ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
28 November, 2012
ವಲ್ವಲ್(ಅಡುಗೆ)
ತೆಂಗಿನಕಾಯಿಯ ರಸದಿಂದ ಮಾಡುವ ಈ ಪದಾರ್ಥ ಹೆಚ್ಚು ಖಾರವಿರುವುದಿಲ್ಲ. ಬಹಳಷ್ಟು ತರಕಾರಿಗಳನ್ನು ಬಳಸುವುದರಿಂದಲೂ, ತುಪ್ಪದಲ್ಲಿ ಜೀರಿಗೆ ಮತ್ತು ಸಾಸಿವೆ ಒಗ್ಗರಣೆ ಕೊಡುವುದರಿಂದಲೂ ಆರೋಗ್ಯಕ್ಕೂ ಒಳ್ಳೆಯದು. ಕೆಲವರಿಗೆ ತೆಂಗಿನಕಾಯಿಯ ಹಾಲಿನಿಂದ ಸ್ವಲ್ಪ ಅಮಲು ಬರುವುದೆಂದು ಕೇಳಿದ್ದೇನೆ. ನನಗೂ ನನ್ನ ಮಕ್ಕಳಿಗೂ ಆ ಅನುಭವ ಸಿಕ್ಕಿಲ್ಲ.
ಸಾಮಾಗ್ರಿಗಳು
ತೆಂಗಿನಕಾಯಿ-೧
ತರಕಾರಿ- ಕುಂಬಳ ಕಾಯಿ, ಚೀನಿಕಾಯಿ, ಅಲಸಂಡೆ, ಗೆಣಸು...ಇತ್ಯಾದಿ
ಹಸಿರು ಮೆಣಸಿನಕಾಯಿ- ೩,೪
ಅಲಂಕಾರಕ್ಕೆ ಮತ್ತು ರುಚಿಗೆ- ದ್ರಾಕ್ಷೆ ಮತ್ತು ಗೇರು ಬೀಜ
ಕರಿಬೇವು- ೬,೭ ಎಲೆ
ಜೀರಿಗೆ- ೧/೨ ಚಮಚ
ತುಪ್ಪ- ೨ಚಮಚ
ತೆಂಗಿನಕಾಯಿ ತುರಿದು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಹಾಲನ್ನು ಹಿಂಡಿ ತೆಗೆಯಿರಿ. ಈ ದಪ್ಪ ಹಾಲನ್ನು ದೊಡ್ಡ ಪಾತ್ರೆಯಲ್ಲಿ ಹಾಕಿರಿ. ಈಗ ಮತ್ತೊಮ್ಮೆ ಪಾತ್ರೆಗೆ ನೀರನ್ನು ಹಾಕಿ ಬಟ್ಟೆಯಲ್ಲಿದ್ದ ರುಬ್ಬಿದ ತೆಂಗಿನ ತುರಿಯನ್ನು ಮತ್ತೊಮ್ಮೆ ಅದ್ದಿ ಹಿಂಡಿರಿ. ಆ ತೆಳು ನೀರನ್ನು ಹಾಗೆ ಕಾದಿರಿಸಿ.
ತರಕಾರಿಗಳನೆಲ್ಲ ಉಪ್ಪುನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ದೊಡ್ಡ ದೊಡ್ಡ ಹೋಳುಗಳನ್ನಾಗಿ ತುಂಡು ಮಾಡಿ ಕುಕ್ಕರಿನಲ್ಲಿ ಬೇಯಿಸಿ. ಈ ಹೋಳುಗಳನ್ನು ದಪ್ಪ ತೆಂಗಿನ ಕಾಯಿಯ ಹಾಲಿನಲ್ಲಿ ಹಾಕಿ ಕುದಿಯಲು ಗ್ಯಾಸಿನ ಮೇಲೆ ಇಡಿರಿ. ಹಸಿರು ಮೆಣಸಿನಕಾಯಿಯನ್ನು ಅಡ್ಡ ಸೀಳಿ ಅದರಲ್ಲಿ ಸೇರಿಸಿ. ರುಚಿಗೆ ತಕ್ಕಷ್ಟು ತಕ್ಕಷ್ಟೇ ಉಪ್ಪು, ಸಕ್ಕರೆ ಹಾಕಿ. ತೆಳ್ಳನೆಯ ಹಾಲಿಗೆ ಕೋರ್ನ್ ಫೋರ್ಲ್ ಅಥವಾ ಮೈದಾ ( ೪ ಚಮಚ) ಹಾಕಿ ಚೆನ್ನಾಗಿ ಗುಳಿ ಬರದ ಹಾಗೆ ಕಲಸಿ. ನಂತರ ಇದನ್ನು ಕುದಿ ಬರುತ್ತಿರುವ ಪದಾರ್ಥಕ್ಕೆ ಸೇರಿಸಿ. ದಪ್ಪವಾಗಿ ಬರುತ್ತಿದ್ದ ಹಾಗೆ ಗ್ಯಾಸನ್ನು ಆಫ್ ಮಾಡಿ. ಗೇರುಬೀಜ ಮತ್ತು ದ್ರಾಕ್ಷೆ ಹಣ್ಣನ್ನು ಸೇರಿಸಿ. ಈಗ ಸಣ್ಣ ಕಾವಲಿಯಲ್ಲಿ ತುಪ್ಪ ಬಿಸಿ ಮಾಡಲು ಇಡಿರಿ. ಸಾಸಿವೆ ಹಾಕಿ. ಅದು ಸಿಡಿಯುತ್ತಿರುವಾಗ ಜೀರಿಗೆ, ಕರಿಬೇವು ಸೇರಿಸಿ. ಸೌಟಿನಿಂದ ಒಮ್ಮೆ ಆಚೆ ಈಚೆ ಮಾಡಿ ಒಗ್ಗರಣೆಯನ್ನು ಪದಾರ್ಥಕ್ಕೆ ಹಾಕಿ ಬಿಡಿ.
Subscribe to:
Post Comments (Atom)
1 comment:
ನೋಡಿದಾಗ ಅವಿಯಲ್ ಸೋದರೀ ಅನ್ನಿಸ್ತು .ಚೆನ್ನಾಗಿದೆ
Post a Comment