ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 December, 2007

ದೇವರಿದ್ದಾನೆಯೇ?-1

ದೇವರಿದ್ದಾನೆಯೇ?

ದೇವರು ಇದ್ದಾನೆ ಅಥವಾ ಇಲ್ಲವೇ ಇಂದು ಅವರವರ ನಂಬಿಕೆಗೆ ಸಂಬಂಧ ಪಟ್ಟದ್ದು. ಕೆಲವರಿಗೆ ದೇವರು ಅವರವರ ಭಾವಕ್ಕೆ ತಕ್ಕಂತೆ ಬದಲಾಗುತ್ತಾರೆ. ಕೆಲವರಿಗೆ ಕಷ್ಟದಲ್ಲಿ ಸಹಾಯ ಮಾಡಿದವರೇ ದೇವರು, ಅಂದರೆ ಅವರಿಗೆ ಪರಮಾತ್ಮ ಮಾನವ ರೂಪದಲ್ಲೇ ಗೋಚರಿಸುತ್ತಾನೆ. ಕೆಲವರಿಗೆ ಪ್ರಕೃತಿಯೇ ದೇವರು, ತಮ್ಮಸುತ್ತಲಿನ ವಾತಾವರಣದಲ್ಲಿರುವ ಎಲ್ಲಾ ಭೌತಿಕ ವಸ್ತುಗಳಲ್ಲಿ ದೇವರು ಗೋಚರನಾಗುತ್ತಾನೆ. ಮತ್ತೂ ಕೆಲವರಿಗೆ ಕಾಯಕವೇ ದೇವರು, ತಮ್ಮ ಕರ್ತವ್ಯ, ಕೆಲಸದಲ್ಲೇ ಮಗ್ನರಾಗಿ ಭಗವಂತನ ಸಾನಿಧ್ಯವನ್ನು ಆನಂದಿಸುತ್ತಾರೆ.

ಮೇಲೆ ತಿಳಿಸಿರುವಂತೆ ದೇವರು ಭಕ್ತರಿಗೆ ಅವರವರ ಭಾವಕ್ಕೆ, ಭಕ್ತಿಗೆ ಅನುಗುಣವಾಗಿಕಾಣಿಸುತ್ತಾನೆ. ಮತ್ತು ಅದು ಸರಿಯೂ ಹೌದು ಎಂದು ಹೇಳಬಹುದು. ಯಾಕೆಂದರೆ ಇದಕ್ಕೆಲ್ಲಾ ನಾವು ನಮ್ಮ ಪುರಾಣದಲ್ಲಿ ಉದಾಹರಣೆಯನ್ನು ಕಾಣಬಹುದು. ಸಂತರಾದ ಸಖೂಬಾಯಿ, ತುಕಾರಾಮ, ಜ್ಞಾನದೇವ, ಮುಕ್ತಾಬಾಯಿ, ಪುರಂದರದಾಸ, ರಾಮಕೃಷ್ನ ಪರಮಹಂಸ, ಶಾರದಾ ದೇವಿ ಮೊದಲಾದವರೆಲ್ಲಾ ಸಂಸಾರವನ್ನು ತ್ಯಜಿಸದೇ ದೇವರ ಇರುವಿಕೆಯನ್ನು ಅನುಭವಿಸಿಲ್ಲವೇ?

