ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 October, 2012

ಸೋತೆನೇ ನಿನ್ನಾಟಕ್ಕೆ ಪಾತರಗಿತ್ತಿ!


Life is not a matter of milestones but of moments! ಬದುಕಿನ ಸುಂದರ ಕ್ಷಣಗಳು!

















             Life is not a matter of milestones but of moments! - ಬದುಕಿನ ಕೆಲವು ಅಮೂಲ್ಯ ಕ್ಷಣಗಳನ್ನು ಸೆರೆ ಹಿಡಿದು ಅದನ್ನು ವರುಷಗಳ ನಂತರವೂ ನೋಡಿ ಮತ್ತೆ ಆ ಕ್ಷಣಗಳಲ್ಲಿ ಜೀವಿಸುವುದು ನನ್ನ ಪ್ರೀತಿಯ ಹವ್ಯಾಸ. ೩ ವರುಷಗಳ ಹಿಂದೆ ಈ ಬುಲ್‍ಬುಲ್ ಹಕ್ಕಿಗಳ ಜೋಡಿ ಸುಮಾರು ದಿನ ನಮ್ಮ ಅಂಗಳದಲ್ಲೇ ಠಿಕಾಣಿ ಹೂಡಿದ್ದವು...ಅವುಗಳ ಸ್ವಲ್ಪ ಸಮಯದ ಒಡನಾಟ ನನ್ನಲ್ಲಿ ಹೊಸ ಚೇತನವನ್ನು ಹುಟ್ಟು ಹಾಕಿತು. ಆವಾಗ ನಮ್ಮ ಕ್ಯಾಮರಾ ಅಷ್ಟೊಂದು ಒಳ್ಳೆಯದಿರಲಿಲ್ಲ..ಹಾಗಾಗಿ  ಚಿತ್ರಗಳ ಗುಣಮಟ್ಟ ಅಷ್ಟು ಚೆನ್ನಾಗಿಲ್ಲ. ಪ್ರಕೃತಿಯನ್ನು ಒಂದಿಷ್ಟೆ ಅರಿಯಲು ನೋಡಿದರೂ ಸಾಕು ಜೀವನ ಪ್ರ‍ಿತಿ ಉಳಿಯುವುದು, ಮತ್ತಿಷ್ಟು ಉಕ್ಕಿ ಹರಿಯುವುದು! ( ಬೇಸರದ ವಿಷಯವೆಂದರೆ ಮತ್ತೆ ಅವುಗಳು ನಮ್ಮಲ್ಲಿ ತಮ್ಮರಮನೆಯನ್ನು ಕಟ್ಟಲೇ ಇಲ್ಲ. ಅಲ್ಲದೇ, ಬಹುಶಃ ಹೆಣ್ಣು ಬುಲ್‍ಬುಲ್‍ಗೆ ಈ ಗೂಡು ಹಿಡಿಸಲಿಲ್ಲ..ಹಾಗಾಗಿ ಇದರಲ್ಲಿ ಮೊಟ್ಟೆ ಇಡಲೇ ಇಲ್ಲ...ನಾನು ಮನದಲ್ಲೇ ಗಂಡು ಬುಲ್‍ಬುಲ್‍ಗೆ  ಅದರ ಆಲಸ್ಯಕ್ಕೆ ಬಹಳಷ್ಟು ಶಾಪ ಹಾಕಿದೆ. ಆ ಗೂಡು ಗಟ್ಟಿಯಿರಲಿಲ್ಲ..ಹಕ್ಕಿಗಳ ದಾಷ್ಟ್ರತನ ನಮ್ಮ ಹೆಣ್ಣು ಮಕ್ಕಳಿಗೂ ಇದ್ದಿದ್ದರೆ ಅಂತ ಅನಿಸಿದ್ದು ಸುಳ್ಳಲ್ಲ!)

10 October, 2012

ಅಮ್ಮ, ಗಾಂಧಿ ಮತ್ತು ನಾನು!



              ಹುಂ, ವಿಚಿತ್ರವಾದರೂ ಇದು ನಿಜ. ನನ್ನ ಬದುಕಿನಲ್ಲಿ ಗಾಂಧಿ ಮತ್ತು ಅಮ್ಮನ ಪ್ರಭಾವ ಹೆಚ್ಚು ಇದೆ. ಬದುಕಿನ ಮಹತ್ವದ ನಿರ್ಣಯಗಳಲ್ಲಿ ಗಣನೀಯ ಪಾತ್ರ ವಹಿಸಿದ್ದಾರೆ ಇಬ್ಬರೂ.

     ನನ್ನ ಅಮ್ಮ ತಮ್ಮಮ್ಮನ ಹೊಕ್ಕುಳ ಗಂಟನ್ನು ಬಿಡಿಸಿ ಮುಂಡ್ಕೂರಿನ ಮಣ್ಣಲ್ಲಿ ಬಿದ್ದು ಅಳುತ್ತಾ ತಮ್ಮ ಅಸ್ತಿತ್ವವನ್ನು ಪ್ರಕಟ ಪಡಿಸಿದ್ದು ಭಾರತೀಯರಿಗೆ ಕರಾಳ ದಿನವಾದ ಜನವರಿ ೩೦ರಂದೇ.. ಅತ್ತ ಗಾಂಧಿಯವರ ಹತ್ಯೆ, ಇತ್ತ ನಾಲ್ಕು ಅಣ್ಣಂದಿರ  ಹಿಂದೆ ಅವರೆಲ್ಲರ ಹಾಗೆ ಬಿಳಿ  ಬಣ್ಣ ಹೊತ್ತಿರದ ನಸುಕಪ್ಪು ಹೆಣ್ಣು ಮಗುವಿನ ಜನನ.  ಆ ಹೊತ್ತಿನಲ್ಲಿ ಗಾಂಧಿಯ ಪರಮ ಭಕ್ತ ನನ್ನ ಅಜ್ಜನ reaction ಹೇಗಿತ್ತು ಎಂಬ ನನ್ನ ಕುತೂಹಲಕ್ಕೆ ಉತ್ತರ ಇಂದೂ ಸಿಕ್ಕಿಲ್ಲ. ಆದರೆ ಈ ಹೆಣ್ಣು ಮಗು ಮಾತ್ರ ಸ್ವಭಾವದಲ್ಲಿ ಗಾಂಧೀಜಿಯವರನ್ನು ಹೋಲುತ್ತಿತ್ತು ಅಂದರೆ ಉತ್ಪ್ರೇಕ್ಷೆಯಲ್ಲ... ಪ್ರತ್ಯಕದರ್ಶಿಯಾದ ನಾನೇ ಅದಕ್ಕೆ ಸಾಕ್ಷಿ. ಅವರ ಸ್ವಭಾವದ ಅನುಭವಿಗಳು ನಾನು ಮತ್ತು ನನ್ನ ತಮ್ಮಂದಿರು.

