ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 December, 2007

ಹರಕೆಯ ಕುರಿ- ಕಾಮಧೇನು!

ಈ ಪ್ರಪಂಚದಲ್ಲಿ ಚಿತ್ರ ವಿಚಿತ್ರ ಪರಂಪರೆಗಳು, ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ ಎಂದರೆ ಆಶ್ಚರ್ಯವಾಗುತ್ತದೆ. ಒಂದುಕಡೆ ಬಹಳ ಮುಂದುವರೆದ ಆಧುನಿಕ ಜನಾಂಗ ಇನ್ನೊಂದೆಡೆ ಮೂಡ ನಂಬಿಕೆಯೋ, ಮತ್ತೇನೋ ಅಥವಾ ಪವಾಡಗಳೋ ಎನ್ನುವಂತಹ ಉತ್ಸವಗಳು. ಹಳೆಯ ತರಂಗವನ್ನು ತಿರುವುತ್ತಿದ್ದಾಗ ಈ ಲೇಖನವು ನನ್ನನ್ನು ಸೆಳೆಯಿತು. ನನ್ನ ಬ್ಲಾಗಿನ ಹೆಸರೇ ತಿಳಿಸುವಂತೆ ನನ್ನ ಚಿತ್ತವನ್ನು ಕದಡುವ ಅಥವಾ ಪ್ರಸನ್ನಗೊಳಿಸುವ ಯಾವುದೇ ಸಂಗತಿಯನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಹಾಗಾಗಿ ಈ ಲೇಖನ. ಇದೇ ೨೦೦೭ರ ಎಪ್ರಿಲ್ ತರಂಗದಲ್ಲಿ ಕಿಶನ್ ರಾವ್ ಕುಲಕರ್ಣಿ ಕುಪ್ಪಗಿಯವರ ಲೇಖನಿಯಿಂದ ಮೂಡಿ ಬಂದ ಈ ಲೇಖನದಿಂದ ಸಂಕ್ಷಿಪ್ತವಾಗಿ ಆಯ್ದು ಪ್ರಸ್ತುತ ಪಡಿಸಿದ್ದೇನೆ.



ಬೈಲಕೂರ ಎಂಬ ಊರು,. ಬಹುಶಃ ಉತ್ತರ ಕರ್ನಾಟಕದ ಒಂದು ಹಳ್ಳಿ. ಎಲ್ಲಾ ಊರಿನಲ್ಲಿ ನಡೆಯಿವಂತೆ ಈ ಊರಿನಲ್ಲೂ ಒಂದು ಜಾತ್ರೆ ನಡೆಯುತ್ತದೆ. ಆದರೆ ಈ ಜಾತ್ರೆಯು ಎಲ್ಲಾ ಕಡೆಯಲ್ಲಿ ಇರುವಂತೆ ರಥೋತ್ಸವವೋ ಅಥವಾ ದೀಪಾರಾಧನೆಯಿಂದಲೋ ಕಳೆಕಟ್ಟುವುದಿಲ್ಲ.......ಆದರೆ ಪೊರಕೆ ಏಟಿನಿಂದ, ಅದೂ ಖುಷಿಯಿಂದ ತಿನ್ನುವ ಏಟುಗಳಿಂದ ಕಳೆಕಟ್ಟುತ್ತದೆ. ಆದರೆ ನನ್ನನ್ನು ಸೆಳೆದದ್ದು ಇದಲ್ಲ. ಇಲ್ಲಿಯೇ ಪಾದುಕೆ ಸೇವೆ ಎಂದು ಮತ್ತೊಂದು ಹರಕೆಯ ಸೇವೆಯನ್ನು ಭಕ್ತರು ಹೊತ್ತುತ್ತಾರೆ. ಅದೂ ಯಾವ ದೇವರಿಗೆ ಅಂತಿರಾ....ಪವನಪುತ್ರ ಹನುಮಾನನಿಗೆ! ಇದರಲ್ಲೇನು ವಿಚಿತ್ರ ಎಂದುಕೊಳ್ತಿರಾ? ಸರಿ ಬಿಡಿ, ಇಂತಹ ಹರಕೆಗಳು ಭಾರತದ ಉದ್ದಗಲಕ್ಕೂ ನಡೆಯುತ್ತಿರುವುದರಿಂದ ಅದರಲ್ಲೇನೂ ಆಶ್ಚರ್ಯವೂ ಇಲ್ಲ ವಿಚಿತ್ರವೂ ಇಲ್ಲ. ವಿಪರ್ಯಾಸವಿರುವುದು ಭಕ್ತರು ಹರಕೆಯೆಂದು ಒಪ್ಪಿಸುವ ಪಾದುಕೆಯಲ್ಲಿ.

