ಗೆಳತಿ,
ಅವನು ನನ್ನೂರಿಗೆ ಬರುವನೆಂದು ಕೇಳಿದಾಗ ಒಂದು ಕ್ಷಣ ಆನಂದನೂ ಆತಂಕವೂ ಒಟ್ಟಿಗೊಟ್ಟಿಗೆ ನನ್ನೊಳಗೆ ಕಾಣಿಸಿಕೊಂಡವು. ಮೊದಲ ಭೇಟಿ ನಮ್ಮದು... ಹೇಗಿರಬಹುದು! ಇಷ್ಟು ದಿನದ ನಮ್ಮ ನಿರೀಕ್ಷೆಗಳನ್ನು, ನಮ್ಮಿಬ್ಬರ ಭಾವಗಳನ್ನು ನಿರೂಪಿಸುವ ಅಮೃತ ಘಳಿಗೆ ಅದು. ದೂರವಿದ್ದೇ ಒಬ್ಬರ ಆತ್ಮದಲ್ಲಿ ಮತ್ತೊಬ್ಬರ ಆತ್ಮವನ್ನು ಪ್ರತಿಷ್ಠೆ ಮಾಡಿದ್ದೆವು.
ಕವಿಗಳು, ಸಾಹಿತಿಗಳು ಬರೆದಂತೆ ನಾನೇ ನೀನು, ನೀನೇ ನಾನು ಎಂದೇ ಹೇಳಿಕೊಂಡಿದ್ದೆವು. ಕಲ್ಪನಾ ಲೋಕದಲ್ಲಿ ನಾವು ಹಕ್ಕಿಗಳಂತೆ ಹಾರಾಡಿಕೊಂಡಿದ್ದೆವು. ಈಗ ನಿಜ ಲೋಕದಲ್ಲಿ ನಮ್ಮ ಭೇಟಿ ನಡೆಯುವುದಿದೆ. ಹೇಗೆ, ಏನು... ಎಷ್ಟೆಲ್ಲಾ ಆತಂಕ, ಗಾಬರಿ ಜೊತೆಗೆ ಪುಳಕ! ಎದೆಯ ಬಡಿತ ನಿತ್ಯಕ್ಕಿಂತ ಹೆಚ್ಚು ಸಕ್ರಿಯವಾದವು!
ಕ್ಷಣ ಗಣನೆ ಆರಂಭವಾಯಿತು! ಅವನಿಗೋಸ್ಕರ ಮಾಡಿ ಬಡಿಸುವ ತಿಂಡಿ, ಪದಾರ್ಥಗಳ ಪಟ್ಟಿ ಮಾಡುತ್ತಾ ಹೋದೆನು. ಅಷ್ಟೊಂದು ನಾನು ಒಂದೇ ದಿನದಲ್ಲಿ ತಯಾರಿಸಬಲ್ಲೆನೆ ಅಥವಾ ಅವನಾದರೂ ಆದನ್ನೆಲ್ಲ ಒಂದೇ ಘಳಿಗೆಯಲ್ಲಿ ತಿನ್ನಲು ಸಾಧ್ಯವೇ, ಇವೆಲ್ಲ ಆಲೋಚನೆ ಆಗ ಮೂಡಲೇ ಇಲ್ಲ. ಈಗ ನೆನಪಾದರೆ ನಗು ಬರುತ್ತದೆ. ಎಷ್ಟೊಂದು ದೊಡ್ಡ ಮೂರ್ಖಿಯೇ ನಾನು ಗೆಳತಿ! ಅಂತರಂಗದ ಸಖಿಯಾದ ನಿನಗೂ ಈ ಮಾತು ಹೇಳದೆ ಗೌಪ್ಯವಾಗಿ ಇಟ್ಟೆ; ನಮ್ಮಿಬ್ಬರ ಭೇಟಿಯ ಮೇಲೆ ಯಾರ ಕಣ್ಣು ಬಿದ್ದು ಹಾಳಾಗಬಾರದೆಂದು!
