ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

25 May, 2012

’ಶ್ರೀರಾಮಕೃಷ್ಣ ಪರಮಹಂಸ ವಚನವೇದ’- ನನ್ನ ಭಗವದ್ಗೀತೆ!-1

                          "ಶ್ರೀರಾಮಕೃಷ್ಣ ಪರಮಹಂಸ ವಚನವೇದ"- ಈ ಪುಸ್ತಕ ನನ್ನ ಕೈಗೆ ಸಿಕ್ಕಿದ್ದು ನನಗೆ ನೆನಪಿರುವಂತೆ ನನ್ನ ಹತ್ತನೆಯ ವಯಸ್ಸಿನಲ್ಲಿ. ನನ್ನ ಮೇಲೆ ಬಹಳ ಪ್ರಭಾವ ಬೀರಿದ ಪುಸ್ತಕವಿದು. ನಂತರ ಮತ್ತೊಮ್ಮೆ, ಮಗದೊಮ್ಮೆ ಎಂದು ಸುಮಾರು ಸಲ ಓದಿದ್ದೆ. ಆದರೆ ಹತ್ತನೆಯ ತರಗತಿಯ ನಂತರ ನಾನು ಪೌರಾಣಿಕ ಅಥವಾ ಬೇರೆ ಕಥೆ ಪುಸ್ತಕ ಓದಿದ್ದು ಕಮ್ಮಿನೇ.. ಕಾರಣ ಬಹಳ ಇವೆ. ಒಂದತ್ತೂ ಹೇಳಬಹುದು.. ಅದು ನನ್ನ ದುರಾದೃಷ್ಟ. ಆಗಲೇ ಚಿತ್ರ ಬಿಡಿಸುವುದಕ್ಕೆ ಹೆಚ್ಚು ಪ್ರಾಶಸ್ಯಕೊಟ್ಟೆ ಅಂತ ಕಾಣುತ್ತದೆ. ಹೀಗಾಗಿ ಓದು ಬಡವಾಯಿತು. 
      
                         ಈ ಪುಸ್ತಕದ ಸಾರ ನನ್ನ ಮುಂದಿನ ಬದುಕಿನಲ್ಲಿ ಮಹತ್ತರ ಪಾತ್ರವಹಿಸುವುದೆಂದು ನನಗೆ ತಿಳಿದಿರಲಿಲ್ಲ... ಸಂಸಾರಸಾಗರದಲ್ಲಿ ಕಂಠಮಟ್ಟ ಮುಳುಗಿಹೋಗಿದ್ದ   ನನಗೆ  ತೆಪ್ಪದಂತೆ ದಡ ತಲುಪಿಸುವಲ್ಲಿ ಬಹಳ ಸಹಾಯ ಮಾಡಿತು.  ಇದರಲ್ಲಿ ರಾಮಕೃಷ್ಣರು ದೃಷ್ಟಾಂತ ರೂಪದಲ್ಲಿ ಹೇಳುವ ಕತೆಗಳು ನನಗೆ ಬದುಕನ್ನು ಸರಿಯಾದ ನಿಟ್ಟಿನಲ್ಲಿ ಸಾಗಿಸುವಂತೆ ಮಾರ್ಗದರ್ಶನ ಮಾಡಿತು. ಆಗಾಗ ಓದುವ ಆಸೆಯಾಗುತ್ತಿದ್ದರೂ ಸಮಯವೇ ಕೂಡಿಬಂದಿರಲಿಲ್ಲವೋ ಏನೋ. ಇಲ್ಲೇ ಅಮ್ಮನ ಬಳಿಯಲ್ಲಿಯೇ ಇದ್ದ ಪುಸ್ತಕ ಆಗಾಗ ನನ್ನನ್ನು ಕರೆಯುತ್ತಲೇ ಇತ್ತು. ಬೇಸಿಗೆ ಶಿಬಿರಗಳ ಕೆಲಸವೆಲ್ಲಾ ಮುಗಿಯಿತು...ಇನ್ನು ಮನೆಪಾಠ ಪ್ರಾರಂಭವಾಗಲು ಜೂನ್ ೧ ಬರಬೇಕು.. ಅಲ್ಲಿಯ ತನಕ ನನ್ನ ಬಳಿ ೧೦ದಿನಗಳ ಸಮಯವಿದೆಯಲ್ಲಾ,  ಯಾಕೆ ವಚನವೇದ ಓದಬಾರದು ಅಂದುಕೊಂಡು ನಿನ್ನೆ ಪುಸ್ತಕ ತಂದು ಓದಲು ಪ್ರಾರಂಭ ಮಾಡಿದೆ. ಅರೇ, ಆವಾಗ ಇದು ನನ್ನ ಗಮನಕ್ಕೆ ಬಂದಿಲ್ವೇ! ಮುನ್ನುಡಿ ಬರೆದವರು ಕುವೆಂಪು. ಈ ಮುನ್ನುಡಿಯಲ್ಲಿ ಬಹಳಷ್ಟು ಮಾತುಗಳು ನನ್ನ ಗಮನವನ್ನು ಸೆಳೆದವು. ಅದನ್ನು ಸಹ ಬ್ಲಾಗಿಗರ ಜೊತೆ ಹಂಚಕೊಳ್ಳಬೇಕೆಂದೆನಿದೆ.



