ಜೀವನವು ಯಾವಾಗ, ಹೇಗೆ, ಎಲ್ಲಿ, ತನ್ನ ತಿರುವು ತೆಗೆದುಕೊಳ್ಳುತ್ತದೆಯೋ ಎಂದು ಯಾರು ತಿಳಿಯರು! ಹೆದರಿದ ಆಮೆಯಂತೆ ಚಿಪ್ಪಿನಲ್ಲಿ ಅಡಗಿದ್ದ ನಾನು ಈಗ ಜಗತ್ತಿಗೆ ತೆರೆದು ನಿಂತಿದ್ದೇನೆ. ಅಥವಾ ಜಗತ್ತೇ ನನಗಾಗಿ ಬಾಗಿಲನು ತೆರೆದಿದೆಯೇ? ಏನೋ ತಿಳಿದಿಲ್ಲ. ಒಂದಂತೂ ನಿಜ..ಬಹಳಷ್ಟು ಬದಲಾವಣೆಗಳನ್ನು ನೋಡಿದ್ದೇನೆ..ನೋಡಲಿರುತ್ತೇನೆ..ಇದಂತೂ ಸ್ಪಷ್ಟವಾಗಿದೆ.
ಕೊನೆಗೂ ಎಲ್ಲವೂ ಕನಸಿನಂತೇ ನಡೆದಿದೆ...ಹಿಂದಿನ ಆದಿತ್ಯವಾರ ಇದೇ ಸಮಯದಲ್ಲಿ ನಾನು ನಮ್ಮ ಗಾಂಧಿ ಪಾರ್ಕಿನಲ್ಲಿ ನಮ್ಮ ವರ್ಣ ವನಿತಾ ಕಾರ್ಯಕ್ರಮದಲ್ಲಿ ವ್ಯಸ್ತಳಾಗಿದ್ದೆ. ಆದರೆ ಇವತ್ತು ನನ್ನ ಬಗ್ಗೆ ಡೆಕ್ಕನ್ ಹೆರಾಲ್ಡನಲ್ಲಿ ಬಂದ ಲೇಖನಕ್ಕೆ ಪ್ರತಿಕ್ರಿಯೆ ಕೊಡುವುದರಲ್ಲಿ ಬಿಸ್ಸಿಯಾಗಿದ್ದೇನೆ. ಹಾಂ! ಈ ಪ್ರತಿಕ್ರಿಯೆ ಬಂದಿದರಲ್ಲೂ ಬಹಳ ಸ್ವಾರಸ್ಯರಕರ ಸಂಗತಿಗಳಿವೆ. ಪ್ರತಿಯೊಬ್ಬರ ಒಳಗಿನ ಮುಖವಾಡಗಳನ್ನು ಕಳಚಿದೆ. ಆದರೆ ಈ ಲೇಖನ ಪ್ರಕಟವಾದ ನಂತರ ಅಂತಲ್ಲ...ಈ ಮೊದಲೇ ಗಣ್ಯ, ಪ್ರೌಢ, ಗಂಭೀರ ವ್ಯಕ್ತಿಗಳೆಂದು ನಾನು ಅಭಿಮಾನದಿಂದ ಸ್ನೇಹ ಬಯಸಿದ ವ್ಯಕ್ತಿಗಳು ತಮ್ಮ ಕೆಲವೊಂದು ನಡವಳಿಕೆಯಿಂದ ನನ್ನನ್ನು ನಿರಾಸೆಗೊಳಿಸಿದ್ದಾರೆ. ಇದೆಲ್ಲಾ ಬರೆಯುವ ಮೊದಲು ನನ್ನ ಮೊದಲ ಕಲಾ ಶಿಬಿರದ ಅನುಭವವನ್ನು ನಾನು ಇಲ್ಲಿ ದಾಖಲಿಸಬೇಕು. ಸಿಹಿ ಕಹಿ ಎರಡರ ಅನುಭವನ್ನು ತಂದಿತು ಈ ಶಿಬಿರ. ಮೊದಲಾಗಿ ಪ್ರಕೃತಿಯ ಮಧ್ಯದಲ್ಲಿ, ಪಕ್ಷಿಗಳ ಕಲರವಗಳ ಮಧ್ಯದಲ್ಲಿ...ತಂಪು ಹುಲ್ಲಿನ ಮೇಲೆ ಕುಳಿತು ಬಿಡಿಸುವ ಅನುಭವವನ್ನು ಜೀವಮಾನದಲ್ಲಿ ಮರೆಯಲಾರೆ...ಅಲ್ಲದೆ ಕಲೆಯ ಬಗ್ಗೆ ಕುತೂಹಲದಿಂದ, ಅಭಿಮಾನದಿಂದ ಇಣುಕಿ ನಾಡಲು ಬಂದ ಕೆಲವೇ ಕಲಾಪ್ರಿಯರೂ ನನ್ನಲ್ಲಿ ಉತ್ಸಾಹ ತುಂಬಿದರು. ಅದರಲ್ಲೂ ಒಬ್ಬ ಪೋರ " ನನಗೆ ಎಲ್ಲಾ ಚಿತ್ರಕಿಂತಲೂ ಈ ಬುದ್ಧ ಬಹಳ ಹಿಡಿಸಿದನು" ಎಂದಾಗ ನನ್ನ ಪ್ರಯತ್ನ ಸಾರ್ಥಕವಾಯಿತೆಂದು ಅನಿಸದೇ ಹೋಯಿತೇ! ಮತ್ತೊಬ್ಬ ಮಹಿಳೆ ನನ್ನ ಬಳಿಯೇ ಕುಳಿತುಕೊಂಡಿದ್ದಳು....ಬಹುಶಃ ಊಟಕ್ಕೂ ಹೋಗದೇ....ಅವಳು ನನ್ನ ಗುರುಗಳಾದ ಬಿ ಜಿ ಮೊಹಮ್ಮದರ ಬಳಿ ಬಹಳ ಕಾಲ ಕಲಿತಿದ್ದಳೆಂದು ಹೇಳಿಕೊಂಡಳು. ಮತ್ತೊಂದು ಚಿಕ್ಕ ಮಗು " ಅಪ್ಪಾ, ನೋಡು...ಅಲ್ಲಿರುವ ಪ್ರತಿಮೆಯನ್ನೇ ಆಕೆ ಬಿಡಿಸುತ್ತಿದ್ದಾರೆ...ನೋಡಪ್ಪಾ." ಎಂದಾಗ ನನ್ನ ಹೃದಯ ತುಂಬಿ ಬಂದಿತು..ಅಲ್ಲಿದ್ದ ಬುದ್ಧನ ಪ್ರತಿಮೆಯನ್ನು ನನ್ನ ಚಿತ್ರಕ್ಕೆ ಹೋಲಿಸುವಷ್ಟೂ ಪ್ರಾಯವಲ್ಲ ಮಗುವಿದು. ಆದರೆ ನಮ್ಮ ಶಿಬಿರದ ೧೨ಮಂದಿ ಕಲಾಕಾರರಲ್ಲಿ ಏಕತೆಯಿರಲಿಲ್ಲ...