ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

24 July, 2012

ಪ್ರೀತಿಯೆನ್ನುವುದು ಅದ್ಭುತ ಅಮೃತ..


            
                ಪ್ರೀತಿ, ಪ್ರೇಮ... ಹುಂ, ಕೇಳುವಾಗಲೇ ರೋಮಾಂಚನ ಕೊಡುವ ಶಬ್ದಗಳು! ದುರದೃಷ್ಟಾವತ್ ಕೆಲವೇ ಕೆಲವು ಮಂದಿಗೆ ಆಸ್ವಾದಿಸಲು ಸಿಗುವ ಅನುಭೂತಿ! ಅಂದ ಹಾಗೆ ಇದು ಕಣ್ಣಿಗೆ ಕಾಣದ ಕೇವಲ ಹೃದಯಕ್ಕೆ ಸಂಬಂಧಪಟ್ಟದಾಗಿದೆ.. ಹೇಗೆ ಗಾಳಿ, ಪರಮಾತ್ಮ ಮೊದಲಾದವುಗಳನ್ನು ಬರೇ ಅನುಭವಿಸಿ ಅರಿಯಬೇಕೋ ಹಾಗೆ ಪ್ರೀತಿಯನ್ನೂ ಯಾವುದೇ ಚೌಕಟ್ಟಿನಲ್ಲಿ ಕುಳ್ಳಿರಿಸಲಾಗದಂತಹುದು!  ಆದರೆ ಮಂದಿ ಮತ್ತೆ ಮತ್ತೆ ವಿಶ್ಲೇಷಣೆ ಮಾಡುತ್ತಲೇ ಇದ್ದಾರೆ... ಸರಿ, ಹಾಗಾದರೆ ಇವಳ್ಯಾಕಪ್ಪ ಚೌಕಟ್ಟಿನಲ್ಲಿ ಕಟ್ಟಲಾಗದ ಪ್ರೀತಿಯನ್ನು ಮನದ ಪುಟಗಳಲ್ಲಿ ನೇತಾಡಿಸಲು ನೋಡುತ್ತಿದ್ದಾಳೆ ಅಂತ ಮನದಲ್ಲಿ ಸಂದೇಹಮೂಡಿದ್ರೆ.. ಇರಿ, ಹೇಳ್ತೇನೆ!


    ಒಂದೆರೆಡು ದಿನಗಳ ಹಿಂದೆ ಪ್ರೇಮದ ಬಗ್ಗೆ ಇಬ್ಬರು ಗಣ್ಯ ವ್ಯಕ್ತಿಗಳ ಸ್ಟೇಟಸ್ ಫೇಸ್ ಬುಕ್‍ನಲ್ಲಿ ಓದಿದೆ. ಹೀಗಿತ್ತು,

     ೧.ಪ್ರೀತಿ ದೊಡ್ಡದೋ, ಆತ್ಮ ಗೌರವ ದೊಡ್ಡದೋ
     ೨.ನಿಜವಾಗಿ ಪ್ರೀತಿಸುವವರು ಎಂದೂ ಭೇಟಿಯಾಗಬಾರದು. ( ಅಂದರೆ ಅವರೆಂದೂ ಒಟ್ಟಿಗೆ ಒಂದೇ ಸೂರಿನಡಿ ಬದುಕಬಾರದು.)

      ಇದನ್ನು ಓದಿ ಒಂದಿಷ್ಟು ಗೊಂದಲೊಳಕ್ಕಾಯಿತು ಮನ! ಅರೇ, ಹೀಗೆ ಸಹ ಉಂಟೇ... ಆತ್ಮ ಗೌರವ! ಹುಂ, ಪ್ರೀತಿಸಿದ ಮೇಲೆ ಮತ್ತೆ ಅವೆರಡು ಬೇರೆ ಬೇರೆ ಜೀವ ಅಂತ ನೋಡಿದವರು ತಿಳಿದುಕೊಳ್ಳಬೇಕೆ ಹೊರತು  ಅವರಿಬ್ಬರಿಗೆ ತಾವಿಬ್ಬರು ಈಗ ಬೇರೆ ಬೇರೆಂದೆನಿಸುವುದಿಲ್ಲವಲ್ಲ.  ಅಂದ ಮೇಲೆ ಆತ್ಮಗೌರವದ ಪ್ರಶ್ನೆಯೇ ಏಳುವುದಿಲ್ಲ.

