ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 May, 2012

ಹೊಟ್ಟೆ ರಿಪೇರಿ ಮಾಡ್ಲಿಕ್ಕೆ ಮನೆ ಮದ್ದು!!!




     




                 


             ಹಲಸಿನ ಕಾಯಿ ತಿನ್ನಲು ಬಹಳ ರುಚಿ ನಿಜ, ಆದರೆ ಅಪರೂಪಕ್ಕೆ ಸಿಗೋದು ಅಂತ ಮಿತಿ ಮೀರಿ ತಿಂದರೆ ಅದರ ಪರಿಣಾಮ ತಿಳಿಯಲು ಬಹಳ ಹೊತ್ತು ಬೇಕಿಲ್ಲ..ಹೊಟ್ಟೆಯೊಳಗಿಂದ ಬರುವ ಗುರು ಗುರು ಶಬ್ದ ಮುಜುಗರ ಜೊತೆಗೆ ನೋವು ಕೊಡುತ್ತೆ...ಹಲಸಿನ ಹಣ್ಣು, ಮಾವಿನ ಹಣ್ಣು, ಜೊತೆಗೆ ಜೀವು ಗುಜ್ಜೆ ಎಲ್ಲವೂ ಬೆಳೆಯುವುದರಿಂದ ನಮ್ಮ ಮನೆಯಲ್ಲಿ ಈ ಬೇಸಿಗೆ ಹಣ್ಣುಗಳ ಕಾರುಬಾರು ಎಷ್ಟಿರಬಹುದೆಂದು ನಿಮಗೀಗಾಲೇ ಊಹೆಗೆ ಬಂದಿರಬಹುದು. ಅದೃಷ್ಟವಶಾತ್, ನಮ್ಮ ಅಮ್ಮ ಮನೆ ಮದ್ದು ತಯಾರಿಸುವುದರಲ್ಲಿ ಬಹಳ ನಿಪುಣೆ..ನಮ್ಮಲ್ಲಿ ನನ್ನ ಪತಿ ಬಿಟ್ಟರೆ, ನಾವೂ ಯಾರು ಅಲೋಪತಿ ವೈದ್ಯರ ಬಳಿಗೆ ಹೋಗುವುದು ವಿರಳ...ನನಗೆ ನೆನಪಿದ್ದ ಹಾಗೆ ಬಹುಶಃ ೬ರೋ, ಏಳೋ ವರ್ಷಗಳ ಹಿಂದೆ ಈ ಬುದ್ಧಿವಂತ ಹಲ್ಲಿನ {ವಿಸ್ಡಮ್ ಟೀತ್:-)} ಮೇಲೆ ಮಾಂಸ ಬೆಳೆದು ತೊಂದರೆ ಕೊಟ್ಟಿದಾಗ ಅದನ್ನು ತೆಗೆಸಲು ಹೋಗಿದ್ದೆ..ಮತ್ತು ೫ ವರ್ಷಗಳ ಹಿಂದೆ ನನ್ನ ಮಗನಿಗೆ ಮಲೇರಿಯಾ ಆದಾಗ ವೈದ್ಯರ ಸಹಾಯ ಅನಿವಾರ್ಯವಾಗಿತ್ತು. ನಿಮಗೊಂದು ಚಿಕ್ಕ ಕತೆನೂ ಹೇಳ್ತೇನೆ. ನನ್ನ ಮಗಳು ಫಿಸಿಯೋತೆರಪಿ ಕಾಲೇಜಿಗೆ ಹೊಸದಾಗಿ ಸೇರಿದಾಗಿನ ಸಂಗತಿ..... ಮೊದಲ ದಿನ  ಲೆಕ್ಚರ್‌ರ ಪ್ರಶ್ನೆ ಅವಳಿಗೆ...ನೀವು ವೈದ್ಯರ ಬಳಿ ಹೋದಾಗ ಅವರು ನಿಮ್ಮನ್ನು ಮೊದಲು ಹೇಗೆ ಪರೀಕ್ಷಿಸುತ್ತಾರೆ......ನನ್ನ ಮಗಳು ಕಕ್ಕಾಬಿಕ್ಕಿ..ಅವಳು ವೈದ್ಯರ ಬಳಿಗೆ ಹೋದರೆ ತಾನೆ! ಸುಮ್ಮನೆ ಬೆಪ್ಪುತಕ್ಕಡಿಯ ಹಾಗೆ ನಿಂತಳಂತೆ..ಮನೆಗೆ ಬಂದವಳು ನನ್ನ ಮೈಮೇಲೆ ತನ್ನ ಮಾತಿನ ಮಳೆ ಸುರಿಸಿದಳು...ನನಗೆ ಇವಳ ವಾಗ್ಝರಿಯ ಕಾರಣ ಗೊತ್ತೇ ಆಗಲಿಲ್ಲ..ಕೇಳಿಸಿದ್ದು ಒಂದೇ, ಎಲ್ಲ ನಿನ್ನಿಂದ ಮತ್ತು ಅಜ್ಜಿಯಿಂದ ..ಅಷ್ಟೇ! ಕೊನೆಗೆ ಅವಳೇ ಸಮಾಧಾನ ತಂದುಕೊಂಡು ನಡೆದ ಸಂಗತಿ ತಿಳಿಸಿದಳು..ನನಗೋ ತಡಿಯಲಾರದ ನಗು, ಜೊತೆಗೆ ಹೆಮ್ಮೆನೂ..ಈ ಕಾಲದಲ್ಲಿ ನಿಮಗೆ ಇಂತಹ ಜನರು ಎಲ್ಲಿಯಾದರೂ ನೋಡಲು ಕಾಣ್ತಾರಾ? ಸಣ್ಣ ಸಣ್ಣ ತೊಂದರೆಗಳಿಗೂ ವೈದ್ಯರ ಬಳಿ ಅಥವಾ ಮೆಡಿಕಲ್ ಶಾಪ್ ( ಈಗೀಗ ಮೆಡಿಕಲ್ ಶಾಪಿನಲ್ಲಿ ಕೆಲಸ ಮಾಡುವವರೂ ಅರ್ಧ ವೈದ್ಯರಾಗಿರುತ್ತಾರೆ..ಚಿಕ್ಕ ಪುಟ್ಟ ತೊಂದರೆಗಳಿಗೆ ಅವರೇ ಮದ್ದನ್ನು ಕೊಟ್ಟು ವೈದ್ಯರ ಖರ್ಚು ಉಳಿಸುತ್ತಾರೆ.)ಹೋಗದೇ ಜನರಿಗೆ ಸಮಾಧಾನ ಇರೋದಿಲ್ಲ.

