ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 September, 2012

ಕರೆಯುತಿಹೆಯಲ್ಲಾ ಛೀ... ಕಳ್ಳಿಯೆಂದೆನ್ನ!

ನಲ್ಲೆ ಅನ್ನುವಳು,

ನನ್ನೀ 
ಮೈತುಂಬೆಲ್ಲಾ 
ಹರಿದಾಡುವ
ಕಂಪನದ ಅಲೆಯು
ನಿನ್ನದೇ ನೆನಪಿನ 
ಪ್ರಭಾವವೆಂದು
ತಿಳಿದಿದ್ದರೂ
ಕರೆಯುತಿಹೆಯಲ್ಲಾ
ಮಳ್ಳಿಯೆಂದೆನ್ನ!

ಜತನವಾಗಿ
ಕಾಯ್ದುಕೊಂಡಿದ್ದ
ನನ್ನೀ ಹೃದಯಕೇ
ಹಾಕಿ ಲಗ್ಗೆ,
ನಿನ್ನ ಮನದೊಳೆನ್ನ
ಬಂಧಿಸಿ,  ಈಗ ಏನೂ 
ಅರಿಯದವನಂತೆ
ಕರೆಯುತಿಹೆಯಲ್ಲಾ
ಛೀ... ಕಳ್ಳಿಯೆಂದೆನ್ನ!

ಸುಮ್ಮನೆ ಬಿಡುವನನಲ್ಲ... ಆತನನ್ನುವನು,


ಆತನ ನೆನಪನ್ನು 
ತನ್ನೊಳಗಿನ 
ಕಂಪನವಾಗಿಸಿಕೊಂಡವಳನ್ನು 
ಮಳ್ಳಿಯೆನ್ನದೇ ಇರಲಾದೀತೇ?
ಹೃದಯಕ್ಕೆ ಲಗ್ಗೆಯಿಟ್ಟವನ 
ಮನದಲ್ಲಿ ಬಂಧಿಸಿಡಲು 
ಅನುಮತಿಕೊಟ್ಟವಳ 
ಕಳ್ಳಿ ಎನ್ನದಿರಲಾದೀತೇ?


ನಲ್ಲೆಯ ಕೊಂಡಾಟ...



 ನೀನ್ಹೇಗೆ ಕರೆದರೂ 
 ನಾ ಓಗೊಡುವೆನೋ
ನಿನ್ನ ಕರೆಗಾಗಿಯೇ
ಸದಾ ಕಾದಿರುವೆನೋ
ಕಳ್ಳಿಯೂ, ಮಳ್ಳಿಯೂ
ಎಲ್ಲವೂ ಆಗುವಳೋ
 ಶೈಲಜೆಯು ಕೇವಲ
ತನ್ನೀಶನಿಗಾಗಿ.
------------------------





15 September, 2012

ಭಾವ ಒಂದು ಭಾಷೆ ಮೂರು!



ಚಂದದ ಪದಗಳಿಂದ ಪೋಣಿಸಿದ ಮನದ ಭಾವ ಮೂರು ಭಾಷೆಗಳಲಿ! ಮಾನ್ಯ ಹಿಂದಿ ಕವಿ ಹರಿವಂಶ್ ರಾಯ್ ಬಚ್ಚನ್  ಬರೆದ ಮೂಲ ಕವಿತೆಯ ಆಂಗ್ಲನುವಾದವನ್ನು ಮಾನ್ಯ ಅಮಿತಾಭ್ ಬಚ್ಚನ್‍ ಅವರೂ ಮತ್ತು ನನ್ನ ನೆಚ್ಚಿನ ಕವಿ ಹಾಗೂ ಗುರು ಆತ್ರಾಡಿ ಸುರೇಶ್ ಹೆಗ್ಡೆಯವರು  ಗಂಧದ ಪರಿಮಳ ಸೂಸುವ ಕನ್ನಡದಲ್ಲಿ ಕವನವನ್ನು ಪೋಣಿಸಿದ್ದಾರೆ. 
ಶಾಂತಿಯನಿನ್ನೂ ಅರಿತಿಲ್ಲ ನಾನು!
*********************
(ಹರಿವಂಶ್ ರಾಯ್ ಬಚ್ಚನ್‍ರವರ ಕವಿತೆಯ ಭಾವಾನುವಾದದ ಒಂದು ಯತ್ನ)

ಕೊರತೆಗಳಿಹವು ನನ್ನೊಳಗೆ
ನನ್ನ ಹೊರಗೂ ಇರುವಂತೆ

ಒಳಹೊರಗಿನೀ ಕೊರತೆಗಳ
ನೀಗಿಸಿಕೊಳ್ಳುವ ಹಂಬಲವು
ನನ್ನೀ ಮನದೊಳಗಿಹುದಂತೆ

ಶಾಂತಿಯನಿನ್ನೂ ಅರಿತಿಲ್ಲ ನಾನು!