ಈ ಪಾದುಕೆಗಳು ಸುಮಾರು ಒಂದು ಅಡಿಅಗಲ ಮತ್ತು ಎರಡು ಅಡಿ ಉದ್ದವಾಗಿದ್ದು ಮುತ್ತು, ಹವಳ, ಬಣ್ಣ ಬಣ್ಣದಬಟ್ಟೆ, ಗೆಜ್ಜೆ, ಮಿರಿಮಿರಿ ಮಿಂಚುವ ಕಾಗದಗಳಿಂದ ಅಲಂಕೃತಗೊಂಡಿರುತ್ತದೆ. ಹರಕೆಹೊತ್ತವರು ಮಾರುತಿಯ ಗುಡಿಗೆ ತಮ್ಮ ತಲೆಯ ಮೇಲೆ ಈ ಪಾದುಕೆಗಳನ್ನು ಹೊತ್ತು ತರುತ್ತಾರೆ. ಇಲ್ಲಿ ಹರಕೆಯ ಕಥೆ ಮುಗಿಯುವುದಿಲ್ಲ. ಈ ಪಾದುಕೆಗಳಿಂದ ಮೈಯಲ್ಲ ಹೊಡಕೊಳ್ಳುತ್ತಾರೆ. ಹೀಗೆ ಮಾಡಿದರೆ ಮೈ- ಕೈ ನೋವು, ಕೆಮ್ಮು, ದಮ್ಮು, ನೆಗಡಿಯಂತಹ ಕಾಯಿಗಳು ವಾಸಿಯಾಗುತ್ತದೆ ಅಲ್ಲದೆ ಭೂತ- ದೆವ್ವಗಳ ಕಾಟವೂ ಮಾಯವಾಗುತ್ತದೆ ಎಂದು ನಂಬುತ್ತಾರೆ.
ನಾ ಓದಿದಂತೆ ಕ್ರೂರತನವಿರುವುದು ಪಾದುಕೆಯಲ್ಲಿ. ಈ ಪಾದುಕೆಗಳನ್ನು ತಯಾರಿಸಲು ಕೊಂಬು, ಕಿವಿ, ಬಾಲ, ಹಲ್ಲು ಮುಕ್ಕಾಗಿರದ ಆರೋಗ್ಯವಂತ ಕಪಿಲೆ ಇಲ್ಲವೇ ಬಿಳಿ ಆಕಳಿನ ಚರ್ಮವೇ ಬೇಕು. ಈ ಮೆಟ್ಟನ್ನು ಗುಡಿಗೆ ಒಪ್ಪಿಸುವಾಗ ಅದನ್ನು ತಯಾರಿಸಿದ ಚಮ್ಮಾರನಿಗೆ ಕಬ್ಬು, ಐದು ಬಗೆಯ ಧಾನ್ಯ, ದಕ್ಷಿಣೆ, ಹೋಳಿಗೆಯ ಉಲ್ಪಿ ಕೊಡುವುದು ಮಾತ್ರವಲ್ಲದೆ ಒಂದು ಪ್ರಾಣಿಯನ್ನು ಬಲಿ ನೀಡಿ ಪ್ರಸ್ಥ ಮಾಡಿಸಬೇಕು. ಇದಕ್ಕೆಲ್ಲಾ ಸುಮಾರು ಹದಿನೈದು ಸಾವಿರ ರೂಪಾಯಿ ಖರ್ಚು ಆಗುವುದೆಂದು ಲೇಖನ ಬರೆದ "ಕಿಶನ್ ರಾವ್ ಕುಲಕರ್ಣಿ ಕುಷ್ಟಗಿ" ಬರೆದಿದ್ದಾರೆ.