                  ಮೂಲ ಬಂಗಾಲಿ ಭಾಷೆಯಲ್ಲಿ " ಕಥಾಮೃತ ಕರ್ತೃ" ಬರೆದವರು ’ಮ’ಎಂದೇ ಗುರುತಿಸಲ್ಪಡುವ ಮಹೇಂದ್ರನಾಥ ಗುಪ್ತ. ಇವರು ಮಾಸ್ಟರ್ ಮಹಾಶಯರೆಂದೇ ಪ್ರಸಿದ್ಧರು. ಇದನ್ನು ಕನ್ನಡಕ್ಕೆ ಅನುವಾದಿಸಲು ರಾಮಕೃಷ್ಣ ಮಠದವರ ಜೊತೆ ರಾಮಕೃಷ್ಣರ ಅಭಿಮಾನಿಗಳಾಗಿದ್ದ ನಮ್ಮ ಕವಿ ಋಷಿ ಪುಟ್ಟಪ್ಪನವರೂ ಕೈಗೂಡಿಸಿದ್ದಾರೆ. ಅಲ್ಲದೆ ಅವರು ರಾಮಕೃಷ್ಣರ ಮೇಲೆ ಬರೆದ ಕವಿತೆಯನ್ನು ಮೂಲ ಲೇಖಕರಾದ ಮಾಸ್ಟರಿಗೂ ತೋರಿಸಿ ಅವರಿಂದ ಮೆಚ್ಚುಗೆ ಪಡೆದಿದ್ದಾರೆ. ಆ ಪದ್ಯವನ್ನೂ ಬರೆಯುತ್ತೇನೆ. ಆದರೆ ಮೊದಲು ಕುವೆಂಪು ಅವರೇ ಈ ಪುಸ್ತಕಕ್ಕೆ ಶ್ರೀರಾಮಕೃಷ್ಣ ಪರಹಂಸ ವಚನವೇದ ಎಂದು ಹೆಸರಿಡಲು ಕುತೂಹಲಕಾರಿಯಾದ ಕಾರಣ ಕೊಟ್ಟಿದ್ದಾರೆ. ಅದನ್ನು ಮೊದಲು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.

ಅವರದೇ ಮಾತಿನಲ್ಲಿ ಪ್ರಸ್ತುತ ಪಡಿಸುತ್ತೇನೆ-
      ಸ್ವತಂತ್ರ ಭಾರತವನ್ನು ಸೆಕ್ಯುಲರ್ ರಾಜ್ಯ ಎಂದು ಕರೆಯುತ್ತಾರೆ. ಅಂದರೆ ನಮ್ಮ ರಾಷ್ಟ್ರದ ಆಡಳಿತದ ಈ ಲಕ್ಷಣವನ್ನು ಸರಿಯಾದ ಮಾತಿನಲ್ಲಿ ವರ್ಣಿಸುವುದಾದರೆ ’ಸಮನ್ವಯ ರಾಷ್ಟ್ರ’ ಎಂದು ಕರೆಯಬೇಕಾಗುತ್ತದೆ. ಅಂತಹ ಸಮನ್ವಯ ರಾಷ್ಟ್ರಕ್ಕೆ ಅತ್ಯಂತ ಅವಶ್ಯಕವಾಗಿರುವ ಸರ್ವಧರ್ಮ ಸಮನ್ವಯ ದೃಷ್ಟಿಯನ್ನು ಈ ಯುಗದಲ್ಲಿ ಸ್ವಾತಂತ್ರೋದಯಕ್ಕೆ ಬಹುಪೂರ್ವದಲ್ಲಿಯೇ ಸ್ಪಷ್ಟವಾಗಿ, ಅನುಭವಪೂರ್ವಕವಾಗಿ, ಸರ್ವಜನಸುಲಭಗ್ರಾಹ್ಯವಾಗಿ, ಪ್ರಭಾವಯುತವಾಗಿ, ಕ್ರಾಂತಿಪೂರ್ಣವಾದರೂ ಸಂಪ್ರದಾಯ ಅವಿರುದ್ಧವೆಂಬಂತೆ ಲೋಕ ಸಮಸ್ತಕ್ಕೂ ತೋರಿ ಸಾರಿದವರೆಂದರೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು. ಅವರ ಈ ’ವಚನವೇದ’ ನಿಜವಾಗಿಯೂ ಸಮನ್ವಯ ದೃಷ್ಟಿಯನ್ನು ಸರ್ವ ಪ್ರಜೆಗಳಿಗೂ ಸುಲಭವಾಗಿ ಹೃದಯಸ್ಪರ್ಶಿಯಾಗುವಂತೆ ಬೋಧಿಸುವ ನವೀನ ವೇದ. ಮತಾಂತರಗೊಳಿಸುವುದು, ಪರಮತ ನಿಂದೆಯಿಂದ ಸ್ವಮತ ಶ್ಲಾಘನೆ ಮಾಡುವುದು, ರಾಜಕೀಯ ಪ್ರಯೋಜನಕ್ಕಾಗಿ ಸ್ವಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಕುತಂತ್ರಕ್ಕೆ ಕೈಹಾಕುವುದು ಮೊದಲಾದ ಕಾಡುಭಾವನೆಗಳನೆಲ್ಲ ಬೇರು ಸಹಿತ ಸುಟ್ಟುಹಾಕುವ ಕಾಳ್ಗಿಚ್ಚಾಗುತ್ತದೆ ಈ ’ವಚನವೇದ’. ನಮ್ಮ ರಾಜ್ಯಾಂಗದ ರಾಜಕೀಯದ ಸುರತರು ಸುಫಲಸುಮಭರಿತವಾಗಬೇಕಾದರೆ ಜನಹೃದಯಮೂಲವಾಗಿರುವ ಅದರ ತಾಯಿಬೇರು ಈ ’ವಚನವೇದ’ ಸಾರವನ್ನು ಹೀರಿಕೊಂಡಲ್ಲದೆ ಸಾಧ್ಯವಿಲ್ಲ. ನಮ್ಮ ರಾಜಕೀಯ ರಾಜ್ಯಾಂಗಕ್ಕೆ ಪೂರಕವಾಗಿರುವ ಧಾರ್ಮಿಕ ರಾಜ್ಯಾಂಗವಾಗುತ್ತದೆ ಈ ’ರಾಮಕೃಷ್ಣ ವಚನವೇದ’!