ಈ ಪ್ರಯತ್ನದಲಿ ನಾನು ನನ್ನ
ಆಯುಷ್ಯವನ್ನೇ ಸವೆಸಿಹೆನು

ಜಗವೂ ಅಲ್ಲಿಯೇ ಇಹುದು
ನಾನೂ ಅಲ್ಲಿಯೇ ಇಹೆನು

ಅದು ನನ್ನ ಹೆಡ್ಡತನವಾಗಿತ್ತೇ?
ಎಂದೀಗೀಗ ಯೋಚಿಸುತ್ತಿಹೆನು

ಆದರೂ
ನಿರಾಶನಾಗಲೇಕೆ ನಾನು
ನನ್ನೀ ಯತ್ನಗಳ ಹಿಂದೆ
ಆತ್ಮಸ್ಥೈರ್ಯ ಇಲ್ಲವೇನು?

ಜಗದ ಮುಂದೆ ಸೋಲನ್ನು
ಒಪ್ಪಿಕೊಂಡರೂ ನಾನು,
ಒಪ್ಪಿಕೊಂಡಿಲ್ಲ ಸೋಲು
ನನ್ನಲ್ಲಿ ನಾನು,
ಶಾಂತಿಯನಿನ್ನೂ ಅರಿತಿಲ್ಲ ನಾನು!






















I have not known peace and quiet and solace. There are some shortcomings inside of me. There are some short comings outside of me. But I have resolved that I shall condition both my inside and outside to be devoid of any fault or mistakes. For, I have not known peace and quiet and solace.

A lifetime have I spent in putting effort. I am but at the same spot and so is the world. And I do sometimes
 think, has there been in me a childish juvenile behaviour. For, I have not known peace and quiet and solace.

But why must I be disappointed with this. Is not my confident promise and assurance enough ? I may have accepted defeat from the world, but I have not accepted defeat with myself ! I have not known peace and quiet and solace.





This from my Father’s work ‘Ekant Sangeet’ – the music of solitude ! This from my Father’s works written during that phase of his life when he suffered great sadness, pain and disappointment. Pain from circumstances, from society and from life itself. They were depressing days. There was death of near ones in rapid succession. There was rejection from attachments. There was poverty and want within. When you have to travel miles on foot to earn Rs 25/- from a tuition it is harsh. Rs 25/- which, in western equivalence is half a dollar at todays prevalent rates, is half a dollar for an entire month !!



*********************

ಮೆಂತ್ಯ ಸೊಪ್ಪಿನ ವಡೆ!

ಮೆಂತ್ಯ ಸೊಪ್ಪಿನ ವಡೆ!
  
ಸಾಮಾಗ್ರಿಗಳು
೧. ಮೆಂತ್ಯ ಸೊಪ್ಪು ೨,೩ ಕಟ್ಟು
೨. ೧ ನೀರುಳ್ಳಿ
೩. ಶುಂಠಿ
೪. ಕಡಲೆ ಹುಡಿ
೫. ೨,೩ ಚಮಚ ದಪ್ಪ ಮೊಸರು
೬. ೩ ಹಸಿ ಮೆಣಸು
೭. ರುಚಿಗೆ ತಕ್ಕಷ್ಟು ಉಪ್ಪು
 ೮. ಕರಿಯಲು ಎಣ್ಣೆ




 ಮೆಂತ್ಯ ದೇಹಕ್ಕೆ ತಂಪು. ಅಲ್ಲದೆ ಸಕ್ಕರೆ ಅಂಶ ಹೆಚ್ಚಿದ್ದವರಿಗೆ ಅದನ್ನು ಹಿಡಿತಕ್ಕೆ ತರಲು ಮೆಂತ್ಯದ ಹುಡಿ ಸಹಾಯಕ. ಮೆಂತ್ಯದ ಸೊಪ್ಪಿನ ಪರಾಟ ಆರೋಗ್ಯಕ್ಕೂ ಸೈ ರುಚಿಗೂ ಸೈ!

ಮೊತ್ತ ಮೊದಲು ಸೊಪ್ಪಿನ ಬೇರಿನ ಭಾಗ ತೆಗೆದು ಅದನ್ನು ಒಂದಿಷ್ಟು ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ನಾನು ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನು ಒಂದರ್ಧ ಗಂಟೆಯಾದರೂ ಉಪ್ಪು ನೀರಿನಲ್ಲಿ ಹಾಕಿಡುತ್ತೇನೆ.  ನಂತರ ನೀರಿನಿಂದ ಹಿಂಡಿ ಹೊರತೆಗೆದು, ಸೊಪ್ಪಿನಿಂದ ನೀರು ಬಸೆದು ಹೋಗುವ ಹಾಗೆ ಇಟ್ಟುಬಿಡಿ.  ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ. ಹಾಗೆಯೇ ಶುಂಠಿ, ನೀರುಳ್ಳಿ, ಮತ್ತು ಹಸಿರು ಮೆಣಸಿನ ಕಾಯಿಯನ್ನೂ ಸಣ್ಣದಾಗಿ ಕತ್ತರಿಸಿ. ಈಗ ಇದಕ್ಕೆ ಉಪ್ಪು ಮತ್ತು ಕಡಲೆ ಹುಡಿಯನ್ನು ಬೆರೆಸಿ. ನಂತರ ನಿಧಾನವಾಗಿ ಮೊಸರನ್ನು ಜಾಗರೂಕತೆಯಿಂದ ಸೇರಿಸಿ. ವಡೆಯ ಹಿಟ್ಟು ಗಟ್ಟಿಯಾದಷ್ಟು ಎಣ್ಣೆ ಕಡಿಮೆ ಹೀರಿಕೊಳ್ಳುತ್ತದೆ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಖಾರ, ಉಪ್ಪು ಬೇಕಾದರೆ ಸೇರಿಸಿ. ಹಿಟ್ಟು ತಯಾರಿಸುತ್ತಿವಾಗಲೇ ಎಣ್ಣೆಯನ್ನು ಕಾಯಲು ಇಟ್ಟರೆ ಒಳ್ಳೆಯದು. ಕಾದ ಎಣ್ಣೆಗೆ  ಹಿಟ್ಟಿನ ಉಂಡೆಯನ್ನು ನಿಧಾನವಾಗಿ ಹಾಕಿ...ತಳ ಒಂಚೂರು ಕೆಂಪಗಾದಾಗ ಮಗುಚಿ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ. ಬಿಸಿಯಿದ್ದಾಗಲೇ ತಿನ್ನಲು ರುಚಿ!

05 September, 2012

ಮತ್ತೆ ಶಾಲೆಗೆ ಹೋಗುವ ಸಂಭ್ರಮ!!