ಬೇಸರವೆಂದರೆ ಈ ಹರಕೆಯನ್ನು ಪೂರೈಸಲು ಒಂದು ಆರೋಗ್ಯವಂತ ದನವು ಬಲಿಯಾಗಬೇಕಾಗುತ್ತದೆ. ಇಂತಹ ಪರಂಪರೆಯ ಅಗತ್ಯ ನಮಗಿದೆಯೇ? ಎಂಬುದುದು ನನ್ನ ಪ್ರಶ್ನೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಆಕಳುಗಳನ್ನು, ಅಪರೂಪದ ತಳಿಗಳನ್ನು ರಕ್ಷಿಸುವಂತಹ ಕಾರ್ಯಗಳು ನಡೆಯುತ್ತಿವೆ. ಗೋಮೂತ್ರದಿಂದ ಔಷಧ ಮಾತ್ರವಲ್ಲದೆ ಕೀಟನಾಶಕಗಳನ್ನೂ ತಯಾರಿಸುತ್ತಿದ್ದಾರೆ ಮತ್ತು ಅದರ ಪ್ರಚಾರವೂ ಆಗಿ ಜನರು ಇದರ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಈ ಬೈಲಕೂರಿನ ಜನತೆಗೆ ತಿಳಿ ಹೇಳಿ ಆರೋಗ್ಯವಂತ ದನದ ಹತ್ಯೆಯ ಪರಂಪರೆಯನ್ನು ದೂರಮಾಡಿಸುವ ಪ್ರಯತ್ನಗಳು ನಡೆಯಬೇಕು.
ಕಾಮಧೇನುವನ್ನು ಪೂಜಿಸುವಂತ ಹಿರಿಮೆಯನ್ನು ಹೊತ್ತಿದ ಹಿಂದೂ ನಾಡಿನಲ್ಲೇ ಹರಕೆಯ ಹೆಸರಿನಲ್ಲಿ ಹಸುವಿನ ಕ್ರೂರ ಹತ್ಯೆ......ಎಂತಹ ವಿಪರ್ಯಾಸ.
ಅಂದ ಹಾಗೆ ಇದೇ ಊರಿನಲ್ಲಿ ನಡೆಯುವ ಪೊರಕೆ ಜಾತ್ರೆಯೂ ಏನೂ ಕಡಿಮೆ ವಿಚಿತ್ರದಲ್ಲ. ಒಂದು ಸಮಾಧಾನವೆಂದರೆ ಇದರಲ್ಲಿಯಾವುದೇ ಪ್ರಾಣಿಯನ್ನು ಬಲಿ ಕೊಡುವುದಿಲ್ಲ. ಆ ವರ್ಣನೆ ಇನ್ನೊಂದು ಕಂತಿನಲ್ಲಿ.

