ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 December, 2012

ಶಿಲೆಯಾದಳು ಸುಜಾತ!

 


         ಇವತ್ತೇ ನನ್ನ ತಿಥಿ ಮಾಡಿ ಮುಗಿಸ್ತಾರೆ ಕಾಣ್ತದೆ ಈ ಅತ್ತೆ....ಬಾಯಿ ತೆರೆದು ಹೇಳುವ ಧೈರ್ಯವಿಲ್ಲದೆ ಮನಸ್ಸಿನಲ್ಲೇ ಅತ್ತೆಯನ್ನು ಶಪಿಸುತ್ತಾ ಸುಜಾತ ಊಟದ ಮೇಜನ್ನು ಶುದ್ಧಮಾಡುತ್ತಿದಳು....ಇವಳು ಒರೆಸುವುದು, ಅತ್ತೆ ದೊಡ್ಡ ಪಾತ್ರೆಯಿಂದ ಚಿಕ್ಕ ಪಾತ್ರೆಗೆ ಪದಾರ್ಥಗಳನ್ನು ವರ್ಗಾಯಿಸುವುದು, ಒಂದಿಷ್ಟು ಸುಮ್‍ಸುಮ್ಮನೆ ಮೇಜಿನ ಮೇಲೆ ಚೆಲ್ಲುವುದು..ಇವಳಿಗೆ ಒರಸಲು ಹೇಳುವುದು..ಇದು ಸುಮಾರು ಹದಿನೈದು ನಿಮಿಷಗಳಿಂದ ನಡೆಯುತ್ತಲೇ ಇತ್ತು. ಅತ್ತೆಗೆ ಇವಳನ್ನು ಆಚೆ ಕಳುಹಿಸಲು ಮನಸಿರಲಿಲ್ಲ..ಎಲ್ಲಿಯಾದರು ಕೋಣೆಗೆ ಹೋದರೆ ಮತ್ತೆ ಇವಳಿಂದ ಕೆಲಸ ಮಾಡಿಸಲಾಗುವುದಿಲ್ಲವೆಂದು ಗೊತ್ತಿತ್ತು..ಇವತ್ತು ಭಾನುವಾರ,  ಅಪರೂಪವಾಗಿ ಪತಿ ಎಲ್ಲಿಗೂ ಹೋಗದೆ ಮನೆಯಲ್ಲೇ ಇದ್ದಾನೆ..ಸಹಜವಾಗಿ ಅವಳಿಗೆ ಪತಿಯೊಂದಿಗೆ ಹೊತ್ತು ಕಳೆಯುವ ಆಸೆ ಇತ್ತು.  ಆದರೆ ಬೆಳಿಗಿನಿಂದ ಅತ್ತೆ ಏನಾದರೂ ಕೆಲಸ ಹೇಳುತ್ತಲೇ ಇದ್ದರು. ಮೊದಮೊದಲು ಉತ್ಸಾಹದಿಂದ ಮಾಡಿದ ಅವಳಿಗೆ ಅಲ್ಲಾವುದ್ದಿನ್‍ನ ಭೂತದಂತೆ ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು. ಅಮ್ಮನ ಮನೆಯಲ್ಲಿ  ಹೀಗೆ ಕೆಲಸ ಮಾಡಿ ರೂಢಿ ಇಲ್ಲದ ಅವಳಿಗೆ ಇಲ್ಲಿ ದಿನಕಳೆದಂತೆ ಅತ್ತೆ ಬೇಕಂತೆಲೇ ತನ್ನಿಂದ ಹೆಚ್ಚು ಕೆಲಸ ಮಾಡಿಸ್ತಾಳೆ ಅಂತ ಅನಿಸುತ್ತಿತ್ತು.  ಇವತ್ತಂತೂ ಒಂದಿಷ್ಟು ಹೆಚ್ಚೇ ಕೆಲಸ ಹೇಳುತ್ತಿದ್ದಾರೆ.....
   
        ಕೊನೆಗೂ ಅತ್ತೆಯ ಪದಾರ್ಥ ವರ್ಗಾವಣೆಯ ಕೆಲಸ ಮುಗಿಸಿ ಕೋಣೆಗೆ ಹೋದ ಅವಳಿಗೆ ಪತಿಯು ಕೋಣೆಯಲ್ಲಿ ಕಾಣಲಿಲ್ಲ. ನಿರಾಶಳಾಗಿ ಮಂಚದ ಮೇಲೆ ಬಿದ್ದಿದ್ದ ಬಟ್ಟೆಯ ರಾಶಿಯನ್ನು ಮಡಚಿಡುವ ಕೆಲಸ ಮಾಡಲು ಶುರು ಮಾಡಿದಳು. ಕಪಾಟಿನಲ್ಲಿ ಜೋಡಿಸಿಡುತ್ತಿರುವಾಗ ಹಿಂದಿನಿಂದ ಬಂದ ಕೈಯೊಂದು ಸೊಂಟವನ್ನು ಬಳಸಿದಾಗ ಮೈಮನವೆರಡೂ ಅರಳಿತು.  ನಿಧಾನವಾಗಿ ಪತಿಯತ್ತ ತಿರುಗಿದ ಸುಜಾತಳ ಕಿವಿಗೆ ಪತಿಯ ನುಡಿ ಅಪ್ಪಳಿಸಿತು!
"ಎಷ್ಟು ಕಪ್ಪಗೆ ಕಾಣುತ್ತಿಯಾ!"
 ಅಲ್ಲೇ ಶಿಲೆಯಾದಳು ಸುಜಾತ!

********                                                          ************                                                    ******

     


         

ನಾನು ಅಸಹಾಯಕಿ...ಹೀಗೆ ಪತ್ರ ಬರೆದು ಅಂತರಂಗವ ತೋಡಿಕೊಳ್ಳುವೆ!

  ಗೆಳೆಯ,

      ಮೂರು ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರಹಸನವನ್ನು ನೀನು ನೋಡುತ್ತಿರಬಹುದು. ಇಂತಹದೆಲ್ಲಾ ನಾಟಕವನ್ನು ನೋಡಿದಾಗ ನನಗೆ ಮೈಯೆಲ್ಲ ಉರಿಯುತ್ತದೆ. ಈ ಫೇಸ್ ಬುಕ್ಕಿನಲ್ಲಿ ಎಲ್ಲರೂ ಅನುಕಂಪದ, ದೊಡ್ಡ ದೊಡ್ಡ   ಮಾತಿನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರಲ್ಲಿ ಅನೇಕ ಮಂದಿ ಗೋಮುಖ ವ್ಯಾಘ್ರರಿದ್ದಾರೆಂಬು ನಿನಗೂ ಗೊತ್ತು ತಾನೆ!

   " ------ "   ನಾನು ಹಿಂದಿನಿಂದಲೂ ಈ ಶಬ್ದವನ್ನು ಬಳಸುತ್ತಿರಲಿಲ್ಲ...ನನಗೆ ಇನ್ನೂ ನೆನಪಿದೆ, ನಾವೆಲ್ಲ ( ನನ್ನ ಅಪ್ಪ, ಅಮ್ಮ...ನನ್ನ ತಮ್ಮಂದಿರು ) ಒಟ್ಟಿಗೆ ಸಿನೆಮಾ ನೋಡುವಾಗ ಇಂತಹ ದೃಶ್ಯ ಬಂದಾಗಲೆಲ್ಲಾ ನನಗೆ ನೋಡಲು ಆಗುತ್ತಿರಲಿಲ್ಲ. ಎದ್ದು ಹೋಗುತ್ತಿದ್ದೆ...ಸ್ವಲ್ಪ ಸಮಯಕ್ಕಾದರೂ ಟಿವಿ ಆಫ್ ಮಾಡಬಹುದಿತ್ತು ಅಂತ ಅನಿಸುತ್ತಿತ್ತು. ಆದರೆ ನನ್ನ ಅಪ್ಪನಾಗಲಿ, ಅಮ್ಮನಾಗಲಿ ಎದ್ದು ಆಫ್ ಮಾಡುತ್ತಿರಲಿಲ್ಲ. ಸುಮ್ಮನೆ ಕುಳಿತು ನೋಡುತ್ತಿದ್ದರು.  ಯಾರು ಆ ಬಗ್ಗೆ ಮಾತನಾಡುತ್ತಿರಲಿಲ್ಲ. ನನಗೆ ಅಮ್ಮನಾದರೂ ಅಪ್ಪನಿಗೆ ಹೇಳಿ ಪ್ರತಿಭಟಿಸಬಹುದಿತ್ತು ಅಂತ ಎಷ್ಟೋ ಸಲ ಅನಿಸುತ್ತಿತ್ತು. ಮುಂದೆನೂ ಆ ಬಗ್ಗೆ ಪೇಪರಿನಲ್ಲಿ ಅಥವಾ ಟಿವಿಯಲ್ಲಿ ಅದರ ಬಗ್ಗೆ ಮಾಹಿತಿ ಕೊಟ್ಟಾಗ ನನ್ನ ಒಳ ಮನಸ್ಸು ತುಂಬಾ ಅಳುತಿತ್ತು. ಈ ಒಂದು ವಿಷಯಕ್ಕೆ ನಾನು ನನ್ನೊಡೆಯನ ಮೇಲೆ ಬಹಳ ಸಿಟ್ಟುಗೊಂಡಿದ್ದೆ.  ಮೊದಲೇ ಹೆಣ್ಣಿನ ಮನಸ್ಸು ಬಹಳ ಸೂಕ್ಷ್ಮ, ದೈಹಿಕ ಬಲನೂ ಕಡಿಮೆ...ಅದರ ಮೇಲೆ ಈ ಅತ್ಯಾಚಾರ! ಯಾಕೆ ಹೀಗೆ ಬೇಧಭಾವ ನನ್ನೊಡೆಯ?