ನಾನಂತೂ ಇದ್ದುದರಲ್ಲಿ ಹೆಚ್ಚಿನ ಪ್ರಾಯದವಳು ಅಲ್ಲದೆ ಕನಿಷ್ಟ ಅರ್ಹತೆಯುಳ್ಳವಳು. ನನಗಿಂತ ಒಂದೆರಡು ವರುಷ ಚಿಕ್ಕವಳಗಿರುವ ವೀಣಾ ಮತ್ತು ಲಕ್ಷ್ಮಿ ಎಲ್ಲರೊಡನೆ ಒಂದಾಗಿ ಬೆರೆಯುತ್ತಿದ್ದರು... ಅತೀ ಹೆಚ್ಚಿನ ಅರ್ಹತೆಯುಳ್ಳ ವೀಣಾ ತಮ್ಮ ಭೂಮಿ ತೂಕದ ನಡವಳಿಕೆಯಿಂದ ನನ್ನ ಮನವನ್ನು ಗೆದ್ದರು. ಅಲ್ಲಿರುವ ನಮ್ಮ ಚಾವಡಿಯ ಕೆಲ ಪುರುಷರು ಎಲ್ಲಾ ಮಹಿಳೆಯರ ಬಳಿ ಹೋಗಿ ಪ್ರೋತ್ಸಾಹದ ಮಾತುಗಳಿಂದ ಹುರಿದುಂಬಿಸುತ್ತಿದ್ದರು! ಅದ್ಯಾಕೆ ಹೆಣ್ಣು ಮಕ್ಕಳು ತಮಗಿರುವ ಮಾತ್ಸರ್ಯದ ಅಪವಾದ ಹಾಳಬಾರದಂತೆ ನಡಕೊಳ್ಳುತ್ತಾರ್ಯಾಕೋ? ಅಲ್ಲಲ್ಲ ಮಾತ್ಸರ್ಯವಲ್ಲ...ಮತ್ತೇನೋ...ಮಾತನಾಡಲು ಅಷ್ಟೊಂದು ಉತ್ಸಾಹವಿಲ್ಲ...ತಮ್ಮ ಕೆಲಸ ಪೈಂಟಿಂಗ್ ಮಾಡುವುದು..ಹೊರತು ಉಳಿದವರ ಬಳಿ ಮಾತ್ಯಾಕೆ? ಕತೆಯಾಕೆ? ಇನ್ನು ಕೆಲವರು ಎರಡು ದಿನದ ಕೆಲಸವನ್ನು ಒಂದರ್ಧ ಗಂಟೆಯಲ್ಲಿ ಮುಗಿಸಿದರು! ಅಯ್ಯೋ ರಾಮ! ನನಗಂತೂ ಢವಢವ..ನನ್ನ ಕೆಲಸ ಮುಗಿಯದೇ ಮರ್ಯಾದೆ ಹೋದಿತೇ? ಅಥವಾ ಎಲ್ಲಿ ಬಣ್ಣ ಹಾಕುವಾಗ ಹಾಳಾದಿತೋ ಎಂದು. ಕೊನೆಗೂ ನನ್ನ ಚಿತ್ರ ತುಂಬಾ ಅಂತಲ್ಲ..ಆದರೂ ಸರಿಸುಮಾರಾಗಿ ಬಂತು..ಅಂತೂ ಮೊದಲ ಸಲ ಒಂದು ಶಿಬಿರದ ಅನುಭವ ಪಡೆದೆ...