      ಗಾಂಧಿಯವರ ಕತೆಗಳನ್ನು ( ಅವರು ಸ್ವಾತಂತ್ರ್ಯಕ್ಕಾಗಿ ದುಡಿದ ಕತೆಗಳನ್ನು) ರೋಚಕವಾಗಿ ನಮಗೆ ಹೇಳುತ್ತಿದ್ದರು... ಹೇಳುತ್ತಿರುವಾಗ ತುಂಬಾ ಭಾವುಕರಾಗುತ್ತಿದ್ದರು... ನಮ್ಮನ್ನೂ ಭಾವುಕರನ್ನಾಗಿ ಮಾಡುತ್ತಿದ್ದರು..
 ಬಹುಶಃ ನಾನು ಆವಾಗ ಎರಡನೆಯ ಅಥವಾ ಮೂರನೆಯ ತರಗತಿ ಇರಬೇಕು... ನನ್ನ ಟೀಚರ್ ಒಪ್ಪಿಗೆ ತೆಗೆದುಕೊಂಡು ನಾನು ಸ್ವಾತಂತ್ರೋತ್ಸವದ ಸಮಯದಲ್ಲಿ ಅಮ್ಮ ಬರೆದುಕೊಟ್ಟ ಭಾಷಣವನ್ನು ಭಾವಾವೇಷ  ವೀರಾವೇಷದಿಂದ ಮಾತನಾಡಿದೆ. ಅದರ ನಂತರ ಪ್ರತಿ ವರ್ಷ ಇಂತಹ ಕಾರ್ಯಕ್ರಮದಲ್ಲಿ ನನ್ನ ಭಾಷಣ ಖಾಯಂ ಆಯಿತು. ಅಲ್ಲದೆ ನನ್ನ ಭಾಷಣ ನಾನೇ ಬರೆಯಲೂ ಪ್ರಾರಂಭಿಸಿದೆ. ಗುರುಗಳ ಪ್ರೋತ್ಸಾಹ ಧಾರಾಳವಾಗಿ ದೊರಕ್ಕಿತ್ತು. ಅಮ್ಮನ ಹಾಗೆ ಗಾಂಧಿಜಿಯ ಪರಮ ಭಕ್ತಳೂ ಆಗಿಬಿಟ್ಟೆ. ನನ್ನ ಓದಿನ ಪರಧಿ ಬೆಳೆದ ಹಾಗೆ ಗಾಂಧಿ, ನೆಹರು ಅಂತೆಯೇ ಉಳಿದ ಮಹನೀಯರ ಬಗ್ಗೆ ನಿಧಾನವಾಗಿ ನನ್ನದೇ ಅಭಿಪ್ರಾಯವೂ ಮೂಡಲು ಪ್ರಾರಂಭವಾಯಿತು.

 ನಮ್ಮ ಮನೆಯಲ್ಲಿ ಸಂಜೆ ಭಜನೆ ನಿತ್ಯವೂ ನಡೆಯುತ್ತಿತ್ತು.. (ಈಗಲೂ)  ಟಿ. ವಿಯ ಕಾಟವಿರದಿದ್ದ ಕಾರಣವೇನೋ ಎಲ್ಲಾ  ಮಕ್ಕಳ ಹಾಜರಿ ಇರುತ್ತಿತ್ತು. ಮಂಗಳಾರತಿ ಆದಮೇಲೂ ಗಾಳಿಂಗ ಲೋಟಾಂಗಣ...ಹೀಗೆ ಸುಮಾರು ಪದ್ಯ ಶ್ಲೋಕಗಳಾದ ಮೇಲೆ ಕೊನೆಯ ಹಂತಕ್ಕೆ ಬರುವಾಗ ಜೈಕಾರಗಳು..ನಮ್ಮೂರಿನ ದೇವರು, ಕುಲದೇವತೆ, ಸ್ವಾಮಿಗಳು, ಭಕ್ತರು.. ( ಈಗಲೂ ನನ್ನ ನಾಲಿಗೆ ತುದಿಯಲ್ಲೇ ಇದೆ... ಎಲ್ಲಾ ಹೆಸರುಗಳು) ಭಾರತ ಮಾತಾ ಕಿ ಜೈ, ಮಹಾತ್ಮಾ ಗಾಂಧಿಕಿ ಜೈ, ಪಂಡಿತ್ ನೆಹರೂ ಕಿ ಜೈ... ಕೊನೆಯ ಜೈಕಾರ...ಮೊದಲೆಲ್ಲಾ ವಿನಯದಿಂದ ಜೈಕಾರ ಹಾಕುತ್ತಿದ್ದ ನಾವುಗಳು ನಮ್ಮ ಓದು ಕೊಟ್ಟ ವಿಚಾರದಿಂದ ನೆಹರೂಗೆ ಜೈಕಾರ  ಹಾಕುವುದಕ್ಕೆ ಪ್ರತಿಭಟಿಸಿದೆವು... ಅಮ್ಮನಿಗೆ ನಮ್ಮ ಕಾರಣಗಳನ್ನೂ ಕೊಟ್ಟೆವು. ಹುಂ, ಅಮ್ಮ ತನ್ನ ನಿಲುವನ್ನು ಈ ವಿಷಯದಲ್ಲಿ ಬದಲಿಸಿಲ್ಲ...( ಇತ್ತೀಚೆಗೆ ಒಂಚೂರು ಬದಲಾವಣೆಯ ಗಾಳಿ ಬೀಸಿದೆ ಅಂತ ನನ್ನ ಅನುಮಾನ).
   


        ಸರಿ, ಈಗ ಪೀಠಿಕೆ ಮುಗಿಯಿತು... ಮೊದಲಾಗಿ ಗಾಂಧಿಯವರ ಪ್ರತಿಬಿಂಬ ನನ್ನ ಅಮ್ಮನಲ್ಲಿ ನಾನು ಕಂಡದ್ದು ಅಮ್ಮ ತನ್ನ ಅಣ್ಣ, ಮತ್ತು ತನ್ನ ನಾದಿನಿಯರ ಮಕ್ಕಳು, ಅತ್ತೆ, ಮಾವ, ಮತ್ತು ಕುಟುಂಬಕ್ಕೆ ತನ್ನ ಸಮಯವನೆಲ್ಲಾ ಮೀಸಲಿಟ್ಟಾಗ. ಬಿಲ್‍ಕುಲ್ ಅಂದುಕೊಳ್ಳಬೇಡಿ.. ನನಗೆ ಹೊಟ್ಟೆಕಿಚ್ಚು ಇತ್ತು ಅಂತ.. ಖಂಡಿತ ಅಮ್ಮನ ಎಲ್ಲಾ ಕೆಲಸಗಳಿಗೆ ನಮ್ಮ ಸಹಕಾರ ಯಾವಾಗಲೂ ಇರುತಿತ್ತು.  ಆದರೆ ಖಂಡಿತ ಹಲವು ಸಾರಿ ಅಮ್ಮನ ಜೊತೆ ಬೇಕೆಂದಾಗ ಅವರಿಗೆ ನಮಗೆ ಸಮಯ ಕೊಡಲಾಗುತ್ತಿರಲಿಲ್ಲ... ಬಹಳ ಬೇಸರವಾಗುತ್ತಿತ್ತು. ಗಾಂಧಿಯವರೂ  ತಮ್ಮ ಮಕ್ಕಳಿಗೆ ಸಮಯ ನೀಡಿರಲಿಲ್ಲ... ಹರಿಲಾಲರ ಬಗ್ಗೆ ಓದಿದಾಗ  ಜೀವ ತುಂಬಾ ಚುರುಗುಟ್ಟಿತ್ತು... ಇದು ನನ್ನ ಜೀವನದ ಮಹತ್ವ ನಿರ್ಧಾರಕ್ಕೆ ಕಾರಣವಾಯಿತು...೧೨ನೇ ವಯಸ್ಸಿಗೆ ನನ್ನ ಭವಿಷ್ಯದ ಪತಿ ಅಥವಾ ಜೀವನದ ಬಗ್ಗೆ ಕನಸಿರಲಿಲ್ಲ.. ಆದರೆ ಮಕ್ಕಳ ಬಗ್ಗೆ ಕನಸು ಕಾಣಲಾರಂಭಿಸಿದೆ.. ನನ್ನ ಮಕ್ಕಳು ತಮ್ಮ ಕಾಲಿನಲ್ಲಿ ನಿಲ್ಲುವ ತನಕ ನನ್ನ ಸಮಯ ಅವರಿಗೇ ಮೀಸಲು ಎಂಬ ನಿರ್ಧಾರವನ್ನು ಆಗಲೇ ತೆಗೆದುಕೊಂಡೆ. ಅಲ್ಲದೆ ಹಾಗೆ ನಡೆದುಕೊಂಡೆ.  ಇಲ್ಲಿ ಒಂದು ಮಾತು - ನನ್ನ ಮಕ್ಕಳು ಅಂದರೆ ಇಲ್ಲಿ ಬರೇ ಸ್ವಾರ್ಥ ಅಥವಾ ಮೋಹದ ನಿರ್ಧಾರವಲ್ಲ.. ಮಕ್ಕಳಲ್ಲಿ ನಮ್ಮ ಮುಂದಿನ ಭವಿಷ್ಯ ಅಡಗಿದೆ.. ಮಕ್ಕಳಿಗೆ ಸರಿಯಾದ ದಾರಿ ತೋರಿದರೆ ಅವರ ಬಾಳು ಉಜ್ವಲವಾಗುವುದು.. ಜೊತೆಗೆ ದೇಶವೂ ಪ್ರಗತಿಯನ್ನು ಹೊಂದುವುದು. ಪ್ರಗತಿಯ ಅರ್ಥ ಶೀಮಂತವಾಗುವುದಲ್ಲ... ಸನ್ನಡತೆ, ಮಾನವೀಯತೆಯ  ತೋರುವುದು.  