       ಏನಾದರೂ ಸಹಿಸಬಹುದು...ಆದರೆ ಇಷ್ಟಕ್ಕೆ ವಿರುದ್ಧವಾಗಿ ಪುರುಷನು ಸ್ತ್ರೀಯ ಮೇಲೆ ತನ್ನ ಪ್ರತಾಪವನ್ನು ತೋರಿಸುವುದು ಎಷ್ಟು ಸರಿ! ಒಂದು ಗಂಡು ಹೆಣ್ಣಿನ ಸಂಗಮವೆಂದರೆ ಅದೊಂದು ಅಮೃತಕ್ಕೆ ಸಮಾನವಾದ ಭಾವ.....ಒಬ್ಬರಿಗೊಬ್ಬರು ಒಲಿದು ದೇಹದ ಜೊತೆ ಮಾನಸಿಕವಾಗಿ ಸಮಾಗಮ ಹೊಂದಿದರೆ ಆ ಸುಖವನ್ನು ಹೋಲಿಸಲು ಉಪಮೆಗಳೇ ಇಲ್ಲವಾಗಬಹುದು.  ಸ್ತ್ರೀ ಅಂದರೆ ಕೇವಲ ಭೋಗದ ವಸ್ತುವೇ? ಅಥವಾ ಬರೇ ಪುರುಷನ ಸೇವೆ ಮಾಡಲು ಬ್ರಹ್ಮನು ಸೃಷ್ಟಿಸಿದನೆ!  ಮಹಾಲಕ್ಷ್ಮಿ, ದುರ್ಗಾ ಸ್ತೋತ್ರ, ಹೀಗೆ ಹಲವಾರು ದೇವಿಯಂದಿರ ಉಪಾಸನೆ ಮಾಡುವ ಪೂಜಾರಿ ಉಳಿದ ಸ್ತ್ರೀಯರನ್ನು ಯಾವ ದೃಷ್ಟಿ ಕೋನದಿಂದ ನೋಡಬಹುದು! ತನ್ನ ಸ್ತ್ರೀ ಮೇಲಧಿಕಾರಿಯ ಎದುರು "ಮೇಡಂ" ಎಂದು ಕರೆಯುವವನು ಆಕೆಯನ್ನು ಹಿಂದಿನಿಂದ ಕರೆಯುವ ಭಾಷೆಯನ್ನು ನಾನು ಕೇಳಿಬಲ್ಲೆ.  ದೇವರು ಸ್ತ್ರೀಗೆ ಪುರುಷರಿಗಿಂತ ಬೇರೆ ರೀತಿಯ ರೂಪ ಕೊಟ್ಟ....ಅದನ್ನು ಸೌಂದರ್ಯದ ದೃಷ್ಟಿಯಿಂದ ನೋಡಬೇಕೆ ಹೊರತು ಕಾಮುಕ ದೃಷ್ಟಿಯಿಂದ ನೋಡುವುದೇ...ನಾನು ಕಲಾರಾಧಕಿ. ನನಗಿನ್ನೂ ಸರಿಯಾಗಿ ನೆನಪಿದೆ, ೧೯೮೯ರಲ್ಲಿ  ನನ್ನ ಮಾಸ್ತ್ರರರು ಶಿಲಾ ಬಾಲಿಕೆಯ ಚಿತ್ರ ಚಾರ್ಕೋಲಿನಲ್ಲಿ ಬಿಡಿಸಲು ಹೇಳಿದಾಗ.....ನನಗೆ ಮೊದಲು ಮುಜುಗರವಾಗಿತ್ತು..ಆದರೆ ಚಿತ್ರ ಬಿಡಿಸುತ್ತಿದ್ದಂತೆಯೇ ನಾನು ಬರೇ ಕಲಾಕಾರಳಾಗಿದ್ದೆ...ಹೆಣ್ಣು ಗಂಡಿನ ಬೇಧ ಭಾವವೇ ನನಗಿರಲಿಲ್ಲ....ಇಂದಿಗೂ ಆ ಚಿತ್ರ ನನ್ನ ಅತ್ತ್ಯುತ್ತಮ ಚಿತ್ರದಲ್ಲಿ ಒಂದಾಗಿದೆ. 

      ಹುಂ, ನನಗಿನ್ನೂ ಚೆನ್ನಾಗಿ ನೆನಪಿದೆ...ನೀನು ಒಮ್ಮೆ ನನ್ನೊಡನೆ ಈ ವಿಷಯ ಚರ್ಚೆ ಮಾಡಲು ಬಯಸಿದ್ದಿ..ಆದರೆ ನನಗಿಷ್ಟವಿರಲಿಲ್ಲ. ಇಂದಿಗೂ ನನಗೆ ಈ ಬಗ್ಗೆ..ಗಂಡಸ್ಯಾಕೆ ಯಾವ ಹೆಣ್ಣಿನ ಜೊತೆಗೂ ಮಾತನಾಡಲು ಆಗುವುದಿಲ್ಲ. ಮತ್ತೆ ಇವತ್ಯಾಕೆ ಈ ಬಗ್ಗೆ ನನಗೆ ಬರೆಯುತ್ತಿರುವಿ ಅಂತ ನಿನಗೆ ಅನಿಸಬಹುದು..ಹೌದು, ಅದಕ್ಕೂ ಕಾರಣವುಂಟು. - ನನ್ನ ಮಗಳು! ದೆಹಲಿಯಲ್ಲಿ  ಬಸ್ಸಿನಲ್ಲಿ ನಡೆದ ಆ ದುರ್ಘಟನೆಯ ಬಗ್ಗೆ ಪೇಪರಿನಲ್ಲಿ ಓದಿ ನನಗೆ ಆಶ್ಚರ್ಯವಾಯಿತು....ಯಾವಾಗಲೂ ಈ ಬಗ್ಗೆ ಮಾತನಾಡದ ನಾನು ಆವತ್ತು ನನ್ನ ಮಗಳಿಗೆ ಕೇಳಿದೆ... ಅವಳಿಗೆ ಈ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ. ( ಅಷ್ಟರ ತನಕ ಫೇಸ್ ಬುಕ್ಕಿನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಹರಿಯುತ್ತಿರಲಿಲ್ಲ....whats appನಲ್ಲೂ)  ಪೇಪರಿನಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ...ಓದಿ ಆಶ್ಚರ್ಯ  ಪಡುವ ಹಾಗೆ ಇತ್ತು...ಅನೇಕ ಪ್ರಶ್ನೆಗಳು...ಮನಸ್ಸೊಳಗೆ ಹುಟ್ಟಿದವು. ಆದರೂ ಒಬ್ಬ ಅಸಹಾಯಕ, ಬಲಹೀನ ಹೆಣ್ಣಿನ ಮೇಲೆ ಅನೇಕ ಬಲವಂತ ಗಂಡು ಪ್ರಾಣಿಗಳು ಸವಾರಿ ಮಾಡಿ ತಮ್ಮ ಗಂಡಸುತನವನ್ನು ಸಾಬೀತು ಪಡಿಸುವುದನ್ನು ಓದಿ ಮನ ನಿಸ್ಸಾಹಾಯಕವಾಗಿ ಬಳಲಿತು. ನಾನು ಮಗಳೊಡನೆ ಮೊದಲ ಬಾರಿಗೆ ಮನ ಬಿಚ್ಚಿ, ಮುಜುಗರ ಪಡದೆ ಆ ಬಗ್ಗೆ ಅವಳ ಅಭಿಪ್ರಾಯ ಕೇಳಿದೆ.  ಶಾಲಾ ದಿನಗಳಿಂದಲೂ ಅವಳಿಗೆ  ಹುಡುಗರ ಮತ್ತು ಹುಡುಗಿಯರ ಜೊತೆ ಸಮನಾದ ಸ್ನೇಹವಿತ್ತು. ಅವಳು ತನ್ನ ಎಲ್ಲಾ ಸ್ನೇಹಿತ ಮತ್ತು ಸ್ನೇಹಿತೆಯರ ಬಗ್ಗೆ ನನಗೆ ಮಾಹಿತಿ ಕೊಡುತ್ತಿದ್ದಳು. ಫೇಸ್ ಬುಕ್ಕಿನಲ್ಲೂ ಅಷ್ಟೇ! ಆದರೂ ನಾನು ಅವಳು  ಕಾಲೇಜಿನಲ್ಲಿ ರಾತ್ರಿ ಹೊತ್ತು ಕಾರ್ಯಕ್ರಮವಿದ್ದಾಗ  ತಡವಾಗಿ ಬರುವುದನ್ನು ಆಕ್ಷೇಪಿಸುತ್ತಿದ್ದೆ...." ಅದ್ಯಾಕೆ ನನಗೆ ಮಾತ್ರ ಈ ರೂಲ್..." ಸೂಕ್ಷ್ಮವಾಗಿ ತಿಳಿ ಹೇಳಿದರೂ ಕೇಳುತ್ತಿರಲಿಲ್ಲ. ಮೊನ್ನೆ ದಾರಿಯಲ್ಲಿ ಮಧ್ಯಾಹ್ನದ ಹೊತ್ತು ಒಂಟಿಯಾಗಿ ಬರುವಾಗ ಯಾರೋ ಹುಡುಗ ಬೈಕಿನಲ್ಲಿ ಹೋಗುತ್ತಾ ಇವಳಿಗೆ ಏನೋ ಅಂದನಂತೆ..ಇವಳು ಅವನಿಗೆ ಏನೋ ಹೇಳಬೇಕೆಂದುಕೊಂಡಳಂತೆ..ಮತ್ತೆ ತಾನು ಒಂಟಿಯಾಗಿದ್ದೇನೆಂದು ನೆನಪಾಗಿ ಸುಮ್ಮನಾದಳಂತೆ. ಬಸ್ಸಿನಲ್ಲಿ ಪಾಸ್ ತೋರಿಸಿದಕ್ಕೆ ಕಂಡಕ್ಟರ್ ಬೈದನೆಂದು ಕೋಪಕ್ಕೆ ಅವನಿಗೂ ಇಡಿಯಟ್ ಅನ್ನಲು ಹೋಗಿದ್ದಳು...ಇದೆಲ್ಲಾ ನನಗೆ ಮತ್ತೆ ನೆನಪಿಗೆ ಬಂದು ಇದು ಸರಿಯಾದ ಸಂದರ್ಭ..ಗಂಡಸು ಏನೇನು ಮಾಡಬಲ್ಲ..ಮತ್ತು ನಾವು ಬಲಹೀನ, ಬುದ್ಧಿಹೀನ ಹೆಂಗಸರು ಹೇಗೆ ನಿಸ್ಸಹಾಯಕರಾಗುವ ಸಂದರ್ಭ ಸೃಷ್ಟಿಯಾಗುತ್ತದೆ....ಎಂದೆಲ್ಲ ಹೇಳಿದೆ. "ನೋಡು, ಅತ್ಯಾಚಾರವೆಂದರೆ ದೇಹ ಮಾತ್ರವಲ್ಲ ಮನಸ್ಸಿನ ಮೇಲೂ ಇದರ ಪರಿಣಾಮ ಬೀರುತ್ತದೆ. ನಿಜ, ಕಾಲ ಕಳೆದಂತೆ ದೇಹದ ಮೇಲಿನ ಗಾಯ ಮಾಗುತ್ತದೆ. ಆದರೆ, ಮನಸ್ಸು...ಅದಕ್ಕೆ ತಡೆಯಲಾಗುವುದಿಲ್ಲ." 

