ಸುರತ್ಕಲ್ನಲ್ಲಿ ಸಂಜೆ ಸಮಾರಂಭವೊಂದಿತ್ತು. ಅದೇ ನೆವನ ಮಾಡಿ ನಾನು ಅಪರಾಹ್ನವೇ ಮಂಗಳೂರಿನ ಅಮ್ಮನ ಮನೆಗೆ ಮಗನ ಜೊತೆ ಬಂದೆ. ಅದು ದೀಪಾವಳಿಯ ಸಮಯ. ಮೊಮ್ಮಗ ಮತ್ತು ಅಜ್ಜನಿಗೆ ಪಟಾಕಿಯ ಸಂಭ್ರಮ, ನಾನು ಅಡಿಗೆ ಕೋಣೆಯಲ್ಲಿ ಅಮ್ಮನ ಜೊತೆ ನನ್ನ ಬೇಗುಧಿಗಳನ್ನು ಹಂಚಿಕೊಳ್ಳುವುದಲ್ಲಿ ಮಗ್ನಳಾಗಿದ್ದೆ. ಸಮಾರಂಭದ ಸಮಯ ೨ ವರ್ಷದ ನನ್ನ ಪಾಪು ಕುಂಟುತ್ತಿದ್ದ... ರಾತ್ರಿ ಆಗುವಾಗ ಮೈಬೆಚ್ಚಗಾಯಿತು. ನೋಡಿದರೆ ಹಿಮ್ಮಡಿಯಲ್ಲಿ ಬೊಕ್ಕೆ ಎದ್ದಿದೆ. ಮಲಗಲೇ ಇಲ್ಲ ಮಗು ನೋವಿನಿಂದ. ಆದರೂ ಕಣ್ಣಲ್ಲಿ ನೀರಿಲ್ಲ. ಅಜ್ಜ ಉತ್ಸಾಹದಲ್ಲಿ ತಮಗರಿವೇ ಇಲ್ಲದೆ ಮೊಮ್ಮಗನನ್ನು ಸುಟ್ಟು ಬಿಸಾಡಿದ ಬಿಸಿಯಾಗಿದ್ದ ನಕ್ಷತ್ರ ಕಡ್ಡಿಯ ಮೇಲೆ ನಿಲ್ಲಿಸಿದ್ದರು. ರಾತ್ರಿನೇ ಅಪ್ಪನಿಗೆ ನನ್ನ ಫೋನು..ಯಾಕಪ್ಪಾ ಇಷ್ಟು ಕೇರ್ಲೆಸ್? ಕೇಳಿದ ಇವನು ಫೋನು ಕಿತ್ಕೊಂಡು, ಪರವಾಗಿಲ್ಲ ಅಜ್ಜ, ನಾಳೆನೂ ನನಗೆ ಪಟಾಕಿ ತಾ, ಬಿಡೋಣ ಅನ್ನುವುದೇ! ಬೆರಗಿನಿಂದ ನೋಡಿದೆ..ಭಲೇ ನೋವು ಸಹಿಸುವುದರಲ್ಲಿ ಅಮ್ಮನನ್ನು ಮೀರಿಸಿದೆಯಲ್ಲವೇ ನನ್ನ ಪಿಕಾಸು!