      ಎಷ್ಟೊ ಸಲ ಅನಿಸುತ್ತಿತ್ತು.. ಗಾಂಧಿಯವರು ತಮ್ಮ ಮಕ್ಕಳ ಅಭಿವೃದ್ಧಿಗೂ ಗಮನವಿತ್ತಿದ್ದರೆ, ನೆಹರೂರವರ ಎಲ್ಲಾ ಮಾತಿಗೆ ಹೂಂಕಾರ ಹಾಕಿರದಿದ್ದರೆ, ಹಿತ್ತಾಳೆ ಕಿವಿಯವರಾಗಿರುತ್ತಿದ್ದರೆ.. ಒಂದು ಕಾಲದಲ್ಲಿ ಉನ್ನತ ಸಾಂಸ್ಕೃತಿಕ ನೆಲೆಯಾಗಿದ್ದ ಭಾರತ ಮತ್ತೊಮ್ಮೆ ಗತಕಾಲದ ವೈಭವದಲ್ಲಿ ಮೆರೆಯುತ್ತಿತ್ತೇನೋ ಅಂತ... ಹುಂ, ಲೂಟಿಯಾದ ಮೇಲೆ ದ್ವಾರ ಮುಚ್ಚಿ ಏನು ಪ್ರಯೋಜನ!

       ಇಂದು ನನ್ನ ಮಕ್ಕಳು ಬೆಳೆದಿದ್ದಾರೆ... ವಯಸ್ಸಿನಲ್ಲೂ. ಗುಣದಲ್ಲೂ... ನನ್ನ ಕಲೆ, ಓದು, ಹತ್ತು ಹಲವು ಆಸಕ್ತಿ ಎಲ್ಲವನ್ನೂ ಮರೆತು ಮಕ್ಕಳಿಗಾಗಿ ಸಮಯವನ್ನೆಲ್ಲಾ ಮೀಸಲಿಟ್ಟೆ. ಅವರ ಬೌಧಿಕ  ಬೆಳವಣಿಗೆ ನನ್ನ ಮುಖ್ಯ ಗುರಿಯಾಗಿತ್ತು.  ಜೀವನದ ಎಲ್ಲಾ ಮಗ್ಗುಲನ್ನು ನಿಧಾನವಾಗಿ ಅವರ ಎದುರಿಗೆ ಬಿಡಿಸುತ್ತಾ ಬಂದೆ.  ಬದುಕಿನಲ್ಲಿ ಸಮುದ್ರದ ಅಲೆಗಳ ಹಾಗೆ ಚಿಕ್ಕ, ದೊಡ್ಡ ಸಮಸ್ಯೆಗಳು ಬಂದೇ ಬರುತ್ತವೆ.. ನಾವು ಅವುಗಳನ್ನು ಹೇಗೆ ಎದುರಿಸುತ್ತೆವೋ ಅದು ಮುಖ್ಯ....ಮುಖ್ಯವಾಗಿ ನಮ್ಮ ಮನೆತನದ ಕೊಡುಗೆಯಾದ ಕೋಪ, ಅಹಂ...ಇವೆರಡೂ ನಮ್ಮನ್ನು ಕುರುಡ ಹಾಗೂ ಕಿವುಡರನ್ನಾಗಿ ಮಾಡುತ್ತವೆ...ಅಲ್ಲದೆ ನಮ್ಮನ್ನೆಲ್ಲಾ ಸೃಷ್ಟಿಸಿದ ಆ ಪರಮಾತ್ಮನ ಸೂತ್ರದ ಬೊಂಬೆಗಳು ನಾವು..ಅವನ ಇಚ್ಛೆಯಿಲ್ಲದೆ ಏನನ್ನೂ ಮಾಡಲು ಶಕ್ತರಾಗುವುದಿಲ್ಲ..ಅದೇ ಅವನ ಕೃಪೆಯೊಂದಿದ್ದರೆ ಮೂಕನೂ ವಾಚಾಳಿಯಾಗಬಲ್ಲ..ಹೆವಳನೂ ಬೆಟ್ಟವನ್ನೇರಬಲ್ಲ..ನನ್ನ ನಂಬಿಕೆಯನ್ನು ಅವರಲ್ಲಿ ಬಿತ್ತಿದೆನು...ಕ್ಷಣ ಕ್ಶಣದಲ್ಲೂ ರಾಮನನ್ನು ನೆನೆಯಿರಿ..ರಾಮನಾಮವಿರುವ ಕಡೆ ಹನುಮನು ಇರುವನು...ಅವನಿದ್ದ ಮೇಲೆ ಮತ್ತಾವುದರ ಭಯವಿಲ್ಲ....

          ನಿಧಾನವಾಗಿ ನನ್ನ ಭಾರವನ್ನು ಕಳಚುತ್ತಾ ಬರುತ್ತಿದ್ದೇನೆ...ಮತ್ತು ನನ್ನ ಹವ್ಯಾಸಗಳನ್ನು  ಮತ್ತೆ ಕೈಗೆತ್ತಿಕೊಂಡಿದ್ದೇನೆ..ಮಕ್ಕಳ ವಿದ್ಯಾಭ್ಯಾಸ ಮುಗಿಯುವ ತನಕ ನಾನು ದುಡಿಯಬೇಕಾಗುತ್ತದೆ...ಅದರ ಜೊತೆ ಹವ್ಯಾಸಗಳನ್ನು ಮುಂದುವರಿಸುವುದು ಕಷ್ಟ ಸಾಧ್ಯವೇ ಸರಿ..ಆದರೂ ಛಲವಾದಿ ನಾನು..ಜೊತೆಗೆ ಅವನ ಬೆಂಬಲವೂ ಇದೆ..ಮತ್ತೇಕೆ ಭಯ!


    ಮುಗಿಸುವ ಮೊದಲು ಅಮ್ಮನ ಬಗ್ಗೆ ಒಂದಿಷ್ಟು ಮಾತು-  ನನ್ನ ಅಮ್ಮ ನನ್ನ ಮೊದಲ ಆಧ್ಯಾತ್ಮಿಕ ಗುರು.  ಗಾಂಧಿಯವರಷ್ಟು  ಮಕ್ಕಳನ್ನು ಕಡೆಗಣಿಸಿರಲಿಲ್ಲ್ಲ..ತಮ್ಮ ಸುತ್ತಲು ಹಬ್ಬುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸುವಷ್ಟು ತಾಕತ್ತೂ ಇರಲಿಲ್ಲ.. ಗಾಂಧಿಯವರ ಹಾಗೆ ಸರಳ ಜೀವನ ನಡೆಸಿದರು...ಅಂದೂ ಇಂದೂ ತಾವು ನಂಬಿದ ತತ್ವವನ್ನು ಬಿಡಲಿಲ್ಲ...ಮಾನಸಿಕ ಕ್ಷೋಭೆಗೂ ಒಳಗಾದರು..ಅವರನ್ನು ಮತ್ತೆ ಮುಂಚಿನಂತೆ ಮಾಡಲು ನನ್ನದೇ ಆದ ತಂತ್ರಗಳನ್ನು ಪ್ರಯೋಗಿಸಿದ್ದೇನೆ... ಸಫಲಳೂ ಆಗಿದ್ದೇನೆ.
         

