ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

24 December, 2012

ಛಲವಿದ್ದಲ್ಲಿ ಬಲಕ್ಕೆ ಬರವಿಲ್ಲ!

    
       "ಮೇಡಂ, ಭಗತ್ ಚೇತನ್ ಹೇಳಿದ ಹಾಗೆ ಜೀವನದ ಎಲ್ಲಾ ಹಾಳೆಗಳಲ್ಲಿ ಎ ಪ್ಲಸ್ ಬೇಕೆಂದು ನಿರೀಕ್ಷೆ ಮಾಡಬೇಡಿ. ನೀವು ಪರೀಕ್ಷೆಗೆ ಕುಳಿತುಕೊಳ್ಳುತ್ತಿಲ್ಲ. ನಿಮಗೆ..ನಿಮಗೇನೂ ಯಾರಿಗೂ ನೂರಕ್ಕೆ ನೂರು ಗಳಿಸಲು ಸಾಧ್ಯವೂ ಇಲ್ಲ. ಈ ಸತ್ಯವನ್ನು ಸಂತೋಷದಿಂದ ಒಪ್ಪಿಕೊಳ್ಳಿ. ರಾತ್ರಿ ಊಟಕ್ಕೆ ನಾಲ್ಕು ಬಗೆ ಮಾಡಲಾಗದಿದ್ದರೆ ಪರವಾಗಿಲ್ಲ..ಒಂದರಲ್ಲಿ ಖಂಡಿತಾ ಹೊಟ್ಟೆ ತುಂಬಿಸಿಕೊಳ್ಳಬಹುದಲ್ವಾ? ರಾತ್ರಿವರೆಗೆ ಕೆಲಸ ಮಾಡಲಾಗದೆ ಪ್ರಮೋಶನ್ ಸಿಕ್ಕಿಲ್ಲವಾ.. ಅದೂ ಪರವಾಗಿಲ್ಲ...ಜೀವನದ ಎಲ್ಲಾ ಹಂತಗಳಲ್ಲೂ ಹುದ್ದೆಗಳು ಯಾರಿಗೂ ನೆನಪಾಗದು.....ಸಾಧ್ಯವಾದಷ್ಟುಮಟ್ಟಿಗೆ ಉತ್ತ ಮವಾದುದನ್ನು ಕೊಡಲು ಪ್ರಯತ್ನಿಸಿ...ಆದರೆ ರಿಪೋರ್ಟ್ ಕಾರ್ಡ್ ನೋಡುತ್ತಾ ಕೂಡಬೇಡಿ. ಕ್ಲಾಸಿನಲ್ಲಿ ಮೊದಲ ರ್ಯಾಂಕು ಖಂಡಿತಾ ನಿರೀಕ್ಷಿಸಬೇಡಿ....." ಹೇಳುತ್ತಾ ಹೋದಂತೆ ದೇವಕಿಗೆ ತಾನು ತನ್ನನ್ನೇ ಉದ್ದೇಶಿಸುತ್ತಾ ಹೋದಂತೆ ಅನಿಸತೊಡಗಿತು."-----------------

    -ನವೆಂಬರ್ ತಿಂಗಳ ತರಂಗದಲ್ಲಿ "ಪೂಂಗಡಿ"- ಭಾಗ್ಯಶ್ರಿ ಶರತ್ ಬರೆದಿರುವ ಕತೆಯಲ್ಲಿ ಬರುವ ದೇವಕಿ ಉಡುಪಳ ಮಾತಿದು. ಅದೇಕೋ ಓದುತ್ತಿದ್ದಂತೆ ದೇವಕಿ ನನ್ನಲ್ಲಿ ಆವ್ಹಾನಿತಳಾದ ಹಾಗೆ ಅನಿಸತೊಡಗಿತು...ನನ್ನ ಮಾತನ್ನೇ ಹೇಳುತ್ತಿದ್ದಾಳೆ  ಆಕೆ....ಹೌದು, ಒಂದು ಕಾಲದಲ್ಲಿ, ಅದೇ ೧೫ ವರ್ಷದ ಕೆಳಗೆ ಏನೂ ಅಲ್ಲದವಳಾಗಿದ್ದೆ...ಬರೇ ಧೂಳು ಹೊಡೆಯುವುದು, ಮನೆಯನ್ನು ಚೊಕ್ಕವಾಗಿಡುವುದು, ಬಂದವರಿಗೆಲ್ಲ ನಗು ಮುಖವನ್ನು ತೋರುತ್ತಾ ಉಪಚಾರ ಮಾಡುತ್ತಾ ಅವರ ಮಾತಿಗೆಲ್ಲ ಹೂಂಗುಟ್ಟುವುದು...ಮಕ್ಕಳ  ಶಾಲೆ, ಊಟ, ತಿಂಡಿ...ಎಲ್ಲೋ ಕಳೆದು ಹೋಗಿದ್ದೆ...perfectionist- ಬಿರುದು ಹೊತ್ತು ನಾನಲ್ಲದ ನನ್ನನ್ನು ಕನ್ನಡಿಯಲ್ಲಿ ನೋಡುತ್ತಿದ್ದೆ..ನನಗೆ ನನ್ನದೇ ಆದ ವ್ಯಕ್ತಿತ್ವವಿತ್ತೇ...ಒಂದೊಮ್ಮೆ ಸ್ತ್ರೀ ಶಕ್ತಿಯ ಬಗ್ಗೆ ದೊಡ್ಡ ದೊಡ್ಡಮಾತುಗಳನ್ನು ಆಡುತ್ತಿದ್ದವಳು ನಾನೆ! ಖಾಲಿಯಾಗಿದ್ದೆ...ನನ್ನಲ್ಲಿ ನನಗೇ ನಂಬಿಕೆಯಿರಲಿಲ್ಲ...ಏನೂ ಗೊತ್ತಿಲ್ಲವೆಂಬ ಕೀಳುರಿಮೆ ಕಾಡುತಿತ್ತು...