**************************************************
ಆಗ ನನ್ನ ಪಿಕಾಸು ಎಲ್ ಕೆ ಜಿ. ಬಂದವನೇ ಡಿಕ್ಟೇಶನ್ ಬುಕ್ ತೋರಿಸಿದ. ನೋಡಿ ನನಗೆ ಶಾಕ್...ಹತ್ತರಲ್ಲಿ ಒಂದು..ಬರೆದದೆಷ್ಟು ಚೆನ್ನಾಗಿಯಿತ್ತೆಂದರೆ ದೃಷ್ಟಿ ತೆಗೆಯಬೇಕಂತ ಅನಿಸಿದ್ದು ಸುಳ್ಳಲ್ಲ. ಇಲೆವೆನ್ ಮಾತ್ರ ಸರಿ.. ಉಳಿದ ಎಲ್ಲಾ ಶಬ್ದಗಳಲ್ಲಿರುವ ಟಿಗೆ ಅಡ್ಡ ಗೆರೆನೇ ಇಲ್ಲಾ!!! ಯಾಕೆ ಅಂತ ಕೇಳಿದ್ರೆ. ಆಗಲೇ ಉತ್ತರ ಸಿದ್ಧಮಾಡಿ ಬಂದಿರುವ ಅವನು ತಟ್ಟನೆ ಹೇಳಿದ,...." ನಾನು ಎಲ್ಲಕ್ಕೂ ಗೆರೆ ಹಾಕಿದ್ದೆ..ನಂತರ ಎಲ್ಲಾ ರಬ್ ಮಾಡಿಬಿಟ್ಟೆ....." ಕೇಳಿ ಕೆರಳಿದ ನಾನು ಸೀದ ಹಿಡಿಸೂಡಿ ತೆಗೆದುಕೊಂಡು ಅವನನ್ನು ಕೋಣೆಗೆ ಕರೆದುಕೊಂಡು ಹೋದೆ..ಎಲ್ಲೆಂದರಲ್ಲಿ ಬಾರಿಸಿದೆ..ಬಾರಿಸಿ ಬಾರಿಸಿ ನಾನು ಸೋತು ಹೋದೆ..ಅವನ ಕಣ್ಣಲ್ಲಿ ಅನೇಕ ಪ್ರಶ್ನೆಗಳು!! ನೋವಿನಿಂದ ಇಣುಕುತ್ತಿದ್ದ ಹನಿಗಳು..ಪಶ್ಚಾತ್ತಾಪಪಟ್ಟೆ. ಅದೇ ಕೊನೆ..ಮತ್ತೆಂದೂ ನಾನು ಮಕ್ಕಳ ಮೇಲೆ ಕೈಯೆತ್ತಲಿಲ್ಲ.. ಇದನ್ನು ಬರೆಯುತ್ತಿರುವಾಗ ನನ್ನ ಕಣ್ಣುಗಳಿಂದ ಮತ್ತೆ ಹನಿಗಳು ಉರುಳುತ್ತಿವೆ....
****************************************************
ಯು ಕೆ ಜಿ ಆವಾಗ. ವಾರ್ಷಿಕ ಪರೀಕ್ಷೆಯ ಕೊನೆಯ ದಿನ...ಅಲ್ಲಲ್ಲ...ಮಧ್ಯವಾದಿ ಪರೀಕ್ಷೆಯ ಕೊನೆಯ ದಿನ..ಚಿತ್ರ ಬಿಡಿಸುವ ಪರೀಕ್ಷೆ...ಇದೇ ಚಿತ್ರವನ್ನು ಅವರು ಶಾಲಾ ವಾರ್ಷಿಕೋತ್ಸವ ವೇಳೆಯ ಸ್ಪರ್ಧೆಗೂ ಪರಿಗಣಿಸುತ್ತಾರೆ. ಹಾಗಾಗಿ ಚೆನ್ನಾಗಿ ತರಬೇತಿ ಕೊಟ್ಟಿದ್ದೆ..ಅವನು ಮೊದಲಿಂದಲೂ ನುರಿತ ಚಿತ್ರಗಾರ..ಹಾಗಾಗಿ ನಾನು ಆ ದಿನ ಹೆಚ್ಚು ಹೇಳಲು ಹೋಗಿರಲಿಲ್ಲ...ಪರಿಗಣಿತವಾಗದ ಚಿತ್ರವನ್ನು ಮನೆಗೆ ತೆಗೆದುಕೊಂಡು ಹೋಗಲು ಕೊಡುತ್ತಿದ್ದರು. ಮನೆಗೆ ಬಂದು ಚಿತ್ರ ತೋರಿಸಿದ..ಯಾವ ಭಾವನೆನೂ ಇಲ್ಲ ಮುಖದಲ್ಲಿ...ಇವನು ಅದನ್ನು ಬಿಡಿಸಿದನೆಂದರೆ ನಂಬಲಿಕ್ಕಾಗದಷ್ಟು ಕೆಟ್ಟದಾಗಿತ್ತು...ಯಾಕೆ ಹೀಗೆ ಅಂತ ಕೇಳಿದರೆ..ಮೂಡಿರಲಿಲ್ಲ...ಅಂತ ನೇರ ಉತ್ತರ!!! ನನಗೇನು ಹೇಳಲು ಉಳಿದಿರಲಿಲ್ಲ.
