ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 November, 2012

ಅವಳ ಗೊಂದಲ- ಸಣ್ಣ ಕತೆ!


      ಬಹಳ ಸಮಯದ ನಂತರ ಅತ್ತೆ ಮನೆಗೆ ಅವಳ ಭೇಟಿ. ಮನೆಯಲ್ಲಿ ಮೈದುನನ ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸಿಲ್ಲ. ಎಲ್ಲರ ಮುಖದಲ್ಲಿ ಎಂದೂ ಕಾಣದ ನಿರಾಳತೆ.. ಅತ್ತೆಯ ಗೈರುಹಾಜರಿಯ ಪರಿವೆ ಯಾರಿಗೂ ಇದ್ದಂತೆ ಕಾಣಲಿಲ್ಲ. ಸಂಜೆ ಎಲ್ಲರೂ ಹಾಲಿನಲ್ಲಿ ಸೇರಿ ಟಿ ವಿಯಲ್ಲಿ ಏನೋ ನೋಡುತ್ತಿದ್ದಾರೆ.. ಮೈದುನ ತಯಾರಾಗಿ ಬಂದುದನ್ನು ನೋಡಿದಳು. ಅವಳ ಬಳಿಯಲ್ಲಿ ಕುಳಿತ್ತಿದ್ದ ತನ್ನ ಹೆಂಡತಿಯನ್ನು ಸನ್ನೆಯಲ್ಲೇ ಕರೆಯುತ್ತಿದ್ದಾನೆ. ಅವಳ ಓರಗಿತ್ತಿಯಾದರೋ ನಾಚಿಕೆ ಗೀಚಿಕೆ ತೋರ್ಪಡಿಸದೇ ಕೂಡಲೇ ಎದ್ದು ತಯಾರಾಗಲಿಕ್ಕೆ ಹೋದಳು. ಅವಳು ಬಿಟ್ಟಬಾಯಿ ಮುಚ್ಚದೇ ಅದನ್ನು ನೋಡುತ್ತ ೩ವರ್ಷದ ಹಿಂದಿನ ತನ್ನ ಮದುವೆಯ ದಿನಗಳ ಕಾಲಕ್ಕೆ ಹೋದಳು.... 
                       

         ಮದುವೆ ಆಗಿ ೩ ದಿನ ಕಳೆದಿದ್ದರೂ ಅವಳ ಕೈಯ ಮದರಂಗಿಯ ಬಣ್ಣ ಮಾಸಿರಲಿಲ್ಲ..ಬದಲು ಮತ್ತಷ್ಟು ಗಾಢವಾಗಿ ಎದ್ದು ಕಾಣುತಿತ್ತು..ಎಲ್ಲರೂ ರಂಗು ಗಾಢವಾದುದನ್ನು ನೋಡಿ ಇವಳನ್ನು ಛೇಡಿಸುತ್ತಿದ್ದರು. ಇವಳೊ ನಾಚಿಕೆಯ ನಟನೆಯನ್ನು ತೋರಿಸುತ್ತಿದ್ದಳು. ಸಂಜೆ ಸರಿಸುಮಾರು ೭ಗಂಟೆ.. ಅತ್ತೆ ಕೆಸುವಿನ ಎಲೆಗಳನ್ನು ತೊಳೆಯಲು ನವವಧುವಿಗೆ ಅಪ್ಪಣೆ ಕೊಟ್ಟಿದ್ದರು. ಬಚ್ಚಲು ಕೋಣೆಯ ಹಿಂದೆ ಬೆಂಕಿ ಮಾಡುವಲ್ಲಿ, ಮಿಣಿ ಮಿಣಿ ಮಿಂಚುವ ಜಿರೋ ವೊಲ್ಟ್ ಬಲ್ಬಿನ ಬೆಳಕಿನಲ್ಲಿ  ಭಾವರಹಿತಳಾಗಿ ತೊಳೆಯುತ್ತಿದ್ದ ಅವಳಿಗೆ,"ನಾನು ಹೊರಗೆ ಹೋಗಿ ಬರುತ್ತೇನೆ."  ಹೇಳಿದ್ದು ಕೇಳಿಸಿತು.. ತಲೆ ಎತ್ತಿ ನೋಡಿದಾಗ ಪತಿ ಹೊಸ ಧಿರಿಸುಗಳನ್ನು ಹಾಕಿ ಹೊರಹೋಗಲು ತಯಾರಾಗಿದ್ದಾನೆ. ಮನಸ್ಸಿಗೆ ಪಿಚ್ಚೆನಿಸಿತು. ಸುಮ್ಮನೆ ತಲೆ ಆಡಿಸಿದಳು.. ಮತ್ತೇನಾದರು ಹೇಳಲು ಸಾಧ್ಯವಿತ್ತಾ ಅವಳಿಗೆ!  

