ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 March, 2012

ಪ್ರೇಮಾಯಣ- ಅಮರ ಪ್ರೇಮಿಗಳ ವಿಶ್ಲೇಷಣೆ!!!-3



     <<<ಅದರೆ ಪ್ರೇಮದಲ್ಲಿ ಸೋಲೇ ಗೆಲುವು. ಅದನ್ನು ಚೆನ್ನಾಗಿ ಅರಿತುಕೊಂಡವರು ನಮ್ಮ ಪುರಾಣಗಳಲ್ಲಿ ರಾಕ್ಷಸರೆಂದು ಬಿಂಬಿತರಾದ ರಾವಣ, ಭಸ್ಮಾಸುರ, ಕೀಚಕ, ಶರ್ಮಿಸ್ಠೆ, ಶೂರ್ಪನಖಿ,ಹಿಡಿಂಬೆ…ಮುಂತಾದವರು. ಪ್ರೇಮಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ಇಂತವರ ಮುಂದೆ ರಾಮ, ದುಷ್ಯಂತರದ್ದು ಪೇಲವ ವ್ಯಕ್ತಿತ್ವವೇ.
ರಾಕ್ಷಸರೆಲ್ಲಾ ಹಾಗೆಯೇ. ಅವರು ಅತ್ಯಂತ ಮೋಹಿತರು. ಅವರು ಮೆಚ್ಚಿದವರನ್ನು ಜೀವದುಂಬಿ ಪ್ರೀತಿಸಬಲ್ಲರು. ಹಾಗೆಯೇ ಪೋಷಿಸಬಲ್ಲರು ಕೂಡಾ. ಅವರಿಗೆ ನಗರ ಸಂಸ್ಕೃತಿಯ ನಯ -ನಾಜೂಕು, ಕಪಟ-ಮೋಸಗಳು ತಿಳಿಯುತ್ತಿರಲಿಲ್ಲ. ರಾಕ್ಷಸರ ಪ್ರೇಮದ ತೀವ್ರತೆಯನ್ನು, ಆ ಉತ್ಕಟತೆಯನ್ನು ನೆನೆಸಿಕೊಂಡಾಗಲೆಲ್ಲಾ ನನಗೆ ಅಕ್ಕ ಮಹಾದೇವಿಯ ’ಅಪ್ಪಿದರೆ ಅಸ್ತಿಗಳು ನುಗ್ಗಿ ನುರಿಯಾಗಬೇಕು…ಮಚ್ಚು ಅಚ್ಚುಗವಾಗಿ ಗರಿದೊರದಂತಿರಬೇಕು’ ಎಂಬ ವಚನವೇ ನೆನಪಿಗೆ ಬರುತ್ತದೆ.. ಆ ಕ್ಷಣದ ಬದುಕನ್ನು ಅನುಭವಿಸುವಲ್ಲಿ ರಾಕ್ಷಸರೇ ಮುಂದು.>>>