***************************************************
ಪಿಕಾಸು ಆವಾಗ ಐದನೆಯ ತರಗತಿ. ಯಾಕೋ ಏನೋ ಪ್ರತಿಸಲ ೧,೨ ಮಾರ್ಕಿಗೆ ಅವನ ಮೊದಲನೆಯ ಸ್ಥಾನ ತಪ್ಪುತ್ತಿತ್ತು. ಶಾಲೆಯಲ್ಲೂ, ಹೊರಗೆ ಕಳುಹಿಸಿದ ಕಡೆನೂ ಅನೇಕ ಬಹುಮಾನ ಗಳಿಸಿದ್ದನು. ಹಾಗಾಗಿ ನನಗಂತೂ ಇವನು ಅಥವಾ ಇವನ ನಿಕಟ ಗೆಳೆಯ ಇಬ್ಬರಲ್ಲಿ ಒಬ್ಬರಿಗೆ ಬೆಸ್ಟ್ ಔಟ ಗೊಯಿಂಗ್ ಸ್ಟುಡೆಂಟ್ ಅವಾರ್ಡ್ ಸಿಗುವುದಂತ ಖಂಡಿತವಿತ್ತು. ವಾರ್ಷಿಕೋತ್ಸವ ಸಮಾರಂಭದಲ್ಲಿ ಕಿವಿನಿಮಿರಿ ಮಗನ ಹೆಸರು ಕರೆಯುವುದನ್ನು ಕೇಳಲು ಕಾತುರಳಾಗಿದ್ದೆ. ಬೆಸ್ಟ್ ಔಟ್ ಗೋಯಿಂಗ್ ಸ್ಟುಡೆಂಟ್ ಆಫ್ ದ ಯಿಯರ್ ಗೊಸ್ ಟು........ ಕೇಳಿ ನನಗೆ ಶಾಕ್. ಅತೀಕಡಿಮೆ ಬಹುಮಾನ ಗಳಿಸಿ, ತರಗತಿಯಲ್ಲಿ ೧,೨ ಮಾರ್ಕು ಮುಂದಿರುವ ಟೀಚರ್ ಮಗನ ಹೆಸರು. ಮರುದಿನ ಒಂದಿಷ್ಟು ಪ್ರತಿಭಟಿಸಿದೆ..ಪ್ರಯೋಜನವಾಗಲಿಲ್ಲ..ಅದರ ನಂತರ ನನ್ನ ಪಿಕಾಸೋ ಯಾವುದೇ ಸ್ಪರ್ಧೆಗೆ ಹೋಗಲು ಒಪ್ಪಲಿಲ್ಲ!
***********************************************
ಇವತ್ತು ಬೆಳಿಗ್ಗೆ ಪಿಕಾಸು ಮತ್ತು ನನ್ನ ನಡುವೆ ನಡೆದ ಮಾತುಕತೆ-
ನಾನು-ಸರಿ ಪುಟ್ಟು, ಇವತ್ತಿಗೆ ನಿನ್ನ ಪರೀಕ್ಷೆ ಮುಗಿತಲ್ಲ..ಪಾಸ್ಪೋರ್ಟ್ ಫಾರ್ಮ್ ಗತಿ ಏನಾಯ್ತು?
ಪಿಕಾಸು- {ಅನ್ಯಮಸ್ಕನಾಗಿ} ಅದು....ನಿನ್ನೆ ಮತ್ತೊಮ್ಮೆ ಪುನಃ ಫಿಲ್ ಮಾಡ್ಬೇಕಾಯ್ತು. ಅರ್ಧ ಆಗಿದೆ.
ನಾನು- ಅರೇ, ಎಲ್ಲಾ ಆಗಿತಲ್ವೋ? ಈಗೆನಾಯ್ತು?
ಪಿಕಾಸು- ಹಳೆ ಡಾಟಾ ಬೇಸ್ಯೆಲ್ಲಾ ಹಾಗೆ ಉಳಿಯುತ್ತಾ! ಟ್ರಾಶ್ ಬಿನ್ನಿಗೆ
ಹೋಗಿರ್ಬೇಕು.
ನಾನು- ಹೋಗಲಿ, ನಿನ್ನ ಪ್ಲಾನು ಏನು? ಗೇಟ್, ಟೊಫೆಲ್, ಜಿಆರ್ಇ - ಬರೀತಿಯಲ್ವಾ?
