ಎಲ್ಲೆಲ್ಲೂ ಹಾಹಾಕಾರ!!! ಪೆಟ್ರೋಲ್ ಬೆಲೆ ಹೆಚ್ಚಿದೆ...ಸೃಜನಶೀಲರಿಗೆ ಒಂದು ನೆವನ..ಹೊಸ ಹೊಸ ಫಾರ್ವರ್ಡ್ ಮೆಸೇಜ್ಗಳು, ಜೋಕುಗಳು ಹುಟ್ಟಿಕೊಂಡವು. ಮತ್ತೆ ಕೆಲವ್ರು ಜಪಾತ್ರ, ಗಿಪಾತ್ರ..ಹೀಗೆ ಹಾಗೆ ಅಂತ ನಮ್ಮ ವಿಜ್ಞಾನಿಗಳನ್ನು, ಶೋಧಕರನ್ನು ಹಂಗಿಸಲು, ಪ್ರಶ್ನಿಸಲು ಶುರುಮಾಡಿದರು..ಅಂತೂ ಇಂತೂ ಎರಡು ದಿನ ಎಲ್ಲರೂ ಬೆಲೆ ಏರಿಕೆ ಬಗ್ಗೆ ಮಾತಾಡಿಕೊಂಡರು. ಸರಿ, ಈಗ ಎಲ್ಲರೂ ತಣ್ಣಗೆ ಅವರವರ ವಾಹನದಲ್ಲಿ ಹಿಂದಿನ ಹಾಗೆಯೇ ಪೆಟ್ರೋಲ್ ಹಾಕಿಕೊಂಡು ತಿರುಗುತ್ತಿದ್ದಾರೆ. ಅಲ್ಲ, ಒಂದಿಷ್ಟು ಆಲೋಚನೆ ಮಾಡಿ ನೋಡಿರಂತೆ..ಪೆಟ್ರೋಲ್ ಬೆಲೆ ಹೆಚ್ಚಾಗುತ್ತಲೇ ಹೋಗುತ್ತಿದೆ..ಹಾಗಂತ ಜನರು ವಾಹನ ತೆಗೆದುಕೊಳ್ಳುವುದು ಕಡಿಮೆಯಾಗಿದೆಯೇನು? ನಾವು ಕಾಲೇಜಿಗೆ ಹೋಗುತ್ತಿರುವಾಗ ನನಗೆ ನೆನಪಿದ್ದ ಹಾಗೆ ಕೆಲವು ಅತೀ ಶ್ರೀಮಂತರ ಮಕ್ಕಳಿಗೆ ಮಾತ್ರ ಸ್ಕೂಟರ್ ಚಲಾಯಿಸಿಕೊಂಡು ಹುಡುಗಿಯರನ್ನು ಇಂಪ್ರೆಸ್ ಮಾಡಲು ಸಾಧ್ಯವಿತ್ತು..ಆದರೆ ಈಗ ಹೆಚ್ಚಿನ ಮಕ್ಕಳ ಬಳಿ ಅವರದ್ದೇ ಸ್ವಂತ ವಾಹನವಿದೆ..ಹೇಳಿ, ಇನ್ನೂ ಸಂಪಾದಿಸಲು ಪ್ರಾರಂಭಿಸದವರಿಗೆ ವಾಹನ ಅಗತ್ಯವಿದೆಯೇ...ಧಾರಾಳವಾಗಿ ಬಸ್ಸುಗಳಲ್ಲಿ ಓಡಾಟ ಮಾಡಬಹುದಲ್ಲಾ!!!..ಅಪ್ಪಾಪ್ಪಾ ಏನೂ ಪ್ರೀತಿ ಈಗಿನ ಅಪ್ಪ ಅಮ್ಮಂದಿರಿಗೆ, ಇನ್ನೂ ಲೈಸೆನ್ಸ್ ಸಿಗದ ಎಳೆ ಹುಡುಗ ಹುಡುಗಿಯರೂ ತಮ್ಮ ತಮ್ಮ ಕೋಚಿಂಗ್ ಕ್ಲಾಸಿಗೆ ಸ್ಕೂಟಿಯಲ್ಲೇ ಬರೋದು...ಅಷ್ಟು ಮಾತ್ರ ಅಲ್ಲ..ಅವರು ಸುಮ್ಮನೆ ಮನೆಗೆ ಹೋಗ್ತಾರಾ...ಇಲ್ಲ ಹಿಂದೆ ತಮ್ಮ ತಮ್ಮ ಗರ್ಲ್ ಫೆಂಡುಗಳನ್ನು ಕೂರಿಸಿ ಸಮ್ಮನೆ ರೈಡೂ ಮಾಡ್ಲಿಕ್ಕುಂಟು! ಅಂದಮೇಲೆ ಸುಮ್ಮನೆ ಯಾಕ್ರೀ ಈ ಹಾರಾಟ ಗೀರಾಟ!!! ನಿಜವಾಗಿ ಈ ಬೆಲೆ ಏರಿಕೆಯಿಂದ ಪೆಟ್ಟು ತಿನ್ನೋದು ಬಡತನದ ರೇಖೆಗಿಂತ ಕೆಳಗಿರೋರು....