      ಸರಿ, ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ಈ ಮನೆ ವೈದ್ಯ ನಮಗೆ ಬರುವ ಸಣ್ಣ ಪುಟ್ಟ ತೊಂದರೆಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ  ಅಂತ ಹೇಳಲು..ಸಾಧಾರಣವಾಗಿ ನನಗೆ ಆರೋಗ್ಯ ಕೈಕೊಡುವುದು ತುಂಬಾ ಕಡಿಮೆ. ನಮ್ಮಮ್ಮ ತಯಾರಿಸುವ ಗಿಡ ಮೂಲಿಕೆಯ ಕಷಾಯ ಸೇವನೆಯಿಂದಲೇ ನಮ್ಮ ರೋಗ ನಿರೋಧಕ ಶಕ್ತಿ ಚೆನ್ನಾಗಿ ಕೆಲಸ ಮಾಡುತ್ತಿದೆ ಅಂತ ನನ್ನ ನಂಬಿಕೆ.  ಅಲ್ಲದೆ ೭೦ ದಾಟಿದ ನನ್ನ ಅಪ್ಪ, ೬೦ ದಾಟಿದ ಅಮ್ಮ ಇಬ್ಬರೂ ಯಾವ ಗುಳಿಗೆಯ ಸೇವನೆಯಿಲ್ಲದೆ ಸುಖೀ, ಆರೋಗ್ಯಮಯ ಜೀವನ ನಡೆಸುತ್ತಿದ್ದಾರೆ.

      ಆದರೂ ನಾನು ಮೊನ್ನೆ ತಿಂದ ಹಲಸಿನ ಹಣ್ಣು ತನ್ನ ಕಾರಬಾರು ತೋರಿಸಲು ಹಿಮ್ಮೆಟ್ಟಲಿಲ್ಲ..ಅಮ್ಮನ ಬಳಿ ಓಡಿದೆ. ಅವರು ಹೇಳಿದ ಹಾಗೆ ಮದ್ದು ತಯಾರಿಸಿದೆ...ಅರ್ಧ ಗಂಟೆಯೊಳಗೆ ನಾನು ನಾರ್ಮಲ್!!!  ನಿಮಗೂ ಹೇಳೋಣ ಆ ಮದ್ದಿನ ಗುಟ್ಟು ಅಂತ ಅನಿಸಿತು.. ನನಗೊತ್ತುರೀ..ಇಂತಹ ಮದ್ದುಗಳ ಬಗ್ಗೆ ಅಂತರ್ಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತೆ ಅಂತ...ನೋಡಿದವರು ಓದುತ್ತಾರೆ..ಹಾಗೇ ಮರೆಯುತ್ತಾರೆ..ಯಾರಪ್ಪಾ ಇಂತಹುದೆಲ್ಲ ಮಾಡುತ್ತಾರಪ್ಪಾ..ಸುಮ್ಮನೆ ಗುಳಿಗೆ ನುಂಗುವುದು ಬಹಳ ಇಜ್ಜಿ ತಾನೆ! ಅದೆಲ್ಲಾ ಇರಲಿ, ನಾನಂತೂ ಬರೆಯುತ್ತೇನೆ..ಮಾಡೋದು ಬಿಡೋದು ನಿಮ್ಮಿಷ್ಟ..