ಈ ವಿಷಯ ಯಾಕೆ ಬಂತೆಂದರೆ, ಸುಪ್ತದೀಪ್ತಿಯವರು ತಮ್ಮ ಬ್ಲಾಗಿನಲ್ಲಿ ದೇವರು ಇದ್ದಾನೆಯೇ ಎಂದು ಓದುಗರನ್ನು ಪ್ರಶ್ನಿಸಿದ್ದಾರೆ ಅಲ್ಲದೇ ನನ್ನ ವಿದ್ಯಾರ್ಥಿಗಳು ನನ್ನನ್ನೂ ಇದೇ ಪ್ರಶ್ನೆಯನ್ನು ಕೇಳಿದ್ದರು.( ನನ್ನಲ್ಲಿ ಮನೆ ಪಾಠಕ್ಕೆಂದು ಬರುವ ಮಕ್ಕಳಿಗೆ ಪಾಠವಾದ ನಂತರ ನಾನು ನೀತಿ ಮತ್ತು ಪ್ರಕೃತಿಯ ರಕ್ಷಣೆಯ ವಿಷಯಗಳನ್ನು ಕತೆಯ ರೂಪದಲ್ಲಿ ಹೇಳುತ್ತಿದ್ದೇನೆ) ಮಕ್ಕಳಿಗೆ ಅವರ ಅರ್ಥವಾಗುವ ಸಾಮರ್ಥ್ಯಕ್ಕೆ ಅನುಗುಣವಾಗಿ ದೇವರು ಮೇಲೆ ಸ್ವರ್ಗದಲ್ಲಿದ್ದಾನೆ ಮತ್ತು ನಾವು ಮಾಡುವ ಕರ್ಮಗಳನ್ನು ಪ್ರತಿಯೊಂದು ಗಳಿಗೆಗೂ ಬರೆಯುತ್ತಿದ್ದಾನೆ ಎಂದೂ , ಅದಕ್ಕೆ ಅನುಗುಣವಾಗಿ ನಮಗೆ ಪುಣ್ಯ ಪಾಪದ ಫಲಗಳು ದೊರೆಯುವುದೆಂದು ಹೇಳಿದ್ದೇನೆ. ಹೀಗೆ ಯಾಕೆ ಹೇಳಬೇಕಾಯಿತೆಂದರೆ ಆ ಮಕ್ಕಳು ಒಳ್ಳೆಯ ಮನೆತನದವರಾದರೂ, ದೇವರ ಸ್ತೋತ್ರ, ಭಜನೆ ಹೇಳುವ ತಂದೆ , ತಾಯಿಯರ ಕುಡಿಯಾದರೂ ಮನೆಯ ಹೊರಗೆ ಅವರು ಮಾಡುವ ಕೆಲಸಗಳನ್ನು ನೋಡಿದರೆ ಇಂತವರ ಕೈಯಲ್ಲಿ ನಮ್ಮ ದೇಶದ ಭವಿಷ್ಯ ಏನಾಗುವುದೋ ಎಂದು ಹೆದರಿಕೆ ಹುಟ್ಟಿಸಿರುವಂತಿತ್ತು. ಹೀಗಾಗಿ ನಾನು ನನ್ನ ಪಾಠ ಹೇಳುವ ಕೆಲಸದ ಜೊತೆ ಅವರನ್ನು ನೀತಿವಂತರನ್ನಾಗಿ ಮಾಡುವ ಪ್ರಯತ್ನದಲ್ಲಿ ನಮ್ಮ ಪುರಾಣದ ಕತೆಗಳನ್ನು ಹೇಳುವ ಕಾಯಕ ಪ್ರಾರಂಭಿಸಿದ್ದೇನೆ.

ಪುಸ್ತಕಗಳಲ್ಲಿ ಸರಸ್ವತಿಯ ವಾಸವಿರುವುದರಿಂದ ನಾವು ಯಾವಾಗಲೂ ಅವಳನ್ನು ಚೆನ್ನಾಗಿಡಬೇಕು ಹಾಗು ನಮ್ಮ ಅಕ್ಷರ ಚೆನ್ನಾಗಿದ್ದರೆ ಸರಸ್ವತಿಯು ನಮಗೆ ಬಲುಬೇಗ ಒಲಿಯುತ್ತಾಳೆ.( ಅಂದರೆ ಬಾಯಿಪಾಠವಾಗುತ್ತದೆ) ಹೀಗೆಲ್ಲಾ ಹೇಳಿದ ಮೇಲೆ ಒಂದಿಷ್ಟು ಸುಧಾರಿಸಿದ್ದಾರೆ. ಸತ್ಯವಾನ್ ಹರಿಶ್ಚಂದ್ರನ ಕತೆ ಹೇಳಿ ಆ ನಾಟಕ ನೋಡಿದ ಗಾಂಧೀಜಿ ತಮ್ಮ ಕೆಟ್ಟಚಟಗಳ್ಳನ್ನು ಬಿಟ್ಟು ಸತ್ಯವನ್ನೇ ಹೇಳುವ ಪ್ರತಿಜ್ಞೆಯನ್ನು ಮಾಡಿದ ಕತೆ ಹಾಗು ಬಾಲಕರಾದ ಪ್ರಹ್ಲಾದ, ದ್ರುವರ ಕತೆಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರಿತು. ಇಂದಿಗೂ ಮಕ್ಕಳು ದೇವರು ನಾವು ಕೋಣೆಯಲ್ಲಿದ್ದಾನೆಯೇ, ನಮ್ಮನ್ನು ನೋಡುತ್ತಿದ್ದಾನೆಯೇ ಎಂದು ಕೇಳುತ್ತಿದ್ದಾರೆ..... ನಾನು ಅವರಿಗೆ ಹೌದೆಂದು ಹೇಳುವಾಗ ನನ್ನ ಆತ್ಮ ನನ್ನನ್ನು " ನೀನು ನಿಜವನ್ನೇ ಹೇಳುತ್ತಿದ್ದಿಯೇ" ಎಂದು ಕೇಳುವ ಹಾಗೆ ನನಗೆ ಅನಿಸಿತು.