        "ಅಮ್ಮ, ಅನೇಕ ಮಂದಿ ಗಂಡಸರು ಹೇಳುತ್ತಾರೆ..ಇದಕ್ಕೆಲ್ಲಾ ನಾವು ಹಾಕುವ ಡ್ರೆಸ್‍ಗಳೇ ಕಾರಣವಂತೆ. ನೀನೇನು ಹೇಳುತ್ತಿಯಾ?" 
   
    " ಅದೂ ಹೌದು..ಆದರೆ ಅದು ಗಂಡಸಿಗೆ ತಾನು ತೋರಿಸುವ ಪೌರುಷ ಸರಿಯೆಂದು ಹೇಳಲು ಇರುವ ಒಂದು ನೆವ. ಬುರ್ಕ ಹಾಕುವ ಮುಸ್ಲಿಮ್ ಹೆಂಗಸರು ಬಲಿಯಾಗಿಲ್ಲವೇನು? ಹೋಗಲಿ, ೩ ವರ್ಷದ ಮಗು..ಅದನ್ನೂ ಬಿಡುವುದಿಲ್ಲವಲ್ಲ ಈ ಗಂಡು...ಅದೆಲ್ಲ ಹೋಗಲಿ, ತನ್ನ ಮಗಳ ಮೇಲೆ, ತನ್ನದೇ ತಂಗಿ ಅಕ್ಕನ ಮೇಲೆ ಪೌರುಷ ಮೆರೆಸುತ್ತಿರುವ ಗಂಡಸನ್ನು ಏನೆಂದು ಕರೆಯೋಣ! ಅದಕ್ಕೆಲ್ಲ ಕುಮ್ಮತ್ತು ನೀಡುವ, ಹಣ ದಾಹಕ್ಕೆ ಬಲಿಯಾಗಿರುವ ತಾಯಂದಿರನ್ನು ಏನೆಂದು ಅನ್ನೋಣ!   ಚಲಚಿತ್ರದಲ್ಲಿ, ಜಾಹಿರಾತಿನಲ್ಲಿ, ಕಲಾತ್ಮಕ ಚಿತ್ರವೆಂಬ ಹೆಸರಿನಲ್ಲಿ..ಹೀಗೆ ಅನೇಕ ರೀತಿಯಲ್ಲಿ ತನ್ನ ಅಂಗಾಂಗಳ ಪ್ರದರ್ಶನ ಮಾಡಿ ಹಣ ಸಂಪಾದಿಸುತ್ತಿರುವ ಸಮಾಜದ ಮೇಲ್ವರ್ಗದ ಜನರನ್ನು ಈ ಕೆಟ್ಟ ವರ್ಗದ ಪಟ್ಟಿಯಲ್ಲಿ ಹಾಕಿದ್ದೇನೆ ನಾನು. 

         ಬಿಡು, ಫೇಸ್ ಬುಕ್ಕಿನಂತ ಸಾಮಾಜಿಕ ತಾಣದಲ್ಲೇ ನಿನಗೆ ಇಂತಹ ಸಾವಿರಾರು ಉದಾಹರಣೆ ಸಿಗುತ್ತದೆ. ನೋಡಿದಿಯಾ ಇಂದು ಹುಡುಗಿ..ಫೋಟೊ ಹಾಕಿದ ಕೂಡಲೇ...ಲೈಕುಗಳ ಮಳೆ ಬರಲು ಆರಂಭವಾಗುತ್ತದೆ....
ಹೋಗಲಿ, ಹುಡುಗಿಯರಿಗೆ ಹೀಗೆ subscription ಹಾಗೂ ಲೈಕುಗಳು ಸಿಗುವುದು ಸಹಜ...ಆದರೆ, ನಾನು ಗಮನಿಸಿದ ಹಾಗೆ ಅನೇಕ ಮದುವೆಯಾದ ಹೆಂಗಸರಿಗೂ ಹೀಗೆ ಲೈಕುಗಳ ಮಳೆ ಸಿಗುವುದುಂಟು. ಅರೇ, ನನಗೆ ಸಿಗುವುದಿಲ್ಲವೇ ಹಾಗೆ...ಯಾಕೆಂದರೆ ನನ್ನ ಸ್ನೇಹಿತರ ವೃತ್ತವನ್ನೇ ಹಾಗಿಟ್ಟಿದ್ದೇನೆ.  ಮತ್ತೆ...ಇರು, ನಿನಗೆ ಕೆಲವರು ಈ ಹೆಂಗಸರಿಗೆ ಲೈಕು ಮಾತ್ರವಲ್ಲ ಕಮೆಂಟು ಹಾಕಿದನ್ನೂ ತೋರಿಸಿತ್ತೇನೆ- nice, beautiful, awesome....smile...ಚೆನ್ನಾಗಿದೆ. ಎಷ್ಟು ಚಂದ ಕಾಣ್ತಿರಾ!  ಇವರು ಮನೆಯಲ್ಲಿ ತಮ್ಮ ಹೆಂಡತಿಯರನ್ನು ಸರಿಯಾಗಿ ನೋಡ್ತಾರೋ ಇಲ್ಲವೋ ಅಂತ ನನಗೆ ಸಂಶಯ. ಇನ್ನು ಕೆಲ ಗಂಡಸರಿಗೆ ಫಿಲ್ಮ್ ಆಕ್ಟರ್ ಅಂದ್ರೆ ಜೀವ..ಮನೆಯಲ್ಲಿ ಯಾವ ಹೆದರಿಕೆ ಇಲ್ಲದೆ ಅವಳ ಅರೆ ಬೆತ್ತಲೆ ಚಿತ್ರ ನೋಡಿ ಆನಂದ ಪಡುತ್ತಾರೆ........" 

    ಗೆಳೆಯ, ಹೀಗೆಲ್ಲ ನನ್ನ ಮಗಳ ಜೊತೆ ಮಾತನಾಡಿದ ನಂತರ ನನಗೆ ನಿನ್ನ ನೆನಪಾಯಿತು. ಇಷ್ಟು ದಿನವೂ ಆ ವಿಷಯ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ತಳಮಳ, ಆತಂಕ, ಮತ್ತಿನ್ನೇನೋ ಎಲ್ಲವನ್ನೂ ನಿನ್ನೊಡನೆ ಹಂಚಬೇಕೆಂದೆನಿಸಿತು. ಹೌದೋ, ನೀನೊಬ್ಬನೇ ನನ್ನ ಮಾತಿಗೆಲ್ಲಾ ಕಿವಿಯಾಗ್ತಿಯಾ...೩ದಿನದಿಂದ ಅದೇ ಸುದ್ದಿಗಳನ್ನು ಕೇಳುತ್ತಿರುವಾಗ, ಏನೂ ಮಾಡಲು ಸಾಧ್ಯವಾಗದ ಅಸಹಾಯಕತೆ ನನ್ನನ್ನು ಹಿಂಡಿ ಬಿಡುತ್ತದೆ...ಒಂಟಿಯಾಗಿದ್ದಾಗಲೆಲ್ಲಾ ನಾನೇ ಆ ಬಲಿಪಶು ಎಂದು ಭಾವನೆ ನನಗೆ ಬರುತ್ತದೆ....

 ಹೇಳೋ, ಇದನೆಲ್ಲಾ ತಡೆಯಲು ಉಪಾಯವುಂಟೇ? ಹೇಳು, ಈಗ ಚರ್ಚೆ ನಡೆಯುತ್ತಿರುವಂತೆ ನೇಣು ಹಾಕಿದರೆ ಇನ್ನು ಮುಂದೆ ಗಂಡಸರು ತಮ್ಮನ್ನು ಸುಧಾರಿಸಿಕೊಳ್ಳುತ್ತಾರೊ..ಅಥವಾ ಅವರನ್ನು ನಪುಂಸಕರನ್ನಾಗಿ ಮಾಡಿದರೆ ಇಂತಹ ಘಟನೆಗಳು ಜರುಗಲಾರವೋ? 

     ಮನೆ ಮನೆಯಲ್ಲೂ, ಮನಮನದಲ್ಲೂ ಸುಧಾರಣೆ ನಡೆಯಬೇಕೋ...ನಮ್ಮ ಮಕ್ಕಳಲ್ಲಿ ಸದಾಚಾರದ ಭಾವವನ್ನು, ನೀತಿಯನ್ನು ಬಿತ್ತಬೇಕೋ...

     ಆದರೆ ಎಲ್ಲಿಯ ತನಕ ನಮ್ಮ ಮನೆ ಮನದಲ್ಲಿ ನೈತಿಕ ಮೌಲ್ಯಗಳ ಬಿತ್ತನೆ ನಡೆಯುವುದಿಲ್ಲವೋ ಅಲ್ಲಿಯ ತನಕ ಯಾವುದು ಬದಲಾಗುವುದಿಲ್ಲ. ನೀತಿ ಪರರಿಗೆ...ತನಗೆ ಯಾವುದೇ ಅನ್ವಯವಾಗುವುದಿಲ್ಲವೆಂಬ ಭಾವವು ನಮ್ಮ ರಕ್ತದಲ್ಲಿ ಹರಿಯುವುದೋ ಅಲ್ಲಿಯ ತನಕ ರಾಮ ರಾಜ್ಯವು ಬರೇ ಕನಸಾಗಿ ಉಳಿಯುವುದು. ಗಂಡು ಹೆಣ್ಣು ಜಾತಿಗಳು ಪರಸ್ಪರ ಗೌರವದಿಂದ ಸಹಮತದಿಂದ ಬಾಳುವೆಯನ್ನು ಪ್ರಾರಂಭಿಸುತ್ತಾರೋ ಅಂದೇ ಮನು ಕುಲ ನಿಜವಾಗಿ ಸ್ವಾತಂತ್ರವನ್ನು ಪಡೆದ ದಿನವೆಂದು ಹೇಳಬಹುದು. 

06 December, 2012

ಭಾವಾನುವಾದ!