                        ಹತ್ತಿರ ಕುಳಿತ ಓರಗಿತ್ತಿಯ ಮಗ ಏನೋ ಕೇಳಿದಾಗ ಮತ್ತೆ ಈ ಲೋಕಕ್ಕೆ ಬಂದಳು. ಹುಂ, ಒಂದು ನಿಟ್ಟುಸಿರು ತಂತಾನೆ ಹೊರಬಂತು. ರಾತ್ರಿ ಅಡಿಗೆ ಕೋಣೆಯಲ್ಲಿ ಓರಗಿತ್ತಿಯನ್ನು ಯಾರೋ ಛೇಡಿಸುತ್ತಿದ್ದರು..ಅಣ್ಣನಿಗೆ ಬಾಟ್ಲಿ ತರಲು ಹೋಗುವಾಗ ಸಹ ಅತ್ತಿಗೆ ಜೊತೆಗೇ ಬೇಕು.. ಆಗ ಅವಳಿಗರ್ಥವಾಯಿತು.  ಸಂಜೆ ಮೈದುನನ ಸವಾರಿ ಹೋದದ್ದು ಎಲ್ಲಿಗೆ ಅಂತ. ಮತ್ತೆ ತಲೆಯಲ್ಲಿ ತಳಮಳ,"ಅಲ್ಲ ನಿನಗೂ ಸಹ ನಿನ್ನ ಪತಿ ಇದೇ ರೀತಿ ಬಾಟ್ಲಿ ತರಲು ಹೋಗುವಾಗ ಕರೆದಿದ್ದರೆ ಖುಷಿಯಾಗುತ್ತಿತ್ತಾ. ಅರೇ, ತನ್ನ ಪತಿಗೆ ಈ ಅಭ್ಯಾಸ ಇಲ್ಲದಿದುದರಿಂದ ತಾನೆ ಇಷ್ಟಾದರು ಆರಾಮವಾಗಿರುವುದು... ಇಲ್ಲ ಅಂದರೆ ತಾನು ಅವನ ಜೊತೆ ಇರುತ್ತಿದ್ದೆನಾ? ಬೇಡಪ್ಪಾ ಬೇಡ... ಅವನು ಹೇಗಿದ್ದಾನೋ ಹಾಗೆ ಇರಲಿ." ನೆನಪಿಗೆ ಬಂದ ದೇವರಿಗೆಲ್ಲಾ ಕೈ ಮುಗಿದು ಕಟೀಲು ಶ್ರೀ ದುರ್ಗಾಪರಮೇಶ್ವರಿಗೆ ಹೂಪೂಜೆಯ ಹರಕೆ ಹೊತ್ತಳು ಅವಳು!

13 November, 2012

ಮಗಳ ಘನಕಾರ್ಯ....

ಮಗಳ ಘನಕಾರ್ಯ....