ಅಂದರೆ ದಿನಗೂಲಿಯವರು...ನಾನು ನೋಡಿದ್ದೇನೆರೀ..ಪಾಪ ಬಡಕೊಳ್ಳುತ್ತಾರೆ ರೇಶನ್ ಬೆಲೆ ಹೆಚ್ಚಿದೆಯಂತ..ತರಕಾರಿ, ಅಕ್ಕಿ, ಎಣ್ಣೆ, ಕಾಳುಗಳ ಬೆಲೆ ಹೆಚ್ಚಿ ಇವರಿಗೆ ತೊಂದರೆಯಾಗಿದೆ..ಅವರಲ್ಲೂ ಕೆಲವರಿದ್ದಾರೆ...ಸಿಕ್ಕ ಹಣವನ್ನು ಸಹ ಶೇಂದಿ, ಮೊಬೈಲ್ ಮೇಲೆ ಉಡಾಯಿಸುತ್ತಾರೆ. ಅಮ್ಮನ ಹಿತ್ತಲಲ್ಲಿರುವ ರೂಮುಗಳಲ್ಲಿ ಈ ಬಳ್ಳಾರಿ ಕಡೆಯವರು ವಾಸವಾಗಿದ್ದಾರೆ..ಅಮ್ಮನಿಗೆ ಈ ಹುಡುಗರ ಮೇಲೆ ಕೋಪ...ಮೊಬೈಲ್ ಮೇಲೆ ಹಣ ಹಾಕೋದು ಹೆಚ್ಚಾಗಿದೆಯಂತ. ಸಿಕ್ಕಿದಾಗಲೆಲ್ಲ ಉಪದೇಶ ಕೊಡ್ತಾ ಇರ್ತಾರೆ...ಅವರೂ ಅಮ್ಮನ ಕಣ್ಣು ತಪ್ಪಿಸಿ ತಿರುಗ್ತಾರೆ!
ಬಿಡಿ, ನಾನು ಯಾಕಪ್ಪಾ ಸುಮ್ಮನೆ ತಲೆಕೆಡಿಸಿಕೊಳ್ಳೊದು. ಅಂದ ಹಾಗೆ ನಾನು ಬರಿಯಲಿಕ್ಕೆ ಹೊರಟದ್ದು ಬೇರೆ.. ತರಕಾರಿ ಬೆಲೆಗಳೆಲ್ಲಾ ಹೆಚ್ಚಿದೆ ಅಂತ ಜನರು ಪಿರಿ ಪಿರಿ ಮಾಡ್ತಾ ಇರ್ತಾರಲ್ಲವಾ..ನನಗೂ ಕೋಪ ಬರುತ್ತೇರೀ ಮಾರ್ಕೆಟಿಗೆ ಹೋದಾಗ ಆ ಬಾಯಮ್ಮ ಒಂದಿಷ್ಟು ಕೊತ್ತಂಬರಿ ಸೊಪ್ಪಿಗೂ ಹೇಳಿದ ರೇಟ್ ನೋಡಿ...ನಾನು ಆಕ್ಷೇಪಿಸಿದಕ್ಕೆ ನನಗೇ ರೋಪು ಹಾಕೋದಾ ಅವಳು..ನೋಡಿ ಅಮ್ಮ, ನಿಮಗೆ ಬೇಕಿದ್ರೆ ತಕೊಳ್ಳಿ..ನಮಗೆ ಬೇರೆ ಗಿರಾಕಿ ಇದ್ದಾರೆ...ಯಪ್ಪಾ ಇವಳ ಸೊಕ್ಕೇ..ಆದರೆ ಅವಳೆಂದದು ಸುಳ್ಳಲ್ಲ..ನಾನು ನೋಡುತ್ತಿದ್ದಂತೇ ಅವಳು ಹೇಳಿದ ಕ್ರಯಕ್ಕೆ ಮಾರಾಟ ಆಯಿತು..ನಾನು ಬೆಪ್ಪು ತಕ್ಕಡಿಯಂತೆ ಮನೆಗೆ ಬಂದೆ. ಏನಿದ್ದರೂ ಅವಳ ಮಾತು ನನಗೆ ಸವಾಲಿನಂತೆ ತೋರಿತು..ಬುದ್ಧಿ ಕಲಿಸ್ತೀನಿ, ಇರು ನಿಂಗೆ ಅಂತ ಸುಮಾರು ದಿನದಿಂದ ಕೀಲಿ ಹಾಕಿದ್ದ ನನ್ನ ಮಂಡೆಗೆ ಸ್ವಲ್ಪ ಎಣ್ಣೆ ಹಾಕಿ ಮಾಲಿಶ್ ಮಾಡಿದೆ..ಹುರ್ರೇ...