ಮೈಯೆಲ್ಲಾ ಪುಳಕ! ಮೊದಲ ಬಾರಿಗೆ ಸಾರ್ವಜನಿಕರ ಎದುರು ನನ್ನ ಕಲೆ ಅನಾವರಣಗೊಳ್ಳಲಿದೆ....ಹೇಗಾಗುವುದೋ ಏನೋ, ಮನಸಿನಲ್ಲಿ ಹತ್ತಾರು ಪ್ರಶ್ನೆಗಳು! ಅಂತೂ ಐದು ನಿಮಿಷದಲ್ಲಿ ಆಟೋನವನು ನನ್ನನ್ನು ನನ್ನ ಗಮ್ಯ ಸ್ಥಾನಕ್ಕೆ ತಲುಪಿಸಿದ. ಆದರೆ ವೇದಿಕೆಯ ತಯಾರಿ ನಿಧಾನವಾಗಿ ನಡೆದಿತ್ತು. ಕೊನೆಗೂ ಕಾರ್ಯಕ್ರಮ ಪ್ರಾರಂಭವಾಗುವಾಗ ೧೦ ಗಂಟೆ ದಾಟಿತ್ತು. ನನ್ನ ಕೈಗೆ ಆಹ್ವಾನ ಪತ್ರಿಕೆ ಸಿಕ್ಕಿದ್ದು ತಡವಾಗಿ! ಅದರಲ್ಲಿದ್ದ ಉದ್ಘಾಟಕರ, ಅತಿಥಿಗಳ ಹೆಸರುಗಳನ್ನು ನೋಡಿಯೇ ದಂಗಾಗಿಹೋಗಿದ್ದೆ.. ಈಗ ಅಲ್ಲಿದ್ದ ಪತ್ರಕರ್ತರು ಮತ್ತು ಕೆಮರಾಗಳನ್ನು ನೋಡಿ ಮೂಕಳಾಗಿ ಬಿಟ್ಟೆ..ವರ್ಣ ವನಿತೆಗೆ ಎಂತಹ ಪ್ರಚಾರ..ದುರಾದೃಷ್ಟದಿಂದ ಜನರ ಉಪಸ್ಥಿತಿ ಬಹಳ ಕಮ್ಮಿಯಿತ್ತು. ನನ್ನ ಅನುಭವಕ್ಕೆ ಬಂದ ಹಾಗೆ ನಮ್ಮೂರಿನಲ್ಲಿ ಕಲೆಯ ಬಗ್ಗೆ ಅನಾದರ ಹೆಚ್ಚು..ಮಂಗಳೂರಿನ ಜನರು ವ್ಯಾಪಾರಕ್ಕೆ, ಅಂತಸ್ತಿಗೆ, ಧನ ಬಲಕ್ಕೆ ಹೆಚ್ಚು ಬೆಲೆ ಕೊಡುವವರು. ಈಗೀಗ ತಮ್ಮ ಮಕ್ಕಳನ್ನು ಕಲೆಗೆ ಸಂಬಂಧಪಟ್ಟ ತರಗತಿಗೆ ಕಳುಹಿಸುವವರಾದರೂ ಅದೂ ಕೂಡಾ ವ್ಯಾಪಾರ ದೃಷ್ಟಿಯಿಂದಲೇ!!