 ಅದೇನೋ ನಿನ್ನೆ ಬೆಳಿಗ್ಗೆಯಿಂದ ಬಿಡಿಸುತ್ತಾ ಕೂತಿದ್ದಾಳೆ ನನ್ನ ಮಗಳು...ಅಪರೂಪವಾದ ಈ ನೋಟ....ಕೇಳಿದೆ ಮಗಳ ಬಳಿ....ಹುಂ, ಏನು ಚಿತ್ರ ಗಿತ್ರ...ಏನು ವಿಶೇಷ???? ನಿಧಾನವಾಗಿ ಬಾಯಿಬಿಟ್ಟಳು, ತನ್ನ ಸ್ನೇಹಿತನ ಜಾಲದಲ್ಲಿ ಹಾಕಲು ಚಿತ್ರ ಮಾಡ್ತಿದ್ದೇನೆ..ಕೇಳಿದ ತಪ್ಪಿಗೆ ಒಂದಿಷ್ಟು ಸಲಹೆನೂ ಉಚಿತವಾಗಿ ಕೊಡಬೇಕಾಯಿತು. ಸ್ಕಾನಿಂಗ್ ಕೆಲಸನೂ ಅಮ್ಮನಿಗೇ ಅಂಟಿಸಿದಳು...ಜೊತೆಗೆ ವಾರ್ನಿಂಗ್- ಫೇಸ್ ಬುಕ್ಕಿನಲ್ಲಿ ಹಾಕಿದರೆ ನೋಡು!!! ಹೋಗೆ ನಿಂಗೆ ಹೆದರ್ತೇನೆಯಾ ...ಆದರೂ ಹಾಕಲಿಕ್ಕೆ ಹೋಗಲಿಲ್ಲ...ನನ್ನ ಬ್ಲಾಗ್ ಇದೆಯಲ್ಲವಾ...ಅದರಲ್ಲಿ ಹಾಕ್ತೇನೆ...{ ನನ್ನ ಮಕ್ಕಳು ಏನು ಮಾಡಿದರು ನನಗದು ಘನಕಾರ್ಯನೇ...:-)}

 ಅಂದ ಹಾಗೆ ಈ Beat Beans....ಈ ಲೋಗೋ ಮಾಡಿದ್ದು ಕೂಡ ನನ್ನ ಮಗ ಪಿಕಾಸು!

ಇಲ್ಲಿ ವಿಶೇಷವೇನೆಂದರೆ ನೋಡಲು ಚಿತ್ರ ಕಡ್ಡಿ ಮನುಷ್ಯರಂತೆ ಕಂಡರೂ..ಇದೆಲ್ಲಾ ಕಾಪಿ ಮಾಡಿದಲ್ಲ..ಅವಳದೇ ಐಡಿಯಾ!!! ಅದು ನನಗೆ ಬಹಳ ಖುಶಿ ಕೊಟ್ಟಿತು.

12 November, 2012

ಸ್ವಗತ!


ಭಾವಜೀವಿ-ಕರೆಯುವರೆನ್ನನವರು
ನಗೆಬರುವುದೆನಗೆ ಏಕೆನ್ನುವಿರಾ
ವ್ಯತ್ಯಾಸವಿಷ್ಟೇ;
ಅವರು ಇಂದ್ರಿಯಗಳಿಂದ ಸ್ಪಂದಿಸುವವರಾದರೆ,
ನಾನು ಹೃದಯದಿಂದ...

**************************



ಎಲ್ಲೆಲ್ಲೋ ಹುಡುಕಾಡುತ್ತ ಅಲೆಯುತ್ತಿದ್ದೆನಲ್ಲ
ವ್ಯರ್ಥವಾಗಿ ಕಳೆದೆ ಅಮೂಲ್ಯ ಸಮಯವನ್ನೆಲ್ಲ
ಕೊನೆಗೂ ನೀನು ಸಿಕ್ಕಿದೆಯಲ್ಲ
ಎಲ್ಲಿ ಎಂದು ಕೇಳಿದೆಯಲ್ಲ
ಇಲ್ಲೇ ನನ್ನ ಮನದಲ್ಲೇ ಎಂದೆ ನಲ್ಲ!