            ಮತ್ತೆ ಶಾಲೆಗೆ ಹೋಗುವ ಸಂಭ್ರಮ!!! ಆದರೆ.....ಬಹಳಷ್ಟು ಹೊಂದಿಕೆ ಮಾಡಿಕೊಳ್ಳಬೇಕಾಗಿದೆ...ಆದರೂ ಮನದಲ್ಲಿ ಹುಮ್ಮಸು,,,,ಅದೇನೋ ಅಗೋಚರ ಶಕ್ತಿ ಬಲಕೊಡುತ್ತಿದೆ ಅನಿಸುತ್ತದೆ...ಶಾಲೆಯಲ್ಲಿ ನನ್ನ ಮಕ್ಕಳಿಗಿಂತ ಚಿಕ್ಕವರು ನನ್ನ ಸಹಪಾಠಿಗಳು..ನನಗಿಂತ ಅವರಿಗೆ ಹೆಚ್ಚು ಮುಜುಗುರ...ನನ್ನ ಗುರುಗಳು ಹೆಚ್ಚುಕಡಿಮೆ ನನ್ನದೇ ಪ್ರಾಯದವರು..ನನ್ನನ್ನು ಹೆಸರು ಹಿಡಿದು ಕರೆಯದೇ ಮೇಡಂ ಎಂದು ಕರೆಯಬೇಕಾಗಿ ಬಂದಿದೆ ಅವರಿಗೆ...ನನ್ನ ತಪ್ಪುಗಳನ್ನು ಹುಡುಕುವಾಗ ಬೇರೆ ವಿದ್ಯಾರ್ಥಿಗಳಿಗೆ ಹೇಳಿದ ಹಾಗೆ ಹೇಳಲಾಗುವುದಿಲ್ಲ...ಹೀಗೆ ಎಷ್ಟೋ ಹೊಸ ಹೊಸ ಅನುಭವಗಳು....ಹಾಗೆಯೇ ಇದು ಕಲೆ ಕಲಿಯುವ ತರಗತಿ..ಇಲ್ಲಿ ಪ್ರಾಕ್ಟಿಕಲ್ ಕೆಲಸಕ್ಕೆ ಹೆಚ್ಚು ಒತ್ತು...ಸ್ಕೆಚಸ್ಎಷ್ಟು ಮಾಡಿದರೂ ಕಮ್ಮಿನೇ....ದಿನದ ಮೂರು ಹೊತ್ತು ಮನೆಪಾಠ ಮಾಡಿ, ಮನೆಕೆಲಸ ನಿರ್ವಹಿಸಿ.....ಅದರ ಮೇಲೆ...ನನ್ನ ಬ್ಲಾಗ್, ಫೇಸ್ ಬುಕ್ ತಿರುಗಾಟ....ಮತ್ತೆ ಸ್ಕೆಚಸ್ ಯಾವಾಗ ಹಾಕೋದು!!! ಕಮ್‍ಸೆ ಕಮ್ ೧೦೦ ಸ್ಕೆಚ್ ಹಾಕಬೇಕಂತೆ ಪರ್ ಡೇ...ರಾಮ ರಾಮ ನನ್ನಿಂದ ಸಾಧ್ಯವೇ ಇಲ್ಲ..ನನಗೆ ೫,೬ ಮಾತ್ರ ಸಾಧ್ಯ ಅಂದದಕ್ಕೆ....ಒಪ್ಪಿಗೆನೂ ಸಿಕ್ಕಿದೆ..ಲಕ್ಕಿ ಮಿ:-)...ನನ್ನೊಡೆಯನ ದಯಾಮಯಿ. ನನ್ನ ಕೈಯೆಂದೂ ಬಿಟ್ಟು ಹಾಕೊಲ್ಲ...ನನ್ನ ವಿಶ್ವಾಸ, ನನ್ನ ನಂಬಿಕೆ ಅಚಲ...ಕಷ್ಟ ಬಂದಾಗೆಲ್ಲ ಕೈಹಿಡಿದು..ಅತೀ ಕಷ್ಟ ಬಂದಾಗೆಲ್ಲ ನನ್ನನ್ನೆತ್ತಿಯೇ ಹಿಡಿದು ಮುನ್ನಡೆಸಿದ್ದಾನೆ....ಹಾಗಾಗಿ ನಾಳಿನ ಚಿಂತೆ ಮರೆತು...ಈ ಘಳಿಗೆಯಲ್ಲೇ ಜೀವಿಸುತ್ತಿದ್ದೇನೆ. 




