ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

23 July, 2012

ಆತ್ಮ ಆತ್ಮದ ಸೆಳೆತಕ್ಕೆ ಯಾರು ತಾನೆ ತಡೆಯೊಡ್ಡಲು ಸಾಧ್ಯ.....


         ಅಲ್ಲೊಂದು ನದಿಯ ಜನನ..ಅಂಕು ಡೊಂಕಾಗಿ ಹರಿಯುತ್ತಿದ್ದಳು...ಪ್ರಕೃತಿಯ ಜೊತೆ ನಲಿದಾಡುತ್ತ ಬೆಳೆಯುತ್ತಿದ್ದಳು...ಬೇಸಿಗೆಯಲ್ಲಿ ನಿಧಾನವಾಗಿ ಹರಿದರೆ ಅವಳು ಹುಟ್ಟಿದ ಶ್ರಾವಣ ಮಾಸದಲ್ಲಿ ಒಂದಿಷ್ಟು ಮದದಲ್ಲಿ ಮತ್ತೇರಿ ಮೆರೆದಾಡುತ್ತಿದ್ದಳು....ವರುಷಗಳು ಕಳೆದು ಹೋಗುತ್ತಿದ್ದವು....ಸೆಳೆಯುತ್ತಿದ್ದಳು, ಕುಕ್ಕುವಂತಿದ್ದಳು..ಹರಿದಾಡುತ್ತಿದ್ದವು ಅನೇಕ ಕಣ್ಣುಗಳು.......ಇವಳನ್ನು ಹಿಡಿದು ಕಟ್ಟಲೇಬೇಕು ಅಂದರು...ಅವಳ ಮೌನ ರೋಧನ ಯಾರ ಕಿವಿಯನ್ನು ತಲುಪಲೇ ಇಲ್ಲ...ಕಟ್ಟೇಬಿಟ್ಟರು ವೈಭವದ ಸಮಾರಂಭ ಮಾಡಿ...ಒಳಗೊಳಗೆ ಬಿಕ್ಕುತ್ತಾ...ಮೊದಮೊದಲು ಪ್ರತಿಭಟಿಸಿ ಕೊನೆಗೆ ಕಾಲನ ಬಲದ ವಿರುದ್ಧ ಓಡಲಾಗದೆ ಸೋತು ಸೆರೆಯಾಗುತ್ತಾಳೆ. ನಿಂತಲ್ಲೇ, ಕುಳಿತಲ್ಲೇ ಹರಿಯುತ್ತಾ, ಚೌಕಟ್ಟಿನೊಳಗೆ ಗುದ್ದಾಡುತ್ತಾ ಅಲ್ಲೇ ಒಮ್ಮೊಮ್ಮೆ ಉಕ್ಕುತ್ತಾ...ಕೆಲವೊಮ್ಮೆ ಶಾಂತವಾಗುತ್ತಾ....ಮಂದಹಾಸದ, ನೆಮ್ಮದಿಯ ಮುಖವಾಡ ಹೊತ್ತು ತನ್ನೆಲ್ಲಾ ಕನಸುಗಳನ್ನು ಗಂಟು ಹಾಕಿ ತನ್ನಲ್ಲೇ ಹುಗಿದು ಬಿಡುವಳು.  ಜೀವನದಿಯಾಗಿ ಹರಿಯಲಿಚ್ಛಿಸಿದವಳು ಅವಳು....ಮರೆಯುವುದಿಲ್ಲ.....ಮಿಕ್ಕುಳಿದ ಕಸುವನ್ನು ವ್ಯರ್ಥಮಾಡದೆ ತನ್ನಿಂದುಕ್ಕಿದ ಹೊಳೆಗಳ ಲಾಲನೆ....ಮಾಡುವುದರಲ್ಲಿ ಕಳೆಯುತ್ತಾಳೆ...ಕಾಲವೂ ಓಡುತ್ತದೆ....ತನ್ನಸ್ತಿತ್ವವನ್ನೂ ಮರೆಯುತ್ತಾಳಾ ಮಹಾನದಿ.....