೩ನೇ ಫೆಬ್ರವರಿ , ಶುಕ್ರವಾರ ಸಂಜೆ ವೀಣಾ ಅವರ ದೂರವಾಣಿ...ಎಲ್ಲರೂ ತಮ್ಮ ತಮ್ಮ ಕಲಾಕೃತಿಯನ್ನು ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ತಂದೊಪ್ಪಿಸಿದ್ದಾರೆ..ನೀನು ಮಾತ್ರ ತಂದಿಲ್ಲವೆಂದು..ಅರೇ....ನನಗೆ ಈ ವಿಷಯವೇ ತಿಳಿದಿರಲಿಲ್ಲವೆಂದಾಗ, ಸರಿ ಮರುದಿನ ಬೆಳಿಗ್ಗೆ ೮ಗಂಟೆಯೊಳಗೆ ತಂದೊಪ್ಪಿಸಬೇಕೆಂದರು. ಅಯ್ಯೋ, ಮೊದಲೇ ಸಿದ್ಧ ಪಡಿಸಿದ್ದ ನನ್ನ ಮರುದಿನ ಬೆಳಿಗ್ಗಿನ ನಕಾಶೆಯಲ್ಲಿ ಈ ಹೊತ್ತಿನಲ್ಲಿ ಬದಲಾವಣೆ!!! ೧ ಗಂಟೆಯ ಹೊಂದಾಣಿಕೆ!!!! ಹಾಗಾದರೆ ಎಷ್ಟು ಹೊತ್ತಿಗೆ ಏನಾಗಬೇಕೆಂಬ ಪ್ಲಾನು ಮತ್ತೊಮ್ಮೆ ತಲೆಯಲ್ಲಿ ಮಥಿಸಲು ಶುರುವಾಯಿತು. ಯಾಕೆಂದರೆ ಆದಿತ್ಯವಾರ ಬೆಳಗಿನ ಉಪಹಾರಕ್ಕೆಂದು ದೋಸೆ ಹಿಟ್ಟುಸಹ ನಾನು ಹೊರಡುವ ಮೊದಲು ಮಧ್ಯಾಹ್ನದ ಊಟದ , ಬೆಳಿಗ್ಗಿನ ಉಪಹಾರದ ತಯಾರಿಯೊಂದಿಗೆ ನಡೆಯ್ಬೇಕು...ಮನೆ ಗುಡಿಸಬೇಕು. ಬಟ್ಟೆ ಸಂಜೆ ಬಂದಮೇಲೆ.....ಯಾಕಪ್ಪಾ ನನಗಿದೆಲ್ಲಾ..ಸುಮ್ಮನೆ ಕಲೆಗಿಲೆ..ನನ್ನಿಂದಾದಿತೇ ಎಂದೂ ಮನಸ್ಸಿಗೆ ಬಂತು...ಆದರೂ ಆದಷ್ಟು ಬೇಗನೆ ಎದ್ದು ಗಡಿಯಾರದೊಂದಿಗೆ ನನ್ನ ಓಟ ಪ್ರಾರಂಭವಾಯಿತು....ನೆನೆದಂತೆ ೮ಕ್ಕೆ ಮನೆಯಿಂದ ಹೊರಬಿದ್ದೆ.... ಮರೆತೇ ಬಿಟ್ಟಿದ್ದೆ...ಬಂದ ಅತಿಥಿಗಳಿಗೆ ಕೊಡಬೇಕೆಂದು ನೆನಪಿನ ಕಾಣಿಕೆ ಕೂಡ ತರಬೇಕೆಂದು ವೀಣಾ ತಿಳಿಸಿದಾಗ ನನ್ನೆದೆ ಜೋರಾಗಿ ಹೊಡೆದು ಕೊಡಲು ಶುರುಮಾಡಿತು. ಹೇ ರಾಮ್ ನನಗ್ಯಾಕೆ ಈ ರೀತಿ ಶಿಕ್ಷೆಯನ್ನು ಕೊಡುವಿಯಾ! ಇನ್ನೂ ಎಷ್ಟು ಪರೀಕ್ಷೆಗಳಿವೆಯೋ..ಅಪ್ಪಾ ಎಲ್ಲವೂ ನಿನ್ನ ಇಚ್ಛೆಯಂತಾಗಲಿ ಎಂದು ವೀಣಾನ ಬಳಿ ನಡುಗುವ ಸ್ವರದಿಂದ ನನಗೆ ಈ ವಿಷಯಗಳೇನು ಹೇಳಿಲ್ಲವೆಂದಾಗ..ಪರವಾಗಿಲ್ಲ..ಹೇಗು ನಾವೆಲ್ಲಾ ಕೊಡುತ್ತೇವಲ್ಲವಾ ಅಂದರು. ಬಚಾವ್ ಆದೆ.
