ಮಳೆಗಾಲ ಆರಂಭವಾಗಿ ತಿಂಗಳಾಗುತ್ತಾ ಬಂತು. ಶೀತಕ್ಕ ತನ್ನ ಸಂಬಂಧಿಗಳೊಡನೆ ನೆಂಟಳಾಗಿ ಬರಲು ಹವಣಿಸುತ್ತಿದ್ದಾಳೆ....ಕೆಲವರ ಮನೆಯಲ್ಲಂತೂ ಈಗಾಗಲೇ ಡೇರೆ ಹಾಕಿರಬಹುದು. ಹುಂ, ವೈದ್ಯರಿಗೂ, ಮೆಡಿಕಲ್ ಶಾಪಿನವರಿಗೂ ಇದು ಸುಗ್ಗಿಯ ಸಮಯ. ಈ ಮಾತ್ರೆ ತಾಗಿಲ್ವಾ... ಇನ್ನೊಂದು ಹೊಸತು ಬಂದಿದೆ..ಅದರಿಂದ ಖಂಡಿತ ಗುಣವಾಗುತ್ತೆ..ಈ ಸಿರಪ್, ಆ ಸಿರಪ್ ಅಂತಾ ಹೆಚ್ಚಿನವರು ಬಕ್ರಾಗಳಾಗುತ್ತಾರೆ. ಇಲ್ ನೋಡಿ, ನಾನೊಂದು ಗುಟ್ಟಿನ ವಿಷಯ ಹೇಳುತ್ತೇನೆ..ಯಾವ ಡಾಕ್ಟರಿಗೂ ನಾನು ಹೇಳ್ದೆಂತ ಹೇಳ್ಬೇಡಿ..ಈಗಾಗಲೇ ನನ್ನ ಮೇಲೆ ವಿನಾ ಶಸ್ತ್ರ ಯುದ್ಧ ಘೋಷಿಸಿದ್ದಾರೆ..ನಾನು ಅವರ ಗಿರಾಕಿಗಳನ್ನು ಡೈವರ್ಟ್ ಮಾಡ್ತೇನಂತ..ಹಾಗಾಗಿ ನಾನು ಸೂಚಿಸಿದ ಮದ್ದು ತೆಗೆದುಕೊಂಡು ಬೇಗ ಶೀತಕ್ಕನನ್ನು ಓಡಿಸಿದೇನಂತ ಯಾರಿಗೂ ಹೇಳ್ಬೇಡಿ ದಯವಿಟ್ಟು.
ನಿಮಗೆಲ್ಲ ಗೊತ್ತಿದ್ದ ಹಾಗೆ ಮೊದಲು ಬರೋದೇ ಶೀತಕ್ಕ..ಅವಳನ್ನು ನೀವು ಪಾಪ ಇರಲಿ ಅಂತ ಬಿಟ್ರೆ ನಿಧಾನವಾಗಿ ಎಲ್ಲ ಸಂಬಂಧಿಕರನ್ನು ಅವಳೇ ಕರೆದುಕೊಂಡು ಬರ್ತಾಳೆ..ನಿಮ್ಮ ಮನೆಯಲ್ಲಿ ಎಲ್ಲರನ್ನೂ ದೆವ್ವ ಹಿಡ್ಕೊಂಡ ಹಾಗೆ ಹಿಡ್ದು ಕಾಡಿಸ್ತಾಳೆ..ಒಟ್ಟಾರೆ ನಿಮ್ಮ ವಾಲೆಟಿನ ಭಾರ ಕಡಿಮೆ ಮಾಡಿಯೇ ತನ್ನ ಡೇರೆ ಕಳಚುತ್ತಾಳೆ. ನನ್ನದು ಬಿಟ್ಟಿ ಸಲಹೆ ಅಂತ ಕೇರ್ ಲೆಸ್ ಮಾಡ್ಬೇಡಿ...ಟ್ರೈ ಮಾಡಿ..ನಾನಂತು ಚಿಕ್ಕವಳಿಂದಾಗ ಮಾಡ್ಕೊಂಡು ಬಂದಿದ್ದೇನೆ..ನನ್ನ ಮಕ್ಕಳಿಗೂ ಅದನ್ನೇ ಕೊಡ್ತಾ ಇದ್ದೇನೆ..ಯಾಕೆಂದರೆ ನನಗೂ ಈ ಎಮ್ ಬಿ ಬಿಎಸ್ ವೈದ್ಯರಿಗೂ ಎಣ್ಣೆ ಸೀಗೇಕಾಯಿ ಸಂಬಂಧ..ನನಗೆ ವೈದ್ಯಳಾಗಬೇಕಂತ ಆಸೆಯಿತ್ತು..ವಿಧಿ ಬಿಡ್ಲಿಲ್ಲ...ಹಾಗಾಗಿ ನಂಗೆ ವೈದ್ಯರೆಲ್ಲ ಮೇಲೆ ಅದೇನೋ ಅಸೂಯೆ... ಹೋಗ್ಲಿ ಬಿಡಿ ನಿಮಗೆ ಅದನೆಲ್ಲ ಕಟ್ಟಿಕೊಂಡು ಏನಾಗ್ಬೇಕು...ನೇರವಾಗಿ ಮದ್ದು ತಯಾರಿಸುವುದು ಹೇಗಂತ ಬರೀತೀನಿ..