ಅರೇ ನಾನ್ಯಾಕೆ ಬಡವನಯ್ಯಾ... ಫಲ ಭರಿತ ಅಮ್ಮನ ಹಿತ್ತಲಿನ ಬಳಿ ನನ್ನ ವಾಸವಿರಲು!!! ನುಗ್ಗೆ ಸೊಪ್ಪು ಮತ್ತು ಹಲಸಿನ ಬೀಜದ ಉಪ್ಕರಿ...ಜೀವಕ್ಕೂ ಒಳ್ಳೆಯದು..ಹಣದ ಉಳಿತಾಯವೂ ಆಯಿತು...ಡಬ್ಬಲ್ ಧಮಾಕಾ!!! ಬೆಲ್ಲ ಖಾರ ಚೆನ್ನಾಗಿ ಹಾಕಿ ಮಾಡಿಬಿಟ್ಟೆ ಉಪ್ಕರಿ. ಮಕ್ಕಳಿಗೂ ಹಿಡಿಸಿತು. ನುಗ್ಗೆ ಸೊಪ್ಪು ಬಹಳ ಒಳ್ಳೆಯದು. ಅಲ್ಲದೆ ಒಂದಿಷ್ಟು ಹಲಸನ್ನು ಉಪ್ಪು ನೀರಿನಲ್ಲಿ ಹಾಕಿಟ್ಟೆ...ನಮ್ಮ ಕೊಂಕಣಿಯಲ್ಲಿ ಸಾಲ ಅಂತ ಕರೆಯುತ್ತಾರೆ...ಇವತ್ತು ಅದರ ಉಪ್ಕರಿ..ಸುವರ್ಣಗಡ್ಡೆ ಹಾಕುವ ಬದಲು ಹಲಸಿನ ಬೀಜ ಹಾಕಿ ಬೇಳೆ ಸಾಗು ಮಾಡೋದು. ಬಸಳೆ, ಹಸಿ ಮೆಣಸಿನ ಕಾಯಿ ಬೆಳೆದಿದೆ. ಉಪ್ಪಿಗೆ ಹಾಕಿದ ಮಾವಿನ ಕಾಯಿಯ ಗೊಜ್ಜು ನಾಳೆ...ಹೀಗೆ ಹಿತ್ತಲು ಇದ್ದರೆ ನಮಗೆ ಬೇಕಾದುದನ್ನು ಬೆಳೆಯಬಹುದು. ಪ್ರತಿಯೊಬ್ಬರು ಹೀಗೆ ಮಾಡಿದರೆ ಬೆಲೆ ಏರಿಕೆ ಒಂದು ಹಿಡಿತಕ್ಕೆ ಬರುವುದರಲ್ಲಿ ಸಂಶಯವಿಲ್ಲ..ಆದರೆ ನಮಗೆಲ್ಲಾ ಮೈಗಳ್ಳತನ..ಬಗ್ಗಿ ಕೆಲಸ ಮಾಡಲು ಕಷ್ಟ..ಹಾಗಾಗಿ ಬೆಲೆ ಏರುತ್ತಲೇ ಹೋಗೋದು ಸಹ ಗ್ಯಾರಂಟಿ!!
2 comments:
ನೀವು ಹೀಗೆಲ್ಲಾ ಬರೆದು ಇಲ್ಲಿ ಕಾಂಕ್ರೀಟ್ ಕಾಡಿನಲ್ಲಿರುವ ನಮಗೆ ಎಷ್ಟೆಲ್ಲಾ ಹೊಟ್ಟೆ ಉರಿಸುತ್ತೀರಿ ಗೊತ್ತಾ? :(
ಮತ್ತೆ ಬರೆದದ್ದು ಸಾರ್ಥಕ ಆಯ್ತಲ್ಲ ವಿಕಾಸ್, ಹೊಟ್ಟೆ ಉರಿತಿದ್ರೆ ಅದಕ್ಕೂ ಮದ್ದು ಉಂಟು ಮಹರಾಯ..ಅದನ್ನೂ ಹೇಳ್ತೇನೆ. . ವೀಕೆಂಡ್ ರಜದಲ್ಲಿ ತೋಟ ಮಾಡುವುದಕ್ಕೆ ಶುರು ಮಾಡು..ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ಹಸಿ ಮೆಣಸಿನ ಕಾಯಿ ಇದೆಲ್ಲಾ ಬೆಳಿಲಿಕ್ಕೆ ಸಣ್ಣ ಜಾಗ ಸಾಕು.. ಮನೆಯಲ್ಲಿದ್ದ ಹಳೆ ಪ್ಲಾಸ್ಟಿಕ್ ಡಬ್ಬಗಳಲ್ಲಿ ಮಣ್ಣು ಹಾಕೋದು..ನೆಡುವುದು.....ಮಾಡಿ ನೋಡು..ಮತ್ತ ನನಗ ರಿಸಲ್ಟ್ ಹೇಳ್ಲಿಕ್ಕೆ ಮರೀಬ್ಯಾಡ!
Post a Comment