ಜೀವನದಲ್ಲಿ ಮಾಗಿದ, ಪ್ರೀತಿಗಾಗಿ ಪರಿತಪಿಸುವ ಎರಡು ಪ್ರೌಢ ಜೀವಿಗಳ ಮಧ್ಯದಲ್ಲಿ ನಡೆಯುವ ಒಂದು ಕಾವ್ಯಮಯ ಸಂವಾದ...ಇದು ಒಂದು ಕಲ್ಪನೆ..ಆದರೆ ಒಂದು ವೇಳೆ ಇದರಂತೆ ಯಾರಾದರೂ ಮಾತನಾಡಿಕೊಂಡ ಹೋಲಿಕೆಯಿದ್ದಲ್ಲಿ ನಾ ಅದಕ್ಕೆ ಹೊಣೆಯಲ್ಲ..:-)
ನಲ್ಲೆ:-
ನಿಶಾ ದೇವಿಯ ಮಡಿಲಲ್ಲಿ
ನನ್ನೆಲ್ಲ ದುಃಖ ದುಮ್ಮಾನಗಳ
ಮರೆತು ಹಾಯಾಗಿ ಪವಡಿಸಿದ್ದೆ;
ತನು ಮನವೆರಡೂ ತಮ್ಮ
ದಿನದ ಭಾರವ
ಕಳಚಿ ವಿರಮಿಸುತಿರೆ,
ಎಬ್ಬಿಸಿದೆಯಲ್ಲವೆ ಗೆಳೆಯ ನೀ;
ಖಾಲಿ ಹಾಳೆಯ ಕೈಗಿತ್ತು,
ಲೇಖನಿ ಹಸ್ತದಲಿರಿಸಿ,
ನನ್ನೊಳಗಿಂದ ಚಿಮ್ಮುತ್ತಿದ್ದ ಭಾವನೆಗಳಿಗೆ;
ಅಕ್ಷರರೂಪ ಕೊಡಲು ಸೂಚಿಸಿದೆ!
ನಿಶೆಯ ಮತ್ತಲ್ಲಿದ್ದ ನಾ,
ಮುನಿಸು ತೋರಿದೆ ನಿನ್ನಲ್ಲಿ!
ಏನು ಈ ಪರಿಪಾಟ;
ಹೊತ್ತು ಗೊತ್ತು ಇಲ್ಲದೆ,
ಕೊಡುವಿಯೇಕೆ ಕಾಟ!
ಸಿಟ್ಟಿಗೆದ್ದ ಗೆಳತಿಯ ತಾಪಕೆ ಬೆದರಿ;
ಅದೃಶ್ಯವಾದೆ ನೀ,
ಜೊತೆಗೆ ನನ್ನ ನಿದ್ದೆಯೂ!
*********************
ನಲ್ಲ:-
ಕಾಟವೆನ್ನದಿರು ಕಾಟವಲ್ಲದು ಬರಿಯ ಹೃದಯಗಳ ನಡುವಿನಾಟ
ಆತ್ಮ-ಆತ್ಮಗಳ ನಡುವೆ ನಿರಂತರವಾಗಿ ನಡೆವ ಹುಡುಕಾಟ
ಎಲ್ಲೋ ಎಂದೋ ಮರೆತ ಭಾಂಧ ಇಂದಿಲ್ಲಿ ಒಂದುಗೂಡಿರಬಹುದು
ನಿನ್ನೊಳಗಿನ ಪ್ರತಿಭೆಯ ಹೊರತರಲೆನೆನ್ನನು ಕಾರಣವಾಗಿಸಿರಬಹುದು
********************
ನಲ್ಲೆ:-
ಹೇಳೇ ಹುಚ್ಚು ಹುಡುಗಿ, ಇತ್ತಲ್ಲವೆ ನಿನಗೆ ಹಮ್ಮು
ನೀನಾವ ಸೆಳೆತಕೆ ಸಿಲುಕಲೊಲ್ಲೆಯೆಂದು.
ಹೃದಯ ಮಂದಿರದ ಭದ್ರ ಕೋಟೆಯ
ಕದಕ್ಕಿತ್ತ ಚುಟುಕು ದನಿಗೆ ತೆರೆದಿಯಲ್ಲವೆ ಅಗಣಿ!
********************
ನಲ್ಲೆ:-
ಮನದೊಳ ತಕಲಾಟ
ಯಾಕೆ ಈ ಹಾರಾಟ
ಉಂಟೆ ಉತ್ತರ ನಿನ್ನಲ್ಲಿ
ಹೇಳಿ ನನ್ನನ್ನು ಉದ್ಧರಿಸು!