05 October, 2012

ಪಾತರಗಿತ್ತಿ!

ಕ್ಷಣವೂ ವಿರಮಿಸದೇ 
ಕುಸುಮದಿಂದ ಕುಸುಮಕ್ಕೆ 
ಹಾರಾಡುತ್ತ, ನಲಿದಾಡುತ್ತ
ನನ್ನನಣಕಿಸುತ್ತಾ ಮೆರೆಯುತಿಹೆಯಲ್ಲಾ,
ಓ ಪಾತರಗಿತ್ತಿಯೇ
ಹಿಡಿದೇ ಬಿಟ್ಟೆ ಕಣೇ
ನನ್ನೀಯಂತ್ರದಲಿ ನಿನ್ನ
ಬಂಧಿಸಿದೆ ಕಣೇ!


01 October, 2012

ಫೋವ ಚಟ್ನಿ ಅನಿ ಬಟಾಣಿ (ಅವಲಕ್ಕಿ ಮತ್ತು ಬಟಾಣಿ)


ಫೋವ ಚಟ್ನಿ ಅನಿ ಬಟಾಣಿ (ಅವಲಕ್ಕಿ ಮತ್ತು ಬಟಾಣಿ)
  
     ವಾರದಲ್ಲಿ ಹೆಚ್ಚು ಕಡಿಮೆ ಪ್ರತಿ ಮಂಗಳವಾರ ಬಟಾಣಿ ಮತ್ತು ಶುಕ್ರವಾರ ಕಡಲೆ..ಇದು  ನಮ್ಮ ಕಾಲದ ಕೊಂಕಣಿಯ ಮನೆಯವರ ಮೆನುವಾಗಿರುತ್ತಿತ್ತು. ಈ ರೀತಿಯ ಅವಲಕ್ಕಿ ತಯಾರಿಸುವುದು ನಾಲಗೆಯ ರುಚಿಗೂ, ಆರೋಗ್ಯಕ್ಕೂ ಸರಿಹೋಗುತ್ತೆ. ಬಹುಶಃ ಸಂಪ್ರದಾಯಸ್ತರ ಮನೆಯಲ್ಲಿ ಬೆಳೆದ ಕಾರಣವೇನೋ ಈಗಲೂ ನನಗೆ ಅದೇ ರೂಢಿಯಾಗಿಬಿಟ್ಟಿದೆ. ನನ್ನ ಮನೆಯಲ್ಲೂ ಅಂತಹ ತಿಂಡಿಗಳಿಗೆ ಹೆಚ್ಚಿನ ಅಭ್ಯಂತರವಿರುವುದಿಲ್ಲ. ಅದರಲ್ಲೂ ಅವಲಕ್ಕಿಯ ಜೊತೆಗೆ ಹಸಿರು ಬಟಾಣಿಯ ಉಪ್ಕರಿ ಮಾಡಿದರೆ ಆ ದಿನ ನನ್ನ ಮಗ ಒಂಚೂರು ಹೆಚ್ಚೇ ತಿನ್ತಾನೆ.  ನನಗಂತೂ ಆ ಒದ್ದೆ ಮಾಡಿ ತಯಾರಿಸುವ ಅವಲಕ್ಕಿ ಅಷ್ಟು ಹಿಡಿಸುವುದಿಲ್ಲ. ಅಲ್ಲದೆ ಇದು ಖಾರ ಸಿಹಿ ಎರಡು ಸಮಮಿಶ್ರಿತವಾಗಿದ್ದು ಆರೋಗ್ಯಕ್ಕೋ ಒಳ್ಳೆಯದೇ ಆದುದರಿಂದ ಸಾಧಾರಣವಾಗಿ ೧೫ ದಿನಕ್ಕೊಮ್ಮೆ ನನ್ನ ಮೆನುವಿನಲ್ಲಿ ತನ್ನ ಸರದಿಯಲ್ಲಿ ಬರುತ್ತಿರುತ್ತದೆ.

ಫೋವ ಚಟ್ನಿ:
೧. ಅರ್ಧ ತೆಂಗಿನ ಕಾಯಿ ತುರಿ
೨. ೧ ದೊಡ್ಡ ಚಮಚ ಕೊತ್ತಂಬರಿ
೩.  ದೊಡ್ಡ ಚಮಚ ಜೀರಿಗೆ
೪. ೨ ಕೆಂಪು ಮೆಣಸು( ಹುರಿದದ್ದು)
೫. ೩೦ಗ್ರಾಮಿನಷ್ಟು ಬೆಲ್ಲ
೬. ರುಚಿಗೆ ತಕ್ಕಷ್ಟು ಉಪ್ಪು
೭. ಅವಲಕ್ಕಿ
೮. ಕಾಲು ಚಮಚದಷ್ಟು ಹುಣಸೆಕಾಯಿ

ಮೊದಲಿಗೆ ಜೀರಿಗೆ, ಕೊತ್ತಂಬರಿ, ಮೆಣಸು  ಮತ್ತು ಹುಣಸೆ ಹಾಕಿ ಮಿಕ್ಸಿಯಲ್ಲಿ ತರಾತುರಿಯಾಗಿ ರುಬ್ಬಿ. ೨,೩ ಸುತ್ತು ತುರುಗಿದರೆ ಸಾಕು..ತುಂಬಾ ನಯವಾಗಬಾರದು.  ಬೆಲ್ಲವನ್ನು ಚೆನ್ನಾಗಿ ಗುದ್ದಿ ಈ ಕೊತ್ತಂಬರಿ ಜೀರಿಗೆ ಹುಡಿಯಲ್ಲಿ ಬೆರೆಸಿ. ನಂತರ ತೆಂಗಿನ ತುರಿಯನ್ನು ಚೆನ್ನಾಗಿ ಬೆರಸಿ. ರುಚಿ ನೋಡಿ ಬೇಕಾದರೆ ಉಪ್ಪು ಹಾಗೂ ಬೆಲ್ಲ ಸೇರಿಸಿ. ಕೊನೆಗೆ ಅವಲಕ್ಕಿಯನ್ನು ಸೇರಿಸಿ...ಚೆನ್ನಾಗಿ ಬೆರೆಸದಿದ್ದರೆ ಅಲ್ಲಲ್ಲಿ ಹಸಿ ಅವಲಕ್ಕಿ ಬಾಯಿಗೆ ಸಿಕ್ಕಿ ರುಚಿ ಹಾಳುಮಾಡುತ್ತದೆ. ಕೆಲವರು ಇದಕ್ಕೆ ನೀರುಳ್ಳಿಯನ್ನು ಹಾಕುತ್ತಾರೆ. ಅದು ಸಹ ಬಹಳ ರುಚಿಯಾಗುತ್ತೆ. ಕೊನೆಗೆ ಕರಬೇವು ಮತ್ತು ಸಾಸಿವೆ ಒಗ್ಗರಣೆ ಕೊಟ್ಟರೆ ನಿಮ್ಮ ಫೋವ ಚಟ್ನಿ ರೆಡಿ. 

ಬಟಾಣಿ ಉಪ್ಕರಿ:
೧.ಹಸಿರು ಬಟಾಣಿ
೨.ಕೆಂಪುಮೆಣಸಿನ ಕಾಯಿ ೪.೫
೩. ಹಸಿಮೆಣಸಿನ ಕಾಯಿ ೨,೩
೪. ಗರಮ ಮಸಾಲೆ ಹುಡಿ ೨,೩ ಚಮಚ
೫. ಉಪ್ಪು
 ಮೊದಲು ಬಟಾಣಿಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ ಒಂದು ಕಾವಲಿಯಲ್ಲಿ ಒಗ್ಗರಣೆಗೆ ಇಡಿ. ಸಾಸಿವೆ ಸಿಡಿದ ಮೇಲೆ ಗರಮ ಮಸಾಲೆ ಹುಡಿ ಹಾಕಿ. ನಂತರ ಬೇಯಿಸಿದ ಬಟಾಣಿಯನ್ನು ಸೇರಿಸಿ ಕುದಿಸಿ, ಕಾವಲಿಯಿಂದ ಕೇಳಗಿಳಿಸಿ. ಈಗ ಬಟಾಣಿ ಮತ್ತು ಅವಲಕ್ಕಿಯನ್ನು ತಟ್ಟೆಯಲ್ಲಿ ಹಾಕಿ ಸೇವಿಸಿ. ನೆನಪಿಡಿ, ಕೆಲವರು ಅವಲಕ್ಕಿ ಮತ್ತು ಬಟಾಣಿಯನ್ನು ಬೆರೆಸಿ ತಿನ್ನುತ್ತಾರಾದರೆ  ಮತ್ತೆ ಕೆಲವರು ( ನನ್ನಂತವರು) ಬೇರೆ ಬೇರೆಯಾಗಿ ತಿನ್ನುತ್ತಾರೆ. 