   ಪ್ರೀತಿಸುವುದೆಂದರೆ ಅಲ್ಲಿ ನಮ್ಮ ಹೃದಯಗಳ ಸ್ಥಾನ ಪಲ್ಲಟವಾಗುತ್ತವೆ! ಒಬ್ಬರ ಆತ್ಮದಲ್ಲಿ ಮತ್ತೊಬ್ಬರ ಆತ್ಮವು ನೆಲೆಗೊಳ್ಳುತ್ತದೆ.. ನಮ್ಮ ಪ್ರೇಮಿಯ ಗೌರವ ಕೆಡಿಸುವುದೆಂದರೆ ಅದು ನಮ್ಮ ಸ್ಥಾನ ನಾವೇ ಕೆಡಿಸಿದ ಹಾಗೆ ಅಲ್ಲವಾ? ಪ್ರೀತಿ, ಆತ್ಮ ಗೌರವ ಪ್ರತ್ಯೇಕಿಸಲಾಗದ ಭಾವಗಳು!

     ಇನ್ನೂ ಎರಡನೆಯದನ್ನು ಓದಿ ತಲೆ ಕೆಟ್ಟಿತು.. ಅಲ್ಲ ಪ್ರೀತಿಸುವವರು ಎಂದೂ ಒಟ್ಟಿಗಿರಬಾರದು! ಅಂದ ಮೇಲೆ ಆ ಪ್ರೀತಿಗೇನು ಅರ್ಥ... ಹಾಂ, ಸಂದರ್ಭಗಳು ಅನಾನುಕೂಲವಾಗಿರದಿದ್ದರೆ ಅದು ಬೇರೆ ವಿಷಯ... ಹಾಗೆ ನೋಡಿದರೆ ಅದೇ ನಮ್ಮ ಪ್ರೀತಿಗೆ ಒಂದು ದೊಡ್ಡ ಸವಾಲು ಅಂತಲೇ ಹೇಳಬಹುದು!

    ಪ್ರೀತಿಸಿಲಿಕ್ಕೆ ಏನು ಕೋಟಿಗಟ್ಟಲೆ ಜೀವಿಗಳು ಹೇಳ್ತಾನೆ ಇರ್ತವೆ.. ಆದರೆ ವಿವಾಹ ಬಂಧನಕ್ಕೆ ಒಳಗಾದವೋ, ಅಲ್ಲಿಂದ ಶುರು.. ನಿತ್ಯ ರಾಮಾಯಣ, ಮಹಾಭಾರತ... ಯೇತಿ ಅಂದ್ರೆ ಇನ್ನೊಬ್ಬ ಪ್ರೇತಿ ಅಂತಾನೆ!

     ಒಟ್ಟಾರೆ  ಸಂಸಾರದ ನೇಗಿಲು ಹೊತ್ತಾಗ ಪ್ರೀತಿ ಆ ಭಾರಕ್ಕೆ ಕುಸಿದು ಬಿದ್ರೆ ಅದನ್ನು ಪ್ರೀತಿ ಅಂತ ಗುರುತಿಸಿದ್ರೆ ಅದು ಪ್ರೀತಿಗೆ ಅವಮಾನ.. ಅದು ಬರೇ ಎರಡು ವಿಭಿನ್ನ ಲಿಂಗಗಳ ದೈಹಿಕ ಆಕರ್ಷಣೆ! ಸರಿಗಮದ ಮಧುರ ಸ್ವರ ಮಾಯವಾಗಿ ತಾರಕ ಸ್ವರ ಕೇಳಿ ಬಂದರೆ ಆಗ, ಪ್ರೀತಿ ಎಂಬ ಪರೀಕ್ಷೆಯಲ್ಲಿ ಸೊನ್ನೆ ಅಂಕ ಪಡೆದಿದ್ದೇವೆ ಅಂತನೇ ಅರ್ಥ. ಏನಂತಿರಿ ನೀವು? 