   ಆದರೆ, ಕೊನೆಗೂ ಆ  miracle....happened in my life too. ಕೊನೆಗೂ  ನನ್ನನ್ನು ನಾನು ಕಂಡುಕೊಂಡೆ. ಆತ್ಮವು ಜಾಗ್ರತವಾಯಿತು. ಹಳೆಯ ಛಲ ಮತ್ತೆ ನನ್ನೊಳು ಮೂಡಿತು. ಆ ಹಳೆಯ ದಿನಗಳು- ಹೌದು ಬರೇ a for apple, b for ball...ಕಲಿಯುತ್ತಿದ್ದಾಗ ಹಠ ಮಾಡಿ  ನನ್ನತ್ತೆಯಂದಿರ, ಚಿಕ್ಕಪ್ಪಂದಿರ, ಮಾಮಂದಿರ ಮಕ್ಕಳ ಹಾಗೆ ಆರನೆಯ ತರಗತಿಗೆ ಇಂಗ್ಲಿಷ್ ಮಾಧ್ಯಮ ಸೇರಿಕೊಂಡ ದಿನಗಳವು.  ಕಲಿತ ಚಿಕ್ಕಪ್ಪನು ಅದ್ಯಾವುದೋ ಹಿಂದಿನ ದ್ವೇಷದ ಕಾರಣಕ್ಕಾಗಿ ಸಹಾಯ ಮಾಡಲು ತಯಾರಿರಲಿಲ್ಲ...ಅಮ್ಮ ಅಪ್ಪನಿಗೆ ಕಲಿಸುವ ಸಾಮರ್ಥ್ಯವಿರಲಿಲ್ಲ..ಮಾಮಂದಿರು ದೂರವಿದ್ದರು..ಆಗ ಏಕಲವ್ಯನಂತೆ ಗುರುಗಳಿಲ್ಲದೆ ಕಲಿತ ದಿನಗಳು....ಅರ್ಥ ಗೊತ್ತಿಲ್ಲದೆ ತಿಣುಕಾಡಿದ, ಶಾಲೆಯಲ್ಲಿ ಅವಮಾನದಿಂದ ಅತ್ತ ದಿನಗಳು....ಬೇಕಂತಲೇ ಇಂಗ್ಲಿಷ್‍ನಲ್ಲಿ ಮಾತನಾಡಿಸಿ ಹೀಯಾಳಿಸುವ ಸಹಪಾಠಿಗಳು..ಮರೆಯಲಾರೆ ಆ ದಿನಗಳನ್ನು... ಹೌದು, ದೈವದ ಬೆಂಬಲ, ಮನದಲ್ಲಿ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಏಕಾಂಗಿಯಾಗಿದ್ದರೂ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬಹುದು..

   ಹುಂ, ಕತೆಯಲ್ಲಿ ಭಾಗ್ಯಶ್ರಿ ಬರೆದಂತೆ ನನಗೀಗ ಧೂಳು ಹೊಡೆಯಲು ಪುರುಸೊತ್ತು ಇಲ್ಲ....ನಾನೇ ಬೆಳೆಸಿದ ಹೂಗಿಡದಲ್ಲಿ ಆದ ಹೂಗಳನ್ನು ನೆರೆಮನೆಯವರು ಒಯ್ದರೆ ಅವರ ಜೊತೆ ಜಗಳವಾಡುವಷ್ಟು ತಾಳ್ಮೆನೂ ಇಲ್ಲ.....ನೆಂಟರು ಸಮಾರಂಭಗಳಿಗೆ ಕರೆಯದಿದ್ದರೂ ತಲೆಬಿಸಿ ಇಲ್ಲ..ಆಗಾಗ ಮನೆಗೆ ಬಂದು, ತಿಂದು ಮತ್ತೆ ಮರುದಿನ ಕಿರಿಕಿರಿ ಮಾಡುತ್ತಿದ್ದ ಅತ್ತೆ ಮನೆಯವರು ಈಗ ನನಗೆ, ನಾನು ಗಳಿಸಿದ ಹೆಸರಿಗೆ ಹೆದರುತ್ತಿದ್ದಾರೆ......ಹೊರಗಿನ ಚಲವಲನ ಒಳಗೂ ಸಂಚಲನವನ್ನು ಉಂಟುಮಾಡಿದೆ. ನನ್ನಲ್ಲಿ ಮತ್ತೆ ಜೀವ ಸಂಚಾರವಾಗಿದೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...