30 September, 2012

ಕರೆಯುತಿಹೆಯಲ್ಲಾ ಛೀ... ಕಳ್ಳಿಯೆಂದೆನ್ನ!

ನಲ್ಲೆ ಅನ್ನುವಳು,

ನನ್ನೀ 
ಮೈತುಂಬೆಲ್ಲಾ 
ಹರಿದಾಡುವ
ಕಂಪನದ ಅಲೆಯು
ನಿನ್ನದೇ ನೆನಪಿನ 
ಪ್ರಭಾವವೆಂದು
ತಿಳಿದಿದ್ದರೂ
ಕರೆಯುತಿಹೆಯಲ್ಲಾ
ಮಳ್ಳಿಯೆಂದೆನ್ನ!

ಜತನವಾಗಿ
ಕಾಯ್ದುಕೊಂಡಿದ್ದ
ನನ್ನೀ ಹೃದಯಕೇ
ಹಾಕಿ ಲಗ್ಗೆ,
ನಿನ್ನ ಮನದೊಳೆನ್ನ
ಬಂಧಿಸಿ,  ಈಗ ಏನೂ 
ಅರಿಯದವನಂತೆ
ಕರೆಯುತಿಹೆಯಲ್ಲಾ
ಛೀ... ಕಳ್ಳಿಯೆಂದೆನ್ನ!

ಸುಮ್ಮನೆ ಬಿಡುವನನಲ್ಲ... ಆತನನ್ನುವನು,


ಆತನ ನೆನಪನ್ನು 
ತನ್ನೊಳಗಿನ 
ಕಂಪನವಾಗಿಸಿಕೊಂಡವಳನ್ನು 
ಮಳ್ಳಿಯೆನ್ನದೇ ಇರಲಾದೀತೇ?
ಹೃದಯಕ್ಕೆ ಲಗ್ಗೆಯಿಟ್ಟವನ 
ಮನದಲ್ಲಿ ಬಂಧಿಸಿಡಲು 
ಅನುಮತಿಕೊಟ್ಟವಳ 
ಕಳ್ಳಿ ಎನ್ನದಿರಲಾದೀತೇ?


ನಲ್ಲೆಯ ಕೊಂಡಾಟ...



 ನೀನ್ಹೇಗೆ ಕರೆದರೂ 
 ನಾ ಓಗೊಡುವೆನೋ
ನಿನ್ನ ಕರೆಗಾಗಿಯೇ
ಸದಾ ಕಾದಿರುವೆನೋ
ಕಳ್ಳಿಯೂ, ಮಳ್ಳಿಯೂ
ಎಲ್ಲವೂ ಆಗುವಳೋ
 ಶೈಲಜೆಯು ಕೇವಲ
ತನ್ನೀಶನಿಗಾಗಿ.
------------------------





15 September, 2012

ಭಾವ ಒಂದು ಭಾಷೆ ಮೂರು!



ಚಂದದ ಪದಗಳಿಂದ ಪೋಣಿಸಿದ ಮನದ ಭಾವ ಮೂರು ಭಾಷೆಗಳಲಿ! ಮಾನ್ಯ ಹಿಂದಿ ಕವಿ ಹರಿವಂಶ್ ರಾಯ್ ಬಚ್ಚನ್  ಬರೆದ ಮೂಲ ಕವಿತೆಯ ಆಂಗ್ಲನುವಾದವನ್ನು ಮಾನ್ಯ ಅಮಿತಾಭ್ ಬಚ್ಚನ್‍ ಅವರೂ ಮತ್ತು ನನ್ನ ನೆಚ್ಚಿನ ಕವಿ ಹಾಗೂ ಗುರು ಆತ್ರಾಡಿ ಸುರೇಶ್ ಹೆಗ್ಡೆಯವರು  ಗಂಧದ ಪರಿಮಳ ಸೂಸುವ ಕನ್ನಡದಲ್ಲಿ ಕವನವನ್ನು ಪೋಣಿಸಿದ್ದಾರೆ. 
ಶಾಂತಿಯನಿನ್ನೂ ಅರಿತಿಲ್ಲ ನಾನು!
*********************
(ಹರಿವಂಶ್ ರಾಯ್ ಬಚ್ಚನ್‍ರವರ ಕವಿತೆಯ ಭಾವಾನುವಾದದ ಒಂದು ಯತ್ನ)

ಕೊರತೆಗಳಿಹವು ನನ್ನೊಳಗೆ
ನನ್ನ ಹೊರಗೂ ಇರುವಂತೆ

ಒಳಹೊರಗಿನೀ ಕೊರತೆಗಳ
ನೀಗಿಸಿಕೊಳ್ಳುವ ಹಂಬಲವು
ನನ್ನೀ ಮನದೊಳಗಿಹುದಂತೆ

ಶಾಂತಿಯನಿನ್ನೂ ಅರಿತಿಲ್ಲ ನಾನು!

ಈ ಪ್ರಯತ್ನದಲಿ ನಾನು ನನ್ನ
ಆಯುಷ್ಯವನ್ನೇ ಸವೆಸಿಹೆನು

ಜಗವೂ ಅಲ್ಲಿಯೇ ಇಹುದು
ನಾನೂ ಅಲ್ಲಿಯೇ ಇಹೆನು

ಅದು ನನ್ನ ಹೆಡ್ಡತನವಾಗಿತ್ತೇ?
ಎಂದೀಗೀಗ ಯೋಚಿಸುತ್ತಿಹೆನು

ಆದರೂ
ನಿರಾಶನಾಗಲೇಕೆ ನಾನು
ನನ್ನೀ ಯತ್ನಗಳ ಹಿಂದೆ
ಆತ್ಮಸ್ಥೈರ್ಯ ಇಲ್ಲವೇನು?

ಜಗದ ಮುಂದೆ ಸೋಲನ್ನು
ಒಪ್ಪಿಕೊಂಡರೂ ನಾನು,
ಒಪ್ಪಿಕೊಂಡಿಲ್ಲ ಸೋಲು
ನನ್ನಲ್ಲಿ ನಾನು,
ಶಾಂತಿಯನಿನ್ನೂ ಅರಿತಿಲ್ಲ ನಾನು!






















I have not known peace and quiet and solace. There are some shortcomings inside of me. There are some short comings outside of me. But I have resolved that I shall condition both my inside and outside to be devoid of any fault or mistakes. For, I have not known peace and quiet and solace.

A lifetime have I spent in putting effort. I am but at the same spot and so is the world. And I do sometimes
 think, has there been in me a childish juvenile behaviour. For, I have not known peace and quiet and solace.

But why must I be disappointed with this. Is not my confident promise and assurance enough ? I may have accepted defeat from the world, but I have not accepted defeat with myself ! I have not known peace and quiet and solace.





This from my Father’s work ‘Ekant Sangeet’ – the music of solitude ! This from my Father’s works written during that phase of his life when he suffered great sadness, pain and disappointment. Pain from circumstances, from society and from life itself. They were depressing days. There was death of near ones in rapid succession. There was rejection from attachments. There was poverty and want within. When you have to travel miles on foot to earn Rs 25/- from a tuition it is harsh. Rs 25/- which, in western equivalence is half a dollar at todays prevalent rates, is half a dollar for an entire month !!