ಬಹಳ ಸಿಂಪಲ್. ನಮಗೆ ಬೇಕಾದುದು,
೧. ಒಂದೆರಡು ನೀರುಳ್ಳಿ
೨. ಶುಂಠಿ
೩. ೩ಟೀ ಸ್ಪೂನ್‍ಗಳಷ್ಟು ಹಳದಿ ಹುಡಿ (ಅರಸಿನ ಹುಡಿ)
೪. ಮಜ್ಜಿಗೆ ಹುಲ್ಲು
೫. ಕರಂಬಲ್ (ಸ್ಟಾರ್ ಫ್ರುಟ್) ನಾಲ್ಕೈದು
೬. ಕಲ್ಲು ಸಕ್ಕರೆ ರುಚಿಗೆ ತಕ್ಕಷ್ಟು.
೭. ಕಪ್ಪು ಮೆಣಸು ೧ ಟೀ ಸ್ಪೂನ್
೭. ಕೊತ್ತಂಬರಿ ಹುಡಿ ೨,೩ ಟೀ ಸ್ಪೂನ್
೮. ದೊಡ್ಡ ಪತ್ರೆ ಎಲೆಗಳು ೧೦
೯. ತುಳಸಿ ಎಲೆಗಳು
ಇವೆಲ್ಲವನ್ನೂ ದೊಡ್ಡ ಪಾತ್ರೆಯಲ್ಲಿ ಹಾಕಿ. ೫,೬ ಗ್ಲಾಸುಗಳಷ್ಟು ನೀರು ಹಾಕಿ. ಚೆನ್ನಾಗಿ ಕುದಿಸಿ..ಕುದಿಯುತ್ತಿರುವಾಗ ಇದರ ಪರಿಮಳವೆಲ್ಲಾ ಮನೆಯಲ್ಲಿ ಹರಡಿಕೊಂಡು ಎಲ್ಲರೂ ಅಡಿಗೆ ಮನೆಗೆ ಬರುವಂತೆ ಮಾಡುತ್ತದೆ...ಹಾಂ ಮರತೇ ಬಿಟ್ಟಿದ್ದೆ.. ಬೇರು ಸಮೇತ ಒಂದಿಷ್ಟು ಗರಿಕೆ ಹುಲ್ಲನ್ನು ಹಾಕಿ.....ಸಣ್ಣದಾಗಿ ಕಾಡುವ ಜ್ವರ ನಿಲ್ಲಿಸುತ್ತದೆ..ಮಕ್ಕಳಿಗೆ ಜ್ವರ ಬಂದಾಗೆಲ್ಲ ನಾನು ಗರಿಕೆ ಹುಲ್ಲಿನ ಕಷಾಯನೇ ಕೊಡೋದು. ಈ ಕಷಾಯವನ್ನು ಒಂದು ಕಾಲು ಗ್ಲಾಸ್ ದಿನಕ್ಕೆ ೫ ಸಲ ತೆಗೆದುಕೊಂಡ್ರೆ ಮೂರು ದಿನದೊಳಗೆ ನಿಮ್ಮ ಜ್ವರ, ಶೀತ, ಕೆಮ್ಮು ಎಲ್ಲಾ ಹಿತ್ತಲು ಬಾಗಿಲ್ನಿಂದ ಓಡದಿದ್ರೆ ಕೇಳಿ!!! ಅಂದ ಹಾಗೆ ಈ ಕಷಾಯ ಸೇವನೆ ಉಪಯೋಗಕ್ಕೆ ಬರೋದು ನೀವು ಶೀತಕ್ಕ ಬರುವ ಸೂಚನೆ ಕೊಟ್ಟ ಕೂಡಲೆ ಮಾಡಿದ್ರೆ ಮಾತ್ರ..ಝಂಡಾ ಊರಿದ ಶೀತಕ್ಕನನ್ನು ಈ ಕಷಾಯದಿಂದ ಓಡಿಸಲಿಕ್ಕೆ ಸ್ವಲ್ಪ ಕಷ್ಟ ಸಾಧ್ಯ! ಈ ಮದ್ದಿನ ಸೇವನೆಯ ಜೊತೆಗೆ ಶೀತಕ್ಕನನ್ನು ಬೀಳ್ಕೊಡುವ ತನಕ ದಿನಕ್ಕೆ ೭,೮ ಸಲ ಬಿಸಿ ನೀರಿನ ಸೇವನೆ ಮಾಡಬೇಕು..ಜೊತೆಗೆ ಕರಿದ ಪದಾರ್ಥಗಳ, ಅತೀ ತಣ್ಣನೆಯ ಪದಾರ್ಥಗಳ ಸೇವನೆ ವ್ಯರ್ಜ!