    ನಮ್ಮಲ್ಲಿ ಅನೇಕರು ಪ್ರೀತಿಸಿನೇ ಮನೆಯವರ ಒಪ್ಪಿಗೆ ಪಡೆದೇ ಮದುವೆಯಾಗಿದ್ದಾರೆ. ಅವರಿಗೂ ಮನೆಯವರು ನಿರ್ಧರಿಸಿ ಮದುವೆಯಾದವರಿಗೂ ಏನೂ ವ್ಯತ್ಯಾಸ ಕಾಣುವುದಿಲ್ಲ! ನಮ್ಮ ಹಾಗೆ ಸಂಸಾರ ಮಾಡುತ್ತಿರುತ್ತಾರೆ.. ಅಂದರೆ ಮೊದಲಿನ ಸಾರವನ್ನು ಸಂಸಾರ ಸಾಗರದ ಅಲೆಗಳು ದೂರ ಅಟ್ಟಿವೆ! 

     ದೂರದ ಬೆಟ್ಟ ನುಣ್ಣಗೆ ಅಂತಾರಲ್ಲ ಹಾಗೆ ಒಂದು ವೇಳೆ ಬಂಧನಕ್ಕೆ ಬಿದ್ದರೆ ಮತ್ತೆ ಅದೇ ರೀತಿಯ ಪುನರಾವರ್ತನೆ.. ಗಂಡು, ಹೆಣ್ಣುಗಳ ಮಧ್ಯೆ ಇರುವ ಸಹಜ ಆಕರ್ಷಣೆಯನ್ನು ಪ್ರೀತಿ ಎಂಬ ತಪ್ಪು ತಿಳುವಳಿಕೆ ಅನೇಕರಿಗೆ. ಪ್ರೀತಿಯೆನ್ನುವುದು ರಾಗ-ಅನುರಾಗಗಳ ಸಂಗಮ; ಎಂದೂ ಬೇರ್ಪಡಿಸಲಾಗದ ಬೆಸುಗೆಯನ್ನು ಹಾಕುತ್ತದೆ ಹೃದಯಗಳಿಗೆ! 

     ಇಲ್ಲಿ ಜಾತಿ, ದೈಹಿಕ ಸೌಂದರ್ಯ, ಭಾಷೆ, ಆಚಾರ, ವಿಚಾರ, ಆಸಕ್ತಿ... ಯಾವುದೂ ಅಡ್ಡಬರುವುದಿಲ್ಲ. ಒಬ್ಬರಿಗೆ ಮತ್ತೊಬ್ಬರು ಬೆಂಬಲ.. ಮೇಲಿಲ್ಲ, ಕೀಳಿಲ್ಲ... ಒಬ್ಬರನ್ನೊಬ್ಬರು ಅರ್ಥಮಾಡಿ, ನೋವು ಮಾಡದೇ ಬದುಕುವರು. ಮನವನ್ನೂ ಓದಿಕೊಳ್ಳಬಲ್ಲರು! ದಾಸ್ಯಭಾವ, ಸಮರ್ಪಣಾಭಾವ ತೋರುವರು.. ಒಬ್ಬರಿಗೊಬ್ಬರು ತಂದೆ, ತಾಯಿ, ಮಗು, ಅಣ್ಣ, ತಮ್ಮ.. ಹೀಗೆ ವಿವಿಧ ಪಾತ್ರಗಳನ್ನು ಮಾಡಿ ಕೊರತೆಗಳನ್ನು ತುಂಬುತ್ತಾರೆ!

     ಪ್ರೀತಿಯೆನ್ನುವುದು ಅದ್ಭುತ ಅಮೃತ! ಕೇವಲ ಅದೃಷ್ಟವಂತವರಿಗೆ ಸೇವಿಸಲು ಪ್ರಾಪ್ತವಾಗುವುದು. ನಿಜವಾದ ಪ್ರೀತಿಯ ವಿಶ್ಲೇಷಣೆ ಮಾಡಲು ಶಕ್ತರು ಆ ಅಮೃತ ಪಡೆದವರು ಮಾತ್ರ... ಆದರೆ ಅವರೋ ಮೌನಿಗಳು! ಸಂವೇದನೆಯನ್ನು ಮೌನವಾಗಿಯೇ ಮಾಡುವವರು.. ಈ ಭಾಷೆಯನ್ನು ಬಲ್ಲವರು ಮಾತ್ರ ಅವರನ್ನು ಅರ್ಥಮಾಡಿಕೊಳ್ಳಬಲ್ಲರು! ನೀರು ತುಂಬುವ ತನಕ ಗಡಿಗೆ ಬುಳು ಬುಳು ಅಂತ ಶಬ್ದ ಮಾಡುತ್ತೆ... ತುಂಬಿದ ನಂತರ ಶಬ್ದವಿಲ್ಲ... ಸುಂದರ ಅಲೌಕಿಕ ಮೌನ....