   ನನ್ನ ಪ್ರಿಯ ಹಾಡಿನ ಭಾವಾನುವಾದದ ಯತ್ನ.  
https://www.youtube.com/watch?v=SR1y3CYDTG4
ಕೊಯಿ ಹಮ್‍ದಮ್ ನಾ ರಹಾ, ಕೊಯಿ ಸಹಾರ  ನಾ ರಹಾ!




ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು, ನನ್ನವರಾಗಿಯೂ ಯಾರೂ ಇಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!

ಒಂಟಿಯಾಗಿವೆ ನನ್ನೀ ಮುಸ್ಸಂಜೆಗಳು, ಮತ್ತೆ ಗುರಿಗಳು ಇನ್ನೆಲ್ಲಿ,
ಹಾದಿಯ ತೋರುತ ಬೆಳಗುತ್ತಿದ್ದ ಆ ಚುಕ್ಕಿಯೇ ಕಣ್ಮರೆಯಾದ ಮೇಲೆ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ  ನನಗಿಲ್ಲ!

ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು, ನನ್ನವರಾಗಿಯೂ ಯಾರೂ ಇಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!

ಗೇಲಿಮಾಡದಿರಿ ನಯನಗಳೇ, ನಿಮ್ಮನ್ನೆದುರಿಸಲಾರೆ!
ನನ್ನವಳಾಗಲಿಲ್ಲ ಅವಳು, ನಿನ್ನವನಾಗಲಿಲ್ಲ ನಾನೂ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ಇಲ್ಲ!

ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು,  ನನ್ನವರಾಗಿಯೂ ಯಾರೂ ಇಲ್ಲ.
ಯಾರ  ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!

ಹೇಳಲೇನು ಉಳಿದಿಲ್ಲ ನನಗೆ, ಹೀಗೇ ಸಾಗುವೆ ಕೊನೆಗೆ.
ಹಿಂದಿರುಗಿ ಬಾ ಎನ್ನುವ ಆ ಸುಳಿವೂ ಇನ್ನಿಲ್ಲವಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ಇಲ್ಲ!

ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ.
ಯಾರವನಾಗಿಯೂ ಉಳಿದಿಲ್ಲ ನಾನು, ನನ್ನವರಾಗಿಯೂ ಯಾರೂ ಇಲ್ಲ.
ಯಾರ ಅನುಕಂಪವೂ ಇನ್ನಿಲ್ಲ, ಯಾರ ಆಶ್ರಯವೂ ನನಗಿಲ್ಲ!


02 December, 2012

ಸಾರ್ಥಕ ಕ್ಷಣ!

      ಒಂದು ವಾರದಿಂದ ಸ್ತಬ್ಧವಾಗಿದ್ದ ನನ್ನ ಮೊಬೈಲ್ ಮೊನ್ನೆ ರಾತ್ರಿ ರಿಂಗುಟ್ಟಿತು. ಸಿಕ್ಕಾಪಟ್ಟೆ ಖುಷಿಯಾಗಿ ಯಾರು ಅಂತ ನೋಡಿದರೆ ಸಯ್ಯದ್ ಸರ್! ಅರೆ ಮಕ್ಕಳು ಆಗಲೇ ಮನೆಗೆ ಹೋದ್ರಲ್ವಾ...ಮತ್ತೆ ಏನಾಯ್ತೊ ಅಂತ ಹಿಂಜರಿಯುತ್ತಲೇ ಸ್ಲೈಡ್ ಮಾಡಿ,
  "ಹಲೋ..."  ಕ್ಷೀಣ ಸ್ವರದಲ್ಲಿ ಅಂದೆ.
 " ಮೇಡಮ್, ನಮ್ಮ ಅಮ್ಮ ಮನೆಗೆ ಬಂದಿದ್ದಾರೆ. ಅವರಿಗೆ ನಿಮ್ಮನ್ನು ಒಮ್ಮೆ ನೋಡಬೇಕಂತೆ. ನಾಳೆ ಹೇಗೂ ಕಾಲೇಜಿಗೆ ರಜೆ. ನಿಮಗೆ ಬರಲಿಕ್ಕಾಗ್ತದಾ  ಮೇಡಂ?...ಅಲ್ಲ ಮೇಡಂ ನೀವು ಕಾಲೇಜಿಗೂ ಬರದೇ ತುಂಬಾ ದಿನವಾಯ್ತು...ಏನು?" ಬಡ ಬಡ ಮಾತಾಡಿಬಿಟ್ರು.

 "ಸರ್, ನಿಮ್ಮ ಅಮ್ಮನೇ ನಮ್ಮ ಮನೆಗೆ ಬರ್ಬಹುದಿತ್ತು. ಆದರೆ ಅವರಿಗೆ ನಡೆಯಲಿಕ್ಕಾಗೊಲ್ಲ ಅಂತ ಮಕ್ಕಳು ಹೇಳಿದ್ದಾರೆ. ಸರಿ ಸರ್,  ಭಾನುವಾರ ಸಂಜೆ ಆದ್ರೆ ಬರ್ತೇನೆ. ಆದರೆ ನಿಮ್ಮ ಮಿಸ್ಸೆಸ್ಸಿಗೆ ಹೇಳಿ ಏನು ಸ್ಪೆಷಲ್ ಮಾಡ್ಬಾರದಂತ. ಸರ್, ಮಗ ಮನೆಗೆ ಬಂದಿದ್ದಾನೆ. ಅಲ್ಲದೆ ಗ್ಲಾಸ್ ಪೈಂಟಿಂಗ್  ಆರ್ಡರ್ ಒಂದು ಮಾಡಿಕೊಡುವ ಬರದಲ್ಲಿ ಹೆಬ್ಬೆರಳಿಗೆ ಗಾಯವಾಗಿದೆ. ಮನೆಯಲ್ಲಿ ಕೆಲಸನೂ ಹೆಚ್ಚು... ಹೀಗೆಲ್ಲ ಆದಾಗ ನಾನು ಕಾಲೇಜಿಗೆ ಬಂದು ಏನು ಪ್ರಯೋಜನ.. ಚಿತ್ರ ಬಿಡಿಸುವಷ್ಟು ತ್ರಾಣ ಇರದಿದ್ರೆ? "

 "ಸರಿ ಮೇಡಂ ಆದ್ರೆ ಮನೆಗೆ ಬನ್ನಿ" ಎಂದು ಹೇಳಿ ಫೋನು ಇಟ್ರು.

    ನನಗೆ ಕೆಲವು ಕ್ಷಣ ಹೇಗೆ ಪ್ರತಿಕ್ರಿಯಿಸುವುದು ಅಂತ ತಿಳಿಯಲಿಲ್ಲ.. ಅಲ್ಲ ನನ್ನ ಕಾಲೇಜಿನ ಸರ್.. ಅವರ ಅಮ್ಮ ಯಕ್ಷಿತ್, ಸಾಮಾನ್ಯರಲ್ಲಿ ಸಾಮಾನ್ಯಳಾದ ನನ್ನಲ್ಲಿ ಏನು ನೋಡಿದ್ದಾರೆ.. ನನಗೊತ್ತು.. ನನ್ನಲ್ಲಿ ಮನೆ ಪಾಠಕ್ಕೆ ಬರುವ ಅನೇಕ ಮಕ್ಕಳು ನಾನು ಅವರ ಜೊತೆ ವ್ಯವಹರಿಸುವ ರೀತಿ ನೋಡಿ ಮೆಚ್ಚಿದ್ದಾರೆ ಅಂತ.. ಆದರೆ ಕೆಲವೇ ಕೆಲವು ಆಮಂತ್ರಣ ಬಿಟ್ಟರೆ ಮತ್ತೆಲ್ಲ ಮನೆಯವರು ಅತೀ ಆತ್ಮೀಯತೆಯಿಂದ ನನ್ನ ಜೊತೆ ವ್ಯವಹರಿಸಿರಲಿಲ್ಲ.... 


 ಅದೇ ಅನುಭವವನ್ನು ಮತ್ತೆ ಇವತ್ತಿನ RX LIFE CYCLE RALLY ಯಲ್ಲೂ ಪಡೆದಾಗ ಮನ ತುಂಬಿ ಬಂತು.  ನಿನ್ನೆ ಡಾ. ಗಾಯತ್ರಿ ಅವರ ಫೋನು ಬಂದಿತು.

"ಶೀಲಾ, ನಾಳೆ ನೀನು ಕಾಪಿಕಾಡ್ ಶಾಲೆಗೆ ಬಂದು ನಮಗೆ ಸಹಾಯ ಮಾಡಬೇಕು.  ನೀನು ಬೆಳಿಗ್ಗೆ rally ಪ್ರಾರಂಭವಾಗುವಾಗಲೇ ಬರ್ತಿಯಾ?"

"ಇಲ್ಲ ಗಾಯತ್ರಿ, ನನಗೆ ೬ಗಂಟೆಗೆ ಬರ್ಲಿಕ್ಕಾಗೊಲ್ಲ..ನಾನು ಮತ್ತೆ ಸೀದ ಶಾಲೆಗೆ ಬರ್ತೇನೆ."

"ಸರಿ ವಂದನಾ ನಿನಗೆ ನಿನ್ನ ಕೆಲಸ ಏನು ಅಂತ ಹೇಳ್ತಾಳೆ.. ನೀನು ನಮ್ಮ ಮೀಟಿಂಗಿಗೂ ಬರ್ಲಿಲ್ಲ.." 

"ಅರೇ ಗಾಯತ್ರಿ, ನಿನಗೆ ಗೊತ್ತುಂಟಲ್ವಾ.. ನನಗೆ ತರಗತಿಗಳು ಇವೆ ಅಂತ... "

"ಹೌದು... ಅದನ್ನು ನನಗೆ ವಂದನಾನೂ ಹೇಳಿದ್ಳು... ಆದರೂ ನೀನು ಬಂದ್ರೆ ಒಳ್ಳೆದಿತ್ತು."