      ರಾಕ್ಷಸರು ಮತ್ತು ಪ್ರೇಮ- ಯಾಕಿಲ್ಲ...ಮನೋಕಾಮನೆಗಳನ್ನು ನಿಗ್ರಹಿಸಬಲ್ಲವರಾದ ದೇವತೆಗಳೇ ಪ್ರೇಮದ ಬಲೆಗೆ ಬೀಳುತ್ತಾರೆ/ತ್ತಿದ್ದರು ಅಂದ ಮೇಲೆ ರಾಕ್ಷಸರು ಏಕೆ ಹಿಂದೆ ಬೀಳುತ್ತಾರೆ.  ವ್ಯತ್ಯಾಸವೆಂದರೆ ಅವರಿಗೆ ಪ್ರೇಮ ಮತ್ತು ಕಾಮದ ನಡುವಿನ ಭೇದ ತಿಳಿದಿರಲಿಲ್ಲ.  ಅವರ ರಕ್ತದಲ್ಲಿ ಹರಿಯುವ ತಾಮಸ ಗುಣಕ್ಕೆ ಅನುಸಾರವಾಗಿಯೇ ಪ್ರೀತಿಯನ್ನು ಮಾಡುತ್ತಿದ್ದರು ಇಲ್ಲಾ ಹೇರುತ್ತಿದ್ದರು. ದೇವತೆಗಳು ಸಾತ್ವಿಕ ಪ್ರವೃತ್ತಿಯವರಾಗಿದ್ದರೆ ರಾಕ್ಷಸರು ತಾಮಸ ಗುಣಗಳಿಂದ ಲೋಕಕ್ಕೆ ಕಂಟಕ ತರುತ್ತಿದ್ದರು. ಆದರೆ ಮಾನವರು ಮಾತ್ರ ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಗುಣಗಳನ್ನು ಹೊಂದಿದ್ದಾರೆ. ಶೇಖಡಾವಾರು ವ್ಯತ್ಯಾಸ ಅವರನ್ನು ಒಂದೊಂದು ಗುಂಪಿಗೆ ಸೇರಿಸುತ್ತವೆ. ಅಲ್ಲದೆ ಜೀವನದಲ್ಲಿ ನಡೆಯುವ ಘಟನೆಗಳು ಅವರ ಸ್ವಭಾವ ಬದಲಾಗಲು ಕಾರಣವಾಗುತ್ತದೆ.


   ಉಷಾ ಅವರು ರಾಕ್ಷಸರ ಬಗ್ಗೆ ಒಂದಿಷ್ಟು ಮೆದುವಾಗಿ ಬರೆದಿದ್ದಾರೆ. ಅವರದೇ ಅಕ್ಷರಗಳಲ್ಲಿ ಹೇಳುವುದಾದರೆ-<<ಪುರಾಣಗಳಲ್ಲಿ ಚಿತ್ರಿತರಾದ ರಾಕ್ಷಸರೆಲ್ಲಾ ಈ ನೆಲದ ಮೂಲನಿವಾಸಿಗಳಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇದ್ದರೂ ಇರಬಹುದು. ಕಾಡಿನಲ್ಲಿ ವಾಸಿಸುತ್ತಿದ್ದ ಅವರ ಮೇಲೆ ನಗರ ಸಂಸ್ಕೃತಿಯ ಜನತೆ ಆಗಾಗ ದಾಳಿ ನಡೆಸುತ್ತಿದ್ದಿರಬಹುದು. ಅದಕ್ಕಾಗಿ ರಾಕ್ಷಸರು ಕೂಡಾ ಪ್ರತಿ ದಾಳಿ ಕೈಗೊಂಡಿರಬಹುದು. ಆದರೆ ಅಕ್ಷರ ಒಡೆತನ ಹೊಂದಿದ ಪುರಾಣಗಳ ಸೃಷ್ಟಿಕರ್ತರು, ತಮ್ಮ ಕೃತಿಗಳಲ್ಲಿ ಅವರನ್ನು ರಾಕ್ಷಸರೆಂದು ಅಮಾನುಷವಾಗಿ ಚಿತ್ರಿಸಿರಬಹುದು.>>  ಉಷಾ, ನನಗೆ ಗೊತ್ತಿದ್ದ ಹಾಗೆ ರಾಕ್ಷಸರು ಕಾಡುಗಳಿಂದ ನಗರಕ್ಕೆ ಬಂದು ಜನ ಸಾಮಾನ್ಯರಿಗೆ, ಋಷಿ ಮುನಿಗಳಿಗೆ ಉಪಟಲ ಕೊಡುತ್ತಿದ್ದರಲ್ಲ. ಬಕಾಸುರನ ಕಥೆ ಗೊತ್ತಿರಬಹುದು; ನಿಮಗೆ ಅಂತೆಯೇ ದಶರಥನು ಅನೇಕ ವರುಷಗಳ ಕಾಲ ದೇವತೆಗಳಿಗೆ ಸಹಾಯ ಮಾಡಲೆಂದೇ  ರಾಕ್ಷಸರ ವಿರುದ್ಧ ಹೋರಾಡುತ್ತಾ ರಾಜ್ಯಭಾರ ಒಂದಿಷ್ಟು ನಿರ್ಲಕ್ಷಿದನೆಂದು ತಿಳಿದುಬರುತ್ತದೆ.  