ಹೊಳೆಗಳು ಈಗ ಮತ್ತಷ್ಟು ತುಂಬಿವೆ.... ಅತ್ತಿತ್ತ ಹರಿದಾಡುತ್ತವೆ..ಮದದಿಂದ ಓಡುತ್ತವೆ...ಇವಳಿಗೆ ಹೆದರಿಕೆ..ಅಣೆಕಟ್ಟಿನ ಭಯ...ಅದೊಂದು ದಿನ ಧೋ ಮಳೆ...ಅಣೆಕಟ್ಟು ಒಡೆದೇ ಹೋಯಿತು..ಹರಿದಳು ಇವಳು, ಮತ್ತೆ ಪಯಣ ಆರಂಭವಾಯಿತು..ಮತ್ತಷ್ಟು ಉಕ್ಕಿ, ಗುರಿಯಿರಲಿಲ್ಲ...ಆದರೂ ಏನೋ ಯಾವುದೂ ಮಂದ ನಿನಾದದ ಸೆಳೆತ....ಅದೇ ಕಾರಣವಿರಬೇಕು..ಹರಿವಿನಲ್ಲಿ ಲಯ ಲಾವಣ್ಯವೆತ್ತಿ ಕಾಣುತ್ತಿದೆ.. ಕಳೆದ ಯೌವನ ದಿನಗಳ ನೆನಪೇ...ಹೊರಹೊಮ್ಮುತ್ತಿವೆ… ಮೌನ ಭಾವದ ರಾಗ ತರಂಗ....ಹರಿಯುತ್ತಳೇ ಇದ್ದಳವಳು.. ಮತ್ತಷ್ಟು ಮೆರುಗು...ಇನ್ನಷ್ಟು ಸೊಂಪಾಗಿ…..ಇವಳೆದೆಯ ನಾದದ ತರಂಗ ಕೇಳಿತು ಸಾಗರ...ಉಲಿಯಿತು, ಕರೆಯಿತು....ಅದರ ಭೋರ್ಗೆರೆತ ಇವಳಿಗೆ ಮುರಳಿಯ ನಾದದಂತೆ ಸೆಳೆಯಿತು..ಓಗೊಟ್ಟಳು...ಪಯಣದ ಲಕ್ಷವೆತ್ತವೆಂದರಿತಳು...ಅತ್ತಲೇ ಗಮನವಿತ್ತಳು...ಈಗಿನ್ನು ಇವಳನ್ನು ತಡೆಯುವ ಬಲ ಯಾರಿಗಿಲ್ಲ...

