ್" ಗೆಜ್ಜೆ ನಿನಾದದೊಂದಿಗೆ 
ಮುರಳಿಯ ಗಾನವನ್ನು ಮೇಳೈಸುತ್ತಾ
ಗೋಧೂಳಿಯ ನಡುವೆ ತನ್ನ ಗೆಳೆಯ 
ಗೋವಳರೊಡಗೂಡಿ ಬರುತ್ತಿರುವ 
ಗೋಪಾಲನಿಗಾಗಿ ಹೊಸ್ತಿಲ ಬಳಿ 
ಕಾದ ಯಶೋಧೆಯು ನಾನಾದಂತೆ 
ಕನಸ ತಂದ ಮುಸ್ಸಂಜೆಯಿದು!
-03-01-2013

******************



ನನ್ನೆಲ್ಲ ಮನದ ಮಾತುಗಳ ಆಲಿಸಲೆಂದೇ
ನೀಲಾಗಸದಲ್ಲಿ ಹರಡಿರುವ ಬೆಳ್ಳಿಚುಕ್ಕಿಗಳ 
ತೋರುವ ಮುಸ್ಸಂಜೆಗೆ ಸುಸ್ವಾಗತ!
- 04-01-2013

****************************


ಹೊಸ್ತಿಲ ಬಳಿ ನಿಂತು 
ನಲ್ಲನ ನೆನಪುಗಳಲ್ಲಿ
ಕಳೆದು ಹೋದವಳಿಗೆ
ಸೊಳ್ಳೆ ಕಚ್ಚಿದಾಗ
ದುರ್ವಾಸ ಮುನಿಗಳ
ನೆನಪು ತಂದ
ಈ ಮುಸ್ಸಂಜೆ!

ಶಕುಂತಲೆ ದುಶ್ಯಂತನ ನೆನಪಿನಲ್ಲಿ ಕಳೆದುಹೋದದುರಿಂದ ತಾನೆ ದುರ್ವಾಸರ ಶಾಪ ಪಡೆದಳು! ಇಲ್ಲಿ  ಈ ನಲ್ಲೆ ಶಾಪದ ರೂಪದಲ್ಲಿ ಮಲೇರಿಯಾ ಪಡೆಯುವಳೇನೋ..:-)
೦೮-೦೧-೨೦೧೩

01 January, 2013

ನನ್ನಾತ್ಮದ ಪಿಸುನುಡಿ!


"ತಾಳು...ಕಾಯು..."
ಒಲವಂದಿತು.
ಕಾಯುತ್ತಲೇ ಇದ್ದೇನೆ...
"ತಾಳುವಿಕೆಗಿಂತನ್ಯ ತಪವಿಲ್ಲ"
ಹುಂ, ನನಗಿದು ಅನುಭವಕ್ಕೆ ಸಿಕ್ಕಿತಯ್ಯ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...