ಮತ್ತೆ ಮೇಲೆ ಸೂಚಿಸಿದ ಇನ್‍ಗ್ರಿಯೆಂಟ್ಸ್ ಎಲ್ಲಾ ಅದೇ ಅಳತೆಯಲ್ಲಿ ಹಾಕ್ಬೇಕಂತ ಇಲ್ಲ... ಹಾಗೂ ಎಲ್ಲವನ್ನೂ ಹಾಕಬೇಕಂತಿಲ್ಲ... ಮಕ್ಕಳಿಗೆ ಕೊಡುವಾಗ ಕಲ್ಲು ಸಕ್ಕರೆ ಜಾಸ್ತಿಯಿರಲಿ..ಚಪ್ಪರಿಸಿ ಕುಡಿಯುತ್ತಾರೆ. ನೀರುಳ್ಳಿ, ಮಜ್ಜಿಗೆ ಹುಲ್ಲು ಮತ್ತು ಶುಂಠಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಸಣ್ಣ ಮಕ್ಕಳಿಗೆ ಎದೆಯಲ್ಲಿ ಕಫಗಟ್ಟಿದರೆ ದೊಡ್ಡ ಪತ್ರೆ ಎಲೆಯನ್ನು ಒಂಚೂರು ಕಾವಲಿಯಲ್ಲಿ ಬಿಸಿ ಮಾಡಿ ಎದೆಗೆ ಪಕ್ಕೆಗಳಿಗೆ ತಿಕ್ಕಿ...೨ ವರ್ಷದವನಿರುವಾಗ ನನ್ನ ಮಗ ಕಫ ಬಾದೆಯಿಂದ ಬಳಲುತಿದ್ದ...ವೈದ್ಯರು ಆಸ್ಪತ್ರೆಗೆ ಸೇರಿಸಲು ಸೂಚಿಸಿದರು. ನಾನು ಒಪ್ಪಲಿಲ್ಲ..ನನ ಅಮ್ಮನ ಸೂಚನೆಯಂತೆ ಈ ಕಷಾಯ ಮತ್ತು ದೊಡ್ಡ ಪತ್ರೆ ಎಲೆಯ ಶಾಖ ಕೊಟ್ಟೆ... ೨ ದಿನದ ನಂತರ ವೈದ್ಯರಿಗೆ ಅಚ್ಚರಿ...ಕಫವೆಲ್ಲ ಹೇಗೆ ಮಾಯವಾಯ್ತು ಅಂತ.
4 comments:
ಒಳ್ಳೆಯ ಉಪಾಯ ಮೇಡಂ. ಖಂಡಿತ ಇದನ್ನು ಪ್ರಯತ್ನಿಸಿ ನೋಡುವೆ. ಮಜ್ಜಿಗೆ ಹುಲ್ಲು ಮತ್ತು ಕರಂಬಲ್ ಹುಡುಕುವುದೇ ಸಮಸ್ಯೆ.
ನನ್ನ ಬ್ಲಾಗಿಗೂ ಸ್ವಾಗತ.
ಬದ್ರಿ, ನಿಮಗೆ ಮಜ್ಜಿಗೆ ಹುಲ್ಲು ಸಿಗದಿದ್ದರೂ ಉಳಿದ ಸಾಮಾಗ್ರಿಗಳಿಂದ ನೀವು ಕಷಾಯವನ್ನು ತಯಾರಿಸಬಹುದು..ಬಹುಶಃ ಕರಂಬಲ್ ಬೆಂಗಳೂರಿನ ಮಾರ್ಕೆಟ್‍ನಲ್ಲಿ ಸಿಗುತ್ತೆ ಅಂತ ಕೇಳಿದ್ದೇನೆ....ಪ್ರಯತ್ನಿಸಿ ನೋಡಿ!
ಶೀತಕ್ಕ v/s ಶೀಲಕ್ಕ :)
thanks
ಸರಿಯಾಗಿ ಹೇಳಿದೆ ವಿಕಾಸ್...ನಿಜ..ನಾನಿದ್ದಲ್ಲಿಂದ ಶೀತಕ್ಕ ಜಾಗ ಖಾಲಿ ಮಾಡ್ತಾಳೆ..:-)
Post a Comment