ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 December, 2013

ನಲ್ಲಿರುಳು..

ಮುಡಿಯಲಿದ್ದವನು ಮಾಯದಲಿ ಬಾನಿಗೆ ನೆಗೆದವನು
ಚಂದ್ರಿಕೆಯ ಮೋಹ ಜಾಲದಲಿ ಸೆರೆಯಾದನು
ಮುಗಿಲಮರೆಯಲಿ ಮರೆಯಾದ ಇಂದುವಿಗೀಗ ಲಜ್ಜೆ
ಹಂಬಲಿಸಿದವಳಿಗೆ ಹಾಸಿತು ನಲ್ಲಿರುಳು ಸಜ್ಜೆ!

ಸ್ವೀಕರಿಸುವ ಭಾವ..

ಒಲವೇ,
ಅದ್ಯಾವುದೋ ನೆನಪುಗಳು, ಯೋಚನೆಗಳು..
ಏನೇನೋ ಅಭಿಪ್ರಾಯಗಳು, ಚಿಂತನೆಗಳು..
ಅವರಿವರ ಎಚ್ಚರಿಕೆಗಳು, ಕಲ್ಪನೆಗಳು..

ಎಷ್ಟೊಂದು ಗೊಂದಲ, ಜಿಜ್ಞಾಸೆಗಳು..
ಮುಗಿಯದ, ಬಿಡಿಸಲಾಗದ ಸಿಕ್ಕುಗಳು..
ಬಂಧಗಳಲಿ ಬಿರುಕುಗಳು..


ಮದ್ದು ಒಂದೇ ನನ್ನೊಲವೇ,
ನಿನ್ನೊಲುಮೆಯ ಕಲ್ಪನೆಯ ನಶೆಯಲಿ
ನಾನೀಗ ನೋವು ಮುಕ್ತ ಜೀವ

ಬದಲಿಸಲಾಗದಕ್ಕೆ ಇನ್ನು ಮರುಗುವುದಿಲ್ಲ
ಸ್ವೀಕಾರ ಭಾವವಷ್ಟೇ ಮುಂದೆಲ್ಲ..

-ಪ್ರೇರಣೆ ರೂಮಿ

15 December, 2013

ಶುಭ ಭಾನುವಾರ.. ಒಂದು ರೂಪಾಂತರದ ಯತ್ನ!


||when you argue with a fool, you prove that there are two||

||love is a great beautifier||

||man is known not by the company he keeps but by the company he avoids||

||the mind is the man||

||laughter is a good disease, spread it||

||when it is not necessary to change, it is necessary not to change||

||the problem with troubleshooting is that trouble shoots back||



ಮನೋಹರ್ ನಾಯಕ್ ಅವರ ಗುಡ್ ಮೋರ್ನಿಂಗ್ ಸಂಡೆ ಕನ್ನಡದಲ್ಲಿ ರೂಪಾಂತರ..
-
|| ಗಂಧದವನೊಂದಿಗೆ ಗುದ್ದಾಟ ಲೇಸು ||

|| ಒಲವೇ ಜೀವನ ಸಾಕ್ಷಾತ್ಕಾರ ||

|| ಸಜ್ಜನರ ಸಂಗ ಹೆಜ್ಜೇನು ಸವಿದಂತೆ;  ದುರ್ಜನರ ಸಹವಾಸ ಸದಾಚಾರದ ಭಂಗ ||

|| ಮನವೇ ಮಂದಿರ ||

|| ನಗುವು ಸಹಜ ಧರ್ಮ; ನಗಿಸುವುದು ಪರಧರ್ಮ; ನಗುವ ಕೇಳುತ ನಗುವುದತಿಶಯದ ಧರ್ಮ;
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ ||

|| ವರ್ತನೆಯಲಿ ಪರಿವರ್ತನೆ ಜಗದ ನಿಯಮ.. ಅದನರಿತು ನಿಯಮಕಡಿಯಾಳಾಗಿ ನಡೆದರೆ ಬದುಕುವ ಕಲೆ ಅರಿಯುವಿ;
ಕಾಲನ ಚಕ್ರದೆಡೆಯಲಿ ಎಲ್ಲರೂ ಅಪ್ಪಚಿಯೇ.. ಕಬ್ಬಿನ ಹಾಲಾಗುವಿಯೋ; ಇಲ್ಲಾ ಬೇವಿನ ರಸವಾಗುವಿಯೋ ಆಯ್ಕೆ ನಿನ್ನದೇ ತಿಮ್ಮಿ ||