5 comments:

Satish said...

ಶೀಲಾ ಅವರೇ,
ಇನ್ನೊಂದು ಕಂತನ್ನು ಬೇಗ ಪ್ರಕಟಿಸಿ.
ಅಂದ ಹಾಗೆ ನಿಮ್ಮ ಹೊಸ ಚಿತ್ರಗಳೆಲ್ಲಿ ಕಾಣುತ್ತಿಲ್ಲವಲ್ಲ?

ಸುಪ್ತದೀಪ್ತಿ suptadeepti said...

ಶುಭಾಶಯಗಳು ಶೀಲಾ, ನಿಮಗೂ ನಿಮ್ಮ ಮನೆಯವರೆಲ್ಲರಿಗೂ:

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

Sheela Nayak said...

@ಸತೀಶ್,
ಸೌಟು ಮತ್ತು ಕುಂಚ ಜತೆಗೋಡಿ ಕೆಲಸ ಮಾಡುವುದೆಂದರೆ ಸುಲಭವಲ್ಲ. ಇಬ್ಬರಿಗೂ ಆಗಾಗ ಸಣ್ಣಪುಟ್ಟ ವಿಷಯದಲ್ಲಿ ಮನಸ್ತಾಪವಾಗಿ ಕೆಲಸ ಮುಂದೆ ಹೋಗುವುದಿಲ್ಲ. ಹಾಗಾಗಿ ಚಿತ್ರದ ಕೆಲಸ ಸ್ವಲ್ಪ ಸೊರಗಿದೆ. ನಮ್ಮ ಹೊಟ್ಟೆ ಸ್ವಲ್ಪ ಹಠಮಾರಿ. ಅದರಿಂದ ಅದಕ್ಕೆ ಮೊದಲು ಪ್ರಾಧಾನ್ಯ ಕೊಟ್ಟುದುದರಿಂದ ಕುಂಚ ಕೋಪಮಾಡಿ ಹೇಳಿದ್ದು ಕೇಳುವುದಿಲ್ಲ. :(
ಪರಿಸರ ಹಾಗೂ ಆರೋಗ್ಯದ ಬಗ್ಗೆ ವಿಪರೀತ ಕಾಳಜಿಯಿಂದ, ಮನೆಕೆಲಸ ಮತ್ತು ಮನೆಪಾಠ ---- ಮೊದಲಾದ ಕಾರಣಗಳಿಂದ ಪೋಸ್ಟ್ ಹಾಕುವುದು ತಡವಾಗಿದೆ. ಅಲ್ಲದೆ ನೀವು, ಜ್ಯೋತಿಯವರು ನನ್ನ ಪುಟಗಳನ್ನು ಓದಿರಬಹುದೆಂಬ ಕಲ್ಪನೆ ಕೂಡ ಮಾಡಿರಲ್ಲಿಲ್ಲ! ಎಷ್ಟಿದ್ದರೂ ನಿಮ್ಮ ಶೈಲಿಯ ಮುಂದೆ ನನ್ನದು ಸಪ್ಪೆ! (ಒಂದು ಕಾಲದಲ್ಲಿ ನಾನೂ ನಿಮ್ಮಷ್ಟಲ್ಲದ್ದಿದ್ದರೂ ಚೆನ್ನಾಗಿಯೇ ಬರೆಯುತ್ತಿದ್ದೆ. ಸಂಸ್ಕೃತ ವಿದ್ಯಾರ್ಥಿಯಾಗಿದ್ದ ನಾನು ಕಾಳಿದಾಸನ ಬೀಸಣಿಗೆಯಾಗಿದ್ದೆ. ತ್ರಿವೇಣಿ, ಸಾಯಿಸುತೆ, ನಿರುಪಮಾರ ಪ್ರಭಾವಕ್ಕೆ ಒಳಗಾಗಿ ಸುಮಾರಾಗಿ ಬರೆಯುತ್ತಿದ್ದೆ. ಆದರೆ! ಸಂಸಾರದ ಬಂಧನದಲ್ಲಿ ಸಿಲುಕಿದ ಮೇಲೆ ಎಲ್ಲಾಮುಗಿದು ಹೋಯಿತು. ಈಗ ಮತ್ತೆ ಹಳೆ ದಾರಿಗೆ ಬರಲು ಪ್ರಯತ್ನಿಸುತ್ತಿದ್ದೇನೆ.)
ತುಂಬಾ ಧನ್ಯವಾದಗಳು. ನಿಮ್ಮ ತಾಣದಲ್ಲಿ ಪ್ರತಿಕ್ರಿಯಿಸುವಾಗ ನಿಮಗೆ ಹೊಸ ವರುಷದ ಶುಭಾಶಯಗಳನ್ನು ಹೇಳುವುದು ಮರೆತೆ.
ನಿಮಗೂ, ನಿಮ್ಮ ಮನದೊಡತಿಗೂ, ಮತ್ತು ಕಣ್ಮಣಿಗಳಿಗೂ ನಮ್ಮೆಲ್ಲರ ಹಾರ್ಧಿಕ ಶುಭಾಶಯಗಳು.