ಪಿಕಾಸು- ನೋಡಮ್ಮ, ನಂಗೆ ನಮ್ಮ ದೇಶ ಬಿಟ್ಟು ಹೋಗುವ ಮನಸಿಲ್ಲ. ಅಲ್ಲದೆ ಎಮ್ ಟೆಕ್ ಸಹ ಮಾಡುವುದೋ..ಬೇಡ್ವೋ ಅಂತ ಆಲೋಚನೆ ಮಾಡ್ತಿದ್ದೇನೆ..ಈ ಎಲ್ಲಾ ಡಿಗ್ರಿಗಳಿಂದ ಏನೂ ಪ್ರಯೋಜನವಿಲ್ಲ ಅಂತ ನಿಂಗೂ ಗೊತ್ತು. ಆದರೂ ಹೀಗೆ ತಮಾಷೆಗೆ ಗೇಟ್ ಬರಿತೇನೆ.
ನಾನು- ಅಲ್ಲವೋ, ನಿನಗೆ ಇಷ್ಟ ಇದ್ರೆ, ಯಾವುದು ಬೇಕೋ ಕಲಿಯೋ..ನನಗೆ ದುಡ್ಡಿನ ಪ್ರಾಬ್ಲೆಮ್ ಆಗುತ್ತೆ ಅಂತ ಹೆದರಬೇಡ. ಲೋನ್ ತಗೊಂಡರಾಯಿತು.
ಪಿಕಾಸು-ನಿನಗೆ ಎಲ್ಲಾ ಗೊತ್ತು ತಾನೆ ಅಮ್ಮ. ಕಾಲೇಜಿಗೆ ಬರೇ ಹೆಸರಿಗೆ ತಾನೆ ಹೋಗೋದು...ಎಲ್ಲಾ ನನ್ನಷ್ಟಕ್ಕೆ ನಾನೇ ತಾನೆ ಕಲ್ತದ್ದು...ಅಂದ ಮೇಲೆ ಮುಂದೆನೂ ಹಾಗೆನೇ ಕಲಿತೇನೆ..ಈಗಂತೂ ನನಗೆ ಈ ಮೈಸೂರಿನ ಕೆಲಸ ಮುಖ್ಯ..ನನ್ನ ಪ್ರೊಜೆಕ್ಟ್ ಇಂಪೊರ್ಟೆಂಟ್.. ನಾನು ಮೈಸೂರಿನಿಂದ ಬರ್ತೇನಲ್ವಾ ಆವಾಗ ಆಲೋಚನೆ ಮಾಡುವಾ. ನಾನಿನ್ನು ಬರ್ತೇನೆ. ರಾಮ್ ರಾಮ್!
*****************************************************
ಪಿಕಾಸು ತಯಾರಿಸಿದ ಲೊಗೋ! |
ಪಿಕಾಸುಗೆ ಬಹುಶಃ ೩ವರ್ಷವಿರಬೇಕು ಆವಾಗ- ಮಧ್ಯದಲ್ಲಿರುವವನು ಪಿಕಾಸು! |
ಹೀಗೆ ಹೇಳಿ ನಡೆದೇ ಬಿಟ್ಟ ನನ್ನ ಸುಪುತ್ರ. ಅಂದ ಹಾಗೆ ಅವನು ನಿಟ್ಟೆ ಕಾಲೇಜಿನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಮೂರನೆಯ ವರ್ಷದ ವಿದ್ಯಾರ್ಥಿ. ಮೂರನೆಯ ವರ್ಷ ಇಂದಿಗೆ ಮುಗಿಯಿತು:-) ಬಹಳ ಪ್ರತಿಭಾವಂತನು. ತನ್ನ ಕೋರ್ ಸಬ್ಜೆಕ್ಟ್ ಮಾತ್ರವಲ್ಲದೆ ಇತರ ನೆಟ್ವರ್ಕಿಂಗ್, ಎತಿಕಲ್ ಹ್ಯಾಕಿಂಗ್, ಅಲ್ಲದೆ ಗಣಕ ಯಂತ್ರದಲ್ಲಿ ಅಡೊಬ್, ಮ್ಯಾಕ್ಸ್, ಫೊಟೋ ಶಾಪ್ ಉಪಯೋಗಿಸಿ ಚಿತ್ರ ಬಿಡಿಸುವುದರಲ್ಲಿಯೂ ಪರಿಣಿತ. ಎಲ್ಲವನ್ನೂ ಯಾರ ಸಹಾಯವಿಲ್ಲದೆ ಕೇವಲ ಟುಟೋರಿಯಲ್ ನೋಡಿ ಕಲಿತ. ಅಲ್ಲದೆ ಇತ್ತೀಚಿನ ಟೆಕ್ಫೆಸ್ಟ್ಗಳಲ್ಲಿ ಅವನು ಮತ್ತು ಸ್ನೇಹಿತರು ಮಾಡಿದ ಅನೇಕ ಪ್ರೊಜೆಕ್ಟ್ಗಳಿಗೆ ಪ್ರಥಮ ಬಹುಮಾನ ಬಂದಿದೆ... ಅವನಿಗೆ ಮೈಸೂರಿನಲ್ಲಿ ಇಂಟರ್ನ್ಶಿಪ್ ಸಿಕ್ಕಿದೆ, ಎಕ್ಸ್ ಮೋಟೊ ಕಂಪನಿಯ ಹೆಸರು. ಬಹುಶಃ ಇವನಂತಹುದೇ ಉತ್ಸಾಹಿ ಹುಡುಗರು ಇತ್ತೀಚೆಗೆ ಪ್ರಾರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಮಗನನ್ನು ನನ್ನಿಂದ ದೂರ ಕಳುಹಿಸುತ್ತಿದ್ದೇನೆ. ಆ ಆಲೋಚನೆಯೇ ಕಷ್ಟ..ಮುಂದೆ ಹೇಗೋ ಏನೋ...ಇಲ್ಲಿಯ ತನಕ ಅವನ ಕನಸುಗಳು ನನ್ನದೇ ಎಂಬಂತೆ ಅದನ್ನು ನನಸು ಮಾಡಲು ನನ್ನಿಂದ ಸಾಧ್ಯವಾದಷ್ಟು ಯತ್ನಿಸಿದೆ. ನನ್ನ ಆಸೆಗೆ ತಕ್ಕಂತೆ ಪ್ರತಿಭಾವಂತ ಮಕ್ಕಳನ್ನು ದಯಪಾಲಿಸಿದಕ್ಕೆ ಶ್ರೀರಾಮನಿಗೆ ಅನಂತಾನಂತ ವಂದನೆಗಳು.
5 comments:
ಎಳೆ ಮನಸುಗಳ ಪುಟ್ಟ ನಿಷ್ಕಳಂಕ ಮನಸ್ಸನ್ನು ಚೆನ್ನಾಗಿ ಒಡ ಮೂಡಿಸಿದ್ದೀರಿ.
ನನ್ನ ಬ್ಲಾಗಿಗೂ ಸ್ವಾಗತ.
ಖುಷಿ ಆಯಿತು ಅಕ್ಕ, ಇನ್ನು ಮುಂದೆ ನಿಮ್ಮ ಜೀವನದಲ್ಲಿ ಇಂಥ ಬೆಲ್ಲದುಂಡೆಯಂತಹ ವಿಷಯಗಳೇ ನಡೆಯುತ್ತಿರಲಿ
ಹಾಗೆ ಅವನ್ನೆಲ್ಲ ಇಲ್ಲಿ ಹಂಚಿ ಕೊಳ್ಳೋದು ಮರಿಬೇಡಿ, ನಾವು ನಿಮ್ ಜೊತೆ ಖುಷಿ ಪಡ್ತೀವಿ
ಕಿರಣ್, ಅಕ್ಕ ಬರೆದಿದೆಲ್ಲವು ತಮ್ಮನಿಗೆ ಚೆಂದವೇ...ನನಗೂ ಖುಷಿಯಾಯ್ತೋ ನನ್ನ ತಮ್ಮ ಕಮ್ ಫಾನ್ನ ಪ್ರತಿಕ್ರಿಯೆ ನೋಡಿ..ಇನ್ನೆರಡು ಕತೆ ಸೇರಿಸಿದ್ದೇನೆ ನಿನ್ನ ಅಳಿಯನದು..ಓದಿ ಪ್ರತಿಕ್ರಿಯಿಸಿಬಿಡು
ಹೊಸ ಪದ "ಹಿಡಿಸೂಡಿ" ತಿಳೀತು...
ಈ ಅಮ್ಮಂದಿರು ಹೀಗೇಕೆ,
ಹೊಡೆಯೋ ವರ್ಗು ಹೊಡೆದುಬಿಟ್ಟು ಆಮೇಲೆ ಅತ್ತುಕೊಂಡು ಕೂರ್ತಾರೆ,
ನಾವು ಮತ್ತೆ ಹೋಗಿ ಅಮ್ಮನಿಗೆ ಮುತ್ತು ಕೊಡೋವರ್ಗು
Proud of you both mother and son. now i am curious to learn about your daughter. you write very well
:-)
malathi S
Post a Comment