********************************
ಒಲವೇ,

ನನ್ನೆದೆಯಲಿ ಚಿಗುರುವ 
ಭಾವಗಳಿಗೆ ಹನಿಯುಣಿಸುವನು ನೀನೇ
ನನ್ನಾತ್ಮದ ಒಡೆಯನು ನೀನೇ
ನಿನ್ನರಮನೆಯ ಬಾಗಿಲಲಿ ನಿಂತಿದವಳ 
ಮೇಲೆ ಕೃಪಾದೃಷ್ಟಿ ತೋರುವವನು ನೀನೇ
ನನ್ನೆಲ್ಲ ಭಾವಗಳಿಗೆ ಮಾರ್ದನಿಗೊಡುವವನು ನೀನೇ
ಇಷ್ಟೆಲ್ಲ ಆದರೂ, 
ಒಮ್ಮೊಮ್ಮೆ ಅದೇಕೆ ನಿನ್ನ ಕರೆಗೆ ಓಗೊಡುತ್ತಿಲ್ಲ ನಾನು?


ನಮ್ಮೆಲ್ಲರ ಬಾಳು ಬೆಳಗಲಿ!





ನಮ್ಮ ಮನೆ ಮನಗಳನ್ನು ಸದಾ ಬೆಳಗಲಿ 
ಸಾಲು ಸಾಲಾಗಿ ಹಚ್ಚಿಟ್ಟ ಹಣತೆಗಳು!
ಸುಖ, ಶಾಂತಿ, ಸಮೃದ್ಧಿಗಳ ಬದುಕು ನಮ್ಮೆಲ್ಲರದಾಗಲಿ! 
ಸವಿನಯದ ಪ್ರಾರ್ಥನೆ ಆ ಪರಮಾತ್ಮನಲಿ!


ಮಿತ್ರವೃಂದಕ್ಕೆಲ್ಲಾ ಬೆಳಕಿನ ಹಬ್ಬದ ಶುಭ ಹಾರೈಕೆಗಳು!

10 November, 2012

ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!


             ರೂಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......
      
         ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರುಂಡೆಗಳ ಗೆಜ್ಜೆಕಟ್ಟಿ ಕುಣಿಯುವ ಶಬ್ದ, ಕಪ್ಪೆಗಳ ವಟರ್ ವಟರ್ ಗಾಯನ, ಗುನುಗು ಹಕ್ಕಿಯ ಗೊಣಗಾಟ, ಕೋಗಿಲೆಗಳ ಮಂದರಾಗ, ರಾಬಿನ್‍ಗಳ ಚಿಲಿಪಿಲಿ, ಬುಲ್ ಬುಲ್‍ಗಳ ಗುಣು ಗುಣು ಹಾಡು ಜೊತೆಗೆ ಮಂದವಾಗಿ ಬೀಸುವ ಮರುತನ ಮೌನ ತರಂಗಗಳ ಉದಯರಾಗಗಳು ನನ್ನನ್ನು ಕಚುಕುಳಿಯಿಡುತ್ತಾ ಎಬ್ಬಿಸುತ್ತವೆ.  ಈ  catalystಗಳು ನನ್ನ ನಿತ್ಯದ otherwise same old boring ಕೆಲಸಗಳಿಗೆ ಹೊಳಪನ್ನು ಕೊಡುತ್ತವೆ. ಬಿಸಿಲೇರುವ ಮೊದಲೇ ಮತ್ತೊಮ್ಮೆ ತೋಟದ ಗಿಡಗಳ ಜೊತೆ ಒಂದಿಷ್ಟು ಪಂಚಾದಿಕೆ( ನಮ್ಮ ಕೊಂಕಣಿಯಲ್ಲಿ ಸುಮ್ಮಸುಮ್ಮನೆ ಮಾತನಾಡುವುದಕ್ಕೆ ಹೀಗೆನ್ನುತ್ತಾರೆ) ನಡೆಸಿ, ಹೆಚ್ಚು ಕಡಿಮೆ ಪ್ರತಿದಿನ ಕಾಣಿಸುವ ಹೊಸ ಹೊಸ ಕೀಟ, ಜೇಡಗಳ ವೀಕ್ಷಣೆ, ಬೆಕ್ಕಿನ ಮರಿಯೊಡನೆ ತೊದಲಾಟ, ಚಿಟ್ಟೆಗಳ ಜೊತೆ ಒಂದಿಷ್ಟು ಹಾರಾಟ ( ಕೆಮರಾ ತೆಗೆದುಕೊಂಡು ಹಾರಾಟನೇ ಮಾಡಬೇಕಾಗುತ್ತೆ) ಇವೆಲ್ಲಾ ನಡೆಸಿದರೆ ಆ ದಿನದ ನೇಚರ್ ವಾಕ್ ಮುಗಿಯುತ್ತದೆ. 