ಉದ್ಘಾಟಕರಾದ ವನಿತಾಜಿ ಪೈಯವರು ರೇಷ್ಮಾ ಅವರು ರಚಿಸಿದ ಕೊಲಾಜ್ ಮಹಿಳೆಯ ಹಣೆಗೆ ತಿಲಕವಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು! ರಾಜಲಕ್ಷ್ಮಿ ಅವರು ಕನ್ನಡದಲ್ಲಿ ಮಹಿಳೆಯ ಪಾತ್ರದ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದರು....ಮರಗಿಡಗಳು ಬೆಳೆದಂತೆಯೇ ತಮ್ಮ ಮೂಲಸ್ವರೂಪವನ್ನೆ ತೋರುತ್ತವೆ...ಪ್ರಕೃತಿಯ ಏಳಿಗೆಗೆ ತಮ್ಮ ದೇಣಿಗೆಯನ್ನು ಕೊಡುತ್ತವೆ ಆದರೆ ಮಾನವ ಬೆಳೆದಂತೆಯೇ ಮಾನವನಾಗುತ್ತಾನೆಯೇ! ಲೋಕನಾಶಕ್ಕೆ ಕಾರಣ ವಾಗುತ್ತಾನೆ, ಸ್ವಾರ್ಥದಿಂದ ಪ್ರಕೃತಿಗೆ ಕಂಟಕಗಳ ಸರಮಾಲೆಯನ್ನೇ ಕೊಡುತ್ತಾನೆ. ವಿದ್ಯಾ ದಿನಕರ್ ಅವರೂ ಮಂಗಳೂರಿನ ರಸ್ತೆಯ ಅವ್ಯವಸ್ತೆ, ಇತ್ಯಾದಿಗಳ ಬಗ್ಗೆ ಮಾತನಾಡುತ್ತ ಪಾರ್ಕಿನ ಉದ್ಧಾರಕ್ಕೆ ಕಾರಣಕರ್ತರಾದವರನ್ನು ನೆನಪಿಸಿಕೊಂಡರು. ವನಿತಾ ಪೈಯವರು ತಮ್ಮ ಚಿಕ್ಕ ಚೊಕ್ಕ ಮಾತಿನಲ್ಲಿ ಕಾರ್ಯಕ್ರಮ ನಿರ್ವಾಹರನ್ನು ಅಭಿನಂದಿಸಿದರು.
ಅಂತೂ ೧೧ಕ್ಕೆ ನಮ್ಮ ಕೆಲಸ ಪ್ರಾರಂಭವಾಯಿತು. ಮಾಡುತ್ತಿದ್ದಂತೆಯೇ ಅಲ್ಲಲ್ಲಿ ಪತ್ರಕರ್ತರು ಮಹಿಳೆಯರ ಗಳಿ ನಿಂತು ಅವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಅವರ ಕೆಲಸ, ಅವರ ಕಲಿಕೆ ಆಸಕ್ತಿ....ಇತ್ಯಾದಿ ಇತ್ಯಾದಿ... ಕೆಲ ಪತ್ರಕರ್ತರಿಗೆ ಕಲೆಯ ಬಗ್ಗೆ ತಿಳಿದಿರಲಿಲ್ಲ...