ಎಂದಿನ ಹಾಗೆ ದೆಹಲಿಯ ಘಟನೆ ಬರೇ ಸುದ್ದಿಯಾಗಿ ಉಳಿಯಲಿಲ್ಲ..ಅವಳು ಧ್ವನಿಯೆತ್ತಿದಳು...ಅವಳ ಧ್ವನಿಗೆ ಇನ್ನೊಬ್ಬಳು...ಹೀಗೆ ಹತ್ತು ಹಲವು ಧ್ವನಿಗಳು ಕೂಡಿಕೊಂಡಿವೆ....ಮತ್ತೆ ಮಾನವತೆಯ ಗಂಟೆ ಬಾರಿಸುತ್ತಿದೆಯೆ! ಆಶಾಕಿರಣಗಳು ಕಾಣುತ್ತಿವೆ!
ಅಂದ ಹಾಗೆ ಆ ಹುಡುಗಿಯು ಧೈರ್ಯವಂತೆ! ಇಂತಹ ಘಟನೆಗಳಿಗೆ ಬಲಿಯಾದವರು ತಾವೇ ತಪ್ಪೆಸೆದಂತೆ ಮುಖ ಮುಚ್ಚಿ ಹೇಳಿಕೆಗಳನ್ನು ನೀಡುವಂತೆ ಈ ಹುಡುಗಿ ಮಾಡಲಿಲ್ಲ. ತನ್ನ ಮೇಲೆ ದೌರ್ಜನ್ಯವೆಸೆಗಿದವರಿಗೆ ಶಿಕ್ಷೆ ಕೊಡಿಸುವಂತೆ ಜನರನ್ನು ಕೇಳಿಕೊಂಡಳು. ಹೌದು ಸಮಾಜವು ಬದಲಾಗಬೇಕು..ಮಾನವತೆಯೇ ನಮ್ಮೆಲ್ಲರ ಗುರಿಯಾಗಬೇಕು.
ಈ ನಿಟ್ಟಿನಲ್ಲಿ ಫೇಸ್ ಬುಕ್, ಬ್ಲಾಗ್, ಅವಧಿಯಂತಹ ಜಾಲತಾಣಗಳು ಪ್ರಶಂಸನೀಯ ಕಾರ್ಯವನ್ನು ಹಮ್ಮಿಕೊಂಡಿದೆ. ಫೇಸ್ ಬುಕ್ ಗೆಳತಿ, ರಂಗ ಮತ್ತು ದೂರದರ್ಶನದ ಪ್ರತಿಭಾವಂತೆ ನಟಿ ಜಯಲಕ್ಷ್ಮಿ ಪಾಟೀಲರು ಮೊದಲಾಗಿ ತಮ್ಮ ಧ್ವನಿಯೆತ್ತಿದರು..ಅದಕ್ಕೆ ನಮ್ಮ ಅಂತಪುರದ ಸಖಿಯರೆಲ್ಲ...ಅಲ್ಲದೆ ಲೇಖಕಿಯರು, ಪತ್ರಕರ್ತರು...ಅವರ ಜೊತೆಗೆ ನಮ್ಮ ಪುರುಷ ಗೆಳೆಯರೂ ತಮ್ಮಸ್ವರ ಕೂಡಿಸಿ ನಮ್ಮ ಹೋರಾಟಕ್ಕೆ ಬೆಂಬಲವಿತ್ತರು. ಹೀಗೆ ಮಾರ್ದನಿಗೊಂಡ ಹಲವು ಸ್ವರಗಳಲ್ಲಿ ಕೆಲವನ್ನು ಇಲ್ಲಿ ಹಾಕಿದ್ದೇನೆ.
ಈ ಹೋರಾಟವು ಕೆಲವೇ ದಿನಗಳಲ್ಲಿ ತನ್ನ ಸದ್ದು ಕಳೆದುಕೊಳ್ಳದಿರಲಿ ಮತ್ತು ಯಾವುದೇ ಜೀವಿ ( ಮಹಿಳೆ ಮಾತ್ರವಲ್ಲ ಪುರುಷರು ಸಹ) ಆ ಕ್ರೌರ್ಯವನ್ನು ತನ್ನ ಬಾಳಿನಲ್ಲಿ ಅನುಭವಿಸದಿರಲಿ ಎಂಬ ಆಶಯವು ನನ್ನದು.
