ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 March, 2014

ಮನದೊಲವಿನ ಗೀತೆ..

ಒಲವೇ,

ನಂದನ ಹಳತಾಗಿ, ವಿಜಯ ಮುಗಿದು, ಜಯ ಮರಳಿದೆ
ಕಾಲಚಕ್ರ ಕ್ಷಣದ ಕ್ಷಣವೂ ನಿಲ್ಲದೇ ಸುತ್ತುತಲೇ ಇದೆ
ನೆನಪುಗಳು ಆವಿಯಾಗಿ ಮನದಲಿ ದಟ್ಟವಾದ ಮುಗಿಲು ಮೂಡಿದೆ
’ಜಯ’ ಗಾಳಿ ಸೋಕುತಲೇ ಕರಗಿ ರಭಸದಿ ಸುರಿದು ನಯನ ಆರ್ದ್ರವಾಗಿದೆ
ಕವಲಾದ ಹಾದಿಯಲಿ ಕಾದು ಕುಳಿತ ಮನದ ಮರುಳಿಗೆ ಕಾಯ ನಕ್ಕಿದೆ
ಉಪದೇಶವಿತ್ತ ಕಾಯಕೆ ಮನದ ಮುತ್ತಿನಂಥ ವಾಣಿ ತಟ್ಟಿದೆ
ವಿದಾಯ ಗೀತೆಯು ಬರೇ ಈ ಪಂಚಭೂತ ನಿರ್ಮಿತ ದೇಹಕೆ ಅನ್ವಯ
ದೈಹಿಕ ಭಾವವನು ಮೀರಿದ ಬೆಳೆದ ನನ್ನ ಅನುರಾಗಕೆ ಆಗದದು ಅನ್ವಯ..

21 March, 2014

ವರ್ಲಿ ದುರ್ಗಾ ಮಾ


"ವಸಂತ"

"ಒಲವಿನ ಹಾಡನ್ನು ಕೇಳಿಸಿದ ವಸಂತಮಾಸದ ಕೋಗಿಲೆಗೆ..

ಚಿತ್ರದಲ್ಲಿ ಭಾವ ತುಂಬಲು ಪ್ರೇರಣೆಯಾದ "ಮುಂಜಾವು" ತಂಡಕ್ಕೆ.. ವಿಶೇಷವಾಗಿ ವೀಣಕ್ಕ ಮತ್ತು ಬಾವಜಿಯವರಿಗೆ..

ನನ್ನ ಬದುಕಿಗೆ ಮತ್ತೆ ಜೀವ ತುಂಬಿದ ಆತ್ಮೀಯ ಗೆಳತಿ ಮತ್ತು ಮಾರ್ಗದರ್ಶಕ ಮಿತ್ರರಿಗೆ..


ಮುಖ್ಯವಾಗಿ ಒಲವಿನ ಹಾದಿಯಲ್ಲಿ ನಡೆಸಿದ ಕೈಗಳಿಗೆ..
ಒಲವಿನ ಮಹಾಪೂರ ಹರಿಸಿದ ಕಣ್ಣುಗಳಿಗೆ..
ಒಲವಿನ ಗೀತೆಗಳಿಗೆ ಶಕ್ತಿಯಾದ ಆತ್ಮಕ್ಕೆ..
ಅರ್ಪಣೆ!


18 March, 2014

ಅದ್ಯಾಕೆ ಕಣ್ಗಳು ದಟ್ಟ ರೆಪ್ಪೆಗಳ ಹಿಂದೆ ಅವಿತಿವೆ!

ಒಲವೇ,

ನಿನ್ನ ತುಂಟ, ಚಂಚಲ ಕಪ್ಪು ಕಣ್ಗಳ ಕೇಳು..
ವಸಂತ ಹೊತ್ತು ತಂದ ರಂಗನು ಕೇಳು.. 
ಮುಂಗುರುಳ ಸರಿಸಿ ಕಚಗುಳಿಯಿಡುವ ಮರುತನನು ಕೇಳು..

ಮುಸ್ಸಂಜೆ ಪಸರಿಸಿದ ಬಣ್ಣಗಳನು ಕೇಳು.. 
ನಲ್ಲಿರುಳು ಹೊದಿಸಿದ ಹೊದಿಕೆಯ ಅಚ್ಚಬಿಳಿ ಕಸೂತಿಯನು ಕೇಳು..
ಮುಂಜಾವಿನ ಹೊನ್ನಂಚಿನ ಮುಗಿಲಮಂಚವನು ಕೇಳು..

ಕಾಡಿಗೆ ಹಚ್ಚಿದ ದಟ್ಟ ರೆಪ್ಪೆಗಳು ಅದ್ಯಾಕೆ 
ನನ್ನ ಮಿನುಗುವ ಕಣ್ಗಳ ಮರೆಮಾಚಿವೆ
ನಾನೇನು ಬಲ್ಲೆ, ಬಲು ಮುಗ್ಧೆ!

ಸುಭಾಷಿತ!