ಆದರೆ ಬರುತ್ತೇನೆಂದು ಹೇಳಿದವನು ಬರಲೇ ಇಲ್ಲ. ಕೇಳಿದರೆ ಅದೇನೋ ಕಾರಣದಿಂದ ಬರುವ ದಿನವನ್ನು ಮುಂದೂಡಿದೆನೆಂದನು. ಇರಲಿ, ನಿಗದಿಯಾದ ದಿನದಂದು ನೋಡಲು ಸಾಧ್ಯವಾಗದಿದ್ದರೇನಂತೆ ಹೇಳಿದನಲ್ಲವೆ ತಾನು ಬರುವೆನೆಂದು. ನನ್ನ ಆತ್ಮಕ್ಕೆ ಸಾಂತ್ವನವಿತ್ತೆನಾದರೂ ಅದೇಕೋ ಬಲಕಣ್ಣು ಅದುರಿ ಅಪಶಕುನದ ಸೂಚನೆಯಿತ್ತಿತು. ಎಂದೂ ಇಂತಹ ಮೂಢನಂಬಿಕೆಗಳ ನಂಬದ ನಾನು ಅದೇಕೋ ಆ ದಿನ ಒಂದಿಷ್ಟು ಅಧೀರಳಾದೆ.
ಅವನು ಬರುವೆನೆಂದು ಹೇಳಿದ ಹಿಂದಿನ ದಿನ, ಸುದ್ದಿಯೇ ಇಲ್ಲ... ಆಲೋಚನೆ ಮಾಡಿ ಮಾಡಿ ತಲೆ ಕೆಟ್ಟು ಹೋಯಿತು. ಹೊತ್ತು ಮೀರಿ ಸಂದೇಶ ಬಂದಿತು-
"ಬರಲು ಸಾಧ್ಯವಾಗುವುದಿಲ್ಲ"
ಕಣ್ಣಲ್ಲಿನ ಸಾಗರ ಉಕ್ಕೇರಿತು! ನಾನೂ ತಡೆಯಲೆತ್ನಿಸಲಿಲ್ಲ. ಎಲ್ಲೋ ಒಳಗೆ ಸಂದೇಹವಿತ್ತಾದರೂ ಆಸೆ ಇತ್ತು, ಬಂದೇ ಬರುವನೆಂದು, ಕಾದಿರುವ ಈ ಸಖಿಯ ಓಲೈಸುವನೆಂದು. ಹ್ಞೂಂ... ವಿಧಿಯು ಬಿಡಲೇ ಇಲ್ಲ! ಎಂದಿನಂತೆ ನನ್ನನ್ನು ನಿರಾಸೆಯ ಮಡಿಲಲ್ಲಿ ನೂಕಿ ತಾನಂದಪಟ್ಟಿತು!
ಬೇಡವೇ, ನೀನೂ ಅಪಹಾಸ್ಯದ ನಗೆಯ ತೋರಬೇಡವೇ! ನಿನ್ನಲ್ಲೂ ಗುಟ್ಟಾಗಿಟ್ಟು ಈಗೇಕೆ ಹೇಳುವಿ ಅನ್ನಬೇಡವೆ! ನಿನ್ನನ್ನು ಬಿಟ್ಟು ನನ್ನ ಮನಸ್ಥಿತಿಯ ಬಗ್ಗೆ ಮತ್ತ್ಯಾರಿಗೆ ಗೊತ್ತು. ಎಲ್ಲವೂ ತಿಳಿದ ನೀನೂ ನನ್ನಡೆ ಈ ರೀತಿಯ ಕೊಂಕು ನೋಟವ ತೂರಬೇಡವೆ. ಒಮ್ಮೆ ನಿನ್ನ ಮಡಿಲಲ್ಲಿ ಮಲಗಿ ಅಳಲೆ ಗೆಳತಿ, ಒಂದಿಷ್ಟು ಹಗುರವಾಗಲೆನೆ...!
1 comment:
ದೃಶ್ಯಗಳು ಕಣ್ಣ ಮುಂದೇನೆ ಹಾದುಹೋದಹಾಗೆ ಆಯಿತು....
ಕಥೆ ಹೃದಯಕ್ಕೆ ಬಹಳ ತಟ್ಟಿತು....
Post a Comment