ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 December, 2014

ರಾಧೆಯ ಪತ್ರ..

ಕೃಷ್ಣ,

ಸೂಜಿ-ದಾರದ ಹಂಗಿಲ್ಲದ ನಮ್ಮೀ ಬಂಧ
ಜತೆಯಿರದೆಯೂ ಜತೆಗೆ ಉಳಿದ ಸಂಬಂಧ..

ಸಪ್ತಪದಿಯ ನಡೆಯಿಲ್ಲ, ಮಂತ್ರ ಘೋಷವಿಲ್ಲದ ಬಂಧ..
ಯುಗಯುಗದಲೂ ಮರಳುವ ಅನುಬಂಧ..

ಪಾರಿಜಾತದ ಘಮದಲಿ ಮಿಂದೇಳುವ ಒಲವು..
ಮುರಳಿಯ ನಾದದಲಿ ನಲಿಯುವ ಒಲವು..

ರಂಗಿನ ಗರಿಯ ಒಲುಮೆಯ ನೋಟದ ಕಚುಕುಳಿಯು..
ನಿನ್ನೀ ರಾಧೆಗೆ ಅದೇ ನೂರಾನೆಗಳ ಬಲವು!

29 December, 2014

ಮುಂಜಾವು!

ನಭದರಮನೆಯ ಹೆಬ್ಬಾಗಿಲನು ಮುಂಜಾವು ತೆರೆದಳು..


ಬುವಿಯ ಗವಾಕ್ಷಿಗಳಲ್ಲಿರಿಸಿದ ಹಣತೆಗಳು ಬೆಳಗಿದವು!

ಸುಭಾಷಿತ

ಆದಿತ್ಯಚಂದ್ರಾವನಲಾನಿಲೌ ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ|
ಅಹಶ್ಚ ರಾತ್ರಿಶ್ಚ ಉಭೆ ಚ ಸಂಧ್ಯೆ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್||

ಸೂರ್ಯ-ಚಂದ್ರ, ಅಗ್ನಿ-ವಾಯು, ಆಕಾಶ-ಭೂಮಿ, ನೀರು, ಮನಸ್ಸು ಮತ್ತು ಯಮ, ಹಾಗೆಯೇ ದಿನ-ರಾತ್ರಿ, ಮುಂಜಾವು-ಮುಸ್ಸಂಜೆ ಮತ್ತು ಧರ್ಮವು ಮಾನವನ ಆಚರಣೆಯನ್ನು (ವರ್ತನೆಯನ್ನು) ತಿಳಿಯುತ್ತದೆ.

-ಮಹಾಭಾರತ

24 December, 2014

ಒಲವೇ, ನಿನ್ನಿರುವೇ ನನ್ನ ಬಾಳಿಗಾಧಾರ!

ಪ್ರೀತಿ, ಪ್ರೇಮ, ಒಲವು, ಅನುರಾಗ, ಒಲುಮೆ..
ಹೀಗೆ ಹೆಸರುಗಳು ಒಂದೇ ಎರಡೆ, ನೂರಾರು..
ಮುಖವಾಡಗಳು ಹಲವಾರು;

ಒಲವೇ,

ನೀನೋ ಕಲ್ಪನೆಗೂ ನಿಲುಕದವನು..
ಹೆಸರನೂ ಮೀರಿದವನು..
ಕೈಯಳತ್ತಲೇ ಸುತ್ತುತ್ತಾ ಹಿಡಿಯಲು ಸಿಗದೇ ಮರೆಯಾಗುವವನು..
ಸಂಭೋದನೆಯ ಅಳತೆಗೂ ಒಡಪಡದವನೇ
ನಡೆ, ನೀನೆಲ್ಲಿರುವಿಯೋ ನನ್ನನ್ನೂ ಒಯ್ಯು..

ನೀನಿರುವ ತಾಣವೇ ನನಗರಮನೆ..
ನೀ ಉಸಿರಾಡುವ ಗಾಳಿಯೇ ನನಗಾಹಾರ..
ನಿನ್ನೀ ಪಿಸುನುಡಿಯೇ ತೃಷ್ಣೆಗೆ ಆಧಾರ..
ನಿನ್ನ ಕಂಗಳ ನೋಟವೇ ನನಗೆ ನೆಳಲು..
ನಿನ್ನಿರುವೇ ನನ್ನ ಬಾಳಿಗಾಧಾರ!