ಮತ್ತೆ ನಾಲ್ಕು ಗೋಡೆಯೊಳಗೆ ಬದುಕು.. ಮಧ್ಯ ಮಧ್ಯದಲ್ಲಿ ಅಂತರ್ಜಾಲವೆಂಬ ಕಿಟಿಕಿಯಿಂದ ಪ್ರಪಂಚದ ಕಿರುನೋಟದ ವೀಕ್ಷಣೆ... ನೆವನದಲ್ಲಿ ಸಿಗುವ ಮಕ್ಕಳ ಒಡನಾಟ... ಆಗಾಗ ಕುಂಚ ರಂಗಿನಲ್ಲಿ ಅದ್ದಿ ಗೋಡೆಗಳ ಮೇಲೆ, ಕ್ಯಾನ್‍ವಾಸಿನ ಮೇಲೆ ಚೆಲ್ಲುವ ಆಟ ಪಾಠ! ಇಲ್ಲೆಲ್ಲಾ ನಾನು ರೂಮಿಯನ್ನು ನೋಡುತ್ತಿರುತ್ತೇನೆ. ಪ್ರಕೃತಿ ತೆರೆದುಕೊಳ್ಳುವ ವಿಸ್ಮಯಗಳನ್ನು ನೋಡಬೇಕಾದರೆ ನಮ್ಮ ಹೊರಕಣ್ಣಿನ ಜೊತೆ ಒಳಗಿನ ಕಣ್ಣನ್ನೂ ವಿಶಾಲವಾಗಿ ತೆರೆದಿರಿಸಬೇಕು. ಆಗ ಮಾತ್ರ ಜೇನಿಗಿಂತ ಸ್ವಾದಿಷ್ಟವಾಗಿರುವ-ಪ್ರಕೃತಿಯಲ್ಲಿ ಅಡಗಿರುವ ಒಲವಿನ ಸಾಗರದಲ್ಲಿ ಮುಳುಗು ಹಾಕಿ ಪ್ರೇಮವೆಂಬ ಅಮೃತದ ರುಚಿಯನ್ನು ಆಸ್ವಾದಿಸಬಹುದು.  
************           ************              ************


ನನ್ನಾತ್ಮವೇ, ರಹಸ್ಯವೊಂದನ್ನು ಅರುಹುವೆ
ಆಲಿಸುವವಳಾಗು...
ಈ ಒಲವೆಂಬ  ತರುವಿನ ಸಂಗವನೆಂದಿಗೂ ಬಿಡದಿರು-
ಸದಾ ಬಾಡದ, ಕಂಪನ್ನೀವ ಕುಸುಮಗಳ ವರ್ಷವನ್ನೇ ಸುರಿಸುವುದದು.

03 November, 2012

ನನ್ನೊಳಗಿನ ರುಮಿ ಹೀಗನ್ನುತ್ತಾನೆ!





