ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

09 September, 2014

ನವಿಲುಗರಿ ಮತ್ತು ಪಾರಿಜಾತದ ಕಟ್ಟೆ!

ನವಿಲುಗರಿ ಮತ್ತು ಪಾರಿಜಾತ ಕಟ್ಟೆ!
-------------------------------------------------


“ಇದೇನಿದು! ಈಗಿನ್ನೂ ಭಾದ್ರಪದ..”

ಅಂಗಣದಲ್ಲಿ ಬೆಳಗುತಿರುವ ಹಣತೆಗಳ ಸಾಲು.. ತುಳಸಿ ಕಟ್ಟೆಯೆದುರು ಬಿಳಿ ಚುಕ್ಕಿಗಳ ವಿನ್ಯಾಸ!

ಡೈರಿಯಲ್ಲಿ ಬರೆಯುವುದರಲ್ಲಿ ಮಗ್ನಳಾದ ರಾಧೆಯ ಬೈತಲೆಯಲ್ಲಿ ಕಂಡೂ ಕಾಣದಂತಹ ಕೆಂಪು ಚುಕ್ಕಿ.. ನಸುಗುಲಾಲಿ ಜಾಜಿ ಹೊದ್ದ ಕಪ್ಪು ನಾಗರ ಬೆನ್ನ ಮೇಲೆ ಹಾಯಾಗಿ ಪವಡಿಸಿತ್ತು.

ತಲೆ ಎತ್ತದೆ,
“ನಿನ್ನೆಯ ಇರುಳಿನ ನೆನಪುಗಳನು ಬರೆಯುವ ಸ್ಫೂರ್ತಿಗಾಗಿ.. ಅದೇನು ಇವತ್ತು ಸವಾರಿ ಈಕಡೆ!!! “ ಅಂದವಳತ್ತ ತೂರಿದ್ದ ಪ್ರಶ್ನಾರ್ಥಕ ನೋಟ ನೋಡದೆಯೇ ಗ್ರಹಿಸಿ,

“ಪ್ಲೀಸ್, ಏನೂ ಪ್ರಶ್ನೆ ಕೇಳ್ಬೇಡ್ವೋ.. ನಂಗೆ ಡಿಸ್ಟರ್ಬ್ ಆಗುತ್ತೆ!”

“ಹ್ಮ, ಅದೇನು ಗೀಚ್ತಿದ್ದಿ ಅಂತ ಹೇಳು, ಮತ್ತೆ ಮಾತಾಡೊಲ್ಲ.”

“ಬರಿತಿದ್ದೇನೆ, ಗೀಚ್ತಿಲ್ಲ!”

ಹೇಳಿದವಳ ಮೂಗು ಕೆಂಪಾಗಿತ್ತು!

ಗಹಗಹಿಸಿ ನಕ್ಕ!

“ಅರೆರೇ! ನೀನೇ ಹೇಳ್ತಿದ್ದನ್ನೇ ಹೇಳ್ತಿದ್ದೆ ಕಣೇ! ನಂಗೆ ಹೇಗೆ ಗೊತ್ತಾಗ್ಬೇಕು ಬದಲಾದ ನಿನ್ನ ಭಾವಗಳು!”

ತುಟಿ ಕಚ್ಚಿದಳು.. ಕಣ್ಣು ಸಣ್ಣದಾಯಿತು.. ದೂರದ ದಿಗಂತದತ್ತ ನೋಟ!

“ಹ್ಮೂಂ.. ಅದೇನೋ ಹೌದು. ಆವಾಗ ನಾನಿನ್ನೂ ಬೆಳೆದಿರಲಿಲ್ಲ!”

“ಅಂದ್ರೆ ಈಗ ದೊಡ್ಡ ಸಾಹಿತಿ ಆಗಿದಿ ಅನ್ನು!”

ಹಣೆ ಚಚ್ಚಿಕೊಂಡಳು!
“ಅದ್ಯಾವಾಗ ನೀನು ನನ್ನನು ಪೂರ್ಣ ಪ್ರಮಾಣದಲ್ಲಿ ಅರ್ಥಮಾಡಿಕೊಳ್ತಿಯಾ! ಒಮ್ಮೊಮ್ಮೆ ಅನಿಸುತ್ತೆ ಕೋಣನ ಮುಂದೆ ಕಿನ್ನರಿ ಭಾರಿಸಿದ ಹಾಗೆ ಅಂತ!”

“ನೀನೊಂದು ಅರ್ಥವಿದ್ದೂ ಅರ್ಥವಾಗದ ಅಮೂರ್ತಚಿತ್ರ ಕಣೇ.. ಮಹಾಕಾವ್ಯ!”

ನುಣ್ಣಗೆ ಬೋಳಿಸಿದ ಗಲ್ಲದ ಮೇಲೆ ಕೈಯಾಡಿಸುತ ಅಂದವನತ್ತಲೇ ದೀರ್ಘವಾಗಿ ನೋಡಿದಳು.