ಶ್ರೀ ಗುರವೇ ನಮಃ



               ಒಂದು ವಾರದಿಂದ ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳಿಗೆ ತಮ್ಮ ತಮ್ಮ ಗುರುಗಳಿಗೆ ಟೀಚರ್ಸ್ ಡೇಗಾಗಿ ಗಿಫ್ಟ್ ತಯಾರಿಸುವ ಸಂಭ್ರಮ. ಅಂತೂ ಅಪ್ಪನ ಜೇಬಿಗೆ ತೂತು ಮಾಡಿಸ್ತಾರಪ್ಪಾ ಈ ಮಕ್ಕಳು...ಅವರಲ್ಲೇ ಪೈಪೋಟಿ..ಯಾರು ಬೆಸ್ಟ್ ಗಿಫ್ಟ್ ಕೊಡ್ತಾರಂತ...ನನ್ನದು ಒಂದೇ ಮಾತು..ನನಗೆ ಗಿಫ್ಟ್ ಬೇಡ..ನೀವೇ ಕಾರ್ಡ್ ತಯಾರಿಸಿದರೆ ಮಾತ್ರ ತಕ್ಕೊಳ್ತೇನೆ..ಇಲ್ಲ ಏನೂ ಬೇಡ...ಹಾಗಾಗಿ ನಿನ್ನೆಯೆಲ್ಲ ಗುಸುಗುಸು ಮಾತಾಗ್ತಿತ್ತು..ಇವತ್ತು ಬೆಳ್‍ಬೆಳಿಗ್ಗೆನೇ ಮೈಸೂರಿನಿಂದ ಹಳೆ ಶಿಷ್ಯೆಯ ದೂರವಾಣಿ! ಅರೇ ಈ ಹುಡುಗಿ ಇನ್ನೂ ನನ್ನನ್ನ ಮರಿಯಲಿಲ್ಲವಲ್ಲ...ಕೇಳಿದೆ ಏನಮ್ಮಾ ಹಳೆ ಗೆಳತಿಯರ ಒಡನಾಟ ಇನ್ನೂ ಇದೆಯೇನು...ಪಟ್ ಅಂತ ಉತ್ತರ ಬಂತು...ಐ ಹಾವ್ ಲಿಟರಲೀ ಲಾಸ್ಟ್ ಆಲ್ ಮೈ ಓಲ್ಡ್ ಕಾಂಟಾಕ್ಟಸ್!!! ಮತ್ತೆ ನನ್ನದು??? ಈ ಹುಡುಗಿ ನನ್ನ ಕೆಳಗೆ ಪಳಗಿದ ನನ್ನ ಪಟ್ಟ ಶಿಷ್ಯೆ!....ಅವಳ ತಂದೆ ತಾಯಿ..ಮಾತ್ರವಲ್ಲ..ದೂರದೂರಿನಲ್ಲಿರುವ ಅಜ್ಜಿಗೂ ನಾನಂದ್ರೆ ತುಂಬಾನೆ ಇಷ್ಟ! 
 ಇವತ್ತು ೬.೪೫ಕ್ಕೆ ಪಾಠಕ್ಕೆ ಬಂದ ಹುಡುಗರು..ಎಂದಿನಂತೆ ತಮ್ಮತಮ್ಮ ಓದಿನಲ್ಲಿ ಮಗ್ನರಾದರು..ಆದರೆ ಹುಡುಗಿಯರು..ಬರುವಾಗಲೇ ಗಲಗಲ..ರೋಸ್..ಚಾಕ್ಲೇಟ್...ಮತ್ತು ಮೇಡಂಗೋಸ್ಕರ ಪೆನ್ನುಗಳ ಉಡುಗೊರೆ! ಇದಕ್ಕೆಲ್ಲಾ ಬೆಲೆಕಟ್ಟಲಾಗುವುದೇ! ನನಗೆ ನನ್ನ ಹಳೆದಿನಗಳು ಕಾಡತೊಡಗಿದವು..ನನ್ನ ಬದುಕಿನಲ್ಲಿ ನನಗೆ ಬರೇ ಪಾಠ ಕಲಿಸಿದ ಮಾತ್ರವಲ್ಲ...ಜೀವನದ ಪ್ರತಿ ಹಾದಿಯನ್ನು ನಿಭಾಯಿಸಲು, ಮನಸು ಸದೃಢವಾಗಿಸಲು ದಾರಿದೀಪವಾದ ಅನೇಕ ಮಹಾನ್ ಆತ್ಮಗಳ ಪುನಃ ಸ್ಮರಣೆ ಮಾಡಿದೆ. ಹಾಂ, ಪ್ರತೀದಿನ ಬೆಳಿಗ್ಗೆ ಏಳುವಾಗ ಮತ್ತು ಮಲಗುವ ಮೊದಲು ನನ್ನೊಡೆಯ ನಾಮದ ಜೊತೆಗೆ ಇವರನ್ನೂ ಸ್ಮರಿಸುವುದನ್ನು ತಪ್ಪಿಸುವುದಿಲ್ಲವಾದರೂ ಇವತ್ತಿನ ದಿನ ಇನ್ನೊಮ್ಮೆ ಹಳೆದಿನಗಳನ್ನು ಮೆಲುಕಿಸುವಂತೆ ಪ್ರೇರೇಪಿಸಿತು.  ಬದುಕಿನ ಮೊದಲ ೧೧ ವರ್ಷ...ಇಂದಿನ ನನ್ನ ನಿಲುವಿಕೆಗೆ, ನನ್ನ ತತ್ವಗಳಿಗೆ ಆಧಾರ. ಮತ್ತೆ ೩೩ ವರ್ಷ ಬರೇ ಉಸಿರಾಟವಾಡಿದ್ದು...ಕೆಲವೊಂದು ಸಿಹಿನೆನಪುಗಳ ಹೊರತು,,,,, ಬಾಳಿನ ಪುಟಗಳು ಬರೇ ಖಾಲಿ..ಮತ್ತೆ ಆ ಸುವರ್ಣ ದಿನಗಳು ಮರಳಿ ಬಂದದ್ದು ಈ  ೨,೩ ವರ್ಷದಲ್ಲೇ!!!  

 ಬದುಕಿನ ಪ್ರತಿಯೊಂದು ಹಾದಿಯಲ್ಲಿ  ದಾರಿದೀಪವಾದ ಹಲವು ಜ್ಯೋತಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು!

ಈ ಬರಹಗಳು ನಾನು ೨೦೦೭ ಮತ್ತು ೨೦೧೧ರಲ್ಲಿ ಸಂಪದದಲ್ಲಿ ಪ್ರಕಟಿಸಿದವುಗಳು...ಇಂದಿಗೂ ಪ್ರಸ್ತುತವೆನಿಸಿ ಹಾಕುತ್ತಿದ್ದೇನೆ!


