ಸರಿ, ಈಗ ವಿಷಯಕ್ಕೆ ಬರೋಣ. ಸುಪ್ತದೀಪ್ತಿಯವರು ನಮ್ಮ ಅನುಭವವನ್ನು ತಿಳಿಸಲು ಹೇಳಿದ್ದಾರೆ. (ದೇವರ) ಪ್ರತಿಯೊಬ್ಬರಿಗೂ ದೇವರ ಅಥವಾ ವಿಶೇಷ ಶಕ್ತಿಯ ಅನುಭವಂತೂ ಖಂಡಿತವಾಗುವುದು. (ಇಲ್ಲಿ ನಾನು ದೇವರನ್ನು ವಿಶೇಷ ಶಕ್ತಿಯೆಂದೂ ಗುರುತಿಸಲು ಇಷ್ಟಪಡುತ್ತೇನೆ.) ಕೆಲವೇಮಂದಿಗೆ ಅದನ್ನು ಗುರುತಿಸಲು ಶಕ್ಯವಾಗುವುದು. ಇಲ್ಲಿ ಇಂತಹ ಅನುಭವವಾಗಲು ಅವರೇನು ದೈವಭಕ್ತರಾಗಬೇಕೆಂದಿಲ್ಲ. ನಮ್ಮ ಪೂರ್ವಜನ್ಮದ ವಾಸನೆಯಿಂದ ನಮಗೆ ದೈವಿಕ ಅನುಭೂತಿಯನ್ನು ಅನುಭವಿಸುವ ಆನಂದವು ಲಭಿಸುವುದು. ಆದರೆ ಕೆಲವರು ಮಾತ್ರ ಇದನ್ನು ನಿಜ ಆನಂದದಿಂದ ಸೇವಿಸಲು ಯೋಗ್ಯರಾಗುತ್ತಾರೆ. ಯಾಕೆಂದರೆ ಇಂತಹ ಭಾವನೆಯನ್ನು ಅನುಭವಿಸಲು ಅವರು ಮಾನಸಿಕವಾಗಿ ಧ್ರಡವಾಗಿರಬೇಕು, ಅಲ್ಲದೇ ಸುಪ್ತವಾಗಿರುವ ಆರನೇ ಇಂದ್ರಿಯ ಜಾಗೃತವಾಗಿರಬೇಕು
ಪ್ರತಿದಿನ ನಿಜ ಭಕ್ತಿಯಿಲ್ಲದೆ ಮಂತ್ರಗಳನ್ನು, ಭಜನೆಗಳನ್ನು ಪೂಜೆಗಳನ್ನು ಮಾಡುವುದರಿಂದ ನಮಗೆ ದೇವರ ಇರುವಿಕೆಯ ಅನುಭವವಾಗುವುದಿಲ್ಲ. ದೇವರು ನಮ್ಮಒಳಗೆ ಇರುತ್ತನಾದರೂ ಅವನನ್ನು ನಾವು ತೀರ್ಥಕ್ಷೇತ್ರಗಳಲ್ಲಿ, ದೇವಸ್ಥಾನಗಳಲ್ಲಿ ಹುಡುಕುತ್ತೇವೆ. ಭೀತಿಯಿಲ್ಲದೆ ಪಾಪಕಾರ್ಯಗಳನ್ನು ಮಾಡಿ ಅದನ್ನು ನಿವಾರಿಸಲು ದೇವರ ಮೂರ್ತಿಗೆ ವಜ್ರ ವೈಡೂರ್ಯಗಳನ್ನು ತೊಡಿಸುತ್ತೇವೆ. ಶಿಥಿಲವಾದ ನಮ್ಮ ಸಮಾಜಿಕ, ಮಾನವೀಯ, ನೈತಿಕ ಮೌಲ್ಯಗಳ ಉದ್ಧಾರ ಮಾಡದೇ ಕೋಟಿಗಟ್ಟಲೆ ಹಣ ಸುರಿಸಿ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿದ್ದೇವೆ. ಒಂದು ಕಡೆ ತಲೆಯ ಮೇಲೆ ಸೂರು ಇಲ್ಲದೆ, ಹೊಟ್ಟೆಗೆ ಗತಿಯಿಲ್ಲದೆ ಒದ್ದಾಡುತ್ತಿರುವವರಿದ್ದರೆ ಇನ್ನೊಂದೆಡೆ ಬಂಗಾರದ ದೇವಸ್ಥಾನಗಳು--- ಎಂತಹ ವಿಪರ್ಯಾಸ! ಇದೇನು ಕಲಿಯುಗಕ್ಕೆ ಮಾತ್ರ ಸಂಬಂಧಿಸಿದಲ್ಲ, ಪ್ರತಿಯೊಂದು ಯುಗದಿಂದಲೂ ನಡೆಯುತ್ತಲೇ ಇರುವ ಕತೆಗಳು. ದೇವರ ಹುಡುಕಾಟವೂ ಹಾಗೆಯೇ ನಡೆಯುತ್ತಿದೆ. ಇದರಲ್ಲಿ ಜಯಪಡೆದ ಯೋಗಿಗಳು ತಮ್ಮ ಅನುಭವವನ್ನು ಜನಸಾಮಾನ್ಯನಿಗೆ ಹೇಳುವ ಪ್ರಯತ್ನ ಮಾಡುತ್ತಿದ್ದರೂ ಲೌಕಿಕ ಭೋಗದಲ್ಲಿ ಮುಳುಗಿರುವ ನಮ್ಮ ಮಿದುಳಿಗೆಟುಕುವುದೇ ಈ ಬೋಧನೆಗಳು!