    [ಇಲ್ಲಿ ರಾವಣನ ಬಗ್ಗೆ, ರಾಮ ಸೀತೆಯರ ಬಗ್ಗೆ ಬರೆದಿರುವುದು ನೋಡಿದರೆ ಜನಸಾಮಾನ್ಯರಿಗೆ ಗೊಂದಲವಾಗುವುದು....ತಿಳಿದವರು ನಿಜ ಏನೆಂದು ಬರೆಯುವುದು ಒಳ್ಳೆಯದು.http://www.doccentre.net/docsweb/adivasis_&_forests/intel_ravana.htm]


    ಮೊದಲಾಗಿ ಉಷಾ ಉಲ್ಲೇಖಿಸಿದ ಕೀಚಕನ ಬಗ್ಗೆ ತಿಳಿಯೋಣ..ಅರೇ ಅವನು ದ್ರೌಪದಿಯನ್ನು ಪ್ರೀತಿಸಿದ್ದನೆ! ಸುರಸುಂದರಿ, ಒಂಟಿಹೆಣ್ಣು, ಅಸಹಾಯಕಿ ಕಣ್ಣೆದುರು ಓಡಾಡುತ್ತಿದ್ದರೆ ಕೀಚಕನಂತ ಕಾಮುಕನಿಗೆ ಈ ದ್ರೌಪದಿಯನ್ನು ವಶಮಾಡಿಕೊಳ್ಳುವುದು ಬಲು ಸುಲಭ ಅನ್ನಿಸಿರಬೇಕು. ಮೊದಲೇ ಮುಖ ಮರೆಸಿಕೊಂಡು ಪತಿಗಳೊಂದಿಗೆ ಅಲೆಯುತ್ತಿದ್ದ ದ್ರೌಪದಿಗೆ ಈ ಕಾಮುಕ ಕಾಟಕೊಟ್ಟರೆ ಹೇಗಾಗಿರಬಹುದು! ಕೀಚಕನನ್ನು ನೀವು ಒಬ್ಬ ಪ್ರೇಮಿಯಂತೆ ಬಿಂಬಿಸಿರುವುದು ನನಗೆ ಬಹಳ ಆಶ್ಚರ್ಯ ತಂದಿತು ಉಷಾ...ಅವನೊಬ್ಬ ಕಾಮಿ..ತನ್ನನ್ನು ಅಸಹಾಯಕ ಹೆಣ್ಣಿನ ಮೇಲೆ ಹೇರಲು ಪ್ರಯತ್ನಿಸುತ್ತಿದ್ದ...ದ್ರೌಪದಿಯ ಮೇಲೆ ಕಣ್ಣು ಹಾಕಿ ಅವನ ಅವನತಿಗೆ ಅವನೇ ಕಾರಣನಾದ.
    ಉಷಾ, ರಾವಣನ ಬಗ್ಗೆ ನೀವು ಹೇಳಿದ ಉಳಿದ ಮಾತುಗಳನ್ನು ಒಪ್ಪುತ್ತೇನೆ. ಅದರಲ್ಲೂ ಅವನು ಕೈಕೆಸಿಯೆಂಬ ರಾಕ್ಷಸಿಯ ಪುತ್ರನಾದರೂ, ತನ್ನ ಬ್ರಾಹ್ಮಣ ತಂದೆ ವಿಶ್ರವನಂತೆ ಸಂಧ್ಯಾವಂದನೆಗಳು ಮೊದಲಾದ ಬ್ರಾಹ್ಮಣರ ಸಂಪ್ರದಾಯಗಳನ್ನು ಪಾಲಿಸುತ್ತಿದ್ದನೆಂದು ತಿಳಿದು ಬರುತ್ತದೆ. ಆಂತೆಯೇ ಸುಂದರನು ಬಲಶಾಲಿಯು ಮಹಾಶಿವ ಭಕ್ತನೂ ಆಗಿದ್ದನು ಎಂಬುದನ್ನು ನಾವೆಲ್ಲಾ ತಿಳಿದಿರುತ್ತೇವೆ. ಸೀತೆಯ ಸ್ವಯಂವರದಲ್ಲಿ ಪರಾಭವಗೊಂಡ ರಾವಣನು ತನ್ನ ಅವಮಾನದ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ...ಅದಕ್ಕೆ ಸರಿಯಾಗಿ ಶೂರ್ಪಖರ್ಣಿ ರಾಮ ಲಕ್ಷ್ಮಣರ ದೂರು ತಂದಳು. ಅರೇ ನೆನಪಾಯಿತು..ನೀವು ನಿಮ್ಮ ಆದರ್ಶ ಪ್ರೇಮಿಗಳಲ್ಲಿ ಶೂರ್ಪಖರ್ಣಿಯನ್ನೂ ಉಲ್ಲೇಖಿಸಿದರಲ್ಲವೆ? ಸುರಸುಂದರ ರಾಮನ ಮನೋಹರ ರೂಪಕ್ಕೆ ಮನಸೋತ ಅವಳು ರಾಮ ನಿರಾಕರಿಸಿದನೆಂದು ಲಕ್ಷ್ಮಣನನ್ನು ಕಾಡುತ್ತಾಳೆ...ಮೊದಲೇ ತಿಳಿಸಿದಂತೆ ಇಲ್ಲಿ ಅವಳು ರಾಮ ಲಕ್ಷ್ಮಣರ ಮೇಲೆ ತನ್ನನ್ನು ಬಲವಂತವಾಗಿ ಹೇರಲು ಯತ್ನಿಸುವುದು ಸರಿಯೇ. ಅದು ಸಹ ನಿಜ ರೂಪವನ್ನು ಮುಚ್ಚಿ! ಸರಿ, ಮತ್ತೆ ರಾವಣನ ವಿಚಾರಕ್ಕೆ ಹಿಂದಿರುಗೋಣ. ಸೌಂದರ್ಯದ ಖನಿ ಸೀತೆಯನ್ನು ಪಡೆಯಲಾಗದ ದುಃಖವಿತ್ತು ರಾವಣನಿಗೆ.  ಅಲ್ಲದೆ ಅಪಮಾನದ ವಿಷಯವೂ ಕೂಡ ಕೊರೆಯುತ್ತಿತ್ತು. ಎಲ್ಲವೂ ಮೇಳೈಸಿ ಸೀತೆಯ ಅಪಹರಣಕ್ಕೆ ಕಾರಣವಾಯಿತು. ಒಬ್ಬ ವಿವಾಹಿತ ಸ್ತ್ರೀಯನ್ನು ಪ್ರೀತಿಯ ಹೆಸರಲ್ಲಿ ಅಪಹರಿಸುವುದು ಸರಿಯೇ? ನನಗಿಲ್ಲಿ ಅನಿಸುವುದೇನೆಂದರೆ ಆಗಿನ ಕಾಲಕ್ಕೆ ಬಹುಶಃ ರಾವಣನಿಗೆ ಈ ಆಸಿಡ್‌ (ಆಮ್ಲ) ಬಗ್ಗೆ ಗೊತ್ತಿಲ್ಲವಿರಬಹುದು..ಈಗಿನ ಕಾಲದ ರಾವಣರು ಪ್ರೀತಿ ಮಾಡದಿದ್ದರೆ ಈ ದ್ರಾವಣವನ್ನು ಸುರಿದು ಜೀವನಮಾನ ಪರ್ಯಂತ ನರಳುವಂತೆ ಕಾಡುತ್ತಾರಲ್ಲವ!   ಮಂಡೋದರಿಯಂತಹ ಸುಂದರಿ, ಗುಣವಂತೆ ಪತ್ನಿಯಿದ್ದರೂ ಪರಸತಿಯನ್ನು ಪ್ರೀತಿಸುವುದು ( ಕಾಮಿಸುವುದು) ಸರಿಯೆನ್ನುತ್ತಿರಾ? ಸೀತೆಯ ನಿಷ್ಕಲ್ಮಷ ಪ್ರೇಮ ಅವಳನ್ನು ರಕ್ಷಿಸಿತು. ಒಟ್ಟರೆ ಪ್ರೇಮವಿರುವಲ್ಲಿ ಕಾಮವಿರಬಹುದು..ಆದರೆ ಕಾಮವಿರುವಲ್ಲಿ ಪ್ರೇಮವಿರಬೇಕೇನೆಂದಿಲ್ಲ!