******************************************************


ಕಿರಣ್ ನನಗೆ ಈ ಪ್ರಶ್ನೆ ಹಾಕಿದ್ದಾನೆ...

ಮೊದಮೊದಲು ಸಂಗಾತಿಯನ್ನು ವಿಪರೀತ ಅನ್ನೋ ಮಟ್ಟಿಗೆ ಪ್ರೀತ್ಸೋ ನಾವು ನಂತರದ ದಿನಗಳಲ್ಲಿ ಕಮ್ಮಿ ಆಗುತ್ತಲ್ಲ ಅದು 

ಯಾಕೋ ಗೊತ್ತಿಲ್ಲ...

ಅದು ನಿರಂತರವಾಗಿ ಇರೋ ಬಗೆಯಾದರೂ ಹೇಗೆ ?

ನಾವೆಷ್ಟೇ ಪ್ರೀತ್ಸಿದ್ರು ಕೂಡ, ಅದು ಎರಡು ಬೇರೆಯೇ ಮನಸ್ಸುಗಳು, ಬೇರೆಯೇ ಭಾವನೆಗಳು

24/7 ಆಕೇನ impress ಮಾಡೋದಾಗ್ಲಿ, ಖುಷಿಯಾಗಿ ಇರಿಸಿಲಿಕ್ಕೆ ಆಗ್ಲಿ ತುಂಬಾ ಕಷ್ಟ ಅಲ್ವ ಅಕ್ಕ!

ನಮ್ಮಂತಹ ಎಳಸುಗಳಿಗೆ "ನಿರಂತರ ಪ್ರೇಮದ ಬಗೆ ಹೇಗೆ " ಅಂತ ನಿಮ್ಮ ಅನುಭವದ ಮೂಸಯಿಂದ ತಿಳಿಸಿಕೊಡಿ ಅಕ್ಕ! 

   ಕಿರಣ್, ನಂಗೊತ್ತಿಲ್ಲ ಇದು ಸರಿಯಾ ತಪ್ಪಾ ಅಂತ.. ನಿನಗೆ ಮಾರ್ಗದರ್ಶನ ಮಾಡುವಷ್ಟು ಜ್ಞಾನಿನೂ ಅಲ್ಲ.. ಆದರೂ,



      -ನಾನು ಹೇಳಿದ ಹಾಗೆ ಪ್ರೀತಿ ಬಗ್ಗೆ ವಿಶ್ಲೇಷಣೆ ಯಾರಿಂದಲೂ ಸಾಧ್ಯವಿಲ್ಲ ಕಣೋ..  ಆದರೂ ನನಗೆ ಗೊತ್ತಿದಷ್ಟು ಬರೀತೇನೆ!

     ನೀನು ಹೇಳಿದ ಹಾಗೆ ಮೊದ ಮೊದಲು ಎಲ್ಲವೂ ಸುಂದರ! ಅಹಾ!   ಅದ್ಭುತವಾಗಿರುತ್ತೆ! ನಿಧಾನವಾಗಿ ಹಳಸಲು ಪ್ರಾರಂಭವಾಗುತ್ತೆ... ತಪ್ಪುಗಳು ಎದ್ದು ಕಾಣತೊಡಗುತ್ತವೆ! ಮೊದಲು ಹೇಳದೇ ಅರ್ಥವಾದದ್ದು ಈಗ ಹೇಳಿದರೂ ಅರ್ಥವಾಗುವುದಿಲ್ಲ...  ಅಸಹನೆ, ಅಸಮಧಾನ, ಅಹಂಗಳು ಕಾಡತೊಡಗುತ್ತದೆ. 