*********************

ಮೆಂತ್ಯ ಸೊಪ್ಪಿನ ವಡೆ!

ಮೆಂತ್ಯ ಸೊಪ್ಪಿನ ವಡೆ!
  
ಸಾಮಾಗ್ರಿಗಳು
೧. ಮೆಂತ್ಯ ಸೊಪ್ಪು ೨,೩ ಕಟ್ಟು
೨. ೧ ನೀರುಳ್ಳಿ
೩. ಶುಂಠಿ
೪. ಕಡಲೆ ಹುಡಿ
೫. ೨,೩ ಚಮಚ ದಪ್ಪ ಮೊಸರು
೬. ೩ ಹಸಿ ಮೆಣಸು
೭. ರುಚಿಗೆ ತಕ್ಕಷ್ಟು ಉಪ್ಪು
 ೮. ಕರಿಯಲು ಎಣ್ಣೆ




 ಮೆಂತ್ಯ ದೇಹಕ್ಕೆ ತಂಪು. ಅಲ್ಲದೆ ಸಕ್ಕರೆ ಅಂಶ ಹೆಚ್ಚಿದ್ದವರಿಗೆ ಅದನ್ನು ಹಿಡಿತಕ್ಕೆ ತರಲು ಮೆಂತ್ಯದ ಹುಡಿ ಸಹಾಯಕ. ಮೆಂತ್ಯದ ಸೊಪ್ಪಿನ ಪರಾಟ ಆರೋಗ್ಯಕ್ಕೂ ಸೈ ರುಚಿಗೂ ಸೈ!

ಮೊತ್ತ ಮೊದಲು ಸೊಪ್ಪಿನ ಬೇರಿನ ಭಾಗ ತೆಗೆದು ಅದನ್ನು ಒಂದಿಷ್ಟು ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ನಾನು ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನು ಒಂದರ್ಧ ಗಂಟೆಯಾದರೂ ಉಪ್ಪು ನೀರಿನಲ್ಲಿ ಹಾಕಿಡುತ್ತೇನೆ.  ನಂತರ ನೀರಿನಿಂದ ಹಿಂಡಿ ಹೊರತೆಗೆದು, ಸೊಪ್ಪಿನಿಂದ ನೀರು ಬಸೆದು ಹೋಗುವ ಹಾಗೆ ಇಟ್ಟುಬಿಡಿ.  ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ. ಹಾಗೆಯೇ ಶುಂಠಿ, ನೀರುಳ್ಳಿ, ಮತ್ತು ಹಸಿರು ಮೆಣಸಿನ ಕಾಯಿಯನ್ನೂ ಸಣ್ಣದಾಗಿ ಕತ್ತರಿಸಿ. ಈಗ ಇದಕ್ಕೆ ಉಪ್ಪು ಮತ್ತು ಕಡಲೆ ಹುಡಿಯನ್ನು ಬೆರೆಸಿ. ನಂತರ ನಿಧಾನವಾಗಿ ಮೊಸರನ್ನು ಜಾಗರೂಕತೆಯಿಂದ ಸೇರಿಸಿ. ವಡೆಯ ಹಿಟ್ಟು ಗಟ್ಟಿಯಾದಷ್ಟು ಎಣ್ಣೆ ಕಡಿಮೆ ಹೀರಿಕೊಳ್ಳುತ್ತದೆ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಖಾರ, ಉಪ್ಪು ಬೇಕಾದರೆ ಸೇರಿಸಿ. ಹಿಟ್ಟು ತಯಾರಿಸುತ್ತಿವಾಗಲೇ ಎಣ್ಣೆಯನ್ನು ಕಾಯಲು ಇಟ್ಟರೆ ಒಳ್ಳೆಯದು. ಕಾದ ಎಣ್ಣೆಗೆ  ಹಿಟ್ಟಿನ ಉಂಡೆಯನ್ನು ನಿಧಾನವಾಗಿ ಹಾಕಿ...ತಳ ಒಂಚೂರು ಕೆಂಪಗಾದಾಗ ಮಗುಚಿ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ. ಬಿಸಿಯಿದ್ದಾಗಲೇ ತಿನ್ನಲು ರುಚಿ!

05 September, 2012

ಮತ್ತೆ ಶಾಲೆಗೆ ಹೋಗುವ ಸಂಭ್ರಮ!!


            ಮತ್ತೆ ಶಾಲೆಗೆ ಹೋಗುವ ಸಂಭ್ರಮ!!! ಆದರೆ.....ಬಹಳಷ್ಟು ಹೊಂದಿಕೆ ಮಾಡಿಕೊಳ್ಳಬೇಕಾಗಿದೆ...ಆದರೂ ಮನದಲ್ಲಿ ಹುಮ್ಮಸು,,,,ಅದೇನೋ ಅಗೋಚರ ಶಕ್ತಿ ಬಲಕೊಡುತ್ತಿದೆ ಅನಿಸುತ್ತದೆ...ಶಾಲೆಯಲ್ಲಿ ನನ್ನ ಮಕ್ಕಳಿಗಿಂತ ಚಿಕ್ಕವರು ನನ್ನ ಸಹಪಾಠಿಗಳು..ನನಗಿಂತ ಅವರಿಗೆ ಹೆಚ್ಚು ಮುಜುಗುರ...ನನ್ನ ಗುರುಗಳು ಹೆಚ್ಚುಕಡಿಮೆ ನನ್ನದೇ ಪ್ರಾಯದವರು..ನನ್ನನ್ನು ಹೆಸರು ಹಿಡಿದು ಕರೆಯದೇ ಮೇಡಂ ಎಂದು ಕರೆಯಬೇಕಾಗಿ ಬಂದಿದೆ ಅವರಿಗೆ...ನನ್ನ ತಪ್ಪುಗಳನ್ನು ಹುಡುಕುವಾಗ ಬೇರೆ ವಿದ್ಯಾರ್ಥಿಗಳಿಗೆ ಹೇಳಿದ ಹಾಗೆ ಹೇಳಲಾಗುವುದಿಲ್ಲ...ಹೀಗೆ ಎಷ್ಟೋ ಹೊಸ ಹೊಸ ಅನುಭವಗಳು....ಹಾಗೆಯೇ ಇದು ಕಲೆ ಕಲಿಯುವ ತರಗತಿ..ಇಲ್ಲಿ ಪ್ರಾಕ್ಟಿಕಲ್ ಕೆಲಸಕ್ಕೆ ಹೆಚ್ಚು ಒತ್ತು...ಸ್ಕೆಚಸ್ಎಷ್ಟು ಮಾಡಿದರೂ ಕಮ್ಮಿನೇ....ದಿನದ ಮೂರು ಹೊತ್ತು ಮನೆಪಾಠ ಮಾಡಿ, ಮನೆಕೆಲಸ ನಿರ್ವಹಿಸಿ.....ಅದರ ಮೇಲೆ...ನನ್ನ ಬ್ಲಾಗ್, ಫೇಸ್ ಬುಕ್ ತಿರುಗಾಟ....ಮತ್ತೆ ಸ್ಕೆಚಸ್ ಯಾವಾಗ ಹಾಕೋದು!!! ಕಮ್‍ಸೆ ಕಮ್ ೧೦೦ ಸ್ಕೆಚ್ ಹಾಕಬೇಕಂತೆ ಪರ್ ಡೇ...ರಾಮ ರಾಮ ನನ್ನಿಂದ ಸಾಧ್ಯವೇ ಇಲ್ಲ..ನನಗೆ ೫,೬ ಮಾತ್ರ ಸಾಧ್ಯ ಅಂದದಕ್ಕೆ....ಒಪ್ಪಿಗೆನೂ ಸಿಕ್ಕಿದೆ..ಲಕ್ಕಿ ಮಿ:-)...ನನ್ನೊಡೆಯನ ದಯಾಮಯಿ. ನನ್ನ ಕೈಯೆಂದೂ ಬಿಟ್ಟು ಹಾಕೊಲ್ಲ...ನನ್ನ ವಿಶ್ವಾಸ, ನನ್ನ ನಂಬಿಕೆ ಅಚಲ...ಕಷ್ಟ ಬಂದಾಗೆಲ್ಲ ಕೈಹಿಡಿದು..ಅತೀ ಕಷ್ಟ ಬಂದಾಗೆಲ್ಲ ನನ್ನನ್ನೆತ್ತಿಯೇ ಹಿಡಿದು ಮುನ್ನಡೆಸಿದ್ದಾನೆ....ಹಾಗಾಗಿ ನಾಳಿನ ಚಿಂತೆ ಮರೆತು...ಈ ಘಳಿಗೆಯಲ್ಲೇ ಜೀವಿಸುತ್ತಿದ್ದೇನೆ. 