        ಆದರೆ ಶರ್ಮಿಷ್ಠೆ ರಾಕ್ಷಸ ವಂಶದಲ್ಲಿ ಹುಟ್ಟಿದರೂ ಯಯಾತಿಯನ್ನು ಮನಃಪೂರ್ವಕವಾಗಿ ಆರಾಧಿಸುತ್ತಿದ್ದಳು..ತ್ರಿಕೋಣ ಪ್ರೇಮದಲ್ಲಿ ಅವಳಿಗೆ ದೇವಯಾನಿ ಅನ್ಯಾಯ ಮಾಡುತ್ತಿದ್ದಳಾದರೂ ಅದನ್ನು ಅವಳ ಸ್ವಭಾವಕ್ಕೆ ವಿರುದ್ಧವಾಗಿ ಸಹಿಸಿಕೊಂಡಿದ್ದಳು. ನಿಮ್ಮ ಮಾತಿಗೆ ನನ್ನ ಸಹಮತವಿದೆ.


   ಕೊನೆಯ ಘಟ್ಟಕ್ಕೆ ಬಂದಿದ್ದೇವೆ. ಪ್ರೀತಿಗೆ ರಾಧಾ- ಕೃಷ್ಣ : ಶಿವ - ಶಂಕರಿಯರು ಪರ್ಯಾಯವೆಂದರೆ ತಪ್ಪಾಗೊಲ್ಲ ಅಲ್ಲವೆ!  ನಿಷ್ಕಂಳಕ, ನಿಷ್ಕಲ್ಮಶ ಪ್ರೀತಿಗೆ ಹೆಸರಾದವಳು ರಾಧಾ! ಗೋಪಾಲನನ್ನು ಕೊನೆಯ ಉಸಿರಿರುವ ತನಕ ಆರಾಧಿಸಿದಳು. ಗೋಕುಲಕ್ಕೆ ಬೆನ್ನು ಹಾಕಿ ಮಥುರೆಗೆ ಹೊರಟ ಮುರಳಿ ಮತ್ತೆ ತನ್ನ ಪ್ರಿಯತಮೆಯ/ರನ್ನು ಭೇಟಿಯಾಗಲಿಲ್ಲ. ಗೋಕುಲಕ್ಕೆ ಬಂದ ವಿಧುರನನ್ನು ಮುತ್ತಿಗೆ ಹಾಕಿ ಆ ಗೋಪಿಯರು ಮುಗ್ಧ ಭಾವದಿಂದ ತಮ್ಮ ಪ್ರಾಣ ಸಖನ ವಿಚಾರ ಕೇಳುವುದು ಓದಿದರೆ ಎಂಥಹ ಕಠಿಣ ಹೃದಯವೂ ಕೂಡ ಕರಗುವುದರಲ್ಲಿ ಸಂದೇಹವಿಲ್ಲ. ಅಷ್ಟೊಂದು ಪ್ರೇಮ ಭಾವತುಂಬಿದ್ದರೂ ಅವರೆಂದು ಕೃಷ್ಣನನ್ನು ದೂರುವುದಿಲ್ಲ..ಯಾಕೆಂದರೆ ಆ ಒಲವಿನಲ್ಲಿ ಸ್ವಾರ್ಥವಿರಲಿಲ್ಲ....ತಮ್ಮ ಹೃದಯದಲ್ಲಿಟ್ಟು ಆರಾಧಿಸುತ್ತಿದ್ದರು ರಾಧಾ ಮತ್ತು ಗೋಪಿಯರು. ಅದರಿಂದಾಗಿಯೇ ದಾಸರು ಗೋಪಿಯರ ಭಕುತಿಗೆ ಸಾಟಿಯಿಲ್ಲವೆನ್ನುವರು. ಮೀರಾಳು ಬಾಲ್ಯದಲ್ಲಿಯೇ ಗಿರಿಧರನನ್ನು ತನ್ನ ಹೃದಯ ಮಂದಿರದಲ್ಲಿ ಪ್ರತಿಷ್ಟಾಪಿಸಿದ್ದಳು...