___________________________________________________
ಜಯಶ್ರಿ ಕಾಸರವಳ್ಳಿ-
"ಇಲ್ಲೊಂದು ನಾನು ಮದರಾಸಿನಲ್ಲಿದ್ದಾಗ ನಡೆದ ಒಂದು ಸಣ್ಣ ಪ್ರಸಂಗವನ್ನು ಪ್ರಸ್ತಾಪಿಸುವುದು ಒಳಿತು. ನಾವು ಮದರಾಸಿಗೆ ಹೋದ ಹೊಸತರಲ್ಲಿ ಪರಿಚಯವಾದ ಕನ್ನಡ ಕುಟುಂಬವಿದ್ದ ಒಂದು ಅಪಾರ್ಟ್ ಮೆಂಟ್ನಲ್ಲಿ, ಅವರ ಫ್ಲಾಟ್ ಪಕ್ಕದ ಮನೆಯಲ್ಲಿ ಹದಿನೈದು ವರುಷದ ಹುಡುಗಿ ಒಬ್ಬಳಿದ್ದಳು. ಹನ್ನೆರಡು ವರುಷವಿರುವಾಗ ಆ ಹುಡುಗಿ ರೇಪ್ಗೆ ಒಳಗಾಗಿ ಸುದ್ದಿಮಾದ್ಯಮಗಳಲ್ಲಿ ಸಾಕಷ್ಟು ಪ್ರಚಾರವಾಗಿತ್ತು.ಇಡೀ ಅಪಾರ್ಟ್ ಮೆಂಟ್ನಲ್ಲಿ ಆ ಹುಡುಗಿಯನ್ನು ‘ರೇಪ್ ಹುಡುಗಿ’ ಎಂದೇ ಕರೆಯುತ್ತಿದ್ದರು. ‘ಎಂತಹ ಅನ್ಯಾಯ! ಇದರಲ್ಲಿ ಆ ಹುಡುಗಿಯ ತಪ್ಪೇನಿದೆ? ನೀವಾದರೂ ನಿಮ್ಮ ಅಸೋಷಿಯೇಶನ್ನಲ್ಲಿ ಈ ವಿಷಯ ಎತ್ತಿ ಆ ಹುಡುಗಿಯನ್ನು ಎಲ್ಲರ ಹಾಗೆ ಕರೆಯುವ ಹಾಗೆ ಮಾಡಿ’. ಎಂಬ ಅಭಿಪ್ರಾಯವನ್ನ ಆ ಕನ್ನಡದ ಹೆಣ್ಣಿಗೆ ನೀಡಿದೆ. ‘ಅಯ್ಯೋ, ಆಕೇನ ಎಲ್ಲಾ ಗುರಿತಿಸೋದೇ ಹಾಗೆ.ಯಾವಾಗ ನೋಡಿದರೂ ಆ ಹುಡುಗಿ ನಗುತ್ತಾನೇ ಇರುತ್ತೆ.ಅದಕ್ಕಿಲ್ಲದ ಫೀಲಿಂಗ್ ನಿಮಗ್ಯಾಕೆ?’ ಎಂದರು ಆ ಮಹಾತಾಯಿ!"
******************************************************
ಜಯಲಕ್ಷ್ಮಿ ಪಾಟೀಲ್-
ಯಾಕೆ ಹೀಗಾಗುತ್ತದೆ? ಯಾಕೆ ಗಂಡಸರೇ ಹೆಚ್ಚಾತೀ ಹೆಚ್ಚಿನ ಪ್ರಮಾಣದಲ್ಲಿ ಇಂಥ ವಿಕೃತಿಗಿಳಿಯುತ್ತಾರೆ? ಅವರ ದೇಹದಲ್ಲಿ ಅಂಥ ಯಾವ ಹಾರ್ಮೋನ್ ಈ ಪರಿಯ ವಿಕೃತಿಗಳನ್ನು ಪ್ರಚೋದಿಸುತ್ತಿರುತ್ತದೆ?! ದಡಾರ ಚುಚ್ಚು ಮದ್ದು, ಪೋಲಿಯೊ, ಬಿಸಿಜಿ ಲಸಿಕೆ ಮುಂತಾದವುಗಳನ್ನು ಕಂಡು ಹಿಡಿದು ಮಗು ಹುಟ್ಟುತ್ತಲೇ ಅವೆಲ್ಲವನ್ನೂ ಮಗುವಿನ ದೇಹದೊಳಗಿಳಿಸಿ ಮುಂಬರುವ ಭಯಂಕರ ವ್ಯಾಧಿಗಳನ್ನು ಬರದಂತೆ ತಡೆಯಲು ಸಾಧ್ಯವಿರುವಾಗ, ಗಂಡಿನಲ್ಲಿ ಹುಟ್ಟುವ ಈ ವಿಕಾರವನ್ನು ತಡೆಗಟ್ಟಲು ಯಾಕೆ ವಿಜ್ಞಾನಿಗಳು ಪ್ರಯತ್ನಿಸಿಲ್ಲ? ನನಗ್ಯಾಕೋ ಇದು ಬರೀ ಮಾನಸಿಕ ಸಮಸ್ಯೆ, ಅವರು ಬೆಳೆದ ವಾತಾವರಣದ ಹಿನ್ನೆಲೆ, ಅನುಭವಿಸಿದ ಅವಮಾನಗಳ ಪ್ರತಿಕಾರ ಮುಂತಾಗಿ ಅನಿಸುವುದಿಲ್ಲ. ಬದಲಿಗೆ ಹಾರ್ಮೋನ್ ಗಳ ಏರುಪೇರಿನ ಜೊತೆಗೆ ಮನಸಿನ ವಿಕಾರವೂ ಸೇರಿ ಅವರುಗಳು ಈ ಪರಿಯ ಹೇಸಿಗಳಾಗುತ್ತಾರೆ ಅನ್ನಿಸುತ್ತದೆ. ಇಂಥ ವಿಕೃತರ ದೆಸೆಯಿಂದಾಗಿ ಸಭ್ಯ ಗಂಡಸರನ್ನೂ ಒಂದು ಅನುಮಾನದ ಕಿರುಗಣ್ಣಿನಿಂದ ಹೆಣ್ಣುಮಕ್ಕಳು ನೋಡುವಂತಾಗಿರುವುದು ವಿಪಯರ್ಾಸವಾದರೂ ತನ್ನ ಸುರಕ್ಷೆಗಾಗಿ ಅದು ಅನಿವಾರ್ಯ ಎಂಬಷ್ಟು ಹೆಣ್ಣು ಅದಕ್ಕೆ ಒಗ್ಗಿ ಹೋಗಿದ್ದಾಳೆ!!