     ಆಗಲೇ ಪ್ರತ್ಯಕ್ಷನಾದನವನು...ಕೇಳಿದಳು ಎಲ್ಲಿದ್ದೆ ಇಷ್ಟು ದಿನ? ವ್ಯಸ್ಥವಾಗಿದ್ದೆ..ಕೇಳಲಿಲ್ಲವಾ ನನ್ನ ಮೊರೆ ಎಂದಳು..ಏನು ಮಾಡುವುದು...ಸಮಯ ಕೂಡಿ ಬಂದಿರಲಿಲ್ಲ...ಅವನ ಉತ್ತರ.....ಮತ್ತೆ ಈಗೇಕೆ ಬಂದೆ..ನಿನ್ನನ್ನು ಕರೆದೊಯ್ಯಲು, ಮುಕ್ತಿ ಕೊಡಲು....ಯಾರಿಗೆ ನಿನ್ನ ಮುಕ್ತಿ ಬೇಕು! ನನ್ನ ಗುರಿಯೀಗ ಆ  ಕಡಲು..... ಅಗೋ, ನೋಡು ಇನ್ನೂ ಎಷ್ಟೊಂದು ದೂರವಿದೆ ನನ್ನ ಪಯಣ..ನನಗಿಲ್ಲ ಮುಕ್ತಿಯ ತವಕ..ಕಾದಿರು, ಒಮ್ಮೆ ಕಡಲನ್ನು ಸೇರಿದ ಮೇಲೆ ಮತ್ತೆ ಅದರ ಜೊತೆ ನಿನ್ನ ಕಡೆಯೇ ನನ್ನ ಕೊನೆಯ ಪಯಣ.. ಹೇಳುತ್ತಾ ಮತ್ತೆ ಅವನೆಡೆ ನೋಡದೆ ರಭಸವಾಗಿ ಮುನ್ನಡೆದಳು. ಈಗಿನ್ನು ಆರಂಭವಾಗಿದೆಯಷ್ಟೇ ಅವಳ ಪಯಣ....ಕಣ್ಣಿಗೆ ಕಾಣದ ಕಡಲಿನ ಕಡೆಗೆ..ಕೇವಲ ಕೇಳುತ್ತಿದೆ ಅದರ ಭೋರ್ಗೆರೆತ ಮಾತ್ರ...
ಅವಳ ಬದುಕಿನ ಗುರಿ ಕಡಲು...ಅದೆಷ್ಟೊ ನದಿಗಳಿಗೆ ಆಶ್ರಯ ಕೊಟ್ಟಿರುವ ಆ ವಿಶಾಲವಾದ ಸಾಗರದತ್ತ ಅವಳ ಹರಿವು...ತನ್ನ ಸಿಹಿನೀರಿನ ಒಡಲು ಸಾಗರದ ಉಪ್ಪು ನೀರಿನೊಂದಿಗೆ ಸೇರಿ ಒಂದಾಗಲಿ...ಅದೇ ಅವಳಿಗೆ ಮುಕ್ತಿ...ಆತ್ಮ ಆತ್ಮದ ಸೆಳೆತಕ್ಕೆ ಯಾರು ತಾನೆ ತಡೆಯೊಡ್ಡಲು ಸಾಧ್ಯ? ಸೃಷ್ಟಿಸಿದ ಅವನಿಗೇ ಅಸಾಧ್ಯವಂತೆ!!!
********************************************************************************

ಈ ನನ್ನ ಬರಹಕ್ಕೆ ನೇತ್ರಾವತಿಯ ಹರಿವು ಬದಲಾಯಿಸುವ ಯೋಜನೆಯೇ ಪ್ರೇರಣೆ...ಹಾಗೂ ನನ್ನ ಮೆಚ್ಚಿನ ಗೆಳತಿ... ಇಪ್ಪತ್ತೆರಡು ವರುಷಗಳ ಹಿಂದೆ ಯಾರನ್ನು ನಾನು ಮುಂದೊಂದು ದಿನ ಬಹಳ ದೊಡ್ಡ ಕಲಾವಿದೆ ಆಗುವಳು ಎಂದು ನಂಬಿದ್ದೆನೋ ಅವಳು ಅಚಾನಕ್ ಆಗಿ ಮೊನ್ನೆ ಭೇಟಿಯಾದಾಗ ಬರೀ ಹೋಮ್ ಮೇಕರ್ ಆಗಿ ಉಳಿದುದನ್ನು ನೋಡಿ ಬೇಸರವಾಯಿತು..ಒಂದಿಷ್ಟು ಕೂಡಿಸಿ , ಕಳೆದು ಬರೆದೆ...

ವಿರಾಮದ ವೇಳೆಗಾಗಿ: ಪತ್ರಿಕೆಗೆ- ಒಮ್ಮೆ ಭೇಟಿ ಕೊಡಿ!
http://viramatime.blogspot.in/p/blog-page_8507.html

ಲೇಖನ ಸ್ವಲ್ಪ ಗಂಭೀರವಾಗಿದೆ...ನಿಮ್ಮ ವದನದಲ್ಲಿ ಮಂದಹಾಸ ಮೂಡಲಿ ಅಂತ ಇಲ್ಲೊಂದು ಫೋಟೊ ಹಾಕಿದ್ದೇನೆ..ಓದಿ...ತುಟಿ ಬಿರಿಯುತ್ತೆ ಖಂಡಿತಾ :-) ಚಿದಂಬರ ಕಾಕತ್ಕರರ ಈ ಲೇಖನ ಉದಯವಾಣಿಯಲ್ಲಿ ಪ್ರಕಟವಾಗಿತ್ತು...ಓದಿ ಖಂಡಿತ...

2 comments:

Anonymous said...