ನನ್ನೊಲವೆ, 
ಅದೇನೋ ಹಾಡು ಗೊಣಗುತ್ತಾ, ಕುಣಿಯುತ್ತಾ ಹೋಗುತ್ತಿದ್ದಿಯಾ...
ಅರೆ, ಅದೇಕೆ ಈ ಮೊದಲು ನಾ ನಿನ್ನ ನೋಡಿಲ್ಲ!
ನೋಡ ನೋಡುತ್ತಲೇ... ಕುಣಿಯತೊಡಗಿದೆ ನಿನ್ನ ಸುತ್ತಲೂ ನಾನೂ...
ಆಹಾ! ಲೋಕವೆಲ್ಲಾ ನಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದೆಯಲ್ಲಾ...
ಎಂದೂ ಮುಗಿಯದಿರಲಿ ಈ ಅಲೌಕಿಕ ಆನಂದ!

*****************************
ಒಲವೇ,

ಸಂಪೂರ್ಣವಾಗಿ ನಾನು ನಿನ್ನವಳೋ..
ಹಿಂದಿರುಗಿಸಬೇಡವೋ ಮತ್ತೆ ನನ್ನನ್ನು ನನಗೇ!

*****************************


 ಕೇಳುತ್ತಿದೆಯಾ... 
 ದಶ ದಿಕ್ಕುಗಳಿಂದಲೂ 
 ಪ್ರೀತಿಯು ನಿನ್ನನ್ನು  ಕರೆಯುತ್ತಲೇ ಇದೆ... 
 ಯಾವಾಗಲೂ...
 ಇನ್ನಾದರೂ ಬರುವಿಯಲ್ಲಾ ನೀನು...
 ಹೆಚ್ಚು ಕಾಯಿಸಬೇಡವೋ!

****************************

ಒಲವೇ,
ನಿನ್ನ ಹಾದಿಯಲಿ ಪಯಣಿಗಳಾಗಲು... 
ಇರುವ ನಿನ್ನ ಕರಾರುಗಳಿಗೆಗೆಲ್ಲ
ನನ್ನ ತಕರಾರುಗಳಿಲ್ಲ.
ಸದಾ ತಗ್ಗಿ ಬಗ್ಗಿಯೇ ನಡೆವೆನೆಂದರೆ 
ನಂಬುವೆ ತಾನೆ!
 **************************************

ಒಲವೇ, 
ನೀನೆಷ್ಟು ನಿಕಟವಾಗಿರುವಿ ನನಗೆ?
ಖಂಡಿತವಾಗಿ ನನಗೊತ್ತು ನಿನಗಿದು ತಿಳಿದಿರಲಿಕ್ಕಿಲ್ಲವೆಂದು
ಹೇಳಲೇ, ಕೇಳುವೆಯಾ...

ನನ್ನ ಕನಸುಗಳನ್ನೆಲ್ಲ ಕಳೆದುಕೊಳ್ಳುವಷ್ಟು...
ನನ್ನಾತ್ಮವನ್ನೂ ಮರೆಯುವಷ್ಟು...
ಎಲ್ಲರಲ್ಲೂ ನಿನ್ನನ್ನೇ ಕಾಣುವಷ್ಟು...

ಆ ಸತ್ಯವ ತೋರಿಸಿದ್ದು
ಕನ್ನಡಿಯೊಳಗೆ ಕಂಡ 
ಕಣ್ಣಲಿ ನಿನ್ನ ಬಿಂಬ!


************************************


ನಿಸರ್ಗ ನನ್ನೊಳು ಹುಟ್ಟಿಸಿತು 
ಅನುರಾಗ ಭಾವವನ್ನು...
ಆ ಭಾವವೇ ಕವಿತೆಗಳ  
ಹುಟ್ಟಿಗೆ ಪ್ರೇರಣೆಯಂತೆ!

*********************************


ಒಲವಿನ ಹೃದಯದ 
ಆಳದ ಪರೀಕ್ಷೆ 
ಮಾಡಲು ಹೊರಟು 
ಇವಳು ತನ್ನನ್ನೇ 
ತಾನು ಕಳಕೊಂಡಳಂತೆ!