    
 2007
             ­-ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ? ಇದ್ದರೂ ಇರಬಹುದು......ಏನಿದ್ದರೂ ಈ ಮಕ್ಕಳು ನನ್ನಲ್ಲಿ ಸುಪ್ತವಾಗಿದ್ದ ನನ್ನ ಗುರುಗಳ ಮೇಲಿನ ಭಕ್ತಿ, ಗೌರವ ಹಾಗೂ ಕೃತಜ್ಞತೆಯನ್ನು ಈ ಮೂಲಕ ಅರ್ಪಿಸಲು ಪ್ರೇರಣೆಯಾಗಿದ್ದರೆ! ಪ್ರಪಂಚದ ಎಲ್ಲಾ ಗುರುಗಳಿಗೆ ನನ್ನ ವಂದನೆಗಳು. ವಿಶೇಷವಾಗಿ ನನಗೆ ಕಲಿಸಿದ ಗುರುಗಳನ್ನು ನಾನು ಈದಿನ ಸ್ಮರಿಸಿ ನನ್ನ ಕೃತಜ್ಞತೆಯನ್ನು ಈ ಮೂಲಕ ತೋರಿಸಲು ಆಶಿಸುತ್ತೇನೆ. ಬಾಲವಾಡಿಯಿಂದ ೫ನೇ ತರಗತಿಯವರೆಗೆ ಕಲಿಸಿದ ಸುಶೀಲಾ, ರತ್ನ ಟೀಚರ್ ಇವರಿಂದ ಕಲಿತ ಪಾಠ ಪ್ರೈಮರಿ ತರಗತಿಯಲ್ಲಿ ಕಳೆದ ಕಾಲವನ್ನು ಇನ್ನೂ ಹಸಿಯಾಗಿಡಲು ಕಾರಣವಾಯಿತು. ಇವರಿಬ್ಬರ ಜೊತೆಗೆ ನನಗೆ ಹೈಸ್ಕೂಲಿನಲ್ಲಿ ಕಲಿಸಿದ ಮುಕ್ತಾ, ರಾಧ, ದಮಯಂತಿ, ಶಾರ್ಲೆಟ್, ರಾಮಪ್ಪ, ನಾರಾಯಣ ತಂತ್ರಿ,ಮೊದಲಾದವರೂ ನನ್ನ ಮುಂದಿನ ಶಿಕ್ಷಣಕ್ಕೆ ಹಾಕಿಕೊಟ್ಟ ಅಡಿಪಾಯವನ್ನು ನಾನೆಂದಿಗೂ ಮರೆಯಲಾರೆ. ಪಿಯುಸಿ ಹಾಗು ಕಾಲೇಜಿನಲ್ಲಿ ಕಲಿಸಿದ ಬಾಲಚಂದ್ರ ರಾವ್, ಚಂದ್ರಶೇಖರ್, ಶೆಣೈ ಸರ್, ಸ್ವರ್ಣಾ ಮೇಡಮ್, ಮುಡಿತಾಯಾ ಸರ್, ಆಚಾರ್ಯ ಸರ್, ....... ಇನ್ನೂ ಪ್ರತ್ಯೇಕ್ಷವಲ್ಲದೇ ಅನೇಕ ಪರೋಕ್ಷ ಗುರುಗಳನ್ನು ಸ್ಮರಿಸಿ, ಈ ದಿನವನ್ನು ಶಿಕ್ಷರಿಗೆ ಅರ್ಪಿಸಿದ ರಾಧಾಕೃಷ್ಣರಿಗೆ ನನ್ನ ಹಾರ್ಧಿಕ ಅಭಿನಂದನೆಗಳನ್ನು ಮತ್ತು ಕೃತಜ್ಞತೆಯನ್ನು ಆರ್ಪಿಸುತ್ತೇನೆ! ಗುರು--- ಈ ಶಬ್ದಕ್ಕೆ ಎಷ್ಟು ಮಹತ್ವವಿದೆಯಲ್ಲವೇ? ಗು ಅಂದರೆ ಕತ್ತಲೆ, ರು ಅಂದರೆ ಕತ್ತಲೆಯನ್ನು ದೂರಮಾಡುವವ. ಅಂದರೆ ಬೆಳಕನ್ನು ತೋರಿಸುವವ. ತಾಯಿಯ ನಂತರ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖವಾದ ಪಾತ್ರವನ್ನು ಗುರು ವಹಿಸುತಾನೆ! ನಮ್ಮ ಮುಂದಿನ ಜೀವನಕ್ಕೆ ನಾಂದಿಯನ್ನು ಹಾಕುತ್ತಾನೆ. ಭದ್ರವಾದ ಅಡಿಪಾಯವಾದರೆ ಮುಂದಿನ ಜೀವನದಲ್ಲಿ ಬರುವ ಎಲ್ಲಾ ಅಡೆಚಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ. 