ಅಕ್ಕಾ...ನಂಗೆ ಇದರ ಒಳಾರ್ಥ/ತಿರುಳು ಗೊತ್ತಾಯಿತು...
ಓದುತ್ತಾ ಓದುತ್ತಾ ನಾನು ಬುದ್ದಿವಂತ ಆಗ್ಬಿಟ್ಟೆ ನೋಡಿದ್ರಾ....:-)
ಮತ್ತೇನು ಹೇಳೋದು as usual, soooper,
ವಿಚಿತ್ರವಾದ ಸಚಿತ್ರ ನಿರೂಪಣೆ

Sheela Nayak said...

ಕಿರಣ್.
ಹೌದು, ಈ ಬರಹ ಒಂದು ಡಿಫರೆಂಟ್ ಆಗಿದೆ....ನಿಜ ಹೇಳುದಾದರೆ ನಾನು ಇದನ್ನು ಬರೆಯುವಾಗ ಹೀಗೆ ಹಾಗೆ ಬರೆಯಬೇಕಂತ ಆಲೋಚನೆ ಮಾಡಿಬರೆದದಲ್ಲ..ಗಣಕ ಯಂತ್ರ ಎದುರು ನಾನು ಕುಳಿತಿದ್ದೆ...ಅಷ್ಟೇ...ತನ್ನಿಂದ ತಾನೆ ಕೈ ಕೀಲಿ ಮಣೆ ಬಡಿಯುತ್ತಾ ಹೋಯ್ತು..ಅಕ್ಷರಗಳು ಮೂಡುತ್ತಾ ಬಂದವು...ಒಂದೆರಡು ಕಾಗುಣಿ ತಿದ್ದುಪಡಿ ಮಾಡಿದು ಬಿಟ್ರೆ ಹೆಚ್ಚು ಬದಲಾಯಿಸಲೂ ಇಲ್ಲ..
ಈ ಬರಹ ನನ್ನ ಮನದ ಪಟದಲ್ಲಿ ಮೂಡಿದ್ದು ಇತ್ತೀಚಿಗೆ. ನೇತ್ರಾವತಿಯ ಹರಿವನ್ನು ತಿರುಗಿಸುವ ಯೋಜನೆಯನ್ನು ಓದಿ..ಹಾಗೂ ನನ್ನ ಗೆಳತಿಯ ಕಥೆ ಕೇಳಿ...ನಾವಿಬ್ಬರು ೧೯೮೯ರಲ್ಲಿ ಬಿ ಜಿ ಮೊಹಮ್ಮದರ ಬಳಿಯಲ್ಲಿ ಒಟ್ಟಿಗೆ ಡ್ರಾಯಿಂಗ್ ಕಲಿಯಲು ಸೇರಿದ್ದೆವು. ಅವಳು ಮುಂಬೈಯ ಜೆ ಜೆ ಆರ್ಟ್ಸ್ ಸ್ಕೂಲ್‍ನಲ್ಲಿ ೫ವರ್ಷದ ತರಬೇತಿ ಮುಗಿಸಿದವಳು..ನಾನೋ ಇನ್ನೂ ಬಚ್ಚಾ..ಆವಾಗ...ನಮ್ಮ ಜೊತೆ ಬರೇ ೮ತಿಂಗಳಿತ್ತು..ನಾನು ಮುಂದೆ ಕಲಿಯಲಿಲ್ಲ..ಮತ್ತೆ ನಮ್ಮ ಭೇಟಿ ನಡೆದದ್ದು ನಮ್ಮ ವರ್ಣ ವನಿತಾ ಕಾರ್ಯಕ್ರಮದ ವೇಳೆ...ಬ್ರಶ್ ಕೆಳಗಿಟ್ಟು ಬಿಟ್ಟಿದ್ದಾಳೆಂದು ಕೇಳಿ ನನಗೆ ಶಾಕ್ ಕೋಪ ಎರಡೂ ಜೊತೆ ಜೊತೆಗೇ ಬಂತು...ಆ ಘಟನೆ ಮತ್ತು ನೇತ್ರಾವತಿ ಎರಡೂ ಈ ಬರಹಕ್ಕೆ ಸ್ಪೂರ್ತಿ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...