******************************************************್
ಜಿ.ಎನ್ ಮೋಹನ್- ಅವಧಿ ಪ್ರಧಾನ ಸಂಪಾದಕರು
‘ಈ ರಾತ್ರಿ ಎಚ್ಚರಾಗಿರೋಣ..’ ಎನ್ನುವ ನಾಟಕ ನೆನಪಾಗುತ್ತಿದೆ. ಕೋಮುವಾದಕ್ಕೆ ತಡೆ ಹಾಕುವ ಬಗೆಗಿನ ನಾಟಕ ಅದು. ಪ್ರತೀ ಹೆಂಗಸೂ ನ್ನಿರ್ಧಾರ ಮಾಡುತ್ತಾಳೆ – ಈ ರಾತ್ರಿ ಎಚ್ಚರಾಗಿರೋಣ, ನನ್ನ ಗಂಡನನ್ನ, ನನ್ನ ಸಹೋದರನನ್ನ, ನನ್ನ ಬಂಧುವನ್ನ ಹೊರಗೆ ಹೋಗಲು ಬಿಡದಂತೆ ಈ ರಾತ್ರಿ ಎಚ್ಚರಾಗಿರೋಣ ಎಂದು. ಮನೆಗೆ ಬೆಂಕಿ ಹಚ್ಚುವ, ಪೆಟ್ರೋಲ್ ಸೀಮೆ ಎಣ್ಣೆ ಸುರಿಯುವ, ಇರಿದು ಕೊಲ್ಲುವ, ಲೂಟಿ ಮಾಡುವ ನನ್ನ ಗಂಡ, ನನ್ನ ಸಹೋದರ, ನನ್ನ ಬಂಧು ಈ ರಾತ್ರಿ ಆಚೆ ಹೋಗದಂತೆ ಎಚ್ಚರಾಗಿರೋಣ. ಹಾಗಾದಲ್ಲಿ ಕೋಮು ಗಲಭೆಗಳು ನಡೆಯುವುದಾದರೂ ಹೇಗೆ ಎನ್ನುವುದು ಈ ಎಲ್ಲರ ಆಲೋಚನೆ.
ಹೌದಲ್ಲ, ಅತ್ಯಾಚಾರದ ಮಾತು ಬಂದಾಗಲೂ ಇದು ಸರಿ. ಈ ರಾತ್ರಿ ಮಾತ್ರವಲ್ಲ, ಈ ಹಗಲು, ಈ ರಾತ್ರಿ- ಈ ಹಗಲು ಮಾತ್ರವಲ್ಲ, ಪ್ರತಿ ಹಗಲು ರಾತ್ರಿ ನನ್ನ ಗಂಡ, ನನ್ನ ಸಹೋಧರ, ನನ್ನ ಬಂಧು ಪುರುಷ ಮೃಗವಾಗಿ ಬದಲಾಗದಿರುವಂತೆ ಎಚ್ಚರಾಗಿರೋಣ.
ಹೀಗೆಲ್ಲ ಆಗುವಾಗಲೇ ದೆಹಲಿಯಲ್ಲಿ ಆ ಪ್ರತಿಭಟನಾಕಾರರು ಹಿಡಿದಿದ್ದ ಆ ಫಲಕ ನೆನಪಿಗೆ ಬರುತ್ತಿದೆ. ‘Dont teach me what to wear, Teach ur son not to rape’ ಈ ರಾತ್ರಿ, ಈ ಹಗಲು, ಪ್ರತಿ ರಾತ್ರಿ, ಪ್ರತಿ ಹಗಲೂ Dont Rape ಎನ್ನುವುದನ್ನು ಕಲಿಸುತ್ತಲೇ ಇರೋಣ..
ಮುಂದೊಂದು ದಿನ..
ಇಂತಹ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ.
*****************************************************
ಕೆ.ವಿ ತಿರುಮಲೇಶ್-
ನಿಮ್ಮ ಈ ವಿಶೇಷ ಸಂಚಿಕೆ ಅತ್ಯಾಚಾರ ವಿರುದ್ಧದ ಜನಾಂದೋಲನಕ್ಕೆ ಒಂದು ಕೊಡುಗೆ. ಈ ಅತ್ಯಾಚಾರವನ್ನು ಮೂಲದಿಂದಲೇ ಕಿತ್ತೊಗೆಯುವುದಕ್ಕೆ ಏನು ಮಾಡಬಹುದು? ನಮಗೆ ಬೇಕಾದ್ದು ಅರಿವು ಮತ್ತು ಕಾರ್ಯಕ್ರಮ.
ಅತ್ಯಾಚಾರದಲ್ಲಿ ಸಾಮೂಹಿಕ ಘೋರ, ಏಕಾಕಿ ಸಹ್ಯ ಎನ್ನುವ ಮಾತು ಸರಿಯಲ್ಲ. ಹೆಣ್ಣಿನ ಮೇಲೆ ನಡೆಯುವ ಯಾವುದೇ ಲೈಂಗಿಕ ಅತ್ಯಾಚಾರವೂ ಒಂದೇ: ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಮರಣದಂಡನೆಗೆ ನಮ್ಮ ಬುದ್ಧಿಜೀವಿಗಳು ಬಿಡುವುದಿಲ್ಲ!
ಒಂದೆರಡು ಸೂಚನೆಗಳು:
ಪೋಲೀಸರಿಗೆ ನಮ್ಮ ಜನತೆ ಸಹಕರಿಸುವುದಿಲ್ಲ; ಪೋಲೀಸರನ್ನು ನಮ್ಮ ವಿರೋಧಿಗಳಂತೆ ತಿಳಿಯುವ ಮನೋವೃತ್ತಿ ಹೋಗಬೇಕು. ಪೋಲೀಸರಿಗೂ ಜನರ ಜತೆ ಸರಿಯಾಗಿ ವರ್ತಿಸುವಂತೆ ತರಬೇತಿ ಸಿಗಬೇಕು.
