ರೂಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......
ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರುಂಡೆಗಳ ಗೆಜ್ಜೆಕಟ್ಟಿ ಕುಣಿಯುವ ಶಬ್ದ, ಕಪ್ಪೆಗಳ ವಟರ್ ವಟರ್ ಗಾಯನ, ಗುನುಗು ಹಕ್ಕಿಯ ಗೊಣಗಾಟ, ಕೋಗಿಲೆಗಳ ಮಂದರಾಗ, ರಾಬಿನ್‍ಗಳ ಚಿಲಿಪಿಲಿ, ಬುಲ್ ಬುಲ್‍ಗಳ ಗುಣು ಗುಣು ಹಾಡು ಜೊತೆಗೆ ಮಂದವಾಗಿ ಬೀಸುವ ಮರುತನ ಮೌನ ತರಂಗಗಳ ಉದಯರಾಗಗಳು ನನ್ನನ್ನು ಕಚುಕುಳಿಯಿಡುತ್ತಾ ಎಬ್ಬಿಸುತ್ತವೆ. ಈ catalystಗಳು ನನ್ನ ನಿತ್ಯದ otherwise same old boring ಕೆಲಸಗಳಿಗೆ ಹೊಳಪನ್ನು ಕೊಡುತ್ತವೆ. ಬಿಸಿಲೇರುವ ಮೊದಲೇ ಮತ್ತೊಮ್ಮೆ ತೋಟದ ಗಿಡಗಳ ಜೊತೆ ಒಂದಿಷ್ಟು ಪಂಚಾದಿಕೆ( ನಮ್ಮ ಕೊಂಕಣಿಯಲ್ಲಿ ಸುಮ್ಮಸುಮ್ಮನೆ ಮಾತನಾಡುವುದಕ್ಕೆ ಹೀಗೆನ್ನುತ್ತಾರೆ) ನಡೆಸಿ, ಹೆಚ್ಚು ಕಡಿಮೆ ಪ್ರತಿದಿನ ಕಾಣಿಸುವ ಹೊಸ ಹೊಸ ಕೀಟ, ಜೇಡಗಳ ವೀಕ್ಷಣೆ, ಬೆಕ್ಕಿನ ಮರಿಯೊಡನೆ ತೊದಲಾಟ, ಚಿಟ್ಟೆಗಳ ಜೊತೆ ಒಂದಿಷ್ಟು ಹಾರಾಟ ( ಕೆಮರಾ ತೆಗೆದುಕೊಂಡು ಹಾರಾಟನೇ ಮಾಡಬೇಕಾಗುತ್ತೆ) ಇವೆಲ್ಲಾ ನಡೆಸಿದರೆ ಆ ದಿನದ ನೇಚರ್ ವಾಕ್ ಮುಗಿಯುತ್ತದೆ.
ಮತ್ತೆ ನಾಲ್ಕು ಗೋಡೆಯೊಳಗೆ ಬದುಕು.. ಮಧ್ಯ ಮಧ್ಯದಲ್ಲಿ ಅಂತರ್ಜಾಲವೆಂಬ ಕಿಟಿಕಿಯಿಂದ ಪ್ರಪಂಚದ ಕಿರುನೋಟದ ವೀಕ್ಷಣೆ... ನೆವನದಲ್ಲಿ ಸಿಗುವ ಮಕ್ಕಳ ಒಡನಾಟ... ಆಗಾಗ ಕುಂಚ ರಂಗಿನಲ್ಲಿ ಅದ್ದಿ ಗೋಡೆಗಳ ಮೇಲೆ, ಕ್ಯಾನ್‍ವಾಸಿನ ಮೇಲೆ ಚೆಲ್ಲುವ ಆಟ ಪಾಠ! ಇಲ್ಲೆಲ್ಲಾ ನಾನು ರೂಮಿಯನ್ನು ನೋಡುತ್ತಿರುತ್ತೇನೆ. ಪ್ರಕೃತಿ ತೆರೆದುಕೊಳ್ಳುವ ವಿಸ್ಮಯಗಳನ್ನು ನೋಡಬೇಕಾದರೆ ನಮ್ಮ ಹೊರಕಣ್ಣಿನ ಜೊತೆ ಒಳಗಿನ ಕಣ್ಣನ್ನೂ ವಿಶಾಲವಾಗಿ ತೆರೆದಿರಿಸಬೇಕು. ಆಗ ಮಾತ್ರ ಜೇನಿಗಿಂತ ಸ್ವಾದಿಷ್ಟವಾಗಿರುವ-ಪ್ರಕೃತಿಯಲ್ಲಿ ಅಡಗಿರುವ ಒಲವಿನ ಸಾಗರದಲ್ಲಿ ಮುಳುಗು ಹಾಕಿ ಪ್ರೇಮವೆಂಬ ಅಮೃತದ ರುಚಿಯನ್ನು ಆಸ್ವಾದಿಸಬಹುದು.
************ ************ ************
ನನ್ನಾತ್ಮವೇ, ರಹಸ್ಯವೊಂದನ್ನು ಅರುಹುವೆ
ಆಲಿಸುವವಳಾಗು...
ಈ ಒಲವೆಂಬ ತರುವಿನ ಸಂಗವನೆಂದಿಗೂ ಬಿಡದಿರು-
ಸದಾ ಬಾಡದ, ಕಂಪನ್ನೀವ ಕುಸುಮಗಳ ವರ್ಷವನ್ನೇ ಸುರಿಸುವುದದು.
No comments:
Post a Comment