“ಸಾಹಿತ್ಯ, ಕಾವ್ಯ ಇವೆಲ್ಲಾ ನನಗೆಟುಕುವ ಸಂಗತಿಗಳಲ್ಲ ಕಣೋ.. ನನಗೆ ಗೊತ್ತಿರುವುದು ಒಲವು ಮಾತ್ರ. ಗೀಚುವುದು ಹೇಳಿದ್ರೆ ಒಲವಿಗೆ ಅಪಮಾನ ಮಾಡಿದ ಹಾಗೆ ಅಂತ ಅನಿಸಿತು.”

ದೊಡ್ಡದಾಗಿ ಉರಿಯುತ್ತಿದ್ದ ಹಣತೆ ಒಂದರ ಬತ್ತಿ ಚಿಕ್ಕದು ಮಾಡಿ ಅಲ್ಲೇ ಪಾರಿಜಾತದ ಬೊಡ್ಡೆಗೊರಗಿದ.. ಸಣ್ಣನೆ ಸುಳಿದ ಗಾಳಿಗೆ ಉದುರಿದ ಒಂದಿಷ್ಟು ಹೂಗಳು ಅವನ ಭುಜ ಮೇಲೆ..

‘ನಿನ್ನೆ ಕನಸಿನಲಿ ಬಂದ ಥೇಟ್ ಕೃಷ್ಣ ಹಾಗೆ .. ಆ ಗುಂಗುರು ಕೂದಲಿಗೆ ಗರಿಯೊಂದಿಲ್ಲ.. ’

 ಪ್ಯಾಂಟಿಗೆ ಸಿಗಿಸಿದ್ದ ಬಿದಿರು ನಗುತಿತ್ತು.. ರಾಧೆಯ ದ್ವಂದ್ವ ನೋಡಿ!

ತನ್ನಷ್ಟಕ್ಕೆ ನಗುವವಳನ್ನು ನೋಡಿ,
“ಪಿಶ್ಶಿ (ಹುಚ್ಚಿ)!!!”

“ನಿನ್ನ ಬಿರುದುಗಳೇನು ನನಗೆ ಹೊಸದಲ್ಲ.. ಅಹಂಕಾರಿಗಿಂತ ಪಿಶ್ಶಿನೇ ಚೆನ್ನ!”

ನಿಟ್ಟುಸಿರನು ಬಿಟ್ಟವನ ಮುಖ ಗಂಭೀರವಾಗಿತ್ತು. ಹಳೆಯದನ್ನು ಕೆದಕಿದಕ್ಕೆ ಪಶ್ಚಾತ್ತಾಪವಾದರೂ ತೋರಗೊಡಲಿಲ್ಲ ಅವಳು!

"ಹೋಗ್ಲಿ, ಬರೆದುದನ್ನಾದರೂ ಓದಿ ಹೇಳು!”
ಎಂದವನಿಗೆ,

“ಅರೇ, ನಿಂಗೆ ಬೇಕಾದ್ರೆ ನೀನೇ ಓದ್ಕೋ.. ನನ್ನಿಂದ ಮರೆಮಾಚಿ ನಾ ಬರೆದುದನ್ನೆಲ್ಲ ಓದುವುದಿಲ್ವಾ.. ಈಗ್ಯಾಕೆ ನಾ ಓದಿ ಹೇಳ್ಬೇಕು!”

ಬಾಯಿಮಾತಿಗೆ ಅಂದ್ರೂ ಓದಲು ಅನುವಾಗಿ ಗಂಟಲು ಸರಿಮಾಡಿಕೊಂಡು ಡೈರಿಯ ಪುಟ ಮಗುಚಿದವಳ ಕಣ್ಣಂಚು ಪಾರಿಜಾತದೆಡೆ... ಕಟ್ಟೆ ಖಾಲಿಯಾಗಿತ್ತು!  ನವಿಲುಗರಿಯೊಂದು ಅನಾಥವಾಗಿ ಬಿದ್ದುಕೊಂಡಿತ್ತು. ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಅನುಭವ!

2 comments:

ಶ್ರೀವತ್ಸ ಕಂಚೀಮನೆ. said...

ಯಾಕಿಷ್ಟವಾಯಿತೋ ಗೊತ್ತಿಲ್ಲ ಆದರೆ ತುಂಬಾ ಇಷ್ಟವಾಯ್ತು.....

Shiela Nayak said...

ಗೊತ್ತು ಕಣೋ.. ವತ್ಸ! ಯಾಕೆಂದ್ರೆ ಅದನ್ನು ಬರೆದದ್ದು ನಾನಲ್ಲ. ರಾಧೆ! ನಂಗೂ ಇಷ್ಟವಾಯಿತು ಅಂದೆ ರಾಧೆಗೆ. ಸುಮ್ಮನೆ ನಕ್ಕಳು.. ಕಣ್ಣಂಚಿನಲ್ಲಿ ಹನಿ ನೋಡಿದ ಹಾಗಾಯ್ತು!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...