ಸುಭಾಷಿತ!

ಅಭಿವರ್ಷತಿ ಯೋsನುಪಾಲಯನ್ ವಿಧಿಬೀಜಾನಿ ವಿವೇಕವಾರಿಣಾ|
 ಸ ಸದಾ ಕಲಶಾಲಿನೀಮ್ ಕ್ರಿಯಾಮ್ ಶರದಮ್ ಲೋಕ ಇವಾಧಿತಿಷ್ಠತಿ||

ವಿಧಿಯಿಂದ ನೆಡಲ್ಪಟ್ಟ ಬೀಜಗಳನ್ನು ವಿವೇಕದಿಂದ ಕೂಡಿದ ನೀರಿನಿಂದ ಯಾರು ಪೋಷಿಸಿ ಫಲ ಕೊಡುವ  ಕೆಲಸ ಮಾಡುತ್ತಾರೋ ಅವರು ಶರದ್  ಋತುವಿನಲ್ಲಿ ಸುಖದಿಂದ ಇರುವ ಲೋಕದಂತೆ ನಿರಾಳರಾಗಿರುತ್ತಾರೆ.
-ಭಾರವಿ (ಕಿರಾತಾರ್ಜುನೀಯಮ್)

ಸತ್ ಪಠಣ; ಮನನ!

ಅಹಂಕಾರಸ್ಯ ಚ ತ್ಯಾಗಃ ಪ್ರಮಾದಸ್ಯ ಚ ನಿಗ್ರಹಃ|
ಸಂತೋಷ ಶ್ಚೈಕಚರ್ಯ ಚ ಕೂಟಸ್ಯ ಶ್ರೇಯ ಉಚ್ಯತೆ ||

ಅಹಂಕಾರ ತ್ಯಾಗ, ದೋಷ ನಿಗ್ರಹ, ಸದಾ ಸಂತೋಷದಲ್ಲಿರುವುದು, ಮತ್ತು ಏಕಾಂತವಾಸ ಶ್ರೇಯಸ್ಸಿನ ಶಾಶ್ವತ ಸಾಧನಗಳೆಂದು ಹೇಳುತ್ತಾರೆ.

-ಭೀಷ್ಮ (ಶಾಂತಿಪರ್ವ)

#ಸತ್_ಪಠಣ_ಮನನ

22 December, 2014

ನೀನೆಲ್ಲಿ ಅಲ್ಲಿ ನಾನು..

ಪ್ರೀತಿ, ಪ್ರೇಮ, ಒಲವು, ಅನುರಾಗ, ಒಲುಮೆ..
ಹೀಗೆ ಹೆಸರುಗಳು ಒಂದೇ ಎರಡೆ, ನೂರಾರು..
ಮುಖವಾಡಗಳು ಹಲವಾರು;

ಒಲವೇ,

ನೀನೋ ಕಲ್ಪನೆಗೂ ನಿಲುಕದವನು..
ಹೆಸರನೂ ಮೀರಿದವನು..
ಕೈಯಳತ್ತಲೇ ಸುತ್ತುತ್ತಾ ಹಿಡಿಯಲು ಸಿಗದೇ ಮರೆಯಾಗುವವನು..
ಸಂಬೋಧನೆಯ ಅಳತೆಗೂ ಒಡಪಡದವನೇ
ನಡೆ, ನೀನೆಲ್ಲಿರುವಿಯೋ ನನ್ನನ್ನೂ ಒಯ್ಯು..

ನೀನಿರುವ ತಾಣವೇ ನನಗರಮನೆ..
ನೀ ಉಸಿರಾಡುವ ಗಾಳಿಯೇ ನನಗಾಹಾರ..
ನಿನ್ನೀ ಪಿಸುನುಡಿಯೇ ತೃಷ್ಣೆಗೆ ಆಧಾರ..
ನಿನ್ನ ಕಂಗಳ ನೋಟವೇ ನನಗೆ ನೆಳಲು..
ನಿನ್ನಿರುವೇ ನನ್ನ ಬಾಳಿಗಾಧಾರ!

28 November, 2014

ಒಲವಿನ ಓಣಿ..

ಒಡೆಯ,

ನಿನ್ನನು ಸೇರಲು ಹತ್ತು ಹಲವು ಹಾದಿ...