ಸಾಂಪ್ರದಾಯಿಕ, ಅಮೂರ್ತ, ಕೊಲಾಜ್, ಹೀಗೆ ಅನೇಕ ಕಲೆಯ ಭಿನ್ನ ಆಯಾಮಗಳ ತಿಳುವಳಿಕೆಗಳನ್ನು ಪಡೆಯುತ್ತಿದ್ದರು. ಸುವರ್ಣ, ನಮ್ಮ, ದೈಜಿ, ಮಾಂಗಲೂರಿಯನ್.ಕಾಮ್, ಮೊದಲಾದ ಅನೇಕ ವಾಹಿನಿಯವರು, ಹೆಸರಾಂತ ಪತ್ರಿಕೆಯವರು ಬಂದಿದ್ದರು. ಹಾಗೆಯೆ ಮಧ್ಯಾಹ್ನದ ಹೊತ್ತಿಗೆ ನನ್ನ ಬಳಿ ವೀಣಾ ಅವರು ಅಕ್ಷತಾ ನಮ್ಮೆಲ್ಲ ಬಳಿ ಮಾತನಾಡಲು ಬಂದಿದ್ದಾಳ...ದಯವಿಟ್ಟು ಅವಳಿಗೆ ಬೇಕಾದ ಮಾಹಿತಿ ಕೊಟ್ಟು ಸಹಕರಿಸಿ ಎಂದರು..ಅಂತೆಯೇ ನನ್ನ ಜಾಗಕ್ಕೆ ಬರುವಾಗ ಅಕ್ಷತಾ ಅಲ್ಲಿಯೇ ಕುಳಿತಿದ್ದಳು..ಕಾಕತಾಳೀಯವಾಗಿ ನನ್ನದು ಮೊದಲನೆಯ ಸಂದರ್ಶನವಾಯಿತು..ಯಾವುದೇ ಹೆಚ್ಚಿನ ತರಬೇತಿ ಪಡೆಯದ, ಸುಮಾರು ಇಪ್ಪತ್ತು ವರ್ಷಗಳ ಅನಂತರ ತನ್ನ ಹೃದಯದ ಕರೆಗೆ ಓಗೊಟ್ಟು ಕಲಾಜೀವನಕ್ಕೆ ಹಿಂದಿರುಗಿದ ನನ್ನ ಕತೆ ಅವಳಿಗೆ ವಿಚಿತ್ರವಾಗಿ ಕಂಡಿತ್ತು. ನನ್ನ ಓಗೆರೆಯವರು ಇನ್ನೂ ಈ ಅಂತರ್ಜಾಲ ಕ್ಷೇತ್ರದಲ್ಲಿ ಅ ಆ ...ಕಲಿಯುತ್ತಿರುವಾಗ ನಾನು ಸ್ವಪ್ರಯತ್ನದಿಂದ ೨೦೦೪ರಿಂದ ಇಂಟರ‍್ನೆಟ್ ಲೋಕದಲ್ಲಿ ಜಾಲಾಡಿ ಮಾಹಿತಿಗಳನ್ನು ಶೇಖರಿಸಿ ಅದರಿಂದ ಕಲೆಯನ್ನು ಉತ್ತಮಪಡಿಸಿದೆನೆಂದಾಗ ಅವಳಿಗೆ ಆಶ್ಚರ್ಯ! ನಿಮ್ಮಲ್ಲಿ ತನಗೆ ತುಂಬಾ ಮಾತನಾಡಲಿದೆಯೆಂದು ನನ್ನ ದೂರವಾಣಿಯ ಅಂಕೆಯನ್ನು ತೆಗೆದುಕೊಂಡಳು. ಸರಿ , ನಾನು ಕೊಟ್ಟೆ. ಆದರೆ ದೇವರಾಣೆಗೂ ಆಕೆ ನನ್ನ ಸಂದರ್ಶ ತೆಗೆದು ಕೊಳ್ಳಲು ಬರುವಳೆಂದು ಅಂದುಕೊಂಡಿರಲಿಲ್ಲ.....