*****************
ನಲ್ಲ;-
ಪ್ರಶ್ನೆಯನ್ನು ಸ್ವಲ್ಪ ವಿವರಿಸಿದರೆ
ಸಿಗಬಹುದು ಉದ್ಧರಿಸುವವನ ಉತ್ತರ;
ಪ್ರಶ್ನೆಯೇ ಗೊಂದಲಮಯವಾದರೆ,
ಹೇಗೆ ನೀಡಬಹುದು ನಾ ಉತ್ತರ?
********************
ನಲ್ಲೆ:-
ಪ್ರಶ್ನೆಯೇ ತಿಳಿದಿಲ್ಲ ಎನಗೆ
ಆದರೂ ಉತ್ತರ ನಿನ್ನ ಬಳಿ
ಇರಬಹುದೆಂಬ ಭರವಸೆಯೆನಗೆ!
*******************
ನಲ್ಲ:-
ಆತ್ಮ ಆತ್ಮಗಳಾ ಸ್ನೇಹಬಂಧವಿದು
ಕಡೆಗಣಿಸದಿರು ದೇವನಿಚ್ಛೆಯನು
ಒಂದೆರಡು ದಿನಗಳಿಗೆ ಸೀಮಿತಗೊಳಿಸಿ
ತೊರೆಯದಿರು ಸ್ನೇಹವನು
ಜೀವನದುದ್ದಕ್ಕೂ ಜೀವನದಾಚೆಗೂ
ಇರುವಂತೆ ನಮ್ಮೀ ಸ್ನೇಹ ಶಾಶ್ವತ
ಆ ಭಗವಂತನಲಿ ಬೇಡೋಣ ಹೇಳು
ಇದಕ್ಕೀಗ ನಿನ್ನದೇನು ಅಭಿಮತ?
************************
ನಲ್ಲ:-
ನಿನ್ನ ಮನಸ್ಥಿತಿಯ ಅರಿವು
ನನಗಾಗುತ್ತಿದೆ ಇಲ್ಲ ಅನ್ನಲಾರೆ;
ಆದರೆ ಎಲ್ಲವನ್ನೂ ಬಿಡಿ ಬಿಡಿಸಿ ಹೇಳಿದರೆ, ಏನು ಚೆನ್ನ:
ಕೆಲವು ಉತ್ತರವಿಲ್ಲದ ಪ್ರಶ್ನೆಗಳು,
ಕೆಲವು ಪ್ರಶ್ನೆಯೇ ಕೇಳದೇ ಸಿಗುವ ಉತ್ತರಗಳು;
ಪರಮಾತ್ಮನು ಹಾಗೆಯೇ ನಾವು ಯಾವ ಪ್ರಶ್ನೆ ಕೇಳದೇ
ಕಳುಹಿಸಿಬಿಡುತ್ತಾನೆ ನಮ್ಮ ಜೀವನಕ್ಕೆ ಉತ್ತರಗಳನು ಸದ್ದಿಲ್ಲದೆ!
ಆತ್ಮ-ಪರಮಾತ್ಮಗಳ ನಡುವಿನ ಸೆಳೆತ ಪರಮಾತ್ಮನಿಗಷ್ಟೇ ಗೊತ್ತು!
ಕಾರಣ ಹುಡುಕುವುದು ಮೂರ್ಖತನ;
ಹುಡುಕಿದರೂ ಸಿಗದು ಕಾರಣ ನಮಗೆ!
***************************
ನಲ್ಲೆ:-
ನಿನ ಬಳಿಯೂ ನನ ಬಳಿಯೂ
ಉತ್ತರವಿಲವಿದಕೆ;
ಒಡೆಯನ ನಿಯಮಕೆ
ತಲೆಬಾಗಿ ನಿಂತೆ;
ಅವನಾಡಿಸುವ ಪಾತ್ರಧಾರಿ ನಾ!
*************************
ನಲ್ಲ:-
ಆತ್ಮ ಆತ್ಮಗಳಾ ಸ್ನೇಹ ಸಂಬಂಧವಿದು
ಕಡೆಗಣಿಸದಿರು ದೇವಯಿಚ್ಛೆಯನು;
ಒಂದೆರಡು ದಿನಗಳಿಗೆ ಸೀಮಿತಗೊಳಿಸಿ
ತೊರೆಯದಿರು ಸ್ನೇಹವನು;
ಜೀವನದುದ್ದಕ್ಕೂ ಜೀವನದಾಚೆಗೂ
ಇರುವಂತೆ ನಮ್ಮೀ ಸ್ನೇಹ ಶಾಶ್ವತ;
ಆ ಭಗವಂತನಲಿ ಬೇಡೋಣ ಹೇಳು
ಇದಕ್ಕೀಗ ನಿನ್ನದೇನು ಅಭಿಮತ?
**************************
ನಲ್ಲೆ:-
ನಿನ್ನ ಮತವೇ
ನನ್ನ ಅಭಿಮತ!