ಪ್ರತಿಯೊಬ್ಬ ನಾಗರಿಕನೂ ಪೋಲೀಸ್ ಸ್ಟೇಷನಿನಲ್ಲಿ ರೆಜಿಸ್ಟರ್ಡ್ ಮಾಡಿಕೊಳ್ಳಬೇಕು–Know Your Citizen ಎಂಬ ರೀತಿಯಲ್ಲಿ. ಹೀಗೆ ರೆಜಿಸ್ಟರ್ಡ್ ಅದಾಗ ಒಂದು ನಂಬರ್ ಸಿಗಬೇಕು; ವ್ಯಕ್ತಿ ಕೆಲಸಕ್ಕೆ ಸೇರಿದಾಗ, ಕೆಲಸ ಬದಲಾಯಿಸಿದಾಗ, ಪರವೂರಿಗೆ ಹೋಗಿ ನೆಲಸಿದಾಗ, ಬಾಡಿಗೆ ಮನೆ ಹಿಡಿದಾಗ ಈ ನಂಬರ (ಕಾರ್ಡು) ತೋರಿಸಲೇಬೇಕು. ಹಾಗೂ ಇದು ಅತ್ಯಾಚಾರದ ವಿರುದ್ಧದ ಕಾರ್ಯಕ್ರಮ ಎನ್ನುವುದು ಎಲ್ಲ್ರರಿಗೂ ಗೊತ್ತಿರಬೇಕು. ಇದರಿಂದ ನೇರ ಪರಿಣಾಮ ಇಲ್ಲದೆ ಇದ್ದರೂ ಜನರಲ್ಲಿ ಒಂದು ಅರಿವು ಮೂಡಲು ಸಹಾಯಕವಾದೀತು.
ಶಾಲೆಯಿಂದ, ಕಾಲೇಜಿನಿಂದ, ಯಾವುದೇ ತರಬೇತಿಯಿಂದ ಹೊರಬರುವ ವಿದ್ಯಾರ್ಥಿಗಳು ಅತ್ಯಾಚಾರ ವಿರುದ್ಧದ ಹಾಗೂ ಮಹಿಳಾ ರಕ್ಷಣೆಯ ಪರವಾದ ಹೇಳಿಕೆಯೊಂದಕ್ಕೆ ಸಹಿ ಮಾಡಿದರೇನೇ ಆತನಿಗೆ ಸರ್ಟಿಫಿಕೇಟು ಸಿಗುವಂತಾಗಬೇಕು.
ಇಂಥ ಇತರ ಕಾರ್ಯಕ್ರಮಗಳನ್ನು ಎಲ್ಲರೂ ಯೋಚಿಸಬೇಕಾಗಿದೆ.
ಕೆ.ವಿ.ತಿರುಮಲೇಶ್
******************************************************್
ಪುರುಷೋತ್ತಮ ಬಿಳಿಮಳೆ-
ನನಗೆ ಜನುಮ ನೀಡಿದ ತಾಯಿ, ಕಿಡ್ನಿ ಕೊಟ್ಟು ಪುನರ್ಜನ್ಮ ನೀಡಿದ ಪತ್ನಿ, ವಿನಾಕಾರಣ ಸುಮ್ಮನೆ ಪ್ರೀತಿಸುವ ತಂಗಿಯರು, ಬದುಕಿನಲ್ಲಿ ಉತ್ಸಾಹ ಬತ್ತದಂತೆ ನೋಡಿಕೊಳ್ಳುವ ಗೆಳತಿಯರು–ನೀವೆಲ್ಲ ಬೆಳಕಿನ ಬೀಜಗಳು..
*****************************************************
ಉಷಾ ಕಟ್ಟೆಮನೆ-
ನಾನು ಮತ್ತೆ ಮತ್ತೆ ನಂಬುವುದು ’ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ’ ಎಂಬುದನ್ನು. ನಾವು ನಮ್ಮ ಮಕ್ಕಳನ್ನು ಅವರ ಹದಿಹರೆಯದ ತನಕ ಯಾವ ಪರಿಸರದಲ್ಲಿ, ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪೋಷಕರು ಸ್ವತಃ ಮಾದರಿಯಾಗಿರದಿದ್ದಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಮನಸ್ಸು ರೂಪುಗೊಳ್ಳಲು ಸಾಧ್ಯವಿಲ್ಲ. ಮಕ್ಕಳು ಬಹುಬೇಗನೆ ಎಲ್ಲವನ್ನೂ ಗ್ರಹಿಸಿಕೊಳ್ಳುತ್ತಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಜೊತೆಗೆ ಆತ್ಮರಕ್ಷಣೆಯ ಕಲೆಯನ್ನು ಸಂದರ್ಭಕ್ಕನುಗುಣವಾಗಿ ಹೇಳಿಕೊಡಬೇಕು. ಹಾಗೆಯೇ ಗಂಡು ಮಕ್ಕಳಿಗೂ ಸ್ತ್ರೀಯರನ್ನು ಗೌರವದಿಂದ ಕಾಣುವುದನ್ನು ಅವರಿಗೆ ಅರಿವಿಲ್ಲದಂತೆ ಮನಗಾಣಿಸುತ್ತಿರಬೇಕು. ಯಾಕೆಂದರೆ ಪುರುಷ ಪ್ರಧಾನ ಯೋಚನೆಯನ್ನು ಅಷ್ಟು ಸುಲಭದಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.
ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರವಾದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಂತ ಧಾರುಣವಾಗಿ ಸಾಮೂಹಿಕ ಅತ್ಯಚಾರ ನಡೆಯಿತು. ಆಕೆಯ ದೇಹದ ಮೇಲೆ ಮೃಗೀಯವಾಗಿ ವರ್ತಿಸಿದ ಪುರುಷಪುಂಗವರ ಆಟಾಟೋಪವನ್ನು ಮಾಧ್ಯಮಗಳಲ್ಲಿ ಓದಿದಾಗ, ಕೇಳಿದಾಗ ನನಗೆ ತಕ್ಷಣಕ್ಕೆ ಅನ್ನಿಸಿದ್ದು ಅವರಿಗೆ ಅತ್ಯುಗ್ರವಾದ ಶಿಕ್ಷೆ ನೀಡಬೇಕೆಂದು. ಹಾಗಾಗಿ ನನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ನಾನು ಹೀಗೆ ಬರೆದೆ;
”ದೆಹಲಿಯಲ್ಲಿ ವಿದ್ಯಾರ್ಥಿಯೊಬ್ಬಳನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಧಾರುಣವಾಗಿ ಗ್ಯಾಂಗ್ ರೇಪ್ ಮಾಡಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…
ಆದರೆ.. ಸಾಮೂಹಿಕ ಅತ್ಯಾಚಾರಿಗಳಿಗೆ ಕೊಡುವ ಅತ್ಯುಗ್ರ ಶಿಕ್ಷೆಯೆಂದರೆ ಅವರ ಪುರುಷತ್ವ ಹರಣವಾಗಬೇಕು. ಅವರ ಆಯುಧವನ್ನು ನಿಷ್ಕ್ರೀಯಗೊಳಿಸಬೇಕು; ಅವರು ಬದುಕಬೇಕು; ಬದುಕಿಯೂ ಸತ್ತಂತಿರಬೇಕು; ಪ್ರತಿ ಕ್ಷಣವೂ ಅವರ ಸಾವು ಜಗಜ್ಜಾಹೀರಾಗುತ್ತಲಿರಬೇಕು…”
ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಹಾಗೂ ಅಂತರ್ಜಾಲದಲ್ಲಿ ಈ ಘಟನೆಗಳಿಗೆ ಸಂಬಂಧಪಟ್ಟ ಸಾರ್ವಜನಿಕ ಅನ್ನಿಸಿಕೆಗಳನ್ನು ಗಮನಿಸಿದಾಗ ನನಗನ್ನಿಸಿದ್ದು ಪುರುಷರ ಮತ್ತು ಮಹಿಳೆಯರ ಅಭಿವ್ಯಕ್ತಿಯಲ್ಲಿನ ಭಾಷಾ ಬಳಕೆಯ ಬಗೆಗಿನ ವ್ಯತ್ಯಾಸ.
ಮಹಿಳೆಯೊಬ್ಬಳ ಮೇಲೆ ಲೈಂಗಿಕ ಅತ್ಯಚಾರ ನಡೆದಾಗ ಪುರುಷರಂತೆ ಯೋಚಿಸುವ ಮಹಿಳೆಯರನ್ನೂ ಒಳಗೊಂಡಂತೆ, ಇಡೀ ಪುರುಷ ಜಗತ್ತು ಅದನ್ನು ಬಣ್ಣಿಸುವುದು ’ಶೀಲ ಕಳೆದುಕೊಳ್ಳುವುದು’ ಆದರೆ ಸ್ತ್ರೀ ಮನಸ್ಸು ಗ್ರಹಿಸುವುದು ’ಬದುಕು ಕಳೆದುಕೊಳ್ಳುವುದು’ ಗಂಡಿನ ದೃಷ್ಟಿಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯಲಾಗದು. ಆದರೆ ಹೆಣ್ಣಿನ ದೃಷ್ಟಿಯಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳಬಹುದು.
******************************************************
ಸುಧಾ ಚಿದಾನಂದ ಗೌಡ-
ಇಷ್ಟಕ್ಕೂ ಹುಷಾರಾಗಿರುವುದು ಎಂದರೇನು..?
ನಮ್ಮನ್ನು ನಾವು ನಾಲ್ಕು ಗೋಡೆಯ ಮಧ್ಯೆ ಬಂಧಿಸಿಟ್ಟುಕೊಳ್ಳುವುದಾ?
ಹೊರಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಳ್ಳುವುದಾ?
ಎಲ್ಲ ಅವಕಾಶಗಳನ್ನು ಬಿಟ್ಟುಕೊಟ್ಟು, ತಮ್ಮದಲ್ಲದ ತಪ್ಪಿಗೆ ತಾವೇ ಶಿಕ್ಷೆ ವಿಧಿಸಿಕೊಳ್ಳುವುದಾ?
ಗೋಡೆಗಳ ಮಧ್ಯೆಯಾದರೂ ಮಹಿಳೆ ಎಲ್ಲಿ ಸುರಕ್ಷಿತವಾಗಿದ್ದಾಳೆ? ಮನೆಯೊಳಗಿನ ದೌರ್ಜನ್ಯಗಳಿಗೆ ಕಡಿವಾಣವಿದೆಯೇ? ಇಲ್ಲವಲ್ಲ..! ತಂದೆ, ಗಂಡ, ಸೋದರ, ಕೊನೆಗೆ ತಾತನಾಗಿ ಕೂಡ ಕಾಡಿದ ಉದಾಹರಣೆಗಳೇ ದು:ಸ್ವಪ್ನವಾಗಿ ಕಾಡುತ್ತವೆ..ಇವೆಲ್ಲವುಗಳ ಮಧ್ಯೆಯೂ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿರುವವರಿಗೆ ಸಾಮಾಜಿಕ ಕಳಂಕಗಳ ಭಯ, ಯಾರೇನೆನ್ನುತ್ತಾರೊ ಎಂಬ ಭಯ, ಸಹಾನುಭೂತಿಯ ಅಗತ್ಯವಿರುವಾಗಲು ನಿನ್ನದೆ ತಪ್ಪು ಎಂಬಂಥಾ ವಾತಾವರಣ..
ಈ ಪೂರ್ವಾಗ್ರಹಗಳೆಲ್ಲ ಬದಲಾಗುವ ಹೊತ್ತಿಗೆ ಎಷ್ಟು ಯುವತಿಯರು ಬಲಿಯಾಗಬೇಕೋ. . .
ಸ್ತ್ರೀಸಹಜ ಸ್ವಭಾವ ಎಂಬುದೂ ಈಗ ವಿಶ್ಲೇಷéಣೆಗೊಳಪಡಬೇಕಾದ ಸಂಗತಿಯೇ ಎನಿಸುತ್ತದೆ.
ಬಿಹಾರದ ಈ ಘಟನೆಯ ವರದಿ ನೆನಪಾಗುತ್ತಿದೆ..