ಉತ್ಕಟ ಪ್ರೇಮವೇ ಅವಳನ್ನು ಕವಯತ್ರಿಯನ್ನಾಗಿ ರೂಪಿಸಿತೆಂದರೆ ಹೇಗೆ? ತನ್ನ ದೇಹದ ಅರ್ಧಭಾಗದಲ್ಲಿ ಸತಿಯನ್ನು ಪ್ರತಿಷ್ಟಾಪಿಸಿ ಪ್ರೇಮಿಗಳಿಗೆ ಮಾದರಿಯಾಗುವನು ನಮ್ಮ ಗೌರೀಶ! ಅಲ್ಲದೆ ತನ್ನ ನಾರಿಮಣಿಯಿಂದ ಅನೇಕ ಅವತಾರಗಳನ್ನು ಎತ್ತಿಸಿ ನಿಜ ಅರ್ಥದಲ್ಲಿ ಅವಳಿಗೆ ತನ್ನ ಸರಿಸಮಾನಳನ್ನಾಗಿ ಮಾಡಿದ್ದಾನೆ ಪರಶಿವ!
   वागर्थाविव संपृक्तौ वागर्थप्रतिपत्तये|
जगतः पितरौ वन्दे पार्वतीपरमेश्वरौ||
ಈ ಶ್ಲೋಕವು ನನ್ನ  ಸಂಸ್ಕೃತ ಪಠ್ಯದ ಮೊದಲ ಪಾಠದಲ್ಲಿ ಬಂದಿತ್ತು..ಇವತ್ತಿನವರೆಗೂ ನನಗೆ ಅತೀಪ್ರಿಯವಾಗಿದೆ. ರಘುವಂಶದಲ್ಲಿ ಬರುವುದಿದು. ಅಂದರೆ ಹೇಗೆ ಮಾತು ಮತ್ತು ಅರ್ಥಗಳನ್ನು ಬೇರೆಮಾಡಲಾಗುವುದಿಲ್ಲವೋ ಅಂತೆಯೇ ಇರುವ  ಜಗತ್ತಿನ ತಂದೆ ತಾಯಿಗಳಾದ ಪಾರ್ವತಿ ಪರಮೇಶ್ವರರಿಗೆ ನನ್ನ ನಮಸ್ಕಾರ! ಕಾಳಿದಾಸನು ಕೆಲವೇ ಶಬ್ದಗಳಲ್ಲಿ ಶಿವ ಶಿವೆಯರ ಪ್ರೇಮವನ್ನು ಅರ್ಥಪೂರ್ಣವಾಗಿ ವರ್ಣಿಸಿದ್ದಾನೆ.
   
     


   

1 comment:

kiran said...

ಯಪ್ಪಾ ಭಗವಂತಾ... ತುಂಬಾ ಆಳವಾಗಿದೆ ಶೀಲಕ್ಕ
ನನ್ನಂತವರಿಗೆ ಅರ್ಥ ಆಗೋಕೆ ೫೦ ಸಲ ಓದಬೇಕೆನೋ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...