ಶ್ರೀ ಗುರವೇ ನಮಃ



               ಒಂದು ವಾರದಿಂದ ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳಿಗೆ ತಮ್ಮ ತಮ್ಮ ಗುರುಗಳಿಗೆ ಟೀಚರ್ಸ್ ಡೇಗಾಗಿ ಗಿಫ್ಟ್ ತಯಾರಿಸುವ ಸಂಭ್ರಮ. ಅಂತೂ ಅಪ್ಪನ ಜೇಬಿಗೆ ತೂತು ಮಾಡಿಸ್ತಾರಪ್ಪಾ ಈ ಮಕ್ಕಳು...ಅವರಲ್ಲೇ ಪೈಪೋಟಿ..ಯಾರು ಬೆಸ್ಟ್ ಗಿಫ್ಟ್ ಕೊಡ್ತಾರಂತ...ನನ್ನದು ಒಂದೇ ಮಾತು..ನನಗೆ ಗಿಫ್ಟ್ ಬೇಡ..ನೀವೇ ಕಾರ್ಡ್ ತಯಾರಿಸಿದರೆ ಮಾತ್ರ ತಕ್ಕೊಳ್ತೇನೆ..ಇಲ್ಲ ಏನೂ ಬೇಡ...ಹಾಗಾಗಿ ನಿನ್ನೆಯೆಲ್ಲ ಗುಸುಗುಸು ಮಾತಾಗ್ತಿತ್ತು..ಇವತ್ತು ಬೆಳ್‍ಬೆಳಿಗ್ಗೆನೇ ಮೈಸೂರಿನಿಂದ ಹಳೆ ಶಿಷ್ಯೆಯ ದೂರವಾಣಿ! ಅರೇ ಈ ಹುಡುಗಿ ಇನ್ನೂ ನನ್ನನ್ನ ಮರಿಯಲಿಲ್ಲವಲ್ಲ...ಕೇಳಿದೆ ಏನಮ್ಮಾ ಹಳೆ ಗೆಳತಿಯರ ಒಡನಾಟ ಇನ್ನೂ ಇದೆಯೇನು...ಪಟ್ ಅಂತ ಉತ್ತರ ಬಂತು...ಐ ಹಾವ್ ಲಿಟರಲೀ ಲಾಸ್ಟ್ ಆಲ್ ಮೈ ಓಲ್ಡ್ ಕಾಂಟಾಕ್ಟಸ್!!! ಮತ್ತೆ ನನ್ನದು??? ಈ ಹುಡುಗಿ ನನ್ನ ಕೆಳಗೆ ಪಳಗಿದ ನನ್ನ ಪಟ್ಟ ಶಿಷ್ಯೆ!....ಅವಳ ತಂದೆ ತಾಯಿ..ಮಾತ್ರವಲ್ಲ..ದೂರದೂರಿನಲ್ಲಿರುವ ಅಜ್ಜಿಗೂ ನಾನಂದ್ರೆ ತುಂಬಾನೆ ಇಷ್ಟ! 
 ಇವತ್ತು ೬.೪೫ಕ್ಕೆ ಪಾಠಕ್ಕೆ ಬಂದ ಹುಡುಗರು..ಎಂದಿನಂತೆ ತಮ್ಮತಮ್ಮ ಓದಿನಲ್ಲಿ ಮಗ್ನರಾದರು..ಆದರೆ ಹುಡುಗಿಯರು..ಬರುವಾಗಲೇ ಗಲಗಲ..ರೋಸ್..ಚಾಕ್ಲೇಟ್...ಮತ್ತು ಮೇಡಂಗೋಸ್ಕರ ಪೆನ್ನುಗಳ ಉಡುಗೊರೆ! ಇದಕ್ಕೆಲ್ಲಾ ಬೆಲೆಕಟ್ಟಲಾಗುವುದೇ! ನನಗೆ ನನ್ನ ಹಳೆದಿನಗಳು ಕಾಡತೊಡಗಿದವು..ನನ್ನ ಬದುಕಿನಲ್ಲಿ ನನಗೆ ಬರೇ ಪಾಠ ಕಲಿಸಿದ ಮಾತ್ರವಲ್ಲ...ಜೀವನದ ಪ್ರತಿ ಹಾದಿಯನ್ನು ನಿಭಾಯಿಸಲು, ಮನಸು ಸದೃಢವಾಗಿಸಲು ದಾರಿದೀಪವಾದ ಅನೇಕ ಮಹಾನ್ ಆತ್ಮಗಳ ಪುನಃ ಸ್ಮರಣೆ ಮಾಡಿದೆ. ಹಾಂ, ಪ್ರತೀದಿನ ಬೆಳಿಗ್ಗೆ ಏಳುವಾಗ ಮತ್ತು ಮಲಗುವ ಮೊದಲು ನನ್ನೊಡೆಯ ನಾಮದ ಜೊತೆಗೆ ಇವರನ್ನೂ ಸ್ಮರಿಸುವುದನ್ನು ತಪ್ಪಿಸುವುದಿಲ್ಲವಾದರೂ ಇವತ್ತಿನ ದಿನ ಇನ್ನೊಮ್ಮೆ ಹಳೆದಿನಗಳನ್ನು ಮೆಲುಕಿಸುವಂತೆ ಪ್ರೇರೇಪಿಸಿತು.  ಬದುಕಿನ ಮೊದಲ ೧೧ ವರ್ಷ...ಇಂದಿನ ನನ್ನ ನಿಲುವಿಕೆಗೆ, ನನ್ನ ತತ್ವಗಳಿಗೆ ಆಧಾರ. ಮತ್ತೆ ೩೩ ವರ್ಷ ಬರೇ ಉಸಿರಾಟವಾಡಿದ್ದು...ಕೆಲವೊಂದು ಸಿಹಿನೆನಪುಗಳ ಹೊರತು,,,,, ಬಾಳಿನ ಪುಟಗಳು ಬರೇ ಖಾಲಿ..ಮತ್ತೆ ಆ ಸುವರ್ಣ ದಿನಗಳು ಮರಳಿ ಬಂದದ್ದು ಈ  ೨,೩ ವರ್ಷದಲ್ಲೇ!!!  

 ಬದುಕಿನ ಪ್ರತಿಯೊಂದು ಹಾದಿಯಲ್ಲಿ  ದಾರಿದೀಪವಾದ ಹಲವು ಜ್ಯೋತಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು!

ಈ ಬರಹಗಳು ನಾನು ೨೦೦೭ ಮತ್ತು ೨೦೧೧ರಲ್ಲಿ ಸಂಪದದಲ್ಲಿ ಪ್ರಕಟಿಸಿದವುಗಳು...ಇಂದಿಗೂ ಪ್ರಸ್ತುತವೆನಿಸಿ ಹಾಕುತ್ತಿದ್ದೇನೆ!