ಹದಿನೈದು ವರ್ಷದ ಬಾಲಿಕೆಯೊಬ್ಬಳನ್ನು ಅವಳ ತಂದೆ ಒಂದು ವರ್ಷದಿಂದಲೂ ಅತ್ಯಾಚಾರವೆಸಗುತ್ತಿದ್ದ. ಆ ಬಾಲಕಿ ಕೊನೆಗೂ ಬಾಯಿಬಿಟ್ಟಿದ್ದಕ್ಕೆ ಕಾರಣವೇನೆಂದರೆ ಆ ತಂದೆ ಇನ್ನೊಬ್ಬ ಮಗಳನ್ನೂ ಅದೇರೀತಿ ಬಲಾತ್ಕರಿಸಲು ಯತ್ನಿಸಿದಾಗ..! ತಂಗಿಗೂ ತನ್ನ ಸ್ಥಿತಿ ಬರಬಾರದೆಂಬ ಉದ್ದೇಶಕ್ಕೆ ಅವಳು ಪೊಲೀಸ್ ಸ್ಟéೇಷನ್ನಲ್ಲಿ ದೂರು ದಾಖಲಿಸಿದಳೇ ಹೊರತು ತಾನಾಗಿ ಅಲ್ಲ. ಆ ಇಬ್ಬರೂ ಮಕ್ಕಳ ತಾಯಿ ಆರ್ಥಿಕ ಪರಾವಲಂಬಿಯಾಗಿ ಪತಿ ಮಾಡುವ ಅನಾಚಾರಕ್ಕೆ ಸಾಕ್ಷಿಯಾಗಿ, ಬದುಕುತ್ತಿದ್ದಳು. ಇದು ಸ್ವಯಂಕೃತ ಅಪರಾಧವಲ್ಲದೇ ಇನ್ನೇನು? ಅದೆಂಥ ಪರಿಸ್ಥಿತಿಯಲ್ಲಾದರೂ ಎದುರಿಸಿ ನಡೆವುದು ಹೇಳಿದಷ್ಟು ಸುಲಭವಲ್ಲ, ನಿಜ. ಆದರೆ ಅತ್ಯಾಚಾರ ಸಹಿಸುವುದಕ್ಕಿಂತ ಎದುರಿಸುವುದೇ ಸಹ್ಯವಲ್ಲವೇ? ಇಲ್ಲಿ ಸಂಕೋಚ, ಭಯ, ಹಿಂಜರಿಕೆಗಳು ಇರಬಾರದ ಸ್ವಭಾವವೆಂದೇ ತೋರುತ್ತವೆ.
ಉದ್ಯೋಗಕ್ಕಾಗಿ ತುಡಿಯುವ, ಸ್ವಾವಲಂಬನೆಗಾಗಿ ಮಿಡಿಯುವ ಮನ ಮಹಿಳೆಯನ್ನು ಇಂದು ಹೊರಹೋಗುವ ದಾರಿಯಲ್ಲಿ ತಂದು ನಿಲ್ಲಿಸಿದೆ. ಸದಾಕಾಲವೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿಲ್ಲ. ಹಾಗೇ ಅಗತ್ಯವೆನಿಸಿದಾಗ ಜೊತೆಗಿರಲು ಯಾರಾದರೊಬ್ಬರು ಬೇಕೆಂದು ನಿರೀಕ್ಷಿಸುವುದು ಹಾಸ್ಯಾಸ್ಪದವೇ. ಹಾಗಾಗಿ ಒಂಟಿಯಾಗಿ ಪ್ರಯಾಣ ಮುಂದುವರಿಸುವ ಅಗತ್ಯವಿದ್ದೇ ಇದೆ. ಆ ಛಾತಿ ಅವರಿಗೆ ಇದ್ದೇ ಇದೆ. ಆದರೆ ಮಧ್ಯದಲ್ಲಿನ ಗ್ಯಾಂಗ್ ರೇಪ್ನಂಥಾ ಪ್ರಕರಣಗಳು ಥಂಡಾ ಹೊಡೆಸಿಬಿಡುತ್ತವೆ.
ಆಗೆಲ್ಲ ಹಾಗೆ ಕುಸಿದು ಬೀಳಲಿದ್ದವರನ್ನು ಸಂಭಾಳಿಸುವ ಕೆಲಸ ಸಮಾಜ ತಾನೇ ಮಾಡಬೇಕು ಕಣ್ಣು, ಕರುಳುಗಳಿರುವ ಪ್ರಭುತ್ವವು ಅತ್ಯಾಚಾರದಂತಹ ಭೀಕರ ಸನ್ನಿವೇಶ ಬಾರದಿರುವಂತೆಯೇ ಸರ್ಕಾರ ನೋಡಿಕೊಳ್ಳಬಹುದು, ಬಿಗಿಕಾನೂನುಗಳಿಂದ. ನೈತಿಕಶಿಕ್ಷಣದಿಂದ. ಇದು ಸಾಧ್ಯವಾದಾಗ, ಅವರ ನೋವಿಗೆ ನಾವು ನರಳುತ್ತೇವೆಂಬ ಭಾವನೆಯೇ ಆಪ್ತವಾದೀತು. ಹಾಗಾದಾಗ ಸಾವಿನಿಂದ ಪಾರಾಗಿ ಬದುಕುಳಿಯಬಹುದು. ಕ್ರೌರ್ಯಕ್ಕೆ ಧಿಕ್ಕಾರ ಹೇಳಬೇಕಾಗಿರುವುದು ಖಚಿತ.