ನಮ್ಮ ಒಳಗಿರುವ ಪರಮಾತ್ಮನನ್ನು ಕಾಣುವ ಆನಂದವು.
ನಾನೂ ನನ್ನಲಿರುವ ಆನಂದ ಸ್ವರೂಪ ಶಕ್ತಿಯನ್ನು ಹುಡುಕುವ ಪ್ರಯತ್ನದಲ್ಲೇ ಇದ್ದೇನೆ. ಸಂಸಾರವೆಂಬ ಸಾಗರದಲ್ಲಿ ಈಜಾಡುತ್ತಲೇ ಮೋಹ ಮಾಯೆಗಳೆಂಬ ದೈತ್ಯ ಶಾರ್ಕಗಳಿಂದ ಸುತ್ತುವರೆದಿರುವಾಗ ಭಗವಂತನ ಪೂರ್ಣರೂಪದ ದರ್ಶನ ನಮಗೆ ಲಭಿಸುದೆಂದೆಣಿಸುವುದಿಲ್ಲ. ಮತ್ತು ಆಶೆಯೂ ಪಡುವುದಿಲ್ಲ. ಯಾಕೆಂದರೆ ನಮ್ಮ ಸುತ್ತಲಿನ ಪ್ರಕೃತಿಯಲ್ಲೇ ಅಡಗಿರುವ ಪರಮಾತ್ಮನು ನಿತ್ಯವೂ ತನ್ನ ದರುಶನ ಕೊಡುತ್ತಿರುವಾಗ ಇಲ್ಲ ಸಲ್ಲದ ಹುಡುಕಾಟ ಬೇಕೇ? ಈ ಪರಮಾತ್ಮನನ್ನು ಕಾಣಲು ನಮ್ಮ ಇಂದ್ರಿಯ ಬುದ್ಧಿಗಳನ್ನು ತೆರೆದಿಟ್ಟರೆ ಸಾಕು
ನಾನಂತೂ ಪ್ರತೀದಿನ ಬೆಳಿಗ್ಗೆ ಕಾಣುವ ಸೂರ್ಯನಿಂದ ಹಿಡಿದು ನಾನು ಮಾಡುವ ಎಲ್ಲಾ ಕಾರ್ಯಗಳನ್ನು ಬಲು ಆನಂದದಿಂದ ಮಾಡುತ್ತೇನೆ. ಕಸ ಗುಡಿಸುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಅಡುಗೆ ಮಾಡುವ ಇಂತಹ ಕೆಲಸಗಳು ಯಾರಿಗೆ ತಾನೆ ಇಷ್ಟ? ನಾನು ಇದರ ಹೊರತಾಗಿರಲಿಲ್ಲ.... ಬೇಸರದಿಂದಲೇ ಮಾಡುತ್ತಿದೆ. ಇದರ ಪರಿಣಾಮ ನನ್ನ ಜೀವನದಲ್ಲಿ ಸುಖವೆಂದರೆ ಮರೀಚಿಕೆಯಾಗಿತ್ತು... ಯಾವಾಗಲೂ ಸಿಡಿಮಿಡಿ, ಕೋಪ, ತಾಪ, ಅನಾರೋಗ್ಯ.. ಮೊದಲಾದವುಗಳು ನನ್ನಲ್ಲಿ ಹಾಯಾಗಿ ಮನೆ ಮಾಡಿಕೊಂಡಿದ್ದವು. ಹಾ.... ಇದರ ಮಧ್ಯೆ ನನ್ನ ಮಂತ್ರ, ಸ್ತೋತ್ರಗಳ ಪಠನವೂ ಸಾಂಗವಾಗಿ ನಡೆದಿತ್ತು. ಇಷ್ಟೆಲ್ಲ ನಿನಗಾಗಿ ಮಾಡುವಾಗ ಯಾಕೆ ನೀನು ಕಣ್ಣು ಮುಚ್ಚಿ ಕುಳಿತಿರುವೆ? ನಿನ್ನನ್ನು ಭಕ್ತ ವತ್ಸಲನೆಂದು ಯಾಕಾಗಿ ದಾಸರು ಕರೆದರೋ? ಎಂದೆಲ್ಲಾ ಪ್ರಶ್ನೆಗಳನ್ನು ದೇವರಲ್ಲಿ ಕೇಳುತ್ತಿದ್ದೆ.
ಇಂತಹ ಸಮಯದಲ್ಲೇ ನನ್ನಲ್ಲಿ ಜಿಜ್ಞಾಸೆಗಳು ಮೂಡಲು ಪ್ರಾರಂಭವಾಯಿತು.....ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬರಲು ಪ್ರಾರಂಭವಾಯಿತು. ಹಾಗೆಯೇ ಉತ್ತರಗಳ ಹುಡುಕಾಟವೂ...... ಇಂತಹ ಹುಡುಕಾಟದಲ್ಲೇ ನನಗೆ ನನ್ನ ಒಳಗೇ ಇರುವಿಕೆಯ ಆನಂದದ ಅರಿವಾಯಿತು. ಇದನ್ನು ಪಡೆಯಬೇಕಾದರೆ ನಾವು ಎಲ್ಲದರಲ್ಲಿಯೂ ಭಗವಂತನನ್ನೇ ಕಾಣಬೇಕೆಂಬ ಜ್ಞಾನೋದಯವಾಯಿತು.
No comments:
Post a Comment