|| ತೊಂದರೆ ವಿನಾಶಕರಿಗೆ ಅನಾವಶ್ಯಕವಾಗಿ ತೊಂದರೆ ಕೊಡಬಾರದು ||

|| ವ್ಯಕ್ತಿಗಳ ವ್ಯಕ್ತಿತ್ವಗಳ ಅಳೆದು ಸುರಿದು ಲೆಕ್ಕಹಾಕುವ ಭರದಲಿ ನಮ್ಮ ವ್ಯಕ್ತಿತ್ವವೇ ಜಗಜ್ಜಾಹೀರಾಗುವುದೆಂಬ ಅರಿವಿರಲಿ ||



14 December, 2013

ರಾಗರಂಜಿತ ಮುಸ್ಸಂಜೆ..

ಭಟ್ಟಂಗಿಗಳ ಮೆಚ್ಚುಗೆಗೆ ರಾಗ ರಂಜಿತಳಾಗಿ 

ನನ್ನ ಸೆರಗಿನೆಡೆಯಲಿ ಮುಖ ಮರೆಸಿಕೊಂಡ ಮುಸ್ಸಂಜೆ!


ಕಡಲಿನಾಳಕೆ ಜಾರಿ ಚಿಪ್ಪು, ಮುತ್ತು, ಹವಳ ಹೆಕ್ಕಿ ತಂದು ಬಾನ ತುಂಬ ನೇತಾಡಿಸಿದ ಮುಸ್ಸಂಜೆ!

ಅಂದಿನ ಮುಸ್ಸಂಜೆಯ ನೆನಪು..

-
ನೇಸರ ಕುಲುಮೆಯಲಿ ಕೆಂಪಗೆ ಬೆಂದು ಹೊನ್ನಾದನು..

ಶಶಿ ಬೆಳದಿಂಗಳಲಿ ಶುಭ್ರವಾಗಿ ಮಿಂದು ಬೆಳ್ಳಿಯಾದನು..

ಅಜ್ಜಿ ನೆರಿಗೆ ಮೂಡಿದ ಕೈಯಲಿ ಹೊಸೆದ ಮೆದು ಹತ್ತಿ ಬತ್ತಿಯಾಯಿತು..

ಅಜ್ಜನ ಹೊಲದ ಬೀಜ ಚಕ್ರಗಳೆಡೆಯಲಿ ಅಪ್ಪಚ್ಚಿಯಾಗಿ ದಪ್ಪ ಎಣ್ಣೆಯಾಯಿತು..

ಅತ್ತೆ ಘಸ ಘಸ ತಿಕ್ಕಿದ ಹಿತ್ತಾಳೆ ದೀಪ ಝಗಮಗ ಹೊಳೆಯಿತು..

ಮೈತುಂಬ ಮಣ್ಣು ಮೆತ್ತಿ ಚಿಣ್ಣರು ಧೂಳೆಬ್ಬಿಸುತ ಗದ್ದಲ ಮಾಡುತ ಅರಳುತ ಮರಳಿದರು..

ತುಳಸಿ ಕಟ್ಟೆಯ ದೀಪದ ಬೆಳಕು ಅಮ್ಮನ ಸಂತೃಪ್ತ ಮುಖದಲಿ ಪ್ರತಿಫಲಿಸಿತು..

ಅಜ್ಜಿ, ಅಜ್ಜ, ಅತ್ತೆ ಸೊಸೆ.. ಚಿಣ್ಣರೆಲ್ಲರ ರಾಗ ದೇವರ ಮನೆಯಲಿ ವ್ಯಾಪಿಸಿತು..

ಹಾರ್ಮೋನಿಯಮ್, ತಾಳ, ತಬಲ ನಾದ ತರಂಗ ಭಕ್ತಿ ಸಾಗರದ ಅಲೆಯಾಯಿತು..

ಧೂಪ, ದೀಪ, ಕರ್ಪೂರ, ಅಗರಬತ್ತಿಯ ಹೊಗೆಯೆಡೆಯಲಿ ಬೆಳಗುವ ಮಂಗಳಾರತಿ ಎತ್ತಿದರು..