@ಪ್ರಕಾಶಮಾನವಾಗಿ ಬೆಳಗುತ್ತಿರುವ ಜ್ಯೋತಿಯವರೇ ಧನ್ಯವಾದ.
ನಿಮಗೂ ನಿಮ್ಮ ಕುಟುಂಬದವರಿಗೂ ನನ್ನ , ನನ್ನವನ ಮತ್ತು ನನ್ನ ಪ್ರಥು ಹಾಗೂ ಪ್ರಥ್ವಿಯ ಹೊಸ ವರ್ಷದ ಶುಭಾಶಯಗಳು!
ನಿಮ್ಮ ಜಾಲಕ್ಕೆ ಹೋಗಿ ನಿಮ್ಮ ಬರಹಗಳನ್ನು ಓದುವುದು ನನಗೆ ಈಗ ನನಗೆ ನನ್ನ ಉಳಿದ ದಿನಚರಿಯಂತೆ ಮುಖ್ಯವಾಗಿದೆ. ಹಿಂದೆ ನಿಮ್ಮ ಪ್ರೇತಗಳ ಮದುವೆಗೆ ನಾನೇ ಕೆ. ಎಸ್. ನಾಯಕ್ ಆಗಿ ಪ್ರತಿಕ್ರಿಯಿಸಿದ್ದೆ. (ಏನೋ ತಾಂತ್ರಿಕ ಕಾರಣದಿಂದ ಶೀಲಾ ಇದ್ದದ್ದು ಹಾಗಾಗಿ ಬದಲಾಗಿತ್ತು.) ಮತ್ತೊಮ್ಮೆ ಶುಭಾಶಯಗಳು!

Satish said...

ಶೀಲಾ ಅವ್ರೆ,

ಹ್ಹಹ್ಹಹ್ಹ, ಸೌಟನ್ನ ನಿಮ್ಮ ಯಜಮಾನ್ರ ಕೈಗೆ ಕೊಡಿ ಏನಾಗುತ್ತೋ ನೋಡೋಣ!
ಅವರವರ ಶೈಲಿ ಅವರವರಿಗೆ ಸಪ್ಪೆ, ಖಾರ, ಹುಳಿ, ಉಪ್ಪೂ ಇವೆಲ್ಲ ರುಚಿಯ ಮಾತಾಯ್ತು ಬಿಡಿ ಒಬ್ಬೊಬ್ರಿಗೆ ಒಂದೊಂದು ಹಿಡಿಸುತ್ತೆ. ಸಂಸಾರ ಬಂಧನದಲ್ಲಿ ಸಿಲುಕಿದ ಮೇಲೇ ಬದುಕನ್ನು ನೋಡೋದೂ ಅಂತ ಎಷ್ಟೋ ಜನ ಹೇಳಿದಾರೆ ನಂಗೆ, ಅಂಥಾದ್ದರಲ್ಲಿ ನೀವು ಹೀಗಂದ್ರೆ ಹೇಗೆ?

ನಿಮಗೂ ಕೂಡ ಹೊಸವರ್ಷದ ಶುಭಾಶಯಗಳು.

Sheela Nayak said...

ಸತೀಶ್,
ದಾಸರು ಹೇಳಿರುವ ಹಾಗೆ ಈಜಬೇಕು , ಇದ್ದು ಜಯಿಸಬೇಕು ಎಂದು ಸಂಸಾರದಲ್ಲಿ ಈಜುತ್ತಲೇ ಇದ್ದೇನೆ. ಹಾಗೆ ಬಂದದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ ಎನ್ನುತ್ತಾನೆ ಮೊದಲಿಗೆ ಕರ್ತವ್ಯ ಪಾಲನೆ ಬಗ್ಗೆ ಹೆಚ್ಚು ಗಮನ ಕೊಟ್ಟ ಕಾರಣ ನನ್ನಿಷ್ಟದ ಹವ್ಯಸಗಳನ್ನು ಗಂಟುಮೂಟೆ ಮಾಡಿ ಸ್ಟೋರ್ ರೂಮಿನಲ್ಲಿ ಬಿಸಾಕಿದ್ದೆ. ಈಗ ತಾನೆ ಗಂಟು ಬಿಚ್ಚಿದ್ದೇನೆ. ೨೦೦೭ರ ಉತ್ತರಾರ್ಧದಲ್ಲಿ ಮತ್ತೆ ಪ್ರಾರಂಭಿಸಿದ ನನ್ನಿಷ್ಟದ ಕೆಲಸಗಳು ೦೮ರಲ್ಲಿ ಹೆಚ್ಚು ಪ್ರಗತಿಯನ್ನು ಕಾಣಬಹುದೆಂದು ಆಶಿಸುತ್ತೇನೆ. ನಿಮ್ಮೆಲ್ಲರ ಉತ್ತೇಜನವೂ ಅಗತ್ಯ.
ಧನ್ಯವಾದ.
ಶೀಲಾ

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...