ಸಖಿಯ ಎದೆಯ ಬಡಿತ,
ದೂರದಲ್ಲಿರುವ ಸಖನ ಹೃದಯಲ್ಲದರ ಮಿಡಿತ,
ಬಡಿತ ಮಿಡಿತಗಳಿಗಾಟ,
ಹೃದಯಗಳಿಗೆ ಹೊಸ ಪರಿಯ ಹೊಯ್ದಾಟ!
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
ಜೀವನದಲ್ಲಿ ಮಾಗಿದ, ಪ್ರೀತಿಗಾಗಿ ಪರಿತಪಿಸುವ ಎರಡು ಪ್ರೌಢ ಜೀವಿಗಳ ಮಧ್ಯದಲ್ಲಿ ನಡೆಯುವ ಒಂದು ಕಾವ್ಯಮಯ ಸಂವಾದ...ಇದು ಒಂದು ಕಲ್ಪನೆ..ಆದರೆ ಒಂದು ವೇಳೆ ಇದರಂತೆ ಯಾರಾದರೂ ಮಾತನಾಡಿಕೊಂಡ ಹೋಲಿಕೆಯಿದ್ದಲ್ಲಿ ನಾ ಅದಕ್ಕೆ ಹೊಣೆಯಲ್ಲ..:-)
ನಲ್ಲೆ:-
ನಿಶಾ ದೇವಿಯ ಮಡಿಲಲ್ಲಿ
ನನ್ನೆಲ್ಲ ದುಃಖ ದುಮ್ಮಾನಗಳ
ಮರೆತು ಹಾಯಾಗಿ ಪವಡಿಸಿದ್ದೆ;
ತನು ಮನವೆರಡೂ ತಮ್ಮ
ದಿನದ ಭಾರವ
ಕಳಚಿ ವಿರಮಿಸುತಿರೆ,
ಎಬ್ಬಿಸಿದೆಯಲ್ಲವೆ ಗೆಳೆಯ ನೀ;
ಖಾಲಿ ಹಾಳೆಯ ಕೈಗಿತ್ತು,
ಲೇಖನಿ ಹಸ್ತದಲಿರಿಸಿ,
ನನ್ನೊಳಗಿಂದ ಚಿಮ್ಮುತ್ತಿದ್ದ ಭಾವನೆಗಳಿಗೆ;
ಅಕ್ಷರರೂಪ ಕೊಡಲು ಸೂಚಿಸಿದೆ!
ನಿಶೆಯ ಮತ್ತಲ್ಲಿದ್ದ ನಾ,
ಮುನಿಸು ತೋರಿದೆ ನಿನ್ನಲ್ಲಿ!
ಏನು ಈ ಪರಿಪಾಟ;
ಹೊತ್ತು ಗೊತ್ತು ಇಲ್ಲದೆ,
ಕೊಡುವಿಯೇಕೆ ಕಾಟ!
ಸಿಟ್ಟಿಗೆದ್ದ ಗೆಳತಿಯ ತಾಪಕೆ ಬೆದರಿ;
ಅದೃಶ್ಯವಾದೆ ನೀ,
ಜೊತೆಗೆ ನನ್ನ ನಿದ್ದೆಯೂ!
*********************
ನಲ್ಲ:-
ಕಾಟವೆನ್ನದಿರು ಕಾಟವಲ್ಲದು ಬರಿಯ ಹೃದಯಗಳ ನಡುವಿನಾಟ
ಆತ್ಮ-ಆತ್ಮಗಳ ನಡುವೆ ನಿರಂತರವಾಗಿ ನಡೆವ ಹುಡುಕಾಟ
ಎಲ್ಲೋ ಎಂದೋ ಮರೆತ ಭಾಂಧ ಇಂದಿಲ್ಲಿ ಒಂದುಗೂಡಿರಬಹುದು
ನಿನ್ನೊಳಗಿನ ಪ್ರತಿಭೆಯ ಹೊರತರಲೆನೆನ್ನನು ಕಾರಣವಾಗಿಸಿರಬಹುದು
********************
ನಲ್ಲೆ:-
ಹೇಳೇ ಹುಚ್ಚು ಹುಡುಗಿ, ಇತ್ತಲ್ಲವೆ ನಿನಗೆ ಹಮ್ಮು
ನೀನಾವ ಸೆಳೆತಕೆ ಸಿಲುಕಲೊಲ್ಲೆಯೆಂದು.
ಹೃದಯ ಮಂದಿರದ ಭದ್ರ ಕೋಟೆಯ
ಕದಕ್ಕಿತ್ತ ಚುಟುಕು ದನಿಗೆ ತೆರೆದಿಯಲ್ಲವೆ ಅಗಣಿ!