ನಾನಾರಿಸಿದ್ದು ಒಲವಿನ ಸಣ್ಣ ಓಣಿ!

-         -ಪ್ರೇರಣೆ ರೂಮಿ


"Lots of way to reach the God, I chose love."

22 November, 2014

ಗೋಡೆ ತುಂಬಾ ಬೆಳಕಿನ ಝರಿಗಳು..


ದಪ್ಪ ಗೋಡೆ, ಸದಾ ಮುಚ್ಚಿದ ಬಾಗಿಲು
ಕಡು ಕತ್ತಲಿನ ದೊಡ್ಡ ಅರಮನೆಯದು

ಮೌನ ಕರೆಗೆ ಓಗೊಟ್ಟಿತು ಒಲವು
ಅರಮನೆಯ ಚಿತ್ರಣ ಈಗ ಬದಲು

ಒಲವು ಕೊರೆದ ಪುಟ್ಟಪುಟ್ಟ ಕಿಟಿಕಿಗಳು
ಗೋಡೆ ತುಂಬಾ ಬೆಳಕಿನ ಝರಿಗಳು!


-ಪ್ರೇರಣೆ ರೂಮಿ

ಮಲಗದೇ ಕಾಣುವೆ ನಿನ್ನ ಕನಸು!

ಒಲವೇ,

ದಣಿವಿಲ್ಲದೇ ಹಲವು ಕಾಲದಿ
ಒಲವಿನ ಹಾಡು ಹಾಡುತ್ತಿರುವೆ,
“ನನ್ನಳಿವಿನ ಆಶ್ರಿತ ನನ್ನೀ ಉಸಿರು.. “
ಈ ಹಾಡೇ ನನ್ನೀ ಬದುಕಿನ ಪಾಡು
ಕಾಯಕೂ ಆತ್ಮಕೂ ನಿತ್ಯ ಹಸಿರು
ಮಲಗದೇ ಕಾಣುವೆ ನಿನ್ನ ಕನಸು!

-ರೂಮಿ ಭಾವಾನುವಾದ


"I've beat this drum of Love
for so long, for you whom I adore,
singing: “My life depends upon my dying”
This keeps my body and soul alive.
I dream but I do not sleep."

21 November, 2014

ನಿನ್ನ ನೋಟಕ್ಕಾಗಿ..

ಒಲವೇ,

ಕಾದಿರುವೆ ಹಲವು ಕಾಲದಿ
ನಿನ್ನದೊಂದು ಸನ್ನೆಗಾಗಿ...
ಒಪ್ಪಿಗೆಯ ಒಂದು ನೋಟ;
ಮತ್ತಿಲ್ಲ ಸಂಸಾರದ ಜಂಜಾಟ!

-ಪ್ರೇರಣೆ ರೂಮಿ

08 November, 2014

ಮತ್ತೂ ನಿನ್ನ ಬಯಸದೇ ಇರಲಾರೆನಲ್ಲ...


ಮತ್ತೂ ನಿನ್ನ ನಾ ಬಯಸದೆ ಇರಲಾರೆನಲ್ಲ!
----------------------------------
ನಾ ಒಲವು ತುಂಬಿ ಕೊಟ್ಟ ಗಡಿಗೆಯೆಲ್ಲೋ ಕನಯ್ಯ...
ಅಂದರೆ, ಅದೇಕೋ ಪಿಳಿಪಿಳಿ ಕಣ್ಣ ಬಿಟ್ಟು
ಮುಗ್ಧ ನೋಟ ಬೀರುವೆ!
ಗಡಿಗೆಯಲ್ಲಿ ತೂತಿತ್ತು ಕಣೇ..

ನೀ ತುಂಬಿಸಿ ಕೊಟ್ಟ ಅನುರಾಗ
ನಾ ನಡೆದ ಹಾದಿಯ ತುಂಬಾ ಚೆಲ್ಲಿ
ಗಡಿಗೆ ಖಾಲಿಯಾಯಿತು ಕಣೇ..
ನೀನೆಂದರೆ ನಾ ನಂಬುವೆನೆ ನಿನ್ನ, ಕಳ್ಳ!

