ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

19 August, 2013

ಅನುಭವದ ಮಾತು!

ನಿಷ್ಕಳಂಕ, ನಿಷ್ಕಲ್ಮಶ ಹೃದಯದಿಂದ ಏನನ್ನೂ ಮುಚ್ಚಿಡಲಾಗದು!

ಪುರಸ್ಕಾರದ ಖುಷಿ, ತಿರಸ್ಕಾರದ ನೋವು ಎರಡೂ ತಟ್ಟುತ್ತದೆ ನೇರವಾಗಿ!

 Acceptance and denial both cannot be hidden from a genuine heart!


18 August, 2013

ವ್ಯಾಘ್ರನಿಗೊಂದು ಸಂದೇಶ!


ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ

ಚಂಡ ವ್ಯಾಘ್ರನೇ, ನೀನಿದೆಲ್ಲವ ಉಂಡು ಸಂತಸದಿಂದಿರು


ನನ್ನ ಮುದ್ದು, ಮುಗ್ಧ ಕರುಗಳ ಸುದ್ದಿಗೆ ಮಾತ್ರ ಹೋಗದಿರು!

ನುಡಿ!

ಮನಸಾರೆ ನುಡಿದ ನುಡಿ ಹಾದಿ ತಪ್ಪದೇ ಸೇರಬೇಕಾದ ಮನವನ್ನೇ ಸೇರುತ್ತದೆ!

-ರೂಮಿ

ಮಾತು-ಮೌನ


ಮಾತು ಆಡಿ ಆಡಿ ಕೊಚ್ಚಿಕೊಳ್ಳುವುದನ್ಯಾವಾಗ ಬಿಡಬಲ್ಲೆನೋ?

ಮೌನವೆಂಬ ಅಪೂರ್ವ ಸುಂದರ ಕಲೆಯನು ಇನ್ಯಾವಾಗ ಕಲಿತುಕೊಳ್ಳುವೆನೋ?


-ಪ್ರೇರಣೆ ರೂಮಿ

ಸೋತೆ ಎಂದರೆ ಸಾಕು ತಾನೆ!


ತಗೋ, ನೋಡು ಬಿಳಿ ಬಾವುಟ ಹಾರಿಸಿದ್ದೇನೆ..
ಇನ್ನಿಲ್ಲ ಯುದ್ಧ ಮಾಡುವ ಶಕ್ತಿ ನನ್ನಲ್ಲಿ..
ನೀನೇ ಗೆದ್ದೆ!

ಇದನ್ನೇ ಕೇಳಬೇಕಾಗಿತ್ತಲ್ಲವೆ ನಿನಗೆ, ವಿಧಿಯೇ!

17 August, 2013

ಹಗುರವಾಗಬೇಕಾಗಿದೆಯೇ ಕೋಗಿಲೆ!

ಎಂದಿಲ್ಲದ ನೆನಪು ಕಾಡಿದೆಯೇ ನಿನ್ನ

ನನ್ನ ವಸಂತ ಮಾಸದ ಕೋಗಿಲೆಯೇ

ನಿನ್ನಲ್ಲಿ ಹೇಳಿ ಹಗುರವಾಗಬೇಕಾದ

ಮಾತುಗಳು ನೂರಾರಿವೆ ಹಾಗೆಯೇ

ನೀ ಬಂದು ಜಡ ಮುಂಜಾವುಗಳಲಿ


ಮತ್ತೆ ಜೀವ ತುಂಬಿಸುವೆಯಾ?

ಹೀಗೊಂದು ಮಹಾಕಾವ್ಯ!

ಯಾರದೋ ಭಾವ
ಮತ್ಯಾರದೋ ಶಬ್ದ
ಎರವಲು ಪಡೆದು
ಪೋಣಿಸಿದರೆ ಸಾಕು
ಮಹಾಕಾವ್ಯ ಸಿದ್ಧ
ಮತ್ತೆ ತಡೆಯುಂಟೇ

ವಾಹ್ ವಾಹ್ ಗಳ ವರ್ಷ!

ಕಾಣೆಯಾಗಿಹನು ನನ್ನ ಶಿಲ್ಪಿ... ಹುಡುಕಿಕೊಡುವಿರಾ ಪ್ಲೀಸ್!

