ಶಿಶಿರನ ನಿರ್ಗಮನದ
ಕುರುಹೋ ಎಂಬಂತೆ
ಹರಡಿದ ಪೀತವರ್ಣದ
ಹಾಸುಗೆಯಲಿ ಮೆಲ್ಲನೆ
ಹೆಜ್ಜೆಯೂರುತ ಸಾಗುತ್ತಿದ್ದಳು!
ತಂಗಾಳಿಯೊಂದು ಬಳಿ ಸಾರಿ,
ಮುಂಗುರುಳ ಸರಿಸಿ,
ಕಿವಿಯಲಿ ಪಿಸುನುಡಿಯ
ಉಸುರಿ ಕಪೋಲವ
ರಾಗರಂಜಿತ ಮಾಡಿತು!
ನಭದಲಿ ಝಗಮಗಿಸುತ್ತಿದ್ದ
ರವಿಯು ಕೋಮಲಾಂಗಿಯ
ಕ್ರಶಕಾಯ ನೋಡಿ ಮರುಗಿ
ಒಂದಿಷ್ಟು ಮರೆಯಾದ
ಜಲಧರನ ತೆರೆಗೆ!
ಕುಸುಮಗಳ ವಾಸನೆಯ
ಆಘ್ರಾಣಿಸಿದ ಕನ್ಯೆಗೆ
ನಶೆಯ ಮತ್ತೇರಿತು!
ಬಿರಿದ ಅಧರಗಳು ಕರೆದವು,
ಅರಳಿದ ನಯನಗಳು ಅರಸಿದವು!
ವಸಂತನ ಆಗಮನ ಸಾರಿದ
ಪರಪುಟ್ಟ ಹಕ್ಕಿಯ ಗಾನ,
ಮತ್ತೇರಿದ ದುಂಬಿಗಳ ಝೇಂಕಾರ,
ಸಖಿಯ ಹೃದಯದಲಿ
ಮಧುರ ಕಂಪನ ಎಬ್ಬಿಸಿತು!
ಬಳಿ ಸಾರಿದ ಮನ್ಮಥ
ಬರಸೆಳೆದು ಬಿಗಿದಪ್ಪಿದ.
ವರುಷದ ವಿರಹದ
ತಾಪ ತಣಿಸಿದ
ಶಾಪಕೆ ಗತಿ ಕಾಣಿಸಿದ!
ಹಸಿರರಿವೆ ಧರಿಸಿ,
ನಿಸರ್ಗ ಓಕುಳಿ ಚೆಲ್ಲಿತು,
ಖಗಗಳ ವೃಂದದ ಓಲಗ,
ರತಿ-ಮದನರ ಮಿಲನದ
ಸಂಭ್ರಮ ಎಲ್ಲೆಡೆ!
No comments:
Post a Comment