ಸಂಜೆ ಜನ ಸಂದಣಿ ಹೆಚ್ಚಿತ್ತು..ಪಾರ್ಕಿಗೆ ಆಡಲು ಬರುವ ಮಕ್ಕಳು, ನಿತ್ಯವೂ ವಾಕ್‌ಗೆ ಬರುವ ದಂಪತಿಗಳು, ಸ್ನೇಹಿತೆಯರು ಕುತೂಹಲದಿಂದ ಹತ್ತಿರ ಬಂದು ಇಣಿಕಿ ಹೋದರು. ಹೆಚ್ಚಿನವರಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರಲಿಲ್ಲ....ಆದರೂ ಕೆಲ ಸಹೃದಯದ ಕೆಲವರು ಪ್ರೋತ್ಸಾಹದ ಮಾತುಗಳಿಂದ ವನಿತೆಯರನ್ನು ಕುಶಿ ಪಡಿಸಿದರು. ಅಲ್ಲಿ ಆಡುತ್ತಿದ್ದ ಮಕ್ಕಳು ಬಂದು ಕಲೆಯನ್ನು ಆಹ್ವಾದಿಸಿ ಆನಂದ ಪಟ್ಟರು..ಕಮೆಂಟು ಉದುರಿಸಿದರು! ಅವರ ಕಮೆಂಟು ನೇರವಾಗಿತ್ತು..ಕಪಟವಿರಲಿಲ್ಲ, ತೋರಿಕೆಯದಾಗಿರಲಿಲ್ಲ...ಏನೋ ಬಹುಶಃ ನನಗೆ ಮಕ್ಕಳ ಮೇಲಿರುವ ಅತಿಯಾದ ವಾತ್ಸಲ್ಯದಿಂದಲೋ ಏನೋ, ಈ ಬಾಲರ ಮಾತುಗಳು ಹಿತವಾಗಿ ತೋರಿತ್ತು. ಹಾಂ, ಮರೆತಿದ್ದೆ..ನಮ್ಮ ಚಾವಡಿಯ ಸದಸ್ಯರೂ ಆಗಮಿಸಿ ಎಲ್ಲರ ಬಳಿ ನಿಂತು ಸಲಹೆ, ಪ್ರೋತ್ಸಾಹ ಕೊಡುವ ದ್ರಶ್ಯ ಮನ ಪಟಲದಲ್ಲಿ ಭದ್ರವಾಗಿ ಕುಳಿತಿದೆ..ಜುಟ್ಟು ಹಾಕಿದ, ಪತ್ರಿಕೆಗಳಲ್ಲಿ ಮಾತ್ರನೋಡಿದ ಪರಿಚಿತರೊಬ್ಬರನ್ನು ನೋಡಿ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ....ನನ್ನ ಬಾಯಿಯಿಂದ ಅಪ್ರಯತ್ನವಾಗಿ ಹೊರಬಿತ್ತು " ಪುರುಷೋತ್ತಮ ಅಡ್ವೆ!" ಎಲ್ಲರೂ ನಕ್ಕರು..ಅವರ ಜುಟ್ಟು ಅವರ ಗುರುತೆಂದು ಭಾವಿಸಿ..ಆದರೆ ನನ್ನ ಚಿತ್ತದಲ್ಲಿ ಅವರ ಕೃಷ್ಣನ ಚಿತ್ರಣ ಹಾಗೂ ಅವರ ಬಗ್ಗೆ ಓದಿದ ಲೇಖನ ಅವರ ಗುರುತನ್ನು ಸುಲಭವಾಗಿ ಕಂಡು ಹಿಡಿದಿತ್ತು. ಈ ಕ್ಯಾಂಪು ನನಗೆ ನಮ್ಮಲ್ಲಿನ ಅತ್ಯುತ್ತಮ ಕಲಾಕಾರರನ್ನು ಹತ್ತಿರದಿಂದ ನೋಡುವ ಸುವರ್ಣಾವಕಾಶ ಒದಗಿಸಿತ್ತು.