4 comments:

Badarinath Palavalli said...

’ಶ್ರೀರಾಮಕೃಷ್ಣ ಪರಮಹಂಸ ವಚನವೇದ’ ಇದು ಬಹುಶಃ ಇದು ರಾಮಕೃಷ್ಣಾಶ್ರಮದ ಪ್ರಕಟಣೆ ಅಂತ ಕಾಣುತ್ತೆ.

ಖಂಡಿತ ಹುಡುಕಿ ಓದುತ್ತೇನೆ. ನನ್ನ ಈಗಿನ ಮನೋ ಪರಿಸ್ಥಿತಿಯಲ್ಲಿ ನನಗೆ ಬಹಳಷ್ಟು ಮನಸ್ಸು ಪ್ರಶಾಂತವಾಗಬೇಕಿದೆ.

ಒಳ್ಳೆಯ ಬರಕ್ಕಾಗಿ ಧನ್ಯವಾದಗಳು.

Sheela Nayak said...

ಇದರಲ್ಲಿ ಎರಡು ಭಾಗಗಳಿವೆ...ಪೂರ್ವಾರ್ಧ ಮತ್ತು ಉತ್ತರಾರ್ಧ...ನನ್ನ ಬಳಿ ಇರುವುದು ಪೂರ್ವಾರ್ಧ. ಆಗ್ರಹಿಸುತ್ತೇನೆ ದಯವಿಟ್ಟು ಓದಿ...ಮನಸ್ಸನ್ನು ಪ್ರಶಾಂತ ಮಾಡುವುದಲ್ಲದೆ, ಸರಿ ದಾರಿಯನ್ನೂ ತೋರುತ್ತದೆ ಬದರಿ.

Anil ML said...

ರಾಮಕೃಷ್ಣ ವಚನವೇದವನ್ನು ನಿಮ್ಮ ಭಗವದ್ಗೀತೆ ಎಂದು ಕರೆದದ್ದು ಸಂತೋಷವಾಯಿತು.. ಅವರು ವೇದಗಳ ಅಗಮ್ಯ ವಿಚಾರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವ ಹಾಗೆ ದೃಷ್ಟಾಂತಗಳಮೂಲಕ ತಿಳಿಸಿದ ಮಹಾನ್ ಸಾಧು... ಈ ಪುಸ್ತಕವನ್ನು ನಾನು ಲೆಕ್ಕವಿಲ್ಲದಷ್ಟು ಬಾರಿ ಓದಿದ್ದೇನೆ.. ನಿಮ್ಮ ಲೇಖನ ಮತ್ತೊಮ್ಮೆ ನೆನಪಿಸಿತು... ಧನ್ಯವಾದ

Sheela Nayak said...

ಒಹ್! ಖುಷಿಯಾಯ್ತು ನೀವು ಓದಿದ್ದಿರಿ ಎಂದು ತಿಳಿದು. ನನ್ನ ಆದರ್ಶ ಶ್ರೀ ರಾಮಕೃಷ್ಣರು!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...