    
 2007
             ­-ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ? ಇದ್ದರೂ ಇರಬಹುದು......ಏನಿದ್ದರೂ ಈ ಮಕ್ಕಳು ನನ್ನಲ್ಲಿ ಸುಪ್ತವಾಗಿದ್ದ ನನ್ನ ಗುರುಗಳ ಮೇಲಿನ ಭಕ್ತಿ, ಗೌರವ ಹಾಗೂ ಕೃತಜ್ಞತೆಯನ್ನು ಈ ಮೂಲಕ ಅರ್ಪಿಸಲು ಪ್ರೇರಣೆಯಾಗಿದ್ದರೆ! ಪ್ರಪಂಚದ ಎಲ್ಲಾ ಗುರುಗಳಿಗೆ ನನ್ನ ವಂದನೆಗಳು. ವಿಶೇಷವಾಗಿ ನನಗೆ ಕಲಿಸಿದ ಗುರುಗಳನ್ನು ನಾನು ಈದಿನ ಸ್ಮರಿಸಿ ನನ್ನ ಕೃತಜ್ಞತೆಯನ್ನು ಈ ಮೂಲಕ ತೋರಿಸಲು ಆಶಿಸುತ್ತೇನೆ. ಬಾಲವಾಡಿಯಿಂದ ೫ನೇ ತರಗತಿಯವರೆಗೆ ಕಲಿಸಿದ ಸುಶೀಲಾ, ರತ್ನ ಟೀಚರ್ ಇವರಿಂದ ಕಲಿತ ಪಾಠ ಪ್ರೈಮರಿ ತರಗತಿಯಲ್ಲಿ ಕಳೆದ ಕಾಲವನ್ನು ಇನ್ನೂ ಹಸಿಯಾಗಿಡಲು ಕಾರಣವಾಯಿತು. ಇವರಿಬ್ಬರ ಜೊತೆಗೆ ನನಗೆ ಹೈಸ್ಕೂಲಿನಲ್ಲಿ ಕಲಿಸಿದ ಮುಕ್ತಾ, ರಾಧ, ದಮಯಂತಿ, ಶಾರ್ಲೆಟ್, ರಾಮಪ್ಪ, ನಾರಾಯಣ ತಂತ್ರಿ,ಮೊದಲಾದವರೂ ನನ್ನ ಮುಂದಿನ ಶಿಕ್ಷಣಕ್ಕೆ ಹಾಕಿಕೊಟ್ಟ ಅಡಿಪಾಯವನ್ನು ನಾನೆಂದಿಗೂ ಮರೆಯಲಾರೆ. ಪಿಯುಸಿ ಹಾಗು ಕಾಲೇಜಿನಲ್ಲಿ ಕಲಿಸಿದ ಬಾಲಚಂದ್ರ ರಾವ್, ಚಂದ್ರಶೇಖರ್, ಶೆಣೈ ಸರ್, ಸ್ವರ್ಣಾ ಮೇಡಮ್, ಮುಡಿತಾಯಾ ಸರ್, ಆಚಾರ್ಯ ಸರ್, ....... ಇನ್ನೂ ಪ್ರತ್ಯೇಕ್ಷವಲ್ಲದೇ ಅನೇಕ ಪರೋಕ್ಷ ಗುರುಗಳನ್ನು ಸ್ಮರಿಸಿ, ಈ ದಿನವನ್ನು ಶಿಕ್ಷರಿಗೆ ಅರ್ಪಿಸಿದ ರಾಧಾಕೃಷ್ಣರಿಗೆ ನನ್ನ ಹಾರ್ಧಿಕ ಅಭಿನಂದನೆಗಳನ್ನು ಮತ್ತು ಕೃತಜ್ಞತೆಯನ್ನು ಆರ್ಪಿಸುತ್ತೇನೆ! ಗುರು--- ಈ ಶಬ್ದಕ್ಕೆ ಎಷ್ಟು ಮಹತ್ವವಿದೆಯಲ್ಲವೇ? ಗು ಅಂದರೆ ಕತ್ತಲೆ, ರು ಅಂದರೆ ಕತ್ತಲೆಯನ್ನು ದೂರಮಾಡುವವ. ಅಂದರೆ ಬೆಳಕನ್ನು ತೋರಿಸುವವ. ತಾಯಿಯ ನಂತರ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖವಾದ ಪಾತ್ರವನ್ನು ಗುರು ವಹಿಸುತಾನೆ! ನಮ್ಮ ಮುಂದಿನ ಜೀವನಕ್ಕೆ ನಾಂದಿಯನ್ನು ಹಾಕುತ್ತಾನೆ. ಭದ್ರವಾದ ಅಡಿಪಾಯವಾದರೆ ಮುಂದಿನ ಜೀವನದಲ್ಲಿ ಬರುವ ಎಲ್ಲಾ ಅಡೆಚಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ. 

            तस्मै श्री गुरुभ्यॊ नमः||

20011
- ಮತ್ತೆ ಬಂದಿದೆ ಗುರುಗಳ ದಿನ! ನನ್ನಲ್ಲಿ ನನ್ನ ಗುರುಗಳ ಬಗ್ಗೆಯ ಕೃತಜ್ಞತಾ ಭಾವ ಇನ್ನು ಇನ್ನು ಹೆಚ್ಚಾಗುತಿದೆಯೇ ಹೊರತು ಒಂಚೂರು ಕಮ್ಮಿಯಾಗಿಲ್ಲ. ಕಾರಣ ನನ್ನ ಇಂದಿನ ಏಳಿಗೆಗೆಯ ಸಂಪೂರ್ಣ ಶ್ರೇಯ ನನ್ನ ಗುರುಗಳಿಗೇ ಸಲ್ಲುತ್ತದೆ. ಮತ್ತೆ ಗುರು ಚರಣಗಳಿಗೆ ನನ್ನ ದೀರ್ಘ ಪ್ರಣಾಮಗಳು! ಅದರಲ್ಲೂ ಬಿ. ಜಿ. ಮೊಹಮ್ಮದ್ ಮಾಸ್ಟ್ರು ಅತ್ಯಂತ ಅಲ್ಪ ಸಮಯದಲ್ಲಿ ಚಿತ್ರಕಲೆಯ ರಹಸ್ಯವನ್ನು ತಿಳಿಸಿ ಅವರಿಗೆ ಚಿರಋಣಿಯಾಗಿರುವಂತೆ ಮಾಡಿದ್ದಾರೆ. ಇಂದು ನಾನು ಅವರದೇ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಚಿತ್ರ ಕಲೆಯನ್ನು ಕಲಿಸುವ ರೀತಿ ಅವರಿಗೆ ಚೆನ್ನಾಗಿ ಕರಗತವಾಗಿತ್ತು.....ಎಷ್ಟೋ ಮಂದಿ ಸೂಪರ್ ಪೈಂಟಿಗ್ ಮಾಡುತ್ತಾರೆ...ಆದರೆ ಕಲಿಸಲು ಬರುವುದಿಲ್ಲ...ನನಗೆ ತಿಳಿದ ಹಾಗೆ ಅವರು ಅಜಾತ ಶತ್ರುಗಳಾಗಿದ್ದರು...ಬಹಳ ಜನಪ್ರಿಯರಾಗಿದ್ದರು...ಎಂದಿಗೂ ಪ್ರಶಸ್ತಿಗಳಿಗಾಗಿ   ಲಾಬಿ ಮಾಡಿರಲಿಲ್ಲ...ಅದರಿಂದ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಮಾನ ಸಮ್ಮಾನಗಳು ದೊರಕಿಲ್ಲ....ಆದರೂ ಅವರ ಶಿಷ್ಯರು ಅವರಿಗೆ ತಮ್ಮ ಚಿತ್ರಗಳ ರೂಪದಲ್ಲಿ ನ್ಯಾಯ ಸಲ್ಲಿಸಿದ್ದಾರೆ...ಸಲ್ಲಿಸುತ್ತಿದ್ದಾರೆ... ಮತ್ತು ಸಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ...ಅವರ ಜೀವಿತದ ಕೊನೆಯ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು.  
               ಮಷ್ಟ್ರಾ ನಮಸ್ಕಾರು!!!!       ಕೃತಜ್ಞತೆಯನ್ನು ನನ್ನ ಈ ಚಿತ್ರದ ಮೂಲಕ ಸಲ್ಲಿಸುತ್ತೇನೆ.


ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...