ಸರಿ ಶುಕ್ರವಾರ ರಾತ್ರಿ ಮಲಗಿದವಳಿಗೆ ನಾಳಿನ ಚಿತ್ರ ಬಿಡಿಸುವಿಕೆಗಿಂತಲೂ ಬೆಳಗ್ಗಿನ ಸಮಯದ ಹೊಂದಾಣಿಕೆಯ ಬಗ್ಗೆ ಯೋಚನೆ...ಅಂತೂ ಮಲಗಿದಲ್ಲೇ ಒಂದು ಟೈಮ್ ಟೇಬಲ್ ತಯಾರಾಯಿತು. ಯಾವಾಗಲೂ ರಾತ್ರಿ ಸತ್ತು ಮತ್ತೊಮ್ಮೆ ಬೆಳಗೆ ಜೀವ ಪಡೆಯುವವಳಾದ ನಾನು ಆ ರಾತ್ರಿ ಸಾಯಲೇ ಇಲ್ಲ...ಮಂಪರು ನಿದ್ರೆಯಲ್ಲೇ ಕಳೆದೆ..ಬೆಳಗಿನ ಜಾವ ನಾಲ್ಕಕ್ಕೆ ಅಲರಾಮ್ ನಿಷ್ಠೆಯಿಂದ ಗಲಾಟೆ ಮಾಡುವಾಗ...ಏಳಲೇಬೇಕಲ್ಲವ...ರೆಪ್ಪೆಗಳು ಗಟ್ಟಿಯಾಗಿ ಕಣ್ಣನ್ನು ತಬ್ಬಿ ಕೊಂಡಿದ್ದವು..ಮುಷ್ಕರ ಮಾಡಿಕೊಂಡಿದ್ದವು...ಇನ್ನೊಂದು ಭಾನುವಾರ ೭.೩೦ ತನಕ ನಿಮ್ಮನ್ನು ಅಗಲಿಸುವುದಿಲ್ಲ ಎಂದು ಪ್ರಾಮಿಸ್ ಸಿಕ್ಕಿದ ಮೇಲೆಯೇ ನಾನು ಸೀದಾ ಅಡುಗೆ ಕೋಣೆಗೆ ಹೋಗಲಿಕ್ಕೆ ಬಿಟ್ಟದ್ದು. ಒಂದು ಕಣ್ಣು ಗಡಿಯಾರ ಮೇಲಿಟ್ಟು ಉಡುಪಿ ಎಕ್ಸಪ್ರೆಸ್ಸ್ ಬಸ್ಸಿನಂತೆ ಓಟ ಪ್ರಾರಂಭವಾಯಿತು! ಮಧ್ಯ ಮಧ್ಯ ದಲ್ಲಿ ಸುಸ್ತು...ನನಗೆ ಬೇಡವಿತ್ತಪ್ಪಾ ಈ ಆರ್ಟ್ ಶಿಬಿರ!!! ಅಂತೂ ನನ್ನೆಣಿಕೆಯಂತೆ ಸ್ನಾನಕ್ಕೆ ಹೊರತಾಗ ೭.೪೫..ಈ ದಿನ ಮಕ್ಕಳ ಕೈಯಿಂದ ಬಚಾವ್...ಯಕೆಂದರೆ ಇಬ್ಬರಿಗೂ ಕಾಲೆಜಿ ಹೋಗಬೇಕಿದ್ದ ಕಾರಣ ಹೆಚ್ಚಿನ ತೊಂದರೆ ಇರಲಿಲ್ಲ..ಆದರೂ ನಾಳೆಗೆ ಉಂಟು ಇವರಿಂದ ನನಗೆ ಎಂದು ಕೊಳ್ಳುತ್ತಾ ಮೊದಲೇ ತಯಾಮಾಡಿಕೊಂಡಿದ್ದ ಪೈಂಟಿಂಗ್‌ಗಳನ್ನು ಪಕ್ಕದ ಮನೆಯವರ ಸಹಾಯದಿಂದ ರಿಕ್ಷಾಗೆ ಹಾಕಿಸಿ ಗಾಂಧಿ ಪಾರ್ಕ್ ತಲುಪಿದೆ.
No comments:
Post a Comment