********************************************************************************************************
ಹೆಸರು ಹೇಳಲಿಚ್ಛಿಸದ ಲೇಖಕಿ-
ಪ್ರತಿಭಟಿಸಿ ಹೊಡೆದ ಕಲ್ಲುಗಳೆಲ್ಲ ತಾಗಿದ್ದೆಲ್ಲ ನನಗೇ! ಹೆಣ್ಣಿಗೇ ಈ ಥರದ ಮರೆಯದ ಗಾಯಗಳು…! ಯಾಕೆ? ನಮ್ಮದೇನು ತಪ್ಪು..? ಇಂಥ ಕಹಿ ಅನುಭವಗಳನ್ನು ದಾಟಿಯೂ ನಾವು ಮನುಷ್ಯರನ್ನು ಪ್ರೀತಿಸುತ್ತೇವೆ! ನಮಗೆ ಬದುಕು ಬದುಕುವ, ಅದನ್ನು ಪ್ರೀತಿಸುವ, ನಿರಮ್ಮಳವಾಗಿ ಅದನ್ನಪ್ಪುವ ಸ್ವಾತಂತ್ರ್ಯವಿಲ್ಲವೇ? ಇಂತಹ ಸಮಾಜದಲ್ಲಿ ನಮಗೆ ನಿಜವಾಗಿಯೂ ಗೌರವವಿದೆಯೇ? ರಕ್ಷಣೆಯಿದೆಯೇ?ಉತ್ತರಿಸುವವರು ಯಾರು??
******************************************************
ಆತ್ರಾಡಿ ಸುರೇಶ್ ಹೆಗ್ಡೆ-
ಉಗ್ರವಾದಿಗಳಲ್ಲಿ, ಭಯೋತ್ಪಾದಕರಲ್ಲಿ ಯಾವ ರೀತಿಯಾಗಿ ಜಾತಿ, ಮತ, ಪಂಗಡಗಳ ಭೇದಭಾವವನ್ನು ತೋರಲಾಗುವುದಿಲ್ಲವೋ, ಅದೇತರಹ ಅತ್ಯಾಚಾರಿಗಳನ್ನು ಅವರದೇ ಒಂದು ವರ್ಗವನ್ನಾಗಿ ಕಾಣಬೇಕಾದ ಅಗತ್ಯ ಇದೆ. ಅತ್ಯಾಚಾರಿಗಳ ಮೇಲಿನ ಕೋಪವನ್ನು ಒಟ್ಟಾರೆ ಪುರುಷವರ್ಗದ ಮೇಲೆ ತೋರಿಸಿಕೊಳ್ಳುವುದು ಅಸಹನೀಯ. ಇಂಥ ದುರ್ಘಟನೆಗಳಿಗೆ, ದುರಂತಗಳಿಗೆ ನಮ್ಮ ಈ ಸಮಾಜವೇ ಕಾರಣವಾಗಿದೆ ಅನ್ನುವ ಸತ್ಯವನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದೇ ಹೋದರೆ, ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ. ಇಲ್ಲಿ ಲಿಂಗಭೇದ ತೋರುವುದು ಅಸ್ವೀಕಾರಾರ್ಹ. ಅತ್ಯಾಚಾರಿಗಳು ಪುರುಷರೂ ಅಲ್ಲ, ಮಹಿಳೆಯರೂ ಅಲ್ಲ. ಅವರು ರಾಕ್ಷಸರು, ದಾನವರು. ಅವರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವುದು ಮಹಿಳೆಯರಷ್ಟೇ ಅಲ್ಲ. ಬಲಿಯಾಗುತ್ತಿರುವುದು ಒಟ್ಟಾರೆ ಮಾನವೀಯತೆ. ಹಿಂದಿನ ಪುರಾಣ ಕತೆಗಳಲ್ಲಿ ವಿಚಿತ್ರವಾಗಿ ಚಿತ್ರಿಸಿ ನಮ್ಮ ಕಣ್ಮುಂದೆ ಕಟ್ಟಿಕೊಡುತ್ತಿದ್ದ ಆ ಕೆಟ್ಟ, ಕ್ರೂರ, ದುರುಳ ದಾನವರ ವಂಶಸ್ಥರೇ ಇಂದಿನ ಈ ಅತ್ಯಾಚಾರಿಗಳು. ಅವರ ನಡವಳಿಕೆಯೇ ಅವರನ್ನು ರಾಕ್ಷಸರನ್ನಾಗಿ ವರ್ಗೀಕರಿಸುವಲ್ಲಿ ಮಾನದಂಡವಾಗುತ್ತದೆ. ಅದಿಲ್ಲವ್ವಾಗಿದ್ದರೆ, ರಾವಣ ಹಾಗೂ ವಿಭೀಷಣ ಸಹೋದರರೇ ತಾನೆ? ಆದರೆ ವಿಭೀಷಣನನ್ನು ಯಾರೂ ರಾಕ್ಷಸ ಎನ್ನುವುದೇ ಇಲ್ಲ.