ನಮ್ಮ ಮಾತುಕತೆ ಹೀಗೆ ನಡೆದಿತ್ತು. ಮತ್ತೆ ವಂದನಾಳ ಫೋನು ಬಂದು ನಾನು ಇವತ್ತು ಬೆಳಿಗ್ಗೆ ತಿಂಡಿ ( ಉದ್ದಿನ ಅಪ್ಪ), ಚಟ್ನಿ ತಯಾರಿಸಿ ೭.೪೫ಕ್ಕೆ ಕಾಪಿಕಾಡ್ ಶಾಲೆಗೆ ಹೋಗಿ ತಲುಪಿದೆ. (ರಿಕ್ಷಾ ಏರುವ ಮೊದಲೇ ಡ್ರೈವರನ್ನು ಕೇಳಿಯೇ ಹತ್ತಿದೆ.. ಮಂಗಳೂರಿನಲ್ಲಿದ್ದು ೪೪ ವರ್ಷವಾದರೂ ಸರಿಯಾಗಿ ಏನೂ ಪರಿಚಯವಿಲ್ಲ.. ಅಲ್ಲದೆ ಈಗ ಹೊಸ ಹೊಸ ಬಿಲ್ಡಿಂಗುಗಳು ಮೇಲೆದ್ದು ಇದ್ದ ಸ್ವಲ್ಪ ಪರಿಚಯನೂ ಹೊರಟು ಹೋಗಿದೆ) ಅಲ್ಲಿ ನನಗೆ ಬೂತ್ ನಂಬ್ರ ೪ರಲ್ಲಿ ಕೆಲಸ. ಅರುಣಳ ಪರಿಚಯ ಅಲ್ಲಿಯೇ ಆದದ್ದು... ಮಾತನಾಡುತ್ತ,

"ನಿಮ್ಮ ಬಗ್ಗೆ ವಂದನಾಳು ತುಂಬನೇ ಹೇಳ್ತಾಳೆ... ಒಳ್ಳೆ ಕಲಿಸ್ತಿರಂತೆ."

"ಅರೇ, ಎಲ್ಲರೂ ಒಳ್ಳೆ ಕಲಿಸ್ತಾರಪ್ಪ..ಅಂತಹುದೇನೆ ನಾನೇನು ಮಾಡಿಲ್ಲ"

"ಅಲ್ಲ, ನೀವು ಬರೇ ಕಲಿಸುವುದು ಮಾತ್ರವಲ್ಲವಂತೆ.. ಏನೇನೋ ಒಳ್ಳೆ ಮಾತು ಸಹ ಹೇಳ್ತಿರಂತೆ.. ಅಲ್ಲದೆ ನೀವು ಹಾಗೆ ನಿಮ್ಮ ಜೀವನ ಸಹ ನಡೆಸುವುದಂತೆ... "
ಕೇಳಿ ದಂಗಾದೆ. 
ಅಲ್ಲ, ಅದೇನೋ ಹೌದು.. ನಾನು ಇವರೆಲ್ಲರಿಗಿಂತ ಭಿನ್ನವಾದ ಜೀವನ ನಡೆಸುತ್ತೇನೆ..  ಆದರೆ ಅದರ ಬಗ್ಗೆ ಪ್ರಚಾರಮಾಡೊಲ್ಲ.. ಬಹುಶಃ ನನ್ನಲ್ಲಿ ಬರುವ ಮಕ್ಕಳು ಎಲ್ಲ ಮನೆಗೆ ಹೇಳಿರ್ಬೇಕೇನೋ...." 
ನನ್ನ ಮುಖದಲ್ಲಿ ತೃಪ್ತಿಯ ಮಂದಹಾಸ! 

28 November, 2012

ಹೀಗೆ.......ಮನದ ಪುಟದಲ್ಲಿ ಕಾಣಿಸಿದ್ದು!


 ಮನದೊಳು ಮೂಡಿ ಬರುವ ಭಾವಗಳ
ನಿಯಂತ್ರಣದಲ್ಲಿ ಇಡುವುದು ಕಷ್ಟಸಾಧ್ಯ

***********      **********


ವಿಧಿ ಎಂದೂ ನಮ್ಮ ಹೃದಯದ ಭಾವದ
ಬಿಸಿಗೆ ಕರಗುವುದೂ ಇಲ್ಲ, ಬಾಗುವುದೂ ಇಲ್ಲ

ಗೆಳತಿ, .ಒಂದಿಷ್ಟು ಹಗುರವಾಗಲೆನೆ......!!! (ಕತೆ)



ಗೆಳತಿ,
         ಅವನು ನನ್ನೂರಿಗೆ ಬರುವನೆಂದು ಕೇಳಿದಾಗ ಒಂದು ಕ್ಷಣ ಆನಂದನೂ ಆತಂಕವೂ ಒಟ್ಟಿಗೊಟ್ಟಿಗೆ ನನ್ನೊಳಗೆ ಕಾಣಿಸಿಕೊಂಡವು. ಮೊದಲ ಭೇಟಿ ನಮ್ಮದು... ಹೇಗಿರಬಹುದು! ಇಷ್ಟು ದಿನದ ನಮ್ಮ ನಿರೀಕ್ಷೆಗಳನ್ನು, ನಮ್ಮಿಬ್ಬರ ಭಾವಗಳನ್ನು ನಿರೂಪಿಸುವ ಅಮೃತ ಘಳಿಗೆ ಅದು. ದೂರವಿದ್ದೇ ಒಬ್ಬರ ಆತ್ಮದಲ್ಲಿ ಮತ್ತೊಬ್ಬರ ಆತ್ಮವನ್ನು ಪ್ರತಿಷ್ಠೆ ಮಾಡಿದ್ದೆವು.

        ಕವಿಗಳು, ಸಾಹಿತಿಗಳು ಬರೆದಂತೆ ನಾನೇ ನೀನು, ನೀನೇ ನಾನು ಎಂದೇ ಹೇಳಿಕೊಂಡಿದ್ದೆವು. ಕಲ್ಪನಾ ಲೋಕದಲ್ಲಿ ನಾವು ಹಕ್ಕಿಗಳಂತೆ ಹಾರಾಡಿಕೊಂಡಿದ್ದೆವು. ಈಗ ನಿಜ ಲೋಕದಲ್ಲಿ ನಮ್ಮ ಭೇಟಿ ನಡೆಯುವುದಿದೆ. ಹೇಗೆ, ಏನು... ಎಷ್ಟೆಲ್ಲಾ ಆತಂಕ, ಗಾಬರಿ ಜೊತೆಗೆ ಪುಳಕ! ಎದೆಯ ಬಡಿತ ನಿತ್ಯಕ್ಕಿಂತ ಹೆಚ್ಚು ಸಕ್ರಿಯವಾದವು!     

        ಕ್ಷಣ ಗಣನೆ ಆರಂಭವಾಯಿತು! ಅವನಿಗೋಸ್ಕರ ಮಾಡಿ ಬಡಿಸುವ ತಿಂಡಿ, ಪದಾರ್ಥಗಳ ಪಟ್ಟಿ ಮಾಡುತ್ತಾ ಹೋದೆನು. ಅಷ್ಟೊಂದು ನಾನು ಒಂದೇ ದಿನದಲ್ಲಿ ತಯಾರಿಸಬಲ್ಲೆನೆ ಅಥವಾ ಅವನಾದರೂ ಆದನ್ನೆಲ್ಲ ಒಂದೇ ಘಳಿಗೆಯಲ್ಲಿ ತಿನ್ನಲು ಸಾಧ್ಯವೇ, ಇವೆಲ್ಲ ಆಲೋಚನೆ ಆಗ ಮೂಡಲೇ ಇಲ್ಲ. ಈಗ ನೆನಪಾದರೆ ನಗು ಬರುತ್ತದೆ. ಎಷ್ಟೊಂದು ದೊಡ್ಡ ಮೂರ್ಖಿಯೇ ನಾನು ಗೆಳತಿ! ಅಂತರಂಗದ ಸಖಿಯಾದ ನಿನಗೂ ಈ ಮಾತು ಹೇಳದೆ ಗೌಪ್ಯವಾಗಿ ಇಟ್ಟೆ; ನಮ್ಮಿಬ್ಬರ ಭೇಟಿಯ ಮೇಲೆ ಯಾರ ಕಣ್ಣು ಬಿದ್ದು ಹಾಳಾಗಬಾರದೆಂದು!
       
        ಆದರೆ ಬರುತ್ತೇನೆಂದು ಹೇಳಿದವನು ಬರಲೇ ಇಲ್ಲ. ಕೇಳಿದರೆ ಅದೇನೋ ಕಾರಣದಿಂದ ಬರುವ  ದಿನವನ್ನು ಮುಂದೂಡಿದೆನೆಂದನು. ಇರಲಿ, ನಿಗದಿಯಾದ ದಿನದಂದು ನೋಡಲು ಸಾಧ್ಯವಾಗದಿದ್ದರೇನಂತೆ ಹೇಳಿದನಲ್ಲವೆ ತಾನು ಬರುವೆನೆಂದು. ನನ್ನ ಆತ್ಮಕ್ಕೆ ಸಾಂತ್ವನವಿತ್ತೆನಾದರೂ ಅದೇಕೋ ಬಲಕಣ್ಣು ಅದುರಿ ಅಪಶಕುನದ ಸೂಚನೆಯಿತ್ತಿತು. ಎಂದೂ ಇಂತಹ ಮೂಢನಂಬಿಕೆಗಳ ನಂಬದ ನಾನು ಅದೇಕೋ ಆ ದಿನ ಒಂದಿಷ್ಟು ಅಧೀರಳಾದೆ. 
   
           ಅವನು ಬರುವೆನೆಂದು ಹೇಳಿದ ಹಿಂದಿನ ದಿನ, ಸುದ್ದಿಯೇ ಇಲ್ಲ... ಆಲೋಚನೆ ಮಾಡಿ ಮಾಡಿ ತಲೆ ಕೆಟ್ಟು ಹೋಯಿತು. ಹೊತ್ತು ಮೀರಿ ಸಂದೇಶ ಬಂದಿತು-
 "ಬರಲು ಸಾಧ್ಯವಾಗುವುದಿಲ್ಲ"

         ಕಣ್ಣಲ್ಲಿನ ಸಾಗರ ಉಕ್ಕೇರಿತು! ನಾನೂ ತಡೆಯಲೆತ್ನಿಸಲಿಲ್ಲ. ಎಲ್ಲೋ ಒಳಗೆ ಸಂದೇಹವಿತ್ತಾದರೂ ಆಸೆ ಇತ್ತು, ಬಂದೇ ಬರುವನೆಂದು, ಕಾದಿರುವ ಈ ಸಖಿಯ ಓಲೈಸುವನೆಂದು. ಹ್ಞೂಂ... ವಿಧಿಯು ಬಿಡಲೇ ಇಲ್ಲ! ಎಂದಿನಂತೆ  ನನ್ನನ್ನು  ನಿರಾಸೆಯ ಮಡಿಲಲ್ಲಿ ನೂಕಿ ತಾನಂದಪಟ್ಟಿತು! 

