ಇವತ್ತೇ ನನ್ನ ತಿಥಿ ಮಾಡಿ ಮುಗಿಸ್ತಾರೆ ಕಾಣ್ತದೆ ಈ ಅತ್ತೆ....ಬಾಯಿ ತೆರೆದು ಹೇಳುವ ಧೈರ್ಯವಿಲ್ಲದೆ ಮನಸ್ಸಿನಲ್ಲೇ ಅತ್ತೆಯನ್ನು ಶಪಿಸುತ್ತಾ ಸುಜಾತ ಊಟದ ಮೇಜನ್ನು ಶುದ್ಧಮಾಡುತ್ತಿದಳು....ಇವಳು ಒರೆಸುವುದು, ಅತ್ತೆ ದೊಡ್ಡ ಪಾತ್ರೆಯಿಂದ ಚಿಕ್ಕ ಪಾತ್ರೆಗೆ ಪದಾರ್ಥಗಳನ್ನು ವರ್ಗಾಯಿಸುವುದು, ಒಂದಿಷ್ಟು ಸುಮ್‍ಸುಮ್ಮನೆ ಮೇಜಿನ ಮೇಲೆ ಚೆಲ್ಲುವುದು..ಇವಳಿಗೆ ಒರಸಲು ಹೇಳುವುದು..ಇದು ಸುಮಾರು ಹದಿನೈದು ನಿಮಿಷಗಳಿಂದ ನಡೆಯುತ್ತಲೇ ಇತ್ತು. ಅತ್ತೆಗೆ ಇವಳನ್ನು ಆಚೆ ಕಳುಹಿಸಲು ಮನಸಿರಲಿಲ್ಲ..ಎಲ್ಲಿಯಾದರು ಕೋಣೆಗೆ ಹೋದರೆ ಮತ್ತೆ ಇವಳಿಂದ ಕೆಲಸ ಮಾಡಿಸಲಾಗುವುದಿಲ್ಲವೆಂದು ಗೊತ್ತಿತ್ತು..ಇವತ್ತು ಭಾನುವಾರ, ಅಪರೂಪವಾಗಿ ಪತಿ ಎಲ್ಲಿಗೂ ಹೋಗದೆ ಮನೆಯಲ್ಲೇ ಇದ್ದಾನೆ..ಸಹಜವಾಗಿ ಅವಳಿಗೆ ಪತಿಯೊಂದಿಗೆ ಹೊತ್ತು ಕಳೆಯುವ ಆಸೆ ಇತ್ತು. ಆದರೆ ಬೆಳಿಗಿನಿಂದ ಅತ್ತೆ ಏನಾದರೂ ಕೆಲಸ ಹೇಳುತ್ತಲೇ ಇದ್ದರು. ಮೊದಮೊದಲು ಉತ್ಸಾಹದಿಂದ ಮಾಡಿದ ಅವಳಿಗೆ ಅಲ್ಲಾವುದ್ದಿನ್‍ನ ಭೂತದಂತೆ ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು. ಅಮ್ಮನ ಮನೆಯಲ್ಲಿ ಹೀಗೆ ಕೆಲಸ ಮಾಡಿ ರೂಢಿ ಇಲ್ಲದ ಅವಳಿಗೆ ಇಲ್ಲಿ ದಿನಕಳೆದಂತೆ ಅತ್ತೆ ಬೇಕಂತೆಲೇ ತನ್ನಿಂದ ಹೆಚ್ಚು ಕೆಲಸ ಮಾಡಿಸ್ತಾಳೆ ಅಂತ ಅನಿಸುತ್ತಿತ್ತು. ಇವತ್ತಂತೂ ಒಂದಿಷ್ಟು ಹೆಚ್ಚೇ ಕೆಲಸ ಹೇಳುತ್ತಿದ್ದಾರೆ.....
ಕೊನೆಗೂ ಅತ್ತೆಯ ಪದಾರ್ಥ ವರ್ಗಾವಣೆಯ ಕೆಲಸ ಮುಗಿಸಿ ಕೋಣೆಗೆ ಹೋದ ಅವಳಿಗೆ ಪತಿಯು ಕೋಣೆಯಲ್ಲಿ ಕಾಣಲಿಲ್ಲ. ನಿರಾಶಳಾಗಿ ಮಂಚದ ಮೇಲೆ ಬಿದ್ದಿದ್ದ ಬಟ್ಟೆಯ ರಾಶಿಯನ್ನು ಮಡಚಿಡುವ ಕೆಲಸ ಮಾಡಲು ಶುರು ಮಾಡಿದಳು. ಕಪಾಟಿನಲ್ಲಿ ಜೋಡಿಸಿಡುತ್ತಿರುವಾಗ ಹಿಂದಿನಿಂದ ಬಂದ ಕೈಯೊಂದು ಸೊಂಟವನ್ನು ಬಳಸಿದಾಗ ಮೈಮನವೆರಡೂ ಅರಳಿತು. ನಿಧಾನವಾಗಿ ಪತಿಯತ್ತ ತಿರುಗಿದ ಸುಜಾತಳ ಕಿವಿಗೆ ಪತಿಯ ನುಡಿ ಅಪ್ಪಳಿಸಿತು!
"ಎಷ್ಟು ಕಪ್ಪಗೆ ಕಾಣುತ್ತಿಯಾ!"
ಅಲ್ಲೇ ಶಿಲೆಯಾದಳು ಸುಜಾತ!
No comments:
Post a Comment