ಅಂಗಣದ ಮೂಲೆಯಲ್ಲಿ ಕರಿಶಿಲೆ
ಆಕರ್ಷಕವಿತ್ತೇನೋ..
ಮತ್ತೆ ಮತ್ತೆ ಕೆತ್ತಲೆತ್ನಿಸಿದರೂ ಇವನು..
ಎಲ್ಲಿ ಏನೂ ಬದಲಾವಣೆಯಿಲ್ಲ..
ಹ್ಮ್! ಇವನು ಶಿಲ್ಪಿಯೇ ಅಲ್ಲ.. ಉಳಿಗೆಯೇ ಇಲ್ಲ ಇವನಲ್ಲಿ!
ನಸುನಕ್ಕಿತು ಶಿಲೆ!
ಹೊತ್ತೊಯ್ದರು ಅವರು..
ಇದೀಗ ಉಳಿಗೆ ಪೆಟ್ಟು.. ಅಷ್ಟಿಷ್ಟಲ್ಲ.. ಲೆಕ್ಕವಿಟ್ಟವರ್ಯಾರು!
ಛೀ.. ಛೀ.. ಬಡವಾಯಿತು.. ಅನಾಕರ್ಷವಾಯಿತಲ್ಲ!
ಮತ್ತೆ ಬಿಸುಟರು ಅದೇ ಅಂಗಣಕ್ಕೆ..
ಕೆಲಕಾಲ ಶಿಲೆ ಮೌನ ತಪಸ್ಸಿನಲ್ಲೇ..
ಮತ್ತೆ ಬೆಳೆಯಿತೇ..
ಅರೇ! ಇವನ್ಯಾರು.. ಏನೆಲ್ಲಾ ಸಲಕರಣೆ..
ನೋವೇ ಇಲ್ಲವಲ್ಲ..
ಅತ್ತಿತ್ತ, ಹೊರಗೊಳಗೆ ನಡೆಯುತ್ತ ಉಳಿಗೆ ಪೆಟ್ಟು ಕೊಡುತ್ತಾ... ಶಿಲ್ಪಿ ಮೆಚ್ಚಿದನೇ..
ಓಹೋ! ಸುಂದರ.. ಅತೀ ಸುಂದರ ಶಿಲ್ಪ!
ಆಚೀಚೆ ಹೋಗುವವರು ತಲೆದೂಗುವರು..
ಮುಟ್ಟಲೆತ್ನಿಸುವರು..
ಶಿಲೆಗೋ ಹೆಮ್ಮೆ.. ತಾನೂ ಶಿಲ್ಪವಾದೆ!
ಕತ್ತೆತ್ತಿ ಕೆತ್ತಿದವನಿಗೊಂದು ಸಲಾಂ ಕೊಡಬೇಕೆಂದರೆ.. ಎಲ್ಲಿ ಅವನು?
ಮತ್ತಿಷ್ಟು ಕೆತ್ತಲವನು.. ಇನ್ನೂ ಚಂದವಾಗುವಾಸೆ..
“ಕಾಣೆಯಾಗಿಹನು ನನ್ನ ಶಿಲ್ಪಿ.. ಹುಡುಕಿಕೊಡುವಿರಾ .. “

ಇದೀಗ ನೋಡಲು ಬಂದವರೆಲ್ಲರಲ್ಲಿ ಶಿಲೆಯ ಗೋಳು!

ಹೀಗೇ.. ಸುಮ್ಮನೆ!


ನಾ ಬರೆದುದನು ಪದ್ಯವೆನ್ನೋ ಹಾಗಿಲ್ಲ.. ಅಂತಾರಲ್ಲಪ್ಪ
ಹಾಗಾದರೆ ಅದು ಗದ್ಯವೇನು.. ತಲೆ ತಿರುಗಿಸ್ತಾರಪ್ಪ

ನಾ ಅವನ್ನು ಹೃದ್ಯವೆನ್ನಲೇನು? ಮೌನಿಯಾಗ್ತಾರಪ್ಪ!

16 August, 2013

ತುಝ್ಸೆ ನಾರಾಜ಼್ ನಹೀ ಜ಼ಿಂದಗಿ!

-
ತುಝ್ಸೆ ನಾರಾಜ಼್ ನಹೀ ಜ಼ಿಂದಗಿ!
--------------------------

ತಿಳಿದಿರಲಿಲ್ಲ ಬದುಕಲು ನೋವು ಹೊರಬೇಕೆಂದು
ನಕ್ಕರೂ, ನಗುವಿನ ಋಣ ತೀರಿಸಬೇಕಾಗುವುದೆಂದೂ
ಭಯ ಈಗೀಗ ನನಗೆ ನಕ್ಕರೊಮ್ಮೆ ಎಲ್ಲಾದರು
ತುಟಿಯ ಮೇಲೆ ಋಣ ಭಾರವಿರಿಸುವೆನೆಂದು ||

ಇಲ್ಲ ಬದುಕೆ, ನಿನ್ನ ಮೇಲೇನೂ ಕೋಪವಿಲ್ಲ
ಚಕಿತಳಾಗಿರುವೆ ನಾ ಚಕಿತಳಾಗಿರುವೆ
ನಿನ್ನೆಲ್ಲಾ ಮುಗ್ಧ ಪ್ರಶ್ನೆಗಳಿಗೆ||

ತುಂಬಿ ಬಂದಿದ್ದರೊಮ್ಮೆ ಇಂದು
ದಪ್ಪ ಹನಿಗಳಾಗಿ ಉದುರಿ ಹೋಗುವುದು
ನಾಳೆ ಏನಾಗುವುದೆಂದು ತಿಳಿದಿಲ್ಲವಿನ್ನು
ಕಣ್ಣುಗಳು ಹಂಬಲಿಸುವವು
ಎಲ್ಲಿ ಯಾವಾಗ ಹೋಗುವುದೇನೋ ಕಳೆದು
ಬಚ್ಚಿಡುವೆ ಕಂಬನಿಯೊಂದನ್ನು||

ಇಲ್ಲ ಬದುಕೆ, ನಿನ್ನ ಮೇಲೇನೂ ಕೋಪವಿಲ್ಲ
ಚಕಿತಳಾಗಿರುವೆ ನಾ ಚಕಿತಳಾಗಿರುವೆ
ನಿನ್ನೆಲ್ಲಾ ಮುಗ್ಧ ಪ್ರಶ್ನೆಗಳಿಗೆ||






ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...