        ಬೇಡವೇ, ನೀನೂ ಅಪಹಾಸ್ಯದ ನಗೆಯ ತೋರಬೇಡವೇ! ನಿನ್ನಲ್ಲೂ ಗುಟ್ಟಾಗಿಟ್ಟು ಈಗೇಕೆ ಹೇಳುವಿ ಅನ್ನಬೇಡವೆ! ನಿನ್ನನ್ನು ಬಿಟ್ಟು  ನನ್ನ ಮನಸ್ಥಿತಿಯ ಬಗ್ಗೆ ಮತ್ತ್ಯಾರಿಗೆ ಗೊತ್ತು. ಎಲ್ಲವೂ ತಿಳಿದ ನೀನೂ ನನ್ನಡೆ ಈ ರೀತಿಯ ಕೊಂಕು ನೋಟವ ತೂರಬೇಡವೆ. ಒಮ್ಮೆ ನಿನ್ನ ಮಡಿಲಲ್ಲಿ  ಮಲಗಿ ಅಳಲೆ ಗೆಳತಿ, ಒಂದಿಷ್ಟು ಹಗುರವಾಗಲೆನೆ...!

ವಲ್ವಲ್(ಅಡುಗೆ)



               ತೆಂಗಿನಕಾಯಿಯ ರಸದಿಂದ ಮಾಡುವ ಈ ಪದಾರ್ಥ ಹೆಚ್ಚು ಖಾರವಿರುವುದಿಲ್ಲ. ಬಹಳಷ್ಟು ತರಕಾರಿಗಳನ್ನು ಬಳಸುವುದರಿಂದಲೂ, ತುಪ್ಪದಲ್ಲಿ ಜೀರಿಗೆ ಮತ್ತು ಸಾಸಿವೆ ಒಗ್ಗರಣೆ ಕೊಡುವುದರಿಂದಲೂ  ಆರೋಗ್ಯಕ್ಕೂ ಒಳ್ಳೆಯದು.  ಕೆಲವರಿಗೆ ತೆಂಗಿನಕಾಯಿಯ ಹಾಲಿನಿಂದ ಸ್ವಲ್ಪ ಅಮಲು ಬರುವುದೆಂದು ಕೇಳಿದ್ದೇನೆ. ನನಗೂ ನನ್ನ ಮಕ್ಕಳಿಗೂ ಆ ಅನುಭವ ಸಿಕ್ಕಿಲ್ಲ. 


ಸಾಮಾಗ್ರಿಗಳು

ತೆಂಗಿನಕಾಯಿ-೧
ತರಕಾರಿ- ಕುಂಬಳ ಕಾಯಿ, ಚೀನಿಕಾಯಿ, ಅಲಸಂಡೆ, ಗೆಣಸು...ಇತ್ಯಾದಿ
ಹಸಿರು ಮೆಣಸಿನಕಾಯಿ- ೩,೪
ಅಲಂಕಾರಕ್ಕೆ ಮತ್ತು ರುಚಿಗೆ- ದ್ರಾಕ್ಷೆ ಮತ್ತು ಗೇರು ಬೀಜ
ಕರಿಬೇವು- ೬,೭ ಎಲೆ
ಜೀರಿಗೆ- ೧/೨ ಚಮಚ
ತುಪ್ಪ- ೨ಚಮಚ




ತೆಂಗಿನಕಾಯಿ ತುರಿದು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಹಾಲನ್ನು ಹಿಂಡಿ ತೆಗೆಯಿರಿ. ಈ ದಪ್ಪ ಹಾಲನ್ನು ದೊಡ್ಡ ಪಾತ್ರೆಯಲ್ಲಿ ಹಾಕಿರಿ.  ಈಗ ಮತ್ತೊಮ್ಮೆ ಪಾತ್ರೆಗೆ ನೀರನ್ನು ಹಾಕಿ ಬಟ್ಟೆಯಲ್ಲಿದ್ದ ರುಬ್ಬಿದ ತೆಂಗಿನ ತುರಿಯನ್ನು ಮತ್ತೊಮ್ಮೆ ಅದ್ದಿ ಹಿಂಡಿರಿ. ಆ ತೆಳು ನೀರನ್ನು ಹಾಗೆ ಕಾದಿರಿಸಿ. 
ತರಕಾರಿಗಳನೆಲ್ಲ ಉಪ್ಪುನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ದೊಡ್ಡ ದೊಡ್ಡ ಹೋಳುಗಳನ್ನಾಗಿ ತುಂಡು ಮಾಡಿ ಕುಕ್ಕರಿನಲ್ಲಿ ಬೇಯಿಸಿ.  ಈ ಹೋಳುಗಳನ್ನು ದಪ್ಪ ತೆಂಗಿನ ಕಾಯಿಯ ಹಾಲಿನಲ್ಲಿ ಹಾಕಿ ಕುದಿಯಲು ಗ್ಯಾಸಿನ ಮೇಲೆ ಇಡಿರಿ. ಹಸಿರು ಮೆಣಸಿನಕಾಯಿಯನ್ನು ಅಡ್ಡ ಸೀಳಿ ಅದರಲ್ಲಿ ಸೇರಿಸಿ. ರುಚಿಗೆ ತಕ್ಕಷ್ಟು ತಕ್ಕಷ್ಟೇ ಉಪ್ಪು, ಸಕ್ಕರೆ ಹಾಕಿ.  ತೆಳ್ಳನೆಯ ಹಾಲಿಗೆ ಕೋರ್ನ್ ಫೋರ್ಲ್ ಅಥವಾ ಮೈದಾ ( ೪ ಚಮಚ) ಹಾಕಿ ಚೆನ್ನಾಗಿ ಗುಳಿ ಬರದ ಹಾಗೆ ಕಲಸಿ. ನಂತರ ಇದನ್ನು ಕುದಿ ಬರುತ್ತಿರುವ ಪದಾರ್ಥಕ್ಕೆ ಸೇರಿಸಿ. ದಪ್ಪವಾಗಿ ಬರುತ್ತಿದ್ದ ಹಾಗೆ ಗ್ಯಾಸನ್ನು ಆಫ್ ಮಾಡಿ. ಗೇರುಬೀಜ ಮತ್ತು ದ್ರಾಕ್ಷೆ ಹಣ್ಣನ್ನು ಸೇರಿಸಿ. ಈಗ ಸಣ್ಣ ಕಾವಲಿಯಲ್ಲಿ ತುಪ್ಪ ಬಿಸಿ ಮಾಡಲು ಇಡಿರಿ. ಸಾಸಿವೆ ಹಾಕಿ. ಅದು ಸಿಡಿಯುತ್ತಿರುವಾಗ ಜೀರಿಗೆ, ಕರಿಬೇವು ಸೇರಿಸಿ. ಸೌಟಿನಿಂದ ಒಮ್ಮೆ ಆಚೆ ಈಚೆ ಮಾಡಿ ಒಗ್ಗರಣೆಯನ್ನು ಪದಾರ್ಥಕ್ಕೆ ಹಾಕಿ ಬಿಡಿ. 

23 November, 2012

ಕುಂಬಳ ಕಾಯಿಯ ಹಲ್ವ( ಕಾಶಿ ಹಲ್ವ)




    ಸೆಮಿಸ್ಟರ್ ಪರೀಕ್ಷೆಯ ತಯಾರಿಗಾಗಿ ಮಗ ಮನೆಗೆ ಬಂದಿದ್ದಾನೆ.  ಅವನಿಲ್ಲದಿದ್ದಾಗ ಸ್ಪೆಷಲ್ ತಿಂಡಿ ಮಾಡಲು ಮನಸ್ಸಿರುವುದೇ ಇಲ್ಲ. ಮೊನ್ನೆ ದೀಪಾವಳಿಗೂ ಅವನಿರಲಿಲ್ಲ. ಈಗ ಏನಾದರೂ ಮಾಡಿ ಕೊಡಬೇಕೆಂದು ೩,೪ ದಿನದಿಂದ ಯೋಚನೆ ಮಾಡುತ್ತಿದ್ದೆ...ಆದರೆ ಏನು ಮಾಡಲಿ, ಕಾಲೇಜು, ಮನೆಪಾಠ, ಮನೆ ಕೆಲಸ ಇವುಗಳ ಮಧ್ಯೆ ಬಿಡುವು ಇಲ್ಲ.. ದಿನವಿಡೀ ದುಡಿತದಿಂದ ಆಯಾಸನೂ ಆಗುತ್ತದೆ.. ಹುಡುಗ ಇನ್ನೊಂದು ವರ್ಷ ಕೆಲಸಕ್ಕೆ ಅಂತ ಪರಊರಿಗೆ ಹೋಗುತ್ತಾನೆ..ಹಾಗಾಗಿ ನನ್ನೆಲ್ಲ ನೆವನಗಳನ್ನು ಬದಿಗಿಟ್ಟು ಏನಾದರೂ ಮಾಡಬೇಕೆಂದು ನಿನ್ನೆ ನಿರ್ಧರಿಸಿದೆ. ಕಾಲೇಜಿನಿಂದ ಬರುತ್ತಿರುವಾಗ ಮಾರ್ಗದ ಬದಿಯಲ್ಲಿ ಬೂದುಗುಂಬಳ ಕಾಯಿ ಮಾರಾಟಕ್ಕೆ ಇಟ್ಟುದನ್ನು ನೋಡಿ ಕೊಂಡೆ. ಇವತ್ತು ಅದರ ಸಾಂಬಾರ್ ಮಾಡಿದೆ.... ಹಾಗೆ ಹಲ್ವನೂ ಮಾಡಿದೆ.