********************
ನಲ್ಲೆ:-
ಮನದೊಳ ತಕಲಾಟ
ಯಾಕೆ ಈ ಹಾರಾಟ
ಉಂಟೆ ಉತ್ತರ ನಿನ್ನಲ್ಲಿ
ಹೇಳಿ ನನ್ನನ್ನು ಉದ್ಧರಿಸು!
*****************
ನಲ್ಲ;- ಪ್ರಶ್ನೆಯನ್ನು ಸ್ವಲ್ಪ ವಿವರಿಸಿದರೆ ಸಿಗಬಹುದು ಉದ್ಧರಿಸುವವನ ಉತ್ತರ; ಪ್ರಶ್ನೆಯೇ ಗೊಂದಲಮಯವಾದರೆ, ಹೇಗೆ ನೀಡಬಹುದು ನಾ ಉತ್ತರ? ********************ನಲ್ಲೆ:- ಪ್ರಶ್ನೆಯೇ ತಿಳಿದಿಲ್ಲ ಎನಗೆ ಆದರೂ ಉತ್ತರ ನಿನ್ನ ಬಳಿಇರಬಹುದೆಂಬ ಭರವಸೆಯೆನಗೆ!
*******************
ನಲ್ಲ:-
ಆತ್ಮ ಆತ್ಮಗಳಾ ಸ್ನೇಹಬಂಧವಿದು
ಕಡೆಗಣಿಸದಿರು ದೇವನಿಚ್ಛೆಯನು
ಒಂದೆರಡು ದಿನಗಳಿಗೆ ಸೀಮಿತಗೊಳಿಸಿ
ತೊರೆಯದಿರು ಸ್ನೇಹವನು
ಜೀವನದುದ್ದಕ್ಕೂ ಜೀವನದಾಚೆಗೂ
ಇರುವಂತೆ ನಮ್ಮೀ ಸ್ನೇಹ ಶಾಶ್ವತ
ಆ ಭಗವಂತನಲಿ ಬೇಡೋಣ ಹೇಳು
ಇದಕ್ಕೀಗ ನಿನ್ನದೇನು ಅಭಿಮತ?
************************
ನಲ್ಲ:- ನಿನ್ನ ಮನಸ್ಥಿತಿಯ ಅರಿವು ನನಗಾಗುತ್ತಿದೆ ಇಲ್ಲ ಅನ್ನಲಾರೆ; ಆದರೆ ಎಲ್ಲವನ್ನೂ ಬಿಡಿ ಬಿಡಿಸಿ ಹೇಳಿದರೆ, ಏನು ಚೆನ್ನ: ಕೆಲವು ಉತ್ತರವಿಲ್ಲದ ಪ್ರಶ್ನೆಗಳು, ಕೆಲವು ಪ್ರಶ್ನೆಯೇ ಕೇಳದೇ ಸಿಗುವ ಉತ್ತರಗಳು; ಪರಮಾತ್ಮನು ಹಾಗೆಯೇ ನಾವು ಯಾವ ಪ್ರಶ್ನೆ ಕೇಳದೇ ಕಳುಹಿಸಿಬಿಡುತ್ತಾನೆ ನಮ್ಮ ಜೀವನಕ್ಕೆ ಉತ್ತರಗಳನು ಸದ್ದಿಲ್ಲದೆ! ಆತ್ಮ-ಪರಮಾತ್ಮಗಳ ನಡುವಿನ ಸೆಳೆತ ಪರಮಾತ್ಮನಿಗಷ್ಟೇ ಗೊತ್ತು!
ಕಾರಣ ಹುಡುಕುವುದು ಮೂರ್ಖತನ;
ಹುಡುಕಿದರೂ ಸಿಗದು ಕಾರಣ ನಮಗೆ!
***************************
ನಲ್ಲೆ:-
ನಿನ ಬಳಿಯೂ ನನ ಬಳಿಯೂ
ಉತ್ತರವಿಲವಿದಕೆ;
ಒಡೆಯನ ನಿಯಮಕೆ
ತಲೆಬಾಗಿ ನಿಂತೆ;
ಅವನಾಡಿಸುವ ಪಾತ್ರಧಾರಿ ನಾ!
*************************
ನಲ್ಲ:-
ಆತ್ಮ ಆತ್ಮಗಳಾ ಸ್ನೇಹ ಸಂಬಂಧವಿದು
ಕಡೆಗಣಿಸದಿರು ದೇವಯಿಚ್ಛೆಯನು;
ಒಂದೆರಡು ದಿನಗಳಿಗೆ ಸೀಮಿತಗೊಳಿಸಿ
ತೊರೆಯದಿರು ಸ್ನೇಹವನು;
ಜೀವನದುದ್ದಕ್ಕೂ ಜೀವನದಾಚೆಗೂ
ಇರುವಂತೆ ನಮ್ಮೀ ಸ್ನೇಹ ಶಾಶ್ವತ;
ಆ ಭಗವಂತನಲಿ ಬೇಡೋಣ ಹೇಳು
ಇದಕ್ಕೀಗ ನಿನ್ನದೇನು ಅಭಿಮತ?