ಒಕ್ಕೊರಳಿನಿಂದ ರಾಗ ತಾಳ ಪಲ್ಲವಿ ಸೇರಿಸಿ ಮುಸ್ಸಂಜೆಯ ಜೋಳಿಗೆಯಲಿ ಭಾವ ತುಂಬಿದರು!

(ಅಂದಿನ ದಿನದ ನೆನಪು ತಂದ ಮುಸ್ಸಂಜೆಗೆ ಅರ್ಪಿತ)

ಮುಸ್ಸಂಜೆ.. ರಾಗ!

-
ಅದಾವ ಮಾಯದಲಿ ಬಾನಿಗೆ ನೆಗೆದವನು
ಚಂದ್ರಿಕೆಯ ಮೋಹ ಜಾಲದಲಿ ಸೆರೆಯಾದನು
ಮುಗಿಲಮರೆಯಲಿ ಮರೆಯಾದ ಇಂದುವಿಗೀಗ ಲಜ್ಜೆ
ಹೊರಗೆಳೆದು ವದನ ಅನಾವರಣಗೊಳಿಸಿದಳು ಮುಸ್ಸಂಜೆ!

13 December, 2013

ಕೊಟ್ಟದೆಲ್ಲ ಮರಳಿ ಬರುವುದಂತೆ..

ಒಲವೇ,

ಅನ್ನುವರು ಕೊಟ್ಟದೆಲ್ಲ ಮರಳಿ ಬರುವುದಂತೆ
ಒಂದಕ್ಕೆರಡಾಗಿ ಸಿಗುವುದಂತೆ

ನಾ  ಅರ್ಪಿಸಿದ ಬದುಕು ನಿನಗಾಗಿ
ಸಿಗುವುದೇ ಮತ್ತೆ ನನಗೆ ಹೊಸದಾಗಿ

ನಿನಗಾಗೇ ಅರ್ಪಿಸಿದ ಆ ಘಳಿಗೆಗಳು
ಎಲ್ಲಾ ಮತ್ತೆ ಆಗುವುದೇ ಹೊಸ ಕ್ಷಣಗಳು

ನೀ ಹೌದೆಂದರೂ ಬೇಡ ನನಗವು
ನೀ ಮರಳಿಸುವುದೇ ಆದರೆ ಬದುಕು

ನಮ್ಮಾತ್ಮಗಳನೇ ಒಂದಾಗಿ ಜೋಡಿಸು
ಇಲ್ಲಾ ನಿನ್ನಲ್ಲೇ ಐಕ್ಯಗೊಳಿಸು!

ಲೋಕದ ಬಾಯಿಯಲಿ..

ಒಲವೇ,

ನೀ ಕರೆದೆ
ನಾ ಓಗೊಟ್ಟೆ
ನೀ ಹೇಳಿದೆ
ನಾ ಕೇಳಿದೆ

ಕಲ್ಲು ಹೊತ್ತೆ
ನೀರು ಸುರಿದೆ
ಜತನವಾಗಿ ಕಟ್ಟಿದೆ
ಮೇಲೆದ್ದಿತು ಗುಡಿ

ಪತಾಕೆ ಹಾರಾಟ
ಎತ್ತರ ಗೋಪುರದಲ್ಲಿ
ಹೂ ದೀಪ
ಶೃಂಗಾರ ಸುತ್ತಮುತ್ತ

ಗಂಟೆ ಜಾಗಟೆ
ಗದ್ದಲದ ಮಾರ್ದನಿ
ಕರ್ಪೂರ ಗಂಧ
ಮರುತ ಪಸರಿಸಿದ


ಲೋಕದ ಬಾಯಿಯಲ್ಲಿ
ನೈವೇದ್ಯದ ರುಚಿ
ಮತ್ತೆ ಉಳಿದಿತೇ
ಗುಟ್ಟಾಗಿ
ನನ್ನ ನಿನ್ನ
ಒಲವಿನ ಕತೆ!

-ರೂಮಿ ಪ್ರೇರಣೆ
 || ನನ್ನ ಬೆನ್ನ ವಕ್ರತೆ ಬಣ್ಣಿಸಿದೆ ನೀ;

ನಾ ಕನ್ನಡಿಯಲ್ಲಿ ಕಾಣದನೂ ನೀ ಕಂಡೆ ಎಂದರೆ,

ಯಾವ ಸಮಜಾಯಿಸಿ ಕೊಡುವ ಅಗತ್ಯ ನನಗಿನ್ನು ಇಲ್ಲ ||

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...