ಸಿಕ್ಕಿರಬೇಕು ಮತ್ತೊಬ್ಬಳು ಮೋಹಕ ಚೆಲುವೆ..
ಅವಳ ಕಣ್ಣ ನೋಟದ
ಬಲೆಗೆ ನೀ ಮೀನಾಗಿ ಬಿದ್ದಿರುವೆ..

ನಿನ್ನ ಉತ್ತರೀಯಕಂಟಿಕೊಂಡಿರುವ
ಮಲ್ಲಿಗೆಯ ಪಕಳೆ ಸುಳ್ಳು ಹೇಳೊಲ್ಲವಲ್ಲ..
ನಿನ್ನ ಮುರಳಿಗೆ ಮೆತ್ತಿರುವ ತುಟಿಯ ರಂಗು
ಕತೆಯೊಂದನು ಹೇಳುತ್ತಿದೆಯಲ್ಲಾ...

ನಿನ್ನ ರಂಗಿನಾಟವನೆಲ್ಲ ನಾ ಬಲ್ಲೆನಲ್ಲ, ಮೋಹನ!

ಮತ್ತೂ ನಿನ್ನ ನಾ ಬಯಸದೆ ಇರಲಾರೆನಲ್ಲ!

ಗೋಪೀಲೋಲ ಜಯಗೋಪಾಲ!


ಗೋಪೀಲೋಲ ಜಯಗೋಪಾಲ


25 October, 2014

ಸಮತೋಲನದ ಬದುಕು!



ಒಲವೇ, 

ಕೊನೆಗೂ ಅರಿತೆ,
ಎದೆಗವಚಿ ಹಿಡಿದಿಡುವುದು ಮತ್ತು ಕಳಚಿಕೊಂಡು ಮರೆಯುವುದು
ಈ ಎರಡರ ಸಮತೋಲವೇ ಬದುಕು!


Life is a balance of holding and letting go
-rumi
 

23 October, 2014

22 October, 2014

ಬೆಳಕಿನ ಹಬ್ಬದ ಶುಭ ಹಾರೈಕೆಗಳು!

ಬೆಳಕು
----------

ಮದ, ಮೋಹ, ಮಾತ್ಸರ್ಯ, ಮನೋಭಿಲಾಷೆ, ಮಾನವೀಯತೆಯ ಉಲ್ಲಂಘನದ..
ಸುಂಟರಗಾಳಿಯ ಹೂಂಕಾರಕೆ ಅಳುಕದಿರದಿಲಿ,
ಮನದ ಗರ್ಭಗುಡಿಯ ಪುಟ್ಟ ಬೆಳಕು ಆರದಿರಲಿ;

ನಿಸ್ವಾರ್ಥ, ನಿರಹಂಕಾರ, ನಿರ್ಮಲ, ನಿಸ್ಪೃಹ, ನಿರಪೇಕ್ಷತೆ..
ಹಣತೆಯ ಬತ್ತಿಯನು ಬೆಳಗಿಸುವ ತೈಲವಾಗಲಿ,
ಬತ್ತದಿರಲೆಂದೂ, ನೀಡಲಿ ಆತ್ಮವನು ಹೊತ್ತ ಕಾಯಕೆ ಕಾಂತಿ, ಶಾಂತಿ;

ಬೆಳಕಿನ ಹಬ್ಬದ ಶುಭಾಶಯಗಳು!

||ಸರ್ವೇ ಜನಾಃ ಸುಖಿನೋ ಭವಂತಿ||

17 October, 2014

ಪಂಡರಾಪುರದೊಡೆಯನಿಗೊಂದು ಪತ್ರ!




ಒಡೆಯ ನಾರಾಯಣ,

ನಿನ್ನ ಮಹಿಮೆ ಎಷ್ಟು ಘನವಯ್ಯಾ!!!

ಇದ್ದಲ್ಲಿಂದಲೇ ನಿತ್ಯವೂ ನಿನ್ನ ಧ್ಯಾನ ಮಾಡುತ್ತಾ, ಸಂತರ ಕತೆಗಳ ನೆನಪು ಮಾಡಿಕೊಳ್ಳುತ್ತಾ ಪಂಡರಾಪುರಕ್ಕೆ ಹೋದ ಹಾಗಿನ ಭಾವ!

ಇಂದು ಆ ಪುಣ್ಯಾತ್ಮರು ವಾಪಸ್ಸು ಹೊರಟಿರಬಹುದೇನೋ..