**************************
ನಲ್ಲೆ:-
ನಿನ್ನ ಮತವೇ
ನನ್ನ ಅಭಿಮತ!
************
ನಲ್ಲ:-
ಹೃದಯದಲಿ ಮನೆಮಾಡಿದವರು
ದೂರವಾದರೆ ಮರಣದ ಮೆಟ್ಟಲೇರುವಂತೆ
ನಿಧಾನವಾಗಿ ಒಳಗೊಳಗೆ ಸುಡುತ್ತದೆ ಈ
ಹೃದಯವನು ಮತ್ತೆ ಸ್ಪಂದಿಸದಂತೆ!
ಹೃದಯವೇ ಉರಿದು ಹೋದ ಮೇಲೆ
ಸ್ಪಂದಿಸುವುದು ಎಲ್ಲಿಂದ....
ಬೇಕೆ ಮತ್ತೆ ಏನೂ....
ಕಗ್ಗತ್ತಲಾಗುವುದು ಬಾಳು!
ಕುಂತಲ್ಲಿ, ನಿಂತಲ್ಲಿ, ನಡೆವಲ್ಲಿ, ಸದಾಕಾಲ
ನಡೆಯುತ್ತಲೇ ಇರುತ್ತದೆ ಮಾತುಕತೆ
ಹೃದಯದೊಳಗಿದ್ದರೆ ಸಾಕು, ಅನುಭವ
ಮಾತ್ರ ಸದಾ ಜೊತೆಯಲೇ ಇರುವಂತೆ!
ನಿಜ ಹೇಳು ಈ ಅನಿಸಿಕೆಗಳೆಲ್ಲಾ
ನನ್ನದಷ್ಟೇಯಾ
ಅಲ್ಲ ನಿನ್ನ ಮನದೊಳಗೂ
ಮನೆಮಾಡಿವೆಯಾ?
*********************
ನಲ್ಲೆ:-
ಕೇಳಬೇಡ ಏನೂ ನಲ್ಲ
ನಾ ಏನೂ ಹೇಳಲಾರೆಯಲ್ಲ!
**************
ನಲ್ಲ:-
ಯಾಕೆ ಹಾಗೆ...
ಹೇಳದೇ ನಾ ಅರಿಯಬೇಕೆಂದೇ....
ಹೇಳಿದರೆ ನಾ ಮುನಿಯುವೆನೆಂದೇ?
********************
ನಲ್ಲೆ:-
ನೀ ಏನಬೇಕಾದರೆ ತಿಳಿದುಕೋ
ಮನವ ತಿಳಿದವನು ಮುನಿಯುವನೇ?
ಎಲ್ಲ ಬಿಚ್ಚಿ ಹೇಳಿದರೇನು ಚೆನ್ನವೇ!
*******************
ನಲ್ಲ:-
ಏನಿದು ತುಮುಲ,
ಏನಿದು ತಾಕಲಾಟ,
ಏಕೆ ಹೀಗೆ?
ಆಗಿತ್ತೆ ಹಿಂದೆಂದಾದರೂ
ನಿನಗೆ ಹೀಗೆ?
**********************
ನಲ್ಲೆ:-
ಕೇಳಿದೆ ನನ್ನೊಳಗಿನ ಆತ್ಮವ
ಎಂದೆಂದಾದರೂ ನೀ ಈ
ರೀತಿಯ ಹುಚ್ಚುತನದ ಅನುಭವ ಪಡೆದಿದ್ದಿಯಾ ಎಂದು. ಮೌನವಾಗಿದೆ... ಗೊತ್ತು ನನಗೆ ಚಕಿತವಾಗಿದೆಯೆಂದು...
ಉತ್ತರ ನೀಡಲು ಸೋತಿದೆಯೆಂದು! ************
ನಲ್ಲ:-
ಆ ಪರಮಾತ್ಮನಿಗಿದೋ ನನ್ನ
ಸಾಷ್ಟಾಂಗ ನಮಸ್ಕಾರಗಳು!
ಜೀವನದ ಈ ಪಯಣದಲ್ಲಿ ನಮಗೀಗ
ಹೊಸ ಅನುಭವಗಳು!
ಮನಕೆ ಮುದನೀಡಿ ರೋಮಾಂಚನಗೊಳಿಸಿ
ಕಾಡುವ ಕ್ಷಣಗಳು!
ಮುಂದಡಿಯಿಡಲು ಅಳುಕಿಲ್ಲ,
ಅನುಮಾನವಿಲ್ಲ ಪ್ರತಿ ಹೆಜ್ಜೆಯಲೂ!
*******************