ಅಂತೂ ಮೊದಲನೆಯ ದಿನ ಕಳೆಯಿತು....ಮರುದಿನ ಆದಿತ್ಯವಾರ, ಬೇಗನೇ ಎದ್ದು ದೋಸೆಗಳನ್ನು ತೆಗೆದು ಚಟ್ನಿ ತಯಾರಿಸಿ ಲೆಕ್ಕ ಹಾಕಿದಂತೆ ಮಾಡುವ ಕೆಲಸ ಮಾಡಿ, ೯.೦೦ಕ್ಕೆ ಗಾಂಧಿ ಪಾರ್ಕ್ ತಲುಪಿದೆ. ಆದಿತ್ಯವಾರವಾದುದರಿಂದ ಅಲ್ಲೇ ಸುತ್ತಮುತ್ತ ಇದ್ದವರು, ಹಿಂದಿನ ದಿನ ಮಾಹಿತಿ ಸಿಕ್ಕಿದವರು ಬಂದು ಕುತೂಹಲದಿಂದ ವನಿತೆಯರ ಚಿತ್ರಗಳನ್ನು ನೋಡುತ್ತಿದ್ದರು. ಬಂಟ್ವಾಳದಿಂದ ನನ್ನ ಕಾಲೇಜಿನ ಭಾರತಿ ಮೇಡ್ಂ ತಮ್ಮ ಕೆಮರಾ ಹಿಡಕೊಂಡು ನನ್ನ ಚಿತ್ರ ತೆಗೆಯುತ್ತಿದ್ದಾರೆ..ಹೃದಯ ತುಂಬಿ ಬಂತು ಕದ್ರಿಯ ಕಲಾಮೇಳದಲ್ಲಿ ಅದು ಸಹ ೨೧ ವರುಷಗಳ ನಂತರ ಅವ್ರ ದರ್ಶನ...ಅಲ್ಲಿ ನಮ್ಮ ದೂರವಾಣಿಯ ಸಂಖ್ಯೆಗಳನ್ನು ಬದಲಾಯಿಸಿಕೊಂಡಿದ್ದೆವು.. ಆದುದರಿಂದ ನಮ್ಮ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಟ್ಟಿದ್ದೆ. ಬರಲು ಸಾಧ್ಯವಾಗಲಿಕ್ಕಿಲ್ಲ ಆದರೆ ತಮ್ಮ ಮತ್ತು ಕೆನರಾ ಕಾಲೇಜಿನ ಪ್ರಿನ್‍ಸಿಪಾಲರಾಗಲಿರುವ ತಮ್ಮ ಪತಿ ಇಬ್ಬರ ಆಶೀರ್ವಾದವು ನಿನ್ನ ಮೇಲಿದೆಯೆಂದು ನನಗೆ ದೂರವಾಣಿ ಮಾಡಿ ಹೇಳಿದ್ದರು. ಆದಾಗ್ಗಿಯೂ ಅವರು ಖುದ್ದ ಬಂದುದು ನನಗೆ ಬಹಳ ಸಂತಸ ತಂದಿತು. ನಮ್ಮ ವನಿತೆಯರ ಮಧ್ಯೆ ಅಷ್ಟೊಂದು ವಿಚಾರ ವಿನಿಮಯವಾಗದಿದ್ದರೂ ನನ್ನ ಕೆಲ ಸ್ನೇಹಿತರ ಆಗಮನವು ನನಗೆ ಸಹಸ್ರ ಭುಜಬಲವನ್ನು ಕೊಟ್ಟಿತೆಂದರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ! ..೧೨.೩೦ ಹೊತ್ತಿಗೆ ನನ್ನ ಉಮೇದು ಕಮ್ಮಿಯಾಗಿತ್ತು... ಎಲ್ಲರೂ ತಮ್ಮ ಪೈಂಟಿಂಗ್ ಮುಗಿಸಿದ್ದರು...ನನ್ನದೂ ಇನ್ನೂ ಕೆಲಸ ಉಳಿದಿತ್ತು..ಅಷ್ಟು ಹೊತ್ತಿಗೆ ಯಾಕೋ ತಲೆಯೆತ್ತಿ ನೋಡುವಾಗ...