ನೋಟಕೆ ಉದ್ದನೆಯ ಅನಾಕರ್ಷಕವದು
ತೆಂಗಿನ ಮರ
ಧೃಡ-ನೇರ ಮಾತಿನವರು
ಸಜ್ಜನರು

ನೋಟಕೆ ದುಂಡಗೆ ಕಣ್ಸೆಳೆವ  ರೂಪ
ಬೆರ್ರಿ ಹಣ್ಣು
ಮುಖವಾಡದೊಳಗೆ ಅಡಗಿರುವವರು
ನಯವಂಚಕರು|

ನಾರಿಕೇಲ ಸಮಾಕಾರಾ ದೃಶ್ಯಂತೆ ಖಲು ಸಜ್ಜನಾಃ |

ಅನ್ಯೆ ಬದರಿಕಾಕಾರಾ ಬಹಿರೇವ ಮನೋಹರಾಃ ||

ಮಗಳ ಪೊಸ್ಟರೂ.. ಕ್ಯಾಲಿಗ್ರಾಫಿ ರೈಟಿಂಗೂ..



ಕಾರ್ಟೂನ್.. ಮಗಳು ಬಿಡಿಸಿದ್ದು!


ಮೂರನೆಯ ಸ್ಥಾನ ಪಡೆದಿದ್ದಾಳೆ ನನ್ನ ಮಗಳು!

10 March, 2014

ಲೋಕಕೆ ಅಚ್ಚರಿ..

ಒಲವೇ,

ಮನದ ಗೋಡೆಗಳಲಿ
ಚಿತ್ತಾರದ ವೈಖರಿ
ನನ್ನ ಭಾವರಂಗಿನಲದ್ದಿ
ನೀ ಕುಂಚಗಳನೆಳೆದ ಪರಿ
ಲೋಕಕೆ ಅಚ್ಚರಿ

09 March, 2014

ಹಾಯ್ಕ

ಶಶಿ ಮೂಡಿದ
ಬಾನಲಿ, ಚುಕ್ಕಿಗಳೂ
ತುಲಸಿದೀಪ!

ಕಳೆದ ಓಲೆ ಮತ್ತೆ..

ಒಲವೇ,

ಅಂದೆಂದೋ ನೀ ಬರೆದಿಟ್ಟ
ಹೃದಯದ ಕವಾಟಿನ ಮೂಲೆಯಲಿದ್ದ
ಓಲೆಯು ಸಿಕ್ಕಿದ ಕ್ಷಣದಲ್ಲೇ
ಮರಳಿತು ನನ್ನಾತ್ಮವೂ ಗೂಡಿಗೆ!

ಹಾಯ್ಕ

 ನವಿಲುಗರಿ
ಕಚಕುಳಿ ಕೊಟ್ಟಿತು

ರಾಧಾಮಾಧವ!
ಒಲವೇ,

ಶಬ್ದಗಳು ಧರಣಿ ಕೂತಿವೆ..
ಮನದಲಿ ಭಾವಶರಧಿಯ ಶಂಖನಾದ...


08 March, 2014

ಕೊಳಲು ಮಾಯವಾಗಿದೆ, ಆದರೆ...

ಕೊಳಲು ಮಾಯವಾಗಿದೆ, ಆದರೆ...
---------------------
ಕಾಲಚಕ್ರ ತಿರುಗಿದೆ
ವಸಂತಋತು ಅಂಗಣದಲ್ಲಿ;
ಕೋಗಿಲೆಯ ಕುಹೂ
ಮಾವಿನ ಚಿಗುರಿನೆಡೆಯಿಂದ;
ವಲಸೆ ಹಕ್ಕಿಗಳು
ಡೇರೆ ಹಾಕಿವೆ;
ಕೆಂಪು ಚಿಗುರು
ತರುಗಳ ತುದಿಯಲಿ;
ಮೊಗ್ಗುಗಳು ಆಕಳಿಸುತಿವೆ
ಅರಳಲು ಕಾದಿವೆ,
ಧ್ಯಾನ ಮುಗಿಸಿ
ಬರುವ ಪಾತರಗಿತ್ತಿಗಳಿಗಾಗಿ;
ಜೀಕುತ್ತಾ ಉಯ್ಯಾಲೆಯಲಿ
ಧೇನಿಸುತ್ತಾ ಅವನ
ಕೈಚಾಚಿದಳು ಅವಳು,
ಮಾಯವಾಗಿತ್ತು ಕೊಳಲು;
ನಾಸಿಕ ಅರಳಿತ್ತು
ಅವನ ಮೈಗಂಧ!

ಹಾಯ್ಕ



ನನ್ನೊಡಲಲಿ
ಮಲಗಿದೆ ಕೊಳಲು
ನನ್ನೊಲವು!

ಹಾಯ್ಕ



ಶರಧಿಯಾಣ
ಅಲೆಗಳ ಮುತ್ತಾಟ
ಗುಲಾಲಿ ದೋಣಿ

06 March, 2014

ಹಾಯ್ಕ



ಹಿತಬಿಸಿಲು  
ಹೊನ್ನಛಾಯೆ ಹೊನಲು
ಸೂರ್ಯ ಹೊರಟ!

ಹಾಯ್ಕ



ಕಪ್ಪು ಆಗಸ
ಚುಕ್ಕಿಗಳ ವಿರಹ
ದೀರ್ಘ ಇರುಳು!

ಹಾಯ್ಕ



ಪರ್ಣ ಚಿತ್ತಾರ
ರಂಗು ರಂಗಿನ ಹೂಗಳು
ಮನ್ಮಥ ರತಿ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...