  ಸಾಮಾಗ್ರಿಗಳು
 ೧/೨ ಕಿಲೊ ಕುಂಬಳ ಕಾಯಿ ಕಾಯಿ
 ೨ ಕಪ್ ಸಕ್ಕರೆ
 ೧ ಕಪ್ ತುಪ್ಪ
 ೧/೨ ಚಮಚ ಕೇಸರಿ
 ೪,೫ ಏಲಕ್ಕಿ
 ೮,೧೦ ಒಣಗಿದ ದ್ರಾಕ್ಷೆ ಹಣ್ಣು
 ೮,೧೦ ಗೇರುಬೀಜದ ತುಂಡುಗಳು













ಮೊದಲು ಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದುಬೀಜ, ತಿರುಳನ್ನು ಬೇರ್ಪಡಿಸಿ, ಸಣ್ಣ ಸಣ್ಣ ಹೋಳಾಗಿ ತುಂಡು ಮಾಡಿ ಇಡಿ.  ನಂತರ ತುರಿಯುವ ಮಣೆಯಲ್ಲಿ ತುರಿಯಿರಿ. ಹೀಗೆ ತುರಿದು ಮುಗಿಸಿದಾಗ ಕುಂಬಳಕಾಯಿ ಬಹಳಷ್ಟು ನೀರು ಬಿಡುತ್ತದೆ. ಸ್ವಲ್ಪ ಹಿಂಡಿ ತೆಗೆದು ಪ್ರೆಶರ್ ಕುಕ್ಕರಿನಲ್ಲಿ ಒಂದು ೫ ನಿಮಿಷ ಬೇಯಿಸಿ. ಅದು ಬೇಯುತ್ತಿರುವಾಗಲೇ ಅರ್ಧ ಕಪ್ ನೀರಿನಲ್ಲಿ ಸಕ್ಕರೆ ಕುದಿಯಲು ಇಡಿರಿ. ಅದು ಚೆನ್ನಾಗಿ ಕುದಿ ಬಂದು ಪಾಕವಾಗುವ ತನಕ ಹಾಗೆ ಇರಲಿ. ನಂತರ ಬೇಯಿಸಿದ ಕುಂಬಳ ಕಾಯಿಯ ತುರಿಯನ್ನು ಈ ಸಕ್ಕರೆ ಪಾಕದಲ್ಲಿ ಹಾಕಿ. ಕುಂಬಳ ಕಾಯಿ ಬೇಯಿಸಿದಾಗಲೂ ನೀರು ಬಿಡುವುದರಿಂದ ಅದನ್ನು ಸಕ್ಕರೆ ಪಾಕದಲ್ಲಿ ಹಾಕುವಾಗ ಆದಷ್ಟು ಹಿಂಡಿ ಹಾಕಿ. ಹೀಗೆ ಮಾಡಿದರೆ ಒಂದಷ್ಟು ಗ್ಯಾಸಿನ ಉಳಿತಾಯವಾಗುತ್ತದೆ.  ಒಂದರ್ಧ ಗಂಟೆ ಬೇಯಿಸಿದ ನಂತರ ತುಪ್ಪ ಸೇರಿಸಿ ಕೆದಕಿರಿ. ಕೇಸರಿಯನ್ನು ನೀರಿನಲ್ಲಿ ಕರಗಿಸಿ ಸೇರಿಸಿ. ದಪ್ಪವಾಗುತ್ತ ಬಂದಿದೆ ಎಂದೆನಿಸಿದಾಗ ಹುಡಿ ಮಾಡಿದ ಏಲಕ್ಕಿ ಸೇರಿಸಿ ಗ್ಯಾಸ್ ಆಫ್ ಮಾಡಿಬಿಡಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಬೀಜ  ಮತ್ತು ದ್ರಾಕ್ಷಿ ಹಣ್ಣುಗಳನ್ನು ಸೇರಿಸಿ.

20 November, 2012

ಕೊಟ್ಟೆ, ಏನು ನಿನ್ನಯ ಮಹಿಮೆ! (ಕಥೆ)

      

         "ಸುಮತಿ, ನಿನಗೆ ಕೊಟ್ಟೆ ಮಾಡಲು ಬರ್ತದಂತಲ್ಲ, ಕೇಳಿ ತುಂಬಾ ಖುಷಿಯಾಯ್ತು."  ಸುಮತಿಗೆ ಈ ವಯಸ್ಸಾದ ಹೆಂಗಸು ಯಾರೆಂದೂ, ಆಕೆ ಏನನ್ನುತ್ತಿದ್ದಾರೆಂದು ಏನೂ ಅರ್ಥ ಆಗಲಿಲ್ಲ. ಸುಮತಿಯ ಮುಖದಲ್ಲಿ ಮೂಡಿದ ಪ್ರಶ್ನೆಗಳನ್ನು ನೋಡಿ ಆ ಹೆಂಗಸು ತನ್ನ ಪರಿಚಯ ಮಾಡಿಕೊಟ್ಟರು. " ನಿಮ್ಮ ಮನೆಯ ಹತ್ತಿರವೇ ನಮ್ಮ ಮನೆ...ಹಾಗೆ ನೋಡಿದರೆ ಅದು ನಿಮ್ಮ ಮನೆನೇ. ನಮ್ಮ ಯಜಮಾನರು ನಿಮ್ಮ ಮಾವನಿಗೆ ಸಂಬಂಧಿ ಹಾಗೂ ನಿಮ್ಮ ಮಿಲ್ಲಿನಲ್ಲಿ ರೈಟರು. ನಿನ್ನ ಅತ್ತೆ ನನ್ನ ಕೈಯಲ್ಲೇ ಕೊಟ್ಟೆ ಮಾಡಿಸುತ್ತಿದ್ದರು. ಮೊನ್ನೆ ಸಿಕ್ಕಿದಾಗ ಇನ್ನು ನನ್ನ ಹೊಸ ಸೊಸೆಗೆ ಕೊಟ್ಟೆ ಮಾಡಲು ಬರುವುದರಿಂದ ಇನ್ನು ಮುಂದೆ ಅವಳೆ ಮಾಡ್ತಾಳೆ "ಅಂದರು.  ಅವರ ಮುಖದಲ್ಲಿ ಸಂತೋಷ ಎದ್ದು ತೋರುತಿತ್ತು....
     
         ಸುಮತಿಗೆ ಇದೆಲ್ಲ ಏನು ಅಂತ ಅರ್ಥವಾಗಲು ಹೆಚ್ಚು ಸಮಯ ತಾಗಲಿಲ್ಲ. ಎರಡೇ ದಿನಗಳೊಳಗೆ ಅತ್ತೆ ಕೊಟ್ಟೆಗೆ ಬೇಕಾದ ಉದ್ದು, ಅಕ್ಕಿ ನೀರಿಗೆ ಹಾಕುವಾಗಲೇ ಪುತ್ತುವಿನ ಕೈಯಲ್ಲಿ ಹಲಸಿನ ಮರದ ಗೆಲ್ಲುಗಳನ್ನು ಬಚ್ಚಲು ಕೋಣೆಯ ಬಳಿ ತಂದು ಹಾಕಲು ಹೇಳಿದನ್ನು ಸುಮತಿ ಕೇಳಿದ್ದಳು. ವಿದೇಯ ಪುತ್ತು ಕೆಲವೇ ನಿಮಿಷಗಳಲ್ಲಿ ದೊಡ್ಡ ದೊಡ್ಡ ಗೆಲ್ಲುಗಳನ್ನು ತಂದು ಹಾಕಿ, "ಅಮ್ಮ" ಅಂತ ಕರೆದುದು ಕಿವಿಗೆ ಬಿತ್ತು....ಅದೇಕೋ ಸುಮತಿಗೆ ಎರಡು ದಿನದ ಹಿಂದೆ ಸಿಕ್ಕಿದ ಆ ಮುತ್ತೈದೆಯ ನೆನಪು ಮನಪಟಲದಲ್ಲಿ ತೇಲಿ ಬಂದಿತು..."ಸುಮತೀ..." ಕರೆ ಬರಲು ಹೊತ್ತಾಗಲಿಲ್ಲ. ಕೈಯಲ್ಲಿ ಹಳೆ ರೀಡರ್ ಡೈಜೆಸ್ಟ್ ಹಿಡಿದು ಮಂಚದ ಮೇಲೆ ಕುಳಿತಿದ್ದ ಸುಮತಿ ಎದ್ದು," ಅತ್ತೇ... ಕರೆದಿರಾ?"  ಅಂದಳು. "ನಿನಗೆ ಕೊಟ್ಟೆ  ಮಾಡಲು ಬರ್ತದಂತಲ್ಲ, ನಿನ್ನ ಅಮ್ಮ ಇಲ್ಲಿಗೆ ಬಂದಾಗ ನನ್ನ ಮಗಳಿಗೆ ಅಡಿಗೆ ಮಾಡಲು ಬರುವುದಿಲ್ಲವಾದರೂ ಬಾಕಿ ಹೊರಗಿನ ಒಳಗಿನ ಕೆಲಸದಲ್ಲಿ ತುಂಬಾ ಜಾಣೆ ಎಂದಿದ್ದರು. ಯಾವಾಗಲು ನಮ್ಮ ರೈಟರ್  ಹೆಂಡತಿ ಮಾಡಿಕೊಡ್ತಿದ್ದಳು. ಇನ್ನು ಮುಂದೆ ನೀನೇ ಕೊಟ್ಟೆ ಮಾಡು" ಅಂದರು ಸುಮತಿಯ ಅತ್ತೆ ದರ್ಪದ ದನಿಯಲ್ಲಿ. ’ಅಷ್ಟೆ ತಾನೆ, ಕೊಟ್ಟೆ  ಏನು ಮಹಾ’ ಅಂದುಕೊಂಡು ಸುಮತಿ ಹಿಡಿಸೂಡಿ ಕಡ್ಡಿಗಳನ್ನು ತೆಗೆದುಕೊಂಡು ಹಿಂದೆ ಹೋದಳು. ದೊಡ್ಡ ದೊಡ್ಡ ಎಲೆಗಳನ್ನು ಆರಿಸಿ, ಪತ್ರಾವಳಿಗಳನ್ನು ಮಾಡಿಟ್ಟಳು. ಮಧ್ಯೆ ಎರಡು ಮೂರು ಸಾರಿ ಅತ್ತೆಯ ಸವಾರಿ ಇನ್ಸಪೆಕ್ಷನ್ ಮಾಡಲು ಬಂದಿತ್ತು. ೩೦ ಚಿಲ್ಲರೆ ಪತ್ರಾವಳಿ ಮಾಡಿ ಕೊಟ್ಟೆ  ಮಾಡಲು ಶುರುಮಾಡಿದಳು.  ಒಂಟಿಯಾಗಿ ಕುಳಿತು ಮಾಡುತ್ತಿರುವಾಗ ಅಮ್ಮನ ಮತ್ತು ಮನೆಯ ನೆನಪು ಬಂದು ಕಣ್ಣಾಲಿಗಳು ತುಂಬಿ ಬಂದಿದ್ದವು. ಇದೇ ಮೊದಲಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಒಬ್ಬಳೆ ಮಾಡುವುದು ಸುಮತಿ...ಅಮ್ಮನ ಮನೆಯಲ್ಲಿ ಅವಳು, ಅಮ್ಮ, ಚಿಕ್ಕಮ್ಮ, ಅಜ್ಜಿ....ಕೆಲವೊಮ್ಮೆ ಅಕ್ಕಂದಿರು( ಅಪ್ಪನ ಅಕ್ಕ, ತಂಗಿಯರು) ಹೀಗೆ ಎಲ್ಲರೂ ಕೂಡಿ ಮಾಡುತ್ತಿದ್ದರು. ಹೆಚ್ಚೆಂದರೆ ೫,೮ ಕೊಟ್ಟೆ  ಸುಮತಿಯ ಕೈಯಲ್ಲಿ ತಯಾರಾಗುತಿತ್ತು. ಬೆನ್ನಲ್ಲಿ ಹೊಗೆ ಬರಲು ಪ್ರಾರಂಭವಾಯಿತು....ಈಗಾಗಲೇ ೨ಗಂಟೆಗೂ ಮೀರಿ ಹೆಚ್ಚು ಹೊತ್ತು ಕಳೆದಿತ್ತು. ಸರಿ. ಕೊನೆಗೂ ಮುಗಿಯಿತು ಎಂದು ಸುಮತಿ ಅಂದುಕೊಂಡು ಏಳಲು ಯತ್ನಿಸುತ್ತಿರುವಾಗಲೇ ಅತ್ತೆ ಮತ್ತು ಅವಳ ಓರಗಿತ್ತಿ ಅಲ್ಲಿಗೆ ಬಂದರು. ಸುಮತಿಯ ಓರಗಿತ್ತಿ ಬಂದವಳೇ ಕೊಟ್ಟೆಗಳನ್ನು ಲೆಕ್ಕಮಾಡಲು ಕುಳಿತಳು. ಅತ್ತೆ ಏನೋ ಮಣಮಣ ಅನ್ನುತ್ತಿದ್ದರು. "ಅತ್ತೆ, ಬರೇ ೩೪ ಅಷ್ಟೇ" ಅಕ್ಕನ ಬಾಯಿಯಿಂದ ಬರೇ ಅಂತ ಕೇಳಿ ಸುಮತಿಗೆ ಮಿಂಚು ಹೊಡೆದಂತಾಯಿತು. "ಇದು ಸಾಕಾಗೊಲ್ಲ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಾಡು. ಕಡಿಮೆ ಪಕ್ಷ ೫೦ ಆದರೂ ಬೇಕು. ನಾಳೆ ಹಿಟ್ಟು ಹಾಕುವಾಗ ಸಾಕಾಗದಿದ್ದರೆ ಮತ್ತೆ ಮಾಡಿಕೊಡು." ಒಂಚೂರು ದಯೆ ದಾಕ್ಷಿಣ್ಯವಿಲ್ಲದೆ ಅತ್ತೆಯ ಬಾಯಿಯಿಂದ ಮಾತುಗಳು ಉದುರಿತು. 