ಶೀಲಾ... ನನ್ನ ಬಾಯಿಯಿಂದ ಉದುರಿತು ಅಪ್ರಯತ್ನವಾಗಿ! ೨೧ ವರುಷಗಳ ನಂತರ ನಮ್ಮ ಭೇಟಿ!!! ಈ ದಿನ ನನ್ನ ಪಾಲಿಗೆ ಸುದಿನ...ಆಕೆ ಮತ್ತು ನಾನು ೮೯ರಲ್ಲಿ ಜೊತೆಯಾಗಿ ಬಿ ಜಿ ಎಮ್ ಗೆ ಹೋಗುತ್ತಿದ್ದೆವು. ಶೀಲಾ ಜೆ ಜೆ ಆರ್ಟ್ಸ್‌ನಲ್ಲಿ ಕಮರ್ಷಿಯಲ್ ಆರ್ಟ್‌ನಲ್ಲಿ ತರಬೇತಿಪಡೆದವಳಿದ್ದಳು...ಜೆ ಜೆ ನನ್ನ ಕನಸಾಗಿತ್ತು...ಹಾಗಾಗಿ ನನಗೆ ಅವಳು ಆದರ್ಶವಾಗಿದ್ದಳು...ಪೇಪರಿನಲ್ಲಿ ಅವಳ ( ನನ್ನ ) ಹೆಸರನ್ನು ನೋಡಿದ ನೆಂಟರಿಂದ ಫೋನ್ ಬಂದ ಕಾರಣ ಯಾರಪ್ಪಾ ತನ್ನ ಹೆಸರಿನವಳು ಚಿತ್ರಗಾರ್ತಿ! ಎಂದು ಕುತೂಹಲದಿಂದ ನೋಡಲು ಬಂದಿದ್ದೇನೆ ಎಂದಳು..ನನ್ನನ್ನು ನೋಡಿ ಆಶ್ಚರ್ಯಪಟ್ಟಳು...ಕುಂಚಗಳ ಜತೆಗಿನ ಸಂಬಂಧ ಕಡಿದಿರುವ ವಿಷಯ ತಿಳಿಸಿ ಚಕಿತಗೊಳಿಸಿದಳು...ಸರಿ ಇನ್ನು ಪೈಂಟಿಂಗ್ ಮುಂದುವರಿಸಲು ಇಚ್ಛೆಯಿರಲಿಲ್ಲ...ಮನೆಗೆ ಬರುವ ಆಶಯ ವ್ಯಕ್ತಪಡಿಸಿದಾಗ ಬಹಳ ಸಂತೋಷದಿಂದ ಕರೆದುಕೊಂಡು ಹೋಗಿ ನನ್ನ ಮಕ್ಕಳ ಪರಿಚಯ ಮಾಡಿಕೊಟ್ಟೆ. ಸರಿ ಇನ್ನು ಮುಂದೆ ಸಂಜೆಯ ಕಾರ್ಯಕ್ರಮ... ೩.೩೦ ಹೊತ್ತಿಗೆ ಹಾಜರಿ ಕೊಟ್ಟೆ. ೩.೪೫ಕ್ಕೆ ಪ್ರಾರಂಭವಾಗಬೇಕಿದ್ದ ಹರಿಕತೆ ಕಾರ್ಯಕ್ರಮ ಕೆಲ ಕಾರಣಗಳಿಂದ ತಡವಾಗಿ ಪ್ರಾರಂಭವಾಯಿತು...ಇನ್ನೂ ಎಳಸಾಗಿದ್ದರೂ ತನ್ನ ಸುಮಧುರ ಕಂಠದಿಂದ ನಯನ ಗೌರಿ ಅಲ್ಲಿ ನೆರೆದಿದ್ದ ವೀಕ್ಷಕರ ಮನಸೆಳೆದಳು. ಆದರೆ ತನ್ನ ಹಾಸ್ಯ ಮಾತುಗಳಿಂದ ಸಂಧ್ಯಾ ಶೆಣೈ ನೆರೆದಿದ್ದವರ ಹೊಟ್ಟೆಹುಣ್ಣಾಗುವಂತೆ ನಗಿಸಿದರು. ಅಂತೂ ವರ್ಣ ವನಿತಾ ಸ್ವಲ ದಿನಗಳ ಕಾಲ ಬಂದವರ ಮನದಲ್ಲಿ ಉಳಿಯುವ ವಿಚಾರದಲ್ಲಿ ಸಂಶಯವಿಲ್ಲ!
No comments:
Post a Comment