ಕಳೆದ ನಾಲ್ಕೈದು ದಶಕಗಳಿಂದೀಚೆಗೆ ನಮ್ಮ ನಾಡಿನ ಚಿತ್ರರಂಗದವರು ಹಾಗೂ ಮಾಧ್ಯಮದವರು ಮಹಿಳೆಯರನ್ನು ಬಳಸಿಕೊಂಡ ಪರಿಯೇ ಒಂದು ರೀತಿಯಲ್ಲಿ ಸತತ ಅತ್ಯಾಚಾರ ನಡೆಸುತಿರುವಂತಿತ್ತು ಹಾಗೂ ಇನ್ನೂ ಇದೆ. ನೃತ್ಯಗಳು, ಸಿನಿಮಾಗಳಲ್ಲಿ ಜಾಸ್ತಿಯಾಗುತ್ತಾ ಬಂದಂತೆ, ಕಲಾವಿದೆಯರು ತೊಡುವ ಬಟ್ಟೆಗಳು ಕಡಿಮೆಯಾಗುತ್ತಾ ಬಂದವು. ಅವುಗಳನ್ನು ಚಿತ್ರಮಂದಿರದ ಪರದೆಯ ಮೇಲಷ್ಟೇ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಕಳೆದ ಎರಡು – ಎರಡೂವರೆ ದಶಕಗಳಿಂದೀಚೆಗೆ ಯಾವುದೇ ನಿರ್ಬಂಧವಿಲ್ಲವೇ, ಆ ನಗ್ನ ಚಿತ್ರಗಳು ಸುದ್ದಿಮಾಧ್ಯಮಗಳಲ್ಲೂ ಪ್ರಕಟಗೊಳ್ಳತೊಡಗಿದವು. ಮನೆಮನೆಗೂ “ಟಿವಿ”ಗಳು ಬಂದವು. ಅವುಗಳ ಜೊತೆಗೆ, ಗಂಡು ಹೆಣ್ಣುಗಳೆನ್ನುವ ಭೇದ ಇಲ್ಲದೆಯೇ ನಿರ್ಲಜ್ಜೆಯಿಂದ ಮೈಮಾಟಗಳನ್ನು ಪ್ರದರ್ಶಿಸುವ ಎಲ್ಲರ ಚಿತ್ರಗಳೂ, ದೃಶ್ಯಗಳೂ ಮನೆಮನೆಗಳಿಗೆ ಬಂದವು. ನಾಚಿಕೆ, ಮಾನ ಮರ್ಯಾದೆ ಎನ್ನುವುದು ಎಲ್ಲೆಂದರಲ್ಲಿ ಮೂರಾಬಟ್ಟೆಯಾಗತೊಡಗಿದವು. ಇವುಗಳಿಗೆಲ್ಲಾ ಅನ್ಯರಷ್ಟೇ ನಾವೂ ಜವಾಬ್ದಾರರು. ಜಾಸ್ತಿ ಅಂಗ ಪ್ರದರ್ಶನಮಾಡಿದವರು ವಿಶ್ವ, ಭುವನ ಸುಂದರಿಗಳೆಂಬ ಪ್ರಶಸ್ತಿಗಳಿಗೆ ಭಾಜನರಾದರು. ಮುಂದೆ ಅವರೇ ಚಲನಚಿತ್ರಗಳಲ್ಲಿ ಬೇಕಾಬಿಟ್ಟಿ ನೃತ್ಯಗಳಿಗೆ, ಕಾಮೋತ್ತೇಜಕ ದೃಶ್ಯಗಳಿಗೆ ತಮ್ಮ ಅಂಗಾಂಗಗಳ ಕೊಡುಗೆ ನೀಡತೊಡಗಿದರು. ಉಳಿದ ಕಲಾವಿದರಿಗೆ ತಮ್ಮ ಅಳಿವು ಉಳಿವಿನ ಪ್ರಶ್ನೆ ಎದುರಾಯಿತು. ಹಾಗಾಗಿ ಅನ್ಯರೂ ನಿರ್ಲಜ್ಜರಾದರು.
ಹೀಗಿರುವಾಗ, ಮದ್ಯಪಾನದ ಹಾಗೂ ತಂಬಾಕಿನ ಉತ್ಪನ್ನಗಳ ಮಾರುಕಟ್ಟೆ ಈ ದೇಶದ ಆರ್ಥಿಕ ಸ್ಥಿಯನ್ನು ನಿರ್ಧರಿಸುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ದುಶ್ಚಟಗಳಿಗೆ ಬಲಿಯಾದವರು ಹಾಗೂ ವ್ಯಸನಿಗಳಾದವರು, ಇಂತಹ ಕಾಮೋತ್ತೇಜಕ ಚಲನಚಿತ್ರಗಳನ್ನು ವೀಕ್ಷಿಸಿದ ನಂತರ ತಮ್ಮ ತೀಟೆ ತೀರಿಸಿಕೊಳ್ಳಲು ಬೇಟೆಯನ್ನು ಅರಸುವಾಗ, ಅನಾಯಾಸವಾಗಿ ದಕ್ಕುವ, ನಿಸ್ಸಹಾಯಕ ಹೆಣ್ಣುಮಕ್ಕಳು ಇವರಿಗೆ ಬಲಿಯಾಗತೊಡಗಿದರು. ಒಂದು ಘಟನೆ ಇನ್ನೊಂದು ಘಟನೆಗೆ, ಒಂದು ಅಪರಾಧ ಇನ್ನೊಂದು ಅಪರಾಧಕ್ಕೆ ಸ್ಪೂರ್ತಿ ನೀಡುತ್ತಾ ಬಂದಿತು. ಏಕೆಂದರೆ, ಅಪರಾಧಿಗಳು ಕಠಿಣ ಶಿಕ್ಷೆಗೆ ಒಳಗಾಗುವುದಿಲ್ಲ. ಒಂದು ವೇಳೆ ಅಂಥ ಶಿಕ್ಷೆಗೆ ಒಳಗಾದರೂ, ಆ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಾಮುಖ್ಯ ಪಡೆಯುವುದೇ ಇಲ್ಲ.
ಈ ಸಮಾಜ, ಲಿಂಗ ಭೇದ ಮರೆತು ತನ್ನ ಒಳಗಣ್ಣನ್ನು ತೆರೆದುಕೊಳ್ಳಬೇಕಿದೆ. ತಡವಾಗಿಯಾದರೂ, ಇಂತಹ ಅಪರಾಧಗಳ ನಿಯಂತ್ರಣೆಗಾಗಿ ತಾನೇ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಇದರಲ್ಲಿ ಈ ಸಮಾಜದ ಪ್ರತಿಯೊಬ್ಬ ಸದಸ್ಯನ ಜವಾಬ್ದಾರಿ ಮುಖ್ಯವಾಗಿರುವಂತೆಯೇ, ಮುದ್ರಣ ಹಾಗೂ ದೃಶ್ಯಮಾಧ್ಯಮಗಳ ಜವಾಬ್ದಾರಿಯೂ ಬಹು ಮುಖ್ಯವಾಗಿದೆ.
No comments:
Post a Comment