       ಪ್ಯಾರಲೆ ಮರದ ಚಿಗುರೆಲೆ ಒಂದಿಷ್ಟು, ಒಂದು ಚಮಚ ಜೀರಿಗೆ, ೨,೩ ಎಸಳು ಬೆಳ್ಳುಳ್ಳಿ, ೨,೩ ಕಪ್ಪುಮೆಣಸು ಎಲ್ಲವನ್ನೂ ಸೇರಿಸಿ ಚೆನ್ನಾಗಿ ಜಜ್ಜಿ..ಮಿಕ್ಸಿಯಲ್ಲೂ ಹಾಕಬಹುದು. ಆ ಹುಡಿಯನ್ನು ತೆಳ್ಳಗೆ ಮಾಡಿದ ಮಜ್ಜಿಗೆಗೆ ಸೇರಿಸಿ. ರುಚಿಗೆ ತಕ್ಕ ಹಾಗೆ ಕಲ್ಲುಪ್ಪು ಸೇರಿಸಿ. ಮಜ್ಜಿಗೆ ಹುಳಿಯಾಗಿರಬಾರದು..ನೀರು ಸೇರಿಸಿದರೆ  ಹುಳಿ ಕಮ್ಮಿಯಾಗುತ್ತೆ.  ಎಷ್ಟು ರುಚಿಯಾಗಿರುತ್ತೆ ಗೊತ್ತಾ!   ಮದ್ದಿಗೆ ಮದ್ದು ಹಾಗೆ ನಾಲಗೆಗೂ ರುಚಿಯಾಗಿರುತ್ತೆ. ಹೊಟ್ಟೆ ಸರಿ ಇದ್ದರೂ ಮಾಡಿ ಕುಡಿಲಿಕ್ಕೆ ಅಡ್ಡಿ ಇಲ್ಲ..ಮಾಡಿ ನೋಡಿ ನಂಗೆ ತಿಳಿಸಿಬಿಡಿ ನಿಮ್ಮ ಅಭಿಪ್ರಾಯ...:-)

5 comments:

Anonymous said...

ಏನೋ ಹೊಸ ರೀತಿ ನಿರೂಪಣೆ, ಇಷ್ಟ ಆಯಿತು
ಮಂಡಿ (ಪೂರ ಕಾಲು) ನೋವಿಗೆ, ತಾಯಿಯವರ ಹತ್ತಿರ suggestion ಕೇಳಕ್ಕ
(ನೋವು ಅಮ್ಮಂಗೆ)

Sheela Nayak said...

ಕಿರಣ್,
ನಿರೂಪಣೆ ಇಷ್ಟ ಆಯ್ತಲ್ಲ. ನನ್ನ ಶ್ರಮ ಸಾರ್ಥಕವಾಯಿತು..ಆದರೆ ಅಮ್ಮನ ಮಂಡಿ ನೋವಿಗೆ ನಮ್ಮಮ್ಮನಲ್ಲಿ ಮನೆ ಮದ್ದು ಇಲ್ವಂತೋ..ಸಾರಿ. ಆದರೂ ವೈದ್ಯರ ಸಲಹೆ ಪಡೆದು ಸಣ್ಣ ಮಟ್ಟದ ಯೋಗಗಳನ್ನೂ, ಪ್ರಾಣಾಯಾಮಗಳನ್ನು ಮಾಡಿದರೆ ಒಳ್ಳೆಯದು. ನೋವಿನ ಎಣ್ಣೆ ಹಾಕಿ ನೀನು ಮಸಾಜ್ ಮಾಡಿದರೆ ಇನ್ನೂ ಪರಿಣಾಮಕಾರಿಯಾಗುವುದು....ಯೋಗ ಗುರುಗಳ ಬಳಿ ಸಲಹೆ ಕೇಳಿ ಮಸಾಜ್ ಮಾಡು.
ದಿನಾ ಒಂದಿಷ್ಟು ನಡಿಗೆ ಒಳ್ಳೆಯದು

Anonymous said...

ಪರವಾಗಿಲ್ಲ ಅಕ್ಕ no probs will try

Godfrey said...

nice.......:)

Godfrey said...

Nice.....:) halasina hannu.....missing:(

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...