*****************************

ಒಲವೇ...
ಹೇಳಲೇನೋ ಕಾತರಿಸಿದೆ...
ಕ್ಷಣದಲ್ಲೇ ತನ್ನ ತೆಕ್ಕೆಗೆ ಸೆಳೆಯಿತು...
ಮಾತ ಮರೆತು ಮೌನಿಯಾದೆ....
ಅದರ ಆಲಿಂಗದಲ್ಲಿ!

**************************

ಒಲವೇ,
ನಿನ್ನ ನೋಟ ಚೆಲ್ಲಿದ ಕಿರಣ
ನನ್ನೆದೆಯ ಹಣತೆಯ ಬೆಳಗಿಸಿದೆ!
**********************************







30 October, 2012

ಅಮೃತಬಳ್ಳಿ!





ಅಮೃತಬಳ್ಳಿ
-ಖಾಲಿಹೊಟ್ಟೆಯಲ್ಲಿ ಒಂದೆರಡು ಎಲೆಗಳ ಸೇವನೆ ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ದೇಹದ ಸಕ್ಕರೆ ಅಂಶವನ್ನು ಅಂಕುಶದಲ್ಲಿರಿಸಲು ಹಾಗೂ ನಮಗೆ ತಿಳಿದೋ ತಿಳಿಯದೇ ನಾವು ತಿನ್ನುವ ಆಹಾರದಲ್ಲಿ ಸೇರಿರುವ ವಿಷಕಾರಿ ಅಂಶವನ್ನು ಕಿತ್ತೊಗೆಯಲು ಬಲು ಸಹಕಾರಿ. ಅಲ್ಲದೆ ದೇಹದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದಕ್ಕೆ ಹೆಚ್ಚಿನ ಉಪಚಾರ ಬೇಕಾಗಿಲ್ಲ. ಒಂದಿಷ್ಟು ನೀರು, ಮಣ್ಣು, ಬಿಸಿಲು ಸಾಕು...

ಮಲ್ಲಿಗೆಯ ಕಂಪು!

 



ಮುಂಜಾನೆಯ ಹೊತ್ತು,
ಗಿಡದ ತುಂಬಾ ಅರಳಿದ
ಮಲ್ಲಿಗೆಯ ಕಂಪು,
ಅದ ಹೊತ್ತು ನನ್ನತ್ತ 
ಬೀಸಿದ ಸಣ್ಣನೆಯ ಗಾಳಿ
ನಾಸಿಕದೊಳು ನುಸುಳಿ,
ಕಣ್ಮನಕೆ ನೀಡಿತು ತಂಪು!