 ದಾಸವರೇಣ್ಯರಾದ ಪುರಂದರ, ಕನಕ, ವಿಜಯದಾಸ, ತುಕಾರಾಮ, ನಾಮದೇವ, ಮುಕ್ತಾ ಬಾಯಿ, ಸಖುಬಾಯಿ.. ವಚನಾಗ್ರಣೇರಾದ ಬಸವಣ್ಣ, ಅಕ್ಕ ಮಹಾದೇವಿ.. ಖಂಡಿತ ಇವರೆಲ್ಲರಂತೆ ನಿನ್ನ ಮಹಿಮೆಯನ್ನು  ಮನಸೆಳೆಯುವಂತ ರಾಗ ತಾಳದಲ್ಲಿ ಹಾಡಲೋ, ಅಕ್ಷರ ರೂಪದಲ್ಲು ಪ್ರಕಟಿಸಲು ತಿಳಿದಿಲ್ಲ ಕಣೋ!

ರವಿವರ್ಮ, ನಮ್ಮ ಬಿ ಜಿ ಮಹಮ್ಮದ್ ಮಾಸ್ಟ್ರರ್ ಅಥವಾ ವಾಸುದೇವ ಕಾಮತ್ ಅವರಂತೆ ಕುಂಚದಲ್ಲಿ ನಿನ್ನ ಮನೋಹರ ರೂಪವನ್ನು ಚಿತ್ರಿಸಲೂ ಗೊತ್ತಿಲ್ವವಲ್ಲ.

ಮತ್ತೆ ನಂಗೆ ಏನು ಗೊತ್ತಿದೆ ಅನ್ತಿಯಾ!

ಅದೇ ನೀನು ಕರುಣಿಸಿದ್ದು..

 ಪ್ರಕೃತಿಯಲ್ಲಿಯ ಚರಾಚರಗಳನ್ನು ಗಾಢವಾಗಿ ಪ್ರೀತಿಸಲು..

ಗೊತ್ತಿದ್ದ ಮಟ್ಟಿಗೆ ಅಕ್ಷರಗಳಲ್ಲಿ ನಿನ್ನೊಲವನ್ನು ಬಣ್ಣಿಸಲು..

ಹಾ! ಅತೀ ಸುಂದರವಲ್ಲದಿದ್ದರೂ ನಿನ್ನ ರೂಪವನ್ನು ಗೆರೆಗಳಲ್ಲಿ ಎಳೆಯಲು. ಇದು ನೀನು ಕೊಟ್ಟದ್ದೇ ಅಲ್ವೇನೋ!

 ಎಷ್ಟು ದೊರಕಿದರೂ ಮತ್ತಿಷ್ಟು ಬೇಕೆಂಬ ಕಡು ಆಸೆ, ನಮ್ಮಂತಹ ಹುಲು ಮನುಜರಿಗೆ.

ಆದರೆ ನಂಗಂತೂ ಬಹಳ ತೃಪ್ತಿ ಸಿಕ್ಕಿದೆ. ನೀನು ನನಗೆ ಬಹಳಷ್ಟು ಕೊಟ್ಟಿದಿಯಾ! ಕೇಳದೇ ಒಲವಿನ ಮಹಾಪೂರವನ್ನೇ ಸಂಜನಾಳ ರೂಪದಲ್ಲಿ ನನ್ನ ಮೇಲೆ ಉಕ್ಕಿ ಹರಿಸಿದಿಯಾ!


ತಲೆ ಬಗ್ಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ರಾಮಚಂದ್ರ!

ಮತ್ತೆ ಮತೆ ನೆನಪಾಯ್ತು ಅಮ್ಮ ಹಾಡುತ್ತಿದ್ದ ಭಜನೆ ಹಾಡು-
ಇದುವೇ ಪಂಡರಾಪುರ ವಿಠ್ಠಲಾ, ಇದುವೆ ಪಂಡರಾಪುರ..
ಇದ ನಾನರಿಯದೇ ಪೋದೆ, ಮುಕುತಿಯ ಧಾಮ||

ನಾಮದೇವ ಹೇಳಿದಂತೆ,
ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ
ದೇಹ ವಿಠ್ಠಲ ದೇವ ಪೂಜ ವಿಠ್ಠಲ..||

https://www.youtube.com/watch?v=O0MTxpOQ8RE

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...