     ತನ್ನದೇ ಸರಿ... ತಾನು ಹೇಳಿದ ಹಾಗೆ ಇರಬೇಕು, ತನ್ನಿಷ್ಟದಂತೇ ಎಲ್ಲರೂ ಕುಣಿಬೇಕು, ಎಲ್ಲ ತನ್ನ ಕೇಳಿಯೇ ನಿರ್ಧರಿಸಬೇಕು... ಅಹಂಮಿಕೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಿರುಕು ಏಳುತ್ತದೆ..  

      ಹೆಚ್ಚಾಗಿ ಪುರುಷರೇ ಸಂಬಂಧಗಳ ಬಿರುಕಿಗೆ ಕಾರಣವಾಗುತ್ತಾರಾದರೂ ಮಹಿಳೆಯರೂ ಕೆಲವೊಮ್ಮೆ ಚಂಡಿಯಂತೆ ಹಟ ಮಾಡಿ ಸಂಸಾರ ಸುಖ ಕೆಡಿಸುತ್ತಾರೆ.


     ಮತ್ತಿನ್ನೊಮ್ಮೆ ಅದೇ ಹೇಳುತ್ತೇನೆ,  ಕೇಳು.  

   ಸ್ನೇಹಿತರು ಹೇಗಿರುತ್ತಾರೆ? ಹಲವು ಸಲ ನಮಗೆ ನಮ್ಮ ಸ್ವಭಾವದಂತಹುದೇ ಸ್ನೇಹಿತರಿರುವುದಿಲ್ಲವಲ್ಲ.. ಆವಾಗ ಹೇಗಿರುತ್ತೇವೆ ನಾವು? ನಮ್ಮನ್ನು ಅವರ ಮೇಲೆ ಹೇರುತ್ತೇವೆಯಾ? ಗಂಡ ಹೆಂಡತಿ ಇಬ್ಬರೂ ಮೊದಲು ಸ್ನೇಹಿತರಾಗಬೇಕು.

      ಒಬ್ಬರು ಮತ್ತೊಬ್ಬರ ಸ್ವಭಾವವನ್ನು ಚೆನ್ನಾಗಿ ಸ್ಟಡಿಮಾಡಬೇಕು, ಅರ್ಥಮಾಡಿಕೊಳ್ಳಬೇಕು, ಇಷ್ಟಗಳನ್ನು ಅರಿತಿರಬೇಕು.
ನಮಗೆ ಇಷ್ಟವಾದದ್ದೇ ಅವರಿಗೂ ಆಗಿರಬೇಕೆಂಬ ಒತ್ತಾಯ ಸಲ್ಲದು.
ಒಂದು ವೇಳೆ ಯಾವುದೇ ಕೆಟ್ಟ ಅಭ್ಯಾಸವಿದ್ದರೂ ಅದನ್ನು ಬಿಡಿಸಲು ಸಹ ಮೃದು ಮಾತು, ಸಹನೆ ತೋರಬೇಕು..
ಇಬ್ಬರು ಸಮಾನವೆಂಬ ಭಾವನೆ ಇಬ್ಬರಲ್ಲೂ ಇರಬೇಕು.
ಯಾವುದೇ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು.
ದೈಹಿಕವಾಗಿ ಹೆಣ್ಣು ಬಲಹೀನಳು ಹೌದಾದರೂ ಪುರುಷನೆಂದೂ ಇದರ ದುರುಪಯೋಗಮಾಡಿಕೊಳ್ಳಬಾರದು.

     ಈ ಇಂಪ್ರೆಸ್ಸ್ ಮಾಡೋದು, ಖುಶಿ ಪಡಿಸೋದು ಬರೀ ಕೆಲ ಸಮಯ ನಡೆಯುತ್ತೆ... ಮತ್ತೆ ಬೇಜಾರು ತರುತ್ತೆ..  ಎಲ್ಲವೂ ನಿಧಾನವೇ ಆಗಲಿ ಎಲ್ಲಿಯೂ ಅವಸರ ಸಲ್ಲದು! ಮೊದಮೊದಲು ಪ್ರೀತಿಯಲ್ಲಿ ಬೀಳುವಾಗ ಮೇಲೆ ಮೇಲೆ ಮೆಸೇಜ್! ಕಾಲ್ಸ್ ಗಳು!  ನಿಧಾನವಾಗಿ ಕಮ್ಮಿಯಾಗುತ್ತಾ ಬರುವುದು... ಕೊನೆಗೊಂದು ದಿನ ಕಾದು ಕಾದು ಕಣ್ಣಿರಿನ ಕೋಡಿ! ಉಹುಂ, ಖಂಡಿತ ಹಾಗೆ ಮಾಡಬಾರದು!