            तस्मै श्री गुरुभ्यॊ नमः||

20011
- ಮತ್ತೆ ಬಂದಿದೆ ಗುರುಗಳ ದಿನ! ನನ್ನಲ್ಲಿ ನನ್ನ ಗುರುಗಳ ಬಗ್ಗೆಯ ಕೃತಜ್ಞತಾ ಭಾವ ಇನ್ನು ಇನ್ನು ಹೆಚ್ಚಾಗುತಿದೆಯೇ ಹೊರತು ಒಂಚೂರು ಕಮ್ಮಿಯಾಗಿಲ್ಲ. ಕಾರಣ ನನ್ನ ಇಂದಿನ ಏಳಿಗೆಗೆಯ ಸಂಪೂರ್ಣ ಶ್ರೇಯ ನನ್ನ ಗುರುಗಳಿಗೇ ಸಲ್ಲುತ್ತದೆ. ಮತ್ತೆ ಗುರು ಚರಣಗಳಿಗೆ ನನ್ನ ದೀರ್ಘ ಪ್ರಣಾಮಗಳು! ಅದರಲ್ಲೂ ಬಿ. ಜಿ. ಮೊಹಮ್ಮದ್ ಮಾಸ್ಟ್ರು ಅತ್ಯಂತ ಅಲ್ಪ ಸಮಯದಲ್ಲಿ ಚಿತ್ರಕಲೆಯ ರಹಸ್ಯವನ್ನು ತಿಳಿಸಿ ಅವರಿಗೆ ಚಿರಋಣಿಯಾಗಿರುವಂತೆ ಮಾಡಿದ್ದಾರೆ. ಇಂದು ನಾನು ಅವರದೇ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಚಿತ್ರ ಕಲೆಯನ್ನು ಕಲಿಸುವ ರೀತಿ ಅವರಿಗೆ ಚೆನ್ನಾಗಿ ಕರಗತವಾಗಿತ್ತು.....ಎಷ್ಟೋ ಮಂದಿ ಸೂಪರ್ ಪೈಂಟಿಗ್ ಮಾಡುತ್ತಾರೆ...ಆದರೆ ಕಲಿಸಲು ಬರುವುದಿಲ್ಲ...ನನಗೆ ತಿಳಿದ ಹಾಗೆ ಅವರು ಅಜಾತ ಶತ್ರುಗಳಾಗಿದ್ದರು...ಬಹಳ ಜನಪ್ರಿಯರಾಗಿದ್ದರು...ಎಂದಿಗೂ ಪ್ರಶಸ್ತಿಗಳಿಗಾಗಿ   ಲಾಬಿ ಮಾಡಿರಲಿಲ್ಲ...ಅದರಿಂದ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಮಾನ ಸಮ್ಮಾನಗಳು ದೊರಕಿಲ್ಲ....ಆದರೂ ಅವರ ಶಿಷ್ಯರು ಅವರಿಗೆ ತಮ್ಮ ಚಿತ್ರಗಳ ರೂಪದಲ್ಲಿ ನ್ಯಾಯ ಸಲ್ಲಿಸಿದ್ದಾರೆ...ಸಲ್ಲಿಸುತ್ತಿದ್ದಾರೆ... ಮತ್ತು ಸಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ...ಅವರ ಜೀವಿತದ ಕೊನೆಯ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು.  
               ಮಷ್ಟ್ರಾ ನಮಸ್ಕಾರು!!!!       ಕೃತಜ್ಞತೆಯನ್ನು ನನ್ನ ಈ ಚಿತ್ರದ ಮೂಲಕ ಸಲ್ಲಿಸುತ್ತೇನೆ.


ಹೀರೆಕಾಯ ಸಿಪ್ಪೆಯ ಚಟ್ನಿ!