29 October, 2012

ಸಂಯಮ

ನಮ್ಮ ಶರೀರ ಮನಸ್ಸುಗಳ ಮೇಲೆ ಹತೋಟಿಯನ್ನು ಸಾಧಿಸುವುದನ್ನೇ ನಮ್ಮ ಹಿರಿಯರು ’ಸಂಯಮ’ ಎಂದು ಕರೆದರು. ಸಂಯಮವೆಂದರೆ ಇಂದ್ರಿಯ ಮನಸ್ಸುಗಳನ್ನು ನಿಷ್ಕ್ರಿಯಗೊಳಿಸುವುದು ಎಂದರ್ಥವಲ್ಲ.  ಅವಕ್ಕೆ ನಿರ್ವಹಿಸಲೇಬೇಕಾದ ಕರ್ತವ್ಯಗಳಿರುತ್ತವೆ. ಮನುಷ್ಯನ ಬದುಕು ಅರ್ಥಪೂರ್ಣವಾಗಿ, ಆಸ್ವಾದನೀಯವಾಗಿರಬೇಕಾದರೆ ಇಂದ್ರಿಯ ಮನಸ್ಸುಗಳ ತುಡಿತ, ಬಯಕೆಗಳಿಗೆ ಮಿತಿ ಔಚಿತ್ಯಗಳ ಗಡಿ ಹಾಕಿ, ಅವು ಅದನ್ನು ಮೀರದಂತೆ ನೋಡಿಕೊಳ್ಳುವುದೇ ಸಂಯಮ ಅಥವಾ ಸ್ವ-ನಿಯಂತ್ರಣ. ನೋಡಬಾರದ್ದನ್ನು  ನೋಡಬೇಕೆನ್ನುವ, ಕೇಳಬಾರದ್ದನ್ನು ಕೇಳಬೇಕೆನ್ನುವ, ಅಭಕ್ಷವಾದುದನ್ನು ಭಕ್ಷಿಸಬೇಕೆನ್ನುವ-ಇಂಥ ಎಲ್ಲ ಚಾಪಲ್ಯಗಳೂ ಮಿತಿ, ಔಚಿತ್ಯಗಳ ಎಲ್ಲೆಯನ್ನು ಅತಿಕ್ರಮಿಸದಂತೆ, ಅಗತ್ಯಕ್ಕಿಂತಲೂ ಹೆಚ್ಚು ಬೇಕೆನ್ನುವ ’ತೃಷ್ಣೆ’ಯೂ ಇದೇ ಗುಂಪಿಗೆ ಸೇರಿದುದು. ದೇಹ ಮನಸ್ಸುಗಳನ್ನು ಅಂಥ ಅತಿರೇಕಗಳಿಂದ ತಡೆಹಿಡಿಯುವುದು ಸ್ವ-ನಿಯಂತ್ರಣದ ಉದ್ದೇಶ.
ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲೂ ಬೆಳಕೊಂದನ್ನು ಭಗವಂತ ಇರಿಸಿದ್ದಾನೆ. ಅದು ಮಂಕಾಗದಂತೆ, ಆರಿಹೋಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಶುಚಿಯಾದ ಚಿಂತನೆಯ ತೈಲ ಹಾಕುತ್ತಾ, ಬತ್ತಿ ಕರಿಗಟ್ಟದಂತೆ ಸಂಯಮದ ಕಡ್ಡಿಯಿಂದ ಸ್ವಚ್ಛಗೊಳಿಸುತ್ತಿದ್ದರೆ, ಒಳಗೆ ಬೆಳಗುವ ದೀಪ ನಿರಂತರ ಬೆಳಕು ಬೀರುತ್ತದೆ.
-ವೈನತೇಯ

26 October, 2012

ಈ ಪ್ರಕಾಶವು ನಾಂದಿ ಹಾಡಲಿ!










ಈ ಪುಟ್ಟ ಹಣತೆಯ ಬೆಳಕು 
ಬಾಳಿಗೆ ಹೊಸ ಕಾಂತಿಯ ತುಂಬಲಿ!
ನಮ್ಮೊಳಗೆ ಬೇರೂರಿರುವ
ನರಕಾಸುರನ ಕಿತ್ತೆಸೆಯಲಿ!
ಬೆಚ್ಚನೆ ಹೊದ್ದು ಮಲಗಿರುವ
ನೈತಿಕತೆಯ ಬಡಿದೆಬ್ಬಿಸಲಿ!
ಮರೆತ ಮಾನವತೆಯ 
ಗುಣಗಳನ್ನು ಮತ್ತೆ ನೆನಪಿಸಲಿ!
ನಮ್ಮ ಮಣ್ಣಿನ ಸಂಸ್ಕೃತಿಯ
ಬೇರುಗಳನ್ನು ಮತ್ತಿಷ್ಟು ಗಟ್ಟಿಗೊಳಿಸಲಿ!
ಪಾಶ್ಚಿಮಾತ್ಯರ ಷೋಕಿಗೆ ಮರುಳಾದ
ಯುವಜನಾಂಗವ ತಿದ್ದಿ ಹಾದಿಗೆ ತರಲಿ!
ನಾಡಿನ ಉಜ್ವಲ ಭವಿಷ್ಯಕ್ಕೆ
ಈ ಪ್ರಕಾಶವು ನಾಂದಿ ಹಾಡಲಿ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...