   ಮದುವೆಯಾದ ೩,೪ ತಿಂಗಳು ಬೇರೆ ಯಾರೂ ಬೇಡ..  ಹೆಂಡತಿಯ ಸೆರಗು ಹಿಡಿದು ತಿರುಗುತ್ತಾ ಇರೋದು..  ಕೊನೆಗೆ ಅವಳು ಬೋರ್ ಆಗುತ್ತಾಳೆ! ಎಲ್ಲಕ್ಕೂ ಒಂದು ಮಿತಿ ಅಂತ ಇರುತ್ತೆ... ಸಿನೆಮಾ ನೋಡಿ, ಕಥೆ ಪುಸ್ತಕ ಓದಿ ನಾವೆಲ್ಲಾ ನಮ್ಮ ಜೀವನ ಹಾಗೆ ಇರುವುದು ಎಂದು ಅಂದುಕೊಳ್ತೀವಿ..  ನಂಗೆ ಅರ್ಥ ವಾಗೊಲ್ಲ! ಯಾಕೆ ಜನರು ಅಂತಹ ಕನಸುಗಳನ್ನು ಕಟ್ಟೊದು ಅಂತ. ನಮ್ಮೆದುರಿಗೆ ನಮ್ಮ ತಂದೆ-ತಾಯಿ, ಅಜ್ಜ-ಅಜ್ಜಿ, ಚಿಕ್ಕಪ್ಪ- ಚಿಕ್ಕಮ್ಮ, ಮಾಮ-ಮಾಮಿ.. ಹೀಗೆ ಅನೇಕ ಜೋಡಿಗಳ ಉದಾಹರಣೆಗಳನ್ನು ನೋಡುತ್ತಲೇ ಇರುತ್ತೇವೆ... ಹಾಗಿದ್ದರೂ!!! 

1 comment:

Anonymous said...

******ಮೊದಲನೆಯದಾಗಿ ಚಿಕ್ಕ ಬಾಯಿಂದ ದೊಡ್ಡ ಮಾತು, ಕ್ಷಮೆಯಿರಲಿ......*******
ಮೊದಮೊದಲು ಸಂಗಾತಿಯನ್ನು ವಿಪರೀತ ಅನ್ನೋ ಮಟ್ಟಿಗೆ ಪ್ರೀತ್ಸೋ ನಾವು ನಂತರದ ದಿನಗಳಲ್ಲಿ ಕಮ್ಮಿ ಆಗುತ್ತಲ್ಲ ಅದು ಯಾಕೋ ಗೊತ್ತಿಲ್ಲ...
ಅದು ನಿರಂತರವಾಗಿ ಇರೋ ಬಗೆಯಾದರೂ ಹೇಗೆ ?
ನಾವೆಷ್ಟೇ ಪ್ರೀತ್ಸಿದ್ರು ಕೂಡ, ಅದು ಎರಡು ಬೇರೆಯೇ ಮನಸ್ಸುಗಳು, ಬೇರೆಯೇ ಭಾವನೆಗಳು
24/7 ಆಕೇನ impress ಮಾಡೋದಾಗ್ಲಿ, ಖುಷಿಯಾಗಿ ಇರಿಸಿಲಿಕ್ಕೆ ಆಗ್ಲಿ ತುಂಬಾ ಕಷ್ಟ ಅಲ್ವ ಅಕ್ಕ
ನಮ್ಮಂತಹ ಎಳಸುಗಳಿಗೆ "ನಿರಂತರ ಪ್ರೇಮದ ಬಗೆ ಹೇಗೆ " ಅಂತ ನಿಮ್ಮ ಅನುಭವದ ಮೂಸಯಿಂದ ತಿಳಿಸಿಕೊಡಿ ಅಕ್ಕ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...