   ದಪ್ಪ ಚರ್ಮದಂತಿರುವ ಹೀರೆಕಾಯಿಯ ಸಿಪ್ಪೆಯನ್ನು ತೆಗೆದೇ ಅದರ ಉಪ್ಕರಿ ಅಥವಾ ಸಾಂಬಾರನ್ನು ತಯಾರಿಸಬೇಕಾಗುತ್ತೆ. ಹೆಚ್ಚಿನವರು ಅದರ ಸಿಪ್ಪೆ ಸತ್ವಯುಕ್ತವಾಗಿದೆ ಎಂದು ಅರಿತರೂ ಹೇಗೆ ಏನು ತಯಾರಿಸಬೇಕೆಂಬ ಅರಿವಿಲ್ಲದೆ ಅದನ್ನು ಬಿಸಾಡಿಬಿಡುತ್ತಾರೆ. ಹಳೆಜಮಾನದವರು ತಂಬಳಿ, ಚಟ್ನಿ ತಯಾರಿಸುತ್ತಾರೆ. ನಮ್ಮ ಅಮ್ಮನೂ ಅದರ ಚಟ್ನಿ ತಯಾರಿಸುತ್ತಾರೆ..ಈವಾಗ ನಾನೂ...ಬೇರೆಯವರು ಚಟ್ನಿಯನ್ನು ಹೇಗೆ ತಯಾರಿಸುತ್ತಾರಪ್ಪಾ ಅಂತ ಕುತೂಹಲದಿಂದ ಗೂಗಲ್ ಮಾಡಿದರೆ ಹತ್ತು ಹಲವು ಬಗೆಯ ನಮೂನೆಗಳು ದೊರೆತರೂ ನಮ್ಮ ಅಮ್ಮನ ಹಾಗೆ ಬೆಲ್ಲ ಹಾಕಿ ಮಾಡುವ ನಮೂನೆ ಕಾಣಲಿಲ್ಲ..ಸರಿ ಹೇಗೂ ಅಡುಗೆ ಅಂತ ಪೋಸ್ಟ್ ಸುರುಮಾಡಿದ್ದೇನಲ್ಲವೆ..ಅದರಲ್ಲಿ ಇದನ್ನೂ ಹಾಕಿಬಿಡುವ..ಅಲ್ಲದೆ ಇವತ್ತು ಶಿಕ್ಷರ ದಿನಾಚರಣೆ ಅಂತ ಕಾಲೇಜಿನಲ್ಲಿ ಏನೋ ಸಮಾರಂಭವಿರುವುದರಿಂದ ರಜೆನೂ ಇದೆ...


ಚಿತ್ರ ಕೃಪೆ: ಅಂತರ್ಜಾಲ

ಚಿತ್ರ ಕೃಪೆ: ಅಂತರ್ಜಾಲ



ಸಾಮಾಗ್ರಿಗಳು:
ಹುಂ, ಹೀರೆಕಾಯಿ ಚಟ್ನಿ ಅಂದ ಮೇಲೆ ಹೀರೆಕಾಯಿ ಬೇಕೇ ಬೇಕಲ್ವಾ...
ಚಿಟಿಕೆ ಹಿಂಗು
ರುಚಿಗೆ ತಕ್ಕಷ್ಟು ಬೆಲ್ಲ
ತೆಂಗಿನಕಾಯಿ ತುರಿ ( ನಾಲ್ಕೈದು ಚಮಚ)
ಕೆಂಪು ಮೆಣಸಿನಕಾಯಿ( ೪,೫)
ಹುಣಸೆ ಹಣ್ಣು
ಉಪ್ಪು
ತಯಾರಿಕಾ ವಿಧಾನ:
ಮೊದಲು ಸಿಪ್ಪೆಯನ್ನು ಹುರಿದು ಬಾಡಿಸಿಕೊಳ್ಳಿ. ಸಿಪ್ಪೆ ಇದೆ ಅಂತ ತುಂಬಾ ಸಿಪ್ಪೆ ಹಾಕಬೇಡಿ...ರುಚಿ ಕೆಡುತ್ತೆ.  ಹಾಗೆ ಫಿಜ್‍ನಲ್ಲಿ ತೆಗೆದಿಟ್ಟು ಇನ್ನೊಂದು ದಿನ ತಂಬುಳಿ ಮಾಡಿ. ಹಾಗೆಯೇ ತೆಂಗಿನ ತುರಿಯನ್ನು ಒಂಚೂರು ಹುರಿಯಿರಿ. ಹಿಂಗನ್ನು ಎಣ್ಣೆಯಲ್ಲಿ ಒಂದಿಷ್ಟು ಆಚೆ ಇಚೆ ಮಾಡಿ ಹುರಿಯಿರಿ. ನಂತರ ಎಲ್ಲಾ ಸಾಮಾಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ...ಸ್ವಲ್ಪ ಸ್ವಲ್ಪವೇ ನೀರು ಹಾಕಿ ರುಬ್ಬಿ. ನಯವಾದ ನಂತರ ರುಚಿ ನೋಡಿ, ಉಪ್ಪು, ಬೆಲ್ಲ, ಖಾರ ಬೇಕಾದರೆ ಸೇರಿಸಿ. ನಮ್ಮ ಮನೆಯಲ್ಲಿ ಒಂದಿಷ್ಟು ಖಾರ ಹೆಚ್ಚು ಬೇಕು..ನಿಮ್ಮ ನಿಮ್ಮ ಮನೆಯವರ ರುಚಿ ನೋಡಿ ತಯಾರಿಸಿ. ಇವತ್ತು ನಮ್ಮ ಮನೆಯಲ್ಲಿ ಹೀರೆಕಾಯಿ ಚಟ್ನಿ...ನನಗೆ ತುಂಬಾನೆ ಇಷ್ಟ! ನಾಲಗೆಗೂ ರುಚಿ, ಜೀವಕ್ಕೂ ಹಿತ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...