         ತನ್ನ ಕತೆ ಮುಗಿಯಲು ಹೆಚ್ಚು ಹೊತ್ತು ಬೇಕಾಗಿಲ್ಲ ಇನ್ನು ಅಂತ ಸುಮತಿಗೆ ಅನಿಸಿತು. ಏನೇ ಆದರು ಇನ್ನು ಅಲ್ಲಿ ಕೂರುವುದು ಅವಳಿಗೆ ಸಾಧ್ಯವಾಗಲಿಲ್ಲ. ಸೀದ ಎದ್ದು ತನ್ನ ಕೋಣೆಗೆ ಬಂದವಳೇ ಮಂಚದ ಮೇಲೆ ಬೋರಲಾಗಿ ಬಿದ್ದಳು. ಅವಳಿಗೆ ಅರಿವಿಲ್ಲದೆ ಕಣ್ಣಿನಿಂದ ಹನಿಗಳು ಹೊರನುಗ್ಗಿದವು. ಮೊದಲಬಾರಿಗೆ ಅಮ್ಮನ ಮೇಲೆ ಕೆಂಡದಂತ ಕೋಪ ಬಂದಿತು. ’ಬಡವನ ಕೋಪ ದವಡೆಗೆ ಮೂಲ’  ಏನೇ ಆದರು ತಾನು ಕೊಟ್ಟೆ ಮಾಡುವುದನ್ನು ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದನ್ನು ಕೂಡಲೇ ಅರಿತಳು. ತನ್ನ ಪ್ರಿಯ ದೇವರ ನಾಮ ಸ್ಮರಣೆ ಮಾಡಿ ಒಂದಿಷ್ಟು ಶಕ್ತಿ, ಧೈರ್ಯವನ್ನು ಪಡೆದು ಅಲ್ಲಿಂದ ಎದ್ದು ಮುಖವನ್ನು ತೊಳೆದು ಕೊಟ್ಟೆ ಮಾಡುವ ಕಾಯಕ ಮುಂದುವರಿಸಿದಳು. ಇವಳ ಮನದಲ್ಲಿದ್ದುದು ಅತ್ತೆಗೆ ಮತ್ತು ಓರಗಿತ್ತಿಗೆ ಅರಿವಾಗಿತ್ತು. ಅವರಿಬ್ಬರು ಏನೊ ಮಾತಾಡಿಕೊಂಡರು ಕಾಣುತ್ತದೆ. ಸ್ವಲ್ಪ ಹೊತ್ತಿಗೆ ಓರಗಿತ್ತಿ ಅಲ್ಲಿಗೆ ಬಂದು ಪತ್ರಾವಳಿ ಹೇಗೆ ಮಾಡುವುದೆಂದು ಕಲಿಸಲು ಹೇಳಿದಳು. ಹೀಗೆ ಇಬ್ಬರು ಕೂಡಿ ೫೦ ಚಿಲ್ಲರೆಯಷ್ಟು ಮಾಡಿ ಮುಗಿಸುವಾಗ ರಾತ್ರಿ ೮.೩೦ ಕಳೆದಿತ್ತು.  ಪತಿ ಮತ್ತು ಮೈದುನರ ಸವಾರಿ ಅಂಗಡಿಯಿಂದ ಬಂದು ಟಿ. ವಿಯೆದರು ವಕ್ಕರಿಸಿತ್ತು. ಕೈತೊಳೆದು ಬಂದವಳಿಗೆ ಆರ್ಡರ್..೪ ಕಪ್ ಚಾ!  ಓರಗಿತ್ತಿ ತನ್ನ ಮಗುವಿನ ಗದ್ದಲ ಕೇಳಿ ಆಚೆ ನಡೆದಿದ್ದಳು. ಸುಮತಿ ಮುಖ ಊದಿಸಿ ಅಡಿಗೆ ಕೋಣೆಗೆ ನಡೆದಿದ್ದಳು. ತನ್ನ ಮನೆಯಲ್ಲಿ ಇಷ್ಟು ಹೊತ್ತಿಗೆ ಅಮ್ಮ ರಾತ್ರಿ ಊಟಕ್ಕೆ ತಮ್ಮನ್ನು ಕರೆಯುತ್ತಿದ್ದಳು. ಇಲ್ಲಿ ಇದೆಂತ ವಿಚಿತ್ರ...ರಾತ್ರಿ ೯ಗಂಟೆಗೆ ಚಾ..ಊಟ ೧೦.೩೦, ೧೧ ಗಂಟೆಗೆ! ಬಹಳ ಕಷ್ಟವಾಗುತಿತ್ತು ಹೊಂದಿಕೊಳ್ಳಲು.  ಆದರೆ ಬೇರೆ ದಾರಿಯಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ!

       ಈಗ ಅವಳಿಗೆ ಅರ್ಥವಾಯಿತು; ಆ ಹೆಂಗಸಿನ ಮುಖದಲ್ಲಿ ಕಂಡ ಸಂತೋಷದ  ಕಾರಣ! ಕೊಟ್ಟೆ ಏನು ನಿನ್ನಯ ಮಹಿಮೆ! ಅವಳು ಬಚಾವಾದಳು, ನಾನು ಸಿಕ್ಕಿ ಬಿದ್ದೆ ಅಂತ ಸುಮತಿಯ ಮುಖದಲ್ಲಿ ಒಂದು ವ್ಯಂಗ ನಗೆ ಮೂಡಿತು.!

18 November, 2012

ನನ್ನ ಪಿಕಾಸು ರಚಿಸಿದ ಲೊಗೊ.....


ನನ್ನ ಪಿಕಾಸು ರಚಿಸಿದ ಲೊಗೊ.....ನನ್ನ ಮಗಳ ಮುಖಪುಟ ಸ್ನೇಹಿತ, ನಾನು ನನ್ನ ಫೇಸ್ ಬುಕ್‍ನಲ್ಲಿ ಹಾಕಿದ, ಪಿಕಾಸು ರಚಿಸಿದ ಗಣಕ ಚಿತ್ರಗಳನ್ನು ನೋಡಿ ಪ್ರಭಾವಿತನಾಗಿ ತನ್ನ ವೆಬ್ ಜಾಲದ ಉಪಹಾರ ಗೃಹಕ್ಕೆ ಒಂದು ಲೊಗೊ ರಚಿಸುವಂತೆ ಹೇಳಿದಾಗ ನನ್ನ ಮಗನಿಗೆ ಪರೀಕ್ಷೆ ಹೊತ್ತು..ಆದರೂ ತಯಾರಿಸಿದ..ಅದು ಅವರಿಗೆ ಮೆಚ್ಚುಗೆಯಾಗಿ ಅವನಿಗೆ ಅವನ ಮೊದಲ ಸಂಪಾದನೆ ಸಿಗುವುದರಲ್ಲಿದೆ..ಅಮ್ಮನಿಗೆ ಇದಕ್ಕಿಂತ ಮತ್ತೇನು ಬೇಕು!  ವರುಷಗಳ ತಪಸ್ಸಿನ  ಸಾರ್ಥಕ ಭಾವ!!!

    ಅವನು ಮೊದಲು ರಚಿಸಿದ ಚಿತ್ರ ಅವರಿಗೆ ಹಿಡಿಸಿತಾದರೂ ಅದನ್ನು ವೆಬ್ ಜಾಲಕ್ಕೆ ಉಪಯೋಗಿಸುವ ಹಾಗಿರಲಿಲ್ಲ..ನಂತರ ಮಾಡಿದ ಚಿತ್ರ ನಿಜಕ್ಕೂ ಸೂಪರ್ ಅಂದ್ರು!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...