************
ನಲ್ಲ:-
ಹೃದಯದಲಿ ಮನೆಮಾಡಿದವರು
ದೂರವಾದರೆ ಮರಣದ ಮೆಟ್ಟಲೇರುವಂತೆ
ನಿಧಾನವಾಗಿ ಒಳಗೊಳಗೆ ಸುಡುತ್ತದೆ ಈ
ಹೃದಯವನು ಮತ್ತೆ ಸ್ಪಂದಿಸದಂತೆ!
ಹೃದಯವೇ ಉರಿದು ಹೋದ ಮೇಲೆ
ಸ್ಪಂದಿಸುವುದು ಎಲ್ಲಿಂದ....
ಬೇಕೆ ಮತ್ತೆ ಏನೂ....
ಕಗ್ಗತ್ತಲಾಗುವುದು ಬಾಳು!
ಕುಂತಲ್ಲಿ, ನಿಂತಲ್ಲಿ, ನಡೆವಲ್ಲಿ, ಸದಾಕಾಲ
ನಡೆಯುತ್ತಲೇ ಇರುತ್ತದೆ ಮಾತುಕತೆ
ಹೃದಯದೊಳಗಿದ್ದರೆ ಸಾಕು, ಅನುಭವ
ಮಾತ್ರ ಸದಾ ಜೊತೆಯಲೇ ಇರುವಂತೆ!
ನಿಜ ಹೇಳು ಈ ಅನಿಸಿಕೆಗಳೆಲ್ಲಾ
ನನ್ನದಷ್ಟೇಯಾ
ಅಲ್ಲ ನಿನ್ನ ಮನದೊಳಗೂ
ಮನೆಮಾಡಿವೆಯಾ?
*********************
ನಲ್ಲೆ:-
ಕೇಳಬೇಡ ಏನೂ ನಲ್ಲ
ನಾ ಏನೂ ಹೇಳಲಾರೆಯಲ್ಲ!
**************
ನಲ್ಲ:-
ಯಾಕೆ ಹಾಗೆ...
ಹೇಳದೇ ನಾ ಅರಿಯಬೇಕೆಂದೇ....
ಹೇಳಿದರೆ ನಾ ಮುನಿಯುವೆನೆಂದೇ?
********************
ನಲ್ಲೆ:-
ನೀ ಏನಬೇಕಾದರೆ ತಿಳಿದುಕೋ
ಮನವ ತಿಳಿದವನು ಮುನಿಯುವನೇ?
ಎಲ್ಲ ಬಿಚ್ಚಿ ಹೇಳಿದರೇನು ಚೆನ್ನವೇ!
*******************
ನಲ್ಲ:-
ಏನಿದು ತುಮುಲ,
ಏನಿದು ತಾಕಲಾಟ,
ಏಕೆ ಹೀಗೆ?
ಆಗಿತ್ತೆ ಹಿಂದೆಂದಾದರೂ
ನಿನಗೆ ಹೀಗೆ?
**********************
ನಲ್ಲೆ:-
ಕೇಳಿದೆ ನನ್ನೊಳಗಿನ ಆತ್ಮವ
ಎಂದೆಂದಾದರೂ ನೀ ಈ
ರೀತಿಯ ಹುಚ್ಚುತನದ
ಅನುಭವ ಪಡೆದಿದ್ದಿಯಾ ಎಂದು.
ಮೌನವಾಗಿದೆ...
ಗೊತ್ತು ನನಗೆ ಚಕಿತವಾಗಿದೆಯೆಂದು...
ಉತ್ತರ ನೀಡಲು ಸೋತಿದೆಯೆಂದು!
************
ನಲ್ಲ:-
ಆ ಪರಮಾತ್ಮನಿಗಿದೋ ನನ್ನ
ಸಾಷ್ಟಾಂಗ ನಮಸ್ಕಾರಗಳು!
ಜೀವನದ ಈ ಪಯಣದಲ್ಲಿ ನಮಗೀಗ
ಹೊಸ ಅನುಭವಗಳು!
ಮನಕೆ ಮುದನೀಡಿ ರೋಮಾಂಚನಗೊಳಿಸಿ
ಕಾಡುವ ಕ್ಷಣಗಳು!
ಮುಂದಡಿಯಿಡಲು ಅಳುಕಿಲ್ಲ,
ಅನುಮಾನವಿಲ್ಲ ಪ್ರತಿ ಹೆಜ್ಜೆಯಲೂ!
*******************
2 comments:
ಚೆನ್ನಾಗಿದೆ ಶಿಲ್ಪಕ್ಕಾ.. ಖುಷಿಯೆನಿಸಿತು ಓದಿ :)
Thank u Kiran! shilpakka..never mind...:-D
Post a Comment