ನಾನು ಈ ಬಾಲಕರಿಗೆ ಹೇಳಿದ ಹಾಗೆ ಬಾಲ್ಯದಲ್ಲಿ ಪಾಪ ಪುಣ್ಯಗಳ ಪ್ರಭಾವವನ್ನು ನಂಬಿದ್ದೆ.... ಹಾಗಾಗಿ ತಪ್ಪು ಮಾಡುವಾಗ ನನ್ನ ಮನಸ್ಸು ಚುಚ್ಚುತ್ತಿದ್ದರಿಂದ ನನ್ನಿಂದ ನಡೆಯುವ ಕರ್ಮಗಳಲ್ಲಿ ತಪ್ಪುಗಳ ಸಂಖ್ಯೆ ಕಡಿಮೆಯಿರುತ್ತಿತ್ತು. ಅಲ್ಲದೆ ನನ್ನ ಮಕ್ಕಳಿಗೂ ನಾನು ಹಾಗೆಯೇ ಉಪದೇಶಿಸಿದೆ. ದೇವರು ನಮ್ಮ ಕರ್ಮಗಳ ಅನುಸಾರವಾಗಿ ನಮಗೆ ಮುಂದಿನ ಜನ್ಮ ಕೊಡುತ್ತಾನೆ..... ಅಂದರೆ ನಾವು ಅನಾವಶ್ಯಕವಾಗಿ ಮತ್ತೊಂದು ಜೀವಿಗೆ ತೊಂದರೆ ಕೊಟ್ಟರೆ ಮುಂದಿನ ಜನ್ಮದಲ್ಲಿ ನಾವು ಕೆಟ್ಟ ಜನ್ಮ ( ಏನಾದರು ಪ್ರಾಣಿಯಾಗಿ---- ನಾಯಿ , ಬೆಕ್ಕುಹಾವು...ಇತ್ಯಾದಿ. ) ಪಡೆಯುತ್ತೇವೆ. ನಮಗೆಲ್ಲಾ ತಿಳಿದೇ ಇದೆ ಮನುಜ ಜನ್ಮ ಶ್ರೇಷ್ಠವೆಂದು. ಇಂತಹ ಹೆದರಿಕೆ ನಮ್ಮನ್ನು ಕೆಟ್ಟ ಕಾರ್ಯ ಮಾಡದಂತೆ ತಡೆಯುತ್ತದೆ. ಅಥವಾ ಕಡಿಮೆ ಮಾಡುತ್ತದೆ.

...........ಇನ್ನೂ ಇದೆ........

2 comments:

ವಿಕಾಸ್ ಹೆಗಡೆ said...

ಶೀಲಕ್ಕಾ, very nice,.. ಮುಂದುವರೆಯಲಿ...

ಶೀಲಾ said...

ವಿಕಾಸ್ ಧನ್ಯವಾದ!ನಿನ್ನ ಅದ್ಭುತ ಅನುಭವವನ್ನು ಓದಿದೆ. ಅದರ ಬಗ್ಗೆ ನನ್ನ ಅಭಿಪ್ರಾಯವನ್ನು ನಿನ್ನ ಬ್ಲಾಗಿನಲ್ಲೇ ಬರೆಯುತ್ತೇನೆ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...